Tag: public tv

  • ಕಾಗೆ, ಗೂಬೆ ಆಯ್ತು, ಈಗ ಹಾವು: ವಿಧಾನಸೌಧದಲ್ಲಿ ಬುಸ್ ಎಂದ ನಾಗರಹಾವು

    ಬೆಂಗಳೂರು: ಕಾಗೆ ಆಯ್ತು, ಗೂಬೆ ಆಯ್ತು, ಈಗ ಹಾವಿನ ಸರದಿ. ವಿಧಾನಸೌಧದ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದೆ.

    ನಾರ್ಥ್ ಗೇಟ್‍ನ ಲಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಜನ ಸೇರಿದ ಕೂಡಲೇ ಹಾವು ಬಿಲದ ಒಳಗಡೆ ಸೇರಿಕೊಂಡಿತು.

    ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ಫಾರ್ಚುನರ್ ಕಾರು ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ಬಂದಿತ್ತು. ಈ ಮೂರು ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡುತ್ತಿದ್ದರು. ಈಗ ಈ ಚರ್ಚೆಗೆ ನಾಗರಹಾವು ವಿಷಯ ಹೊಸದಾಗಿ ಸೇರ್ಪಡೆಯಾಗಿದೆ.

    ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!

    https://www.youtube.com/watch?v=hbmbFBDlBsQ

    https://www.youtube.com/watch?v=7kkETPn6ThA

    https://www.youtube.com/watch?v=uuT-NXjnhhU

  • ಕೋಲಾರದ ಬರಡು ಭೂಮಿಯಲ್ಲೊಂದು ಸುಂದರ ಶೋ ಪ್ಲಾಂಟ್

    -ಯುವಕರಿಗೆ ಮಾದರಿಯಾಗಲಿದೆ ಶೋ ಪ್ಲಾಂಟ್ ಉದ್ಯಮ

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿ ಜಯರಾಮಪ್ಪರವರು ಬರದ ನಾಡು ಕೋಲಾರ ಜಿಲ್ಲೆಯಲ್ಲಿ ತಮ್ಮ ಕನಸಿನ ಸುಂದರ ಶೋ ಪ್ಲಾಂಟ್ ನಿರ್ಮಾಣ ಮಾಡಿದ್ದಾರೆ.

    ಬೃಹತ್ ನಗರಗಳಲ್ಲಿ ಸಿರಿವಂತರ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಂದದ ಗಿಡಗಳು, ಪಾರ್ಕ್‍ಗೆ ಹೋದಾಗ ಮನಸ್ಸಿಗೆ ನೆಮ್ಮದಿ ನೀಡುವ ಅಪರೂಪದ ಸಸ್ಯರಾಶಿಗಳನ್ನು ಜಯರಾಮಪ್ಪ ಅವರು ಮೂರು ದಶಕಗಳಿಂದಲೂ ಬೆಳೆಸುತ್ತಾ ಬಂದಿದ್ದಾರೆ. ಜಯರಾಮಪ್ಪರವರು ಕಳೆದ 28 ವರ್ಷಗಳ ಹಿಂದೆ ತಮ್ಮ 13 ಎಕರೆ ಭೂಮಿಯಲ್ಲಿ ನಗರಗಳಲ್ಲಿ ಬಹು ಬೇಡಿಕೆಯ ಅಲಂಕಾರಿಕ ಗಿಡಗಳನ್ನು ಬೆಳೆಸಲು ಆರಂಭಿಸಿದ್ದರು.

    ಅಲಂಕಾರಿಕ ಗಿಡಗಳಾದ ಕ್ರೋಟಾನ್, ಡೈಪನ್‍ಬೈಕ್ಯಾ, ಅಲ್ಯೂಮಿನಿಯಂ ಪ್ಲಾಂಟ್, ಎಲಿಫೆಂಟ್ ಹಿಯರ್, ಹೀಗೆ ಐವತ್ತಕ್ಕೂ ಹೆಚ್ಚು ಬಗೆಯ ಅಲಂಕಾರಿಕಾ ಗಿಡಗಳನ್ನ ತಮ್ಮ ನರ್ಸರಿ ಯಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿಯ ಅಲಂಕಾರಿಕ ಗಿಡಗಳನ್ನು ಬೆಂಗಳೂರು, ಚೆನೈ, ಹೈದರಾಬಾದ್, ನಾಸಿಕ್, ಬಾಂಬೆ, ದೆಹಲಿ ಸೇರಿದಂತೆ ಹಲವೆಡೆ ಈ ಶೋ ಪ್ಲಾಂಟ್‍ಗಳನ್ನು ಕಳಿಸಿಕೊಡಲಾಗುತ್ತದೆ.

    ಇಂತಹ ಅಲಂಕಾರಿಕ ಗಿಡಗಳಿಗೆ ಕೇವಲ ಮನೆಗಳಲ್ಲಷ್ಟೇ ಅಲ್ಲಾ, ಪಾರ್ಕ್‍ಗಳಲ್ಲಷ್ಟೇ ಅಲ್ಲಾ, ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡಾ ಬೇಡಿಕೆ ಇದೆ. ಕೇವಲ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಪರಿಸರ ನಾಶವಾಗಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಿರ್ಮಾಣವಾಗಿರುವ ಈ ಕಾಲದಲ್ಲಿ ಇವುಗು ನೆಮ್ಮದಿಯ ಉಸಿರು ನೀಡಬಲ್ಲವು. ಈ ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಮ ನಿಜಕ್ಕೂ ಅದಾಯ ತರುವಂತದ್ದಾಗಿದೆ.

  • ಆಸ್ಪತ್ರೆಗೆ ಸೇರಿಸಿ ಎಂದು ಕೇಳಿಕೊಂಡ್ರು ಜನ ವಿಡಿಯೋ ಮಾಡೋದ್ರಲ್ಲಿ ಬ್ಯುಸಿಯಾಗಿದ್ರು!

    ಯಾದಗಿರಿ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚಿದ್ರೂ ಯಾರೊಬ್ಬರೂ ಸಹಾಯಕ್ಕೆ ಬರದೇ ಕೆಲ ಕಾಲ ರಸ್ತೆಯಲ್ಲೇ ಪರದಾಡಿದ ಮತ್ತೊಂದು ಅಮಾನವೀಯ ಘಟನೆ ಬುಧವಾರ ರಾತ್ರಿ ನಗರದ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ.

    ಬುರಾನ್ ಗಾಯಗೊಂಡ ಬೈಕ್ ಸವಾರ. ಬೈಕ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬುರಾನ್ ತನ್ನನ್ನು ಆಸ್ಪತ್ರೆಗೆ ಸೇರಿಸಿ ಅಂತಾ ಪರಿಪರಿಯಾಗಿ ಬೇಡಿಕೊಂಡ್ರೂ ಯಾರೊಬ್ಬರೂ ಆತನ ಹತ್ತಿರ ಸುಳಿಯದೆ ಫೋಟೋ ಮತ್ತು ವಿಡಿಯೋ ತೆಗೆಯುದರಲ್ಲಿ ನಿರತರಾಗಿದ್ದರು.

    ಕೊನೆಗೆ ತಡವಾಗಿ ಬಂದ ಅಂಬುಲೆನ್ಸ್ ನಲ್ಲಿ ಗಾಯಾಳು ಬುರಾನ್‍ನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಘಟನೆಯಿಂದ ಗಂಭೀರ ಗಾಯಗೊಂಡ ಬುರಾನನ್ನು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಯಾದಗಿರಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಕೊಪ್ಪಳದಲ್ಲಿ ಬುಧವಾರ ಮಧ್ಯಾಹ್ನವಷ್ಟೇ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ರೂ ಫೋಟೋ, ವೀಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿ ಯಾರೋಬ್ಬರೂ ಆತನ ಸಹಾಯಕ್ಕೆ ಬರದೆ ಮೃತಪಟ್ಟ ಘಟನೆ ಸುದ್ದಿಯಾದ ಬೆನ್ನಲ್ಲೇ ಇದೀಗ ಯಾದಗಿರಿಯಲ್ಲಿ ಜನ ಅಮಾನವೀಯತೆ ಮೆರೆದ ದುರಂತವೊಂದು ಬೆಳಕಿಗೆ ಬಂದಿದೆ

    ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಯುವಕನಿಗೆ ಯಾರೂ ಸಹಾಯ ಮಾಡಲಿಲ್ಲ!

     

  • 5000 ರೂ.ಗೆ ಓಕೆ ಆಗಿತ್ತು, 10 ಸಾವಿರ ಕೇಳಿದ್ದಕ್ಕೆ ಕೊಂದೆ ಬಿಟ್ಟ!

    ಬೆಂಗಳೂರು: ನಗರದ ಕೊತ್ತನೂರಿನ ತಿಮ್ಮೇಗೌಡ ಲೇಔಟ್‍ನಲ್ಲಿ ವಿದೇಶಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಮಧ್ಯರಾತ್ರಿ ಗಂಟೆಗೆ ನಡೆದಿದೆ.

    ಹಿಮಾಚಲ ಪ್ರದೇಶದ ಮೂಲದ ಇಶಾನ್ ಕೊಲೆಗೈದ ಆರೋಪಿಯಾಗಿದ್ದು, ನಕಾಯಕಿ ಪ್ಲೋರೆನ್ಸ್ (25) ಕೊಲೆಯಾದ ಉಗಾಂಡ ಮೂಲದ ಮಹಿಳೆ.

    ಏನಿದು ಪ್ರಕರಣ?: ನಕಾಯಕಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಪ್ಲೋರೆನ್ಸ್ ನಗರದ ತಿಮ್ಮೇಗೌಡ ಲೇಔಟ್‍ನಲ್ಲಿ ವನಜಮ್ಮ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಶಾನ್ ಕೂಡ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ.

    ಇಶಾನ್ ಬುಧವಾರ ರಾತ್ರಿ ನಕಾಯಕಿ ಪ್ಲೋರೆನ್ಸ್‍ಳನ್ನು 5000 ರೂ. ಒಪ್ಪಂದ ಮಾಡಿಕೊಂಡು ಎಂಜಿ ರೋಡ್‍ನಿಂದ ಪಿಕ್ ಮಾಡಿದ್ದಾನೆ. ಒಪ್ಪಂದಂತೆ ಇಬ್ರೂ ಪ್ಲೋರೆನ್ಸ್ ವಾಸವಿದ್ದ ಮನೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ನಕಾಯಕಿ 10 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇಶಾನ್ ಹಣ ಕೊಡದೇ ಇದ್ದಾಗ ಚಾಕುವಿನಿಂದ ಅವನ ಹಲ್ಲೆ ನಡೆಸಿದ್ದಾಳೆ. ಒಬ್ಬರ ಮೇಲೆ ಒಬ್ಬರು ಹಲ್ಲೆಗೆ ಪ್ರತಿ ಹಲ್ಲೆ ನಡೆಸುವಾಗ ಗಾಬರಿಗೊಂಡ ಇಶಾನ್ ಅದೇ ಚಾಕುವಿನಿಂದ ಪ್ಲೋರೆನ್ಸ್ ಳನ್ನು ಕೊಲೆ ಮಾಡಿದ್ದಾನೆ.

    ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಶಾನ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು ಮತ್ತು ಶ್ವಾನದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ತನಿಖೆಗೆ ತೆರಳಿದ್ದ ಇನ್ಸ್ ಪೆಕ್ಟರ್ ಅಂಜನ್ ಕುಮಾರ್ ಮೇಲೆ ಉಗಾಂಡ ಮೂಲದ ಜನರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.

  • ಫಲಾನುಭವಿಯೊಬ್ಬರ ಮೀಸೆ ತಿರುವಿ ಸಂತೋಷ ಪಟ್ಟ ಸಿಎಂ

    ಮೈಸೂರು:  ಸಿಎಂ ಸಿದ್ದಾಮಯ್ಯ ಫಲಾನುಭವಿಯೊಬ್ಬರ ಮೀಸೆಯನ್ನು ತಿರುವಿ ಸಂತೋಷಪಟ್ಟಿದ್ದಾರೆ.

    ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆದಿವಾಸಿಗಳಿಗೆ ಸವಲತ್ತು ವಿತರಣಾ ಬೃಹತ್ ಸಮಾವೇಶ ಬುಧವಾರ ನಡೆಯಿತು.

    ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಗ, ಜೇನುಕುರುಬ, ಮಲೆಕುಡಿಯ, ಕೊರಗ, ಸಿದ್ಧಿ ಸೇರಿದಂತೆ 13 ಆದಿವಾಸಿ ಸಮುದಾಯದ ಜನರಿಗೆ ಪೌಷ್ಠಿಕ ಆಹಾರ ಸೇರಿದಂತೆ ಮೊದಲಾದ ಸವಲತ್ತುಗಳನ್ನು ವಿತರಿಸಿದರು.

    ಈ ವೇಳೆ ಹಕ್ಕು ಪತ್ರ ಪಡೆಯಲು ಬಂದಿದ್ದ ಫಲಾನುಭವಿಯೊಬ್ಬರ ಮೀಸೆಯನ್ನು ಸಿಎಂ ತಿರುವಿದರು. ಸಚಿವ ಹೆಚ್.ಆಂಜನೇಯ, ಡಾ.ಹೆಚ್.ಸಿ.ಮಹದೇವಪ್ಪ, ರಮಾನಾಥ ರೈ ಹಾಗೂ ತನ್ವೀರ್ ಸೇಠ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಮಣ್ಣಲ್ಲಿ ಮಣ್ಣಾದ ಹಾಸನದ ವೀರ ಯೋಧ ಸಂದೀಪ್ ಶೆಟ್ಟಿ

    ಹಾಸನ: ವೀರಯೋಧ ಸಂದೀಪ್ ಪಾರ್ಥಿವ ಶರೀರ ಇಂದು ಮಣ್ಣಲ್ಲಿ ಮಣ್ಣಾಗಿದೆ. ಸ್ವಗ್ರಾಮ ದೇವಿಹಳ್ಳಿಯಲ್ಲಿ ಅಗಲಿದ ವೀರ ಯೋಧನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.

    ವೀರಯೋಧ ಸಂದೀಪ್ ಶೆಟ್ಟಿ 18ನೇ ಗುಜರಾತ್ ರೆಜಿಮೆಂಟ್‍ಗೆ ಸೇರಿದವರು. ಜನವರಿ 25ರಂದು ಕಾಶ್ಮೀರದ ಬಳಿಯ ಗುರೆಜ್ ಕ್ಯಾಂಪನಲ್ಲಿ ಹಿಮಪಾತಕ್ಕೆ ಸಿಲುಕಿ ಹಿಮರಾಶಿಯಲ್ಲಿ ಹುದುಗಿ ಹೋಗಿದ್ದರು. ಮೃತದೇಹವನ್ನ ಪತ್ತೆ ಮಾಡಿದ್ದರೂ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲು ಸರಿಯಾಗಿ 7 ದಿನಗಳೇ ಬೇಕಾಯಿತು. ಇದಕ್ಕೆ ಅಲ್ಲಿಯ ಹವಾಮಾನದ ವೈಪರಿತ್ಯ ಅಡ್ಡಿಯಾಗಿತ್ತು. ಮಂಗಳವಾರ ದೆಹಲಿಯಿಂದ ಹೊರಟು ಬೆಂಗಳೂರಿನ ಮೂಲಕ ಹಾಸನಕ್ಕೆ ಮಧ್ಯರಾತ್ರಿ ಪಾರ್ಥಿವ ಶರೀರವನ್ನ ತರಲಾಗಿತ್ತು.

    ವೀರ ಯೋಧನ ಪಾರ್ಥಿವ ಶರೀರವನ್ನ ಇಂದು ಮುಂಜಾನೆ 8ಗಂಟೆಯಿಂದ 10 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಇಡಲಾಗಿತ್ತು. ನಂತ್ರ 10.30ಕ್ಕೆ ಮೃತದೇಹವನ್ನು ಹೇಮಾವತಿ ಪ್ರತಿಮೆ ಮಾರ್ಗವಾಗಿ ಬಿ.ಎಸ್.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಸ್ವಗ್ರಾಮ ದೇವಿಹಳ್ಳಿಗೆ ತರಲಾಯ್ತು. ಈ ವೇಳೆ ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ವೀರಯೋಧನಿಗೆ ಅಮರ್ ರಹೇ ಸಂದೀಪ್ ಶೆಟ್ಟಿ ಎನ್ನುವ ಜಯ ಘೋಷದ ಮೂಲಕ ನಮನ ಸಲ್ಲಿಸಿದ್ರೆ, ಸಾವಿರಾರು ಮಂದಿ ಅಂತ್ಯಸಂಸ್ಕಾರದ ಸಮಯದಲ್ಲಿ ಸಾಕ್ಷಿಯಾಗಿದ್ರು.

    ನಿಂತಲ್ಲೇ ಕುಸಿದ ಸಂದೀಪ್ ತಾಯಿ: ಸಂದೀಪ್ ಅಂತ್ಯ ಸಂಸ್ಕಾರದ ವೇಳೆಯಲ್ಲಿ ತಾಯಿ ಗಂಗಮ್ಮ ಕುಸಿದು ಹೋದರು. ಮಗನ ಸಾವಿನ ಸುದ್ದಿ ತಿಳಿದ ಕ್ಷಣದಿಂದ ಸರಿಯಾಗಿ ಆಹಾರ ಸೇವಿಸಿರದ ಕಾರಣ ನಿಶ್ಯಕ್ತಿಯಿಂದ ಕುಸಿದು ಬಿದ್ದರು. ಪ್ರಥಮ ಚಿಕಿತ್ಸೆಯ ನಂತರ ಗಂಗಮ ಚೇತರಿಸಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸ್ಥಳೀಯ ಶಾಸಕ ಎಚ್.ಎಸ್.ಪ್ರಕಾಶ್, ಎಚ್.ಡಿ.ರೇವಣ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಪಾರ್ಥಿವ ಶರೀರಕ್ಕೆ ಪುಪ್ಪಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ರು. ಕಳೆದ ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಪಾರ್ಥೀವ ಶರೀರದೊಂದಿಗೆ ಸೇನಾ ಅಧಿಕಾರಿಗಳ ತಂಡವೂ ಬಂದಿತ್ತು. ಆರ್ಮಿ ಸರ್ವಿಸ್ ಕೋರ್ಸ್ ನ 35 ಮಂದಿ ಯೋಧರು ಅಂತ್ಯ ಸಂಸ್ಕಾರ ಮುಗಿಯುವರೆಗೂ ತಮ್ಮ ಕಾರ್ಯವನ್ನು ನಿರ್ವಹಸಿದರು.

    ಮದ್ಯಾಹ್ನ ಸರಿಯಾಗಿ 3 ಗಂಟೆಗೆ ಸೇನೆಯ ಯೋಧರು 21 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ನಂತರ ನಡೆದ ಅಂತಿಮ ವಿಧಿವಿಧಾನವನ್ನು ದೇವಾಂಗ ಸಂಪ್ರದಾಯದಂತೆ ನೆರವೇರಿತು.

    ದೇವಿಹಳ್ಳಿ ಗ್ರಾಮದ ಪುಟ್ಟರಾಜ್ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ ಸಂದೀಪ್. ತಂದೆ-ತಾಯಿ, ಬಂಧು ಬಳಗ, ಸ್ನೇಹಿತರನ್ನೆಲ್ಲ ಅಗಲಿದ ವೀರ ಯೋಧ ದೇಶಕ್ಕಾಗಿ ತನ್ನ ಪ್ರಾಣ ಅರ್ಪಿಸಿದ್ದಾನೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧನಿಗೆ ಒಂದು ಸಲಾಂ.

     

  • ಪೊಲೀಸ್ ಇನ್ಸ್ ಪೆಕ್ಟರ್‍ಗೆ ನ್ಯಾಯಾಂಗ ಬಂಧನ: ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ಆದೇಶ

    – ಕೋರ್ಟ್ ನಿಂದ ಜಾಮೀನು ಮಂಜೂರು

    ಬಳ್ಳಾರಿ: ಕಳ್ಳರನ್ನು ಜೈಲಿಗೆ ಕಳುಹಿಸೋದು ಪೊಲೀಸರ ಕೆಲಸ. ಆದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ.

    ಬಳ್ಳಾರಿಯ ಕೌಲ್‍ಬಜಾರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಆರೋಪಿಯೊಬ್ಬರಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ನ್ಯಾಯಾಲಯ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನೆ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿತ್ತು.

    ಏನಿದು ಪ್ರಕರಣ?:
    ನಗರದ ಕೌಲ್‍ಬಜಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 36/2010 ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಸಾದ್ ಎನ್ನುವವರಿಗೆ ವಾರೆಂಟ್ ಜಾರಿ ಮಾಡಿತ್ತು. ಅಲ್ಲದೇ ಪ್ರಕರಣ ಆರೋಪಿಯಾಗಿರುವ ದಾದಾಪೀರ್ ಎಂಬುವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ನೀಡಿತ್ತು. ಆದರೆ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಕಳೆದ ತಿಂಗಳು ಕಾನ್ ಸ್ಟೇಬಲ್ ಒಬ್ಬರನ್ನು ಕಳಹಿಸಿ ನ್ಯಾಯಾಲಯದ ಸೂಚನೆಯನ್ನು ನಿರ್ಲಕ್ಷಿಸಿದ್ದರು.

    ಬುಧವಾರ ನ್ಯಾಯಾಲಯದ ಮುಂದೆ ಶಫಿವುಲ್ಲಾ ಹಾಜರಾಗಿದ್ದರು. ಈ ವೇಳೆಯಲ್ಲಿ ಆರೋಪಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ಶಫಿವುಲ್ಲಾಗೆ ಛೀಮಾರಿ ಹಾಕಿದ ನ್ಯಾಯಾಧೀಶರು ಪಿಐಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶ ಮಾಡಿದೆ. ಅಲ್ಲದೇ ಎಸ್‍ಪಿ ಆರ್.ಚೇತನ್ ಅವರಿಗೂ ಸಹ ನೋಟಿಸ್ ಜಾರಿ ಮಾಡಿ ವಿವರಣೆ ಕೋರಿದೆ.

    ನ್ಯಾಯಾಂಗ ವಶಕ್ಕೆ ನೀಡುತ್ತಿದಂತೆ ಶಫಿವುಲ್ಲಾ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿ, ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.

     

  • ನಾವು ಮುಂದೆ ಮುಂದೆ ಸಾಗುತ್ತೇವೆ, ನೀವೂ ಜೊತೆಗೆ ಬನ್ನಿ ಅಂತಾ ಕವಿತೆ ಹೇಳಿದ್ರು ಜೇಟ್ಲಿ!

    ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ ಭಾಷಣದಲ್ಲಿ ಕವಿತೆಗಳನ್ನೂ ಸೇರಿಸಿಕೊಂಡಿದ್ದರು. ಕೆಲವು ಕವನಗಳನ್ನು ಬಳಸಿ ವಿಪಕ್ಷಗಳನ್ನು ಕಾಲೆಳೆದ ಪ್ರಸಂಗವೂ ನಡೆಯಿತು.

    ನೋಟ್ ಬ್ಯಾನ್ ಹಾಗೂ ಡಿಜಿಟಲ್ ಪೇಮೆಂಟ್ ಬಗ್ಗೆ ಬಜೆಟ್‍ನಲ್ಲಿ ಉಲ್ಲೇಖಿಸಿದ ಜೇಟ್ಲಿ, ಹಿಂದಿ ಕವನದ ಸಾಲುಗಳನ್ನು ವಾಚಿಸಿದಾಗ ಲೋಕಸಭಾ ಸದಸ್ಯರು ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು.

    ಇಸ್ ಮೋಡ್ ಪರ್ ಗಬರಾಕರ್ ಥಮ್ ಜಾಯಿಯೇ ಆಪ್| ಜೋ ಬಾತ್ ನಯೀ ಹೈ ಉಸೇ ಅಪ್‍ನಾಯಿಯೇ ಆಪ್| ಡರ್‍ತೇ ಹೈ ನಯೀ ರಾಹ್ ಪೇ ಕ್ಯೂ ಚಲ್ ನೇ ಸೇ| ಹಮ್ ಆಗೇ ಆಗೇ ಚಲ್ತೇ ಹೈ, ಆಯಿಯೇ ಆಪ್
    (ಅರ್ಥ: ನೀವು ಇಂಥಾ ಪರಿಸ್ಥಿತಿ ಬಂದಾಗ ಹೆದರಬೇಡಿ, ಹೊಸತನ್ನು ನೀವು ನಿಮ್ಮದಾಗಿಸಿಕೊಳ್ಳಿ. ಹೊಸ ದಾರಿಯಲ್ಲಿ ನಡೆಯಲು ನಿಮಗೆ ಹೆದರಿಕೆ ಏಕೆ, ನಾವು ಮುಂದೆ ಮುಂದೆ ಸಾಗುತ್ತೇವೆ, ನೀವೂ ನಮ್ಮ ಜೊತೆಗೆ ಬನ್ನಿ)

    ಈ ಸಾಲುಗಳು ನೋಟು ರದ್ದತಿ ನಿರ್ಧಾರವನ್ನು ವಿರೋಧಿಸಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟಂತಿತ್ತು.

    ಇದಾದ ಬಳಿಕ ಬಜೆಟಲ್ಲಿ ತೆರಿಗೆ ಬಗ್ಗೆ ಪ್ರಸ್ತಾಪಿಸುತ್ತಾ ಮತ್ತೊಂದು ಕವಿತೆಯನ್ನು ಜೇಟ್ಲಿ ಹೇಳಿದರು.

    ನಯೀ ದುನಿಯಾ ಹೈ, ನಯಾ ದೌರ್ ಹೈ, ನಯೀ ಹೈ ಉಮಂಗ್| ಕುಚ್ ಥೆ ಪೆಹಲೇ ಕೆ ತರೀಕೆ, ತೋ ಕುಚ್ ಹೈ ಆಜ್ ಕೆ ಡಂಗ್ | ರೋಶನಿ ಆಕೆ ಅಂಧೇರೋಂ ಸೇ ಜೊ ಟಕರಾಯೀ ಹೈ| ಕಾಲೇ ಧನ್ ಕೋ ಭೀ ಬದಲ್ನಾ ಪಡಾ, ಆಜ್ ಅಪ್‍ನಾ ರಂಗ್||

    (ಅರ್ಥ: ಇದೊಂದು ಹೊಸ ಲೋಕ, ಹೊಸ ನಡೆ, ಹೊಸ ಉತ್ಸಾಹ. ಕೆಲವು ಹಳೇ ರೀತಿಗಳಿದ್ದವು, ಇನ್ನು ಕೆಲವು ಈಗಿನ ಹೊಸ ರೀತಿಗಳಾಗಿವೆ. ಹೊಸ ಬೆಳಕೊಂದು ಬಂದು ಕತ್ತಲನ್ನು ಬಡಿದಾಗ, ಕಪ್ಪು ಹಣಕ್ಕೂ ಕೂಡಾ ತನ್ನ ಬಣ್ಣ ಬದಲಾಯಿಸಬೇಕಾಗಿ ಬಂತು).

    2017ರ ಬಜೆಟ್‍ನಲ್ಲಿ 2 ಬಾರಿ ಕವನ ವಾಚಿಸಿದ ಅರುಣ್ ಜೇಟ್ಲಿ ಈ ರೀತಿ ಕವನ ವಾಚನ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಬಜೆಟ್ ಭಾಷಣ ಮಾಡುವಾಗಲೂ ಅವರು ಕವನ ವಾಚನ ಮಾಡಿದ್ದರು.

  • ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ? ಎಷ್ಟು ಕಂಪೆನಿಗಳು ಆದಾಯ ತೋರಿಸಿವೆ?

    ನವದೆಹಲಿ: ದೇಶದಲ್ಲಿ ಸಂಘಟಿತ ವಲಯದಲ್ಲಿ 4.2 ಕೋಟಿ ಉದ್ಯೋಗಿಗಳಿದ್ದು, ಇವರಲ್ಲಿ 1.74 ಕೋಟಿ ಮಂದಿ ವೇತನ ಆಧಾರಿತ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ. ವ್ಯಕ್ತಿಗತ/ಸಂಸ್ಥೆಯ ರೂಪದಲ್ಲಿ 5.6 ಕೋಟಿ ಸಣ್ಣ ಉದ್ದಿಮೆಗಳಿದ್ದು, ಇದರಲ್ಲಿ 1.81 ಕೋಟಿ ಮಂದಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಮಾರ್ಚ್ 2014ರವರೆಗೆ 13.94 ಲಕ್ಷ ಕಂಪೆನಿಗಳು ನೋಂದಣಿಯಾಗಿದ್ದು, ಇದರಲ್ಲಿ 5.97 ಲಕ್ಷ ಕಂಪೆನಿಗಳು ತೆರಿಗೆಯನ್ನು ಪಾವತಿ ಮಾಡಿವೆ. 2.76 ಲಕ್ಷ ಕಂಪೆನಿಗಳು ನಷ್ಟ ಅಥವಾ ಶೂನ್ಯ ಆದಾಯ ತೋರಿಸಿವೆ. 2.85 ಲಕ್ಷ ಕಂಪನಿಗಳು 1 ಕೋಟಿ ರೂ.ಗಿಂತಲೂ ಕಡಿಮೆ ಆದಾಯ ತೋರಿಸಿದರೆ, 28,667 ಕಂಪೆನಿಗಳು 1 ಕೋಟಿಯಿಂದ 10 ಕೋಟಿ ರೂ. ಲಾಭ ತೋರಿಸಿವೆ. 7,781 ಕಂಪೆನಿಗಳು 10 ಕೋಟಿ ರೂ.ಗೂ ಅಧಿಕ ಲಾಭವಿದೆ ಎಂದು ತೋರಿಸಿವೆ.

    3.7 ಕೋಟಿ ಜನ ತೆರಿಗೆ ಮಾಹಿತಿ ಸಲ್ಲಿಸಿದ್ದು, 99 ಲಕ್ಷ ಜನ 2.50 ಲಕ್ಷ ರೂ.ಗಿಂತ ಕಡಿಮೆ ಆದಾಯ ತೋರಿಸಿದ್ದಾರೆ. 1.95 ಕೋಟಿ ಮಂದಿ  2.50 ಲಕ್ಷ ರೂ. – 5 ಲಕ್ಷ ರೂ ಆದಾಯ ತೋರಿಸಿದರೆ, 52 ಲಕ್ಷ ಮಂದಿ 5 ಲಕ್ಷ – 10 ಲಕ್ಷ ರೂ. ಆದಾಯ ತೋರಿಸಿದ್ದಾರೆ. 24 ಲಕ್ಷ ಮಂದಿ ತಮ್ಮ ಬಳಿ 10 ಲಕ್ಷ ರೂ.ಗಿಂತ ಅಧಿಕ ಆದಾಯವಿದೆ ಎಂದು ಪ್ರಕಟಿಸಿದ್ದಾರೆ.

    76 ಲಕ್ಷ ಮಂದಿ 5 ಲಕ್ಷ ಆದಾಯ ತೋರಿಸಿದ್ದು, ಇವರಲ್ಲಿ 56 ಲಕ್ಷ ವೇತನದಾರರು ಇದ್ದಾರೆ. 1.72 ಲಕ್ಷ ಮಂದಿ 50 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿದ್ದಾರೆ.

    ನ.8ರಿಂದ ಡಿ.30ರವರೆಗೆ 1.09 ಕೋಟಿ ಖಾತೆಗಳಲ್ಲಿ 2 ಲಕ್ಷದಿಂದ 80 ಲಕ್ಷ ರೂ.ವರೆಗೆ ಜಮೆಯಾಗಿದೆ. ಈ ಖಾತೆಗಳಲ್ಲಿ ಸರಾಸರಿ ಜಮೆ 5.03 ಲಕ್ಷ ರೂಪಾಯಿ ಆಗಿದೆ. 1.48 ಲಕ್ಷ ಖಾತೆಗಳಲ್ಲಿ ತಲಾ 80 ಲಕ್ಷ ರೂ.ಗಿಂತ ಅಧಿಕ ಮೊತ್ತ ಜಮೆಯಾಗಿದ್ದು, ಈ ಖಾತೆಗಳಲ್ಲಿ ಸರಾಸರಿ ಜಮೆ 3.31 ಕೋಟಿ ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ 1.25 ಕೋಟಿ ಕಾರು ಮಾರಾಟವಾಗಿದೆ ಎನ್ನುವ ಅಂಶ ಬಜೆಟ್‍ನಲ್ಲಿದೆ.

  • ವೀಡಿಯೋ: ಕಿಂಗ್ ಕೋಬ್ರಾದಿಂದ ಮಹಿಳೆಯನ್ನ ಬಚಾವ್ ಮಾಡಿದ ನಾಯಿಗಳು

    ಬ್ಯಾಂಕಾಕ್: 3-4 ನಾಯಿಗಳ ಗುಂಪು ಸೇರಿಕೊಂಡು ದೈತ್ಯ ಹಾವನ್ನ ಬಾಯಲ್ಲಿ ಎಳೆದಾಡಿ ಮಹಿಳೆಯನ್ನ ಅದರಿಂದ ಪಾರು ಮಾಡಿರೋ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    8 ಅಡಿ ಉದ್ದದ ದೈತ್ಯ ಕಿಂಗ್ ಕೋಬ್ರಾ ಮೇಲೆ ನಾಯಿಗಳು ದಾಳಿ ಮಾಡಿ ವಿಷಕಾರಿ ಹಾವನ್ನ ಬಾಯಲ್ಲಿ ಎಳೆದಾಡೋದನ್ನ ವೀಡಿಯೋದಲ್ಲಿ ನೋಡಬಹುದು.

    ಕೆಲ ಹೊತ್ತಿನ ಬಳಿಕ ಹಾವು ಅಲ್ಲಿಂದ ಹೊರಟುಹೋಗಿದ್ದು ನಾಯಿಗಳಿಗೆ ಯಾವುದೇ ಹಾನಿಯಾಗಿಲ್ಲ. ಮಹಿಳೆ ಈ ದೃಶ್ಯಗಳನ್ನ ವೀಡಿಯೋ ಮಾಡಿದ್ದು, ಒಂದು ವೇಳೆ ಹಾವಿನಿಂದ ನಾಯಿಗೆ ಅಪಾಯವಾಗಿದ್ರೆ ಪಶುವೈದ್ಯರ ನಂಬರ್ ಇದೆ, ಕೂಡಲೇ ಬರುತ್ತಿದ್ದರು ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    https://www.youtube.com/watch?v=l2GjddNvDAc