Tag: Public TV   Coronavirus

  • ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳು ಬಂದ್

    ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳು ಬಂದ್

    – ಜಿಲ್ಲಾಡಳಿತದಿಂದ ಬಂದ್ ಮಾಡಿ ಕ್ರಮ

    ಕೊಪ್ಪಳ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದ ಹಿನ್ನೆಲೆ 14 ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಕ್ರಮ ಕೈಗೊಳ್ಳಲಾಗಿದೆ.

    ಜಿಲ್ಲೆಯ ಗಂಗಾವತಿಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್‍ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಕೊಪ್ಪಳ ನಗರದ 5 ಆಸ್ಪತ್ರೆಗಳು ಮತ್ತು ಗಂಗಾವತಿ ನಗರದ 22 ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಅಗಸ್ಟ್ 2ರೊಳಗೆ ಶೇ.50 ರಷ್ಟು ಬೆಡ್ ಸಿದ್ಧತೆ ಮಾಡಿಕೊಂಡು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿತ್ತು.

    ಈ ಕುರಿತು ತಹಶೀಲ್ದಾರ್ ಮತ್ತು ನಗರಸಭೆಯ ಪೌರಾಯುಕ್ತರು ಸಾಕಷ್ಟು ಬಾರಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದರು. ಆದರೆ ಕ್ಯಾರೆ ಎನ್ನದ ಖಾಸಗಿ ಆಸ್ಪತ್ರೆಗಳು, ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಇಂತಹ ಆಸ್ಪತ್ರೆಗಳ ವಿರುದ್ಧ ಇದೀಗ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಗಂಗಾವತಿ ನಗರದ 14 ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪದಿದ್ದಕ್ಕೆ ಜಿಲ್ಲಾಡಳಿತ 14 ಆಸ್ಪತ್ರೆಗಳನ್ನು ಬಂದ್ ಮಾಡಿದೆ.

    ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಕಳೆದ ರಾತ್ರಿ ಗಂಗಾವತಿ ತಹಶೀಲ್ದಾರ್ ಕವಿತಾ ನೇತೃತ್ವದಲ್ಲಿ ಆಸ್ಪತ್ರೆಗಳನ್ನು ಸೀಲ್‍ಡೌನ್ ಮಾಡಲಾಯಿತು. ಇನ್ನುಳಿದ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಒಪ್ಪಿಕೊಂಡಿವೆ.