Tag: public tv sting

  • ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    -ಖಾಕಿ ಸರ್ಪಗಾವಲಿನ ನಡ್ವೆ  ಬಿಂದಾಸ್ ಮಾರಾಟ
    -ಹಸಿವು ತುಂಬಿಸುವರಿಂದಲೇ ಮದ್ಯ ಪೂರೈಕೆ

    ಬೆಂಗಳೂರು: ಕೊರೊನಾ ತಡೆಗಾಗಿ ವಿಧಿಸಿರುವ ಲಾಕ್‍ಡೌನ್ ನ್ನು ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಎಣ್ಣೆ ದಂಧೆ ಬಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ದಂಧೆಕೋರರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು 90 ರೂ. ಬೆಲೆಯ ಮದ್ಯವನ್ನು ಬರೋಬ್ಬರಿ 600 ರೂ.ಗೆ ಮಾರಾಟ ಮಾಡುತ್ತಿರೋದು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾಜ್ಯದ ಮೂಲೆ ಮೂಲೆಗಳಿಂದ ಮದ್ಯವನ್ನು ತರುತ್ತಿರುವ ದಂಧೆಕೋರರು ಖಾಕಿ ಸರ್ಪಗಾವಲಿನಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಖಾಕಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ಮದ್ಯ ಸಿಲಿಕಾನ್ ಸಿಟಿ ಪ್ರವೇಶಿಸುತ್ತಿರೋದು ಗಮನಿಸಿದ್ರೆ, ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣಿಸುತ್ತಿದೆ.

    ಮಧ್ಯರಾತ್ರಿ ಎರಡು, ಮೂರು ಗಂಟೆಗೆ ರಾಮನಗರ, ಕುಣಿಗಲ್, ತುಮಕೂರಿನಿಂದ ಬೆಂಗಳೂರಿಗೆ ಮದ್ಯ ಪೂರೈಕೆ ಆಗುತ್ತಿದೆ. ಈ ಮದ್ಯವನ್ನು ಸ್ವಿಗ್ಗಿ, ಝೋಮ್ಯಾಟೊ ಬ್ಯಾಗ್ ಗಳಲ್ಲಿ ಖದೀಮರು ಹಾಕಿಕೊಂಡು ಸಿಲಿಕಾನ್ ಸಿಟಿಯಲ್ಲಿ ಮನೆ ಮನೆಗೆ ತೆರಳಿ ಸರಬರಾಜು ಮಾಡುತ್ತಿದ್ದಾರೆ. ಯಾರ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿರೋದು ಸಿಲಿಕಾನ್ ಸಿಟಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಅಕ್ರಮ ಮದ್ಯ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ತಂಡದ ಕ್ಯಾಮೆರಾದಲ್ಲಿ ಎಣ್ಣೆ ದಂಧೆ ಸಂಪೂರ್ಣವಾಗಿ ಸೆರೆಯಾಗಿದೆ. ಪಬ್ಲಿಕ್ ಟಿವಿ ಪ್ರತಿನಿಧಿ ಮದ್ಯ ಖರೀದಿಸುವ ಗ್ರಾಹಕನಾಗಿ ಮಾರುವೇಷದಲ್ಲಿ ಹೋದಾಗ ದಂಧೆಕೋರ ದಂಧೆಯ ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ.

    ಸ್ಥಳ- ಸುಂಕದಕಟ್ಟೆ
    ಪಬ್ಲಿಕ್ ಟಿವಿ: ಎಷ್ಟು ಹೇಳಿದ್ರು
    ಮದ್ಯ ವಿತರಕ : 600 ರೂಪಾಯಿ
    ಪಬ್ಲಿಕ್ ಟಿವಿ: ಹೇ..ನನ್ಗೆ 550 ಹೇಳಿದ್ರು
    ಮದ್ಯ ವಿತರಕ: ಇಲ್ಲ.. ಕೇಳ್ರಿ..ಸಿಗೊದೆ ನಮ್ಗೆ 250. ಊರು ಕಡೆಯಿಂದ ತರಿಸೋದು ನಾವು. ಇಲ್ಲೆಲ್ಲ ಸೀಲ್ ಹೊಡೆದಿದಾರೆ.
    ಪಬ್ಲಿಕ್ ಟಿವಿ: ನೈಂಟಿ ರೂಪಿಸ್ ಬ್ರೋ ಇದು
    ಮದ್ಯ ವಿತರಕ: ಗೊತ್ತು ಗುರು..ನಮ್ಗೂ ಗೊತ್ತು ನಿಮ್ಗೂ ಗೊತ್ತು. ನಾವು ಅಲ್ಲಿಂದ ತರಬೇಕಲ್ಲ
    ಪಬ್ಲಿಕ್ ಟಿವಿ: ಎಲ್ಲಿಂದ ತರೋದು
    ಮದ್ಯ ವಿತರಕ: ಬೇರೆ ಕಡೆಯಿಂದ.
    ಪಬ್ಲಿಕ್ ಟಿವಿ: ಒಂದು ರೇಟ್ ಮಾಡಿ ಕೊಡಿ. ಇವತ್ತಿಗಷ್ಟೆ ಅಲ್ಲ.
    ಮದ್ಯ ವಿತರಕ: ನೋಡಣ್ಣ. ನಮ್ದು ಆಗಿದ್ರೆ ಹೇಗಾದ್ರೂ ಆಗ್ತಿತ್ತು. ಅಲ್ಲೇ 550 ರೂಪಾಯಿ ಕೊಟ್ಟು ತರ್ತಿವಿ.
    ಮತ್ತೊಬ್ಬ ಮದ್ಯ ವಿತರಕ: ಅದ್ರಲ್ಲಿ ಏನು ಸಿಗಲ್ಲಣ್ಣ. ಸುಮ್ನೆ
    ಪಬ್ಲಿಕ್ ಟಿವಿ: ನೀವು ಎಲ್ಲಿಂದ ತರೋದು?
    ಮದ್ಯ ವಿತರಕ: ರಾಮನಗರ ಆಕಡೆ ಈಕಡೆಯಿಂದ ತರೋದು.ಕುಣಿಗಲ್ ಯಡಿಯೂರುಯಿಂದ ತರ್ತಾರೆ. ಇಲ್ಲಿ ಎಲ್ಲಿಯೂ ಸಿಗಲ್ಲಣ್ಣ
    ಪಬ್ಲಿಕ್ ಟಿವಿ: ಬೇರೆ ಕಡೆಯಿಂದ ತರ್ತಿರಲ್ಲ..ನಿಮ್ಗೆ ಭಯ ಆಗಲ್ವಾ..!
    ಮದ್ಯ ವಿತರಕ: ಆಗ್ತದೆ ಏನು ಮಾಡೋದು ಅಣ.
    ಪಬ್ಲಿಕ್ ಟಿವಿ: ಕವರ್ ಇಲ್ವಾ?
    ಮದ್ಯ ವಿತರಕ: ಹಂಗೆ ಎತ್ಕೊಂಡು ಬಿಡಿ
    ಪಬ್ಲಿಕ್ ಟಿವಿ: ಹೇಗೆ ಒಟ್ಟಿಗೆ ಕಾಟನ್ ತರ ತರಿಸ್ತೀರಾ..?
    ಮದ್ಯ ವಿತರಕ: ಒಂದು ಕೇಸ್ ತರಿಸ್ತೀವಿ
    ಪಬ್ಲಿಕ್ ಟಿವಿ : ಎಲ್ಲಿಂದ ಹೇಗೆ ತರಿಸ್ತಿರಿ?
    ಮದ್ಯ ವಿತರಕ: ಇದ್ರಲ್ಲಿ ಇಟ್ಕೊಳ್ಳೋದು
    ಪಬ್ಲಿಕ್ ಟಿವಿ: ಬೈಕಾ..? ಬೈಕ್ ಬಿಡಲ್ವಾಲ್ಲ?
    ಮದ್ಯ ವಿತರಕ: ಬರಬಹುದು
    ಪಬ್ಲಿಕ್ ಟಿವಿ: ಬೈಕ್ ಓಡಾಡಂಗಿಲ್ವಲ್ಲ. ಹಂಗೆ ಮಾಡ್ತಿರಿ?
    ಮದ್ಯ ವಿತರಕ: ಅದು ಇದು ಹುಷಾರಿಲ್ಲ ಅಂತ ಹೇಳ್ಕೊಂಡು ಹೋಗಬೇಕು.
    ಪಬ್ಲಿಕ್ ಟಿವಿ: ಕೇಸಲ್ಲಿ ಎಷ್ಟಿರುತ್ತೆ?
    ಮದ್ಯ ವಿತರಕ : 48
    ಪಬ್ಲಿಕ್ ಟಿವಿ : 48ನೂ ಗಾಡಿಯಲ್ಲೇ ಇಡುತ್ತಾ…?
    ಮದ್ಯ ವಿತರಕ: ಅಲ್ಲಿಲ್ಲಿ ಇಡ್ಕೊಂಡು ಬರ್ತಿವಿ
    ಪಬ್ಲಿಕ್ ಟಿವಿ: ಅಷ್ಟು ರಿಸ್ಕ್ ತೊಗೋತಿರಿ. ಯಾರದ್ರೂ ಏನಾದ್ರು ಮಾಡಿದ್ರೆ
    ಮದ್ಯ ವಿತರಕ: ಸಿಗೋದು 50 ರೂಪಾಯಿ ಅಷ್ಟೆ
    ಪಬ್ಲಿಕ್ ಟಿವಿ: ಮತ್ತೆ ಯಾಕೆ ಅಷ್ಟೊಂದು ರಿಸ್ಕ್ ತೊಗೊತಿರಿ. ಕಾಲೇಜಿಗೆ ಹೋಗಲ್ವಾ..?
    ಮದ್ಯ ವಿತರಕ: ಇನ್ನೊಂದು ಎಕ್ಸಾಂ ಇದೆ. ಇಂಗ್ಲೀಷ್.
    ಪಬ್ಲಿಕ್ ಟಿವಿ: ಸೆಕೆಂಡ್ ಪಿಯುಸಿನಾ
    ಮದ್ಯ ವಿತರಕ: ಹು.
    ಪಬ್ಲಿಕ್ ಟಿವಿ: ಈಗ ನಿಮ್ಗೆ ಪಾಸ್ ಇರಲ್ವಲ್ಲ. ಹೇಗೆ ಹೊರಗಡೆ ಬರ್ತಿರಿ
    ಮದ್ಯ ವಿತರಕ: ನೈಟ್ 2, 3 ಗಂಟೆಗೆ ಹೋಗ್ತಿವಿ

    ಸುಂಕದಕಟ್ಟೆ, ಕುರುಬರ ಹಳ್ಳಿ ಹೀಗೆ ಬೆಂಗಳೂರಿನ ಹಲವು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯರಾತ್ರಿ ತರಕಾರಿ, ದಿನಸಿ ತರುವ ವಾಹನಗಳ ಮೂಲಕವೂ ಮದ್ಯ ನಗರಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಟೋಲ್ ಗಳಲ್ಲಿ ಸಾಲು ಸಾಲು ಪೊಲೀಸರು ಇದ್ರೂ, ಅವರ ದಿಕ್ಕು ತಪ್ಪಿಸಿ ಎಣ್ಣೆ ರವಾನೆ ಮಾಡಲಾಗುತ್ತದೆ. ಈ ಸುದ್ದಿ ನೋಡಿಯಾದ್ರೂ ಅಬಕಾರಿ ಸಚಿವ ನಾಗೇಶ್ ಮತ್ತು ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.

  • Exclusive ಎಸಿಬಿ ಎಸ್‍ಪಿ ಪವಾರ್ ಹೆಸರಲ್ಲಿ ಬಿಡಿಎಯಲ್ಲಿ ನಡೆಯುತ್ತಿದೆ ಕೋಟಿ, ಕೋಟಿ ಡೀಲ್!

    Exclusive ಎಸಿಬಿ ಎಸ್‍ಪಿ ಪವಾರ್ ಹೆಸರಲ್ಲಿ ಬಿಡಿಎಯಲ್ಲಿ ನಡೆಯುತ್ತಿದೆ ಕೋಟಿ, ಕೋಟಿ ಡೀಲ್!

    – ಲಂಚ ಕೊಡದಿದ್ರೆ ಬೀಳುತ್ತೆ ಎಸಿಬಿ ಕೇಸ್
    – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಿಡಿಎ ಲಂಚವತಾರ

    ಸುನೀಲ್ ಗೋವಿನಕೋವಿ
    ಬೆಂಗಳೂರು: ಬಿಡಿಎ ಭ್ರಷ್ಟಾಚಾರ ಡೆವಲೆಪ್‍ಮೆಂಟ್ ಅಥಾರಿಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಇಲ್ಲಿ ಬಿಡಿಎ ಹೆಸರಲ್ಲದೆ ಎಸಿಬಿ ಹೆಸರಿನಲ್ಲಿ ಅಧಿಕಾರಿಗಳು, ಅಧಿಕಾರಿಗಳ ಹತ್ತಿರವೇ ಹಣ ವಸೂಲಿ ಮಾಡುತ್ತಿದ್ದಾರೆ.

    ಹೌದು. ಬಿಡಿಎನಲ್ಲಿ ಆರ್ ಟಿಐ ಸಮಾಲೋಚಕರ ಹುದ್ದೆಗೆ ಒಂದು ವರ್ಷದ ಅವಧಿಗೆ ನೇಮಕವಾಗಿದ್ದ ಚಂದ್ರಶೇಖರ್ ರಾವ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈಗ ಒಂದು ವರ್ಷ ಕಳೆದು ಅವಧಿ ಪೂರ್ಣಗೊಂಡಿದ್ದರೂ ಚಂದ್ರಶೇಖರ್ ರಾವ್ ತನ್ನ ಜಾಗವನ್ನು ಮಾತ್ರ ಬಿಡುತ್ತಿಲ್ಲ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಎಸ್‍ಪಿಯಾಗಿ ನನ್ನ ಶಿಷ್ಯ ಪವಾರ್ ಇದ್ದಾನೆ. ನಿಮ್ಮೆಲ್ಲರ ಕೇಸ್ ಆತನ ಬಳಿ ಇದೆ. ಅದನ್ನು ಕ್ಲಿಯರ್ ಮಾಡಬೇಕು ಅಂದ್ರೆ ಹಣ ಕೊಡಿ ಎಂದು ಬಿಡಿಎ ಅಧಿಕಾರಿಗಳ ಹತ್ರ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಚಂದ್ರಶೇಖರ್ ರಾವ್ ಹೇಗೆ ಬಿಡಿಎಯಲ್ಲಿ ಹೇಗೆ ಪವರ್ ಹೊಂದಿದ್ದಾರೆ ಎನ್ನುವುದಕ್ಕೆ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು ಆ ಆಡಿಯೋದಲ್ಲಿ ಎಲ್ಲವೂ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಎಸಿಬಿ ಎಸ್‍ಪಿ ಪವಾರ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ದೊಡ್ಡ ಹುದ್ದೆಯಲ್ಲಿರುವವರ ಈ ರೀತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಾನು ಯಾರ ಹತ್ತಿರವೂ ಹಣವನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಈಗಾಗಲೇ ಹಲವರ ಬಳಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿರುವ ಆರೋಪ ಹೊತ್ತಿರುವ ಚಂದ್ರಶೇಖರ್ ರಾವ್ ಈಗ ಇನ್ನೊಂದು ಅವಧಿಗೆ ನನ್ನನ್ನೆ ನೇಮಕ ಮಾಡಿ ಎಂದು ಮತ್ತೊಮ್ಮೆ  ಆಯುಕ್ತರಿಗೆ ಪತ್ರ ಬರೆದಿದ್ದಾರೆ.

    ಸ್ಟಿಂಗ್ ಆಡಿಯೋದಲ್ಲಿ ಏನಿದೆ?
    ಚಂದ್ರಶೇಖರ್ – ಈ ಯಮ್ಮ ಹೇಳಿದ್ದಕ್ಕೇನೆ ಎಫ್‍ಐಆರ್ ಹಾಕೋದಿಲ್ಲ ಅಂದ್ರು
    ಇಂಜಿನಿಯರ್ 1 – ಅದೇ ಸಾಹೇಬ್ರ ಹತ್ತಿರ ಹೇಳಿದ್ದೆ ಏನ್ ಮಾಡೋದು ಸಾರ್ ಅಮೌಂಟ್‍ಗೆ ಅಂತ. ಈಗ ಯಾವ್ದು ಇಲ್ವಲ್ಲ ಅಂತ
    ಇಂಜಿನಿಯರ್ 2 – ನಾನ್ ಮೊನ್ನೆ ಅಂದೆ. ಮೊನ್ನೆ ಮಾತಾಡಿದ್ನಲ್ಲ ಸಾರ್ ಆ ಎಸಿಬಿನವರದ್ದು ತಂಟೆ ಬೇಡ ಫಸ್ಟ್ ಕ್ಲಿಯರ್ ಮಾಡ್ಕೋ ಮಾಡ್ಕೋ ಅಂತ
    ಚಂದ್ರಶೇಖರ್ – ಹೇಳಿದ್ರು ಕೇಳಲ್ಲ ಅಲ್ಲಿಗೂ ನಾನೇನ್ ಮಾಡ್ದೆ ವ್ಯಕ್ತಿ ಓಳ್ಳೆಯವರು ಅಂತ ಕೈ ನಿಂದ ಕೊಟ್ಟಿದ್ದೀನಿ
    ಇಂಜಿನಿಯರ್ 1 – ಹೇಳಿದ್ರು ಸರ್ ಹೇಳಿದ್ರು ಸರ್
    ಇಂಜಿನಿಯರ್ 2 – ನೀವಂದ್ರಲ್ಲ ಸಾರ್ ಆವತ್ತು ನಾನ್ ಅಂದೆ ಸಾಹೆಬ್ರು ನೋಡಪ್ಪಾ ಕೈಯಿಂದ ಏನೋ ಕೊಟ್ಟಿದ್ದಾರಂತೆ ನೀ ಹಿಂಗೆಲ್ಲ ಮಾಡಬಾರದು ಅಂತ ಯಾಕಂದ್ರೆ ಯಾರನ್ನಾದರೂ ನಂಬಿ ಈ ಪೊಲೀಸ್ ನವರನ್ನ ನಂಬೇಡಿ ಅಂತ ಅದ್ರಲ್ಲೂ ಈ ಎಸಿಬಿನಲ್ಲಿ ಎಂಥವರು ಕೂತಿದ್ದಾರೆ ಅಂದ್ರೆ ಎಲ್ಲಾ
    ಇಂಜಿನಿಯರ್ 1 – ಎಸಿಬಿನಲ್ಲಿ ಇವರಿಗೆ ಎಸ್‍ಪಿ ಸಾಹೇಬ್ರ ಪರಿಚಯ ಅಂತೆ ಸಾರ್
    ಇಂಜಿನಿಯರ್ 2 – ಯಾರ್ ಸಾರ್
    ಇಂಜಿನಿಯರ್ 1 – ಪವಾರ್ ಅಂತೆ ಸಾರ್
    ಚಂದ್ರಶೇಖರ್ – ಹೌದ್ರಿ ಪವಾರ್ ಹೇ ಇದ್ರಲ್ಲಿ ಇರ್ಲಿಲ್ವೇನ್ರಿ ಅವನು ಕೆಪಿಎಲ್‍ನಲ್ಲಿ ಇರ್ಲಿಲ್ವೇನ್ರಿ ಅವನೇ ರ‍್ಯಾಂಕ್‌ ಹೋಲ್ಡರ್ ಅವನು ರಿಕ್ಯೂಟೆಡ್ ಅಲ್ಲ ಡೈರೆಕ್ಟ್ ಸೆಲೆಕ್ಷನ್ ಟ್ರಸ್ಟಿ ಅವನ ನಾದ್ನಿ ಬಂದು ಇದ್ರಲ್ಲಿ ಇದ್ದಾಳೆ ಲೀಗಲ್ ಮೆಟ್ರಾಲಜಿನಲ್ಲಿ ಚಿಕ್ಕಬಳ್ಳಾಪುರದಲ್ಲಿ
    ಇಂಜಿನಿಯರ್ 1 – ಸಾಹೇಬ್ರಿಗೆ ಸ್ವಲ್ಪ ಟಚ್ ಇರೋದ್ರಿಂದ ಸ್ವಲ್ಪ ಹೋಲ್ಡ್ ಮಾಡಿ
    ಇಂಜಿನಿಯರ್ 2 – ಸ್ವಲ್ಪ ಎಲ್ಲಾ ಕ್ಲಿಯರ್ ಮಾಡಿಕೊಟ್ಟುಬಿಡಿ ಸಾರ್

     

     

     

  • ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬೀದಿಗೊಂದು ಬಾರ್ ಇದೆ. ಸ್ವತಃ ಇಲ್ಲಿನ ಶಾಸಕ ಇಕ್ಬಾಲ್ ಅನ್ಸಾರಿ ಲಿಕ್ಕರ್ ಲಾಬಿ ನಡೆಸ್ತಿದ್ದಾರೆ ಅನ್ನೋದನ್ನ ಮೊನ್ನೆಯಷ್ಟೇ ದಾಖಲೆ ಸಮೇತ ಬಹಿರಂಗಪಡಿಸಿದ್ವಿ. ಆದ್ರೆ ಇಷ್ಟೇ ಅಲ್ಲ ಇಲ್ಲಿ ಸಣ್ಣ ಪುಟ್ಟ ಪಾನ್ ಶಾಪ್, ಕಿರಾಣಿ ಅಂಗಡಿ, ಡಾಬಾ, ಹೋಟೆಲ್‍ಗಳಲ್ಲೂ ಮದ್ಯ ಪೂರೈಕೆ ಆಗ್ತಿದೆ. ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಈ ಅಕ್ರಮ ದಂಧೆ ಬಯಲಾಗಿದೆ.

    ಈ ಕ್ಷೇತ್ರದ ಜನರು ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಬಗ್ಗೆ ಚಿಂತಿಸಬೇಕಾದ ಇಲ್ಲಿನ ಶಾಸಕರು ಬೀದಿಗೊಂದು ಬಾರ್ ಅಂಗಡಿ ತೆರೆದು ಲಾಭಿ ನಡೆಸ್ತಿದ್ದಾರೆ. ಈ ಕೆಲಸಕ್ಕೆ ಬೇರೆ ಬೇರೆ ಪಕ್ಷದವರ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಯನ್ನ ಕೇಳಿದ್ರೆ ಮೇಲಾಧಿಕಾರಿಗಳನ್ನ ಕೇಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಇನ್ನು ಈ ಕ್ಷೇತ್ರದ ಜನತೆ ಹನಿ ಹನಿ ನೀರಿಗೆ ಪರದಾಡ್ತಿದ್ದಾರೆ. ಕಿಲೋಮೀಟರ್‍ಗಟ್ಟಲೇ ಸೈಕಲ್‍ನಲ್ಲಿ ಹೋಗಿ ನೀರು ತರೋ ಪರಿಸ್ಥಿತಿ ಇದೆ. ಮದ್ಯವನ್ನ ಸಲೀಸಾಗಿ ಒದಗಿಸೋ ನಮ್ಮ ಶಾಸಕರಿಗೆ ನೀರು ಪೂರೈಸೋದು ಮಾತ್ರ ತಿಳೀತಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ