Tag: publictv

  • ಪನ್ನೀರ್ ಸೆಲ್ವಂಗೆ ಹೆಚ್ಚಿದ ಸಂಸದರ ಬಲ- ಮಾಧ್ಯಮಗಳ ಮುಂದೆ ಶಶಿಕಲಾ ಶಾಸಕರ ಪರೇಡ್

    ಚೆನ್ನೈ: ಕಳೆದೊಂದು ವಾರದಿಂದ ತಮಿಳುನಾಡು ರಾಜಕೀಯದಲ್ಲಿ ಎದ್ದಿರುವವ ಅಸ್ಥಿರತೆ ಮುಂದುವರಿದಿದೆ. ಎಐಎಡಿಎಂಕೆ ಮಧ್ಯಂತರ ಕಾರ್ಯದರ್ಶಿ ಶಶಿಕಲಾ ನಟರಾಜನ್‍ಗೆ ದಿನದಿಂದ ದಿನಕ್ಕೆ ಬೆಂಬಲ ಕಡಿಮೆಯಾಗುತ್ತಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬಣದಲ್ಲೀಗ 9 ಮಂದಿ ಲೋಕಸಭಾ ಸದಸ್ಯರು ಮತ್ತು ಇಬ್ಬರು ರಾಜ್ಯಸಭಾ ಸಂಸದರು ಸೇರಿ 11 ಮಂದಿ ಕಾಣಿಸಿಕೊಂಡಿದ್ದಾರೆ. ಆದರೆ ಶಾಸಕರ ಸಂಖ್ಯೆ ಏಳರಲ್ಲೇ ಇದೆ.

    ಇತ್ತ ಯಾರನ್ನೂ ಕೂಡಿಹಾಕಿಲ್ಲ ಎಂದು ಸ್ಪಷ್ಟಪಡಿಸಿರುವ ಶಶಿಕಲಾ ಭಾನುವಾರ ರಾತ್ರಿ ಮಾಧ್ಯಮಗಳ ಮುಂದೆ ಚೆನ್ನೈನ ಗೋಲ್ಡನ್ ಬೇ ರೆಸಾರ್ಟ್‍ನಲ್ಲಿರುವ ಶಾಸಕರ ಪರೇಡ್ ನಡೆಸಿದ್ರು. ಆದ್ರೆ ಅವರಿಗ್ಯಾರಿಗೂ ಮಾಧ್ಯಮಗಳ ಮುಂದೆ ಮಾತಾಡಲು ಅವಕಾಶ ಮಾಡಿಕೊಟ್ಟಿಲ್ಲ. ಈ ವೇಳೆ ಮಾತಾಡಿದ ಶಶಿಕಲಾ ತಮಗೆ ಇನ್ನೂ 129 ಶಾಸಕರ ಬೆಂಬಲವಿದೆ ಅಂತಾ ಹೇಳಿಕೊಂಡಿದ್ದಾರೆ.

    ಇತ್ತ ಚುನಾಯಿತ ಸರ್ಕಾರದ ಹಣೆಬರಹ ವಿಧಾನಸಭೆಯಲ್ಲೇ ನಿರ್ಧಾರವಾಗಬೇಕೆಂದು ಪ್ರಸಿದ್ಧ ಬೊಮ್ಮಾಯಿ ತೀರ್ಪು ನೀಡಿದ್ದ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಪಿವಿ ಸಾವಂತ್ ತಮಿಳುನಾಡು ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಶಿಕಲಾ ನಟರಾಜನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಬರುವವರೆಗೆ ರಾಜ್ಯಪಾಲರು ಕಾಯಬಹುದು. ಆದರೆ ಆದಷ್ಟು ಬೇಗ ಏನಾದರೊಂದು ನಿರ್ಧಾರ ಕೈಗೊಳ್ಳಬೇಕೆಂದು ಬೊಮ್ಮಾಯಿ ತೀರ್ಪು ನೀಡಿದ್ದ ಒಂಭತ್ತು ಸದಸ್ಯರ ಸಂವಿಧಾನಿಕ ಪೀಠದ ಸದಸ್ಯರಾಗಿದ್ದ ನ್ಯಾಯಮೂರ್ತಿ ಸಾವಂತ್ ಹೇಳಿದ್ದಾರೆ. ಆದಷ್ಟು ಬೇಗ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚಿಸಬಹುದು. ಅದೊಂದಷ್ಟೇ ರಾಜ್ಯಪಾಲರ ಮುಂದಿರುವ ಆಯ್ಕೆ. ಈ ವೇಳೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ಮೊದಲ ಅವಕಾಶ ನೀಡಬಹುದು ಎಂದು ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

    ಮೂಲಗಳ ಪ್ರಕಾರ ಬುಧವಾರ ಅಥವಾ ಗುರುವಾರ ವಿಶ್ವಾಸಮತ ಸಾಬೀತಿಗೆ ಸೂಚಿಸುವ ಸಾಧ್ಯತೆ ಇದೆ. 235 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ 134 ಶಾಸಕರನ್ನು ಹೊಂದಿದೆ. ಡಿಎಂಕೆ 9 ಮತ್ತು ಕಾಂಗ್ರೆಸ್ 8 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಅಗತ್ಯ ಶಾಸಕರ ಸಂಖ್ಯೆ 118. ಒಂದು ವೇಳೆ ಶಶಿಕಲಾ ಬಣದಲ್ಲಿರುವ 20 ರಿಂದ 30 ಶಾಸಕರು ಪನ್ನೀರ್ ಬಣಕ್ಕೆ ಸೇರ್ಪಡೆಗೊಂಡರೂ ಶಶಿಕಲಾ ಸಿಎಂ ಪಟ್ಟಕ್ಕೆ ಏರುವ ಕನಸು ಭಗ್ನವಾಗಲಿದೆ.

  • ಮೈಸೂರಿನಲ್ಲಿ ರಸ್ತೆ ಅಪಘಾತ: ಯೋಧ ದುರ್ಮರಣ

    ಮೈಸೂರು: ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೋಧ ಮೃತಪಟ್ಟ ಘಟನೆ ಸಂಭವಿಸಿದೆ. ಮಹೇಶ್(26) ಮೃತ ದುರ್ಧೈವಿ ಯೋಧರಾಗಿದ್ದು, ಇವರು ಬಿಎಂಶ್ರೀ ನಗರದ ನಿವಾಸಿ ಮಹದೇವು ಎಂಬವರು ಪುತ್ರರಾಗಿದ್ದಾರೆ.

    ರಾತ್ರಿ ಸ್ನೇಹಿತರನ್ನು ನೋಡಲೆಂದು ಮಹೇಶ್ ಬೈಕ್ ನಲ್ಲಿ ಮನೆಯಿಂದ ಹೊರಹೋಗಿದ್ದರುಶೀ ವೇಳೆ ಆರ್ ಬಿ.ಐ. ಸಮೀಪದ ರಿಂಗ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯೋಧ ಮಹೇಶ್ ಕೆಲ ವರ್ಷಗಳ ಹಿಂದೆ ವಾಯುಪಡೆ ಸೇರಿದ್ದರು. ಸದ್ಯ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳು ರಜೆ ಹಾಕಿ ಜ.15ರಂದು ಮೈಸೂರಿಗೆ ಬಂದಿದ್ದರು. ಫೆ.15ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

  • ಉಕ್ಕಿನ ಸೇತುವೆಗಾಗಿ 65 ಕೋಟಿ ರೂ. ಕಪ್ಪ – ಸಿಎಂ ವಿರುದ್ಧ ಬಿಎಸ್‍ವೈ ಹೊಸ ಬಾಂಬ್

    – ಬಿಜೆಪಿಯವ್ರೂ ಕೊಟ್ಟಿದ್ರು ಎಂದ ಹೆಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೈಕಮಾಂಡ್‍ಗೆ 1 ಸಾವಿರ ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ವಿವಾದಿತ ಉಕ್ಕಿನ ಸೇತುವೆಗಾಗಿ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಉಕ್ಕಿನ ಸೇತುವೆ ಕಾಮಗಾರಿಯ ಆರಂಭಿಕ ಲೆಕ್ಕಾಚಾರ 1,350 ಕೋಟಿ ರೂಪಾಯಿ. ಆದ್ರೆ ನಂತರ 2,400 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಇದಕ್ಕಾಗಿ ಸಿಎಂ ಮತ್ತವರ ಶಿಷ್ಯರಿಗೆ 150 ಕೋಟಿ ರೂಪಾಯಿ ಕಮಿಷನ್ ಕೊಡುವುದಾಗಿ ಮಧ್ಯವರ್ತಿಗಳು ಮಾತುಕೊಟ್ಟಿದ್ದರು. ಅದರಲ್ಲಿ ಸಿಎಂಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬೆಂಗಳೂರಲ್ಲಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಎಸ್‍ವೈ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಕೋರ್ಟ್‍ನಲ್ಲಿ ದಾಖಲೆ ಕೇಳ್ತಾರೆಯೇ ಹೊರತು ಆಣೆ-ಪ್ರಮಾಣವನಲ್ಲ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಿಕ್ಕಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಬರೆದಿರುವ ಪತ್ರಕ್ಕೆ ತನಿಖೆ ಇನ್ನೂ ನಡೆಯುತ್ತಿದೆ ಅನ್ನೋ ಉತ್ತರವಷ್ಟೇ ಸಿಕ್ಕಿದೆ ಅಂತಾ ಸಿದ್ದರಾಮಯ್ಯ ಮೈಸೂರಲ್ಲಿ ತಿರುಗೇಟು ನೀಡಿದ್ದಾರೆ.

    ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಿಎಂ ಹೆಚ್‍ಡಿಕೆ ಬಿಜೆಪಿ ವಿರುದ್ಧವೇ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪ ಮಾಡಿದ್ದಾರೆ. ಹೈಕಮಾಂಡಿಗೆ ಕಪ್ಪ ಕೊಡುವುದು ಬಿಜೆಪಿ ಸರಕಾರ ಇದ್ದಾಗಲೂ ನಡೆಯುತ್ತಿತ್ತು. ಯಾವುದೋ ಯೋಜನೆ ಹೆಸರಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಚೆಕ್ ಮೂಲಕ ದೆಹಲಿಯಲ್ಲಿರುವ ನಾಯಕರಿಗೆ ಹಣ ಪಾವತಿಯಾಗ್ತಿತ್ತು ಅಂತಾ ಮಂಗಳೂರಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

  • ಕಪ್ಪತಗುಡ್ಡ ಉಳಿಸಲು ಉಪವಾಸ ಸತ್ಯಾಗ್ರಹ – 3 ದಿನಗಳ ಹೋರಾಟಕ್ಕೆ ಗಣ್ಯರ ಸಾಥ್

    – ಇತ್ತ ಬಳ್ಳಾರಿಯಲ್ಲಿ ಬೂದಿಗುಡ್ಡ ಸಂರಕ್ಷಣೆ ಕೂಗು

    ಬಳ್ಳಾರಿ,ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹೋರಾಟ ತೀವ್ರಗೊಂಡಿದೆ. ಕಪ್ಪತ್ತಗುಡ್ಡ ಬಗೆಯಲು ಹವಣಿಸುತ್ತಿರುವ ಬಲ್ದೋಟಾ ಕಂಪನಿ ವಿರುದ್ಧದ ಹೋರಾಟಕ್ಕೆ ಹೊಸ ರೂಪು ನೀಡಲಾಗಿದೆ. ಅಹೋರಾತ್ರಿ ಧರಣಿ ಜೊತೆಗೆ ಮೂರು ದಿನಗಳ ಕಾಲ ಉಪವಾಸಕ್ಕೆ ತೀರ್ಮಾನಿಸಲಾಗಿದೆ.

    ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಸ್.ಆರ್ ಹಿರೇಮಠ್, ತೋಂಟದಾರ್ಯ ಸ್ವಾಮೀಜಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ತೋಂಟದಾರ್ಯ ಮಠದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧರಣಿ ವೇಳೆ ಬೀದಿನಾಟಕ, ಜನಪರ ಗೀತೆ ಹಾಡಿ ಸಾರ್ವಜನಿಕರನ್ನು ಜಾಗೃತಿಗೊಳಿಸಲಾಗಿದೆ.

    ಇತ್ತ ಬಳ್ಳಾರಿ ಹೊಸಪೇಟೆಯಲ್ಲೂ ಬೂದಿಗುಡ್ಡ ರಕ್ಷಣೆಗಾಗಿ ಸ್ಥಳೀಯರು ಸಿಡಿದೆದ್ದಿದ್ದಾರೆ. ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗ್ತಿದೆ. ಆದ್ರೆ ಈ ಕಾಮಗಾರಿಯಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ಬೂದಿಗುಡ್ಡ ನಾಶವಾಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಶಿಲಾಯುಗ ಕಾಲದ ಬೂದಿಗುಡ್ಡವನ್ನು ರಕ್ಷಣೆಗಾಗಿ ಕೂಗು ಜೋರಾಗಿದೆ. ಬೂದಿಗುಡ್ಡ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸುಪರ್ದಿಗೆ ಬರುತ್ತದೆ. ಜಿಲ್ಲಾಡಳಿತ ಈ ಹಿಂದೆ ಇದರ ಸುತ್ತಮುತ್ತ ಸಂರಕ್ಷಣಾ ಗೋಡೆ ಸಹ ನಿರ್ಮಿಸಿದೆ. ಆದ್ರೆ ಈಗ ರಾಷ್ಠೀಯ ಹೆದ್ದಾರಿ ಪ್ರಾಧಿಕಾರ ಬೂದಿಗುಡ್ಡವನ್ನು ಒಡೆದು ಹಾಕಿ ರಸ್ತೆ ಅಗಲೀಕರಣಕ್ಕೆ ಮುಂದಾಗಿರೋದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ.

  • ದಿನಭವಿಷ್ಯ: 13-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘಮಾಸ,
    ಶುಕ್ಲ ಪಕ್ಷ, ತೃತೀಯ ತಿಥಿ,
    ಸೋಮವಾರ, ಪುಬ್ಬ ನಕ್ಷತ್ರ

    ರಾಹುಕಾಲ: ಬೆಳಗ್ಗೆ 8:14 ರಿಂದ 9:42
    ಗುಳಿಕಕಾಲ: ಮಧ್ಯಾಹ್ನ 2:06 ರಿಂದ 3:34
    ಯಮಗಂಡಕಾಲ: ಬೆಳಗ್ಗೆ 11:10 ರಿಂದ 12:38

    ಮೇಷ: ವೃತ್ತಿ ರಂಗದಲ್ಲಿ ಯಶಸ್ಸು, ಮಗಳಿಂದ ಶುಭ ಸುದ್ದಿ ಕೇಳುವಿರಿ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಧನವ್ಯಯ.

    ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ತೀರ್ಥಯಾತ್ರೆ ದರ್ಶನ, ವಾಹನದಿಂದ ತೊಂದರೆ, ಸ್ಥಳ ಬದಲಾವಣೆ.

    ಮಿಥುನ: ಆತ್ಮೀಯರ ಆಗಮನ, ಮಾನಸಿಕ ನೆಮ್ಮದಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದಲ್ಲಿ ಏರುಪೇರು.

    ಕಟಕ: ಕಾರ್ಯ ಬದಲಾವಣೆ, ಮೃತ್ಯು ಭಯ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ.

    ಸಿಂಹ: ಯತ್ನ ಕಾರ್ಯದಲ್ಲಿ ಭಂಗ, ವಾಹನ ರಿಪೇರಿ, ಶೀತ ಸಂಬಂಧಿತ ರೋಗ, ಋಣ ಬಾಧೆ, ವ್ಯಾಸಂಗದಲ್ಲಿ ತೊಂದರೆ.

    ಕನ್ಯಾ: ಕೋರ್ಟ್ ಕೇಸ್‍ಗಳಿಂದ ತೊಂದರೆ, ಋಣ ಬಾಧೆ, ವಾಹನದಿಂದ ಸಮಸ್ಯೆ, ಷೇರು ವ್ಯವಹಾರದಲ್ಲಿ ನಷ್ಟ.

    ತುಲಾ: ದ್ರವ್ಯ ನಾಶ, ದುಃಖದಾಯಕ ಪ್ರಸಂಗ, ಆರೋಗ್ಯದಲ್ಲಿ ಏರುಪೇರು, ಮನಃಕ್ಲೇಷ, ಗುರು ಹಿರಿಯರಲ್ಲಿ ಭಕ್ತಿ.

    ವೃಶ್ಚಿಕ: ಅನ್ಯ ಜನರಲ್ಲಿ ದ್ವೇಷ, ಚಂಚಲ ಮನಸ್ಸು, ಸಾಲಗಾರರಿಂದ ತೊಂದರೆ, ಸಲ್ಲದ ಅಪವಾದ.

    ಧನಸ್ಸು: ಆಕಸ್ಮಿಕ ಧನ ಲಾಭ, ವಿವಾಹ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದುಷ್ಟರಿಂದ ದೂರವಿರಿ.

    ಮಕರ: ವೃಥಾ ತಿರುಗಾಟ, ವಿದ್ಯಾಭಿವೃದ್ಧಿ, ದಾಯಾದಿಗಳ ಕಲಹ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

    ಕುಂಭ: ಶತ್ರು ಬಾಧೆ, ದಾಂಪತ್ಯದಲ್ಲಿ ಕಲಹ, ಸುಳ್ಳು ಮಾತನಾಡುವಿರಿ, ಅಧಿಕ ಧನವ್ಯಯ, ಮಾನಸಿಕ ವ್ಯಥೆ.

    ಮೀನ: ಗಣ್ಯ ವ್ಯಕ್ತಿಗಳ ಭೇಟಿ, ಕೋಪ ಜಾಸ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಭಯ ಭೀತಿ ನಿವಾರಣೆ, ಕಾರ್ಯದಲ್ಲಿ ವಿಳಂಬ.

  • ದಿನಭವಿಷ್ಯ: 12-02- 2017

    ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಕ್ಕಳ ಅಗತ್ಯಕ್ಕೆ ವೆಚ್ಚ, ಪ್ರಭಾವಿ ವ್ಯಕ್ತಿ ಪರಿಚಯದಿಂದ ಲಾಭ, ವಿರೋಧಿಗಳಿಂದ ಎಚ್ಚರಿಕೆ, ಕೆಲಸಗಳಲ್ಲಿ ಒತ್ತಡ, ದೂರ ಪ್ರಯಾಣ.

    ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ, ಗೆಳೆಯರಿಂದ ಸಹಕಾರ, ಹಿರಿಯರಿಂದ ಬುದ್ಧಿ ಮಾತು, ಹಣಕಾಸು ಮುಗ್ಗಟ್ಟು, ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಹೆಚ್ಚು, ಪ್ರಯತ್ನಗಳಿಗೆ ಉತ್ತಮ ಫಲ.

    ಮಿಥುನ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ರಾಜ ವಿರೋಧ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ.

    ಕಟಕ: ಸ್ತ್ರೀಯರಿಗೆ ಲಾಭ, ವಸ್ತ್ರ ಖರೀದಿ, ದೂರ ಪ್ರಯಾಣ, ಅಲ್ಪ ಲಾಭ, ಅಧಿಕ ಖರ್ಚು, ಮಕ್ಕಳಿಗೆ ಅನಾರೋಗ್ಯ, ವಾಹನ ಚಾಲನೆಯಲ್ಲಿ ತೊಂದರೆ, ಶತ್ರುಗಳ ಬಾಧೆ, ಗುರಿ ಸಾಧಿಸಲು ಪರಿಶ್ರಮ, ಮಾತಿನ ಮೇಲೆ ಹಿಡಿತ ಅಗತ್ಯ, ಬಾಕಿ ವಸೂಲಿ.

    ಸಿಂಹ: ವಿಪರೀತ ವ್ಯಸನ, ಅನ್ಯರಲ್ಲಿ ವೈಮನಸ್ಸು, ಪುಣ್ಯಕ್ಷೇತ್ರ ದರ್ಶನ, ವಾಗ್ವಾದಗಳಲ್ಲಿ ಸೋಲು, ಆತ್ಮೀಯರನ್ನು ದ್ವೇಷಿಸುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ, ಮಾನಸಿಕ ವ್ಯಥೆ.

    ಕನ್ಯಾ: ಮನಸ್ಸಿನಲ್ಲಿ ಭಯ ನಿವಾರಣೆ, ವಿವಾಹಕ್ಕೆ ಅಡಚಣೆ, ದೂರ ಪ್ರಯಾಣ, ಮಾತಿನಿಂದ ಅನರ್ಥ, ಅವಮಾನ ನಿಂದನೆ, ವ್ಯಾಸಂಗಕ್ಕೆ ತೊಂದರೆ, ನೆಮ್ಮದಿ ಇಲ್ಲದ ಜೀವನ.

    ತುಲಾ: ಆತ್ಮೀಯರ ವಿರೋಧ, ಹಣಕಾಸು ಅಡಚಣೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ, ಅಧಿಕ ಧನವ್ಯಯ, ವಿಪರೀತ ತೊಂದರೆ, ಪಾಪ ಬುದ್ಧಿ, ಹಣಕಾಸು ನಷ್ಟ, ಕೋಪ ಜಾಸ್ತಿ.

    ವೃಶ್ಚಿಕ: ಸಮಾಜ ಸೇವಕರಿಗೆ ನಿಂದನೆ, ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಶ್ರದ್ಧೆ, ದುಃಖದಾಯಕ ಪ್ರಸಂಗ, ಉದ್ಯೋಗದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಅಶಾಂತಿ.

    ಧನಸ್ಸು: ಸ್ತ್ರೀಯರಿಂದ ಶುಭ, ಭೋಗ ವಸ್ತುಗಳ ಪ್ರಾಪ್ತಿ, ಮನಸ್ಸಿನಲ್ಲಿ ಗೊಂದಲ, ನೀಚ ಜನರಿಂದ ದೂರಿವಿರಿ, ತೀರ್ಥಕ್ಷೇತ್ರ ದರ್ಶನ, ಕೃಷಿಕರಿಗೆ ಅಧಿಕ ಲಾಭ.

    ಮಕರ: ಹೊಸ ಉದ್ಯೋಗ ಪ್ರಾಪ್ತಿ, ಸಮಾಜದಲ್ಲಿ ಗೌರವ, ಊರೂರು ಸುತ್ತಾಟ, ಪ್ರಿಯ ಜನರ ಭೇಟಿ, ಯಾರನ್ನೂ ಹೆಚ್ಚು ನಂಬಬೇಡಿ, ಬಂಧು ಮಿತ್ರರು ಸಮಾಗಮ.

    ಕುಂಭ: ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ, ಯತ್ನ ಕಾರ್ಯದಲ್ಲಿ ಭಂಗ, ಕಾರ್ಯದಲ್ಲಿ ವಿಳಂಬ, ತಾಳ್ಮೆ ಅತ್ಯಗತ್ಯ.

    ಮೀನ: ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಅಲ್ಪ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ತೊಂದರೆ, ಸಾಲ ಮರುಪಾವತಿ ಮಾಡುವಿರಿ.

  • ಮತಗಟ್ಟೆಗೆ ಪಿಸ್ತೂಲ್ ತಗೊಂಡೋದ ಬಿಜೆಪಿ ಅಭ್ಯರ್ಥಿ ಸಹೋದರ ವಶಕ್ಕೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗಿನಿಂದಲೇ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮತಗಟ್ಟೆಗೆ ಪಿಸ್ತೂಲ್ ತೆಗೆದುಕೊಂಡು ಹೋದ ಬಿಜೆಪಿ ಮುಖಂಡ ಸಂಗೀತಾ ಸೋಮ್ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗಗನ್ ಸೋಮ್ ಇದೀಗ ಪೊಲೀಸರ ವಶದಲ್ಲಿದ್ದು, ಇವರು ಸಾರ್ಧನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆಯೂ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತ್ ಸೋಮ್ ಸಹೋದರ ಗಗನ್ ಸೋಮ್ ಪಿಸ್ತೂಲ್‍ನೊಂದಿಗೆ ಮತಗಟ್ಟೆ ಪ್ರವೇಶಿಸಿದ್ದರು. ಕೂಡಲೇ ಮಾಹಿತಿ ಪಡೆದ ಪೊಲೀಸರು ಗಗನ್ ಸೋಮ್ ಅವರನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19, 23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ.

  • ಇಂದಿನಿಂದ 6 ತಿಂಗಳು ಚರ್ಚ್ ಸ್ಟ್ರೀಟ್ ಬಂದ್..!

    ಬೆಂಗಳೂರು: ಸಿಲಿಕಾನ್ ಸಿಟಿಯ ವೀಕೆಂಡ್ ಹಾಟ್ ಫೇವರೇಟ್ ಚರ್ಚ್‍ಸ್ಟ್ರೀಟ್ ಶುಕ್ರವಾರದಿಂದ ಆರು ತಿಂಗಳ ಕಾಲ ಬಂದ್ ಆಗಲಿದೆ. ಕಾರಣ ಈ ರಸ್ತೆಯಲ್ಲಿ ಬಿಬಿಎಂಪಿ ಟೆಂಡರ್ ಶ್ಯೂರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ.

    ವೀಕೆಂಡ್‍ನಲ್ಲಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಸುತ್ತಾಡೋರು, ಊಟ ಮಾಡೋಕೆ ಹೆಜ್ಜೆ ಹಾಕೋದು ಚರ್ಚ್ ಸ್ಟ್ರೀಟ್ ರಸ್ತೆ ಕಡೆಗೆ. ಇಲ್ಲಿ ಚೈನೀಸ್, ಜಾಪ್ನೀಸ್, ಕೇರಳ ರೆಸ್ಟೋರೆಂಟ್‍ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ರೆಸ್ಟೋರೆಂಟ್, ಪಬ್, ಬಾರ್‍ಗಳಿವೆ. ಹಲವಾರು ಕಾರ್ಪೊರೇಟ್ ಕಂಪನಿಗಳು ಈ ರಸ್ತೆಯಲ್ಲಿರೋದ್ರಿಂದ ಅಗಾಗ ಈವೆಂಟ್‍ಗಳು ನಡೀತಿರುತ್ತವೆ. ಆದ್ರೆ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಂಡಿರೋದ್ರಿಂದ ಈ ರಸ್ತೆ ಮುಂದಿನ ಆರು ತಿಂಗಳವರೆಗೆ ಬಂದ್ ಆಗಲಿದೆ.

    ಟೆಂಡರ್ ಶ್ಯೂರ್ ಕಾಮಗಾರಿ ನಡೆಸುತ್ತಿರೋದೇನೋ ಸರಿ. ಆದ್ರೆ, ರಸ್ತೆಯ ಎರಡೂ ಬದಿಗಳನ್ನು ಬಂದ್ ಮಾಡ್ತಿರೋದು ಇದೀಗ ರೆಸ್ಟೋರೆಂಟ್‍ಗಳ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನು ಬಿಬಿಎಂಪಿ ನೀಡಿದೆ. ಹಾಗಿದ್ರೂ ಮುಂದಿನ ಆರು ತಿಂಗಳ ಕಾಲ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಅನಾನುಕೂಲಗಳನ್ನ ಅಲ್ಲಿಗೆ ಹೋಗೋರು ಸಹಿಸಿಕೊಳ್ಳಬೇಕಾಗಿದೆ.

  • ಕೆಆರ್‍ಎಸ್‍ಗೆ ಎದುರಾಗಿದೆ ಕಂಟಕ – ಡ್ಯಾಮ್ ಬುಡದಲ್ಲೇ ಸಿಡಿಯಲಿದೆ ಡೈನಾಮೈಟ್

    – ಸರ್ಕಾರಿ ಯೋಜನೆಗೆ ಮಂಡ್ಯ ಜನರ ಕಿಡಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ. ಡ್ಯಾಮ್ ಸಮೀಪವೇ ರಾಜ್ಯ ಸರ್ಕಾರ ಹೊಸ ಯೋಜನೆ ಕೈಗೆತ್ತಿಕೊಂಡಿರೋದೇ ಇದಕ್ಕೆ ಕಾರಣ. ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕ ಎದುರಾಗಿದೆ.

    ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪದ ಎಡಮುರಿಯಲ್ಲಿ 0.5 ಮೆಗಾವ್ಯಾಟ್ ಕಿರು ವಿದ್ಯುತ್ ಉತ್ಪಾದನಾ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಬೆಂಗಳೂರಿನ ವಿ ಫ್ರಾಮ್ ಅನ್ನೋ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಹೀಗಾಗಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬಂಡೆಗಳನ್ನ ಸ್ಫೋಟಿಸಲು ಡೈನಾಮೈಟ್ ಬಳಸ್ತಿದೆ. ಡೈನಾಮೈಟ್ ಬ್ಲಾಸ್ಟ್ ಆಗೋ ಜಾಗದಿಂದ ಕೆಲವೇ ದೂರಗಳಲ್ಲಿ ಕೆಆರ್‍ಎಸ್ ಡ್ಯಾಮ್ ಇದೆ. ಜೊತೆಗೆ ಪಕ್ಕದಲ್ಲೇ ಇರೋ ಸಿಡಿಎಸ್, ವಿರಿಜಾ, ದೇವರಾಯ ನಾಲೆಗಳಿಗೂ ಅಪಾಯ ಎದುರಾಗಿದೆ.

    ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ರೂ ಈಗ ಯೋಜನೆ ಪ್ರಾರಂಭಿಸಿದೆ. ಇನ್ನು ಡ್ಯಾಂನಿಂದ ನಾಲೆಗಳಿಗೆ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದೆ. ನೀರಿನ ಮಧ್ಯದಲ್ಲೇ ಬಂಡೆ ಹಾಕಿರೋ ಕಾರಣ ನಾಲೆಗೆ ನೀರು ಹರಿಯುತ್ತಿಲ್ಲ. ಅವೈಜ್ಞಾನಿಕ ಯೋಜನೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಜೊತೆಗೆ ರೈತರು ತಮ್ಮ ಜಮೀನು, ತೋಟಗಳಿಗೆ ಹೋಗಲು ಕಷ್ಟಪಡ್ತಿದ್ದಾರೆ.

    ಒಟ್ಟಾರೆ, ವಿದ್ಯುತ್ ಉತ್ಪಾದನೆಗೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯಿಂದ ಜನರಿಗೆ ಅನುಕೂಲವಾಗೋ ಬದಲು ಅನಾನುಕೂಲವಾಗ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

  • ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    – ಮಂಗಳವಾರ, ಶುಕ್ರವಾರ ಬಿರಿಯಾನಿ ಊಟ
    – 6 ಜನ ಅನಾಥರಿಗೆ ಮನೆಯಲ್ಲೇ ಆಶ್ರಯ

    ಕೋಲಾರ: ಜಿಲ್ಲೆಯ ಸೈಯದ್ ಅಪ್ಸರ್ ಪಾಷಾ ಎಂಬವರು ಹಸಿವಿನಿಂದ ನೊಂದು ಅನ್ನದ ಬೆಲೆ ತಿಳಿದವರು. ಮದರ್ ತೆರೇಸಾರಿಂದ ಆಕರ್ಷಿತರಾಗಿ ಅವರಂತೆಯೇ ನಡೆಯುವವರು. ಹಗಲು ರಾತ್ರಿಯೆನ್ನದೇ ಹಸಿದವರ ಹೊಟ್ಟೆ ತುಂಬಿಸುವವರು. ಜೊತೆಗೆ ತಮ್ಮ ಮನೆಯಲ್ಲೇ 6 ಮಂದಿ ಅನಾಥರಿಗೆ ಆಶ್ರಯದಾತರಾಗಿದ್ದಾರೆ.

    ಇವರು ಹೊಟೇಲ್ ಆರಂಭಿಸಿ ಅನಾಥರಿಗೆ ಊಟ ಹಾಕುತ್ತಿಲ್ಲ. ಬದಲಾಗಿ ಪುಟ್ಟ ಧರ್ಮಛತ್ರವನ್ನು ಸ್ಥಾಪಿಸಿ ಈ ಮೂಲಕ ಅನಾಥರು, ಬಡವರು, ವಯಸ್ಸಾದವರು, ಅಂಗವಿಕರು, ವಿದ್ಯಾರ್ಥಿಗಳು ಹೀಗೆ ಯಾರೇ ಹಸಿವು ಅಂತಾ ಬಂದರೂ ಅವರ ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಇವರಿಗೆ ಇದೇ ಕಾಯಕ.

    ಕೋಲಾರದ ಬಂಗಾರಪೇಟೆಯ ಈ ಪಬ್ಲಿಕ್ ಹೀರೋಗೆ 2 ಹೊಟೇಲ್‍ಗಳಿವೆ. ಅದರಲ್ಲಿ ಬಂದ ಶೇ.50 ರಷ್ಟು ಹಣವನ್ನು ಹೀಗೆ ಸಮಾಜಸೇವೆಗೆ ಬಳಸ್ತಾರೆ. ವಿಶೇಷತೆ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಬಿರಿಯಾನಿ ಊಟ ಮಾಡಿ ಬಡಿಸ್ತಾರೆ. ಈ ಸೇವೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ಪಾಷಾ ಅವರ ಸಮಾಜಸೇವೆ ಇಷ್ಟೇ ಅಲ್ಲ. 6 ಜನ ಅನಾಥ ಮಕ್ಕಳನ್ನ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರೆ. ರಾತ್ರಿ ನಿದ್ದೆ ಬರದಿದ್ದಾಗ ಪಟ್ಟಣದಲ್ಲಿ ಸಂಚಾರ ಮಾಡಿ ಬೀದಿ ಬದಿ ಮಲಗಿರುವ ನಿರ್ಗತಿಕರಿಗೆ ಕಂಬಳಿ ಕೊಡೋದರ ಜೊತೆ ತಮ್ಮ ಕೈಲಾದ ಸಹಾಯ ಮಾಡ್ತಾರೆ.

    ಎಲ್ಲಾ ಇರೋರಿಗೆ ದಾನ ಮಾಡುವ ಮನಸ್ಸಿರಲ್ಲ. ಕೆಲವರಿಗೆ ದಾನ ಮಾಡುವ ಮನಸ್ಸಿದ್ರೆ ದುಡ್ಡಿರಲ್ಲ. ಇಂತಹ ಕಾಲದಲ್ಲೂ ಹಸಿದ ಹೊಟ್ಟೆಗೆ ಅನ್ನ ಹಾಕೋ ಪಾಷಾ ಅವರಿಗೆ ದೊಡ್ಡ ಸಲಾಂ.

    https://www.youtube.com/watch?v=W_feeyDHo-k