Tag: Public Transport

  • ಲಾಕ್‍ಡೌನ್: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ರೂ. ಆದಾಯ ನಷ್ಟ!

    ಲಾಕ್‍ಡೌನ್: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ರೂ. ಆದಾಯ ನಷ್ಟ!

    ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ  ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಅಂದಾಜು ರೂ. 23 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ.

    ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕಗಳಲ್ಲಿ ಒಟ್ಟು 462 ಬಸ್ಸುಗಳು ಹಾಗೂ 2,173 ಸಿಬ್ಬಂದಿಗಳಿದ್ದಾರೆ. ವಿಭಾಗದ ಬಸ್ಸುಗಳು ಪ್ರತಿದಿನ 1.90 ಲಕ್ಷ ಕಿ.ಮೀ ಗಳಷ್ಟು ಕ್ರಮಿಸಿ ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.45 ಲಕ್ಷ ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಗೆ 45 ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

    ಮಾರ್ಚ್ ತಿಂಗಳಲ್ಲಿ 9ರ ವರೆಗೂ ಬಸ್ಸುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಆದ್ದರಿಂದ ಆದಾಯ ಸಂಗ್ರಹಣೆ ನಿರೀಕ್ಷೆಯಿತ್ತು. ನಂತರದಲ್ಲಿ ಕೊರೊನಾ ಮತ್ತು ಹೋಳಿ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯತೊಡಗಿತು. ಪರಿಣಾಮ ಮಾರ್ಚ್ 22ರ ವರೆಗೂ ಬಸ್ಸುಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿ 23 ರಿಂದ ಶೂನ್ಯಕ್ಕಿಳಿಯಿತು.

    ಮಾರ್ಚ್ ತಿಂಗಳಿನಲ್ಲಿ ಭಾಗಶಃ ಬಸ್ ಕಾರ್ಯಾಚರಣೆಯಾಗಿದ್ದರಿಂದ ನಿರೀಕ್ಷಿತ ಸಾರಿಗೆ ಆದಾಯದಲ್ಲಿ 5.50 ಕೋಟಿ ರೂ. ಗಳಷ್ಟು ಕೊರತೆಯಾಗಿತ್ತು. ಆದರೆ ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಸು ರಸ್ತೆಗಿಳಿಯದಿರುವುದರಿಂದಾಗಿ 17.50 ರೂ. ಕೋಟಿ ಆದಾಯ ನಷ್ಟ ಉಂಟಾಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.

    ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಸಹ ಬಸ್ಸುಗಳ ತುರ್ತು ನಿರ್ವಹಣೆ ಮತ್ತು ಸಂಸ್ಥೆಯ ಆಸ್ತಿಗಳ ರಕ್ಷಣೆಯಂತಹ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಲೇಬೇಕಾಗಿತ್ತು. ವಿಭಾಗೀಯ ಕಚೇರಿ ಹಾಗೂ ಘಟಕ ಪೆಟ್ರೋಲಿಂಗ್ ತಂಡದ ಅಧಿಕಾರಿಗಳು ಪ್ರತಿದಿನ ಎಲ್ಲಾ ಘಟಕಗಳು ಮತ್ತು ಪ್ರಮುಖ ಬಸ್ ನಿಲ್ದಾಣಗಳ ಗಸ್ತು ತೆಗರದುಕೊಳ್ಳುತ್ತಿದ್ದಾರೆ. ಘಟಕದಲ್ಲೂ ತುರ್ತು ನಿರ್ವಹಣಾ ತಂಡದಲ್ಲಿ ಮೂರು ಪಾಳಿಯಲ್ಲಿ ಇಬ್ಬರು-ಮೂವರಂತೆ ಚಾಲಕರು, ತಾಂತ್ರಿಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿರಂತರವಾಗಿ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

    ಬಿಸಿಲಿನ ಅತಿಯಾದ ತಾಪಮಾನದಿಂದ ಆಕಸ್ಮಿಕ ಬೆಂಕಿ ಅನಾಹುತ, ಮತ್ತಿತರ ಅವಘಡಗಳಿಂದ ಬಸ್ಸುಗಳನ್ನು ಸಂರಕ್ಷಿಸಲು ನಿತ್ಯ ಜಲಾಭಿಷೇಕ ಮಾಡಲಾಗುತ್ತಿದೆ. ಅಲ್ಲಲ್ಲಿ ನೀರು ತುಂಬಿದ ಬ್ಯಾರಲ್ ಗಳು ಹಾಗೂ ಬಕೆಟ್‍ಗಳನ್ನಿಡಲಾಗಿದೆ. ಎಲ್ಲಾ ಘಟಕಗಳಲ್ಲಿ ಬೆಂಕಿ ನಂದಿಸುವ ಉಪಕರಣಗಳನ್ನು ಅಳವಡಿಸಿದ್ದಾರೆ. ಅಲ್ಲದೇ ಉಪಕರಣಗಳ ಸಮಯೋಚಿತ ಉಪಯೋಗದ ಬಗ್ಗೆ ಭದ್ರತಾ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಎಲ್ಲಾ ಬಸ್ಸುಗಳ ಬ್ಯಾಟರಿ ಬಾಕ್ಸ್ ಗಳನ್ನು ಸ್ವಚ್ಚಗೊಳಿಸಲಾಗಿದೆ. ಬಹುದಿನಗಳಿಂದ ಬಸ್ಸುಗಳು ನಿಂತಲ್ಲೇ ನಿಂತಿರುವುದರಿಂದ, ಬ್ಯಾಟರಿ ಡೆಡ್ ಆಗುವುದನ್ನು ತಡೆಯುವುದಕ್ಕಾಗಿ ದಿನ ಬಿಟ್ಟು ದಿನ ಇಂಜಿನ್ ಚಾಲೂ ಮಾಡಿ ಕೆಲ ಅಡಿಗಳವರೆಗೆ ಚಾಲನೆ ಮಾಡಿ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

    ಸಾರ್ವಜನಿಕ ಸಾರಿಗೆ ಪುನರಾರಂಭಿಸಲು ಸರ್ಕಾರದ ಆದೇಶ ಬಂದ ಕೂಡಲೆ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆಗಿಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

  • ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    – ನಾಳೆಯಿಂದ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ನವದೆಹಲಿ: ಸಾರ್ವಜನಿಕರ ಸಂಪರ್ಕ ಸಾರಿಗೆ ಬಸ್‍ಗಳಲ್ಲಿ ನಿತ್ಯ ಓಡಾಡುವ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಿಎಂ ಕೇಜ್ರಿವಾಲ್ ಸರ್ಕಾರ, ಮತ್ತೆ 13 ಸಾವಿರ ಮಂದಿ ಮಾರ್ಷಲ್ ಗಳನ್ನ ನೇಮಕ ಮಾಡಿಕೊಳ್ಳುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇಜ್ರಿವಾಲ್, ಮಂಗಳವಾರದಿಂದ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ದೃಷ್ಟಿಯಿಂದ 13 ಸಾವಿರ ಮಾರ್ಷಲ್ ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

    ಮಹಿಳೆಯರಿಗೆ ರಕ್ಷಣೆ ನೀಡುವುದೆ ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರ ಸಂತಸದಿಂದ ತೆಗೆದುಕೊಂಡ ನಿರ್ಧಾರವಾಗಿದ್ದು, ಇದುವರೆಗೂ ವಿಶ್ವದ ಯಾವುದೇ ನಗರದಲ್ಲಿ ನೀಡಿರದ ಮಾದರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮಹಿಳೆಯರು ಸಾರಿಗೆ ವಾಹನದಲ್ಲಿ ಪ್ರಯಾಣಿಸುವ ವೇಳೆ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವ ಅನುಭವ ಪಡೆಯಬೇಕು ಎಂದು ತಿಳಿಸಿದರು. ನವದೆಹಲಿಯಲ್ಲಿ ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಯೋಜನೆ ಜಾರಿಯಾಗುವ ಒಂದು ದಿನ ಮುನ್ನ ಕೇಜ್ರಿವಾಲ್ ಈ ತೀರ್ಮಾನ ಪ್ರಕಟಿಸಿರುವುದು ವಿಶೇಷವಾಗಿದೆ. ಅಲ್ಲದೇ ಕೇಜ್ರಿವಾಲ್ ಇಂದಿನಿಂದಲೇ ಮುಂದಿನ ಚುನಾವಣೆಗೆ ಜನಪ್ರಿಯ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಫೋನಿನಿಂದ ಕಿರಿಕಿರಿ ಆಗುತ್ತಿರುವ ವಿಚಾರವಾಗಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

    ವಕೀಲ ರಮೇಶ್ ನಾಯ್ಕ್ ಎಲ್ ಅವರು ಪಿಐಎಲ್ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

    ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಾದ ರೈಲು, ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಸ್ಮಾರ್ಟ್‍ಫೋನ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲ ಪ್ರಯಾಣಿಕರು ಸ್ಮಾರ್ಟ್ ಫೋನ್ ಗಳಲ್ಲಿ ಓಪನ್ ಸ್ಪೀಕರ್ ಇಟ್ಟು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಹಾಡು ಕೇಳುವುದು, ವಿಡಿಯೋಗಳನ್ನು ಪ್ಲೇ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಿಯಮ ರೂಪಿಸುವಂತೆ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಕರಿಗೆ ಆಸನ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕದಂತೆ ಈ ಸಮಸ್ಯೆ ನಿವಾರಿಸಲು ಬಸ್ ಹಾಗೂ ರೈಲಿನಲ್ಲಿ ಫಲಕವನ್ನು ಹಾಕಲು ಆದೇಶಿಸಬೇಕೆಂದು ರಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.

    ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಭಾರತೀಯ ರೈಲ್ವೇ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.