Tag: publictv

  • ಶುರುವಾಗಲಿದೆ ಕುಡಿಯೋ ನೀರಿಗೂ ಹಾಹಾಕಾರ: ಕೆಆರ್‍ಎಸ್‍ನಲ್ಲಿ ನೀರಿನ ಪ್ರಮಾಣ ಎಷ್ಟಿದೆ ಗೊತ್ತೆ?

    ಶುರುವಾಗಲಿದೆ ಕುಡಿಯೋ ನೀರಿಗೂ ಹಾಹಾಕಾರ: ಕೆಆರ್‍ಎಸ್‍ನಲ್ಲಿ ನೀರಿನ ಪ್ರಮಾಣ ಎಷ್ಟಿದೆ ಗೊತ್ತೆ?

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದ್ದು ಕುಡಿಯೋ ನೀರಿಗೂ ಆತಂಕ ಶುರುವಾಗಿದೆ. 124.80 ಅಡಿ ಗರಿಷ್ಟ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗ ಕೇವಲ 78.30 ಅಡಿ ನೀರಿದೆ. ಅಂದ್ರೆ ಅಣೆಕಟ್ಟಿನಲ್ಲಿ ಕೇವಲ 10.5 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ.

    ಅದರಲ್ಲಿ 4.45 ಟಿಎಂಸಿ ಡೆಡ್ ಸ್ಟೋರೆಜ್ ಆಗಿದ್ದು ಸುಮಾರು 5.5 ಟಿಎಂಸಿ ನೀರನ್ನಷ್ಟೇ ಬಳಸಬಹುದಾಗಿದೆ. ಈಗಿರುವ ನೀರನ್ನ ಕೇವಲ ಕುಡಿಯೋ ನೀರಿಗಷ್ಟೇ ಬಳಕೆ ಮಾಡಲಾಗುತ್ತಿದ್ದು, ವ್ಯವಸಾಯಕ್ಕೆ ನೀರು ನೀಡುತ್ತಿಲ್ಲ. ಇದ್ರಿಂದ ರೈತರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರಿಗೆ ಏಪ್ರಿಲ್ ವರೆಗೆ ಹರಸಾಹಸ ಮಾಡಿ ಕುಡಿಯೋ ನೀರಿನ ಪೂರೈಕೆ ಮಾಡಬಹುದು. ಆ ನಂತ್ರವೂ ಮಳೆಯಾಗದಿದ್ರೆ ಕುಡಿಯೋ ನೀರಿಗೆ ಹಾಹಾಕಾರ ಶುರುವಾಗಲಿದೆ. ಒಂದು ವೇಳೆ ಅಣೆಕಟ್ಟೆಯಿಂದ ಡೆಡ್ ಸ್ಟೋರೇಜ್ ನೀರನ್ನು ತೆಗೆದಿದ್ದೆ ಆದ್ರೆ ಜಲಚರ ಜೀವಿಗಳಿಗೆ ತೊಂದರೆ ಎದುರಾಗಲಿದೆ. ಮಂಡ್ಯದ ಹಲವು ಹಳ್ಳಿಗಳಲ್ಲೂ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

    ಕೆಆರ್‍ಎಸ್ ನೀರಿನ ಮಟ್ಟದ ವಿವರ ಇಂತಿದೆ:
    ಗರಿಷ್ಟ 124.80 ಅಡಿ
    ಇಂದಿನ ಮಟ್ಟ 78.30 ಅಡಿ
    ಒಳ ಹರಿವು 105 ಕ್ಯೂಸೆಕ್
    ಹೊರ ಹರಿವು 242 ಕ್ಯೂಸೆಕ್

     

  • ರಾಜ್ಯದ ಹಲವೆಡೆ ಮಧ್ಯರಾತ್ರಿಯೇ `ಹೆಬ್ಬುಲಿ’ ರಿಲೀಸ್ – ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

    ರಾಜ್ಯದ ಹಲವೆಡೆ ಮಧ್ಯರಾತ್ರಿಯೇ `ಹೆಬ್ಬುಲಿ’ ರಿಲೀಸ್ – ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

    – ಟಿಕೆಟ್‍ಗಾಗಿ ಎಲ್ಲೆಲ್ಲೂ ನೂಕುನುಗ್ಗಲು

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಹೆಬ್ಬುಲಿ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಬುಧವಾರ ಮಧ್ಯರಾತ್ರಿಯೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಬೆಂಗಳೂರಿನ ಕೆಲ ಥಿಯೇಟರ್‍ನಲ್ಲಿ ರಾತ್ರಿ 12.30 ರಿಂದಲೇ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

    ಬೆಂಗಳೂರಿನ ವೀರೇಶ್ ಹಾಗೂ ಸಂತೋಷ್ ಚಿತ್ರಮಂದಿರದ ಬಳಿಯೂ ಹೆಬ್ಬುಲಿ ಸಂಭ್ರಮ ಮನೆಮಾಡಿದೆ. ಈಗಾಗಲೇ 20-30 ಅಡಿಯ ಕಟೌಟ್‍ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳ ಸಡಗರ ಮುಗಿಲುಮುಟ್ಟಿದೆ.

    ದಾವಣಗೆರೆ ನಗರದ ಎರಡು ಚಿತ್ರ ಮಂದಿರಗಳಲ್ಲಿ ಮಧ್ಯ ರಾತ್ರಿ 1 ಗಂಟೆಗೆ ತೆರೆಕಂಡಿತು. ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ 8 ಗಂಟೆಯಿಂದಲೇ ಟಿಕೆಟ್ ಗಾಗಿ ಮುಂದೆ ಕ್ಯೂ ನಿಂತಿದ್ದರು. ಕೆಲವರು ಹೆಬ್ಬುಲಿ ಸ್ಟೈಲ್ ನಲ್ಲಿ ಕೂದಲು ಬಿಟ್ಟಿದ್ದರೆ, ಇನ್ನು ಕೆಲ ಸುದೀಪ್ ಅಭಿಮಾನಿ ಬಳಗ ಹೀಗೆ ವಿವಿಧ ರೀತಿಯಲ್ಲಿ ಟಿ-ಶರ್ಟ್ ಧರಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ಮಧ್ಯ ರಾತ್ರಿ 12.30ಕ್ಕೆ ಸರಿಯಾಗಿ ಪಟಾಕಿ ಸಿಡಿಸಿ ಸಿನಿಮಾ 150 ದಿನ ಓಡಲಿ ಅಂತಾ ಸಂಭ್ರಮಿಸಿದರು. ರಾತ್ರಿ ಆರಂಭವಾದ ಮೊದಲ ಶೋಗೆ ಟಿಕೆಟ್ ಸಿಗದ ಅಭಿಮಾನಿಗಳು ದಾವಣಗೆರೆ ನಗರದ ಅಶೋಕ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಬೆಳಗ್ಗೆವರೆಗೂ ಕಾದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಸುದೀಪ್ ಅಣ್ಣನಾಗಿ ಮಿಂಚಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ ಹಾಗ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ಕಾಲಿವುಡ್ ಸುಂದರಿ ಅಮಲಾ ಪಾಲ್ ಜೊತೆಯಾಗಿದ್ದಾರೆ. ರಘುನಾಥ್ ಮತ್ತು ಉಮಾಪತಿ ನಿರ್ಮಾಪಕರಾಗಿದ್ದು, ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ಸಂಗೀತವಿದೆ.

     

  • ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪಂಜಾಬ್: ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವಾಯುಪಡೆಯ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿಯನ್ನೇ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಳಿಕ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿಟ್ಟ ಭಯಾನಕ ಸತ್ಯವೊಂದು ಪೊಲೀಸರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

    ಉತ್ತರಪ್ರದೇಶದ 27 ವರ್ಷದ ವಿಪಿನ್ ಶುಕ್ಲಾ ಕೊಲೆಯಾದ ದುರ್ಧೈವಿಯಾಗಿದ್ದು. ಈತ ಪಂಜಾಬ್‍ನ ಭಿಸಿಯಾನ ವಾಯುನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದನು. ಕೊಲೆ ಪ್ರಕರಣ ಸಂಬಂಧ ಸದ್ಯ ಪೊಲೀಸರು ವಾಯುನೆಲೆ ಅಧಿಕಾರಿಯಾದ ಸುಲೇಶ್ ಕುಮಾರ್ ಹಾಗೂ ಅವರ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣ ಬೆಳಕಿಗೆ: ಫೆಬ್ರವರಿ 15ರಿಂದ ವಿಪಿನ್ ಶುಕ್ಲಾ ನಾಪತ್ತೆಯಾಗಿದ್ದನು. ಈ ವೇಳೆ ಪತ್ನಿ ಕುಂಕುಮ್, ಪತಿ ನಾಪತ್ತೆಯಾಗಿದ್ದಾರೆ ಅಂತಾ ಬತಿಂಡಾದ ನಥಾನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ದೂರಿನ ಆಧಾರದ ಮೇಲೆ ಪೊಲೀಸರು ವಾಯುನೆಲೆಯ ಅಧಿಕಾರಿಗಳ ಕ್ವಾಟ್ರಸ್‍ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಸುಲೇಶ್ ಕುಮಾರ್ ಅವರ ಮನೆಯ ಆವರಣದಿಂದ ಕೊಳೆತ ಮಾಂಸದ ವಾಸನೆ ಬಂದಂತಾಯ್ತು. ಈ ವಾಸನೆಯ ಜಾಡು ಹಿಡಿದ ಪೊಲೀಸರು ಸುಲೇಶ್ ಮನೆಯನ್ನು ಜಾಲಾಡಿದ್ದರು. ಪರಿಣಾಮ ಮನೆಯ ಫ್ರಿಜ್‍ನಲ್ಲಿ 16 ಪಾಲಿಥೀನ್ ಚೀಲಗಳಲ್ಲಿ ಶವವೊಂದರ ತುಂಡಾದ ದೇಹಗಳನ್ನು ಪ್ಯಾಕ್ ಮಾಡಿಟ್ಟಿರುವ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಸುಲೇಶ್, ಪತ್ನಿ ಅನುರಾಧಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಸುಲೇಶ್, ಫೆಬ್ರವರಿ 8ರಂದು ನನ್ನ ಮನೆಯನ್ನು ಬದಲಾಯಿಸುವ ಸಲುವಾಗಿ ಮನೆ ವಸ್ತುಗಳನ್ನು ಪ್ಯಾಕ್ ಮಾಡಲು ಇದೆ. ಹೀಗಾಗಿ ವಿಪಿನ್‍ನನ್ನು ಉಪಾಯ ಮಾಡಿ ಮನೆಗೆ ಕರೆದಿದ್ದೆ. ಬಳಿಕ ಕೊಲೆ ಮಾಡಿ ಆತನ ದೇಹವನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಹೊಸ ಮನೆಯಲ್ಲಿ ಇಟ್ಟಿದ್ದೆ ಅಂತಾ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ವಿಪಿನ್ ನನ್ನು ಕೊಲೆಗೈದಿದ್ದಾಗಿ ಹೇಳಿಕೆ ನೀಡಿದ್ದಾನೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

    ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

    ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ್ ರಾವ್ ಇಂದು ಆಂಧ್ರಪ್ರದೇಶಲ್ಲಿರುವ ತಿರುಪತಿ ದೇಗುಲಕ್ಕೆ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

    ತೆಲಂಗಾಣ ಪ್ರತ್ಯೇಕ ರಾಜ್ಯವಾಗಿದ್ದು, ತಮ್ಮ ಬೇಡಿಕೆ ಈಡೇರಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ದೇವರಿಗೆ ತಾವರೆ ಮಾದರಿಯ ಸಾಲಿಗ್ರಾಮ ನೆಕ್ಲೆಸ್(14.9 ಕೆ.ಜಿ), 5 ಎಳೆಯ ಕಂಠಿ(4.65 ಕೆ.ಜಿ) ಯನ್ನು ಶ್ರೀ ದೇವರಿಗೆ ಅರ್ಪಿಸಿದ್ದಾರೆ. ಇದಾದ ಬಳಿಕ ತಿರುಚಾನೂರ್‍ಗೆ ತೆರಳಿ ಅಲ್ಲಿಯ ಪದ್ಮಾವತಿ ದೇವಿಯ ದರ್ಶನ ಪಡೆದು ದೇವಿಗೆ ಮೂಗುತಿಯನ್ನು ಅರ್ಪಿಸಲಿದ್ದಾರೆ. ಒಟ್ಟಿನಲ್ಲಿ ತಿರುಪತಿಗೆ 5. 5 ಕೋಟಿ ರೂ. ಮೌಲ್ಯದ ಒಡವೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

    ತೆಲಂಗಾಣ ಪ್ರತ್ಯೇಕ ರಾಜ್ಯವೆಂದು ಘೋಷಣೆಯಾದ ಬಳಿಕ ಮೊದಲ ಬಾರಿಗೆ ತಮ್ಮ ಪತ್ನಿ ಶೋಭಾ ರಾವ್, ಮಗ ಕೆ.ಟಿ ರಾಮ ರಾವ್ ಹಾಗೂ ಮಗಳು ಕೆ ಕವಿತಾ ಮತ್ತು ಕುಟುಂಬದವರೊಂದಿಗೆ ಜೊತೆ ಎರಡು ದಿನಗಳ ಆಂಧ್ರ ಭೇಟಿಯಲ್ಲಿರುವ ಕೆಸಿಆರ್, ಮಂಗಳವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿ ಬೆಟ್ಟಕ್ಕೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಆಂಧ್ರದ ಅರಣ್ಯ ಸಚಿವ ಬಿ ಗೋಪಾಕೃಷ್ಣ ರೆಡ್ಡಿ ಹಾಗೂ ಮತ್ತಿತರ ಶಾಸಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಶ್ರೀ ದೇವರ ದರ್ಶನ ಪಡೆದು ಬಳಿಕ ಆಭರಣಗಳನ್ನು ಹಸ್ತಾಂತರಿಸಿದ್ದಾರೆ.

    ವಾರಂಗಲ್ ದೇವಿಗೆ ಚಿನ್ನ: 2016ರ ಅಕ್ಟೋಬರ್ ತಿಂಗಳಿನಲ್ಲಿ ಕೆಸಿಆರ್ 3.5 ಕೋಟಿ ಮೌಲ್ಯದ 12 ಕೆ.ಜಿ ಚಿನ್ನವನ್ನು ವಾರಂಗಲ್‍ನಲ್ಲಿರುವ ಭದ್ರಕಾಳಿ ದೇವಿಗೆ ಕಾಣಿಕೆಯಾಗಿ ಅರ್ಪಿಸಿದ್ದರು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಕೆಸಿಆರ್ ವಿಜಯವಾಡಾದ ಕನಕ ದುರ್ಗಾ ದೇವಿಗೆ ಮೂಗುತಿ ಹಾಗೂ ತಿರುಮಲದ ವೆಂಕಟೇಶ್ವರ ದೇವರಿಗೆ ನೆಕ್ಲೆಸ್ ನೀಡಿದ್ದರು.

  • ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಮೈಸೂರು: ದೇಶದ ಎಲ್ಲೆಡೆ ಡಿಜಿಟಲ್ ಪೇಮೆಂಟ್‍ನದ್ದೇ ಸದ್ದು. ಅದರಲ್ಲೂ ನೋಟ್ ಬ್ಯಾನ್ ಆದ ಮೇಲಂತೂ ಡಿಜಿಟಲ್ ಪೇಮೆಂಟ್ ದೊಡ್ಡ ಕ್ರಾಂತಿಯ ರೀತಿ ಮಾರ್ಪಟಿದ್ದೆ. ಮೈಸೂರಿನ ಶೌಚಾಲಯದಲ್ಲೂ ಇದೀಗ ಡಿಜಿಟಲ್ ಪೇಮೆಂಟ್ ಶುರುವಾಗಿದೆ.

    ನೋಟ್ ಬ್ಯಾನ್ ಬಳಿಕವಂತೂ ಬೀದಿ ವ್ಯಾಪಾರಿಗಳಿಂದ ಹಿಡಿದು ಚಿಕ್ಕ ಚಿಕ್ಕ ಅಂಗಡಿ ಮಂದಿ ಡಿಜಿಟಲ್ ಪೇಮೆಂಟ್‍ಗೆ ಜೈ ಅಂದಿದ್ರು. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಪರದಾಡಿದ್ದಂತೂ ಸತ್ಯ. ಇದರ ಮಧ್ಯೆ ಸ್ವಚ್ಛನಗರಿ ಮೈಸೂರಿನಲ್ಲಿ ಅಪರೂಪದ ಶೌಚಾಲಯವಿದೆ. ಇಲ್ಲಿ ನಿಮಗೆ ಚಿಲ್ಲರೆ ಸಮಸ್ಯೆ ಎದುರಾಗಲ್ಲ. ಕಾರಣ ಈ ಶೌಚಾಲಯ ನಡೆಸುವವರು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಶೌಚಾಲಯ ಬಳಸುವವರಿಗಾಗಿ ಪೇಟಿಎಂ ಅಳವಡಿಸಿದ್ದಾರೆ.

    ಮೈಸೂರಿನ ಮಹಾನಗರ ಪಾಲಿಕೆ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ನಿತ್ಯ ಬರುವ ನೂರಾರು ಜನರಲ್ಲಿ ಶೇ. 20ರಷ್ಟು ಮಂದಿ ಪೇಟಿಎಂ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿಯೇ ಮೈಸೂರಿನ ಈ ಶೌಚಾಲಯ ಮಾದರಿಯಾಗಿದ್ದು. ಇದನ್ನು ನೋಡಿದ ಇನ್ನಷ್ಟು ಮಂದಿ ಡಿಜಿಟಲ್ ಪೇಮೆಂಟ್‍ನತ್ತ ಒಲವು ತೋರಿದ್ದಾರೆ.

  • 3 ವರ್ಷದಲ್ಲಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡ್ರೂ ಬದುಕಿದ್ದಾಳೆ ಈ ಯುವತಿ!

    3 ವರ್ಷದಲ್ಲಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡ್ರೂ ಬದುಕಿದ್ದಾಳೆ ಈ ಯುವತಿ!

    ಶಿಮ್ಲಾ: ಸಾಮಾನ್ಯವಾಗಿ ಯಾರಿಗಾದ್ರೂ ಎರಡು ಮೂರು ಬಾರಿ ಹಾವು ಕಚ್ಚಿರೋ ಬಗ್ಗೆ ಕೇಳಿದ್ರೇನೇ ಆಶ್ಚರ್ಯಪಡ್ತೀವಿ. ಅದ್ರೆ ಹಿಮಾಚಲಪ್ರದೇಶದ 18 ವರ್ಷದ ಮನಿಷಾ ಎಂಬ ಈ ಯುವತಿ ಕಳೆದ 3 ವರ್ಷದಲ್ಲಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ.

    ಈ ಮೂರು ವರ್ಷದಲ್ಲೂ ಹಲವು ವಿಧದ ಹಾವುಗಳು ಈಕೆಯನ್ನ ಕಚ್ಚಿವೆ. “ನನಗೆ ಕಳೆದ 3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿವೆ. ಮೊದಲ ಬಾರಿಗೆ ಗ್ರಾಮದಲ್ಲಿರುವ ನದಿ ಬಳಿ ನನಗೆ ಹಾವು ಕಚ್ಚಿತ್ತು. ಇತ್ತೀಚೆಗಷ್ಟೆ ನನಗೆ ಬಿಳಿ ಬಣ್ಣದ ಹಾವು ಕಚ್ಚಿತು. ಹಾವುಗಳನ್ನ ನೋಡಿದಾಗಲೆಲ್ಲಾ ನಾನು ಮಂತ್ರಮುಗ್ಧಳಾಗುತ್ತೇನೆ. ಆಗ ನನಗೆ ಅದು ಕಚ್ಚುತ್ತದೆ. ಎರಡು ವರ್ಷದ ಹಿಂದೆ ಮಾತ್ರ ಹಾವು ನನಗೆ ಕಚ್ಚಿರಲಿಲ್ಲ. ಶಾಲೆಯಲ್ಲಿದ್ದಾಗ ನನಗೆ ಪದೇ ಪದೇ ಹಾವು ಕಚ್ಚುತ್ತಿತ್ತು. ಕೆಲವೊಮ್ಮೆ ಒಂದೇ ದಿನದಲ್ಲಿ ಎರಡರಿಂದ ಮೂರು ಬಾರಿ ಹಾವು ಕಡಿತಕ್ಕೊಳಗಾಗಿದ್ದೇನೆ. ನನಗೂ ನಾಗದೇವತೆಗೂ ಏನೋ ಬಂಧವಿದೆ ಅಂತಾ ಜ್ಯೋತಿಷ್ಯರು ಹೇಳಿದ್ದಾರೆ ಅಂತಾ ಮನಿಷಾ ಹೇಳಿದ್ದಾಳೆ.

    ಮನಿಷಾ ಫೆಬ್ರವರಿ 18ರಂದು 34ನೇ ಬಾರಿಗೆ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಇಲ್ಲಿನ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದು, ಆಕೆ ಬೇಗನೆ ಗುಣಮುಖಳಾಗುತ್ತಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲದೆ ಈಕೆಗೆ ಕಚ್ಚಿರುವ ಹಾವುಗಳು ವಿಷರಹಿತ ಅಥವಾ ಕಡಿಮೆ ಪ್ರಮಾಣದ ವಿಷವುಳ್ಳ ಹಾವುಗಳಾಗಿವೆ. ಇಲ್ಲಿನ ಶೇ.80 ಹಾವುಗಳು ವಿಷಕಾರಿಯಲ್ಲದ ಹಾವುಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.

    ಇನ್ನು ಈಕೆಯ ತಂದೆ ಸುಮೇರ್ ವರ್ಮ ಹೇಳುವ ಪ್ರಕಾರ, ಮನಿಷಾಗೆ ಹಾವು ಕಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ದೇವರ ಆಶೀರ್ವಾದದಿಂದ ಹಾವು ಕಡಿತದ ಪರಿಣಾಮ ಕಡಿಮೆಯಾಗಿಸಬಹುದು ಎಂಬ ನಂಬಿಕೆಯಿಂದ ಆಕೆಯನ್ನು ಅನೇಕ ದೇವಸ್ಥಾನ, ಅರ್ಚಕರು ಹಾಗೂ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೇವೆ ಎಂದಿದ್ದಾರೆ.

    ಆದರೆ ಹಾವುಗಳ ಬಗ್ಗೆ ಜ್ಞಾನ ಹೊಂದಿರುವ ಇಲ್ಲಿನ ಸ್ಥಳೀಯ ಪಶುವೈದ್ಯರಾದ ಡಾ. ರೋಹಿತ್ ಹೇಳುವ ಪ್ರಕಾರ ಸತತ ಹಾವಿನ ಕಡಿತದಿಂದ ಮನಿಷಾಳಲ್ಲಿ ವಿಷ ನಿರೋಧಕ ಅಂಶ ಅಭಿವೃದ್ಧಿಯಾಗಿದೆ. ನಾವು ಸಾಮಾನ್ಯವಾಗಿ ಕುದುರೆಗಳಿಗೆ ವಿಷ ನೀಡಿ ಅವುಗಳಲ್ಲಿ ಆ್ಯಂಟಿಬಾಡೀಸ್(ಪ್ರತಿರೋಧಕ ಶಕ್ತಿ) ಅಭಿವೃದ್ಧಿಯಾಗುವಂತೆ ಮಾಡುತ್ತೇವೆ. ಇದೇ ರೀತಿ ಮನಿಷಾ ದೇಹದಲ್ಲೂ ವಿಷ ನಿರೋಧಕ ಶಕ್ತಿ ಹೆಚ್ಚಿದ್ದು ಇದೇ ಕಾರಣದಿಂದ ಆಕೆ ಹಲವು ಬಾರಿ ಹಾವಿನ ಕಡಿತಕ್ಕೊಳಗಾದ್ರೂ ಬದುಕಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಬೆಂಗಳೂರಿನ ಜನರೇ ಎಚ್ಚರ- ಕುಡಿಯುವ ನೀರಿಗೂ ಪಡಿತರ?

    ಬೆಂಗಳೂರಿನ ಜನರೇ ಎಚ್ಚರ- ಕುಡಿಯುವ ನೀರಿಗೂ ಪಡಿತರ?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರೇ ಎಚ್ಚರವಾಗಿರಿ. ಮುಂದಿನ ದಿನಗಳಲ್ಲಿ ಕುಡಿಯೋ ಹನಿ ನೀರಿಗೂ ಸಂಕಷ್ಟ  ಎದುರಾಗಲಿದೆ.

    ಹೌದು. ನಗರದಲ್ಲಿ ಇನ್ನು ಮುಂದೆ ಕುಡಿಯುವ ನೀರಿಗೆ `ಪಡಿತರ ಮಾದರಿ ವ್ಯವಸ್ಥೆ’ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಗುರುವಾರ ನಡೆಯುವ ಜಲಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಬೆಂಗಳೂರು ಜಲಮಂಡಳಿ ಮುಖ್ಯಸ್ಥರ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ.

    ತೀವ್ರ ಬರದ ಹಿನ್ನೆಲೆಯಲ್ಲಿ ಜಲಾಶಯಗಳು ಬರಿದಾಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪಡಿತರ ಮಾದರಿ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತಿಸಿದೆ.

    ಪಡಿತರ ವ್ಯವಸ್ಥೆ:

    ಸದ್ಯ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ಕಾವೇರಿ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ವಾರಕ್ಕೆ ಎರಡು ದಿನ ಮಾತ್ರ ನೀರಿನ ಸರಬರಾಜು ಇದೆ. ಪಡಿತರ ವ್ಯವಸ್ಥೆ ಜಾರಿಯಾದರೆ ಎಲ್ಲ ಪ್ರದೇಶಗಳಲ್ಲಿ ವಾರಕ್ಕೆ ಎರಡು ದಿನ ಮಾತ್ರ ನೀರು ಪೂರೈಕೆಯಾಗಲಿದೆ.

  • ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

    ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

    ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಯನ್ನು ಶೀಘ್ರವೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

    ಫೆಬ್ರವರಿ 28ರಿಂದ 15 ದಿನಗಳ ಕಾಲ ಆರೋಪಿ ಮಧುಕರ್ ರೆಡ್ಡಿ ವಿಚಾರಣೆಗಾಗಿ ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲು ಮದನಪಲ್ಲಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಎಟಿಎಂ ಹಲ್ಲೆಕೋರನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಇದೀಗ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಫೆಬ್ರವರಿ 4 ರಂದು ಮದನಪಲ್ಲಿಯಲ್ಲಿ ಕ್ರಿಮಿನಲ್ ಮಧುಕರ್ ರೆಡ್ಡಿ ಸೆರೆಸಿಕ್ಕಿದ್ದ. ಬಳಿಕ ಮಧುಕರ್‍ರೆಡ್ಡಿಯನ್ನು ಬಾಡಿ ವಾರೆಂಟ್ ಮೇಲೆ ಪಡೆಯಲು ಕರ್ನಾಟಕ ಸೇರಿ 3 ರಾಜ್ಯಗಳು ಪ್ರಯತ್ನ ಮಾಡಿದ್ದವು. ಆದ್ರೆ, ಎರಡು ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳ ಸಂಬಂಧ ಮಧುಕರ್ ರೆಡ್ಡಿ ಆಂಧ್ರ ಪೊಲೀಸರ ವಶವಾಗಿದ್ದು, ಸದ್ಯ ಆತನ ವಿಚಾರಣೆ ಮುಂದುವರೆದಿದೆ. `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಈಗಾಗಲೇ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

     

  • ಪುತ್ರನಿಗಾಗಿ ಶಿಕಾರಿಪುರ ಕ್ಷೇತ್ರ ತ್ಯಾಗಕ್ಕೆ ರೆಡಿಯಾದ ಬಿಎಸ್‍ವೈ!

    ಪುತ್ರನಿಗಾಗಿ ಶಿಕಾರಿಪುರ ಕ್ಷೇತ್ರ ತ್ಯಾಗಕ್ಕೆ ರೆಡಿಯಾದ ಬಿಎಸ್‍ವೈ!

    -ಮಾಜಿ ಸಚಿವ ಕುಮಾರ್ ಬಂಗಾರಪ್ಪಗೆ ಬಿಜೆಪಿಯಿಂದ ಎಂಪಿ ಟಿಕೆಟ್..?

    ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ತಮ್ಮ ಸ್ವಕ್ಷೇತ್ರವಾದ ಶಿಕಾರಿಪುರವನ್ನು ಮಗ ಬಿ.ವೈ. ರಾಘವೇಂದ್ರ ಅವರಿಗೆ ಬಿಟ್ಟು ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

    ಬಿಎಸ್‍ವೈ ತಾವು ಮುಂದಿನ ಚುನಾವಣೆಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಅಥವಾ ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದತ್ತ ಕಣ್ಣು ಹಾಕಿದ್ದಾರೆ. ಈ ಕುರಿತು ಅವರು ಈಗಾಗಲೇ ಆಪ್ತರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

    ಶಿವಮೊಗ್ಗ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಹಿಡಿತ ಸಾಧಿಸಲು ಬಿಎಸ್ ವೈ ಮಾಸ್ಟರ್ ಪ್ಲಾನ್ ಮಾಡಿದ್ದು ಮಾಜಿ ಸಚಿವ ಕುಮಾರ್ ಬಂಗಾರಪ್ಪಗೆ ಬಿಜೆಪಿಯಿಂದ ಎಂಪಿ ಟಿಕೆಟ್ ನೀಡುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಈಗಾಗಲೇ ಕುಮಾರ್ ಬಂಗಾರಪ್ಪ ಅವರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿರುವ ಬಿಎಸ್‍ವೈ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

    ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದರೆ ಸೊರಬ ಕ್ಷೇತ್ರದಿಂದ ಟಿಕೆಟ್ ನೀಡುವುದು ಅಥವಾ ಸಂಸದ ಎಲೆಕ್ಷನ್ ಗೆ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನೀಡಬಹುದು ಎಂದು ಬಿಎಸ್‍ವೈ ಲೆಕ್ಕಾಚಾರ ಹಾಕಿದ್ದಾರೆ. ಆದ್ರೆ ಯಡಿಯೂರಪ್ಪ ಅವರ ಭರವಸೆಗೆ ಯೋಚನೆ ಮಾಡ್ತಿನಿ ಅಂತಾ ಇತ್ತ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.

     

  • ಏಕಾಏಕಿ ಶಾಪಿಂಗ್ ಸ್ಟೋರ್‍ನೊಳಗೆ ನುಗ್ಗಿದ ಕಾರ್: ಮುಂದೇನಾಯ್ತು? ಶಾಕಿಂಗ್ ವಿಡಿಯೋ ನೋಡಿ

    ಏಕಾಏಕಿ ಶಾಪಿಂಗ್ ಸ್ಟೋರ್‍ನೊಳಗೆ ನುಗ್ಗಿದ ಕಾರ್: ಮುಂದೇನಾಯ್ತು? ಶಾಕಿಂಗ್ ವಿಡಿಯೋ ನೋಡಿ

    ನ್ಯೂಯಾರ್ಕ್: ಕಾರೊಂದು ಏಕಾಏಕಿಯಾಗಿ ಶಾಪಿಂಗ್ ಸ್ಟೋರ್‍ನೊಳಗೆ ನುಗ್ಗಿದ್ದು, ಗ್ರಾಹಕರೊಬ್ಬರು ಪವಾಡ ಸದೃಶರಾಗಿ ಪಾರಾದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನ್ಯೂಯಾರ್ಕ್‍ನ ಸ್ಟೋರ್‍ವೊಂದರಲ್ಲಿ ಗ್ರಾಹಕರೊಬ್ಬರು ಎರಡು ಕಪಾಟಿನ ಮಧ್ಯದಲ್ಲಿ ನಿಂತು ವಸ್ತುಗಳ ಮೇಲೆ ಕಣ್ಣಾಡಿಸುತ್ತಿದ್ರು. ಈ ಸಂದರ್ಭದಲ್ಲಿ ಏಕಾಏಕಿಯಾಗಿ ಬಿಳಿ ಬಣ್ಣದ ಕಾರು ಒಳಗಡೆ ನುಗ್ಗಿದೆ. ಪರಿಣಾಮ 2 ಕಪಾಟುಗಳು ನೂಕಲ್ಪಟ್ಟು, ಗ್ರಾಹಕ ಅದರ ಮಧ್ಯೆ ಸಿಲುಕಿದ್ದರು.

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಘಟನೆಯಲ್ಲಿ ಗಾಯಗೊಂಡ ಗ್ರಾಹಕ 37 ವರ್ಷದ ಮಾರ್ಕಸ್ ಕೊಲ್ಲಾಡೊ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಸಣ್ಣ ಪುಟ್ಟ ಗಾಯಗಳು ಬಿಟ್ಟರೆ ಹೆಚ್ಚಿನ ಅಪಾಯವೇನೂ ಆಗಿಲ್ಲ ಎಂದು ವರದಿಯಾಗಿದೆ.

    ಸದ್ಯ 65 ವರ್ಷದ ಕಾರಿನ ಚಾಲಕಿಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಗೆ ಹೆಚ್ಚಿನ ಗಾಯಗಳೇನು ಆಗಿಲ್ಲ ಎಂಬುವುದಾಗಿ ತಿಳಿದುಬಂದಿದೆ. ಚಾಲಕಿಯ ನಿಂತ್ರಣ ತಪ್ಪಿ ಈ ಘಟನೆ ನಡೆದಿದ್ಯಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.