Tag: public tv

  • ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

    ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

    ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

    ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.

  • ವೀಡಿಯೋ: 2 ಬೈಕ್ ಮುಖಾಮುಖಿ ಡಿಕ್ಕಿ- ಓರ್ವ ಸವಾರ ಸಜೀವ ದಹನ!

    ವಿಜಯಪುರ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಸ್ತೆ ಮಧ್ಯದಲ್ಲೆ ಬೈಕ್ ಸವಾರ ಸಜೀವ ದಹನವಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ನಡೆದಿದೆ.

    ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 50 ವರ್ಷದ ರಮೇಶ ಸಿದ್ದಪ್ಪ ಕಾಂಬಳೆ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಇನ್ನೊರ್ವ ಬೈಕ್ ಸವಾರ ಪ್ರಕಾಶ ಚವ್ಹಾಣ ಕಾಲಿಗೆ ಬೆಂಕಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

    ರಮೇಶ್ ಬೈಕ್‍ನಲ್ಲಿ ಸೀಮೆಎಣ್ಣೆ ತುಂಬಿದ ಡಬ್ಬಿ ಇಟ್ಟಕೊಂಡಿದ್ರು. ಇದ್ರಿಂದ ಅಪಘಾತದ ವೇಳೆ ಸೀಮೆಎಣ್ಣೆಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

    https://www.youtube.com/watch?v=umDpZG14lsE&feature=youtu.be

     

  • ಮಹಿಳಾ ಮೀಸಲಾತಿ ವಿಚಾರವಾಗಿ ಹೊತ್ತಿ ಉರಿದ ನಾಗಾಲ್ಯಾಂಡ್- ಸರ್ಕಾರಿ ಕಚೇರಿಗಳಿಗೆ ಬೆಂಕಿ

    ಕೊಹಿಮಾ: ನಾಗಾಲ್ಯಾಂಡ್‍ನಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

    ಸರ್ಕಾರಿ ಕಚೇರಿಗಳು ವಾಹನಗಳಿಗೆ ಜನ ಬೆಂಕಿಹಚ್ಚಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಗೋಲಿಬಾರ್ ಮಾಡಿದ್ದು ಎರಡು ದಿನಗಳ ಹಿಂದೆ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ನಾಗಾಲ್ಯಾಂಡ್‍ನಲ್ಲಿ ಧೀಮ್‍ಪುರ್‍ನಲ್ಲಿ ಇಂಥದ್ದೊಂದು ದುರ್ಘಟನೆ ನಡೆದುಹೋಗಿದೆ.

    ಸಂವಿಧಾನದ ಅನುಸೂಚಿ 371(ಎ) ಅನ್ವಯ ಸಾಂಪ್ರದಾಯಿಕ ಕಾನೂನುಗಳನ್ನು ಅನುಸರಿಸಲು ನಮಗೆ ಹಕ್ಕಿದೆ. ನಮ್ಮ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ರಾಜಕೀಯ ಹಕ್ಕು ಕೊಡುವುದಿಲ್ಲ. ಅವರು ಚುನಾವಣೆಗಳಲ್ಲಿ ಭಾಗವಹಿಸಲು ಆಕ್ಷೇಪವಿಲ್ಲ. ಆದರೆ ಯಾವುದೇ ಮೀಸಲಾತಿ ನೀಡಬಾರದು. ಇದರಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಅಂತ ಬುಡಕಟ್ಟು ಜನಾಂಗದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪುರಸಭೆ ಕಚೇರಿ, ಸಾರಿಗೆ ಕಚೇರಿ, ಡೆಪ್ಯೂಟಿ ಕಮೀಷನರ್ ಕಚೇರಿ, ಪ್ರೆಸ್ ಕ್ಲಬ್, ಸರ್ಕಾರಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಳೆದ ಬುಧವಾರ 12 ಟೌನ್‍ಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದ ವೇಳೆ ಮಹಿಳೆಯರಿಗೆ ಮೀಸಲಾತಿ ನೀಡುವವರೆಗೂ ಚುನಾವಣೆ ರದ್ದು ಮಾಡಬೇಕು ಅಂತ ಆಗ್ರಹಿಸಿದ್ರು. ಗೋಲಿಬಾರ್ ಖಂಡಿಸಿ ಸಿಎಂ ಟಿ.ಆರ್.ಜೀಲಿಯಾಂಗ್ ಗುರುವಾರ ಸಂಜೆ 4 ಗಂಟೆಯೊಳಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಸಿಎಂ ರಾಜೀನಾಮೆ ನೀಡದ ಕಾರಣ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಬೀದಿಗಿಳಿದ ಪ್ರತಿಭಟನಕಾರರು ರೊಚ್ಚಿಗೆದ್ದು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಾಕಿದ್ದಾರೆ.

    ಇದ್ರಿಂದ 2 ತಿಂಗಳ ಮಟ್ಟಿಗೆ ಚುನಾವಣೆಯನ್ನ ಸರ್ಕಾರ ಮುಂದೂಡಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನಾಪಡೆಗಳನ್ನ ನಿಯೋಜಿಸಲಾಗಿದೆ.

  • ಚೀನಾದಿಂದ 10 ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆ

    ಬೀಜಿಂಗ್: ನೆರೆಯ ದೇಶ ಚೀನಾ, ಪರಮಾಣು ಕ್ಷಿಪಣಿ ಪರೀಕ್ಷೆ ಮಾಡಿದೆ. 10 ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯಬಲ್ಲ ಡಿಎಫ್ – 5ಸಿ ಕ್ಷಿಪಣಿಯನ್ನ ಚೀನಾ ಪರೀಕ್ಷೆ ಮಾಡಿದೆ.

    ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಶುರುವಾದ ತಕ್ಷಣ ಕಳೆದ ತಿಂಗಳು, ಚೀನಾದ ಶಾಂಕ್ಷಿ ಪ್ರಾಂತ್ಯದ ತೈಯುವಾನ್ ಬಾಹ್ಯಾಕಾಶ ಉಡವಾಣಾ ಕೇಂದ್ರದಲ್ಲಿ ಡೊಂಗ್‍ಫೆಂಗ್ – 5ಸಿ ಕ್ಷಿಪಣಿಯಲ್ಲಿ ಡಮ್ಮಿ ಪರಮಾಣು ಸಿಡಿತಲೆಗಳನ್ನ ಪರೀಕ್ಷೆ ಮಾಡಿದೆ ಅಂತ ಅಮೆರಿಕಾ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.

    ವ್ಯಾಪಾರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ನೆಲೆಯ ವಿಚಾರದಲ್ಲಿ ಟ್ರಂಪ್ ಚೀನಾ ವಿರುದ್ಧ ಕಠಿಣ ನಿಲುವು ತಳೆಯಬಹುದು ಎಂಬ ಸಂಕೇತ ಬರುವಾಗಲೇ ಚೀನಾ ಈ ಪರೀಕ್ಷೆ ನಡೆಸಿದೆ. ಸದ್ಯ ಚೀನಾ ಬಳಿ 250ರಷ್ಟು ಪರಮಾಣು ಬಲ ಇರೋದಾಗಿ ಅಮೆರಿಕಾ ಅಂದಾಜಿಸಿದೆ.

    ಈ ನಡುವೆ ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿರೋ ಉಗ್ರ ಹಫೀಜ್ ಸಯೀದ್‍ನನ್ನ ನಿರ್ಗಮ ನಿಯಂತ್ರಣ ಪಟ್ಟಿಗೆ ಸೇರ್ಪಡೆ ಮಾಡಿದೆ. ದೇಶ ಬಿಟ್ಟು ತೆರಳದಂತೆ ತಡೆದಿರೋ ಈ ಕಾನೂನಿನಿಂದ ಇತರೆ ಉಗ್ರರಿಗೂ ಶಾಕ್ ಆಗಿದೆ.

  • ನೆರೆಮನೆಯಾತ ಮಾಡಿದ್ದಕ್ಕೆ, ನನಗೂ ಗೃಹಪ್ರವೇಶದಂದು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆಗೆ ಅನುಮತಿ ನೀಡಿ

    – ವರ್ತೂರು ವ್ಯಕ್ತಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ

    ಬೆಂಗಳೂರು: ಕೊಲೆ, ಮಾನನಷ್ಟ, ಜಮೀನು ವಿವಾದ ಇತ್ಯಾದಿ ವಿಚಾರಗಳಿಗೆ ಸಂಬಂಧ ಪಟ್ಟ ಕೇಸ್‍ಗಳು ನ್ಯಾಯಾಲಯಕ್ಕೆ ಬರುವುದು ಸಾಮಾನ್ಯ. ಆದರೆ ಮನೆಯ ಗೃಹ ಪ್ರವೇಶದಂದು ಹೆಲಿಕಾಪ್ಟರ್‍ನಿಂದ ಪುಷ್ಪಾರ್ಚನೆ ನಡೆಸಲು ನಾನು ಮುಂದಾಗಿದ್ದು, ಅನುಮತಿ ನೀಡಬೇಕು ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಮುನಿರಾಜು ಎಂಬವರು ವರ್ತೂರಿನಲ್ಲಿ ಮನೆ ಕಟ್ಟಿಸಿದ್ದು, ಮನೆಯ ಗೃಹಪ್ರವೇಶ ಸಮಾರಂಭ ಫೆ.9ರಂದು ನಡೆಯಲಿದೆ. ಈ ಗೃಹಪ್ರವೇಶ ಸಮಾರಂಭಕ್ಕೆ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಪೊಲೀಸರಲ್ಲಿ ಅನುಮತಿ ಕೇಳಿದ್ದಾರೆ. ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ ನೀಡದ್ದಕ್ಕೆ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

    ಇಂದು ಅರ್ಜಿ ವಿಚಾರಣೆ ವೇಳೆ ಮುನೀರಾಜು ಪರ ವಕೀಲರು, ಪಕ್ಕದ ಮನೆಯ ನಿವಾಸಿಯೊಬ್ಬರು ಗೃಹಪ್ರವೇಶ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಿದ್ದಾರೆ. ಹೀಗಾಗಿ ಮುನಿರಾಜು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪುಷ್ಪಾರ್ಚನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಆದ್ರೆ ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಅರ್ಜಿದಾರನನ್ನು, ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ನಡೆಸಲು ಹೈಕೋರ್ಟಿಗೆ ಬರಬೇಕೇ? ಪಕ್ಕದ ಮನೆಯವನು ಮಾಡುತ್ತಾನೆ ಎಂದು ನೀವು ಆತನನ್ನು ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಷ್ಟೇ ಅಲ್ಲದೇ ಈ ರೀತಿ ಹಣ ಪೋಲು ಮಾಡುವ ಬದಲು ಬಡವರಿಗೆ ನೆರವಾಗಬಹುದಲ್ಲವೇ? ಮುಂಬೈ ಶ್ರೀಮಂತರೊಬ್ಬರು ಮಗಳ ಅದ್ಧೂರಿ ಮದುವೆ ಬದಲು ಮನೆಯನ್ನು ಹಂಚಿದ್ದಾರೆ. ಬಡವರಿಗಾಗಿ ನಾರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ನೀವು ಯಾಕೆ ಆ ರೀತಿ ಮಾಡಬಾರದು. ಒಣ ಆಡಂಬರ ಯಾಕೆ ಬೇಕು ಎಂದು ಪ್ರಶ್ನಿಸಿದರು.

    ನ್ಯಾಯಾಧೀಶರು ಉದಾಹರಣೆಯೊಂದಿಗೆ ಸಲಹೆ ನೀಡಿದರೂ ಅರ್ಜಿದಾರರಾದ ಮುನಿರಾಜು ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಹೀಗಾಗಿ ನ್ಯಾಯಾಧೀಶರು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಅನುಮತಿ ನೀಡಲು ಕಾನೂನು ಬದ್ಧ ಹಕ್ಕು ಇದೆಯೇ? ಇದರ ಬಗ್ಗೆ ನಿಲುವು ಏನು ಎಂದು ಸರ್ಕಾರಿ ವಕೀಲರಿಗೆ ಪ್ರಶ್ನಿಸಿ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.

  • ಹಸೆಮಣೆಯಿಂದ ಸೆರೆಮನೆಗೆ: ಬಾಲೆಗೆ ತಾಳಿ ಕಟ್ಟಿದ ಗಂಡ ಜೈಲು ಕಂಡ

    ಶಿವಮೊಗ್ಗ: ಮಧು ಮಗಳಿಗೆ ತಾಳಿ ಕಟ್ಟಿದ ಗಂಡು ಹಸೆಮಣೆಯಿಂದ ಸೀದಾ ಸೆರೆಮನೆ ಸೇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಶರಾವತಿ ನಗರದ ಯೋಗೀಶ್ ಪಾಂಡಿಯನ್ ಹೀಗೆ ಹಸೆಮಣೆಯಿಂದ ಸೆರೆಮನೆ ಕಂಡ ಮಧುಮಗ. ಅಪ್ರಾಪ್ತೆಗೆ ತಾಳಿ ಕಟ್ಟಿದ್ದೇ ಇವನು ಮಾಡಿದ ಅಪರಾಧ.

    ಶಿವಮೊಗ್ಗದ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮದುವೆಯಲ್ಲಿ ವಧು ಇನ್ನೂ ಅಪ್ರಾಪ್ತೆ ಎಂಬ ಮಾಹಿತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಸೋಮಶೇಖರ ಬಾದಾಮಿ ಅವರಿಗೆ ಬಂದಿತ್ತು. ತಕ್ಷಣವೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸಮೇತ ಕಲ್ಯಾಣ ಮಂಟಪಕ್ಕೆ ಧಾವಿಸಿದರು. ಇವರು ಹೋದಾಗ ಮುಹೂರ್ತಕ್ಕೆ ಇನ್ನೂ ಅರ್ಧಗಂಟೆ ಬಾಕಿ ಇತ್ತು.

    ವಧೂ-ವರರ ಪೋಷಕರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಿದ ನ್ಯಾಯಾಧೀಶರು, ಈ ರೀತಿ ಬಾಲ್ಯ ವಿವಾಹ ಕಾನೂನು ಬಾಹಿರ ಎಂದು ತಿಳವಳಿಕೆ ಹೇಳಿದರು. ಇತ್ತ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಅತ್ತ ಕೆಲ ಸಂಬಂಧಿಗಳು ವರನಿಗೆ ಉತ್ಸಾಹ ತುಂಬಿ, ತಾಳಿ ಕಟ್ಟು.. ಕಟ್ಟು ಎಂದರು. ಅವರ ಮಾತು ಕೇಳಿ ವರ ಮಹಾಶಯ ತಾಳಿ ಕಟ್ಟೇ ಬಿಟ್ಟ, ತಕ್ಷಣವೇ ಅಲ್ಲಿದ್ದವರು ಚಪ್ಪಾಳೆ ತಟ್ಟಿ, ಅಕ್ಷತೆ ಹಾಕಿದರು. ಈ ಎಲ್ಲಾ ಘಟನೆಗಳೂ ನ್ಯಾಯಾಧೀಶರ ಜೊತೆ ಹೋಗಿದ್ದ ತಂಡದಲ್ಲಿದ್ದ ಹಲವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದರು.

    ನ್ಯಾಯಾಧೀಶರು ತಕ್ಷಣವೇ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ತಾವೇ ಸ್ಥಳದಲ್ಲಿ ಹಾಜರಿದ್ದು, ವರನನ್ನು ಬಂಧಿಸುವಂತೆ ಆದೇಶಿಸಿದರು. ವರನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನಿಗೆ ಸೆರೆಮನೆ ದಾರಿ ತೋರಿದರು. ವಧುವನ್ನು ಸುರಭಿ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಯಿತು. ಮದುವೆ ಮಾಡಿಸಿ, ಓಡಿ ಹೋಗಲು ಯತ್ನಿಸಿದ ಪುರೋಹಿತ, ಕಲ್ಯಾಣ ಮಂಟಪದ ವ್ಯವಸ್ಥಾಪಕ ಹಾಗೂ ಸಂಬಂಧಿಗಳು ಸೇರಿ ಒಟ್ಟು ಹದಿನೈದು ಜನರನ್ನು ಬಂಧಿಸಲಾಗಿದೆ.

    ನಾಗರಿಕರ ಶ್ಲಾಘನೆ: ಬಾಲಕಿಯನ್ನು ಮದುವೆ ಆಗಲು ಹೋಗಿ ಜೈಲುಪಾಲಾದ ಈ ಘಟನೆ ಜಿಲ್ಲಾದ್ಯಂತ ತೀವ್ರ ಚರ್ಚಾಸ್ಪದ ವಿಷಯವಾಗಿದೆ. ನ್ಯಾಯಾಧೀಶರೊಬ್ಬರು ಬಾಲ್ಯ ವಿವಾಹ ತಡೆಗಟ್ಟಲು ತಾವೆ ಸ್ವತಃ ಕಲ್ಯಾಣ ಮಂಟಪಕ್ಕೆ ಹೋಗಿದ್ದು ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಹೀಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನ್ಯಾಯಾಧೀಶ ಸೋಮಶೇಖರ್ ಬಾದಾಮಿ ಅವರ ಕೆಲಸಕ್ಕೆ ನಾಗರಿಕರಿಂದ ಶ್ಲಾಘನೆ ದೊರಕಿದೆ.

    ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ, ನಮ್ಮ ಉದ್ದೇಶ ಇದು ಆಗಿರಲಿಲ್ಲ. ಅವರಲ್ಲಿ ತಿಳವಳಿಕೆ ಮೂಡಿಸಿ, ಮದುವೆ ಮುಂದೂಡಲು ಯತ್ನಿಸಿದೆವು. ಆದರೆ, ಕಣ್ಣೆದುರೇ ಕಾನೂನು ಭಂಗ ಆಗಿದ್ದು ಸಹಿಸಲಾಗಲಿಲ್ಲ. ಈ ಪ್ರಕರಣಕ್ಕೆ ನಾನೇ ಮುಖ್ಯ ಸಾಕ್ಷಿಯಾಗಿ ನಿಲ್ಲುವನಿದ್ದೇನೆ ಎಂದು ನ್ಯಾಯಾಧೀಶ ಸೋಮಶೇಖರ ಬಾದಾಮಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಗ್ರಾಮೀಣ ಪ್ರದೇಶದವರಿಗೆ ಕಾನೂನಿನ ಅರಿವು ಇರೊಲ್ಲ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಆದರೆ ನಗರ ಪ್ರದೇಶದಲ್ಲೇ ಬಾಲ್ಯ ವಿವಾಹ ನಡೆದಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಇನ್ನಷ್ಟು ಜನಜಾಗೃತಿ ಅಗತ್ಯ ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಶಿವನಗೌಡ ನಾಯಿಕ್ ಅವರು ಹೇಳಿದ್ದಾರೆ.

  • 5 ಸಾವಿರ ಸಾಲ ಹಿಂದಿರುಗಿಸದ್ದಕ್ಕೆ ಗೆಳಯನನ್ನೆ ಕೊಂದ!

    ಧಾರವಾಡ: ಕೇವಲ 5 ಸಾವಿರ ಸಾಲ ವಾಪಸ್ ಮಾಡಲಿಲ್ಲ ಎಂದು ತನ್ನ ಗೆಳೆಯನಿಗೆ ಇನ್ನಿಬ್ಬರು ಗೆಳೆಯರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ಮಧ್ಯರಾತ್ರಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಬಸವರಾಜ್ ಹೊಸಕೇರಿ (28) ತನ್ನ ಗೆಳೆಯರಿಂದ ಕೊಲೆಯಾದ ವ್ಯಕ್ತಿ. ಅಲ್ತಾಫ್ ನದಾಫ್ ಮತ್ತು ಶಂಕರಪ್ಪ ಇಬ್ಬರೂ ಸೇರಿ ಬಸವರಾಜ್‍ನ ಕೊಲೆ ಮಾಡಿರುವ ಆರೋಪಿಗಳು. ಬುಧವಾರ ರಾತ್ರಿ ಬಸವರಾಜ್ ಹಾಗೂ ಅಲ್ತಾಫ್ ನದಾಫ್ ಮತ್ತು ಶಂಕ್ರಪ್ಪ ಸೇರಿ ಮದ್ಯವನ್ನ ಕುಡಿದಿದ್ದಾರೆ.

    ಆರೋಪಿ ಅಲ್ತಾಫ್‍

    ಬಾರ್‍ವೊಂದರಲ್ಲಿ ಮದ್ಯ ಕುಡಿದು ಬಸವರಾಜನ ಮನೆಗೆ ಬಂದು ಅಲ್ಲಿ ಕುಡಿದಿದ್ದಾರೆ. ಈ ವೇಳೆ ಅಲ್ತಾಫ್, ಗೆಳೆಯ ಬಸವರಾಜನಿಗೆ ತನ್ನ 5 ಸಾವಿರ ರೂಪಾಯಿ ಸಾಲ ವಾಪಸ್ ನೀಡಲು ಒತ್ತಾಯಿಸಿದ್ದಾನೆ. ಹಣದ ವಿಚಾರವಾಗಿ ಅಲ್ತಾಫ್ ಮತ್ತು ಬಸವರಾಜನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗುತ್ತಿದ್ದಂತೆಯೇ ಶಂಕ್ರಪ್ಪ ಬಸವರಾಜನ ಕೈಗಳನ್ನ ಹಿಡಿದುಕೊಂಡಿದ್ದಾನೆ. ಈ ವೇಳೆ ಅಲ್ತಾಫ್ ದೊಣ್ಣೆಯಿಂದ ಹೊಡೆದು ಬಸವರಾಜನನ್ನು ಕೊಲೆ ಮಾಡಿದ್ದಾನೆ.

    ಬಸವರಾಜ್ ಹೊಸಕೇರಿ

    ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಅಲ್ತಾಫ್‍ ಮತ್ತು ಶಂಕ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

  • ಪಾಕಿಸ್ತಾನ ಸೇರಿ 5 ಮುಸ್ಲಿಂ ರಾಷ್ಟ್ರಗಳಿಗೆ ಇನ್ನು ಮುಂದೆ ಕುವೈತ್ ವೀಸಾ ಸಿಗಲ್ಲ

    ಕುವೈತ್: ಅಮೆರಿಕ 7 ಮುಸ್ಲಿಮ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿರ್ಬಂಧಿಸಿದ ಬೆನ್ನಲ್ಲೇ ಈಗ ಕುವೈತ್ ಪಾಕಿಸ್ತಾನ ಸೇರಿದಂತೆ 5 ರಾಷ್ಟ್ರದ ಪ್ರಜೆಗಳಿಗೆ ವೀಸಾ ನಿರ್ಬಂಧಿಸಿ ಆದೇಶ ಹೊರಡಿಸಿದೆ.

    ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ಥಾನ ಮತ್ತು ಇರಾನ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡದೇ ಇರಲು ಕುವೈತ್ ನಿರ್ಧರಿಸಿದೆ. ಇಸ್ಲಾಮಿಕ್ ಉಗ್ರಗಾಮಿಗಳ ವಲಸೆ ತಡೆಯಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ಸ್ಪುಟ್ನಿಕ್ ಇಂಟರ್‍ನ್ಯಾಷನಲ್ ವರದಿ ಮಾಡಿದೆ.

    ಟ್ರಂಪ್ ಆಡಳಿತಕ್ಕೂ ಬರುವ ಮೊದಲೇ ಸಿರಿಯಾ ನಾಗರೀಕರ ಪ್ರವೇಶಕ್ಕೆ ಕುವೈತ್ ದೇಶ ನಿರ್ಬಂಧ ಹಾಕಿತ್ತು. 2011 ರಲ್ಲೇ ಎಲ್ಲ ಸಿರಿಯನ್ ಪ್ರಜೆಗಳ ವೀಸಾಗಳನ್ನು ಕುವೈತ್ ನಗರ ಅಮಾನತಿನಲ್ಲಿಟ್ಟಿತ್ತು.

    2015 ರಲ್ಲಿ ಶಿಯಾ ಮಸೀದಿಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 27 ಕುವೈತ್ ಪ್ರಜೆಗಳು ಮೃತಪಟ್ಟಿದ್ದರು.

    ಇರಾಕ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್ ದೇಶದ ಜನರ ಅಮೆರಿಕ ಪ್ರವೇಶವನ್ನು ನಿರ್ಬಂಧಿಸುವ ಯೋಜನೆಗೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಭಯೋತ್ಪಾಕರಿಗೆ ಆಶ್ರಯ ನೀಡುತ್ತಿರುವ ಇನ್ನಷ್ಟು ದೇಶಗಳಿಗೆ ಈ ನಿರ್ಬಂಧ ಹೇರುವ ಸಾಧ್ಯತೆಯಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದರು.

  • ಒಂದೇ ಕಲ್ಲಿನಲ್ಲಿ ಎರಡು ಪ್ರಕರಣಗಳನ್ನು ಹೊಡೆದುರುಳಿಸಿದ ಉಡುಪಿ ಪೊಲೀಸ್

    ಉಡುಪಿ: ಒಂದೇ ರಾತ್ರಿ ನಡೆದ ಎರಡು ಪ್ರಕರಣಗಳನ್ನು ಒಂದೇ ಕಲ್ಲಿನಲ್ಲಿ ಪೊಲೀಸರು ಹೊಡೆದು ಉರುಳಿಸಿದ್ದಾರೆ. ಕೋಮು ಸೂಕ್ಷ್ಮ ಪ್ರಕರಣವನ್ನು ಎರಡು ದಿನಗಳ ಒಳಗೆ ಭೇದಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಹನೀಫ್ ಮರ್ಡರ್ ಮತ್ತು ಆದಿ ಉಡುಪಿ ಮಸೀದಿ ಕಲ್ಲೆಸೆದ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ.

    ಜನವರಿ 29 ರಂದು ಆದಿ ಉಡುಪಿಯ ನೂರಾಲ್ ಮಸೀದಿಗೆ ರಾತ್ರಿ 12 ಗಂಟೆಯ ನಂತರ ಕಲ್ಲು ಬಿದ್ದಿತ್ತು. ದುಷ್ಕರ್ಮಿಯೊಬ್ಬ ಮಸೀದಿಗೆ ಕಲ್ಲೆಸೆದು ಪರಾರಿಯಾಗಿದ್ದ. ಇದಾಗಿ ಮುಕ್ಕಾಲು ಗಂಟೆಯೊಳಗೆ ಕರಾವಳಿ ಬೈಪಾಸಿನಲ್ಲಿ ಒಂದು ಕೊಲೆಯಾಗಿತ್ತು. ಮತ್ತೊಂದು ಕೊಲೆಯತ್ನ ನಡೆದಿತ್ತು. ಎರಡೂ ಘಟನೆಗಳು ನಡೆದದ್ದು ಜನವರಿ 29ರಂದು. ಎರಡೂ ಪ್ರಕರಣದಲ್ಲಿ ಆರೋಪಿ ಪರಾರಿಯಾಗಿದ್ದ.

    ಆರೋಪಿ ಅಂಕಿತ್ ಕುಂಪಲ

    ಹೈವೇ ಗಲಾಟೆಯಲ್ಲಿ ಆಟೋ ಚಾಲಕ ಹನೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಎರಡೂ ಘಟನೆಗಳು ಕೋಮು ಸೂಕ್ಷ್ಮವಾಗಿದ್ದರಿಂದ ಪೊಲೀಸರು ರಾತ್ರೋ ರಾತ್ರಿ ಕಾರ್ಯಪ್ರವೃತ್ತರಾಗಿದ್ದರು. ಘಟನೆ ನಡೆದು 48 ಗಂಟೆಗಳ ಒಳಗೆ ಎರಡೂ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಂಕಿತ್ ಕುಂಪಲ ಎಂಬತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲು ಮಸೀದಿಗೆ ಕಲ್ಲೆಸೆದು ನಂತರ ಆರೋ ಚಾಲಕನ ಜೊತೆ ಜಗಳವಾಡಿ ತನ್ನ ಜೊತೆಯಲ್ಲಿದ್ದ ಚಾಕುವಿನಿಂದ ಇರಿದಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಉಡುಪಿಯಲ್ಲಿ ಎಎಸ್‍ಪಿ ವಿಷ್ಣುವರ್ಧನ್ ಪ್ರೆಸ್ ಮೀಟ್ ಮಾಡಿದರು.

    ಮೊದಲು ಮಸೀದಿಗೆ ಕಲ್ಲೆಸೆದು ಅಂಕಿತ್ ತನ್ನ ಸ್ಟಾರ್ ಸಿಟಿ ಬೈಕ್‍ನಲ್ಲಿ ಪರಾರಿಯಾಗಿದ್ದ. ಅಲ್ಲಿಂದ ಹೈವೇಗೆ ಬಂದಾಗ ಅಲ್ಲಿ ಆಟೋ ವನ್ ವೇಯಲ್ಲಿ ಬಂದಿದೆ. ಬೈಕ್ ಅಡ್ಡಗಟ್ಟಿ ಚಾಲಕನ ಜೊತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಅಂಕಿತ್ ಹನೀಫ್‍ಗೆ ಇರಿದಿದ್ದ. ಜಗಳ ಬಿಡಿಸಲು ಬಂದ ಹನೀಫ್ ಸಂಬಂಧಿ ಶಬ್ಬೀರ್‍ಗೂ ಚೂರಿ ಅಂಕಿತ್ ಇರಿದು ಪರಾರಿಯಾಗಿದ್ದ.

    ಆರೋಪಿ ಅಂಕಿತ್ ಕುಂಪಲ

    ಎರಡೂ ಪ್ರಕರಣಗಳಿಗೆ ತಲಾ ನಾಲ್ಕು ತಂಡಗಳನ್ನು ಪೊಲೀಸರು ರಚನೆ ಮಾಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಮಾಹಿತಿಗಳು ಸಿಗಲಾರಂಬಿಸಿತು. ಅಂಕಿತ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕೇಸುಗಳಿವೆ. ಉಳ್ಳಾಲದಲ್ಲಿ ಮಸೀದಿಗೆ ಕಲ್ಲೆಸೆತ, ಗುಂಪು ಘರ್ಷಣೆಯಲ್ಲಿ ಅಂಕಿತ್ ಫೇಮಸ್ ಆಗಿದ್ದನಂತೆ. ಗುಂಪು ಗಲಾಟೆಗಳು ಜಾಸ್ತಿಯಾದಾಗ ತನ್ನ ಮನೆಯಿಂದ ದೊಡ್ಡಮ್ಮನ ಉಡುಪಿಯ ಮನೆಗೆ ಬಂದಿದ್ದ ಎನ್ನಲಾಗಿದೆ. ಇಲ್ಲೂ ತನ್ನ ಕೂಟವನ್ನು ಬೆಳೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಸೀದಿಗೆ ಕಲ್ಲೆಸೆದ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರಿಗೆ ಮರ್ಡರ್ ಆರೋಪಿಯೂ ಸಿಕ್ಕಿಬಿದ್ದ. ಈ ಮೂಲಕ ಪ್ರಕರಣ ಕೋಮುಸೂಕ್ಷ್ಮತೆಯತ್ತ ವಾಲುವ ಮೊದಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಪತ್ತೆಯ ಜವಾಬ್ದಾರಿಯನ್ನು ಉಡುಪಿ ಡಿವೈಎಸ್‍ಪಿ ಕುಮಾರಸ್ವಾಮಿ ಮತ್ತು ಟೀಂ ಹೊತ್ತಿತ್ತು. ಉಡುಪಿ ನಗರ, ಬ್ರಹ್ಮಾವರ ಡಿಸಿಐಬಿ, ಮಣಿಪಾಲ ಪೊಲೀಸರು ಸಾಥ್ ಕೊಟ್ಟಿದ್ದಾಗಿ ಎಎಸ್‍ಪಿ ವಿಷ್ಣುವರ್ಧನ್ ಹೇಳಿದರು.

  • ಕೊಲೆಗೈದು ಪತಿ ದೇಹವನ್ನು ರೈಲ್ವೇ ಹಳಿಗೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ ಅರೆಸ್ಟ್

    ಬೆಳಗಾವಿ: ಗೋಕಾಕ್ ತಾಲೂಕಿನ ಮಮದಾಪುರದಲ್ಲಿ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ರೈಲ್ವೇ ಹಳಿ ಮೇಲೆ ಬಿಸಾಡಿದ್ದ ಪ್ರಕರಣವನ್ನು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಅನೈತಿಕ ಸಂಬಂಧ ಅಡ್ಡಿಪಡಿಸಿದಕ್ಕೆ ಪತಿಯನ್ನೆ ಪತ್ನಿ ಕೊಲ್ಲಿಸಿದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.

    ಆರೋಪಿ ಮಾರುತಿ ಮತ್ತು ದುಂಡಪ್ಪ

    ಪರಸಪ್ಪ ಮ್ಯಾಳೆಗೋಳ ಪತ್ನಿಯಿಂದಲೇ ಕೊಲೆಗೀಡಾದ ದುರ್ದೈವಿ. ಪರಸ್ಪರ ಪತ್ನಿ ಪಾರ್ವತಿ ಗ್ರಾಮದ ಮಾರುತಿ ಬೆಕ್ಕೆರಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಪಾರ್ವತಿ ಆಗಲೇ ತನ್ನ ಗಂಡನಿಗೆ ಗತಿ ಕಾಣಿಸಿಬೇಕೆಂದು ಪ್ರಿಯತಮ ಮಾರುತಿ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ.

    ಏನದು ಮಾಸ್ಟರ್ ಪ್ಲಾನ್?:
    ಜನವರಿ 21 ರಂದು ಪರಸಪ್ಪನನ್ನು ಪಾರ್ವತಿಯ ಪ್ರಿಯಕರ ಮಾರುತಿ ಹಾಗೂ ಸ್ನೇಹಿತರು ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸುತ್ತಾರೆ. ನಂತರ ಚಿಕ್ಕೋಡಿ ರೈಲ್ವೆ ಗೇಟ್‍ನ ಹತ್ತಿರ ಕರೆದುಕೊಂಡು ಬಂದು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡುತ್ತಾರೆ. ನಂತರ ಕೊಲೆಯನ್ನು ಮುಚ್ಚಿಹಾಕಲು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವವನ್ನು ರೈಲು ಹಳಿಗಳ ಮೇಲೆ ಬಿಸಾಡಿ ಹೋಗುತ್ತಾರೆ.

    ಸಂಶಯ ಮೂಡಿದ್ದು ಹೇಗೆ?
    ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಲ್ಲಡೆ ಸುದ್ದಿ ಆಗುತ್ತದೆ. ಆದರೆ ಮೃತ ಪರಸಪ್ಪರ ಸೋದರನ ಮಗ ದುಂಡಪ್ಪ ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ಜನವರ 27ರಂದು ರೈಲ್ವೆ ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರಿಗೂ ಸಹ ಅಸಹಜ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿರುತ್ತದೆ. ಸತ್ತಾಗ ಬಿದ್ದ ರಕ್ತದ ಕಲೆ, ಚಪ್ಪಲಿ ಹಾಗೂ ಮೃತ ದೇಹ ಬಿದ್ದಿರುವ ಸ್ಥಿತಿಯನ್ನು ಕಂಡು ಪೊಲೀಸರು ಸಹ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬಂದು ತನಿಖೆ ಆರಂಭಿಸುತ್ತಾರೆ.

    ಆರೋಪಿಗಳು ಸೆರೆಯಾಗಿದ್ದು ಹೇಗೆ?
    ಕೊಲೆ ನಡೆದ ಸ್ಥಳದ ಟವರ್ ಮಾಹಿತಿಯನ್ನು ಕಲೆ ಹಾಕಿದಾಗ ಪೊಲೀಸರಿಗೆ ಆರೋಪಿ ಮಾರುತಿ ಬೆಕ್ಕೇರಿ ಫೋನ್ ನಂಬರ್ ಸಿಗುತ್ತದೆ. ಅಷ್ಟೇ ಅಲ್ಲ ಮಾರುತಿ ಜತೆಗೆ ಮೃತನ ಹೆಂಡತಿ ಪಾರ್ವತಿ ನಿರಂತರ ಸಂಪರ್ಕದಲ್ಲಿರುವುದು ಪೊಲೀಸರಿಗೆ ಗೊತ್ತಾಗುತ್ತದೆ. ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿದಾಗಿ ಕೊಲೆ ಮಾಡಿರುವುದು ತಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

    ಪರಸಪ್ಪ ಪತ್ನಿ ಪಾರ್ವತಿ, ಪ್ರಿಯಕರ ಮಾರುತಿ ಬೆಕ್ಕರಿ ಮತ್ತು ಕೊಲೆಗೆ ಸಹಾಯ ಮಾಡಿದ್ದ ದುಂಡಪ್ಪ ಗೋಟುರು ಮೂವರನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.