Tag: public_tv

  • ಹೂತಿದ್ದ ಮಗುವಿನ ಮೃತದೇಹ ನಾಪತ್ತೆ

    ಹೂತಿದ್ದ ಮಗುವಿನ ಮೃತದೇಹ ನಾಪತ್ತೆ

    ಲಕ್ನೋ: ಸಮಾಧಿಯಲ್ಲಿ ಹೂತಿರುವ 4 ವರ್ಷದ ಮಗುವಿನ ಮೃತದೇಹ ಕಾಣೆಯಾಗಿದೆ ಎಂದು ಉತ್ತರ ಪ್ರದೇಶದ ಬುಲಂದ್‌ಶಹರ್ ನ ಖಾನ್ಪುರ್ ಪೊಲೀಸ್ ಠಾಣೆ ಪ್ರದೇಶದಿಂದ ಆಘಾತಕಾರಿ ಪ್ರಕರಣ ಹೊರಬಿದ್ದಿದೆ

    ಉತ್ತರ ಪ್ರದೇಶದ ಥೋನಾ ಗ್ರಾಮದಲ್ಲಿ 4 ವರ್ಷದ ಮಗುವೊಂದು ಜ್ವರದಿಂದ ಬುಧವಾರ ಮೃತಪಟ್ಟಿದೆ. ಮಗುವಿನ ಮರಣದ ನಂತರ ಕುಟುಂಬಸ್ಥರು ಮಗುವಿನ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದಿದ್ದರು. ಮೃತ ದೇಹವನ್ನು ಆ ರಾತ್ರಿ ಸಮಾಧಿಯಿಂದ ಹೊರತೆಗೆದಿದ್ದಾರೆ ಎಂಬ ವಿಷಯ ಊರ ತುಂಬ ಹಬ್ಬಿತ್ತು.

    ಮಗು ದೇಹ ಸಮಾಧಿಯಿಂದ ಕಾಣೆಯಾಗಿದೆ ಎಂಬ ಸುದ್ದಿಯಿಂದ ಅನುಮಾನಗೊಂಡ ಕುಟುಂಬಸ್ಥರು ಸಮಾಧಿಯನ್ನು ಅಗೆದು ನೋಡಿದ್ದಾರೆ. ಆದರೆ ಮಗುವಿನ ಮೃತದೇಹ ಸಮಾಧಿ ಮಾಡಿದ ಸ್ಥಳದಲ್ಲಿ ಇರಲಿಲ್ಲ. ಮಗುವಿನ ಶವ ಕಾಣೆಯಾಗಿರುವುದು ಕುಟುಂಬಸ್ಥರಿಗೆ ಪಕ್ಕಾ ಆಗಿದೆ. ಈ ವಿಚಾರವಾಗಿ ಮೃತ ಮಗುವಿನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

    ಮಾಟ-ಮಂತ್ರಕ್ಕಾಗಿ ಮಗುವಿನ ದೇಹವನ್ನು ತೆಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮಗುವಿನ ದೇಹವನ್ನು ಸಮಾಧಿಯಿಂದ ತೆಗೆದಿರುವುದು ಅಸಹ್ಯಕರ ಕೃತ್ಯ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಘಟನೆಯ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಪ್ರದೇಶದ ಜನರು ಕುಟುಂಬ ಸದಸ್ಯರೊಂದಿಗೆ ಸಮಾಧಿ ಇರುವ ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಗುವಿನ ಶವ ಸಮಾಧಿಯಿಂದ ಕಣ್ಮರೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ.

  • ಭಾರತೀಯ ಟೆಕ್ಕಿಗಳಿಗೆ ಗುಡ್‍ನ್ಯೂಸ್ – ಟ್ರಂಪ್ ವೀಸಾ ನಿಯಮ ರದ್ದು

    ಭಾರತೀಯ ಟೆಕ್ಕಿಗಳಿಗೆ ಗುಡ್‍ನ್ಯೂಸ್ – ಟ್ರಂಪ್ ವೀಸಾ ನಿಯಮ ರದ್ದು

    ವಾಷಿಂಗ್ಟನ್: ವೀಸಾ ಸಂಖ್ಯೆ ನಿರ್ಬಂಧಿಸಿ ಡೊನಾಲ್ಡ್ ಟ್ರಂಪ್ ಹೊರಡಿಸಿದ ಆದೇಶವನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ರದ್ದುಪಡಿಸುವ ಮೂಲಕ ಭಾರತೀಯ ಟೆಕ್ಕಿಗಳಿಗೆ ಸಂತಸದ ಸುದ್ದಿ ನೀಡಿದೆ.

    ವಿದೇಶಿ ನೌಕರರಿಗೆ ಪ್ರತಿವರ್ಷ ಮಂಜೂರು ಮಾಡುವ ವೀಸಾ ಸಂಖ್ಯೆ ನಿರ್ಬಂಧಿಸಿ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ನಿಯಮವನ್ನು ಹೊರಡಿಸಲಾಗಿತ್ತು. ಎಚ್1ಬಿ(ಅಮೆರಿಕಾಕ್ಕೆ ವಿದೇಶೀಯರು ಉದ್ಯೋಗ ಮಾಡಲು ತೆರಳುವುದಕ್ಕೆ ಅಲ್ಲಿನ ಸರ್ಕಾರ ನೀಡುವ ತಾತ್ಕಾಲಿಕ ನೌಕರಿ ವೀಸಾ) ವೀಸಾಕ್ಕೆ ಅರ್ಜಿ ಸಲ್ಲಿಸುವ ನಿಯಮವನ್ನು ಅಕ್ಟೋಬರ್‍ನಲ್ಲಿ ಬದಲಾಯಿಸಲಾಗಿತ್ತು.

    ವಲಸೆಗಳನ್ನು ನಿಯಂತ್ರಿಸಲು ವ್ಯಾಪಕ ಯೊಜನೆ ಅಂಗವಾಗಿ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳ ಮುಂಚೆ ಟ್ರಂಪ್ ಆಡಳಿತ ಹೊಸ ನಿಯಮ ಪ್ರಕಟಿಸಿದ್ದರು. ಇದನ್ನು ಕೋರ್ಟ್‍ನಲ್ಲಿ ಹಲವರು ಪ್ರಶ್ನೆ ಮಾಡಿದ್ದರು. ಕೊರೊನಾ ಸೋಂಕು ಹಾವಳಿಯಿಂದ ಉದ್ಯೋಗ ಕಳೆದುಕೊಂಡಿರುವುದರಿಂದ ವಿದೇಶಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವುದು ಅಗತ್ಯ ಎಂದು ಅಮೆರಿಕ ಸರ್ಕಾರ ಸಮರ್ಥಿಸಿಕೊಂಡಿತ್ತು.

    ತೀರ್ಪಿನಿಂದಾಗಿ ಡಿಸೆಂಬರ್ 7ರಿಂದ ಜಾರಿಗೆ ಬರಬೇಕಿದ್ದ ಉದ್ಯೋಗಗಳು ಮತ್ತು ಇತರ ವಿಷಯಗಳ ಬಗೆಗಿನ ಭದ್ರತಾ ಇಲಾಖೆಯ ನಿಯಮಗಳು ರದ್ದಾಗಲಿದೆ. ಜೊತೆಗೆ ಅಕ್ಟೋಬರ್ 8ರಿಂದ ಜಾರಿಗೆ ಬಂದಿದ್ದ ವೇತನದ ಮೇಲಿನ ಕಾರ್ಮಿಕ ಇಲಾಖೆಯ ನಿಯಮವೂ ಮಾನ್ಯತೆ ಕಳೆದುಕೊಳ್ಳಲಿದೆ.

    ಕೋರ್ಟ್ ಹೇಳಿದ್ದು ಏನು?
    ಇತ್ತೀಚಿನ ವರ್ಷಗಳಲ್ಲಿ ಎಚ್1ಬಿ ವೀಸಾಕ್ಕೆ ಸಲ್ಲಿಸಲಾದ ಅರ್ಜಿಗಳು ಪೈಕಿ ಕನಿಷ್ಟ ಮೂರನೇ ಒಂದರಷ್ಟು ಅರ್ಜಿಗಳನ್ನು ಹೊಸ ನಿಯಮದನ್ವಯ ತಿರಸ್ಕರಿಸುವ ಸಂಭವವಿದೆ. ನಿಯಮಗಳನ್ನು ಬದಲಾಯಿಸುವಾಗ ಸರ್ಕಾರ ಪಾರದರ್ಶಕತೆಯನ್ನು ಪಾಲಿಸಲಿಲ್ಲ. ಕೊರೊನಾ ಮಹಾಮಾರಿಯಿಂದ ಸೃಷ್ಟಿಯಾದ ನಿರುದ್ಯೋಗ ಸಮಸ್ಯೆ ಎದುರಿಸುವ ತುರ್ತು ಕ್ರಮವಿದು ಎಂಬ ವಾದದಲ್ಲಿ ಅರ್ಥವಿರಲಿಲ್ಲ. ಯಾಕೆಂದರೆ ಟ್ರಂಪ್ ಆಡಳಿತ ಮೊದಲೇ ಈ ರೀತಿಯ ಚಿಂತನೆ ಹೊಂದಿದ್ದು, ಅಕ್ಟೋಬರ್‍ನಲ್ಲಿ ಅದನ್ನು ಪ್ರಕಟಿಸಿದೆ ಎಂದು ಜಿಲ್ಲಾ ನ್ಯಾಯಾಧೀಶ ಜಿಫ್ರಿ ವೈಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಸೇರಿ ಹಲವು ದೇಶಗಳ ಮಾಹಿತಿ ತಂತ್ರಜ್ಞಾನ (ಐಟಿ) ಪದವೀಧರರು ಅಮೆರಿಕಾದಲ್ಲಿ ಉದ್ಯೋಗಕ್ಕಾಗಿ ಎಚ್1ಬಿಯನ್ನು ನೆಚ್ಚಿಕೊಂಡಿದ್ದಾರೆ. ಅಮೆರಿಕ ಪ್ರತಿವರ್ಷ ಐಟಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರ ಸಹಿತ ಹಲವು ರಂಗಗಳಲ್ಲಿ ಸುಮಾರು 85,000 ಎಚ್1ಬಿ ವೀಸಾ ನೀಡುತ್ತದೆ. ಮೂರು ವರ್ಷ ಅವಧೀಯ ಈ ವೀಸಾವನ್ನು ನವೀಕರಿಸಬಹುದಾಗಿದೆ. ಅಮೆರಿಕಾದಲ್ಲಿ ಎಚ್1ಬಿ ವೀಸಾ ಹೊಂದಿರುವ ಸುಮಾರು 6ಲಕ್ಷ ಜನರಲ್ಲಿ ಭಾರತ ಮತ್ತು ಚೀನಾದವರು ಹೆಚ್ಚಾಗಿದ್ದಾರೆ.

    ಟ್ರಂಪ್ ಆದೇಶ ಏನಿತ್ತು?
    2020 ಅಂತ್ಯದವರೆಗೆ ಎಚ್1ಬಿ, ಎಚ್ 2ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಉದ್ಯೋಗ ವೀಸಾಗಳನ್ನು ರದ್ದು ಪಡಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಉದ್ಯೋಗಿಗಳನ್ನು ಅಮೆರಿಕಾಕ್ಕೆ ಕಳುಹಿಸುವ ಭಾರತೀಯ ಕಂಪನಿಗಳಿಗೆ ಇದರಿಂದ ಹೊಡೆತ ಬಿದ್ದಿತ್ತು.

    ಸರಕಾರದ ಈ ನಿರ್ಧಾರದಿಂದ ಅಮೆರಿಕದ ಆರ್ಥಿಕತೆಗೆ ಭವಿಷ್ಯದಲ್ಲಿ ಪೆಟ್ಟು ಬೀಳುತ್ತದೆ. ನೂರಾರು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಲಿದೆ. ಇದೊಂದು ವಿವಾದಿತ ಕ್ರಮವಾಗಿದ್ದು ಆದೇಶ ಹಿಂಪಡೆಯುವಂತೆ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಟ್ರಂಪ್ ಹೊರಡಿಸಿದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.

  • ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ನಾಸಾದ ವಿಜ್ಞಾನಿಗಳು ಮೈಕ್ರೋಗ್ರಾವಿಟಿಯಡಿ ತರಕಾರಿಯನ್ನು ಬೆಳೆಯುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ. ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ ಈಗ ಕೆಲವು ಪ್ರಯೋಗಗಳನ್ನು ಮಾಡುತ್ತಿದೆ.

    ಭೂಮಿಯಿಂದ ಲಕ್ಷಾಂತರ ಮೈಲಿ ದೂರ ಅನ್ಯಗ್ರಹಗಳಿಗೆ ಹೊಗುವ ಗಗನಯಾನಿಗಳಿಗೆ ನಿಯಮಿತವಾಗಿ ತಾಜಾ ಆಹಾರ ಮೂಲ ಬೇಕಾಗಬಹುದು ಎಂಬ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದೆ.


    ಮೂಲಂಗಿ ಬೆಳದಿದ್ದು ಹೇಗೆ:
    ಗುರುತ್ವಾಕರ್ಷಣೆ ಕಡಿಮೆ ಇರುವ ಹಿನ್ನೆಲೆ ಆ ಸ್ಥಳದಲ್ಲಿ ಗಿಡದ ಬುಡಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ದಿಂಬುಗಳಲ್ಲಿ ಬೀಜಗಳನ್ನು ಹಾಕಿ ಬೆಳೆಯಲಾಗಿದೆ. ಗಿಡದ ಬುಡಕ್ಕೆ ನೀರು ಹಾಗೂ ಗೊಬ್ಬರ ಪೂರೈಕೆ ಮಾಡಲು ದಿಂಬನ್ನು ಬಳಸಲಾಗಿದೆ.

    ಮೂಲಂಗಿಯೇ ಯಾಕೆ?
    ಮೂಲಂಗಿ ಅತೀ ಕಡಿಮೆ ಅವಧಿಯಲ್ಲಿ ಫಲ ಕೊಡುತ್ತದೆ. ಅಲ್ಲದೆ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡುವ ಸಸ್ಯ ಥಳಿಗೆ ಮೂಲಂಗಿ ಹೋಲುತ್ತದೆ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಹೀಗಾಗಿ ಮೂಲಂಗಿ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಮೂಲಂಗಿ ಹಸಿಯಾಗಿ ತಿನ್ನಲು ಯೋಗ್ಯವಾಗಿದೆ.

    ಬಾಹ್ಯಾಕಾಶದಲ್ಲಿ ಬೆಳೆದಿರುವ ಕಡುಗೆಂಪು ಬಣ್ಣದ ಮೂಲಂಗಿ ಕಟಾವಿಗೆ ಸಿದ್ಧವಾಗಿದೆ. ಇದರ ಸ್ಯಾಂಪಲ್‍ಗಳನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

  • ಬೈಡನ್ ಪ್ರಮಾಣವಚನ ಕಾರ್ಯಕ್ರಮದ ನೇತೃತ್ವ ಭಾರತೀಯನ ಹೆಗಲಿಗೆ

    ಬೈಡನ್ ಪ್ರಮಾಣವಚನ ಕಾರ್ಯಕ್ರಮದ ನೇತೃತ್ವ ಭಾರತೀಯನ ಹೆಗಲಿಗೆ

    ವಾಷಿಂಗ್ಟ್​ನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಉದ್ಘಾಟನಾ ಸಮಿತಿಯಲ್ಲಿ ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

    ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಅಧ್ಯಕ್ಷೀಯ ಪ್ರಮಾಣವಚನ ಉದ್ಘಾಟನಾ ಸಮಿತಿಯನ್ನು ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅಮೆರಿಕಾದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಭಾರತ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಏರಲು ಸಿದ್ಧತೆ ನಡೆಯುತ್ತಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾರತದ ಕಂಪು ಕಾಣಿಸಿಕೊಳ್ಳುತ್ತದೆ.

    2021ರ ಜನವರಿಯಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಭಾರತದ ಮೂದಲ ಮಜು ವರ್ಗೀಸ್ ವಹಿಸಿಕೊಳ್ಳಲಿದ್ದಾರೆ. ಇವರ ತಾಯಿ ಭಾರತದ ಕೇರಳದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಂದೆ ನ್ಯೂಯಾರ್ಕ್‍ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದರು. ಈ ದಂಪತಿ ಮಗ ಮಜು ವೃತ್ತಿಯಲ್ಲಿ ವಕೀಲರಾಗಿದ್ದಾರೆ.

    ಅಧ್ಯಕ್ಷೀಯ ಚುನಾವಣಾ ಸಮಯದಲ್ಲಿ ಬೈಡೆನ್ ಮತ್ತು ಕಮಲಾ ಅವರ ಪರವಾಗಿ ಮಜು ಕೆಲಸ ಮಾಡಿದ್ದರು. ಸಾಕಷ್ಟು ಜನ ಸ್ವಯಂ ಸೇವಕರನ್ನು ಒಗ್ಗೂಡಿಸಿ, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಮಜು ವರ್ಗಿಸ್ ಅವರನ್ನು ಗುರುತಿಸಿರುವ ಅಧ್ಯಕ್ಷರು, ಅವರಿಗೆ ಅಧ್ಯಕ್ಷ ಉದ್ಘಾಟನಾ ಸಮಿತಿಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕರ ಸ್ಥಾನವನ್ನು ಕೊಟ್ಟಿದ್ದಾರೆ.

    ಮಜು ವರ್ಗೀಸ್ ಈ ಹಿಂದೆ ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಅವರ ವಿಶೇಷ ಸಹಾಯಕ ಮತ್ತು ಉಪನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇದೀಗ ಅಧ್ಯಕ್ಷಿಯ ಉದ್ಘಾಟನಾ ಸಮಿತಿಯಲ್ಲಿ ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾಣಿಸಿಕೊಳ್ಳಲಿದ್ದಾರೆ.

  • ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದವ ಬೆಂಗಳೂರಿನ ಯುವಕ

    ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದವ ಬೆಂಗಳೂರಿನ ಯುವಕ

    ಬೆಂಗಳೂರು: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೇ ಎರಡನೇ ಏಕದಿನ ಪಂದ್ಯ ನಡೆಯುವ ವೇಳೆಯಲ್ಲಿ ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದವ ಬೆಂಗಳೂರಿನ ಹುಡುಗನಾಗಿದ್ದಾನೆ.

    ಇಂಡಿಯಾ-ಆಸ್ಟ್ರೇಲಿಯಾ ಹೈ ಓಲ್ಟೇಜ್ 2ನೇ ಅಂತರಾಷ್ಟ್ರೀಯ ಏಕದಿನ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.

    ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾ ಯುವತಿಗೆ ಭಾರತೀಯ ಯುವಕ ಲವ್ ಪ್ರಪೋಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿತ್ತು. ಪ್ರಪೋಸ್ ಮಾಡಿರುವ ಯುವಕ ದೀಪೇನ್ ಮಾಂಡಲಿಯಾ ಬೆಂಗಳೂರಿನವರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಮ್ಯಾನೇಜ್ಮೇಂಟ್ ಪದವಿ ಪಡೆದಿದ್ದಾರೆ. ಇದೀಗ ಮೆಲ್ಬರ್ನ್‍ನಲ್ಲಿ ಜೆಟ್ ಸ್ಟಾರ್ ಆಸ್ಟ್ರೇಲಿಯಾ ಕಂಪನಿಯ ಪ್ರಾಜೆಕ್ಟ್ ರಿಪೋರ್ಟಿಂಗ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆಸ್ಟೇಲಿಯಾ ಯುವತಿ ರೋಸ್ ಮಿಂಬುಷ್, ದೀಪೇನ್‍ಗೆ ಪರಿಚಿತರಾಗಿದ್ದು, ಇಬ್ಬರ ನಡುವೆ ಆತ್ಮೀಯತೆ ಇತ್ತು. ಆಸ್ಟ್ರೇಲಿಯಾ- ಭಾರತ ಪಂದ್ಯ ನಡೆಯುವ ಸಂರ್ಭದಲ್ಲಿ ದೀಪೇನ್ ಪ್ರಪೋಸ್ ಮಾಡಿದ್ದಾರೆ.

    ಇಂಡಿಯಾ-ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಪಂದ್ಯ ನೋಡಲು ಅಪಾರ ಪ್ರಮಾಣದಲ್ಲಿ ಜನ ಸೇರಿದ್ದು, ಇದರ ಮಧ್ಯೆ ದೀಪೇನ್ ಮೊಣಕಾಲೂರಿ ಯುವತಿಗೆ ಪ್ರೇಮನಿವೇದನೆ ಮಾಡಿಕೊಂಡಿದ್ದರು. ಆಶ್ಚರ್ಯವೆಂಬಂತೆ ಯುವತಿ ಇವರ ಪ್ರೇಮನಿವೇದನೆಯನ್ನು ಒಪ್ಪಿಕೊಂಡಿದ್ದಳು

  • ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

    ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

    ಲಕ್ನೋ: ಮರಳು ತುಂಬಿದ ಲಾರಿ ಸ್ಕಾರ್ಪಿಯೋ ಕಾರೊಂದರ ಮೇಲೆ ಮಗುಚಿಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕೌಸಂಭಿ ಜಿಲ್ಲೆಯಲ್ಲಿ ನಡೆದಿದೆ.

    10 ಜನರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರು. ಆಗ ರಸ್ತೆಯಲ್ಲಿ ಚಲಿಸುತ್ತಿದ್ದ ಮರಳು ತುಂಬಿದ ಟ್ರಕ್ ಇದ್ದಕ್ಕಿದ್ದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ.

    ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ 10 ಜನರಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಅಪಘಾತ ನಡೆದ ಸ್ಥಳಕ್ಕೆ ಕೌಸಂಭಿ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ. ಟ್ರಕ್ ಟಯರ್ ಸ್ಪೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣಕ್ಕೆ ಸಿಗದೆ ಮಗುಚಿಬಿದ್ದಿದೆ. ಆಗ ಹತ್ತಿರದಲ್ಲೇ ಇದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಈ ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಕೂಡಲೇ ಪರಿಹಾರ ಕೈಗೊಳ್ಳುವಂತೆ, ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕನೇ ಅರೆಸ್ಟ್

    ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕನೇ ಅರೆಸ್ಟ್

    ತುಮಕೂರು: ವಾಹನ ವಿಮೆ ಪಡೆಯುವ ದುರುದ್ದೇಶದಿಂದ ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ಕೊಟ್ಟ ಕಾರು ಮಾಲೀಕನೇ ಈಗ ಬಂಧನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ಆರೋಪಿಯನ್ನು ದೊಡ್ಡೇಗೌಡ ಎಂದು ಗುರುತಿಸಲಾಗಿದೆ. ಈತ ಆಂಧ್ರದ ಮಡಕಶಿರಾ ಮೂಲದವನಾಗಿದ್ದಾನೆ. ವಿಮೆ ಪಡೆಯಲು ಕಾರು ಕಳೆದು ಹೋಗಿದೆ ಎಂದು ಸುಳ್ಳು ದೂರು ಕೊಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

    ಆರೋಪಿ ಕಳೆದ ಸೆಪ್ಟೆಂಬರ್ 21 ರಂದು ಮಿಡಿಗೇಶಿ ಠಾಣೆಗೆ ಬಂದು ಮಧುಗಿರಿ ಪಾವಗಡ ರಸ್ತೆಯ ನೀಲಿಹಳ್ಳಿ ರಸ್ತೆ ಬಳಿ ಮೂರು ಜನ ದುಷ್ಕರ್ಮಿಗಳು ಬಂದು ನನ್ನ ಇನ್ನೊವಾ ಕಾರು ಪಂಚರ್ ಆಗಿದೆ ಎಂದು ಕಾರು ಅಡ್ಡಗಟ್ಟಿ ನಿಲ್ಲಿಸಿ, ಹಲ್ಲೆ ನಡೆಸಿ ಕಾರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದನು. ದೂರುದಾರನ ಮೇಲೆ ಸಂಶಯಗೊಂಡ ಪೊಲೀಸರು ಈತನ ಚಲನವಲನ ಗಮನಿಸಿದ್ದಾರೆ. ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈತನ ನಿಜಬಣ್ಣ ಬಯಲಾಗಿದೆ.

    ಈ ಪ್ರಕರಣದಲ್ಲಿ ಕಾರು ಮಾಲೀಕ ದೊಡ್ಡೇಗೌಡನೇ ಆರೋಪಿಯಾಗಿದ್ದಾನೆ. ಕಾರು ಲೋನ್ ಜೊತೆಯಲ್ಲಿ ಮಣ್ಣಪುರಂ ಗೋಲ್ಡ್ ಲೋನ್‍ಸೇರಿ ಒಟ್ಟು 12 ಲಕ್ಷಸಾಲ ಮಾಡಿಕೊಂಡಿದ್ದಾನೆ. ಹೀಗಾಗಿ ಕಂತು ಕಟ್ಟಲಾಗದೇ ಸಮಸ್ಯೆಯಲ್ಲಿದ್ದನು. ಇನ್ಸೂರೆನ್ಸ್ ಕ್ಲೈಮ್ ಮಾಡುವ ದುರುದ್ದೇಶದಿಂದ ಕಾರನ್ನು ಆಂಧ್ರದ ರಂಗಾಪುರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟು ಕಳ್ಳತನವಾಗಿದೆ ಎಂದು ನಾಟಕವಾಡಿದ್ದ. ಅನುಮಾನಗೊಂಡ ಮಧುಗಿರಿ ಪೊಲೀಸರು ಈತನ ನಾಟಕ ಬಯಲು ಮಾಡಿ ಈಗ ಕಂಬಿಹಿಂದೆ ಕಳುಹಿಸಿದ್ದಾರೆ.

  • ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    – ಸೋಷಿಯಲ್ ಮಿಡೀಯಾದಲ್ಲಿ ವಿಡಿಯೋ ವೈರಲ್

    ಇಸ್ಲಾಮಾಬಾದ್: ವರದಕ್ಷಿಣೆಯಾಗಿ ಕಾರು, ಬಂಗಲೆ, ಹಣ ನಮ್ಮಲ್ಲಿ ಕೊಟ್ಟರೆ, ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ತನ್ನ ಅಳಿಯನಿಗೆ ಎಕೆ47 ರೈಫಲ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

    ವಿಡಿಯೋದಲ್ಲಿ ಏನಿದೆ?
    ವಧು-ವರರಿಗೆ ಶುಭಕೋರಲು ವೇದಿಕೆ ಮೇಲೆ ಬಂದ ವಧುವಿನ ತಾಯಿ ವರನಿಗೆ ಎಕೆ47 ರೈಫಲ್ ಕೊಟ್ಟು ಚುಂಬಿಸಿದ್ದಾಳೆ. ಅಳಿಯನ ಕೈಯಲ್ಲಿ ರೈಫಲ್ ಹಿಡಿದು ಅತ್ತೆಯೊಂದಿಗೆ ನಿಂತು ಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಈ ವಿಡಿಯೋಗೆ ಪಾಕಿಸ್ತಾನಿಯರು ಇದು ಕಾಮನ್ ಎಂದು ಶೇರ್ ಮಾಡಿದ್ದಾರೆ. ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಗಿದೆ ಎಂದು ವಿರೋಧಿಸಿ ಕೆಲವರು ಟೀಕೆ ಮಾಡಿದ್ದಾರೆ.

    ಈ ಗಿಫ್ಟ್ ವಧುವಿಗೆ ಕೊಡಬೇಕಿತ್ತು. ಜಗಳವಾದಾಗ ಗಂಡನ ಮೇಲೆ ಗುಂಡು ಹಾರಿಸು ಎಂದು ತಾಯಿ ಹೇಳಬೇಕಿತ್ತು ಎಂದು ಹಲವು ಕಮೆಂಟ್‍ಗಳು ಈ ವಿಡಿಯೋಗೆ ಬಂದಿದೆ. ಪಾಕಿಸ್ತಾನದ ಮದುವೆ ಸಮಾರಂಭದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ಸುದ್ದಿಯಲ್ಲಿದೆ.

  • ದುರ್ಬಲಗೊಂಡ ಚಂಡಮಾರುತ – 2 ದಿನ ಮೋಡ ಕವಿದ ವಾತಾವರಣ

    ದುರ್ಬಲಗೊಂಡ ಚಂಡಮಾರುತ – 2 ದಿನ ಮೋಡ ಕವಿದ ವಾತಾವರಣ

    ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ದೊಡ್ಡ ಮಟ್ಟದ ಮಳೆ ನೀರಿಕ್ಷೆ ಇಲ್ಲ ಎಂದು ಹವಾಮಾನ ಇಲಾಖೆಯ ನಿರ್ದೇಶಕ ರಮೇಶ್ ಬಾಬು ಹೇಳಿದ್ದಾರೆ.

    ಈಗಾಗಲೇ ಚಂಡಮಾರುತ ದುರ್ಬಲಗೊಂಡಿದೆ. ಇವತ್ತು ಅತೀ ಹೆಚ್ಚು ಎಂದರೆ ಮೂರು ಸೆಂಟಿಮೀಟರ್ ಮಳೆಯಾಗಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಸ್ವಲ್ಪ ಮಳೆ ನಿರೀಕ್ಷಿಸಬಹುದು. ಹಾಗಂತ ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.

    ಚಿಂತಾಮಣಿ, ಕೋಲಾರ, ಶಿಡ್ಲಘಟ್ಟದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಬೆಂಗಳೂರಲ್ಲಿ ಕೇವಲ 2.5 ಮಿಲಿ ಮೀಟರ್ ಮಳೆಯಾಗಿದೆ. ಇವತ್ತು ಮತ್ತು ನಾಳೆ ಇದೇ ರೀತಿ ಮೋಡ ಕವಿದ ವಾತಾವರಣವೇ ಇರುತ್ತದೆ ಎಂದು ತಿಳಿಸಿದ್ದಾರೆ.

    ದಕ್ಷಿಣ ಕರ್ನಾಟಕದಲ್ಲಿ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹೆಚ್ಚು ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

  • ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    – ಹೀಂದಿರುಗಿ ಬಂದಾಗ ತಾಯಿಗೆ ಕಾದಿತ್ತು ಶಾಕ್

    ಮಾಸ್ಕೋ: ತಾಯಿಯೊಬ್ಬಳು ತನ್ನ 10 ವರ್ಷದ ಮಗನನ್ನು 8 ದಿನಗಳ ಕಾಲ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ ಘಟನೆ ಮಾಸ್ಕೋದಲ್ಲಿ ನಡೆದಿದೆ.

    ಬಾಲಕನನ್ನು ಮಿಖೈಲ್ (10) ಎಂದು ಗುರುತಿಸಲಾಗಿದೆ. ಈತನನ್ನು ತಾಯಿ ನಟಲ್ಯಾ ಅಜರೆನ್ಕೋವಾ(31) ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ್ದಾಳೆ. ನಂತರ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹಾಕಿದ್ದಾಳೆ. ಹೀಗೆ ಹೋದವಳು 8 ದಿನಗಳ ಬಳಿಕ ಮನೆಗೆ ಬಂದಾಗ ಆಕೆಗೆ ಅಚ್ಚರಿ ಕಾದಿತ್ತು.

    ಇತ್ತ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿದ್ದ ಮಿಖೈಲ್ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಬಳಲಿದ್ದನು. ಅಲ್ಲದೆ ಜಿರಳೇಗಳು ಮುತ್ತಿಕೊಂಡಿದ್ದ ಮನೆಯಲ್ಲಿ ಬಾಲಕನಿಗೆ ನರಕ ದರ್ಶನವಾಗಿದೆ. 4 ದಿನಗಳ ಕಾಲ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕೂಗಾಡ ತೊಡಗಿದನು. ಬಾಲಕನ ಅಲಳು ಕೇಳಿಸಿಕೊಂಡ ನೆರಮನೆಯವರು ಬಂದು ಆತನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ನೆರೆ ಮನೆಯವರು ಬಾಲಕನಿಗೆ ತಿನ್ನಲು ಆಹಾರ ಮತ್ತು ಜ್ಯೂಸ್ ನೀಡಿದ್ದಾರೆ.

    ಬಾಲಕನನ್ನು ರಕ್ಷಣೆ ಮಾಡಿದ ನಂತರ ಮಗುವಿನ ತಾಯಿಗಾಗಿ ನೆರೆಹೊರೆಯವರು ಕಾದಿದ್ದಾರೆ. ಆದರೆ ಮಹಿಳೆ ಬರದೇ ಇರುವುದನ್ನು ಗಮನಿಸಿ ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಾಲಕನ ತಾಯಿ 2 ದಿನಕ್ಕಾಗಿ ಗೆಳೆಯರ ಮನೆಗೆ ಹೋದವಳು 8 ದಿನಗಳ ನಂತರ ಮರಳಿ ಮನೆಗೆ ಬಂದಿದ್ದಾಳೆ. ತಾಯಿ ಮಗನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಎಲ್ಲಿ ಹೋಗಿದ್ದಳು ಎಂಬುದು ಮಾತ್ರ ನಿಗೂಢವಾಗಿದೆ.

    ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನನ್ನ ಮಗು ನನಗೆ ಬೇಕು. ನನ್ನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಆರೋಪಿ ತಾಯಿ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಮಹಿಳೆಗೆ ಜೈಲು ಶಿಕ್ಷೆಯಾಗಿದೆ.

    ಕೇವಲ ಅಕ್ಕಿ ಮಾತ್ರ ನನಗೆ ತಿನ್ನಲು ಇಟ್ಟು ನನ್ನೊಬ್ಬನನ್ನೇ ಬಿಟ್ಟು ತಾಯಿ ನಾಯಿಯನ್ನು ವಾಕಿಂಗ್‍ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಅಡುಗೆ ಮಾಡಿಕೊಳ್ಳಲು ನೀರು ಇರಲಿಲ್ಲ ಎಂದು ಮಿಖೈಲ್ ತನ್ನ ಅಳಲು ತೋಡಿಕೊಂಡಿದ್ದಾನೆ.