ಯಾದಗಿರಿ: ಕುಡುಕರ ಹಾವಳಿಯಿಂದಾಗಿ ಯಾದಗಿರಿ (Yadagiri) ನಗರದ ಉದ್ಯಾನವನಗಳು ಅದ್ವಾನಗೊಂಡಿವೆ. ನಗರದ ಹೊಸಳ್ಳಿ ಕ್ರಾಸ್‍ನ ನಜರತ್ ಕಾಲೋನಿಯ ಉದ್ಯಾನವನ ಮದ್ಯಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ.
ರಾತ್ರಿ ವೇಳೆ ಕುಡುಕರು ಮದ್ಯ ಕುಡಿದು ಬಾಟ್ಲಿ ಹಾಗೂ ಪ್ಲಾಸ್ಟಿಕ್ ಗಳನ್ನು ಗಾರ್ಡನ್ ಏರಿಯಾದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಈ ಪಾರ್ಕ್ ಕುಡುಕರ ಅಡ್ಡೆಯಾಗುತ್ತಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಉದ್ಯಾನವನ ಗಾರ್ಡನ್ ಬಳಿ ಕುಳಿತು ಮದ್ಯೆ ಸೇವಿಸಿ ಎಲ್ಲೆಂದರಲ್ಲಿ ಬಾಟ್ಲಿಗಳನ್ನ ಬಿಸಾಕಿ ಹೋಗುತ್ತಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಗಾರ್ಡನ್ (Guarden) ಇದ್ರೂ, ಕುಡುಕರ ಹಾವಳಿಗೆ ಬೇಸತ್ತು, ಸಾರ್ವಜನಿಕರು ವ್ಯಾಯಾಮ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದೇ ಗಾರ್ಡನ್ ನಲ್ಲಿ ಕುಳಿತು ಊಟ ಮಾಡಲು ಬರುತ್ತಾರೆ. ಇದು ಮಕ್ಕಳಿಗೂ ಭಾರೀ ಮುಜುಗರವನ್ನುಂಟು ಮಾಡ್ತಿದೆ. ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಹೀಗಾಗಿ ಸಾರ್ವಜನಿಕರು ರೋಸಿ ಹೋಗಿದ್ದು, ಈ ಕಡೆ ಮುಖವನ್ನೂ ಮಾಡ್ತಿಲ್ಲ. ಇದನ್ನೂ ಓದಿ: ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ
ನೆಲಮಂಗಲ: ಗ್ರಾಮ ಪಂಚಾಯತಿ ಅಧಿಕಾರಿಗಳಿಂದ, ಕಂದಾಯ ವಸೂಲಾತಿಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಅಧಿಕಾರಿಗಳು ಗ್ರಾಮಸಭೆ ಅಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ, ಕಂದಾಯ ವಸೂಲಾತಿಯಲ್ಲಿ ಆಗುತ್ತಿರುವ ತಾರತಮ್ಯದ ಕುರಿತು ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತರಿಗೆ ಸರ್ಕಾರದಲ್ಲಿ ಮಣೆ – ರೇಣುಕಾಚಾರ್ಯ, ಜೀವರಾಜ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮರು ನೇಮಕ
ಕಳೆದ 5 ವರ್ಷದಿಂದ ಕಾರ್ಖಾನೆಗಳ ಕಂದಾಯ ಬಾಕಿ ಇದೆ. ಬಡವರ ಕಂದಾಯ ಬಾಕಿಯಿದ್ದರೆ ಕಟ್ಟುವಂತೆ ಒತ್ತಾಯ ಮಾಡುತ್ತಿರಿ ಬಲಾಢ್ಯರಿಂದ ಕಂದಾಯ ವಸೂಲಿ ಮಾತ್ರ ಯಾಕೆ ಮಾಡಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ವೇಳೆ ಅಧಿಕಾರಿಯಿಂದ ಮೈಕ್ ಕಿತ್ತು ಆಕ್ರೋಶ ಹೊರಹಾಕಿದ್ದಾರೆ. 50 ಸಾವಿರ ಕಂದಾಯ ಕಟ್ಟುವ ಕಂಪನಿಯಿಂದ ಕಂದಾಯ ವಸೂಲಿ ಮಾಡಿಲ್ಲ. ಬಡವರ ಮನೆ ಮುಂದೆ ಬಂದು ಹಣ ಕಟ್ಟುವಂತೆ ಹಿಂಸೆ ಕೊಡುತ್ತಿರಿ ಎಂದು ಪಿಡಿಓ ಅಧಿಕಾರಿ ಪ್ರಶಾಂತ್‍ಗೆ ಗ್ರಾಮಸ್ಥರು ಚಳಿ ಬಿಡಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ- ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದ ತಂದೆ
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಪಂಚಾಯತಿಯಿಂದ ಸಮರ್ಪಕವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿಲ್ಲ. ನಾನಾ ಸಮಸ್ಯೆಗಳನ್ನ ಜನರು ಎದುರಿಸುತಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಜನರು ಸಭೆಯಲ್ಲಿ ಆಗ್ರಹಿಸಿದ್ದಾರೆ.
ಗದಗ: ಕಳೆದ 3 ದಿನಗಳಿಂದ ಸುರಿದ ಮಳೆಗೆ ರಸ್ತೆಗಳು ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ಹಾಗೂ ಪಾದಾಚಾರಿಗಳು ಈ ಭಾಗದಲ್ಲಿ ಓಡಾಡುವುದು ದುಸ್ತರವಾಗಿದೆ. ಬಿದ್ದಿರುವ ಗುಂಡಿಗೆ ಮಣ್ಣು ಹಾಕಿ ಸಮನಾಗಿ ಮಾಡಿದರೂ ಸಂಚಾರ ಸುಗಮವಾಗುತ್ತದೆ. ಇದನ್ನು ಮಾಡಲು ನಗರಸಭೆ ಮನಸ್ಸು ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಬೆಟಗೇರಿ ಭಾಗದಲ್ಲಿರುವ 6, 9, 10, 13ನೇ ವಾರ್ಡ್‍ಗಳಲ್ಲಿನ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ನೀರು ತುಂಬಿಕೊಂಡಿವೆ. ಸಂಚರಿಸಲು ಕಷ್ಟವಾಗಿದೆ. ಮನೆಯಿಂದ ಮಕ್ಕಳು ಹಿರಿಯರು ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಈ ಭಾಗದ ರಸ್ತೆಗಳು ಬಹುತೇಕವಾಗಿ ಮಣ್ಣಿನಿಂದ ಕೂಡಿದ್ದು, ಸ್ವಲ್ಪ ಮಳೆಯಾದರೆ ಸಾಕು ಜನರು ಓಡಾಡಲು ಹರಸಾಹಸ ಪಡಬೇಕಾಗುತ್ತೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ಬೆಟಗೇರಿಯ ಭಗೀರಥ ನಗರ, ಶರಣಬಸವೇಶ್ವರ ನಗರ, ವೀರನಾರಾಯಣ ಬಡಾವಣೆ, ಎಸ್.ಕೃಷ್ಟಾ ಈ ಎಲ್ಲಾ ಬಡಾವಣೆಗಳು ಸುಮಾರು ಎರಡೂ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗು ಸಹ ಮೂಲಭೂತ ಸೌಲಭ್ಯಗಳಿಂದ ಈ ಭಾಗದ ಜನರು ವಂಚಿತರಾಗಿದ್ದಾರೆ. ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿದೆ. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ
ನಾವು ಜಿಲ್ಲಾ ಕೇಂದ್ರದಲ್ಲಿ ವಾಸವಾಗಿದ್ದೇವಾ ಅಥವಾ ಗ್ರಾಮೀಣ ಭಾಗದಲ್ಲಿ ಇದ್ದೇವೆ ಎಂಬ ಅನುಮಾನ ನಮ್ಮಲ್ಲೇ ವ್ಯಕ್ತವಾಗುತ್ತದೆ. ಈ ಬಾರಿ ನಡೆಯುವ ನಗರಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಸಿಸಿ ರಸ್ತೆಗಳು ಮಾಡಬೇಕು. ಸರಿಯಾಗಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವವರಿಗೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳಿಯ ನಿವಾಸಿಗಳು ಹೇಳಿದರು. ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!
ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರು ಸಾಕು, ಹೊಸ ಬಸ್ ಸ್ಟಾಂಡ್ ರಸ್ತೆ, ಭೂಮರಡ್ಡಿ ವೃತ್ತ, ಹಳೇ ಡಿಸಿ ಆಫೀಸ್ ರಸ್ತೆ, ಎಪಿಎಂಸಿ ರೋಡ್ ಮುಂತಾದ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಇದು ಗೊತ್ತಿದ್ದರೂ ಸಹ ಜಿಲ್ಲಾಡಳಿತ ಮತ್ತು ನಗರಸಭೆಯ ಇತ್ತ ಕಡೆಗೆ ಗಮನ ಹರಿಸಿಲ್ಲ. ನಗರಸಭೆ ವ್ಯಾಪ್ತಿಯ ನಗರಗಳಾದ ಪಂಚಾಕ್ಷರಿ ನಗರ, ಬಳ್ಳಾರಿ ಗೇಟ್, ಝೆಂಡಾ ಸರ್ಕಲ್, ಕುರಹಟ್ಟಿ ಪೇಟೆ ರಸ್ತೆ, ಬೆಟಗೇರಿಯ ತರಕಾರಿ ಮಾರುಕಟ್ಟೆ, ಬೆಟಗೇರಿ ಪೆÇಲೀಸ್ ಠಾಣೆ, ಕಂಬಾರ ಗಲ್ಲಿ, ಸಿದ್ಧಲಿಂಗ ನಗರದ ಸರಕಾರ ಪ್ರೌಢ ಶಾಲೆಯ ಆಟದ ಮೈದಾನವೂ ದುಸ್ಥಿತಿಯಿಂದ ಕೂಡಿವೆ. ಇಂತಹ ರಸ್ತೆಯಲ್ಲೇ ಜನರು ನಿತ್ಯ ಸಂಚರಿಸುವುದು ಅನಿವಾರ್ಯವಾಗಿದೆ.
ಚಿಕ್ಕಬಳ್ಳಾಪುರ: ಅಯ್ಯಯ್ಯೋ ಮಾರಕಾಸ್ತ್ರಗಳನ್ನ ತಂದವ್ರೆ…ನಾನು ಬದುಕಲ್ಲ ನೇಣು ಹಾಕೋತಿನಿ ಅಂತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಳಿ ಹೈಡ್ರಾಮಾ ಮಾಡಿದ್ದಾರೆ.
ಎಚ್.ಎಸ್ ಗಾರ್ಡನ್ ಬಳಿ ನಿವೃತ್ತ ಪೊಲೀಸ್ ಅಧಿಕಾರಿ ಆಶ್ವತ್ಥನಾರಾಯಣಪ್ಪ ಎಂಬವರು ತಮ್ಮ ಸ್ವಂತ ಜಮೀನಿನಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಲೆಂದು ಕಂಪನಿಗೆ ಜಾಗ ಕೊಟ್ಟಿದ್ದಾರೆ. ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು ಅಂತ ಸುತ್ತಮುತ್ತಲಿನ ಸ್ಥಳೀಯರು ಕಾಮಗಾರಿ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ
ಸ್ಥಳೀಯರ ಆಕ್ಷೇಪಕ್ಕೆ ಮಣಿಯದ ಅಶ್ವತ್ಥನಾರಾಯಣಪ್ಪ, ಇದು ನನ್ನ ಸ್ವಂತ ಜಮೀನು ನಾನು ಏನ್ ಬೇಕಾದ್ರೂ ಮಾಡ್ಕೋತಿನಿ ಅಂತ ಹೇಳಿದ್ದಾರೆ. ಇದರಿಂದ ಕೆರಳಿರೋ ಸ್ಥಳೀಯರು, ಅಶ್ವತ್ಥನಾರಾಯಣಪ್ಪ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಂತೆ ಕ್ಯಾಮೆರಾ ಮುಂದೆ ಅಯ್ಯಯ್ಯೋ ನನ್ನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡ್ತಾವ್ರೆ ಅಂತ ಹೈಡ್ರಾಮಾ ಶುರು ಮಾಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳ ತೆರವು ವಿರೋಧ: ಸರ್ಕಾರದ ವಿರುದ್ಧ ಭಜರಂಗದಳ ಆಕ್ರೋಶ
ಸ್ಥಳೀಯರು ನಗರಸಭೆ ಅನುಮತಿ ಪಡೆಯದೆ ಮೊಬೈಲ್ ಟವರ್ ನಿರ್ಮಾಣ ಮಾಡ್ತಿದ್ದಾರೆ ಅಂತ ನಗರಸಭೆಗೆ ದೂರು ನೀಡಿದ್ದು, ನಗರಸಭೆ ಪರಿಸರ ಅಭಿಯಂತರರು ಸ್ಥಳಕ್ಕೆ ಬಂದು ನೋಟಿಸ್ ನೀಡಿದ್ದಾರೆ. ಆದರೂ ಅಶ್ವತ್ಥನಾರಾಯಣಪ್ಪ ನೋಟಿಸ್ ಪಡೆದುಕೊಂಡಿಲ್ಲ. ಹೀಗಾಗಿ ಟವರ್ ನಿರ್ಮಾಣ ಮಾಡ್ತಿದ್ದ ಜಾಗದ ಗೇಟ್ ಗೆ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಅನುಮತಿ ಪಡೆಯದೆ ಅಕ್ರಮವಾಗಿ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಬಾರದು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸೋಕೆ ಅಶ್ವತ್ಥನಾರಾಯಣಪ್ಪ ನಿರಾಕರಿಸಿದ್ದಾರೆ.
ಪರಿಸರ ಅಭಿಯಂತರರು ಈ ಬಗ್ಗೆ ಮಾತನಾಡಿ, ನಮಗೆ ಸ್ಥಳೀಯರು ದೂರು ನೀಡಿದ್ರು. ನಾವು ಅಶ್ವತ್ಥನಾರಾಯಣಪ್ಪನವರನ್ನು ಭೇಟಿ ಮಾಡಿ ನೋಟಿಸ್ ನೀಡಲು ಮುಂದಾಗಿದ್ದೇವೆ. ಆದರೆ ಅವರು ನಮಗೆ ನಾನು ನಿವೃತ್ತ ಪೊಲೀಸ್ಅಧಿಕಾರಿ ಅಂತ ಐಡಿ ಕಾರ್ಡ್ ತೋರಿಸಿದ್ರು. ನಿಮ್ಮ ನೋಟಿಸ್ ನನಗೆ ಬೇಡ. ನ್ಯಾಯಾಲಯದಿಂದ ಕೊಡಿಸಿ ಅಂತ ನೋಟಿಸ್ ಪಡೆದುಕೊಂಡಿಲ್ಲ ಎಂದು ಹೇಳಿದರು.
ಬೆಂಗಳೂರು/ಪುಣೆ: ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಅವರು ಇಂದು ತಮ್ಮ ಗುರುವಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
2015 ರಿಂದ ಸುಮಾರು ಮೂರು ವರ್ಷಗಳ ಕಾಲ ಪಟಿಯಾಲಾದಲ್ಲಿ ಜಾವಲಿನ್ ಎಸೆತದ ತರಬೇತಿ ನೀಡಿದ್ದ ಕಾಶಿನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ನೀರಜ್ ಚೋಪ್ರಾ ಅಭಿನಂದನೆ ಸಲ್ಲಿಸಿದ್ದಾರೆ.
ಪುಣೆಯ ಕೋರೆಗಾಂವ್ ನಲ್ಲಿರುವ ಕಾಶಿನಾಥ್ ನಾಯ್ಕ್ ಅವರ ಮನೆಗೆ ನೀರಜ್ ಚೋಪ್ರಾ ಆಗಮಿಸಿದ್ದರು. ಈ ವೇಳೆ ಕಾಶಿನಾಥ್ ನಾಯ್ಕ್ ಅವರ ಪತ್ನಿ ಚೈತ್ರಾ ಅವರು ಆರತಿ ಬೆಳಗಿ ಮನೆಗೆ ಸ್ವಾಗತಿಸಿದರು. ಸುಮಾರು ಒಂದು ಗಂಟೆಗಳ ಕಾಲ ಗುರುಶಿಷ್ಯರು ಒಲಿಂಪಿಕ್ಸ್ ಕ್ರೀಡಾಕೂಟದ ಬಗ್ಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ತರಬೇತಿ ನೀಡಿದ್ದಿದ್ದು ಶಿರಸಿಯ ಯೋಧ..!
ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‍ಸ್ಟಿಟ್ಯೂಟ್‍ನಲ್ಲಿ ತರಬೇತುದಾರರಾಗಿರುವ ಕಾಶಿನಾಥ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. 23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ್ ನಾಯ್ಕ್, 2010ರ ನವದೆಹಲಿಯ ಕಾಮನ್‍ವೆಲ್ತ್ ಗೇಮ್ಸ್ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2015ರಲ್ಲಿ ಕಾಶಿನಾಥ್ ಬಳಿ ತರಬೇತಿಗೆ ಸೇರಿದ್ದ ನೀರಜ್ ಚೋಪ್ರಾ, 2017ರವರೆಗೆ ತರಬೇತಿ ಪಡೆದಿದ್ದರು. ಅಂದೇ 86.48 ಮೀಟರ್ ಜೂನಿಯರ್ ವಿಶ್ವ ದಾಖಲೆ ಮಾಡಿದ್ದ ನೀರಜ್ ಚೋಪ್ರಾ ರವರು ಇತ್ತೀಚಿಗೆ ವಿದೇಶಿ ತರಬೇತುದಾರರ ಬಳಿ ತರಬೇತಿ ಪಡೆಯಲಾರಂಭಿಸಿದ್ದರು.
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರೊಂದು ಪಲ್ಟಿಯಾಗಿದ್ದು, ಇಂಜಿನ್ ಕೆಳಗಡೆ ಸಿಲುಕಿ ಚಾಲಕ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ನಡೆದಿದೆ.
ಹೊಸಕೋಟೆ ಚಿಂತಾಮಣಿ ಹೆದ್ದಾರಿಯ ಸಿದಾರ್ಥ ನಗರ ಬಳಿ ಈ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾಗಿದೆ. ಏಕಾಏಕಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಇಂಜಿನ್ ಕೆಳಗಡೆ ಸಿಲುಕಿ ನರಳಾಡುತ್ತಿದ್ದನು. ಇದನ್ನು ಗಮನಿಸಿದ ಸಾರ್ವಜನಿಕರು ಚಾಲಕನನ್ನು ಹೊರಕ್ಕೆ ತೆಗೆದು ಸಹಾಯ ಮಾಡಿದ್ದಾರೆ.
ಸರಿಯಾದ ಸಮಯಕ್ಕೆ ಚಾಲಕನ ನೆರವಿಗೆ ಬಂದ ಸಾರ್ವಜನಿಕರು ಆತನನ್ನು ರಕ್ಷಣೆ ಮಾಡಿದ್ದಾರೆ. ಆದ್ದರಿಂದ ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಉದ್ಘಾಟನೆಗೆ ಸಿದ್ಧವಾಗಿರೋ ರೈಲ್ವೇ ಮೇಲ್ಸೇತುವೆಯ ತಡೆಗೋಡೆ ಕುಸಿದಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹಂಗರಹಳ್ಳಿಯಲ್ಲಿ ನಡೆದಿದೆ.
ನೂತನ ಫ್ಲೈಓವರ್ ಇದಾಗಿದ್ದು, ಕೆಲ ತಿಂಗಳ ಹಿಂದೆ ರೈಲ್ವೆ ಮೇಲ್ಸೇತುವೆ ತಡೆಗೋಡೆ ಒಂದು ಬಾರಿ ಮೊದಲೇ ಕುಸಿದು ಬಿದ್ದಿತ್ತು. ಆದರೆ ಪಕ್ಕದ ಎಡಭಾಗದಲ್ಲಿ 2 ನೇ ಬಾರಿಗೆ ಕುಸಿದಿದೆ. ಇದರಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ಹೆಚ್ಚಿನ ಆತಂಕ ಪಡುತ್ತಿದ್ದಾರೆ.
ಸೇತುವೆಯ ಗೋಡೆಗಳು ಕುಸಿತವಾಗಿದ್ದು, ಸಾರ್ವಜನಿಕರಿಗೆ ಕಾಣಬಾರದೆಂದು ಟಾರ್ಪಲ್ ಅಳವಡಿಕೆ ಮಾಡಲಾಗಿದೆ. ಉದ್ಘಾಟನೆಗೂ ಮುನ್ನವೇ ಮೇಲ್ಸೇತುವೆ ಕುಸಿತಕೊಂಡಿದ್ದು ಕಳೆಪೆ ಕಾಮಾಗಾರಿಗೆ ಉದಾಹರಣೆಯಾಗಿದೆ. ಇನ್ನು ಗೋಡೆ ಕುಸಿತದ ವೇಳೆಯಲ್ಲಿ ಯಾವುದೇ ವಾಹನಗಳು ಚಲಿಸುತ್ತಿರಲಿಲ್ಲ. ಹಾಗಾಗಿ ಅನಾಹುತವೊಂದು ತಪ್ಪಿದೆ.
ರಾಯಚೂರು: ನಗರದ ನಂದೀಶ್ವರ ದೇವಾಲಯದ ಬಳಿ ಆಕಳ ಕರುವನ್ನು ಕೊಂದು ಹೊತ್ತೊಯ್ಯುತ್ತಿದ್ದ ಯುವಕರನ್ನ ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ನಗರದ ತಿಮ್ಮಾಪುರಪೇಟೆಯ ಸಾಧಿಕ್ ಹಾಗೂ ಖಲಂದರ್ ಆಕಳ ಕರುವನ್ನ ಕದ್ದು ಕೊಂದಿದ್ದಾರೆ. ಸಂಗಮೇಶಸ್ವಾಮಿ ಎಂಬವರ ಆಕಳು ಇತ್ತೀಚಗಷ್ಟೇ ಗಂಡು ಕರುವಿಗೆ ಜನ್ಮ ನೀಡಿತ್ತು. ದೇವಸ್ಥಾನದ ಬಳಿ ಹುಲ್ಲು ಮೇಯುತ್ತಿದ್ದ ಕರುವನ್ನ ಕದ್ದು ಕೊಂದಿದ್ದಾರೆ.
ನಂತರ ಚೀಲದಲ್ಲಿ ಎತ್ತಿಕೊಂಡು ಹೋಗುವಾಗ ಸಾರ್ವಜನಿಕರಿಗೆ ಅನುಮಾನ ಬಂದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕರು ಈ ಕರುವನ್ನು ಮಾಂಸದಂಗಡಿಗೆ ಕರುವನ್ನ ಮಾರಾಟ ಮಾಡಲು ಒಯ್ಯುತ್ತಿದ್ದರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.