Tag: Public TV Sting Operation

  • ಆಪರೇಷನ್ ದೀಪಾವಳಿ ವಸೂಲಿ- ಬಡವರ ರಕ್ತ ಹೀರುತ್ತಿದ್ದಾರೆ ವಸೂಲಿಕೋರರು

    ಆಪರೇಷನ್ ದೀಪಾವಳಿ ವಸೂಲಿ- ಬಡವರ ರಕ್ತ ಹೀರುತ್ತಿದ್ದಾರೆ ವಸೂಲಿಕೋರರು

    ಬೆಂಗಳೂರು: ನಗರದಲ್ಲಿ ಭರ್ಜರಿ ವಸೂಲಿ ಮಾಫಿಯಾ ನಡೆಯುತ್ತಿದೆ. ಪೊಲೀಸರ ಹೆಸರು ಹೇಳಿಕೊಂಡು ನಗರದ ಕೆಆರ್ ಮಾರುಕಟ್ಟೆಯಲ್ಲಿ ಬಡ ವ್ಯಾಪಾರಿಗಳ ರಕ್ತ ಹೀರುತ್ತಿರುವ ದಂಧೆಯನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲು ಮಾಡಿದೆ.

    ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭರ್ಜರಿ ವಸೂಲಿ ದಂಧೆ ಎಕ್ಸ್‍ಕ್ಲೂಸೀವ್ ದೃಶ್ಯವಾಗಳಿಗಳ ಸಮೇತ ಪಬ್ಲಿಕ್ ಟಿವಿ ದಂಧೆಯ ಕರಾಳ ಮುಖವನ್ನು ಬಯಲು ಮಾಡಿದೆ. ಪೊಲೀಸರ ಹೆಸರು ಹೇಳಿಕೊಂಡು ಮಾರುಕಟ್ಟೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ನಿತ್ಯ 8 ರಿಂದ 10 ಮಂದಿಗೆ ದೂಡಿದ ಹಣದಲ್ಲಿ ಪಾಲು ಹೋಗುತ್ತಿದೆ. ಬಿಬಿಎಂಪಿ ಕೆಳ ದರ್ಜೆಯ ನೌಕರರು ಹಾಗೂ ಧಂದೆಕೋರರರಿಂದ ಹಣ ವಸೂಲಿ ಮಾಡಲಾಗುತ್ತಿದೆ.

    ಕೆ.ಆರ್ ಮಾರ್ಕೆಟ್ ನಲ್ಲಿ ಪ್ರತಿನಿತ್ಯಲೂ ಸಾವಿರಾರು ರೂಪಾಯಿ ದಂಧೆ ವಸೂಲಿ ಮಾಡಲಾಗುತ್ತಿದೆ. ಫುಟ್ ಪಾಥ್ ವ್ಯಾಪಾರಿಗಳು ಹಣ ಕೊಡದಿದ್ದರೆ ಅಂಗಡಿ ತೆರವು ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಯಿಂದ 100-150 ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ. ಕೊರೊನಾ ಹೊಡೆತದಿಂದ ಜರ್ಜರಿತಗೊಂಡಿದ್ದ ಬಡ ವ್ಯಾಪಾರಿಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ವಸೂಲಿಕೋರರ ಕಿರುಕುಳಕ್ಕೆ ನರಕಯಾತನೆ ಅನುಭವಿಸ್ತಿದ್ದಾರೆ.

    ಪಬ್ಲಿಕ್ ಟಿವಿ: ದುಡ್ಡು ಕಲೆಕ್ಟ್ ಮಾಡ್ತಿದ್ರಲ್ಲ
    ವಸೂಲಿಕೋರರು : ದುಡ್ಡಲ್ಲ ಸಾರ್. ನಾವೇನೋ ಟಿಕೆಟ್ ಹಾಕಿದ್ವಿ. ಕೇಳಿ.
    ಪಬ್ಲಿಕ್ ಟಿವಿ: ಏನು ಟಿಕೆಟ್..?
    ವಸೂಲಿಕೋರರು : ಏನಿಲ್ಲ ಸಾರ್.
    ಪಬ್ಲಿಕ್ ಟಿವಿ: ಮತ್ತೆ ದುಡ್ಡು ಯಾಕೆ ತೊಗೊಂಡ್ರಿ.
    ವಸೂಲಿಕೋರರು : ಯಾರೋ ಪಾಪ ಮಾಡೋಕೆ ಕಳಿಸ್ತಾರೆ. ಏನೋ ಇಸ್ಕೊಳ್ತೀವಿ ಹೊಟ್ಟೆಪಾಡು.
    ಪಬ್ಲಿಕ್ ಟಿವಿ: ಯಾರು ಕಳಿಸ್ತಾರೆ..?
    ವಸೂಲಿಕೋರರು : ಯಾರೋ ಪೊಲೀಸರು
    ಪಬ್ಲಿಕ್ ಟಿವಿ: ಯಾರು ಆ ಪೊಲೀಸರು..?
    ವಸೂಲಿಕೋರರು : ಅಲ್ಲಿ ಟ್ರಾಫಿಕ್ ಅವ್ರು.
    ಪಬ್ಲಿಕ್ ಟಿವಿ: ಏನಂತಾರೆ. ದಿನಕ್ಕೆ ಎಷ್ಟು ಕೊಡ್ತೀರಿ ಅವ್ರಿಗೆ
    ವಸೂಲಿಕೋರರು : ನಾವು ಮಾಡಲ್ಲ ಸಾರ್. ದೇವ್ರಾಣೆಗೂ.
    ಪಬ್ಲಿಕ್ ಟಿವಿ: ನಿಮ್ಮನ್ನ ಯಾರು ಕಳಿಸ್ತಾರೆ ಅಂತ
    ವಸೂಲಿಕೋರರು : ಅವ್ರು ಬಂದಿಲ್ಲ ಸಾರ್ ಇವತ್ತು. ಅದೇ ಆಯಪ್ಪ ಬಂದಿಲ್ವಾಲ್ಲ.
    ಪಬ್ಲಿಕ್ ಟಿವಿ: ಯಾರು..?
    ವಸೂಲಿಕೋರರು : ಅವ್ರ ಹೆಸರು ಸುರೇಶ್ ಅಂತ
    ಪಬ್ಲಿಕ್ ಟಿವಿ :ಟ್ರಾಫಿಕ್ ಆ..!
    ವಸೂಲಿಕೋರರು : ಹಾ ಸರ್.

    ಪಬ್ಲಿಕ್ ಟಿವಿ : ವಿಡಿಯೋಸ್ ಇದೆ ನಮ್ಮತ್ರ
    ವಸೂಲಿಕೋರರು : ಏನಂತಾ..?
    ಪಬ್ಲಿಕ್ ಟಿವಿ : ದುಡ್ಡು ತೊಗೊಳ್ಳೋದು
    ವಸೂಲಿ ಮಾಡುವ ಮಹಿಳೆ : ತೋರ್ಸು ವಿಡಿಯೋ. ಯಾರತ್ರ ತೊಗೊಂಡಿದೇನೆ ಅಂತ
    ಪಬ್ಲಿಕ್ ಟಿವಿ : ಸತ್ಯ ಹೇಳಿ ಸುಮ್ನೆ ಬೇಡ.. ಯಾರಿಗೆ ಕೊಡ್ತಿರಿ. ಎಲ್ಲಿ ಕೊಡ್ತಿರಿ. ದಿನಕ್ಕೆ ಎಷ್ಟು ಕೊಡ್ತಿರಿ..?
    ವಸೂಲಿ ಮಾಡುವ ಮಹಿಳೆ : ನಮ್ಮನ್ನ ಕರಿತಾರೆ. ನಾವು ಹೋಗಲ್ಲಣ್ಣ.. ನಾವು ವ್ಯಾಪಾರ ಮಾಡೋದಾ.? ಕಲೆಕ್ಷನ್ ಮಾಡೋದಾ..?

    ವಸೂಲಿ ಮಾಡೋದನ್ನು ಮಾಡಿ ನಮಗೆ ಏನು ಗೊತ್ತೆ ಇಲ್ಲ ಅನ್ನೋ ಹಾಗೆ ಹೇಗೆ ನಾಟಕ ಆಡುತ್ತಾರೆ. ನಿತ್ಯ ಅಕ್ರಮವಾಗಿ ಪೊಲೀಸರ ಹೆಸರು ಹೇಳಿಕೊಂಡು ಹಣ ಪೀಕಲಾಗುತ್ತಿದೆ. ಇದನ್ನ ಪ್ರಶ್ನಿಸಿದರೆ ಕೂಡಲೇ ಅಲ್ಲಿಂದ ಬಡ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸುತ್ತಾರೆ. ಇದರಲ್ಲಿ ಕೆಲ ಬಿಬಿಎಂಪಿಯ ನೌಕರರು ಕೂಡ ಶಾಮೀಲಾಗಿದ್ದಾರೆ.

    ಪ್ರತಿನಿತ್ಯ ಕೆ.ಆರ್ ಮಾರ್ಕೆಟ್‍ನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ ಆರು ಘಂಟೆಯ ತನಕ ಈ ವಸೂಲಿ ದಂಧೆ ನಡೆಯುತ್ತೆ. ಕನಿಷ್ಟ ಒಬ್ಬರಿಂದ 150 ರೂಪಾಯಿ ಆದರೂ ದಿನಕ್ಕೆ 200 ಜನರಿಂದ ಹಣ ಪೀಕುತ್ತಾರೆ. 200 ಜನರಿಂದ ಪೀಕಿದ ಹಣ ತಿಂಗಳಿಗೆ ಬರೋಬ್ಬರಿ 9 ಲಕ್ಷ ರೂಪಾಯಿ ಹಣ ಆಗುತ್ತೆ. ಈ ಹಣ ಎಲ್ಲಿಗೆ? ಯಾರ ಕಿಸೆಗೆ ಸೇರುತ್ತೆ ಅನ್ನೋದೇ ನಿಗೂಢ. ಕೆ.ಆರ್ ಮಾರ್ಕೆಟ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಇದ್ಯಾವುದು ಇವರ ಕಣ್ಣಿಗೆ ಬೀಳೋದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಈ ವಸೂಲಿ ದಂಧೆಗೆ ಬ್ರೇಕ್ ಹಾಕಬೇಕಿದೆ.

  • ಕೋಟಿ ಕೋಟಿ ಲೂಟಿ-ಕಸ ಗುಡಿಸೋರ ಕೂಲಿ ದುಡ್ಡನ್ನು ಬಿಡ್ತಿಲ್ಲ ಭ್ರಷ್ಟರು

    ಕೋಟಿ ಕೋಟಿ ಲೂಟಿ-ಕಸ ಗುಡಿಸೋರ ಕೂಲಿ ದುಡ್ಡನ್ನು ಬಿಡ್ತಿಲ್ಲ ಭ್ರಷ್ಟರು

    -ಕೊಳ್ಳೆ ಹೊಡೆಯೋರ ‘ಬೇಟೆ’ ಆಡಿದ ನಿಮ್ಮ ಪಬ್ಲಿಕ್ ಟಿವಿ

    ಬೆಂಗಳೂರು: ಕೋಟಿ ಕೋಟಿ ದುಡ್ಡಿನ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬೆನ್ನತ್ತಿದೆ. ಬಡವರ ಹಣವನ್ನು ನುಂಗುವವರನ್ನು ನಿಮ್ಮ ಪಬ್ಲಿಕ್ ಟಿವಿ ನೇರ ನೇರ ಎದುರಿಸಿದೆ. ಪೌರ ಕಾರ್ಮಿಕರ ಬಳಿ ಮಾಮೂಲಿ ವಸೂಲಿ ಮಾಡುವರರ ಕರಾಳ ಮುಖ ನಿಮ್ಮ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಒಂದೊಮ್ಮೆ ಕಸದ ಸಮಸ್ಯೆಯಿಂದ ಬೆಂಗಳೂರು ಗಾರ್ಬೇಜ್ ಸಿಟಿ ಅನ್ನೋ ಕುಖ್ಯಾತಿಗೆ ಒಳಗಾಗಿತ್ತು. ಬಿಬಿಎಂಪಿಯ ಅದೇ ಕಸದಲ್ಲಿ ಕೋಟಿ ಕೋಟಿ ದುಡ್ಡು ಅಡಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಹೀಗಾಗಿ ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ, ಪೌರ ಕಾರ್ಮಿಕರ ವಿಭಾಗಕ್ಕೆ ಅಧಿಕಾರಿಗಳು ಲಾಬಿ ಮಾಡಿಯೋ, ದುಡ್ಡು ಚೆಲ್ಲಿಯೋ ಸೇರಿಕೊಳ್ತಾರೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ. ಇವರೆಲ್ಲಾ ಕಸವನ್ನು ಬಳಸಿಕೊಂಡು ಹೇಗೆ ದುಂಡಗಾಗ್ತಾರೆ, ಹೆಂಗೆಲ್ಲಾ ಲೂಟಿ ಮಾಡ್ತಾರೆ ಅನ್ನೋ ರಹಸ್ಯ ಬೇಧಿಸಲು ಮುಂದಾದ ನಿಮ್ಮ ಪಬ್ಲಿಕ್ ಟಿವಿಗೆ ಗೋಚರವಾದ ಸತ್ಯ ಇಲ್ಲಿದೆ.

    ಬಿಬಿಎಂಪಿಯಲ್ಲಿ ಹೆಚ್ಚು ಕಡಿಮೆ 20 ಸಾವಿರ ಪೌರ ಕಾರ್ಮಿಕರಿದ್ದಾರೆ. ನಗರ ಸ್ವಚ್ಛ ಕೆಲಸ ಮಾಡುವ ಈ ಪೌರ ಕಾರ್ಮಿಕರ ದುಡ್ಡನ್ನು ಬಿಬಿಎಂಪಿ ಅಧಿಕಾರಿಗಳು ಬಿಡುತ್ತಿಲ್ಲ. ಪೌರಕಾರ್ಮಿಕರು ಸಂಬಳ ಖಾತೆಗೆ ಬಂದರೆ ನಡುಗುತ್ತಾರೆ. ಕಾರಣ ಮೇಸ್ತ್ರಿ, ಇನ್‍ಸ್ಪೆಕ್ಟರ್ ಅಂತ ಎಲ್ಲರಿಗೂ ಹಫ್ತಾ ಕೊಡಬೇಕು.

    ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಪೌರಕಾರ್ಮಿಕರಿಗೆ ಸಿಗುವ ಸಂಬಳದಲ್ಲಿ ತಿಂಗಳ ಕಮಿಷನ್ ನೀಡಿ ಭ್ರಷ್ಟ ಅಧಿಕಾರಿಗಳನ್ನು ಪೋಷಿಸಬೇಕಾದ ಸ್ಥಿತಿ ಏರ್ಪಟ್ಟಿದೆ. ಅಧಿಕಾರಿಗಳು, ಪೌರಕಾರ್ಮಿಕರಿಂದ ಮಾಮೂಲಿ ವಸೂಲಿ ಮಾಡುವ ದೃಶ್ಯಗಳು ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ದೃಶ್ಯ 1: ಬೆಂಗಳೂರಿನ ಕರಿಸಂದ್ರ ವಾರ್ಡ್

    ಮೇಸ್ತ್ರಿ: ಎಲ್ಲಿ ಮಾಮೂಲಿ?
    ಪೌರಕಾರ್ಮಿಕ: ಈಗ ಕಲೆಕ್ಟ್ ಮಾಡ್ತಾ ಇದೀನಿ
    ಮೇಸ್ತ್ರಿ: ಇನ್ಯಾರು ಕೊಡಬೇಕು?
    ಪೌರಕಾರ್ಮಿಕ: ಯಾರೂ ಕೊಡಲಿಲ್ಲ
    ಮೇಸ್ತ್ರಿ: ಏನಮ್ಮ ನಿನ್ನದು?
    ಪೌರಕಾರ್ಮಿಕ: ನನ್ನದು ಕೊಟ್ಡಿದ್ದೀನಿ?
    ಮೇಸ್ತ್ರಿ: ಹೌದು, ಅದನ್ನೇ ಬರೆದುಕೊಳ್ತಾ ಇದೀನಿ
    ಪೌರಕಾರ್ಮಿಕ: ಬರಿ, ನನ್ನದು ಬರೆದುಕೋ
    ಮೇಸ್ತ್ರಿ: ಅದ್ ಬೇರೆ ಮಾಡಿ, ಯಾರು ಕೊಟ್ಟಿಲ್ಲ ಬೇಗ ಹೇಳಿ… ಬರ್ಕೋಬೇಕು
    ಪೌರಕಾರ್ಮಿಕ: ನನ್ನದು 400 ರೂಪಾಯಿ
    ಮೇಸ್ತ್ರಿ: ಇನ್ಯಾರು..?
    ಪೌರಕಾರ್ಮಿಕ: ವೈಷ್ಣವಿ.. ಇನ್ಯಾರು..? ಇನ್ಯಾರು..? ಇನ್ಯಾರು..?
    ಪೌರಕಾರ್ಮಿಕ: ಓ ಕಲೆಕ್ಷನ್ ಮಾಡಿ ಚೀಲದಲ್ಲಿ ಇಟ್ಟಿದ್ದೀಯಾ..? ಇರಲಿ ಇರಲಿ
    ಪೌರಕಾರ್ಮಿಕ: ನನ್ನದು.. ಮಂಗಳ, ಯಶೋದಮ್ಮದು.. ಇನ್ನು ಈ ಯಮ್ಮನದು 300 ರೂಪಾಯಿ ಮಾತ್ರ
    ಪೌರಕಾರ್ಮಿಕ: ಅಯ್ಯೋ ನಿನ್ನ ಹೆಸರು ಹೇಳಿಲ್ಲ.. ಎಲ್ಲರೂ ಹೆಸ್ರು ಹೇಳಿದ್ರಿ.. ಈಗ ನನ್ ಹೆಸರ ಯಾಕೆ ಹೇಳಿಲ್ಲ ಅಂತ ಕೇಳಿದೆ
    ಮೇಸ್ತ್ರಿ: ಏಲ್ಲಿ ನಿನ್ನದು..?
    ಪೌರಕಾರ್ಮಿಕ: ಮತ್ತೆ ಕೊಡ್ತೀನಿ ಖರ್ಚಾಯ್ತು

    ಪೌರಕಾರ್ಮಿಕರಿಂದ ಸತ್ಯ ಬಾಯಿಬಿಡಿಸೋ ಸಲುವಾಗಿ ಸುಮ್ಮನೇ ಅವರನ್ನು ನೀವೇ ಅಪರಾಧಿಗಳು, ನೀವೇ ರೌಡಿಸಂ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡಲಾಯ್ತು. ಮೊದಲಿಗೆ ಏನಿಲ್ಲ, ದುಡ್ಡು ವಸೂಲಿ ಮಾಡಿಲ್ಲ ಎಂದವರು ನಿಧಾನಕ್ಕೆ ಅದು ಚೀಟಿ ಅಂತ ಕೆಲವರು ಬಾಯಿ ತೆರೆದರು. ಕಡೆಗೆ ಮೇಸ್ತ್ರಿ ಮೂಲಕ ಎಲ್ಲರಿಗೂ ಹಫ್ತಾ ಕೊಡುತ್ತಿದ್ದೇವೆ ಎಂದು ಪೌರ ಕಾರ್ಮಿಕರು ಒಪ್ಪಿಕೊಂಡರು.

    ಯಾರಿಗೆ ಹೋಗುತ್ತೆ ಮಾಮೂಲಿ?: ಪೌರಕಾರ್ಮಿಕರ ಖಾತೆಗೆ ಸಂಬಳ ಬಂದ ಕೂಡ್ಲೇ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ತಿಂಗಳ ಕಮೀಷನ್ ಕೊಡಲೇಬೇಕು. ಲೆಕ್ಕಾಧಿಕಾರಿ, ಇನ್‍ಸ್ಪೆಕ್ಟರ್, ಆಫೀಸರ್ಸ್, ಜನಪ್ರತಿನಿಧಿಗೆ ಹಫ್ತಾ ದುಡ್ಡು ಕೊಡಬೇಕು. ಕಡೆಗೆ ಸರ್ಕಾರಕ್ಕೆ ಹಫ್ತಾ ಕೊಡ್ಬೇಕು ಅಂತ ಕೆಲ ಕಾರ್ಮಿಕರು ಬೊಬ್ಬೆ ಹೊಡೆಯುತ್ತಾರೆ. ಬಿಬಿಎಂಪಿಯ ಸಂಪಂಗಿರಾಮನಗರದ ಕಿರಿಯ ಆರೋಗ್ಯ ಇನ್‍ಸ್ಪೆಕ್ಟರ್ ಶ್ರೀನಿವಾಸ್ ವಸೂಲಿ ದೌಲತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ದೃಶ್ಯ 2: ಸಂಪಂಗಿರಾಮನಗರ

    ಪೌರಕಾರ್ಮಿಕ: ನನಗೂ ನಿನಗೂ ಏನಾದ್ರೂ ದ್ವೇಷನಾ..?
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಈಗ ತಾನೇ ರವಿಗೆ ಅಂತ ಕಾಸು ಕೇಳ್ತಾ ಇದ್ದೀಯಾ?
    ಪೌರಕಾರ್ಮಿಕ: ನಿನ್ನೆನೇ 5 ಸಾವಿರ ಕೊಟ್ಟಿದ್ದಾರೆ
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಈಗ ಬೇರೆ ಹೇಳ್ತಿಯಾ.. ಆಗ ಬೇರೆ ಹೇಳ್ತಿಯಾ..?
    ಪೌರಕಾರ್ಮಿಕ: ಎಷ್ಟು ವಸೂಲಿ ಆಗುತ್ತೆ? ಇಷ್ಟೇ ಇಲ್ಲೇ ಇದೆ ನೋಡಿ, ಈಗ ಬೈದರೇ ಏನು ?
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಏನಿದು ಕಡಿಮೆ ಆಗಿದೆ..?
    ಪೌರಕಾರ್ಮಿಕ: ಎಷ್ಟು ಕಲೆಕ್ಷನ್ ಆಗಿದೆಯೋ ಅದು ಕೊಟ್ಡಿದ್ದೀನಿ. ಈಗ ಎಷ್ಟೇ ಸಾರಿ ಏಣಿಸಿದ್ರು ಅಷ್ಟೇ. ನಾ ಇಷ್ಟೇ ಹೇಳೊದು. ನಿನಗೆ ಕೊಡಬೇಕಾಗಿರೊದು ಕೊಡ್ತಾನೆ ಇದ್ದೀನಲ್ಲ.
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ನನಗೆ ಅವಸರ ಬಂದಿದೆ ಕೇಳ್ತಾ ಇದೀನಿ ಕಣೊ.. ನೋಡು ಇವ್ರಿಗೆ 5, 10 ಅಂತ ಹಂಚಿ ಬಿಡು, ಯಾರಿಗೊ ದುಡ್ಡು ಕಟ್ಟಬೇಕು. 60 ಸಾವಿರ ಬೇಕು. ಬರ್ತಿನಿ .


    ಪೌರಕಾರ್ಮಿಕ: ಇಬ್ಬರದು ಸೇರಿ 17 ಜನರ ಕಲೆಕ್ಷನ್ ಇದು
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ನಿನ್ನೆವರೆಗೂ 16 ಇತ್ತು.. ಈಗ ದೇವಿ ಕೊಟ್ಟಿರೊದು ಸೇರಿ 17 ಆಗಿದೆ ಅಂತ ಹೇಳಿದ್ದೀನಿ
    ಪೌರಕಾರ್ಮಿಕ: ಮುಚ್ಚಿಡೊದು ಏನು ಇಲ್ಲ
    ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಇನ್ನೂ 6 ಜನ ಕೊಟ್ಟಿಲ್ಲ.. ಕೊಡಬೇಕು. ಕೊಡಿಸೊದು ನನ್ ಜವಾಬ್ದಾರಿ.. ಕೊಟ್ಟಿಲ್ಲ ಅಂದ್ರೂ ನಾನೇ ಜವಾಬ್ದಾರಿ ತಗೊಂಡು ಕೊಡಿಸ್ತೀನಿ. ನೋಡು ಸರ್ಫರಾಜ್ ಖಾನ್ ಫೋನ್ ಮಾಡ್ತಾ ಅವನೇ. ದೇವರಾಣೆ, ಏನಿಲ್ಲ.. ನಮ್ಮದು ದುಡ್ಡು ಅಂತ ಹೇಳಬೇಕು ನೀನು

    ಜ್ಯೂನಿಯರ್ ಹೆಲ್ತ್ ಇನ್‍ಸ್ಪೆಕ್ಟರ್‍ಗೆ ಘನತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಕಾಲ್ ಮಾಡ್ತಾರಂತೆ. ಪೌರಕಾರ್ಮಿಕರನ್ನ ಸುಳ್ಳು ಹೇಳಿಸಲು ಹೇಗೆಲ್ಲಾ ಸಿದ್ಧಪಡಿಸ್ತಾ ಇದ್ದಾನೆ ನೋಡಿ ಈ ಭ್ರಷ್ಟ ಹೆಲ್ತ್ ಇನ್‍ಸ್ಪೆಕ್ಟರ್. ಝಣ ಝಣ ಕಾಂಚಾಣ ಮುಂದೆ ಏನು ನಿಲ್ಲಲ್ಲ.

    ಹಫ್ತಾ ತಿಂಗಳ ಲೆಕ್ಕ?
    * ಪೌರಕಾರ್ಮಿಕರು ತಿಂಗಳಿಗೆ ತಲಾ 500 ರೂ. ಕೊಡ್ಲೇಬೇಕು
    * ವಾರ್ಡ್ ವೊಂದರಲ್ಲಿ ಕನಿಷ್ಠ 80 ಪೌರಕಾರ್ಮಿಕರು ಇರುತ್ತಾರೆ
    * ಪ್ರತಿ ವಾರ್ಡ್ ನಿಂದ ತಿಂಗಳಿಗೆ 40 ಸಾವಿರ ಕಲೆಕ್ಷನ್ ಫಿಕ್ಸ್
    * 198 ವಾರ್ಡ್ ಗಳಿಂದ 80 ಲಕ್ಷ ರೂಪಾಯಿ ಹಫ್ತಾ ಕಲೆಕ್ಷನ್
    * ಮೇಸ್ತ್ರಿ, ಹೆಲ್ತ್ ಇನ್‍ಸ್ಪೆಕ್ಟರ್, ಅಕೌಂಟೆಂಟ್, ರಾಜಕಾರಣಿಗಳು, ಸರ್ಕಾರಕ್ಕೆ ಲಂಚ?

    ಇಷ್ಟೆಲ್ಲಾ ನಡೆಯೋದು ಮುಖ್ಯಮಂತ್ರಿಯ ಮೂಗಿನಡಿಯೇ ಎಂಬುವುದು ಅಚ್ಚರಿಯ ವಿಷಯ. ಬೆಂಗಳೂರು ನಗರ ಇಲಾಖೆ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರದ್ದೇ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನ ಕಂಡಾಗ ಹಲವು ಪ್ರಶ್ನೆಗಳು ತಾನಾಗಿಯೇ ಉದ್ಭವಿಸುತ್ತವೆ.

    ಸಿಎಂಗೆ ಪ್ರಶ್ನೆ?
    1. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನಿಮಗೆ ಗೊತ್ತಿದೆಯಾ?
    2. ನಿಮ್ಮ ಹೆಸ್ರು ಹೇಳಿ ಪೌರಕಾರ್ಮಿಕರಿಂದ ಪ್ರತಿ ತಿಂಗಳು ವಸೂಲಿ?
    3. ನಿಮಗೂ ಕಸ ಗುಡಿಸೋರ ದುಡ್ಡು ತಲುಪುತ್ತಿದ್ದೇಯಾ?
    4. ಮುಖ್ಯಮಂತ್ರಿಗಳಿಗೆ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತೀರಾ..?

    ಪೌರಕಾರ್ಮಿಕರ ಸಂಬಳದ ಕಮಿಷನ್ ದಂಧೆ ತಪ್ಪಿಸಲು ಕಾಂಗ್ರೆಸ್ ಸರ್ಕಾರ ಖಾತೆಗೆ ಸಂಬಳ ಬರುವಂತೆ ಮಾಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯರ ನಡೆಗೆ ಪೌರಕಾರ್ಮಿಕರು ಸಹ ಖುಷಿಯಾಗಿದ್ದರು. ಈಗ ಖಾತೆಗೆ ಸಂಬಳ ಬರುತ್ತಿದ್ದರೂ, ಬೆದರಿಸಿ ದುಡ್ಡು ತೆಗೆದುಕೊಳ್ಳುವುದು ಮಾತ್ರ ನಿಂತಿಲ್ಲ. ನಗರದ ಸ್ವಚ್ಛತೆ ಹೊರೆ ಜತೆಗೆ ಭ್ರಷ್ಟರ ಭಾರವೂ ನಮ್ಮ ಪೌರಕಾರ್ಮಿಕರ ಮೇಲಿದೆ.

  • ಬೆಂಗ್ಳೂರಿನಲ್ಲಿ ಇ-ಸಿಗರೇಟ್ ಮಾರಾಟ-‘ಪಬ್ಲಿಕ್’ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲು

    ಬೆಂಗ್ಳೂರಿನಲ್ಲಿ ಇ-ಸಿಗರೇಟ್ ಮಾರಾಟ-‘ಪಬ್ಲಿಕ್’ ರಹಸ್ಯ ಕಾರ್ಯಾಚರಣೆಯಲ್ಲಿ ಬಟಾಬಯಲು

    -ಜಾಣ ಕುರುಡು ಮೆರೆಯುತ್ತಿದ್ಯಾ ಸರ್ಕಾರ, ಖಾಕಿ?

    ಬೆಂಗಳೂರು: ಇ ಸಿಗರೇಟ್ ಚಟಕ್ಕೆ ಬಲಿಯಾಗಿದ್ದು ಅದೆಷ್ಟೋ ಯುವ ಮಂದಿ. ಇ ಸಿಗರೇಟ್ ವ್ಯಸನಿಯಿಂದ ಯುವ ಜನತೆಯನ್ನ ರಕ್ಷಿಸಲು ಕೇಂದ್ರ ಸರ್ಕಾರ ಇ ಸಿಗರೇಟ್ ಬ್ಯಾನ್ ಮಾಡಿದೆ. ಆದರೆ ಬ್ಯಾನ್ ಆದರೂ ಕೂಡ ಬೆಂಗಳೂರಿನ ಪ್ರತಿಷ್ಠಿತ ರಸ್ತೆ ಮಾರ್ಕೆಟ್ ಗಳಲ್ಲಿ ಎಗ್ಗಿಲ್ಲದೇ ಸಿಗುತ್ತಿದೆ. ಅಕ್ರಮವಾಗಿ ಮಾರಾಟವಾಗ್ತಿರೋದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಇತ್ತೀಚಿನ ಯುವ ಜನತೆ ಮಾದಕ ದ್ರವ್ಯಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಗುಟ್ಕಾ, ಗಾಂಜಾ, ಹುಕ್ಕ ಅಂತ ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಅದರ ಜೊತೆಗೆ ನಿಷೇಧಿತ ನಿಕೋಟಿನ್ ಅಂಶ ಇರುವ ಹೊಸ ವ್ಯಸನಿ ಇ-ಸಿಗರೇಟ್ ಕೂಡ ಸೇರಿದೆ. 400 ಬಗೆಯ ನಾನಾ ಬ್ರ್ಯಾಂಡ್‍ಗಳಲ್ಲಿ ಇ-ಸಿಗರೇಟ್ 150ಕ್ಕೂ ಪರಿಮಳಗಳಲ್ಲಿ ಸಿಗುತ್ತದೆ. ನಿಕೋಟಿನ್ ಅಂಶ ಇರುವ ಇದು ಆರೋಗ್ಯಕ್ಕೆ ಹಾನಿಕಾರಕ. ಆದರೂ ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಮತ್ತು ಮೆಜೆಸ್ಟಿಕ್‍ನ ನ್ಯಾಷನಲ್ ಮಾರ್ಕೆಟ್‍ನಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

    ಬ್ಯಾನ್ ಆಗಿರುವ ಇ-ಸಿಗರೇಟ್ ಎಲ್ಲಾದರೂ ಮಾರಾಟವಾಗುತ್ತಿದೆಯಾ ಎಂದು ತಿಳಿಯಲು ಫೀಲ್ಡಿಗಿಳಿದ ಪಬ್ಲಿಕ್ ಟಿವಿ ಕ್ಯಾಮೆರಾಗೆ ಮೊದಲು ಕಂಡಿದ್ದು ಮೆಜೆಸ್ಟಿಕ್‍ನ ನ್ಯಾಷನಲ್ ಮಾರ್ಕೆಟ್. ಇಲ್ಲಿ ಮೊದಲು ಕೇಳಿದರೆ ಬ್ಯಾನ್ ಆಗಿದೆ ಸಿಗಲ್ಲ ಎಂದು ಹೇಳುತ್ತಾರೆ. ಸ್ವಲ್ಪ ಸಮಯ ಅಲ್ಲೇ ನಿಂತು ಸೈಲೆಂಟ್ ಆಗಿ ಕೇಳಿದರೆ ನಿಧಾನಕ್ಕೆ ತೆಗೆದುಕೊಡುತ್ತಾರೆ. ಜೊತೆಗೆ ಬಂದಂತಹ ಯುವಕರಿಗೆ ಸ್ಪಾಟ್‍ನಲ್ಲೇ ರಿಹರ್ಸಲ್ ಮಾಡಿ ಸೇದಿ ತೋರಿಸುತ್ತಾರೆ.

    ಪಬ್ಲಿಕ್ ಪ್ರತಿನಿಧಿ: ಎಲೆಕ್ಟ್ರಿಕ್ ಸಿಗರೇಟ್ ಬೇಕು
    ಶಾಪ್ ಮಾಲೀಕ: ಬನ್ನಿ
    ಪಬ್ಲಿಕ್ ಪ್ರತಿನಿಧಿ: ಎಷ್ಟಾಗುತ್ತೆ.?
    ಶಾಪ್ ಮಾಲೀಕ: 800 ರೂಪಾಯಿ
    ಪಬ್ಲಿಕ್ ಪ್ರತಿನಿಧಿ: ಅಷ್ಟೊಂದಾಗುತ್ತಾ.?
    ಶಾಪ್ ಮಾಲೀಕ: ಹುಂ.. ನೋಡಿ ಹೀಗಿದೆ..
    ಪಬ್ಲಿಕ್ ಪ್ರತಿನಿಧಿ: ಯೂಸ್ ಮಾಡೋದು ಹೇಗೆ.?
    ಶಾಪ್ ಮಾಲೀಕ: ಈ ತರಹ ಮಾಡೋದು ನೋಡಿ

    ಪ್ರತಿನಿಧಿ: ಲಿಕ್ವಿಡ್ ಎಷ್ಟು ಹಾಕಬೇಕು? ಫ್ಲೇವರ್ ಸಿಗುತ್ತಾ ಇದರಲ್ಲಿ.?
    ಶಾಪ್ ಮಾಲೀಕ: ಸಿಗುತ್ತೆ ಭಾಯ್.. ಯಾವ ಥರದ್ದು ಫ್ಲೇವರ್ ಬೇಕಿದ್ರು ಸಿಗುತ್ತೆ.
    ಶಾಪ್ ಮಾಲೀಕ: ಫ್ಲೇವರ್ ಯಾವುದು ಬೇಕು.?
    ಪಬ್ಲಿಕ್ ಪ್ರತಿನಿಧಿ: ಹುಕ್ಕ ಫ್ಲೇವರ್ ಸಿಗಲ್ವ.?
    ಶಾಪ್ ಮಾಲೀಕ: ಸಿಗುತ್ತೆ ಭಾಯ್. ಎಲ್ಲೂ ಸಿಗಲ್ಲ. ಬ್ಯಾನ್ ಆಗಿದೆ ನೀವು ಎರಡು ಸಾರಿ ಬಂದು ಕೇಳುದರಲ್ಲ ಹಾಗಾಗಿ ಕೊಡ್ತಾ ಇರೋದು.
    ಪಬ್ಲಿಕ್ ಪ್ರತಿನಿಧಿ: ಹುಂ
    ಶಾಪ್ ಮಾಲೀಕ: ನೀವು ಇಲ್ಲಿ ಇರೋದು.?
    ಪಬ್ಲಿಕ್ ಪ್ರತಿನಿಧಿ: ಮಾಗಡಿ ರೋಡ್
    ಶಾಪ್ ಮಾಲೀಕ: ಇದಕ್ಕೆ ಅಂತಾ ಅಷ್ಟು ದೂರದಿಂದ ಬಂದ್ರಾ.?
    ಪಬ್ಲಿಕ್ ಪ್ರತಿನಿಧಿ: ತಗೋಬೇಕು ಅಂತಾ ಬಂದ್ವಿ. ಇನ್ಮುಂದೆ ಬರ್ತಾ ಇರ್ತೀವಿ.
    ಶಾಪ್ ಮಾಲೀಕ: ಓಕೆ ಬನ್ನಿ

    ಪಬ್ಲಿಕ್ ಪ್ರತಿನಿಧಿ: ಇವಾಗ ಎಷ್ಟು ಹೇಳಿ.?
    ಶಾಪ್ ಮಾಲೀಕ: 700 ಕೊಡಿ ಹೋಗಿ
    ಪಬ್ಲಿಕ್ ಪ್ರತಿನಿಧಿ: ಸ್ವೈಪಿಂಗ್ ಮಿಷಿನ್ ಇದೆಯಾ?
    ಶಾಪ್ ಮಾಲೀಕ: ಹುಂ ಇದೆ..
    ಪಬ್ಲಿಕ್ ಪ್ರತಿನಿಧಿ: ಸರಿ ಕೊಡಿ..

    ಶಾಪ್ ಮಾಲೀಕ: ಯಾವ ಫ್ಲೇವರ್ ಬೇಕಿದ್ರು ಹಾಕ್ಕೊಂಡು ಹೊಡಿಬಹುದು.
    ಪಬ್ಲಿಕ್ ಪ್ರತಿನಿಧಿ: ಹುಂ ಸರಿ
    ಶಾಪ್ ಮಾಲೀಕ: ನೋಡಿ ಹೊಡೆದು ತೋರಿಸ್ತಿನಿ.
    ಶಾಪ್ ಮಾಲೀಕ: ಸ್ಯಾಂಪಲ್ ಇದು ಅಷ್ಟೇ ನೀವು ಹೊಡೆದಂಗೆಲ್ಲಾ ಹೊಗೆ ಬರುತ್ತೆ.
    ಪಬ್ಲಿಕ್ ಪ್ರತಿನಿಧಿ: ಹುಂ ಸರಿ ಕೊಡಿ ಬಿಲ್ ಮಾಡಿ..
    ಶಾಪ್ ಮಾಲೀಕ: ಸರಿ ಅಲ್ಲಿ ಕೊಡಿ.
    ಪಬ್ಲಿಕ್ ಪ್ರತಿನಿಧಿ: ಕಡಿಮೆ ಮಾಡಿಕೊಳ್ಳಿ ಭಾಯ್.
    ಶಾಪ್ ಮಾಲೀಕ: ಕಡಿಮೆ ಆಗಲ್ಲ ಸರ್. ಕೊಡ್ತಿರೋದೇ ಕಡಿಮೆಗೆ.
    ಪಬ್ಲಿಕ್ ಪ್ರತಿನಿಧಿ: ಆಯಿತು ಕೊಡಿ.

    ಎಂಜಿ ರಸ್ತೆಯ ಚರ್ಚ್ ಸ್ಟ್ರೀಟ್ ನಲ್ಲೂ ಇದೇ ಪರಿಸ್ಥಿತಿ ಇದೆ. ಪರಿಚಯ ಇಲ್ಲದಿದ್ದರೇ ಇಲ್ಲಿ ನಿಮಗೆ ಇ-ಸಿಗರೇಟ್ ಸಿಗಲ್ಲ. ಮೆಲ್ಲಗೆ ಮಾತಿಗಿಳಿದರೆ ಮಾತ್ರ ಸತ್ಯ ಅನಾವರಣ ಆಗುತ್ತದೆ. ದೇಶ ವ್ಯಾಪ್ತಿ ನಿಷೇಧ ಮಾಡಿದ್ರೂ, ರಾಜ್ಯ ರಾಜಧಾನಿಯಲ್ಲಿ ಇ-ಸಿಗರೇಟ್ ಮಾತ್ರ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಸರ್ಕಾರ, ಪೊಲೀಸ್ ಇಲಾಖೆ ಮಾತ್ರ ಕ್ರಮ ಕೈಗೊಳ್ಳದೇ ಕುಳಿತಿದೆ. ಇನ್ನಾದರೂ ಖಾಕಿ ನಿದ್ದೆಯಿಂದ ಎದ್ದು ಕಠಿಣ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ. ಯುವಜನತೆಯನ್ನು ಅಪಾಯದಿಂದ ರಕ್ಷಣೆ ಮಾಡಬೇಕಿದೆ.