Tag: publictv

  • ಹುಬ್ಬಳ್ಳಿಯಲ್ಲಿ ನಡೆಯ್ತು ಅಚ್ಚರಿಯ ಘಟನೆ: ಸತ್ತಿದ್ದಾನೆಂದು ಭಾವಿಸಿದ್ದ ಬಾಲಕ ಸ್ಮಶಾನದಲ್ಲಿ ಉಸಿರಾಡಿದ..!

    ಹುಬ್ಬಳ್ಳಿಯಲ್ಲಿ ನಡೆಯ್ತು ಅಚ್ಚರಿಯ ಘಟನೆ: ಸತ್ತಿದ್ದಾನೆಂದು ಭಾವಿಸಿದ್ದ ಬಾಲಕ ಸ್ಮಶಾನದಲ್ಲಿ ಉಸಿರಾಡಿದ..!

    ಹುಬ್ಬಳ್ಳಿ: ರಾಜ್ಯದಲ್ಲಿ ಅಪರೂಪದಲ್ಲೇ ಅಪರೂಪ ಎನ್ನುವಂತಹ ಘಟನೆಯೊಂದು ಧಾರವಾದ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ಬಾಲಕನೊಬ್ಬ ಸತ್ತಿದ್ದಾನೆಂದು ತಿಳಿದು, ಇನ್ನೇನು ಆತನ ಮೃತದೇಹವನ್ನು ಸುಡಲು ರೆಡಿ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕ ಉಸಿರಾಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಜಿಲ್ಲೆಯ ಮನಗುಂಡಿ ಗ್ರಾಮದ ನಿಂಗಪ್ಪ ಅವರ ಪುತ್ರ ಕುಮಾರ್ ಎಂಬ ಬಾಲಕನಿಗೆ ಇತ್ತೀಚೆಗೆ ಬೀದಿ ನಾಯಿಗಳು ಕಚ್ಚಿದ್ದವು. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಮೂರ್ಛೆ ಹೋಗಿದ್ದನು. ಸ್ಥಳೀಯ ಎಸ್‍ಡಿಎಂ ಆಸ್ಪತ್ರೆಯಲ್ಲಿ 4 ದಿನ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಪ್ರಯೋಜನವಾಗಿರಲಿಲ್ಲ. 4 ದಿನಾದ್ರೂ ಚಿಕಿತ್ಸೆಗೆ ಸ್ಪಂದಿಸದೇ ಇರುವುದನ್ನು ಮನಗಂಡ ಕುಮಾರ್ ಪೋಷಕರು ಆತನ ಉಸಿರಾಟ, ನಾಡಿಮಿಡಿತ ನಿಂತಿತ್ತು ಅಂತಾ ಖಚಿತಪಡಿಸಿದ್ದರು. ಅಂತೆಯೇ ಆತನ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಸಶಾನಕ್ಕೆ ತಂದಿದ್ದರು. ಈ ವೇಳೆ ಬಾಲಕನ ದೇಹದಲ್ಲಿ ಚಲನವಲನ ಕಂಡು ಬಂದಿದ್ದು, ಬಾಲಕ ಉಸಿರಾಡುತ್ತಿರುವುದು ತಿಳಿದುಬಂತು.

    ಕೂಡಲೇ ಪೋಷಕರು ಆತನನ್ನು ಹುಬ್ಬಳ್ಳಿಯ ಸುಚಿತರಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಾವು ಗೆದ್ದ ಬಾಲಕ ಕುಮಾರ್‍ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ದಾರಿಯೇ ಇಲ್ಲ

    -ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾನನ ಮರೆಯಲ್ಲೇ ಉಳಿದ ಜಲಸೊಬಗು

    ವಿಜಯ್ ಜಾಗಟಗಲ್

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬೇಸಿಗೆಯ ಬಿಸಿಲ ಬೇಗೆ ಜನರನ್ನ ಆಗಲೇ ತತ್ತರಿಸುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನ ಪರದಾಡುತ್ತಿದ್ದಾರೆ. ಬರಗಾಲದಿಂದ ಹಳ್ಳ,ಕೊಳ್ಳ,ಕೆರೆಗಳು ಬತ್ತಿವೆ. ಇಷ್ಟಾದ್ರೂ ರಾಯಚೂರಿನಲ್ಲೊಂದು ಜೀವಂತ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಅಚ್ಚರಿ ಮೂಡಿಸಿದೆ.

    ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಇಲ್ಲಿನ ಜಲಸೋಬಗನ್ನ ನೋಡಿದ್ರೆ ಒಂದು ಕ್ಷಣ ಮಲೆನಾಡಿನ ಪ್ರಕೃತಿ ಸೌಂದರ್ಯದ ಚಿತ್ರಗಳು ಕಣ್ಮುಂದೆ ಬರದೇ ಇರಲ್ಲ. ಇದು ಬರಗಾಲದಿಂದ ತತ್ತರಿಸಿರುವ ಬಿರುಬೇಸಿಗೆಯ ನಾಡು ರಾಯಚೂರು ಜಿಲ್ಲೆಯ ಗುಂಡಲಬಂಡೆ ಜಲಪಾತ ಅನ್ನೋ ಸತ್ಯ ಮಾತ್ರ ನಿಜಕ್ಕೂ ಅಚ್ಚರಿ ತರಿಸುತ್ತೆ. ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತದ ಬಂಡೆಯೊಂದಕ್ಕೆ ಸಿಡಿಲು ಬಡಿದಿದ್ದರಿಂದ ‘ಸಿಡಿಲುಬಂಡೆ’ ಜಲಪಾತ ಅಂತಲೂ ಕರೆಯುತ್ತಾರೆ.

    ಹತ್ತು ವರ್ಷಗಳಿಂದ ಬೆಳಕಿಗೆ ಬರುತ್ತಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದ್ರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೇ ಗೊತ್ತೇ ಇಲ್ಲಾ.

    ಜಲಪಾತದ ಇರುವು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ಬಂದಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ದಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ.

    ಭಾನುವಾರ ಹಾಗೂ ರಜಾ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಾಡಿನಲ್ಲಿ ಒಂದೂವರೆ ಕಿ.ಮೀ ದುರ್ಗಮ ದಾರಿ ಬಳಿಕ ಸಿಗುವ ಈ ಜಲಪಾತ ಬಂಡೆಗಳ ಗುಡ್ಡದಲ್ಲಿ ಹರಿಯುವುದರಿಂದ ಇಲ್ಲಿನ ಕಲ್ಲುಗಳು ಜಾರುತ್ತವೆ. ಅಲ್ಲದೆ ಅಲ್ಲಲ್ಲಿ ಅಪಾಯದ ಸ್ಥಳಗಳಿವೆ, ಮೊದಲಬಾರಿ ಇಲ್ಲಿಗೆ ಬರುವವರು ಮುನ್ನೆಚ್ಚರಿಕೆಯಿಲ್ಲದೆ ಓಡಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರವಾಸಿಗರಿಗೆ ಇಲ್ಲಿ ಜಲಪಾತದ ಕುರಿತ ನಾಮಫಲಕಗಳನ್ನ ಅಳವಡಿಸಬೇಕಿದೆ.

    ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ದಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹೇಳುತ್ತಿದ್ದಾರೆ. ಆದ್ರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ. ಕನಿಷ್ಠ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಅಭಿವೃದ್ದಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಪ್ರವಾಸಿ ತಾಣವನ್ನ ಅಭಿವೃದ್ಧಿ ಪಡಿಸಬೇಕಿದೆ.

  • ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಸಕ ಡಾ.ಅಜಯ್‍ಸಿಂಗ್

    ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಸಕ ಡಾ.ಅಜಯ್‍ಸಿಂಗ್

    ಕಲಬುರಗಿ: ಬೈಕ್ ಅಪಘಾತದಲ್ಲಿ ರಸ್ತೆಯ ಮೇಲೆ ಬಿದ್ದು ಇಬ್ಬರು ಯುವಕರು ಚಿಕಿತ್ಸೆ ಜನರ ಬಳಿ ಅಂಗಲಾಚಿದ್ರೂ ಸಹಾಯಕ್ಕೆ ಬರದ ಘಟನೆ ಕಲಬುರಗಿ ನಗರದ ಹೊರವಲಯದ ಕೋಟನೂರ ಗ್ರಾಮದ ಬಳಿ ನಡೆದಿದೆ.

    ಇಂದು ಬೆಳಗ್ಗೆ 10.50ಕ್ಕೆ ಫಾರ್ಚೂನರ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅಲ್ಲಿನ ಸ್ಥಳೀಯರು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಯಾರು ಕೂಡ ಗಾಯಗೊಂಡವರ ಸಹಾಯಕ್ಕೆ ಮುಂದಾಗಿಲ್ಲ.

    ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಮಾನವೀಯತೆ ಮೆರೆದಿದ್ದು, ಗಾಯಾಳುಗಳ ಸಹಾಯಕ್ಕೆ ಮುಂದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಕಳುಹಿಸುವುದಿಲ್ಲ ಅಂದರೆ ನನ್ನ ವಾಹನದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಹೋಗುವುದಾಗಿ ಎಚ್ಚರಿಸಿದ ಬಳಿಕ ಸ್ಥಳಕ್ಕೆ ಅಂಬುಲೆನ್ಸ್ ಬಂದಿದೆ.

    ಅಂಬುಲೆನ್ಸ್ ಬರುವಷ್ಟರಲ್ಲೇ ನೀರು ಕುಡಿಸಿ ಗಾಯಾಳುಗಳ ಕಾಲನ್ನು ಶಾಲಿನಿಂದ ಕಟ್ಟಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    https://www.youtube.com/watch?v=859q7s4qSd4&feature=youtu.be

  • ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನಿರಾಕರಿಸಿದ್ದಾರೆ.

    ವಿವಿಯ 10 ನೇ ಘಟಿಕೋತ್ಸವದ ಅಂಗವಾಗಿ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಮತ್ತು ಧಾರ್ಮಿಕ ಕ್ಷೇತ್ರದಿಂದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.

    ಈ ಇಬ್ಬರಿಗೆ ಡಾಕ್ಟರೇಟ್ ನೀಡಲು ರಾಜ್ಯಪಾಲ ವಿಆರ್ ವಾಲಾ ಅನುಮೋದನೆ ಕೂಡಾ ಮಾಡಿದ್ದರು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬ ಕಾರಣ ನೀಡಿ, ಸಿದ್ಧಲಿಂಗ ಸ್ವಾಮೀಜಿ ಡಾಕ್ಟರೇಟ್ ಪಡೆಯದಿರಲು ನಿರ್ಧರಿಸಿದ್ದಾರೆ.

    ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ದ್ರಾವಿಡ್, ಕ್ರಿಕೆಟ್ ಆಡಿದ್ದಕ್ಕೆ ಡಾಕ್ಟರೇಟ್ ಪದವಿ ನೀಡುವುದು ಬೇಡ. ಕ್ರಿಕೆಟ್‍ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿ ನಾನು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ವಿವಿಗೆ ತಿಳಿಸಿ ಗೌರವ ಡಾಕ್ಟರೇಟ್ ನಿರಾಕಸಿದ್ದರು.

  • ಹಳೆ ದೋಸ್ತಿಯನ್ನೇ ಕೋರ್ಟಿಗೆಳೆದ ಕರುಣಾಕರರೆಡ್ಡಿ- ಸಂಸದ ಶ್ರೀರಾಮುಲುಗೆ ಸಮನ್ಸ್

    ಹಳೆ ದೋಸ್ತಿಯನ್ನೇ ಕೋರ್ಟಿಗೆಳೆದ ಕರುಣಾಕರರೆಡ್ಡಿ- ಸಂಸದ ಶ್ರೀರಾಮುಲುಗೆ ಸಮನ್ಸ್

    ಬಳ್ಳಾರಿ: ಅಂದು ಅವರಿಬ್ಬರ ಮಧ್ಯೆ ಬಿಡಿಸಲಾಗದ ದೋಸ್ತಿಯಿತ್ತು. ಆದ್ರೆ ಇಂದು ಕರುಣಾಕರರೆಡ್ಡಿ ಆತ್ಮೀಯ ಗೆಳೆಯ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.

    ಗೆಳತನಕ್ಕಾಗಿ ಸರ್ಕಾರವನ್ನೆ ಅಲ್ಲಾಡಿಸಿದ್ದ ರೆಡ್ಡಿ ರಾಮುಲು ಸಹೋದರರ ಮಧ್ಯೆ ಇದೀಗ ಎಲ್ಲವೂ ಸರಿಯಿಲ್ಲ ಅನ್ನೋದು ತಿಳಿದುಬಂದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಶ್ರೀರಾಮುಲು ವಿರುದ್ಧ ಮಾಜಿ ಸಚಿವ ಕರುಣಾಕರರೆಡ್ಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

    ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿ ಸಂಸದ ಶ್ರೀರಾಮುಲು ಹಾಗೂ ಕರುಣಾಕರರೆಡ್ಡಿ ಒಂದಾಗಿ ಖರೀದಿಸಿದ್ದ 10 ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕರುಣಾಕರರೆಡ್ಡಿ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲಿಕತ್ವದ ದಾವೆ ಹೂಡಿದ್ದಾರೆ.

    ಕರುಣಾಕರರೆಡ್ಡಿ ದೂರಿನ ಹಿನ್ನಲೆಯಲ್ಲಿ ನ್ಯಾಯಾಲಯ ಆಸ್ತಿ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮೂವರಿಗೆ ಸಮನ್ಸ್ ಜಾರಿ ಮಾಡಿದೆ. ಸಂಸದ ಶ್ರೀರಾಮುಲು, ಕೆ ತಿಮ್ಮರಾಜು ಹಾಗೂ ರಾಘವೇಂದ್ರ ಎಂಬವರಿಗೆ ಸಮನ್ಸ್ ಜಾರಿಯಾಗಿದೆ. ಹೀಗಾಗಿ ರೆಡ್ಡಿ ರಾಮುಲು ಸಹೋದರ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ.

  • 3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.

    ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್‍ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

    ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

     

  • ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಬೆಂಗಳೂರು: ಖ್ಯಾತ ಬಹುಭಾಷಾ ನಟಿ ಭಾವನಾರನ್ನು ಅಪಹರಿಸಿ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ

    ಕೇರಳದ ಎರ್ನಾಕುಲಂನಲ್ಲಿ ಶೂಟಿಂಗ್ ಮುಗಿಸಿ ರಾತ್ರಿ 1.30ರ ವೇಳೆ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಅಪರಿಚಿತರು ಭಾವನಾ ಅವರನ್ನ ಅಪಹರಿಸಿದ್ದಾರೆ. ಮಾಜಿ ಕಾರು ಡ್ರೈವರ್‍ನಿಂದಲೇ ಅಪಹರಣ ನಡೆದಿದೆ ಎಂದು ಹೇಳಲಾಗಿದೆ.

    ನಡೆದಿದ್ದೇನು?: ಈ ಹಿಂದೆ ಭಾವನಾ ಕಾರಿನ ಚಾಲಕನಾಗಿದ್ದ ಮಾರ್ಟಿನ್ ಎಂಬಾತ ಐವರು ಸ್ನೇಹಿತರ ಜೊತೆ ಸೇರಿ ತನ್ನನ್ನು ಅಪಹರಿಸಿದ್ದಾಗಿ ಭಾವನಾ ಪೊಲೀಸರಿಗೆ ಕೊಟ್ಟ ದುರಿನಲ್ಲಿ ತಿಳಿಸಿದ್ದಾರೆ. ತ್ರಿಶೂರ್‍ನಿಂದ ಎರ್ನಾಕುಲಂಗೆ ಭಾವನಾ ಬರುತ್ತಿದ್ದ ವೇಳೆ ಅಂಗಮಾಲಿ ಎಂಬಲ್ಲಿ ಟೆಂಪೋ ಟ್ರಾವೆಲರ್‍ನಲ್ಲಿ ಬಂದ ಐವರು, ಭಾವನಾ ಕಾರಿಗೆ ಅಡ್ಡಹಾಕಿ ಕಾರು ನಿಲ್ಲಿಸಿದ್ದಾರೆ. ನಂತರ ಡ್ರೈವರ್‍ನನ್ನು ಹೊರಕ್ಕೆ ಎಳೆದು ಕಾರಿನಲ್ಲಿದ್ದ ಭಾವನಾರನ್ನು ನಗರದಲ್ಲಿ ಸುತ್ತಾಡಿಸಿದ್ದಾರೆ. 1 ಗಂಟೆಗಳ ಕಾಲ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಭಾವನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಕ್ಕನಾಡ್‍ನಲ್ಲಿ ಭಾವನಾರನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿರ್ದೇಶಕ ಲಾಲ್‍ಗೆ ಫೋನ್ ಮಾಡಿ ಅವರ ನೆರವಿನಿಂದ ಈಗ ಭಾವನಾ ದೂರು ದಾಖಲಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಭಾವನಾ ಕನ್ನಡದ ಜಾಕಿ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಅಭಿನಯಿಸಿದ್ದಾರೆ. ಅಲ್ಲದೆ ಯಾರೆ ಕೂಗಾಡಲಿ, ಬಚ್ಚನ್, ಮೈತ್ರಿ ಹೀಗೆ ಹಲವಾರು ಕನ್ನಡ ಸಿನಿಮಾದಲ್ಲಿ ಭಾವನಾ ನಟಿಸಿದ್ದಾರೆ.

  • ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಗುರುವಾರ ಸಿಎಂ ಪಟ್ಟಕ್ಕೇರಿರೋ ಪಳನಿಸ್ವಾಮಿಗೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸಬೇಕಿದೆ. ಹೀಗಾಗಿ ಪಳನಿಸ್ವಾಮಿ ಬಣದ ಶಾಸಕರು ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದಾರೆ.

    ಸಂಖ್ಯಾ ಬಲ ಈಗ ಅತಿಮುಖ್ಯವಾಗಿರುವ ಕಾರಣ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪಳನಿಸ್ವಾಮಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪಳನಿಸ್ವಾಮಿ ಬಳಿ 123 ಶಾಸಕರ ಬೆಂಬಲ ಇದೆ ಅಂತ ಹೇಳಲಾಗ್ತಿದೆ. ನಿನ್ನೆಯಷ್ಟೇ ಶಾಸಕ ಮೈಲಾಪುರ ಶಾಸಕ ನಟರಾಜನ್, ಸಿಎಂ ಪಳನಿಸ್ವಾಮಿ ಕ್ಯಾಂಪ್ ತೊರೆದು ಸೆಲ್ವಂ ಬಣ ಸೇರಿದ್ದಾರೆ. ಇನ್ನೂ 30 ಮಂದಿ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದೇ ಏನಾದ್ರೂ ನಿಜವಾದಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಪಳನಿಸ್ವಾಮಿಗೆ ಸೋಲುಂಟಾಗೋದು ಖಚಿತ. ಈ ನಡುವೆ, ವಿಶ್ವಾಸಯಾಚನೆ ವಿರುದ್ಧ ಮತ ಚಲಾಯಿಸಿ ಅಮ್ಮನಿಗೆ ನಿಷ್ಠೆ ತೋರಿಸಬೇಕೆಂದು ಪನ್ನೀರ್ ಸೆಲ್ವಂ ಶಾಸಕರಿಗೆ ಕರೆ ನೀಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಜಯಾ ವಿರೋಧಿ.. ಈಗ ನೀವೂ ವಿರೋಧಿಸಿ ಎನ್ನುತ್ತಿದ್ದಾರೆ. ಈ ನಡುವೆ, ಪಳನಿಸ್ವಾಮಿಗೆ ವಿರುದ್ಧ ಮತ ಹಾಕಲು ಡಿಎಂಕೆ ನಿರ್ಧರಿಸಿದೆ. ಆದ್ರೆ, ಕಾಂಗ್ರೆಸ್ ಮಾತ್ರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದಿದೆ.

    ಇಂದು ಬಹುಮತ ಸಾಬೀತು ಮಾಡಬೇಕಿರುವ ಬೆನ್ನಲ್ಲೇ ಅಣ್ಣಾ ಡಿಎಂಕೆಯಿಂದ ಸಿಎಂ ಪಳನಿಸ್ವಾಮಿ, ಶಶಿಕಲಾ ಸಂಬಂಧಿಗಳಾದ ದಿನಕರನ್, ವೆಂಕಟೇಶನ್ ಸೇರಿದಂತೆ 16 ಮಂದಿಯನ್ನು ಪನ್ನೀರ್ ಸೆಲ್ವಂ ಬಣ ಪಕ್ಷದಿಂದ ಉಚ್ಛಾಟಿಸಿದೆ. ಅಲ್ಲದೆ, ಸೆಲ್ವಂ ಬಣದ ಕೆಲ ಶಾಸಕರು ಸ್ಪೀಕರ್ ಭೇಟಿಯಾಗಿ ಮಾತುಕತೆ ನಡೆಸಿ ರಹಸ್ಯ ಮತದಾನಕ್ಕೆ ಒತ್ತಾಯಿಸಿದ್ದಾರೆ. ಇನ್ನು ನಿನ್ನೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮತ್ತು ಸಚಿವರ ತಂಡ ಇವತ್ತು ಪರಪ್ಪನ ಅಗ್ರಹಾರಕ್ಕೆ ಭೇಟಿಕೊಟ್ಟು ಶಶಿಕಲಾರನ್ನ ಭೇಟಿಯಾಗ್ಬೇಕಿತ್ತು. ಆದ್ರೆ ಯಾವ ಸಚಿವರು ಜೈಲಿಗೆ ಭೇಟಿ ಕೊಡ್ಲಿಲ್ಲ. ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿ, ಸಿಹಿಸುದ್ದಿ ಜೊತೆ ಬರೋದಕ್ಕೆ ಪಳಿನಿಸ್ವಾಮಿ ಕಾಯ್ತಿದ್ದಾರೆ. ಈ ಮಧ್ಯೆ ಜೈಲಲ್ಲಿರೋ ಶಶಿಕಲಾ ಪಳಿನಿಸ್ವಾಮಿಯವ್ರು ಬಂದಾಗ ಚರ್ಚೆ ಮಾಡೋದಕ್ಕೆ ವಿಶೇಷವಾದ ಕೊಠಡಿ ನೀಡಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಪೊಲೀಸರು ಇನ್ನು ನಿರ್ಧಾರ ಮಾಡಿಲ್ಲ.

  • ಬೆಂಗ್ಳೂರಲ್ಲಿ ಪೊಲೀಸ್ರಿಗೂ ರಕ್ಷಣೆಯಿಲ್ಲ- ಖಾಕಿ ಮೇಲೆ ಹಲ್ಲೆ ಮಾಡಿ ಗನ್ ಹೊತ್ತೊಯ್ದ ದುಷ್ಕರ್ಮಿಗಳು

    ಬೆಂಗ್ಳೂರಲ್ಲಿ ಪೊಲೀಸ್ರಿಗೂ ರಕ್ಷಣೆಯಿಲ್ಲ- ಖಾಕಿ ಮೇಲೆ ಹಲ್ಲೆ ಮಾಡಿ ಗನ್ ಹೊತ್ತೊಯ್ದ ದುಷ್ಕರ್ಮಿಗಳು

    ಬೆಂಗಳೂರು: ರಾಜ್ಯದ ಜನರನ್ನು ರಕ್ಷಿಸುವ ಪೊಲೀಸರ ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಲೇ ಇರುತ್ತದೆ. ಶುಕ್ರವಾರವೂ ಕೂಡ ರಾಜಧಾನಿ ಬೆಂಗಳೂರಲ್ಲಿ ಎಂಎಲ್‍ಸಿಯೊಬ್ಬರ ಗನ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ.

    ಎಂ ಎಲ್ ಸಿ ಮನೋಹರ್ ಅವರ ಗನ್ ಮ್ಯಾನ್ ಆಗಿರೋ ಪುರುಷೋತ್ತಮ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ನಗರದ ಮೈಸೂರು ರಸ್ತೆಯ ವಿನಾಯಕ ಥಿಯೇಟರ್ ಬಳಿ ಶುಕ್ರವಾರ ರಾತ್ರಿ ಮೂರು ಜನ ಯುವಕರು ಗನ್ ಮ್ಯಾನ್ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಬಳಿ ಇದ್ದ ಗನ್ ಕಿತ್ಕೊಂಡು ಪರಾರಿಯಾಗಿದ್ದಾರೆ.

    ಪುರುಷೋತ್ತಮ್ ನಿನ್ನೆ ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಂದರ್ಭದಲ್ಲಿ ವಿನಾಯಕ ಥಿಯೇಟರ್ ಬಳಿ ಇರೋ ಗಣೇಶನ ದೇವಸ್ಥಾನದ ಬದಿಯಲ್ಲೇ ಮೂವರು ಯುವಕರು ಮೂತ್ರ ವಿಸರ್ಜನೆ ಮಾಡ್ತಿದ್ರು. ಇದನ್ನ ಪ್ರಶ್ನಿಸಿದ ಗನ್ ಮ್ಯಾನ್ ಪುರುಷೋತ್ತಮ್ ಮೇಲೆ ಕಂಠಪೂರ್ತಿ ಕುಡಿದಿದ್ದ ಆ ಪುಂಡರು ಕ್ಯಾತೆ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದ ಈ ಗಲಾಟೆಯಲ್ಲಿ ಪುಂಡರು ಕಲ್ಲಿನಿಂದ ಪುರುಷೋತ್ತಮ್ ಮುಖ ಮತ್ತು ತಲೆ ಭಾಗವನ್ನ ಜಜ್ಜಿದ್ದಾರೆ. ಇನ್ನು ಗಲಾಟೆ ನೋಡಿ ಅಕ್ಕ ಪಕ್ಕದವರು ಬರುತ್ತಿದ್ದಂತೆ ಕಿಡಿಗೇಡಿಗಳು, ಗಾಯಗೊಂಡು ಕೆಳಗೆ ಬಿದ್ದಿದ್ದ ಪುರುಷೋತ್ತಮ್ ಬಳಿ ಇರೋ ಗನ್ ನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಬಳಿಕ ಸ್ಥಳೀಯರು ಪುರುಷೋತ್ತಮ್‍ರನ್ನು ವಿಕ್ಟೋರಿಯೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಕಾಟನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿ ಪರಾರಿಯಾದ ಕಿಡಿಗೆಡಿಗಳಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಅಂತಾ ದಕ್ಷಿಣ ವಿಭಾಗ ಡಿಸಿಪಿ ಡಾ .ಶರಣಪ್ಪ  ಹೇಳಿದ್ದಾರೆ.

  • ಇಂದು ಏರೋ ಇಂಡಿಯಾಗೆ ಕೊನೆ ದಿನ- ಲೋಹದ ಹಕ್ಕಿಗಳ ಚಿತ್ತಾರದಿಂದ ರಂಗೇರಲಿದೆ ಗಗನ

    ಇಂದು ಏರೋ ಇಂಡಿಯಾಗೆ ಕೊನೆ ದಿನ- ಲೋಹದ ಹಕ್ಕಿಗಳ ಚಿತ್ತಾರದಿಂದ ರಂಗೇರಲಿದೆ ಗಗನ

    – ವೀಕೆಂಡ್‍ನಲ್ಲಿ ಹರಿದು ಬರಲಿದ್ದಾರೆ ಲಕ್ಷಾಂತರ ಜನ

    ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.14ರಿಂದ ನಡೆಯುತ್ತಿರುವ ಏರೋ ಇಂಡಿಯಾ-2017 ವೈಮಾನಿಕ ಪ್ರದರ್ಶನಕ್ಕೆ ಇಂದು ಕೊನೆಯಾಗಲಿದೆ. ಹೀಗಾಗಿ ಇಂದು ವಿಧ ಬಗೆಯ ಲಘು ಯುದ್ಧ ವಿಮಾನಗಳ ಆರ್ಭಟ ಇರಲಿದೆ.

    ಹತ್ತಾರು ಬಗೆಯ ವಿಮಾನಗಳು ಆಗಸದಲ್ಲಿ ಚಿತ್ತಾರ ಮೂಡಿಸಲಿವೆ. ಇನ್ನು ಇಂದು ಮತ್ತು ನಾಳೆ ವೀಕೆಂಡಾಗಿದ್ದರಿಂದ ಈ ಶೋವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಯಲಹಂಕ ವಾಯುನೆಲೆಗೆ ಹರಿದುಬರುವ ನಿರೀಕ್ಷೆಯಿದೆ. ಹೀಗಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಬಹುತೇಕ ಹೆಚ್ಚಿದೆ.

    ವೈಮಾನಿಕ ಪ್ರದರ್ಶನಕ್ಕೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ. ಸೇನಾ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರನ್ನೂ ಪರಿಶೀಲಿಸಿಯೇ ಒಳಗಡೆ ಬಿಡಲಾಗುತ್ತದೆ.