Tag: publichero

  • ಜೀವದ ಹಂಗು ತೊರೆದು ಗ್ರಾಮಸ್ಥರ ರಕ್ಷಣೆ – 7 ಲಕ್ಷ ಕ್ಯೂಸೆಕ್ ನೀರಿನಲ್ಲಿ ಈಜುವ ಧೀರ ಲಕ್ಷ್ಮಣ

    ಜೀವದ ಹಂಗು ತೊರೆದು ಗ್ರಾಮಸ್ಥರ ರಕ್ಷಣೆ – 7 ಲಕ್ಷ ಕ್ಯೂಸೆಕ್ ನೀರಿನಲ್ಲಿ ಈಜುವ ಧೀರ ಲಕ್ಷ್ಮಣ

    ಯಾದಗಿರಿ: ಗದಗ್‍ನ ನೀಲರಾಯನಗಡ್ಡೆ ಬಗ್ಗೆ ಪ್ರತಿ ಪ್ರವಾಹದ ವೇಳೆಯೂ ನೀವು ಕೇಳಿಯೇ ಇರುತ್ತೀರಿ. ಕೃಷ್ಣಾ ನದಿ ಆರ್ಭಟಕ್ಕೆ ಅಲ್ಲಿನ ಸಾಗರದಂತಹ ನೀರಿಗೆ ಭೀತಿ ವ್ಯಕ್ತಪಡಿಸಿರುತ್ತೀರಿ. ಆದರೆ ಅಂತಹ ನೀರಿನಲ್ಲೂ ಈಜಿ ತನ್ನ ಗ್ರಾಮದ ಆಪ್ತರಕ್ಷನಾಗಿರುವ ಮೂಲಕ ಲಕ್ಷ್ಮಣ ಅವರು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಯಾದಗಿರಿ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಕೃಷ್ಣಾ ನದಿ ಪ್ರವಾಹಕ್ಕೆ ಸದಾ ತತ್ತರಿಸುವ ನಡುಗಡ್ಡೆ ಗ್ರಾಮ. 400 ನಿವಾಸಿಗಳಿರೋ ಗ್ರಾಮಕ್ಕೆ ನದಿಯಲ್ಲಿ ನೀರು ಇಲ್ಲದಿದ್ದರೂ ಹೋಗುವುದು ಕಷ್ಟವೇ. ಅಂಥದ್ದರಲ್ಲಿ ಬಸವಸಾಗರ ಜಲಾಶಯದಿಂದ ನೀರು ಬಿಟ್ಟರೆ ಸಾಕು ಈ ಗ್ರಾಮಕ್ಕೆ ಜಲದಿಗ್ಬಂಧನವಾಗುತ್ತದೆ. ಇಂತಹ ಸಮಯದಲ್ಲಿ ಲಕ್ಷ್ಮಣ ಅವರು ಆಪತ್ಬಾಂಧವನಂತೆ ಬರುತ್ತಾರೆ.

    ನದಿಯ ಹರಿವು ಹೆಚ್ಚಾದಾಗ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಬೋಟ್‍ನಲ್ಲಿ ಬಂದರೂ ಲಕ್ಷ್ಮಣ ಅವರೇ ಗೈಡ್. ನದಿಯಲ್ಲಿ ಸುಮಾರು 7 ಲಕ್ಷ ಕ್ಯೂಸೆಕ್ ನೀರು ಅಬ್ಬರಿಸುತ್ತಿದ್ದರೂ ಪ್ರಾಣವನ್ನು ಲೆಕ್ಕಿಸದೇ ನದಿಯಲ್ಲಿ ಈಜಿ ಗರ್ಭಿಣಿಯರು, ಚಿಕ್ಕ ಮಕ್ಕಳು, ವಯಸ್ಸಾದವರನ್ನು ದಡಕ್ಕೆ ಸೇರಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸುತ್ತಾರೆ.

    ಅಕ್ಷರ ಜ್ಞಾನ ಇಲ್ಲದಿದ್ದರೂ ಹಿರಿಯರಿಂದ ಕಲಿತ ಈಜಿನಿಂದ ಗ್ರಾಮಸ್ಥರನ್ನು ಕಾಪಾಡುತ್ತಿದ್ದಾರೆ ಈ ಲಕ್ಷ್ಮಣ. ಹಲವಾರು ವರ್ಷಗಳಿಂದ ನೀಲಕಂಠರಾಯನ ಗಡ್ಡಿಯಲ್ಲಿ ಜೀವನ ನಡೆಸುತ್ತಿರುವ ಈ ಲಕ್ಷ್ಮಣ ಅವರದ್ದು ನಾಲ್ಕು ಜನ ಇರುವ ಚಿಕ್ಕ ಕುಟುಂಬ. ಆದರೆ ಗ್ರಾಮಸ್ಥರೆಲ್ಲರೂ ನನ್ನವರೇ ಅನ್ನೋವಂತೆ ಕಾಪಾಡುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಹೇಳುತ್ತಾರೆ.

    ತಾನು ಮಾಡುತ್ತಿರುವ ಈ ಕಾರ್ಯ ಎಂತಹ ಮಹತ್ವದ್ದು ಎಂಬುದು ಈ ಅಮಾಯಕ ಲಕ್ಷ್ಮಣನಿಗೆ ಗೊತ್ತೇ ಇಲ್ಲ. ನನ್ನ ಹೆಸರು ಬರೋದು ಬೇಡ. ಬದಲಿಗೆ ನಮ್ಮೂರಿನ ಕಷ್ಟ ನಿವಾರಣೆಯಾದ್ರೆ ಸಾಕು ಅನ್ನುತ್ತೆ ಈ ನಿಸ್ವಾರ್ಥ ಜೀವಿ.

  • ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ಕ್ರಾಂತಿ ಅಸೋಸಿಯೇಷನ್‍ನಿಂದ ಹಸಿವು ಮುಕ್ತ ಕ್ರಾಂತಿ – ವಿಜಯಪುರದ ಮಹ್ಮದ್ ಅಜೀಂ ಪಬ್ಲಿಕ್ ಹೀರೋ

    ವಿಜಯಪುರ: ಪ್ರತಿ ನಿತ್ಯ ಅದೆಷ್ಟೋ ನಿರ್ಗತಿಕ, ಅಸಾಹಯಕ ಜನರು ಒಪ್ಪತ್ತು ಊಟಕ್ಕೂ ಗತಿ ಇಲ್ಲದೆ ಕಡು ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಒಂದು ಹೊತ್ತು ಮಾತ್ರ ಊಟ ಮಾಡಿ ಜೀವನ ಸಾಗಿಸುವವರು ಇದ್ದಾರೆ. ಹಾಗೆಯೇ ಅದೆಷ್ಟೋ ಜನರು ಪ್ರತಿ ನಿತ್ಯ ಆಹಾರ ಹಾಳು ಮಾಡಿ ತಿಪ್ಪೆಗೆ ಎಸೆಯುವ ಜನರು ನಮ್ಮೊಂದಿಗೆ ಇದ್ದಾರೆ. ಆದರೆ ಈ ವಿಷಯದಲ್ಲಿ ವಿಜಯಪುರದ ನಿರ್ಗತಿಕರು ಮಾತ್ರ ಲಕ್ಕಿ ಅನ್ನಬೇಕು. ವಿಜಯಪುರದ ನಿರ್ಗತಿಕ ಜನರಿಗೆ ಅನ್ನದಾತರಾಗಿ ಸಂಸ್ಥೆಯೊಂದು ನಿಂತಿದ್ದು, ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ವಿಜಯಪುರದ ಸಕಫ್‍ರೋಜಾ ಬಡಾವಣೆ ಜನರು ನಿರ್ಗತಿಕರ ಹೊಟ್ಟೆ ತುಂಬಿಸಲು ಅಡುಗೆ ಮಾಡುತ್ತಿದ್ದಾರೆ. ಬಡಾವಣೆ ವಿದ್ಯಾರ್ಥಿಗಳು, ಕೂಲಿ ಮಾಡೋ ಮಂದಿ ಸಂಜೆ ಆಗುತ್ತಿದ್ದಂತೆಯೇ ಮಹ್ಮದ್ ಅಜೀಂ ಇನಾಂದಾರ್ ಮನೆಯಲ್ಲಿ ಸೇರುತ್ತಾರೆ. ಒಬ್ಬರು ತರಾಕಾರಿ ಹೆಚ್ಚಿದ್ದರೆ, ಇನ್ನೊಬ್ಬರು ಒಗ್ಗರಣೆ ಹಾಕುತ್ತಾರೆ. ಎಲ್ಲರೂ ಸೇರಿ ಪೊಟ್ಟಣ ಕಟ್ಟುತ್ತಾರೆ. ಬೈಕ್‍ಗಳಲ್ಲಿ ನಿರ್ಗತಿಕರ ಬಳಿ ತೆರಳಿ ಊಟ ನೀಡಿ ಬರುತ್ತಾರೆ. ಇದು ಅವರ ನಿತ್ಯದ ಕಾಯಕವಾಗಿದೆ.

    ವರ್ಷದ ಹಿಂದೊಮ್ಮೆ ಅಜೀಂ ಹೊರಗೆ ಹೋಗಿದ್ದಾಗ ನಿರ್ಗತಿಕನೋರ್ವ ರಸ್ತೆ ದಾಟಲು ಪರದಾಡುತ್ತಿದ್ದರು. ಆಗ ಅವರನ್ನ ರಸ್ತೆ ದಾಟಿಸಿದ ಅಜೀಂ, ಊಟ ಆಯ್ತಾ ತಾತಾ ಅಂತ ಕೇಳಿದ್ದರಂತೆ. ನಮ್ಮಂತಹವರಿಗೆಲ್ಲ ಎಲ್ಲಿ ಊಟ, ನಿಮ್ಮಂತಹವರು ಏನಾದರು ಕೊಟ್ಟರೆ ಮಾತ್ರ ಊಟ ಅಂದಿದ್ದರಂತೆ. ಅಂದು ನಿರ್ಗತಿಕರಿಗೆ ಆಸರೆ ಆಗಲು ಪಣ ತೊಟ್ಟ ಅಜೀಂ, ಕ್ರಾಂತಿ ಅಸೋಸಿಯೇಷನ್‍ ಹುಟ್ಟು ಹಾಕಿದರು, ಅದರ ಫಲವಾಗಿ ಇಂದು ನೂರಾರು ನಿರ್ಗತಿಕರ ಹಸಿವು ನೀಗುತ್ತಿದೆ.

    ಪ್ರತಿನಿತ್ಯ 4 ರಿಂದ 5 ಸಾವಿರ ರೂ. ಇದಕ್ಕೆ ಖರ್ಚಾಗುತ್ತದೆ. ಅಜೀಂ ಒಳ್ಳೆಯ ಕಾರ್ಯಕ್ಕೆ ನಗರದ ಸಹೃದಯ ದಾನಿಗಳ ನೆರವಿದೆ. ಯಾವುದೇ ಕಾರ್ಯಕ್ರಮದಲ್ಲಿ ಅಡುಗೆ ಉಳಿದರೆ ಅದನ್ನು ನಿರ್ಗತಿಕರಿಗೆ ತಲುಪಿಸುತ್ತಾರೆ.

  • ಹಸಿರಿನ ಮಹತ್ವ ಸಾರುತ್ತಿದೆ ಸರ್ಕಾರಿ ಶಾಲೆ- ಶಾಲೆಯನ್ನ ಸಸ್ಯಕಾಶಿ ಮಾಡಿದ ಕೋಲಾರದ ಹೆಡ್‍ಮೇಷ್ಟ್ರು ರಮೇಶ್

    ಹಸಿರಿನ ಮಹತ್ವ ಸಾರುತ್ತಿದೆ ಸರ್ಕಾರಿ ಶಾಲೆ- ಶಾಲೆಯನ್ನ ಸಸ್ಯಕಾಶಿ ಮಾಡಿದ ಕೋಲಾರದ ಹೆಡ್‍ಮೇಷ್ಟ್ರು ರಮೇಶ್

    ಕೋಲಾರ: ಸರ್ಕಾರಿ ಶಾಲೆಗಳಿಗೆ ಒಂದ್ಕಡೆ ಖಾಸಗಿ ಶಾಲೆಗಳ ಪೈಪೋಟಿ, ಮತ್ತೊಂದು ಕಡೆ ಸರ್ಕಾರದಿಂದಲೇ ಉದಾಸೀನ. ಇದರ ನಡುವೆಯೂ ಕೋಲಾರದ ಮಾಲೂರು ತಾಲೂಕಿನ ಪುರ ಅನ್ನೋ ಗ್ರಾಮದ ಸರ್ಕಾರಿ ಶಾಲೆ ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಮಟ್ಟದಲ್ಲಿ ಪರಿಸರ ಮಿತ್ರ ಶಾಲೆ ಅಂತ ಹ್ಯಾಟ್ರಿಕ್ ಪ್ರಶಸ್ತಿ ಪಡೆದಿದೆ. ಇದಕ್ಕೆ ಕಾರಣ ಹೆಡ್‍ಮೇಷ್ಟ್ರು ರಮೇಶ್.

    ಹೌದು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರವೇಶ ಮಾಡ್ತಿದ್ದಂತೆ ಹಸಿರ ಸಿರಿ ಕಣ್ಮನಕ್ಕೆ ಮುದ ನೀಡುತ್ತೆ. ಮಾವು, ನೇರಳೆ, ಪಪ್ಪಾಯ, ಗಸಗಸೆ, ನುಗ್ಗೆ, ಟೀಕ್, ಸ್ವಿಲರ್ ಮರಗಳು ಸೇರಿದಂತೆ ವಿವಿಧ ಬಗೆಯ ಹೂ-ಹಣ್ಣಿನ ಮರ-ಗಿಡಗಳು ಇಲ್ಲಿವೆ. ದೊಡ್ಡಪತ್ರೆ, ಮೆಳೆಕಾಳು, ಲೋಳೆಸರ, ಶುಂಠಿ ಸೇರಿದಂತೆ ಔಷಧೀಯ ಸಸ್ಯಗಳ ಪರಿಮಳ ಬರುತ್ತೆ.

    ಕನ್ನಡ ಮಾಧ್ಯಮದ ಈ ಕಿರಿಯ ಶಾಲೆಯಲ್ಲಿ 1 ರಿಂದ 5 ನೇ ತರಗತಿವರೆಗೆ 62 ವಿದ್ಯಾರ್ಥಿಗಳಿದ್ದಾರೆ. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇರಬೇಕು ಅನ್ನೋದನ್ನ ಮನಗಂಡ ರಮೇಶ್ ಸರ್ ಮಕ್ಕಳು, ಸಹ ಶಿಕ್ಷಕರ ಜೊತೆ ಸೇರಿ ಶಾಲೆಯನ್ನ ಸಸ್ಯಕಾಶಿ ಮಾಡಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗರಿಯನ್ನ ತನ್ನದಾಗಿಸಿಕೊಂಡಿದೆ.

    ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲಿನ ತರಕಾರಿಗಳನ್ನ ಬಳಸಲಾಗುತ್ತಿದೆ. ಇಂಗು ಗುಂಡಿ, ಮಳೆಕೊಯ್ಲು ಪದ್ಧತಿ ಮತ್ತು ತುಂತುರು ನೀರಾವರಿ ಪದ್ಧತಿ ಮೂಲಕ ಬರದಲ್ಲೂ ಶಾಲೆಯ ಆವರಣ ಹಸಿರಸಿರಿಯ ಹೊದಿಕೆ ಹೊಂದಿದೆ. ಇನ್ನು ಶಾಲಾ ಆವರಣದ ಕಸವನ್ನ ಗೊಬ್ಬರವಾಗಿ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನ ಅಳವಡಿಸಿದ್ದಾರೆ.

    ಬೃಹದಾಕಾರವಾಗಿ ಬೆಳೆದಿರುವ ಈ ಮರಗಳಲ್ಲಿ ಪಕ್ಷಿಗಳ ಕಲರವ ಸಹ ಇದೆ. ಶಾಲೆಯ ವಾತಾವರಣದಿಂದ ಮಕ್ಕಳು ಚಕ್ಕರ್ ಹಾಕದೆ ಶಾಲೆಗೆ ಬರ್ತಿದ್ದಾರೆ.

  • ವಿಶೇಷಚೇತನ ಮಕ್ಕಳಿಗೆ ಅನ್ನಭಾಗ್ಯದ ಜೊತೆ ಉಚಿತ ಅಕ್ಷರ ದಾಸೋಹ ನೀಡ್ತಿರೋ ಬೆಳಗಾವಿಯ ಶಾಂತಾ ಶಿಂಧೆ

    ವಿಶೇಷಚೇತನ ಮಕ್ಕಳಿಗೆ ಅನ್ನಭಾಗ್ಯದ ಜೊತೆ ಉಚಿತ ಅಕ್ಷರ ದಾಸೋಹ ನೀಡ್ತಿರೋ ಬೆಳಗಾವಿಯ ಶಾಂತಾ ಶಿಂಧೆ

    ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ರೆ ತಿರಸ್ಕಾರ ಮಾಡೋ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅವರನ್ನ ಆಶ್ರಮಕ್ಕೋ ಅಥವಾ ವಿಶೇಷ ಶಾಲೆಗೆ ಸೇರಿಸೋ ಜನರಿದ್ದಾರೆ. ಆದರೆ ನಮ್ಮ ಹೀರೋ ಇಂತ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಹೆತ್ತ ತಾಯಿಯಂತೆ ಸಾಕಿ ಸಲಹುತ್ತಿದ್ದಾರೆ.

    ಹೌದು. ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತ ತಾಯಿಯಂತೆ ಪೋಷಣೆ ಮಾಡುತ್ತಿರುವ ಮಹಿಳೆಯ ಹೆಸರು ಶಾಂತಾ ಶಿಂಧೆ. ಇವರು ಬೆಳಗಾವಿ ಜಿಲ್ಲೆಯ ಅಥಣಿಯವರು. ಕಳೆದ 3 ವರ್ಷಗಳಿಂದ ಶಾರದಾದೇವಿ ಅನ್ನೋ ಬುದ್ಧಿಮಾಂದ್ಯ ಮಕ್ಕಳ ವಸತಿ ಮತ್ತು ತರಬೇತಿ ಶಾಲೆ ನಡೆಸುತ್ತಿದ್ದಾರೆ. ಮನೆಯವರಿಗೆ ಭಾರವಾದ ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತ ತಾಯಿಯಂತೆ ಸಾಕುತ್ತಿದ್ದಾರೆ. ಸಮಾಜದಲ್ಲಿ ತಿರಸ್ಕಾರಗೊಂಡ 100ಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಶಾಂತಾ ಅವರ ಈ ಕಾರ್ಯಕ್ಕೆ ಮಕ್ಕಳು ಹಾಗೂ ಗಂಡ ಸಾಥ್ ನೀಡಿದ್ದಾರೆ. ಸರ್ಕಾರದಿಂದ ಬರೋ ಅನುದಾನದ ಜೊತೆ ಕೆಲ ಹೃದಯವಂತರು ಕೈ ಜೋಡಿಸಿದ್ದಾರೆ.

    ಹೆತ್ತ ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳದೇ ಇರೋ ಪೋಷಕರ ನಡುವೆ ಶಾಂತಾ ಶಿಂಧೆ ನಿಜಕ್ಕೂ ಅಮ್ಮನಂತೆ ಕಾಣ್ತಾರೆ. ಇವರ ಸಮಾಜಸೇವೆಗೆ ಇನ್ನೊಂದಿಷ್ಟು ಮಂದಿ ಕೈ ಜೋಡಿಸಲಿ ಅಂತಾ ಹಾರೈಸೋಣ.

    https://www.youtube.com/watch?v=2mZMx6vR6OY

  • 10 ಲಕ್ಷ ರೂ. ಖರ್ಚು ಮಾಡಿ ಊರಿಗೆ ನೀರು ಕೊಟ್ರು ಹಾವೇರಿಯ ಪಬ್ಲಿಕ್ ಹೀರೋ

    10 ಲಕ್ಷ ರೂ. ಖರ್ಚು ಮಾಡಿ ಊರಿಗೆ ನೀರು ಕೊಟ್ರು ಹಾವೇರಿಯ ಪಬ್ಲಿಕ್ ಹೀರೋ

    – ಸಮಾಜಸೇವೆಗೆ ವರ್ಷಕ್ಕೆ 15 ಲಕ್ಷ ರೂ. ಮೀಸಲು

    ಹಾವೇರಿ: ಊರಿನ ಮೂರು ಶಾಲೆಗಳನ್ನೇ ದತ್ತು ಪಡೆದು ಅಭಿವೃದ್ಧಿ ಮಾಡಿದ್ದ ಇವರು ಕುಡಿಯುವ ನೀರು ಪೂರೈಸ್ತಾರೆ, ಕೆರೆ ಹೂಳೆತ್ತಿಸ್ತಾರೆ. ಬಡ ಬಗ್ಗರಿಗೆ ಸಹಾಯ ಮಾಡೋ ಹಾವೇರಿಯ ಕಂಟ್ರಾಕ್ಟರ್ ಇಂದಿನ ಪಬ್ಲಿಕ್ ಹೀರೋ.

    ಎಷ್ಟೇ ಕೂಡಿಟ್ಟರೂ ಜನಕ್ಕೆ ಮತ್ತಷ್ಟು ಗಂಟು ಮಾಡಬೇಕು ಅನ್ನೋ ದುರಾಸೆ ಜಾಸ್ತಿ. ಆದ್ರೆ ನಮ್ಮ ಈ ಪಬ್ಲಿಕ್ ಹೀರೋಗೆ ಸಮಾಜಸೇವೆ ಮಾಡೋ ಆಸೆ. ವೃತ್ತಿಯಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿರೋ ಶ್ರೀಕಾಂತ್ ದುಂಡಿಗೌಡರ್ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದವರು. ತಾವು ಓದಿದ ಶಾಲೆ ಸೇರಿದಂತೆ ಊರಿನ ಇತರೆ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ತಾವು ಓದಿದ ಶಾಲೆ ಜೊತೆಗೆ ಉರ್ದು ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಶಾಲೆಯಲ್ಲಿ ಅದ್ಭುತ ಕೈದೋಟ ಮಾಡಿದ್ದಾರೆ. ಇದಕ್ಕೆಲ್ಲಾ ನೀರು ಪೂರೈಸಲು ಭರತ ಅನ್ನೋ ಸೇವಾ ಸಂಸ್ಥೆ ಕೈಜೋಡಿಸಿದೆ.

    ಆಶ್ಚರ್ಯ ಅಂದ್ರೆ ತಾವೇ ಸ್ವಂತಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡಿ ಶಿಗ್ಗಾಂವಿ ಪಟ್ಟಣಕ್ಕೆ ಕುಡಿಯವ ನೀರು ಒದಗಿಸುವ ಕೆರೆಯ ಹೂಳೆತ್ತಿಸಿದ್ದಾರೆ. ಇಷ್ಟೇ ಅಲ್ಲ ಬಡವರ ಮದುವೆಗಳಿಗೆ, ಅಂತ್ಯಕ್ರಿಯೆಗಳಿಗೆ ಧನ ಸಹಾಯ ಮಾಡ್ತಾರೆ.

    ಲಾಭ ಇಲ್ಲ ಅಂದ್ರೆ 10 ರೂಪಾಯಿ ಖರ್ಚು ಮಾಡೋಕೆ ಹಿಂದೆ ಮುಂದೆ ನೋಡೋ ಈ ಕಾಲದಲ್ಲಿ ಶ್ರೀಕಾಂತ್ ವರ್ಷಕ್ಕೆ 15 ಲಕ್ಷ ರೂಪಾಯಿಯನ್ನು ಸಮಾಜ ಸೇವೆಗೆ ಖರ್ಚು ಮಾಡ್ತಾರೆ. ನಿಜಕ್ಕೂ ಇವರು ಪಬ್ಲಿಕ್ ಹೀರೋನೇ ಸರಿ.

    https://www.youtube.com/watch?v=6LzOVNItnnY

  • ಬೆಳಗ್ಗೆ ಎದ್ದು ಸ್ಮಶಾನ ಸ್ವಚ್ಛ ಮಾಡ್ತಾರೆ ಚಿಕ್ಕಬಳ್ಳಾಪುರದ ನಿವೃತ್ತ ಸರ್ಕಾರಿ ನೌಕರ

    ಬೆಳಗ್ಗೆ ಎದ್ದು ಸ್ಮಶಾನ ಸ್ವಚ್ಛ ಮಾಡ್ತಾರೆ ಚಿಕ್ಕಬಳ್ಳಾಪುರದ ನಿವೃತ್ತ ಸರ್ಕಾರಿ ನೌಕರ

    ಚಿಕ್ಕಬಳ್ಳಾಪುರ: ಸರ್ಕಾರಿ ನೌಕರರು ನಿವೃತ್ತಿಯಾದ್ರೆ ಬಹುತೇಕರು ನೆಮ್ಮದಿಯ ಜೀವನ ನಡೆಸ್ತಾರೆ. ಆದ್ರೆ, ಈ ನಮ್ಮ ಪಬ್ಲಿಕ್ ಹೀರೋ ಸುಬ್ಬಕೃಷ್ಣ ಮಾತ್ರ ಬಾಗೇಪಲ್ಲಿ ಪಟ್ಟಣದ ಹಲವು ಸ್ಮಶಾನಗಳನ್ನ ಶುಚಿಗೊಳಿಸ್ತಿದ್ದಾರೆ.

    ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿಯ ಸುಬ್ಬಕೃಷ್ಣ, ಸದ್ಯ ಬಾಗೇಪಲ್ಲಿ ನಗರದಲ್ಲಿ ವಾಸವಾಗಿದ್ದಾರೆ. ಕಂದಾಯ ನೀರಿಕ್ಷಕರಾಗಿ ನಿವೃತ್ತರಾಗಿರೋ ಇವರು ಕಳೆದ 2 ವರ್ಷಗಳಿಂದ ಬಾಗೇಪಲ್ಲಿ ಪಟ್ಟಣದ ಸ್ಮಶಾನದ ಸ್ವಚ್ಛತೆ ಹಾಗೂ ನಿರ್ವಹಣೆ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿದಿನ ಬೆಳಗ್ಗೆ ಹತ್ತೂವರೆ ಗಂಟೆಗೆ ಟಿವಿಎಸ್‍ನಲ್ಲಿ ಹೊರಟು 2 ಗಂಟೆಗಳ ಕಾಲ ನಾಲ್ಕು ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸ್ತಾರೆ.

    ಒಮ್ಮೆ ಸ್ನೇಹಿತರೊಬ್ಬರ ಅಂತ್ಯಕ್ರಿಯೆಗೆ ಹೋಗಿದ್ದಾಗ ಸ್ಮಶಾನದಲ್ಲಿ ಹೆಜ್ಜೆ ಇಡಲೂ ಆಗದಂತ ಪರಿಸ್ಥಿತಿ ಇತ್ತಂತೆ. ಅವತ್ತೇ ನಿರ್ಧರಿಸಿ ಬೆಳಗ್ಗೆ ವಾಕಿಂಗ್‍ಗೆ ಬದಲು ಸ್ಮಶಾನ ಸ್ವಚ್ಛತೆಗೆ ನಿರ್ಧರಿಸಿ ಈಗ ಅದೇ ಅಭ್ಯಾಸವಾಗಿದೆ. ಸ್ವಚ್ಛತಾಕಾರ್ಯದ ವೇಳೆ ಮುಳ್ಳು ಚುಚ್ಚಿ ರಕ್ತ ಸೋರಿಸಿಕೊಂಡು ಬಂದದ್ದು ಇದೆ.

    ಸಮುದಾಯದಲ್ಲಿ ಬ್ರಾಹ್ಮಣರಾಗಿರೋ ಕಾರಣ ಹಲವರು ವಿರೋಧಿಸಿ ಟೀಕೆ ಮಾಡಿದ್ದರಂತೆ. ಆದ್ರೂ, ತಲೆಕೆಡಿಸಿಕೊಳ್ಳದೆ ಸುಬ್ಬಕೃಷ್ಣ ಅವ್ರು ಮಾತ್ರ ತಮ್ಮ ಸಮಾಜಮುಖಿ ಕಾರ್ಯ ಮುಂದುವರಿಸಿದ್ದಾರೆ.

    https://www.youtube.com/watch?v=fOQa5yL1LFY