Tag: publictv

  • ದಿನಭವಿಷ್ಯ: 26-02-2017

    ದಿನಭವಿಷ್ಯ: 26-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋರು ಮಾಘ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ,
    ಭಾನುವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಸಾಯಂಕಾಲ 5:02 ರಿಂದ 6:34
    ಗುಳಿಕಕಾಲ: ಮಧ್ಯಾಹ್ನ 3:31 ರಿಂದ 5:02
    ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 2:00

    ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಹಿರಿಯರ ಆಶೀರ್ವಾದದಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ವರಮಾನ, ಶೀತ ಸಂಬಂಧಿತ ರೋಗ ಬಾಧೆ, ಸಾಲ ಬಾಧೆ.

    ವೃಷಭ: ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ಈ ವಾರ ಸಾಧಾರಣ ಫಲ.

    ಮಿಥುನ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ದ್ರವ್ಯ ನಾಶ, ಅಧಿಕ ಕೋಪ, ಕಾರ್ಯದಲ್ಲಿ ವಿಳಂಬ, ಮಾನಸಿಕ ಚಿಂತೆ, ಕೃಷಿಯಲ್ಲಿ ಲಾಭ, ಮಾನಸಿಕ ನೆಮ್ಮದಿ, ಸಲ್ಲದ ಅಪವಾದ, ಉತ್ತಮ ಪ್ರಗತಿ.

    ಕಟಕ: ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಪ್ರೀತಿ ವಾತಾವರಣ, ವಾಹನ ಯೋಗ, ಆತ್ಮೀಯರಿಂದ ಹೊಗಳಿಕೆ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಿತೈಷಿಗಳಿಂದ ಬೆಂಬಲ, ವ್ಯಾಪಾರಿಗಳಿಗೆ ಲಾಭ, ದಾಯಾದಿಗಳಿಂದ ಕಲಹ, ಅಪಘಾತ ಸಾಧ್ಯತೆ, ಮಾನಸಿಕ ಕಿರಿಕಿರಿ.

    ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಷೇರು ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಹಳೇ ಗೆಳೆಯರ ಭೇಟಿ, ಸುಖ ಭೋಜನ ಪ್ರಾಪ್ತಿ, ಉದ್ಯೋಗದಲ್ಲಿ ತೊಂದರೆ.

    ತುಲಾ: ಅಲ್ಪ ಕಾರ್ಯ ಸಿದ್ಧಿ, ಸ್ಥಾನ ಬದಲಾವಣೆ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಸ್ತ್ರೀಯರಿಗೆ ಲಾಭ, ಅನಗತ್ಯ ಆತ್ಮೀಯರಲ್ಲಿ ನಿಷ್ಟೂರ, ಶತ್ರು ಬಾಧೆ, ವೃಥಾ ಅಲೆದಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ವೃಶ್ಚಿಕ: ನಿರೀಕ್ಷಿತ ಆದಾಯ, ಹೊಸ ವ್ಯಕ್ತಿಗಳ ಪರಿಚಯ, ಅವಕಾಶವನ್ನು ಉಪಯೋಗಿಸಿಕೊಳ್ಳುವಿರಿ, ಚಂಚಲ ಮನಸ್ಸು, ವೃಥಾ ಅಲೆದಾಟ, ಕೋರ್ಟ್ ಕೇಸ್‍ಗಳಲ್ಲಿ ಮನಃಸ್ತಾಪ.

    ಧನಸ್ಸು: ನಾನಾ ರೀತಿ ಸಂಪಾದನೆ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ಮಾತಿನಲಿ ಹಿಡಿತವಿರಲಿ, ವಿಪರೀತ ದುಶ್ಚಟ, ಪ್ರೀತಿ ಪಾತ್ರರ ಆಗಮನ, ತೀರ್ಥಯಾತ್ರೆ ದರ್ಶನ.

    ಮಕರ: ಅನಗತ್ಯ ವಿಚಾರಗಳಲ್ಲಿ ಆಸಕ್ತಿ, ದಿನ ಬಳಕೆ ವಸ್ತುಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ಗಳಿಕೆ, ಬಂಧುಗಳಿಂದ ಶುಭವಾರ್ತೆ, ವಿವಾಹ ಯೋಗ, ಅಧಿಕಾರಿಗಳಿಂದ ತೊಂದರೆ.

    ಕುಂಭ: ದಂಡ ಕಟ್ಟುವ ಸಾಧ್ಯತೆ, ಅತಿಯಾದ ಭಯ, ದಾಯಾದಿಗಳ ಕಲಹ, ಹೂಡಿಕೆಗಳಿಂದ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ನಗದು ವ್ಯವಹಾರಗಳಲ್ಲಿ ಎಚ್ಚರ.

    ಮೀನ: ಅತಿಯಾದ ಮುಂಗೋಪ, ಶತ್ರುತ್ವ ಹೆಚ್ಚಾಗುವುದು, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಪ್ರಿಯ ಜನರ ಭೇಟಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ದುಷ್ಟ ಬುದ್ಧಿ, ಸ್ಥಿರಾಸ್ತಿ ಮಾರಾಟ, ಶತ್ರು ಬಾಧೆ.

     

  • ಸುಣ್ಣ ಬಿದ್ದು ಕಣ್ಣು ಕಳೆದುಕೊಂಡ ರಾಬಿಯಾಗೆ ಬೇಕಿದೆ ಬೆಳಕು

    ಸುಣ್ಣ ಬಿದ್ದು ಕಣ್ಣು ಕಳೆದುಕೊಂಡ ರಾಬಿಯಾಗೆ ಬೇಕಿದೆ ಬೆಳಕು

    ಬೆಂಗಳೂರು: ಅವರದ್ದು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳೋ ಕಡು ಬಡತನದ ಕುಟುಂಬ. ಪ್ರತಿದಿನ ಕೂಲಿ ಮಾಡಿದ್ರೇನೆ ಮನೆಯ ಓಲೆ ಹಚ್ಚೋದು. ಬಡತನಕ್ಕೆ ಮನೆ ತುಂಬಾ ಮಕ್ಕಳು ಅನ್ನೋ ಹಾಗೆ ಮೂರು ಜನ ಮಕ್ಕಳು ಕೂಡ. ಅದಕ್ಕಾಗಿ ಕೂಲಿ ಕೆಲಸ ಅರಸುತ್ತಾ ಕುಟುಂಬ ದೂರದ ಊರಿನಿಂದ ಬಂದು ಬೆಂಗಳೂರು ಸೇರಿತ್ತು. ಹಾಗೋ ಹೀಗೋ ಜೀವನದ ಬಂಡಿ ಸಾಗುತ್ತಿತ್ತು. ಎರಡು ವರ್ಷದ ಹಿಂದೆ ಕುಟುಂಬದ ಮೇಲೆ ಯಾವ ಕೆಟ್ಟ ದೃಷ್ಟಿ ಬಿತ್ತೊ ಏನೋ, ಮಗಳು ಆಟವಾಡುವಾಗ ಆಕಸ್ಮಿಕವಾಗಿ ಒಂದು ಕಣ್ಣು ಕಳೆದುಕೊಂಡಳು.

    ಗಂಡ, ಹೆಂಡತಿ, ತಾಯಿ ಅಂತಾ ಇರೋ ಹುಸೇನ್ ಬಾಷ ಕುಟುಂಬದ ದುರಂತ ಕಥೆ ಇದು. ರಾಯಚೂರಿನ ಮಾನ್ವಿಯಿಂದ ಬದುಕ ನೊಗ ದೂಡಲು ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ. ಸದ್ಯ ಬಾಷಾ ಕುಟುಂಬ ತಾವರೆಕೆರೆ ಬಳಿ ಇರುವ ಬಿಕೆ ನಗರದಲ್ಲಿದೆ. 6 ವರ್ಷದ ರಾಬಿಯಾ, 4 ವರ್ಷದ ಮಗ ಹಾಗೂ 1 ವರ್ಷದ ಅನ್ಸರ್ ಇವರ ಮಕ್ಕಳು. ಮೊದಲ ಮಗಳು ರಾಬಿಯಾ 2ವರ್ಷದ ಹಿಂದೆ ಆಟವಾಡುವಾಗ ಎಡಗಣ್ಣಿಗೆ ಸುಣ್ಣ ಬಿದ್ದು ಕಣ್ಣಿನ ನೋವಿಗೆ ಒಳಾಗಾದಳು. ಬೆಂಗಳೂರಿನ ಸಾಕಷ್ಟು ನೇತ್ರಾಲಯಕ್ಕೆ ತೋರಿಸಿದ್ದ ಹುಸೇನ್ ಕೊನೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ರು. ಈ ವೇಳೆ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ನಾಶವಾಗಿದೆ ಅಂತಾ ಹೇಳಿ ವೈದ್ಯರು ಕಣ್ಣನ್ನ ತೆಗೆದಿದ್ದಾರೆ.

    ಹುಸೇನ್ ಬಾಷ ತನ್ನ ಊರಿನಲ್ಲಿದ್ದ ಮನೆ-ಮಠ ಮಾರಿ, ಸುತ್ತಮುತ್ತಲಿನ ಸ್ನೇಹಿತರಿಂದ ಎರಡ್ಮೂರು ಲಕ್ಷ ಸಾಲ ಮಾಡಿ ಸುಮಾರು 6 ಲಕ್ಷ ರೂಪಾಯಿ ಒಟ್ಟು ಸೇರಿಸಿ ಮಗಳ ಕಣ್ಣಿನ ಚಿಕಿತ್ಸೆಗೆ ವ್ಯಯ ಮಾಡಿದ್ದಾರೆ. ಈಗ ಬಲಗಣ್ಣಿನ ದೃಷ್ಟಿ ಸರಿಯಾಗಿ ಕಾಣಬೇಕಾದ್ರೆ ಎಡಗಣ್ಣಿನ ಜಾಗಕ್ಕೆ ಡಮ್ಮಿ ಕಣ್ಣನ್ನ ಆಳವಡಿಸಬೇಕು ಅಂತ ವೈದ್ಯರು ಹೇಳಿದ್ದಾರೆ. ಇದರ ನಡುವೆ ಮಗನಿಗೆ ನಾಲ್ಕು ವರ್ಷವಾದ್ರು ನಡೆಯಲು ಆಗುತ್ತಿಲ್ಲ. ಹುಸೇನ್ ಒಬ್ಬ ದುಡಿದು ಇಡೀ ಮನೆಯನ್ನ ನೋಡಿಕೊಳ್ಳಬೇಕು. ಜೊತೆಗೆ ಇಬ್ಬರು ಮಕ್ಕಳ ಚಿಕಿತ್ಸೆಯ ಖರ್ಚು ಬೇರೆ. ರಾಬಿಯಾಳ ಒಂದು ಕಣ್ಣನ್ನ ಉಳಿಸಿಕೊಳ್ಳುವ ಸಲುವಾಗಿ ಹುಸೇನ್ ಬಾಷ ಕುಸಿದು ಹೋಗಿದ್ದಾರೆ.

    ಇದೀಗ ಹುಸೇನ್ ತನ್ನ ಮಗಳಾದ ರಾಬಿಯಾಳ ಕಣ್ಣಿನ ಚಿಕಿತ್ಸೆಗೆ ನೆರವು ನೀಡಿ ಅಂತ ನಿಮ್ಮ ಪಬ್ಬಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದರು. ಇದೀಗ ರಾಬಿಯಾಳ ಬದುಕಿಗೆ ಬೆಳಕಾಗಲು ಪಬ್ಲಿಕ್ ಟಿವಿ ಮುಂದಾಗಿದೆ. ನೀವು ಸಹ ಹುಸೇನ್ ಬಾಷನ ಕುಟುಂಬಕ್ಕೆ ಸಹಾಯ ಮಾಡಿ ಆ ಮುದ್ದು ಮಕ್ಕಳ ನಗುವಿಗೆ ಕಾರಣರಾಗಿ.

     

  • ಎಚ್‍ಡಿಕೆಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ- ಆಯನೂರು ಮಂಜುನಾಥ್

    ಎಚ್‍ಡಿಕೆಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ- ಆಯನೂರು ಮಂಜುನಾಥ್

    ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ. ಕಾರಣ ಅವರ ಪಕ್ಷಕ್ಕೆ ಅವರೇ ಹೈಕಮಾಂಡ್ ಅಂತಾ ರಾಜ್ಯಸಭೆ ಮಾಜಿ ಸದಸ್ಯ ಆಯನೂರ್ ಮಂಜುನಾಥ್ ಹೇಳಿದ್ದಾರೆ.

    ಪಕ್ಷದ ಮಿಡಲ್ ಕಮಾಂಡ್ ಹಾಗೂ ಲೋ ಕಮಾಂಡ್ ಎಲ್ಲಾ ಎಚ್‍ಡಿಕೆ ನೇ ಆಗಿದ್ದಾರೆ. ಅವರ ತಂದೆ ಹೆಚ್‍ಡಿ ದೇವೇಗೌಡ ಅವರೇ ಖಜಾಂಚಿಯೂ ಆಗಿದ್ದಾರೆ. ಕುಮಾರಸ್ವಾಮಿ ಒಬ್ಬ ಬ್ಲಾಕ್ ಮೇಲ್ ರಾಜಕಾರಣಿ ಅಂತಾ ಹೇಳಿದ್ರು.

    ಡೈರಿ ಹೊರಬಂದಾಕ್ಷಣ ಮುಖ್ಯಮಂತ್ರಿ ನಾಪತ್ತೆಯಾಗಿದ್ದಾರೆ ಎಂದು ಹೇಳುವುದಿಲ್ಲ. ಅವರಿಗೆ ನಿದ್ರೆ ಖಾಯಿಲೆ ಇರುವುದರಿಂದ ಎಲ್ಲೋ ಮಲಗಿರಬೇಕು. ಎಚ್ಚರಾದ ಮೇಲೆ ಎದ್ದು ಬರುತ್ತಾರೆ. ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಕಪ್ಪ ಕೊಟ್ಟಿದ್ದು ನಿಜ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಮೂಗಿನ ಕೆಳಗೆ ಅವರಿಗೆ ಗೊತ್ತಿರುವಂತೆಯೇ ಈ ಪ್ರಕರಣ ನಡೆದಿರುವುದರಿಂದ ತನಿಖೆ ಮುಗಿಯುವವರೆಗೂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಅಂತಾ ಆಯನೂರು ಮಂಜುನಾಥ್ ಗುಡುಗಿದ್ರು.

  • ಬಸ್ ಬೆಂಕಿಯಲ್ಲಿ ಸಾವನ್ನಪ್ಪಿದ ಮಮತಾ ಪ್ರಾಣಕ್ಕೆ 5 ಲಕ್ಷ ಪರಿಹಾರ ಸಾಕಾ ಎಂದು ಪ್ರಶ್ನಿಸಿದ ಸೋದರ

    ಬಸ್ ಬೆಂಕಿಯಲ್ಲಿ ಸಾವನ್ನಪ್ಪಿದ ಮಮತಾ ಪ್ರಾಣಕ್ಕೆ 5 ಲಕ್ಷ ಪರಿಹಾರ ಸಾಕಾ ಎಂದು ಪ್ರಶ್ನಿಸಿದ ಸೋದರ

    ಬೆಂಗಳೂರು: ಇತ್ತೀಚೆಗೆ ಚಲಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮಮತಾ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಇದೀಗ ಸಾರಿಗೆ ಸಂಸ್ಥೆ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ. ಆದ್ರೆ ಆಕೆಯ ಪ್ರಾಣಕ್ಕೆ 5 ಲಕ್ಷ ರೂ. ಪರಿಹಾರ ಸಾಕಾ ಎಂದು ಮಮತಾ ಅಣ್ಣ ಕೃಷ್ಣೇಗೌಡ ಪ್ರಶ್ನಿಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿರುವ ಮಮತಾ ಅವರ ಮಗ ಯಶಸ್‍ಗೆ ಒಳ್ಳೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಹಾಗೂ ಆತನ ಹೆಸರಿನಲ್ಲಿ ಬಾಂಡ್ ಮಾಡಿಕೊಡುವುದಾಗಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹಾಗೆಯೇ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಪರಿಹಾರ ಕೊಡಬೇಕು. ಆತನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಇಲಾಖೆ ವಹಿಸಿಕೋಳ್ಳಬೇಕು ಅಂತಾ ಕೃಷ್ಣೇಗೌಡ ಹೇಳಿದ್ದಾರೆ.

    ಮಮತ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮೃತದೇಹವನ್ನು ಹಾಸನದ ಭಾಗೇಶ್ವರದಲ್ಲಿರುವ ಪತಿ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಬಳಿಕ ಅಲ್ಲಿಯೇ ಇಂದು ಅಂತ್ಯಸಂಸ್ಕಾರ ನಡೆಸುತ್ತೇವೆ. ಸಾರಿಗೆ ಸಂಸ್ಥೆ ವತಿಯಿಂದ ಮಮತಾ ದೇಹ ತೆಗೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಿಲಾಗಿದೆ ಎಂದು ಕೇಷ್ಣೇಗೌಡ ತಿಳಿಸಿದ್ರು.

    ಫೆ.20ರಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಮಧ್ಯರಾತ್ರಿ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಸಜೀವವಾಗಿ ದಹನವಾಗಿದ್ದರು. ಅವಘಡದಲ್ಲಿ 10 ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿತ್ತು. ಇದರಲ್ಲಿ ಮಮತಾ ಎಂಬವರು ತೀವ್ರವಾಗಿ ಗಾಯಗೊಂಡು 6 ತಿಂಗಳಿನಿಂದ ದೂರವಾಗಿದ್ದ ಪತಿಯನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು. ಶುಕ್ರವಾರದಂದು ಪತಿ ಸುರೇಶ್ ಮಮತಾ ಅವರನ್ನು ನೋಡಲು ಬಂದಿದ್ದರು. ಪತಿಯನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಮಮತಾ ಕೊನೆಯುಸಿರೆಳೆದರು.

  • ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಬೆಂಗಳೂರು: ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಮ್ಯೂಸಿಯಂ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ದುರ್ದೈವಿ ಬೈಕ್ ಸವಾರನನ್ನು ಪ್ರಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಿಂಬದಿ ಸವಾರ ರಿಕ್ಕಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಪ್ರಿಲ್ ಮತ್ತು ಗಾಯಾಳು ರಿಕ್ಕಿ ಇಬ್ಬರೂ ಮೂಲತಃ ತ್ರಿಪುರಾದವರಾಗಿದ್ದು, ಬೆಂಗಳೂರಿನ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.

    ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಇವರು ಇಂದು ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮ್ಯೂಸಿಯಂ ರಸ್ತೆಯಲ್ಲಿ ಬೈಕ್ ಕಂಟ್ರೋಲ್‍ಗೆ ಸಿಗದೆ ಎಲೆಕ್ಟ್ರಿಕ್ ಪೋಲ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

    ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯದ ಈ ಹಳ್ಳಿಯ ಜನ ಶಿವರಾತ್ರಿಯಂದು ನೀರಿಗಾಗಿ ಜಾಗರಣೆ ಮಾಡಿದ್ರು!

    ಮಂಡ್ಯದ ಈ ಹಳ್ಳಿಯ ಜನ ಶಿವರಾತ್ರಿಯಂದು ನೀರಿಗಾಗಿ ಜಾಗರಣೆ ಮಾಡಿದ್ರು!

    ಮಂಡ್ಯ: ಶಿವರಾತ್ರಿ ಹಬ್ಬದಂದು ರಾತ್ರಿ ಎಲ್ಲರೂ ಶಿವನ ದೇವಾಲಯದ ಮುಂದೆ ಜಾಗರಣೆ ಮಾಡೋದನ್ನ ನೀವು ಕೇಳಿರ್ತೀರಿ. ಆದ್ರೆ ಮಂಡ್ಯದ ಹಳ್ಳಿಯೊಂದರ ಜನ ಮಾತ್ರ ಬೋರ್‍ವೆಲ್ ಲಾರಿ ಮುಂದೆ ಕುಳಿತು ಜಾಗರಣೆ ಮಾಡಿದ್ದಾರೆ.

    ಹೌದು. ಮಂಡ್ಯ ತಾಲೂಕಿನ ಗುಡಿಗೇನಹಳ್ಳಿ ಗ್ರಾಮಸ್ಥರಿಗೆ ಕುಡಿಯೋಕೆ ನೀರಿಲ್ಲ. ಹೀಗಾಗಿ ಹೊಸ ಬೋರ್ ಕೊರೆಯೋವರೆಗೂ ನಾವು ಜಾಗರಣೆ ಮಾಡ್ತೀವಿ ಅಂತಾ ಗ್ರಾಮಸ್ಥರು ಮಕ್ಕಳ ಸಮೇತ ಪ್ರತಿಭಟನೆ ಮಾಡಿದ್ರು.

    ನೀರಿಲ್ಲದ ಕೊಳವೆ ಬಾವಿಯನ್ನ ಈ ಹಿಂದೆ ಎಷ್ಟು ಅಡಿ ಆಳ ಇತ್ತೋ ಅಷ್ಟೇ ಅಡಿ ಆಳಕ್ಕೆ ಮತ್ತೆ ಕೊರೆಸಿದ್ರೆ ಪ್ರಯೋಜನವಾದ್ರೂ ಏನು. ರೀ ಬೋರ್ ಅನ್ನೋದು ಅಧಿಕಾರಿಗಳ ಹಣ ದೋಚುವ ತಂತ್ರ ಇದಾಗಿದೆ. ನೀರಿಲ್ಲದ ಕಡೆ ಬೋರ್‍ವೆಲ್ ಕೊರೆದು ಅಧಿಕಾರಿಗಳು ಹಣ ದೋಚುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ರು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಮ್ಮ ಬದುಕೇ ಹಾಳಾಗಿದೆ ಅಂತಾ ಸಿಟ್ಟು ಹೊರಹಾಕಿದ್ರು.

    ಒಟ್ಟಿನಲ್ಲಿ ಈ ಗ್ರಾಮದಲ್ಲಿ ನೀರಿಲ್ಲದೇ 15 ದಿನಗಳೇ ಕಳೆದಿವೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೆಲ್ಲ ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವಾಗ ಅರ್ಥ ಆಗುತ್ತೋ ತಿಳಿಯದು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಂಬಂಧಿಕರ ಮೇಲೆಯೇ ಗುಂಡು ಹಾರಿಸಿದ ನಿವೃತ್ತ ಡಿವೈಎಸ್‍ಪಿ ಪುತ್ರರು!

    ಸಂಬಂಧಿಕರ ಮೇಲೆಯೇ ಗುಂಡು ಹಾರಿಸಿದ ನಿವೃತ್ತ ಡಿವೈಎಸ್‍ಪಿ ಪುತ್ರರು!

    ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಡಿವೈಎಸ್‍ಪಿ ಪಿ.ಎಸ್ ಪಾಟೀಲ್ ಪುತ್ರ ಸೇರಿದಂತೆ 6 ಜನರ ತಂಡ ತಮ್ಮ ಸಂಬಂಧಿಕರ ಮೇಲೆ 2 ಸುತ್ತು ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಕುಂದಗೋಳ ತಾಲೂಕಿನ ಹಿರೆಹರಕುಣಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಡಿವೈಎಸ್ಪಿ ಪುತ್ರರಾದ ಶರತ್ ಹಾಗೂ ಕಿಶೋರ್ ಎಂಬವರಿಂದ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗೋವಿಂದಗೌಡ ಪಾಟೀಲ್ ಮತ್ತು ವೆಂಕನಗೌಡ ಪಾಟೀಲ್ ಎಂಬವರು ಹಲ್ಲೆಗೊಳಗಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹಲ್ಲೆಗೊಳಗಾದವರು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

    ಅಣ್ಣ-ತಮ್ಮಂದಿರ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗುತ್ತಿತ್ತು. ಈ ವೇಳೆ ನಾವು ಅದನ್ನ ಮಾತಿನ ಮೂಲಕ ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ವಿ. ಆದ್ರೆ ನಿವೃತ್ತ ಡಿವೈಎಸ್‍ಪಿ ಪುತ್ರರು ರೌಡಿಗಳನ್ನು ಕರೆದುಕೊಂಡು ಬಂದು ಹೊಡೆಸಿದ್ರು. ನಿವೃತ್ತ ಡಿವೈಸೆಪಿ ಪುತ್ರ ಕಿಶೋರ್ ಪಿಸ್ತೂಲ್ ಹಿಡ್ಕೊಂಡಿದ್ದ. ಇನ್ನೊಬ್ಬ ಶರತ್ ಬಂದೂಕು ಹಿಡಿದುಕೊಂಡು ನನ್ನ ಬಾಯಿಗೆ ಹೊಡೆದ ಅಂತಾ ಹಲ್ಲೆಗೊಳಗಾದ ವೆಂಕನಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಕಮಿಷನರ್ ಭೇಟಿಗೆ ಆಂಬುಲೆನ್ಸ್ ಬಳಕೆ ಮಾಡಿದ ಬಿಬಿಎಂಪಿ ಅಧಿಕಾರಿಗಳು!

    ಕಮಿಷನರ್ ಭೇಟಿಗೆ ಆಂಬುಲೆನ್ಸ್ ಬಳಕೆ ಮಾಡಿದ ಬಿಬಿಎಂಪಿ ಅಧಿಕಾರಿಗಳು!

    ಬೆಂಗಳೂರು: ರಸ್ತೆಯಲ್ಲಿ ಆಂಬುಲೆನ್ಸ್ ಬಂದ್ರೆ ದಾರಿ ಬಿಟ್ಟು ಜೀವ ಉಳಿಸಿ ಅನ್ನೋ ಜಾಹಿರಾತುಗಳನ್ನ ಹಲವು ಕಡೆ ನೋಡಿರ್ತೀವಿ. ಜೊತೆಗೆ ನಮಗೆ ಎಷ್ಟೇ ಅರ್ಜೆಂಟ್ ಇದ್ರೂ ಆಂಬುಲೆನ್ಸ್ ಸದ್ದು ಕೇಳಿದ ತಕ್ಷಣ ದಾರಿ ಬಿಟ್ಟು ಕೊಡ್ತೀವಿ. ಆದ್ರೆ ಅದ್ರಲ್ಲಿ ನಿಜವಾಗ್ಲೂ ಪೇಷೆಂಟ್‍ಗಳೇ ಹೊಗ್ತಿರ್ತಾರಾ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ.

    ಇದೀಗ ಆಂಬುಲೆನ್ಸ್ ನಲ್ಲಿ ಬಿಬಿಎಂಪಿ ಅಧಿಕಾರಿಗಳು ಓಡಾಡುತ್ತಾರೆ. ಅದರಲ್ಲೂ ಕಮಿಷಿನರ್ ಮೀಟ್ ಮಾಡೋಕೆ ಆಂಬುಲೆನ್ಸ್ ಬಳಕೆ ಮಾಡ್ತಿದ್ದಾರೆ ಅಂದ್ರೆ ನಂಬಲೇಬೇಕು. ಹೌದು. ಬಿಬಿಎಂಪಿ ದಾಸಪ್ಪ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ನಲ್ಲಿ ತುರ್ತು ಪರಿಸ್ಥಿತಿಯ ವೇಳೆ ರೋಗಿಗಳ ಸಹಾಯಕ್ಕೆ ಮೀಸಲಿರೋ ಆಂಬುಲೆನ್ಸ್ ನನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ತಿದ್ದಾರೆ.

    ಫೆ. 21ರಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿಗಾಗಿ ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡ್ತಿರೋ ಮ್ಯಾನೇಜರ್ ಶೋಭಾ ಲಕ್ಷ್ಮಿ ಹಾಗೂ ಕ್ಲರ್ಕ್ ಭಾಗ್ಯಮ್ಮ ದಾಸಪ್ಪ ಆಸ್ಪತ್ರೆಯಿಂದ ಮಲ್ಲೇಶ್ವರಂ ಐಪಿಪಿ ಸೆಂಟರ್‍ಗೆ ಬರೋದಕ್ಕೆ ಬಿಬಿಎಂಪಿ ಆಂಬುಲೆನ್ಸ್ ಬಳಸಿದ್ದಾರೆ. ಇನ್ನು ಈ ಬಗ್ಗೆ ಯಾಕ್ರೀ ಮೇಡಂ ಆಂಬುಲೆನ್ಸ್ ನ ಹೀಗೆ ಮಿಸ್ ಯೂಸ್ ಮಾಡಿದ್ದು ತಪ್ಪಲ್ವಾ ಅಂತಾ ಮ್ಯಾನೇಜರ್ ಶೋಭಾ ಲಕ್ಷ್ಮಿ ಅವರನ್ನು ಕೇಳಿದ್ರೆ, ಕಮಿಷಿನರ್ ಸಹಿಗಾಗಿ ಐಪಿಪಿಗೆ ಹೋಗ್ಬೇಕಿತ್ತು ಹಾಗಾಗಿ ಬಳಕೆ ಮಾಡಿದ್ದು, ಮೇಲಾಧಿಕಾರಿ ಕಲಾವತಿ ಹೇಳಿದ್ರು ಅಂತಾರೆ.

    ಈ ಬಗ್ಗೆ ಆಂಬುಲೆನ್ಸ್ ನಲ್ಲಿ ಹೋಗಿ ಸೈನ್ ಮಾಡಿಸಿಕೊಂಡು ಬರೋಕೆ ಹೇಳಿದ ಆರೋಗ್ಯಾಧಿಕಾರಿ ಕಲಾವತಿ ಅವರನ್ನ ಮಾತಾಡಿಸಿದ್ರೆ, `ಸೈನ್ ಮಾಡಿಸ್ಕೋಬೇಕು ಅಂದ್ರು. ಆದ್ರೆ ನಾನು ಆಂಬುಲೆನ್ಸ್ ನಲ್ಲಿ ಬನ್ನಿ ಅಂದಿಲ್ಲ. ಹೀಗಾಗಿ ಅವರು ಆಂಬುಲೆನ್ಸ್ ನಲ್ಲಿ ಬಂದಿರೋದು ನನಗೆ ಗೊತ್ತಿಲ್ಲ. ಒಂದು ವೇಳೆ ಅವರು ಆಂಬುಲೆನ್ಸ್ ನಲ್ಲಿ ಬಂದಿದ್ದೇ ಆದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಂತಾ ಹಾರಿಕೆಯ ಉತ್ತರ ನೀಡಿದ್ದಾರೆ.

    ಒಟ್ಟಿನಲ್ಲಿ ಎಲ್ಲಾ ತಿಳಿದವರೇ ಈ ರೀತಿ ತುರ್ತು ಸಂದರ್ಭಕ್ಕೆ ಬಳಕೆಯಾಗಬೇಕಿದ್ದ ಆಂಬುಲೆನ್ಸ್ ನ ಇವ್ರ ವೈಯಕ್ತಿಕ ಕೆಲಸಕ್ಕೆ ಬಳಸಿದ ಇವ್ರಿಗೆ ಏನನ್ನಬೇಕೋ ಗೊತ್ತಿಲ್ಲ. ಇನ್ನು ಇವರ ವಿರುದ್ಧ ಕಮಿಷನರ್ ಮಂಜುನಾಥ್ ಪ್ರಸಾದ್ ಅವ್ರೇ ಕ್ರಮ ತೆಗೆದುಕೊಳ್ತಾರಾ ಎಂಬುವುದನ್ನ ಕಾದು ನೋಡಬೇಕು.

  • ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

    ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

    – ಆತಂಕದ ನಡುವೆ ಸೌಹಾರ್ದ ಜಾಥಾಕ್ಕೆ ಕ್ಷಣಗಣನೆ

    ಮಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿದೆ. ಸಂಘ ಪರಿವಾರ ಪಿಣರಾಯಿ ಬರದಂತೆ ತಡೆಯಲು ಹರತಾಳಕ್ಕೆ ಕರೆ ನೀಡಿದ್ದರೆ, ರಾಜ್ಯ ಸರ್ಕಾರ ಕೇರಳ ಸಿಎಂ ಕಾರ್ಯಕ್ರಮಕ್ಕೆ ಸರ್ವ ರೀತಿಯ ಭದ್ರತೆ ನೀಡಲು ಸಜ್ಜಾಗಿದೆ.

    ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, 5ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಕಂಡುಬಂದರೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದೆಂದು ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ 3 ಸಾವಿರಕ್ಕಿಂತಲೂ ಹೆಚ್ಚು ಕೆಎಸ್‍ಆರ್‍ಪಿ ಪೊಲೀಸರನ್ನು ಮಂಗಳೂರು ನಗರದ ಆಯಕಟ್ಟಿನ ಭಾಗದಲ್ಲಿ ನಿಯೋಜಿಸಲಾಗಿದೆ. ಮಾತ್ರವಲ್ಲದೇ 600 ಸಿಸಿ ಕ್ಯಾಮೆರಾಗಳು ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಡಲಾಗಿದೆ. ಆದರೂ, ಸಂಘಪರಿವಾರ ಕರೆ ನೀಡಿರುವ ಬಂದ್ ರಾತ್ರಿಯಿಂದಲೇ ಶುರುವಾಗಿದೆ.

    ಮಂಗಳೂರಿನ ಕೋಟೆಕಾರು ಬಳಿ ಮಂಗಳೂರು -ಕಾಸರಗೋಡು ಕೆಎಸ್‍ಆರ್‍ಟಿಸಿ ಬಸ್ ಹಾಗು ಕೇರಳದ ಕಾಸರಗೋಡು ಜಿಲ್ಲೆಯ ಕುಂಜತ್ತೂರು ಬಳಿ ಕೇರಳ ಸಾರಿಗೆ ಬಸ್‍ಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿ ಬಸ್ ಮುಂಭಾಗದ ಗಾಜನ್ನು ಪುಡಿ ಮಾಡಿದ್ದಾರೆ. ಜೊತೆಗೆ ಅಲ್ಲಲ್ಲಿ ಕಲ್ಲುಗಳನ್ನಿಟ್ಟು ರಸ್ತೆ ಸಂಚಾರಕ್ಕೆ ರಾತ್ರಿಯೇ ಅಡ್ಡಿ ಉಂಟು ಮಾಡಿದ್ದಾರೆ.

    ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾರಂಭಿಸಲಿವೆ. ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಬದಲಾವಣೆಯಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಪಪಡಿಸಿದೆ. ಇಂದು ಬೆಳಗ್ಗೆ ಖಾಸಗಿ ಬಸ್ ಬಿಟ್ರೆ ಕೆಎಸ್ ಆರ್ ಟಿಸಿ ಬಸ್‍ಗಳು ಎಂದಿನಂತೆ ಓಡಾಟ ನಡೆಸುತ್ತಿವೆ.

  • ಸರಣಿ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರ ದುರ್ಮರಣ

    ಸರಣಿ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರ ದುರ್ಮರಣ

    ಹಾವೇರಿ: ಬೊಲೆರೋ, ಮಾರುತಿ ಸ್ವಿಫ್ಟ್ ಮತ್ತು ಟ್ರ್ಯಾಕ್ಟರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಗಾಯಗೊಂಡ ಘಟನೆ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ವ್ಯಕ್ತಿಗಳನ್ನ ಈರಪ್ಪ ಹಿರೇಗೌಡರ (45) ಮತ್ತು ನಾಗಪ್ಪ ಬಣಕಾರ (48) ಎಂದು ಗುರುತಿಸಲಾಗಿದೆ. ಮೃತರಿಬ್ಬರು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕರೂರು ಗ್ರಾಮದವರು ಎನ್ನಲಾಗಿದೆ.

    ಟ್ರ್ಯಾಕ್ಟರ್ ಕರೂರು ಗ್ರಾಮದಿಂದ ಮೋಟೆಬೆನ್ನೂರು ಗ್ರಾಮದ ಕಡೆ ಹೊರಟಿತ್ತು. ಈ ವೇಳೆ ಹಿಂದಿನಿಂದ ಬಂದ ಮಾರುತಿ ಸ್ವಿಫ್ಟ್, ಬೊಲೆರೋ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇನ್ನು ಘಟನೆಯಿಂದ ಗಾಯಗೊಂಡವರನ್ನು ಬ್ಯಾಡಗಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅದೇ ಮಾರ್ಗದಿಂದ ಬರುತ್ತಿದ್ದು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಸ್ಥಳಕ್ಕೆ ಬ್ಯಾಡಗಿ  ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.