Tag: Public TV Anniversary

  • ಪಬ್ಲಿಕ್‌ ಟಿವಿ 11 ಆರೋಹಣ; ದೀಪ ಬೆಳಗಿಸಿ, ಕೇಕ್‌ ಕತ್ತರಿಸಿ ಸಂಭ್ರಮಾಚರಣೆ

    ಪಬ್ಲಿಕ್‌ ಟಿವಿ 11 ಆರೋಹಣ; ದೀಪ ಬೆಳಗಿಸಿ, ಕೇಕ್‌ ಕತ್ತರಿಸಿ ಸಂಭ್ರಮಾಚರಣೆ

    ಬೆಂಗಳೂರು: ಕನ್ನಡದ ಸುದ್ದಿ ಮಾಧ್ಯಮ ʼಪಬ್ಲಿಕ್‌ ಟಿವಿʼಗೆ (Public TV) ಇಂದು (ಭಾನುವಾರ) 11 ಸಂವತ್ಸರದ ಸಡಗರ. ಪಬ್ಲಿಕ್‌ ಟಿವಿ ಕಚೇರಿಯಲ್ಲಿ 11ನೇ ವರ್ಷದ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ಬಾರಿ ವಿಶೇಷ ರೀತಿಯಲ್ಲಿ 11ನೇ ವರ್ಷದ ಸಂಭ್ರಮಾಚರಣೆ ಮಾಡಲಾಯಿತು.

    ಪಬ್ಲಿಕ್‌ ಟಿವಿಯ ಎಲ್ಲಾ ವಿಭಾಗಗಳ ಬ್ಯೂರೋ ಮುಖ್ಯಸ್ಥರು ದೀಪ ಬೆಳಗಿಸಿ, ಕೇಕ್‌ ಕತ್ತರಿಸುವ ಮೂಲಕ ʼಪಬ್ಲಿಕ್‌ ಟಿವಿ 11 ಆರೋಹಣʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಬ್ಲಿಕ್‌ ಟಿವಿಯ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಅವರು ಮಾತನಾಡಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ಗೆ 11 ಸಂವತ್ಸರ ಸಡಗರ..

    ಈ ದಿನ ಸಾಧ್ಯವಾಗಿದ್ದಕ್ಕೆ ಕಾರಣ ನಮ್ಮ ರಾಜ್ಯದ ಜನ. ನಾವು ಆರಂಭ ಮಾಡಿದ್ದಕ್ಕೂ, ಇಂದು ನಾವು ಇರುವ ಸ್ಥಿತಿಗತಿ ಊಹಿಸಲಿಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ. ನಾವು ಬಯಸದೇ ಇದ್ದುದೆಲ್ಲಾ ನಮಗೆ ದಕ್ಕಿದೆ. ನಿನ್ನ ಹತ್ತಿರ ಏನೇನಿಲ್ಲ ಎಂಬ ಬಗ್ಗೆ ಚಿಂತೆ ಮಾಡಬೇಡ. ನಿನ್ನ ಬಳಿ ಇರುವುದನ್ನೇ ಬಹಳ ಎಂದು ಯೋಚನೆ ಮಾಡಬೇಕು ಎಂಬ ಮಾತಿನಂತೆ ನಾವು ಖುಷಿಯಾಗಿದ್ದೇವೆ. ಇದಕ್ಕೆ ಕಾರಣ ಕರ್ನಾಟಕದ ಜನ ಎಂದು ತಿಳಿಸಿದರು.

    ಪತ್ರಕರ್ತನಿಗೆ ತನ್ನ ವೃತ್ತಿಯ ಕಿಚ್ಚು ನಂದಿಹೋದರೆ ಆತ ಸತ್ತಂತೆ. ಹೀಗಾಗಿ ಪ್ರತಿಯೊಬ್ಬರೂ ಆ ಕಿಚ್ಚನ್ನ ಉಳಿಸಿಕೊಳ್ಳಬೇಕು. ವೃತ್ತಿಪರತೆಯನ್ನು ಪ್ರತಿಯೊಬ್ಬರು ಕಾಯ್ದುಕೊಳ್ಳಬೇಕು ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

    ಸಮಾರಂಭದಲ್ಲಿ ಪಬ್ಲಿಕ್‌ ಟಿವಿಯ ಸಿಇಒ ಅರುಣ್‌ ಕುಮಾರ್‌, ಸಿಒಒ ಹರೀಶ್‌ ಕುಮಾರ್‌, ಮುಖ್ಯ ಸಂಪಾದಕರಾದ ಸಿ.ದಿವಾಕರ್‌, ಕಾರ್ಯಕಾರಿ ಸಂಪಾದಕರಾದ ಆನಂದ್‌ ಹಾಗೂ ಸಂಸ್ಥೆಯ ಸಿಬ್ಬಂದಿ ಬಳಗದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಬ್ಲಿಕ್ ಟಿವಿ’ಗೆ 11 ಸಂವತ್ಸರ ಸಡಗರ..

    ‘ಪಬ್ಲಿಕ್ ಟಿವಿ’ಗೆ 11 ಸಂವತ್ಸರ ಸಡಗರ..

    ಬೆಂಗಳೂರು: ಯಾರ ಆಸ್ತಿಯೂ ಅಲ್ಲ. ಇದು ನಿಮ್ಮ ಟಿವಿ ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹನ್ನೊಂದು ವರ್ಷಗಳಿಂದ ವೃತ್ತಿಪರ ಸುದ್ದಿ ಬಿತ್ತರಿಸುತ್ತಾ ಕನ್ನಡಿಗರ ಮನೆ ಮಾತಾಗಿರುವ ಪಬ್ಲಿಕ್ ಟಿವಿ, ಹನ್ನೊಂದು ವರ್ಷ ಪೂರೈಸಿ ಹನ್ನೆರಡಕ್ಕೆ ಕಾಲಿಟ್ಟಿದೆ. ನಮ್ಮನ್ನು ಬೆರಳಿಡಿದು ನಡೆಸಿದ, ಬೆನ್ನು ತಟ್ಟಿ ಬೆಂಬಲಿಸಿದ, ತಪ್ಪು ಮಾಡಿದಾಗ ತಿದ್ದಿದ ವೀಕ್ಷಕ ಪ್ರಭುಗಳಿಗೆ ನಾವು ಚಿರಋಣಿ.

    ಪಬ್ಲಿಕ್ ಕುಟುಂಬದಲ್ಲಿಂದು ವಿಶೇಷ. ಸಡಗರ ಸಂಭ್ರಮ. ವರ್ಷ ಪೂರ್ತಿ ಸುದ್ದಿ ಬಿತ್ತರಿಸುವ ಧಾವಂತ, ಕೆಲಸದ ಒತ್ತಡ.., ಜಾರುವ ಸಮಯದ ಗಡಿಬಿಡಿಯಲ್ಲೇ ದಿನ ಕಳೆಯುವ ಸಿಬ್ಬಂದಿ ವರ್ಗಕ್ಕೆ ಇಂದು ಮನೆಯಲ್ಲಿ ಹಬ್ಬ ಮಾಡಿದಷ್ಟೇ ಸಂತೋಷ. ಕಾರಣ ನಿಮಗೂ ಗೊತ್ತಿದೆ. ಹೌದು, ಇವತ್ತು ನಿಮ್ಮ ಅಚ್ಚುಮೆಚ್ಚಿನ ಪಬ್ಲಿಕ್ ಟಿವಿಗೆ ಹ್ಯಾಪಿ ಬರ್ತ್ ಡೇ.

    ಹನ್ನೊಂದರ ಗಡಿ ದಾಟಿ ಹನ್ನೆರಡರ ಹೊಸ್ತಿಲಿಗೆ ಕಾಲಿಟ್ಟ ಈ ಶುಭ ಘಳಿಗೆಗೆ ಇಡೀ ಪಬ್ಲಿಕ್ ಟಿವಿ ತಂಡ ಸಂಭ್ರಮಿಸುತ್ತದೆ. ಇಚ್ಛಾಶಕ್ತಿ, ದೃಢ ಸಂಕಲ್ಪ, ಹಠ-ಛಲವಿದ್ದರೆ ಬೆಟ್ಟವನ್ನೇ ಕುಟ್ಟಿ ಪುಡಿಗಟ್ಟಬಹುದು ಅಂತಾರೆ ಹಿರಿಯರು. ಪಬ್ಲಿಕ್ ಟಿವಿಯ ಆರೋಹಣದ ಹಿಂದೆಯೂ ಇಂಥದ್ದೇ ಸ್ಫೂರ್ತಿದಾಯಕ ಕಥೆಯಿದೆ. ಹೆಚ್.ಆರ್.ರಂಗನಾಥ್ ಅವರು ತಮ್ಮ ಪ್ರತಿಭೆ, ಸಾಮರ್ಥ್ಯವನ್ನೇ ಶಕ್ತಿಯಾಗಿಸಿ, ವೃತ್ತಿನಿಷ್ಠೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಕಟ್ಟಿದ ಹೆಮ್ಮೆಯ ಸುದ್ದಿ ಸಂಸ್ಥೆಯೇ ನಿಮ್ಮ ಪಬ್ಲಿಕ್ ಟಿವಿ.

    ನಾವು ಕ್ರಮಿಸಿದ ಹಾದಿ ಸುಲಭವಾಗಿರಲಿಲ್ಲ. ಅತ್ಯಂತ ಕಠಿಣ ಸವಾಲಿಗೆ ಸೈ ಎಂದು ಸ್ಥಿರ ಸಂಕಲ್ಪದೊಂದಿಗೆ, ಯಾವ ಮುಲಾಜಿಗೂ ಬೀಳದೆ, ಹಂತ ಹಂತವಾಗಿ ಬೆಳೆದಿದೆ ನಿಮ್ಮ ಪಬ್ಲಿಕ್ ಟಿವಿ. ಸಾಂಘಿಕ ಪರಿಶ್ರಮ ಹಾಗೂ ಕನ್ನಡಿಗರ ಬೆಂಬಲದಿಂದಾಗಿಯೇ ಇಂದು ಪಬ್ಲಿಕ್ ಟಿವಿ ಕರ್ನಾಟಕದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿ.

    ನೇರ ನುಡಿ, ನಿಖರ ಸುದ್ದಿ, ವಸ್ತುನಿಷ್ಠ ವಿಶ್ಲೇಷಣೆ, ಮತ್ತು ನಿಷ್ಪಕ್ಷಪಾತ ವರದಿಯಿಂದಲೇ ಮನೆ ಮಾತಾಗಿರುವ ಪಬ್ಲಿಕ್ ಟಿವಿಗೆ ಹೆಚ್.ಆರ್.ರಂಗನಾಥ್ ಅವರೇ ನಾಯಕ ಮತ್ತು ನಾವಿಕ. ಹೆಚ್.ಆರ್.ರಂಗನಾಥ್ ಸಾರಥ್ಯದ ಬಿಗ್ ಬುಲೆಟಿನ್ ದಶಕದಿಂದಲೂ ಕರ್ನಾಟಕದ ಮನೆ ಮಾತು.

    ವೀಕ್ಷಕರೇ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದಾ ಸಮಾಜಮುಖಿ ಹಾಗೂ ಸದುದ್ದೇಶಭರಿತ ಕಾರ್ಯಕ್ರಮ ಕೊಡೋದು ಪಬ್ಲಿಕ್ ಟಿವಿಯ ಧ್ಯೇಯ. ಪಬ್ಲಿಕ್ ಟಿವಿ ಈ ಹೆಬ್ಬಯಕೆ ಸಾಕಾರಗೊಳಿಸಿದ ಕಾರ್ಯಕ್ರಮ ಅಂದ್ರೆ ಅದು ಬೆಳಕು. ನೊಂದವರ ಕಣ್ಣೀರನ್ನು ಒರೆಸೋದಷ್ಟೇ ಅಲ್ಲ, ಅವರಿಗೆ ವಾಸ್ತವದಲ್ಲಿ ನೆರವಿನ ನೆಂಟನ ಪಾತ್ರ ವಹಿಸುವ ಅರ್ಥಪೂರ್ಣ ಕಾರ್ಯಕ್ರಮವಿದು.

    ಹಳೇ ಬೇರು ಹೊಸ ಚಿಗುರುಗಳೊಂದಿಗೆ ಸೇರಿ ಸೊಬಗಾದ ಹೆಮ್ಮರವಾಗಿ ಬೆಳೆದು ನಿಂತಿದೆ ಪಬ್ಲಿಕ್ ಟಿವಿ. ಮುಂಬರುವ ದಿನಗಳಲ್ಲೂ ಕನ್ನಡಿಗರ ಸುದ್ದಿದಾಹವನ್ನು ನಿತ್ಯ ತಣಿಸುವ ಕೆಲಸಕ್ಕೆ ಪಬ್ಲಿಕ್ ಟಿವಿ ಸದಾ ಕಟಿಬದ್ಧವಾಗಿದೆ. ಹನ್ನೊಂದು ವರ್ಷಗಳ ಕಾಲ ಸಕಲ ಪರಿಸ್ಥಿತಿಗಳಲ್ಲೂ, ಪಬ್ಲಿಕ್ ಟಿವಿಯ ಪಥಕ್ಕೆ ಪಥವಿಟ್ಟು ನಡೆದ ಕನ್ನಡಿಗರು, ಹನ್ನೆರಡನೇ ವರ್ಷದ ಪಯಣದಲ್ಲೂ ಮನಃಪೂರ್ವಕವಾಗಿ ಹಾರೈಸುತ್ತಾ ಜೊತೆಗಿರುವಿರೆಂದು ಭಾವಿಸುತ್ತೇವೆ. ನಮ್ಮ ಅನ್ನದಾತರಾದ ನಿಮ್ಮ ಪ್ರೀತಿ ಸಹಕಾರ ಹೀಗೇ ಮುಂದುವರಿಯಲಿ ಅಂತ ವಿನಮ್ರವಾಗಿ ಪ್ರಾರ್ಥಿಸುತ್ತೇವೆ. ಧನ್ಯವಾದ ಕರ್ನಾಟಕ..

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k