Tag: publictv

  • ಮರೆಯಾಯ್ತು ಮಾನವೀಯತೆ- 12ರ ಬಾಲಕ ಜೀವನ್ಮರಣ ಹೋರಾಡ್ತಿದ್ರೂ ಸಹಾಯಕ್ಕೆ ಬರ್ಲಿಲ್ಲ ಜನ

    ಹಾವೇರಿ: ಕೊಪ್ಪಳದ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಸ್ ಓವರ್ ಟೇಕ್ ಮಾಡುತ್ತಿದ್ದ ವೇಳೆ ತಂದೆಯ ಹಿಂದೆ ಕುಳಿತ್ತಿದ್ದ ಮಗ ಭಯಗೊಂಡು ಜಿಗಿದು ಬಸ್‍ನ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. 12 ವರ್ಷದ ಬಾಲಕ ಆನಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ರೂ ಜನ ಸಹಾಯಕ್ಕೆ ಹೋಗದೆ ಪೊಲೀಸ್ ಸಿಬ್ಬಂದಿ ಬರಲಿ ಅಂತಾ ನೋಡ್ತಿದ್ರು. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬಾಲಕ ಆನಂದ ಮೃತಪಟ್ಟಿದ್ದಾನೆ.

    ತಂದೆ ಮಂಜುನಾಥರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ಸವಣೂರು ಪಟ್ಟಣದಿಂದ ತಮ್ಮ ಗ್ರಾಮ ಮೆಳಾಗಟ್ಟಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    https://www.youtube.com/watch?v=lhPk2Y_EslM&feature=youtu.be

  • ಆಕಸ್ಮಿಕ ಬೆಂಕಿ- 15 ಲಕ್ಷ ರೂ. ಮೌಲ್ಯದ ಕಟ್ಟಿಗೆ ಭಸ್ಮ

    ರಾಯಚೂರು: ಕಟ್ಟಿಗೆ ಅಡ್ಡೆಗೆ ಬೆಂಕಿ ತಗುಲಿ ಸುಮಾರು 15 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಬಸವರಾಜ್ ಎಂಬವರ ಕುಷ್ಟಗಿ ರಸ್ತೆಯಲ್ಲಿರುವ ಕಟ್ಟಿಗೆ ಅಡ್ಡೆ ಬೆಂಕಿಗೆ ಆಹುತಿಯಾಗಿದೆ. ಬಂಬೂ ಸೇರಿದಂತೆ ಹಲವು ಬಿದಿರಿನ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹತ್ತಿರಬಹುದು ಎಂದು ಶಂಕಿಸಲಾಗಿದೆ.

    ಅಗ್ನಿಶಾಮಕ ದಳದ ಮೂರು ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಡ್ಡೆಯಲ್ಲಿನ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಮಧುರೈನಲ್ಲಿ ಇಂದು ಜಲ್ಲಿಕಟ್ಟು: 38 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ಚೆನ್ನೈ: ಮಧುರೈ ಜಿಲ್ಲೆಯ ಅವನಿಪುರಂನಲ್ಲಿ ಇಂದು ಜಲ್ಲಿಕಟ್ಟು ಸ್ಪರ್ಧೆ ನಡೆದಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಸ್ಪರ್ಧೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂದಿನ ಸ್ಪರ್ಧೆಯನ್ನು ಕಂದಾಯ ಸಚಿವ ಆರ್‍ಬಿ ಉದಯ ಕುಮಾರ್ ಮತ್ತು ಜಿಲ್ಲಾಧಿಕಾರಿ ವೀರರಾಘವ ರಾವ್ ಉದ್ಘಾಟಿಸಿದ್ದರು. ಇನ್ನು ಈ ಸ್ಫರ್ಧೆಯಲ್ಲಿ ಸುಮಾರು 600 ಗೂಳಿಗಳು ಭಾಗವಹಿಸಿದ್ದವು. ಹಾಗೆಯೇ ಈ ಆಚರಣೆಯನ್ನು ನೋಡಲೆಂದು ಸಾವಿರಾರು ಮಂದಿ ಜಮಾಯಿಸಿದ್ದರು.

    ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಂಡ, ಆಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗಿತ್ತು. ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಆಚರಿಸಲಾಗುತ್ತಿತ್ತು. ಆದ್ರೆ ಸುಪ್ರೀಂ ಕೋರ್ಟ್ ಆಚರಣೆಗೆ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡೆ ಆಚರಿಸಲು ಸಾಧ್ಯವಾಗಿರಲಿಲ್ಲ.

    ಸಾವಿರಾರು ಜನರ ಪ್ರತಿಭಟನೆಯ ನಂತರ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಗ್ಞೆ ತಂದಿತ್ತು.

  • ತುಮಕೂರು: ತಾಳಿ ಕಟ್ಟುವ ಮುನ್ನವೇ ಕಲ್ಯಾಣ ಮಂಟಪದಲ್ಲಿ ವರನ ಸಾವು

    ತುಮಕೂರು: ತಾಳಿ ಕಟ್ಟಬೇಕಿದ್ದ ವರ ಕಲ್ಯಾಣ ಮಂಟಪದಲ್ಲೇ ಸಾವನ್ನಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಇಂದು ಮುಹೂರ್ತ ನಡೆಯಬೇಕಿದ್ದ ವರ ಸಾವನ್ನಪ್ಪಿ ಕಲ್ಯಾಣಮಂಟಪ ಸಾವಿನ ಮನೆಯಾಗಿ ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.

    ಮಧುಗಿರಿ ಮೂಲದ ವಸಂತ್‍ಕುಮಾರ್ ಹಾಗೂ ತುಮಕೂರಿನ ಕಾತ್ಯಾಯಿನಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಶನಿವಾರದಂದು ಆರತಕ್ಷತೆ ಮುಗಿಸಿದ್ದ ಜೋಡಿ ಇಂದು ಅರಶಿಣ ಶಾಸ್ತ್ರ ಮುಗಿಸಿದ್ದರು. ಮುಂಜಾನೆ ಶಾಸ್ತ್ರ ಮುಗಿಸಿ ಮುಹೂರ್ತಕ್ಕೆ ಸಿದ್ಧವಾಗ್ತಿದ್ದ ವಸಂತ್ ಕುಮಾರ್ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪಿದ್ದಾರೆ.

    ಸದ್ಯ ಕಲ್ಯಾಣಮಂಟಪದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಕಾತ್ಯಾಯಿನಿ ಮತ್ತು ವಸಂತ್ ಕುಮಾರ್ ಇಬ್ಬರೂ ಎಂ.ಟೆಕ್ ಪದವೀಧದಾರಾಗಿದ್ದು, ವಸಂತ್ ಕುಮಾರ್ ಸಾವಿನಿಂದ ಇದೀಗ ಮದುವೆ ಮುರಿದುಬಿದ್ದಿದೆ.

  • ಗರ್ಭಿಣಿಯಾಗಿಸಿ ಕೈಕೊಟ್ಟ ಯುವಕ- ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

    ಹಾವೇರಿ: ಪ್ರೀತ್ಸು.. ಪ್ರೀತ್ಸು.. ಅಂತ ಹಿಂದೆ ಬಿದ್ದು 2 ವರ್ಷಗಳ ಕಾಲ ಪ್ರೀತಿ ಮಾಡಿ ಸಂಬಂಧ ಬೆಳೆಸ್ದ. ಕೊನೆಗೆ ಕೈಕೊಟ್ಟು ಎಸ್ಕೇಪ್ ಆದ ವಂಚಕನ ಪತ್ತೆಗಾಗಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    2 ವರ್ಷದ ಹಿಂದೆ ಅನ್ಯಜಾತಿಯ ಯುವಕ ಗಂಗಾಧರ್ ಎಂಬಾತ ಹಾವೇರಿಯ ರಾಣೇಬೆನ್ನೂರಿನ ಹರನಗಿರಿ ನಿವಾಸಿ ದುರ್ಗಾಳ ಬೆನ್ನು ಬಿದ್ದು ಪ್ರೀತಿ ಮಾಡಿದ್ದ. ಬಳಿಕ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದು, ನನಗೆ ನ್ಯಾಯ ಕೊಡಿಸಿ ಅಂತಿದ್ದಾಳೆ.

    ಯುವತಿ ಸದ್ಯ ಸರಸ್ವತಿ ಸ್ವಾಂತನ ಕೇಂದ್ರದ ಮೂಲಕ ದೂರು ದಾಖಲಿಸಿದ್ದಾಳೆ. ಸಂಸ್ಥೆಯ ಅಧ್ಯಕ್ಷೆ ಶಾರದಾ ಯುವತಿಗೆ ಧೈರ್ಯ ಹೇಳಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪ್ರೀತಿಸಿ ಕೈ ಕೊಟ್ಟ ಆ ಮಹಾಶಯ ಎಲ್ಲಿದ್ದಾನೋ ಗೊತ್ತಿಲ್ಲ. ಆದ್ರೆ ನನ್ನನ್ನ ಆತನೊಂದಿಗೆ ಮದುವೆ ಮಾಡಿಸಿ, ನನಗೆ ನ್ಯಾಯ ಕೊಡಿಸಿ ಅಂತಾ ಹೇಳ್ತಿದ್ದಾಳೆ ಈ ಯುವತಿ.

  • ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಗಾಗಿ 3 ರಾಜ್ಯಗಳ ಪೈಪೋಟಿ

    ಬೆಂಗಳೂರು: ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿಗಾಗಿ ಆಂಧ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಪೈಪೋಟಿ ಶುರುವಾಗಿದೆ.

    ಮೂರು ರಾಜ್ಯಗಳಲ್ಲೂ ಮಧುಕರ್ ರೆಡ್ಡಿ ಅಪರಾಧ ಮಾಡಿರೋ ಹಿನ್ನೆಲೆಯಲ್ಲಿ ತನಿಖೆಗಾಗಿ ಪೊಲೀಸರು ಮಧುಕರ್ ರೆಡ್ಡಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇಂದು ಮಧುಕರ್‍ನನ್ನು ಆಂಧ್ರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಮಧುಕರ್ ರೆಡ್ಡಿಯನ್ನ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಆಂಧ್ರ ಪೊಲೀಸರು ಮನವಿ ಮಾಡಲಿದ್ದಾರೆ. ಆಂಧ್ರ ಬಳಿಕ ಕರ್ನಾಟಕ ಪೊಲೀಸರು ಮಧುಕರ್‍ನನ್ನು ವಶಕ್ಕೆ ಪಡೆಯಲಿದ್ದಾರೆ.

    ಇದೇ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ತಾಂತ್ರಿಕ ವಿಚಾರಣೆ ಮುಗಿಸುವ ಸಾಧ್ಯತೆ ಇದೆ. ಸಿಸಿಟಿವಿ ದೃಶ್ಯಾವಳಿ, ಬೆರಳಚ್ಚು ದೃಢೀಕರಣ ಎಲ್ಲವನ್ನೂ ಮುಗಿಸಲಿದ್ದಾರೆ. ಈಗಾಗ್ಲೇ ಬೆಂಗಳೂರು ಪೊಲೀಸರು ಚಿತ್ತೂರಿನಲ್ಲಿ ಬೀಡು ಬಿಟ್ಟಿದ್ದು, ಸೋಮವಾರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಚಿತ್ತೂರಿಗೆ ತೆರಳಲಿದ್ದಾರೆ. ಮೂರು ವರ್ಷದ ಹಿಂದೆ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಾಗ ಹೇಮಂತ್ ನಿಂಬಾಳ್ಕರ್ ಜಂಟಿ ಪೊಲೀಸ್ ಆಯುಕ್ತರಾಗಿದ್ದರು.

    ತನಿಖಾ ತಂಡ ಮೂರು ತಿಂಗಳು ಆಂಧ್ರದಲ್ಲಿ ಬೀಡು ಬಿಟ್ಟು ತನಿಖೆ ನಡೆಸಿದೆ. ಸೋಮವಾರದ ಬಳಿಕ ಕರ್ನಾಟಕ ಪೊಲೀಸರು ಮಧುಕರ್‍ನನ್ನು ವಶಕ್ಕೆ ಪಡೆದು ತಾಂತ್ರಿಕ ಕೆಲಸ ಮುಗಿಸಲಿದ್ದಾರೆ.

    ಮೂರು ರಾಜ್ಯಗಳಲ್ಲಿ ಮಧುಕರ್‍ನ ಅಪರಾಧಗಳು:

    ಆಂಧ್ರ :
    > 2005 ರ ಆನಂದ ರೆಡ್ಡಿ ಕೊಲೆ ಪ್ರಕರಣ ( ನೀರಿನ ವಿಚಾರಕ್ಕೆ ಬಾಂಬ್ ಇಟ್ಟು ಕೊಲೆ ಮಾಡಿದ್ದ)
    > 2011ರಲ್ಲಿ ಕಡಪ ಜೈಲಿನಿಂದ ಎಸ್ಕೇಪ್ ಆಗಿದ್ದ ಪ್ರಕರಣ
    > 2013, ನ. 10 ಧರ್ಮಾವರಂ ಕೊಲೆ ಪ್ರಕರಣ ( ಪ್ರಮೀಳಮ್ಮ)
    > ಹೈದ್ರಾಬಾದ್ ಮತ್ತು ಗುಂಟೂರಿನಲ್ಲಿ ಕೊಲೆ ಯತ್ನ ಪ್ರಕರಣಗಳು

    ಕರ್ನಾಟಕ:
    2013, ನ.19 ರಂದು ಎಟಿಎಂನಲ್ಲಿ ಜ್ಯೋತಿ ಉದಯ್ ಕೊಲೆ ಯತ್ನ ಪ್ರಕರಣ

    ಕೇರಳ: 
    > ಎರ್ನಾಕುಲಂನಲ್ಲಿ ನಡೆದ ಎರಡು ಸರ ಅಪಹರಣ ಪ್ರಕರಣ
    > ಎಟಿಎಂನಲ್ಲಿ ನಡೆದ ಕೊಲೆ ಯತ್ನ ಪ್ರಕರಣ

  • ಉಡುಪಿ ಶ್ರೀಕೃಷ್ಣ ಮಠದಲ್ಲಿಂದು ಮೋದಿ ಭಾಷಣ

    ಉಡುಪಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾಷಣ ಮಾಡಲಿದ್ದಾರೆ.

    ದಿಢೀರ್ ಕಾರ್ಯಕ್ರಮ ಫಿಕ್ಸಾಯ್ತಾ? ಸದ್ದಿಲ್ಲದೆಯೇ ಮೋದಿ ಉಡುಪಿಗೆ ಬರ್ತಿದ್ದಾರಾ? ಅಂತ ಶಾಕ್ ಆಗ್ಬೇಡಿ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ಫೆ.5ರ ರವಿವಾರ ಸಂಜೆ 5:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ.

    ಮಠದ ರಾಜಾಂಗಣದಲ್ಲಿ ನಡೆಯುವ ಧಾರ್ಮಿಕ ಸಭೆಯನ್ನುದ್ದೇಶಿಸಿ ನೇರ ವೀಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು ಒಂದು ಗಂಟೆಗಳ ಕಾಲ ಮೋದಿ ಭಾಷಣ ಮಾಡಲಿದ್ದಾರೆ.ಮಧ್ವಾಚಾರ್ಯರ 700 ವರ್ಷಗಳ ಜನ್ಮ ಉತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೃಹತ್ ಸ್ಕ್ರೀನ್ ಮೂಲಕ ಮೋದಿ ಭಾಷಣ ವೀಕ್ಷಿಸುವ ಅವಕಾಶವಿದೆ.

    ಆಸಕ್ತರು ಸಭೆಯಲ್ಲಿ ಭಾಗವಹಿಸುವಂತೆ ಶ್ರೀಮಧ್ವ ಸಪ್ತ ಶತಮಾನೋತ್ಸವ ಸ್ವಾಗತ ಸಮಿತಿ ಹಾಗೂ ಶ್ರೀಕೃಷ್ಣ ಮಠದ ದಿವಾನರರು ಮನವಿ ಮಾಡಿದ್ದಾರೆ.

  • ಬೆಂಗಳೂರಲ್ಲಿ ತರಕಾರಿ ರೇಟ್ ಗಗನಮುಖಿ

    – ಹಣ್ಣು, ತರಕಾರಿ ಆರ್ಡರ್‍ಗೆ ಹಾಪ್‍ಕಾಮ್ಸ್ ನಿಂದ ಆನ್‍ಲೈನ್ ಸೇವೆ

    ಬೆಂಗಳೂರು: ಬೇಸಿಗೆಯ ಬಿಸಿಯ ಜೊತೆ ಈ ಬಾರಿ ತರಕಾರಿಯೂ ಕೈಸುಡಲಿದೆ. ಫೆಬ್ರವರಿ ಮೊದಲ ವಾರದಲ್ಲಿಯೇ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ದರ ಏರಿಕೆ ಆಗಲಿದೆ ಅಂತಾರೆ ಹಾಪ್ ಕಾಮ್ಸ್ ಅಧಿಕಾರಿಗಳು.

    ಹಾಗಿದ್ರೆ ಈ ಹಿಂದೆ ಎಷ್ಟಿತ್ತು ಈಗ ಎಷ್ಟು ಏರಿಕೆ ಆಗಿದೆ ಅಂತಾ ನೋಡೋದಾದ್ರೆ: ಬೀನ್ಸ್‍ಗೆ ಈ ಹಿಂದೆ ಕೆಜಿಗೆ 25 ರೂಪಾಯಿ ಇತ್ತು. ಈಗ 60 ರೂಪಾಯಿ ಆಗಿದೆ. ಇನ್ನು ಬೆಂಡೆಕಾಯಿ 28 ರೂಪಾಯಿ ಇದ್ದಿದ್ದು, ಈಗ 47ರೂಪಾಯಿ ಆಗಿದೆ. ಇನ್ನು ನುಗ್ಗೇಕಾಯಿ 30 ರೂಪಾಯಿ ಇದ್ದಿದ್ದು, 58 ರೂಪಾಯಿ ಆಗಿದೆ. ಟೊಮ್ಯಾಟೋ 10 ರೂಪಾಯಿ ಇದ್ದಿದ್ದು, 25 ರೂ ಆಗಿದೆ. ಇನ್ನು ಸೌತೆಕಾಯಿ 20 ರೂಪಾಯಿ ಇದ್ದಿದ್ದು, 35 ರೂ ಗೆ ಏರಿಕೆ ಆಗಿದೆ.

    ಇನ್ನು ತರಕಾರಿ ದರ ಏರಿಕೆಯ ಮಧ್ಯೆ ಹಾಪ್ ಕಾಮ್ಸ್ ಜನರಿಗಾಗಿ ಆನ್‍ಲೈನ್ ಸೇವೆ ನೀಡಿದೆ. ತಾಜಾ ತರಕಾರಿಗಳನ್ನು ಹಾಪ್ ಕಾಮ್ಸ್ ವೆಬ್‍ಸೈಟ್‍ನಲ್ಲಿ ಅರ್ಡರ್ ಮಾಡಿದ್ರೆ, ಮನೆಬಾಗಿಲಿಗೆ ತರಕಾರಿ ಬರಲಿದೆ. ಈ ಸೇವೆ ಮುಂದಿನ ವಾರದಲ್ಲಿ ಲಭ್ಯವಾಗಲಿದೆ.

  • ತಮಿಳುನಾಡು ಸಿಎಂ ಆಗಲು ಚಿನ್ನಮ್ಮ ಶಶಿಕಲಾ ಸಿದ್ಧತೆ

    ಚೆನ್ನೈ: ಜಯಲಲಿತಾ ಅಕಾಲಿಕ ನಿಧನದ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಲೇ ಇದೆ. ಸದ್ಯ ಎಐಎಡಿಎಂಕೆ ಪಕ್ಷದ ಸುಪ್ರೀಮೋ, ಪ್ರಧಾನ ಕಾರ್ಯದರ್ಶಿಯಾಗಿರುವ ಚಿನ್ನಮ್ಮ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಕುರ್ಚಿಗೇರೋದು ನಿಶ್ಚಿತವಾಗ್ತಿದೆ.

    ಇಂದು ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹಾಲಿ ಸಿಎಂ ಪನ್ನೀರ್ ಸೇಲ್ವಂ ಬದಲಿಗೆ ಶಶಿಕಲಾ ಅವರನ್ನ ನೂತನ ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಯಾಗೆ ಆಪ್ತ ಅಧಿಕಾರಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇನ್ನಿಬ್ಬರು ಉನ್ನಾತಾಧಿಕಾರಿಗಳಿಗೆ ರಾಜೀನಾಮೆಗೆ ಸೂಚಿಸಿದ್ದಾರೆ.

    ಇತ್ತ ಚುನಾವಣಾ ಆಯೋಗದಿಂದ ಶಶಿಕಲಾಗೆ ಆಘಾತ ಎದುರಾಗಿದೆ. ಪಕ್ಷದ ಪ್ರಧಾನ ಕಾರ್ಯದಶಿಯಾಗಿ ಶಶಿಕಲಾ ನೇಮಕ ಸರಿಯಿಲ್ಲ ಎಂದು ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಚುನಾವಣಾ ಆಯೋಗದ ಮೆಟ್ಟಿಲೇರಿದ್ರು. ಈ ಅರ್ಜಿಯನ್ನು ಪರಿಗಣಿಸಿದ ಆಯೋಗ, ವಿವರ ಕೋರಿ ನೋಟೀಸ್ ನೀಡಿದೆ.

  • ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು: ಪೊಲೀಸ್ ಠಾಣೆಗೆ ಬೆಂಕಿ, ವಾಹನ ಭಸ್ಮ!

    ಗದಗ: ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಶಿವಾನಂದ ಗಾಣಗೇರ ಪೊಲೀಸ್ ಠಾಣೆಯಲ್ಲಿಯೇ ವಿಚಾರಣಾಧೀನ ಕೈದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ, ಠಾಣೆಗೆ ಬೆಂಕಿಯಿಟ್ಟು ಸಂಬಂಧಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ?: ಅಕ್ರಮ ಮರಳುದಂಧೆ ಆರೋಪದ ಮೇಲೆ ಶಿವಾನಂದ ಗಾಣಿಗೇರ ಪೊಲೀಸರ ವಶದಲ್ಲಿದ್ದರು. ತೀವ್ರ ವಿಚಾರಣೆಯಲ್ಲಿದ್ದ ಶಿವಾನಂದ ಠಾಣೆಯಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಶಿವಾನಂದ ಸಂಬಧಿಕರು, ಪೊಲಿಸರು ಲಾಕಪ್ ಡೆತ್ ಮಾಡಿರುವುದಾಗಿ ಆರೋಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಠಾಣೆಯೊಳಗೆ ಎಸ್‍ಐ ಶಿವಾನಂದ್ ಹಾಗೂ ಸಿಬ್ಬಂದಿಯಿದ್ದು, ತಮ್ಮ ಪ್ರಾಣ ರಕ್ಷಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮೃತನ ಸಂಬಂಧಿಕರು ಏಕಾಏಕಿ ಠಾನೆಯ ಒಳನುಗಿ, ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಪೊಲಿಸ್ ಜೀಪ್‍ಗೂ ಬೆಂಕಿ ಹಚ್ಚಿದ್ದು, ಸಂಪೂರ್ಣವಾಗಿ ಭಸ್ಮವಾಗಿದೆ.

    ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಕಿಡಿಗೇಡಿಗಳು ಕೂಡ ಅಲ್ಲಿಂದ ಪರಾರಿಯಾಗಿದ್ದಾರೆ. ಹಾಗೆಯೇ ಅಗ್ನಿಶಾಮಕ ದಳದವರು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

    https://www.youtube.com/watch?v=eWXUA96hMlw&feature=youtu.be