Tag: Public TV 12th Anniversary

  • ಪಬ್ಲಿಕ್‌ ಟಿವಿಗೆ 12 ರ ಸಂಭ್ರಮ – Photo Gallery

    ಪಬ್ಲಿಕ್‌ ಟಿವಿಗೆ 12 ರ ಸಂಭ್ರಮ – Photo Gallery

    ನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ‘ಪಬ್ಲಿಕ್‌ ಟಿವಿ’ಯ 12ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ 6 ರ ಸಂಭ್ರಮ. ಈ ಅಮೂಲ್ಯ ಕ್ಷಣವನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ ಇಂದು (ಸೋಮವಾರ) ಬೆಂಗಳೂರಿನ ಕಚೇರಿಯಲ್ಲಿ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಲಾಯಿತು.

    ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ನವರತ್ನಗಳನ್ನು ಸನ್ಮಾನಿಸಲಾಯಿತು. ಈ ಸಾಧಕರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಸನ್ಮಾನಿಸಿದರು. ಇದೇ ವೇಳೆ, ಪಬ್ಲಿಕ್‌ ಟಿವಿ ಸಿಇಒ ಅರುಣ್, ಸಿಓಓ ಸಿ.ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು.

    ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾಗಲು ಕಾನೂನಾತ್ಮಕ ಗೆಲುವಿಗೆ ಮೊದಲ ಅಡಿಪಾಯ ಹಾಕಿದ ಹೆಮ್ಮೆಯ ಕನ್ನಡಿಗ, ಹಿರಿಯ ನ್ಯಾಯವಾದಿ ಕೆ.ಎನ್.ಭಟ್‌. ದೇಶದೆಲ್ಲೆಡೆ ಸುತ್ತಿ, ಶ್ರೀರಾಮ ಜನಿಸಿದ ಅಯೋಧ್ಯೆ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಭಗವಾನ್‌ ಶ್ರೀರಾಮನ ಪರ ವಾದ ಮಂಡಿಸಿದ್ದರು. ಅಯೋಧ್ಯೆಯೇ ಶ್ರೀರಾಮ ಜನ್ಮಸ್ಥಾನ ಎಂದು ಕಾನೂನಾತ್ಮಕವಾಗಿ ಜಯ ಸಿಕ್ಕಲು ಇದೇ ಮೊದಲ ಮೆಟ್ಟಿಲಾಯಿತು. ಸಾಧಕ ಕೆ.ಎನ್.ಭಟ್‌ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

    ಕೋಟಿ ಕೋಟಿ ರಾಮಭಕ್ತರು ಬಯಸಿದ, ಕಾತರಿಸಿದ ಕ್ಷಣವೆಂದರೆ ಬಾಲಕರಾಮನ ವಿಗ್ರಹವನ್ನು ಕಣ್ತುಂಬಿಕೊಳ್ಳುವುದು. ಕನ್ನಡಿಗನ ಕೈಯಲ್ಲರಳಿದ ಬಾಲಕರಾಮನೇ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಆ ಮೂರ್ತಿ ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌. ಇವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಗೌರವಿಸಲಾಯಿತು.

    ಅಯೋಧ್ಯೆ ಬಾಲರಾಮನ ವಿಗ್ರಹ ಸಾಕ್ಷಾತ್ಕಾರಕ್ಕೆ ಮೈಸೂರಿನ ಹಾರೋಹಳ್ಳಿಯ ರಾಮದಾಸ್‌ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆ ಕಾರಣ. ಶಿಲೆ ಸಿಕ್ಕ ಜಮೀನನ್ನು ರಾಮಮಂದಿರ ನಿರ್ಮಾಣಕ್ಕೆ ರಾಮದಾಸ್‌ ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರನ್ನೂ ಪಬ್ಲಿಕ್‌ ಟಿವಿ ವತಿಯಿಂದ ಅಭಿನಂದಿಸಲಾಯಿತು.

    ರಾಮಲಲ್ಲಾ ಮೂರ್ತಿ ಕೆತ್ತಲು ಇಡೀ ದೇಶದಲ್ಲಿ ಕೇವಲ 3 ಶಿಲ್ಪಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅವರಲ್ಲಿ ಇಡಗುಂಜಿ ಮೂಲದ ಗಣೇಶ್‌ ಭಟ್‌ ಅಪೂರ್ವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇವರ ಕೈಯಲ್ಲೂ ರಾಮಲಲ್ಲಾ ಸುಂದರ ಮೂರ್ತಿ ಅರಳಿ ನಿಂತಿದೆ. ಗಣೇಶ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು.

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.. ಈ ಹಾಡಿನ ಸಾಲು ರಾಮಭಕ್ತರ ಹೃದಯಕ್ಕೆ ಹತ್ತಿರವಾಗಿದೆ. ಈ ಹಾಡು ಬರೆದವರು ನಮ್ಮ ಕರುನಾಡಿನ ಸಾಗರ ಮೂಲದ ಗಜಾನನ ಶರ್ಮಾ. ಇವರಿಗೂ ಅಭಿನಂದನೆ ಸಲ್ಲಿಸಲಾಯಿತು.

    ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ನಿರ್ದೇಶಕರು ಹೆಚ್‌.ಎಸ್.ವೆಂಕಟೇಶ್‌ ಹಾಗೂ ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರ ತಂಡವನ್ನು ಸ್ಮರಿಸಲೇಬೇಕು. ಮಂದಿರ ನಿರ್ಮಾಣದ ಅಡಿಪಾಯದಿಂದ ಹಿಡಿದು ಕೆತ್ತನೆಯವರೆಗೂ ಎಲ್ಲಾ ಕಲ್ಲುಗಳ ಗುಣಮಟ್ಟ ವಿಶ್ಲೇಷಣೆ ಮಾಡಿದರು. ಅಲ್ಲದೇ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿರುವ ಶಿಲೆಯನ್ನೂ ಇವರೇ ಅಂತಿಮಗೊಳಿಸಿದ್ದು. ಹಿರಿಯ ವಿಜ್ಞಾನಿ ಎ.ರಾಜನ್‌ ಬಾಬು ಅವರನ್ನು ಗೌರವಿಸಲಾಯಿತು.

    ಐತಿಹಾಸಿಕ ರಾಮಮಂದಿರ ಬೆಳಗುವ ಸದಾವಕಾಶ ಸಿಕ್ಕಿದ್ದು ಕೂಡ ಕನ್ನಡಿಗರಿಗೆ. ಕರಾವಳಿ ಮೂಲದ ಆರ್‌.ರಾಜೇಶ್‌ ಶೆಟ್ಟಿ ಮತ್ತು ತಂಡವು ರಾಮಮಂದಿರದ ಸಮಗ್ರ ವಿದ್ಯುತ್‌ ದೀಪಾಲಂಕಾರದ ಹೊಣೆ ಹೊತ್ತು ಯಶಸ್ವಿಯಾಗಿ ನಿಭಾಯಿಸಿದರು. ರಾಜೇಶ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ನೀಡಿದ ಮುಹೂರ್ತವೇ ಅಂತಿಮವಾಗಿತ್ತು. ಪಂಡಿತ ವಿಜಯೇಂದ್ರ ಶರ್ಮಾ ಅವರನ್ನು ಪಬ್ಲಿಕ್‌ ಟಿವಿ ವತಿಯಿಂದ ಸನ್ಮಾನಿಸಲಾಯಿತು.

    ಭವ್ಯ ರಾಮಮಂದಿರದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯ ಮೇಲೆ ಪ್ರಜ್ವಲಿಸುವ ಸೂರ್ಯನ ಕಿರಣ ಲೋಗೋ ಇರುವ ಅಯೋಧ್ಯಾ ಲಾಂಛನ ಮಾಡಿದವರು ಕಲಬುರಗಿಯ ರಮೇಶ್‌ ಜಿ ತಿಪ್ಪನೂರ ಅವರು. ಇವರನ್ನೂ ಅಭಿನಂದಿಸಲಾಯಿತು.

    ಪಬ್ಲಿಕ್‌ ಟಿವಿಯ 12 ರ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಸಹ ಗೌರವಿಸಲಾಯಿತು.

  • ಪಬ್ಲಿಕ್ ಟಿವಿ ದ್ವಾದಶಿ ಸಂಭ್ರಮ

    ಪಬ್ಲಿಕ್ ಟಿವಿ ದ್ವಾದಶಿ ಸಂಭ್ರಮ

    – 2012ರ ಫೆಬ್ರವರಿ 12 ರಂದು ಹುಟ್ಟಿದ ಪಬ್ಲಿಕ್ ಟಿವಿಗೆ ಇಂದು 12 ವರ್ಷ

    ಬ್ಲಿಕ್ ಟಿವಿ.., ಕನ್ನಡ ಸುದ್ದಿ ಲೋಕದ ಸರ್ವಾಂತರ್ಯಾಮಿ..! ಪಬ್ಲಿಕ್ ಟಿವಿ.., ಕನ್ನಡಿಗರ ಮನೆ ಮನಗಳಲ್ಲಿ ಅಚ್ಚೊತ್ತಿದ ಹೆಸರು..! ಪಬ್ಲಿಕ್ ಟಿವಿ.., ಸೃಜನಶೀಲ, ಪ್ರಯೋಗಶೀಲ ಹಾಗೂ ಮೌಲ್ಯಪ್ರತಿಪಾದನೆಯ ಸುದ್ದಿಬಿಂಬ..! 2012ರ ಫೆಬ್ರವರಿ 12 ರಂದು ಲೋಕಾರ್ಪಣೆಗೊಂಡ ಅಲ್ಪಕಾಲದಲ್ಲೇ ಜನಪ್ರಿಯತೆ ಪಡೆದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಗೆ ಇಂದು 12 ವರ್ಷದ (Public TV 12th Anniversary) ಸಾರ್ಥಕ ಸಂಭ್ರಮ..! ವೀಕ್ಷಕ ಪ್ರಭುಗಳೇ.. ನೀವಿಲ್ಲದೆ ನಾವಿಲ್ಲ..! ನಮ್ಮನ್ನು ಹರಸಿ ಹಾರೈಸಿ ಬೆಳೆಸಿದ ನಿಮ್ಮೆಲ್ಲರಿಗೂ ಶರಣು ಶರಣಾರ್ಥಿ..! ಇದು ಪಬ್ಲಿಕ್ ಟಿವಿಯ ದ್ವಾದಶಿಯ ಸಂಭ್ರಮದ ಹಬ್ಬ.

    ದಿನದ 24 ಗಂಟೆಯೂ ಜಗತ್ತಿನ ಆಗುಹೋಗುಗಳನ್ನು ನಿಮ್ಮ ಮನೆಯಂಗಳಕ್ಕೆ ತಲುಪಿಸುವ ಧಾವಂತದಲ್ಲೇ ಇರುವ ಪಬ್ಲಿಕ್ ಟಿವಿ (Public TV) ಪರಿವಾರದಲ್ಲಿ ಇಂದು ಹಬ್ಬದ ಸಂಭ್ರಮ. ಸುದ್ದಿಲೋಕದ ಲೆಕ್ಕವಿಲ್ಲದಷ್ಟು ಜಂಜಾಟಗಳ ಮಧ್ಯೆ ಮತ್ತೊಂದು ವರುಷ ಕಳೆದದ್ದು ಗೊತ್ತಾಗಲೇ ಇಲ್ಲ. ಪಬ್ಲಿಕ್ ಟಿವಿಗೆ 12 ವರ್ಷ ತುಂಬಿದ್ದರೆ.., ಪಬ್ಲಿಕ್ ಮೂವೀಸ್‌ಗೂ ಇಂದು 6ರ ಸಡಗರ….

    ಜನರಿಗೆ ಸುತ್ತಮುತ್ತಲಿನ ಬೆಳವಣಿಗೆಗಳೇನು ಅಂತ ತಿಳಿಯೋ ತವಕ. ಆ ತುಡಿತಕ್ಕೆ ತೃಪ್ತಿಯಾಗುವಂತೆ ಪ್ರತಿಯೊಂದು ವಿದ್ಯಮಾನವನ್ನು ತಿಳಿಸುವುದರಲ್ಲಿ ಪಬ್ಲಿಕ್ ಟಿವಿ ಸದಾ ಮುಂದು. ಕೈಯಲ್ಲೊಂದು ಫೋನಿದ್ರೆ ಸಾಕು.., ಜಗದಗಲದ ಸಕಲ ಮಾಹಿತಿಯೂ ಬೆರಳಂಚಿನಲ್ಲೇ ನಲಿಯುತ್ತಿರುವ ಕಾಲವಿದು. ಅಂಥದ್ರಲ್ಲಿ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದ್ರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ.., ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.

    ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಪ್ರೇರಣೆ ಮತ್ತು ಶಕ್ತಿ. ಕ್ಯಾಪ್ಟನ್ ಹೆಚ್.ಆರ್.ರಂಗನಾಥ್ (H.R.Ranganath) ಅವರ ಸರಿ ಸಾಟಿಯಿಲ್ಲದ ಕಾರ್ಯತತ್ಪರತೆಯ ಫಲವೇ ಪಬ್ಲಿಕ್ ಟಿವಿಗೆ ಪ್ರಾಪ್ತಿಯಾಗಿರೋ ಜನಪ್ರಿಯತೆಗೆ ಸಾಕ್ಷಿ. ಆಳುವವರ ಕಿವಿ ಹಿಂಡುತ್ತಾ, ರಾಜಕಾರಣದ ಚರ್ಚೆಗಳಿಗೆ ಗಾಂಭೀರ್ಯತೆಯ ಮೆರುಗು ನೀಡುತ್ತಾ.., ಸಲಹೆಯ ಸೂತ್ರ, ಅಗತ್ಯವಿದ್ದಾಗ ಮಾತಿನ ಪೆಟ್ಟು, ಲಘುಹಾಸ್ಯದ ಲೇಪ ಕೊಟ್ಟು ನಿತ್ಯ ರಾತ್ರಿ ಒಂಭತ್ತರ ಪ್ರೈಮ್‌ ಟೈಮಿಗೆ ಸರಿಸಾಟಿಯಿಲ್ಲದ ವೀಕ್ಷಕ ವೃಂದವನ್ನು ಹೆಚ್.ಆರ್.ರಂಗನಾಥ್ ಅವ್ರು ಕಟ್ಟಿಕೊಂಡ ಪರಿಯೇ ಅಮೋಘ. ಅದಕ್ಕೆ ಇವತ್ತಿಗೂ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕನ್ನಡ ಸುದ್ದಿವಾಹಿನಿ ಇತಿಹಾಸದ ಮೈಲಿಗಲ್ಲು!

    ಪ್ರಚಲಿತ ವಿದ್ಯಮಾನಗಳ ಜೊತೆಗೆ ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲೂ ಪಬ್ಲಿಕ್ ಟಿವಿ ಸದಾ ಮುಂದೆ. ಬೆಳಕು, ಪಬ್ಲಿಕ್ ಹೀರೋ, ಎಸ್‌ಎಸ್‌ಎಲ್‌ಸಿಯ ಬಡ ಮಕ್ಕಳಿಗೆ ಉಚಿತ ಟ್ಯಾಬ್ ಕೊಡುವ ಜ್ಞಾನದೀವಿಗೆ ಅಭಿಯಾನ.., ಕೊರೊನಾ ಲಾಕ್‌ಡೌನ್ ಕಾಲದಲ್ಲಿ ನಡೆಸಿಕೊಟ್ಟ ಮನೆಯೇ ಮಂತ್ರಾಲಯ.., ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದೇವೆ… ಈ ಮೂಲಕ ಜನಮನ ಗೆದ್ದಿದ್ದೇವೆ.

    ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಪಬ್ಲಿಕ್ ಟಿವಿಯ ಕೋಟಿ ನಮನ. 12 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೇ ಮುಂದುವರಿಯಲಿ ಅನ್ನೋದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ…