ಬೆಂಗಳೂರು: ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್.ಎನ್, ಅರವಿಂದ ಮೂರ್ತಿ. ಟಿ.ಎಸ್, ರಾಧಕೃಷ್ಣ ಹಾಗೂ ಕಿಶೋರ್ ಮೇಗಳಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರಕ್ಕೆ ವೀರ್ ಸಮರ್ಥ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ. ನಾಲ್ವರು ಸ್ನೇಹಿತರು ಹಣದ ಹಿಂದೆ ಹೋದಾಗ ಆಗುವ ಯಡವಟ್ಟುಗಳ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಯುವ ಪೀಳಿಗೆಯ ಬದುಕನ್ನೇ ಆಧಾರವಾಗಿಟ್ಟುಕೊಂಡು ರಚಿಸಿರುವ ಈ ಚಿತ್ರ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.
ಮಧುಸೂದನ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ ಛಾಯಗ್ರಾಹಣ, ವೀರ್ ಸಮರ್ಥ್ ಸಂಗೀತ, ವಿಜಯಭರಮಸಾಗರ ಸಾಹಿತ್ಯ, ಕಿಶೋರ್ ಮೇಗಳಮನೆ- ಮಧುಸೂದನ್ ಸಂಭಾಷಣೆ, ಕಿಟ್ಟು ಅರ್ಜುನ್ ಸಂಕಲನ, ಕಂಬಿರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ, ಶರಣ್ ಸಹ ನಿರ್ದೇಶನವಿದೆ.
ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್‍ಸೂರ್ಯ, ದೀಪಕ್‍ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮೀ, ಅರವಿಂದೇಗೌಡ, ಶ್ರೀಜಾ, ಅರವಿಂದ್‍ಮೂರ್ತಿ, ಟಿ.ಎಸ್.ಭರತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬೆಳಗಾವಿ: ನಾನು ನನ್ನ ಮತದಾರರಿಗೆ ಮಾತ್ರವೇ ಪಿಆರ್‌ಒ (ಪಬ್ಲಿಕ್ ರಿಲೇಷನ್ ಆಫೀಸರ್)ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೌರಾಡಳಿತ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಚಿವರ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಐದು ವರ್ಷದಿಂದ ಯಾವ ಪಿಆರ್‌ಒ , ಯಾವುದಕ್ಕೇ ಪಿಆರ್‌ಒ ಆಗಿದ್ದೆ? ಐದು ವರ್ಷದಿಂದ ಪಿಆರ್‌ಒ ಆಗಿದ್ದೀನಿ ಎಂದು ಹೇಳಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿದ್ದೀನಾ ಅವರ ಪಿಆರ್‌ಒ ಆಗಲು. ನಾನು ಒಬ್ಬ ಶಾಸಕಿಯಾಗಿದ್ದೇನೆ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಬಿಟ್ಟು ಬಿಡಬೇಕು. ನಾನು ಹಳೆಯ ಕಹಿ ನೆನಪುಗಳನ್ನು ಮರೆಯುತ್ತಿದ್ದೇನೆ. ನಾವು ಈಗ ಅಭಿವೃದ್ಧಿ ಬಗ್ಗೆ ಮಾತ್ರವೇ ಮಾತನಾಡಬೇಕು. ನಾವು ಒಂದೇ ಪಕ್ಷದಲ್ಲಿದ್ದೇವೆ ಎಂದು ತಿಳಿಸಿದರು.
ನಾನು ನನ್ನ ಕ್ಷೇತ್ರದ ಮತದಾರರ ಪಿಆರ್‌ಒ . ಮಾನ ಮರ್ಯಾದೆ ಇದ್ದವರು, ಹಾಗೆಲ್ಲ ಮಾತನಾಡಬಾರದು. ನನಗೂ ಸಹಿಸಿಕೊಂಡು, ಸಹಿಸಿಕೊಂಡು ಸಾಕಾಗಿದೆ. ಪಿಆರ್‌ಒ ಎಂದು ಹೇಳುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ. ಹೀಗೆ ಪದೇ ಪದೇ ಮಾತನಾಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಕಳೆದ ಐದು ವರ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪಿಆರ್‌ಒ ಆಗಿದ್ದರು. ಈಗ ಅವರು ಯಾಕಿಲ್ಲ? ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾನೇ ಹೋಗಬೇಕೆಂದೇನಿಲ್ಲ. ಕಳೆದ ವರ್ಷವೂ ಸಿದ್ದರಾಮಯ್ಯರನ್ನು ಸ್ವಾಗತ ಮಾಡಲು ಹೋಗಿರಲಿಲ್ಲ. ಉಸ್ತುವಾರಿ ಸಚಿವ ಶೋ ಮಾಡೋದು ಅಲ್ಲ. ಅದು ಕೆಲಸ ಮಾಡುವುದು. ನಾನು ಪ್ರಚಾರ ಪ್ರಿಯನಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದರು.
ಮಡಿಕೇರಿ: ಹಲವರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಒಂಟಿ ಸಲಗವನ್ನು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೋದೂರು ಎಸ್ಟೇಟ್ ನಲ್ಲಿ ತಿರುಗಾಡುತ್ತಿದ್ದ ಒಂಟಿ ಸಲಗನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಗಿತ್ತು. ಆದರೆ ಮೊದಲ ದಿನ ಕಾರ್ಯಾಚರಣೆ ಪಡೆಯ ಕಣ್ಣಿಗೆ ಕಾಣಿಸಿಕೊಳ್ಳದೆ ಈ ಸಲಗ ಅಡಗಿಕೊಂಡಿತ್ತು.
ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಸಾಕಾನೆಗಳಾದ ಹರ್ಷ, ವಿಕ್ರಂ ಮತ್ತು ಜ್ಯೋತಿ. ಜೊತೆಗೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗು ಕೃಷ್ಣರನ್ನು ಸೋಮವಾರ ಬೆಳಗ್ಗೆಯೇ ಮೋದೂರು ಎಸ್ಟೇಟ್ ಗೆ ತರಲಾಗಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಆನೆಯನ್ನು ಸೋಮವಾರ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಾಲ್ಕು ದಿನಗಳ ನಂತರ ಕಾಫಿ ತೋಟದ ಒಳಗೆ ಒಂಟಿ ಸಲಗನನ್ನು ಪತ್ತೆ ಹಚ್ಚಲಾಯಿತು.
ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ಅರವಳಿಕೆ ಮದ್ದು ನೀಡಿದರು. ಬಳಿಕ ಸಾಕಾನೆಗಳು ಸುತ್ತುವರಿದಾಗ ಅವುಗಳ ನೆರವಿನಿಂದ ಸಿಬ್ಬಂದಿ ಸಲಗನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಂತರ ಅದನ್ನು ದುಬಾರೆ ಶಿಬಿರಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್ ಮತ್ತು ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಪಾಲ್ಗೊಂಡಿದ್ದರು.
ಸಲಗನ ಸೆರೆಯಿಂದಾಗಿ ಮೋದೂರು ವಿಭಾಗದ ನಿವಾಸಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವರ ಮೇಲೆ ದಾಳಿ ನಡೆಸಿ ಸಲಗ ಗಾಯಗೊಳಿಸಿತ್ತು. ಈ ಭಾಗದಲ್ಲಿ ವಾಹನಗಳ ಮೇಲೂ ದಾಳಿ ನಡೆಸಿತ್ತು. ಇದರಿಂದ ಜನರು ಆತಂಕದಿಂದ ಹೊರಗೆ ಹೋಗುತ್ತಿರಲಿಲ್ಲ. ಕಾಫಿ ತೋಟಗಳಿಗೆ ಬರಲು ಕಾರ್ಮಿಕರು ಹಿಂಜರಿಯುತ್ತಿದ್ದರು. ಇದೀಗ ಒಂಟಿ ಸಲಾಗವನ್ನು ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ.
ಬೆಂಗಳೂರು: ತೆನೆಹೊತ್ತ ಮಹಿಳೆಯನ್ನು ಕೊರಳಿಗೆ ಸುತ್ತಿಕೊಂಡಿದ್ದೇನೆ. ಇದು ಇಡೀ ರಾಜ್ಯಾದ್ಯಂತ ಸುತ್ತಿಕೊಳ್ಳುವಂತೆ ಆಗಬೇಕು ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದರೂ ಪ್ರಧಾನ ಮಂತ್ರಿಯನ್ನು ಕೊಟ್ಟ ಪಕ್ಷ ಜೆಡಿಎಸ್. ಮುಖ್ಯಮಂತ್ರಿಗಳನ್ನ ಮಾಡಿದ್ದು ಜೆಡಿಎಸ್. ಇದು ಹುಡುಗಾಟವಲ್ಲ. ಮುಂದೆ ದೇವೇಗೌಡರ ನೆರಳಾಗಿ, ಕುಮಾರಸ್ವಾಮಿ ಸ್ನೇಹಿತರಾಗಿ ನಿಮ್ಮಲ್ಲರ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.
ಹರಿಯುವ ನೀರು: ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ತಿರುವು ಇದು. ಬೆಳಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದಿದ್ದೇನೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. ಹಾಗಾಗಿ ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಹರಿಯುವ ನೀರು ಎಂದರು.
ಝಂಡಾ ಬದಲಾಗಿದೆ: ಸನ್ನಿವೇಶ, ಸಮಯಗಳು ನಡುವೆ ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದಲ್ಲಿ ಕಲಿತ ಕೆಲಸ ಜೆಡಿಎಸ್‍ನಲ್ಲೂ ಮುಂದುವರೆಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ತರಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಇವತ್ತಿನಿಂದ ನನ್ನ ಝಂಡಾ ಬದಲಾಗಿದೆ. ತೆನೆ ಹೊತ್ತ ಮಹಿಳೆ ಝಂಡಾ ಹಿಡಿದುಕೊಂಡಿದ್ದೇನೆ. ಆದರೆ ನನ್ನ ಜಾತ್ಯಾತೀತ ಅಜೆಂಡಾವನ್ನು ಜೆಡಿಎಸ್ ನಲ್ಲೂ ಮುಂದುವರೆಸುತ್ತೇನೆ ಎಂದರು.
ಲಾಭ ಇಲ್ಲ: ಪಕ್ಷ ಪರಿಸ್ಥಿತಿ ಸನ್ನಿವೇಶ ಇದನ್ನೇ ಪ್ರಶ್ನಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಇಂದು ಹೊಸ ಮನೆಗೆ ಬಂದಿದ್ದೇನೆ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ದುಡಿದ್ದೇನೋ ಅದೇ ಉತ್ಸಾಹದಿಂದ ಜೆಡಿಎಸ್ ನಲ್ಲಿ ದುಡಿಯುವೆ. 2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬಗ್ಗೆ ವಿಧಾನಸೌಧದಲ್ಲಿ ಮೆಚ್ಚುಗೆ ಮಾತನಾಡಿದ್ದೆ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಅಂತವರ ಜೊತೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಯೋಗ. ಮುಖಂಡರ ಜೊತೆ ಕುಳಿತು ಚರ್ಚಿಸಿ, ತಂತ್ರಗಾರಿಕೆ ಮಾಡಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಎಂದು ವಿಶ್ವನಾಥ್ ಹೇಳಿದರು.
ಪ್ರಾಮಾಣಿಕ ರಾಜಕಾರಣಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಎಚ್. ವಿಶ್ವನಾಥ್ ಪ್ರಾಮಾಣಿಕ ರಾಜಕಾರಣಿ. ತಮ್ಮ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾರೆ. ಕಳೆದ ಹಲವಾರು ತಿಂಗಳಿನಲ್ಲಿ ಮಾಧ್ಯಮದವರು ವಿಶ್ವನಾಥ್ ಸೇರ್ಪಡೆ ಬಗ್ಗೆ ಕೇಳ್ತಿದ್ರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ವಿಶ್ವನಾಥ್ ಪಕ್ಷ ಸೇರಲು ಮೈಸೂರು ಜಿಲ್ಲೆಯ ನಮ್ಮ ಶಾಸಕರೇ ಕಾರಣ ಎಂದು ಹೇಳಿದರು.
10ರಲ್ಲಿ ಜಯ: ವಿಶ್ವನಾಥ್ ಅವರು ಮನಸ್ಸಿನಲ್ಲಿ ಎಷ್ಟು ನೊಂದಿದ್ದಾರೆ ಅನ್ನೊದು ನನಗೆ ಗೊತ್ತಿದೆ. 40 ವರ್ಷದ ದುಡಿಮೆ ಮಾಡಿಕೊಂಡ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬರೋದು ಎಷ್ಟು ಕಷ್ಟ ಗೊತ್ತು. ವಿಶ್ವನಾಥ್ ಸೇರ್ಪಡೆಯಿಂದ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ಇದೆ. ದೇವೇಗೌಡರಿಂದ ಅನೇಕ ಜನ ಬೆಳೆದಿದ್ದಾರೆ. ಪಕ್ಷದಲ್ಲಿ ಬೆಳೆದವರೇ ಪಕ್ಷ ನಾಶ ಮಾಡಬೇಕು ಅಂತ ಓಡಾಡುತ್ತಿದ್ದಾರೆ. ಇಂತಹವರಿಗೇ ನೀವೇ ಪಾಠ ಕಲಿಸಬೇಕು ಎಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದಲ್ಲಿ ಬೆಳೆದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆದರು. ಅವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದು ವಿಶ್ವನಾಥ್. 130 ವರ್ಷಗಳ ಇತಿಹಾಸದ ಬಗ್ಗೆ ಇವತ್ತು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾರೆ. ನಾನೇನು ಸಿಎಂ ಆಗುವ ಕನಸು ಕಾಣ್ತಿಲ್ಲ. ಅಧಿಕಾರದ ಆಸೆ ನಮಗೆ ಇಲ್ಲ. ರಾಜ್ಯದ ಜನರ ಹಿತ ಕಾಯಲು ಜೆಡಿಎಸ್ ಗೆ ಅಧಿಕಾರ ಬೇಕು ಅಷ್ಟೇ. ಇದು ಅಪ್ಪಮಕ್ಕಳ ಪಕ್ಷ ಅಲ್ಲ. ಎಲ್ಲ ಸಮುದಾಯದವರು ಇಲ್ಲಿ ನಾಯಕರಾಗಿದ್ದಾರೆ ಎಂದರು.
ಯಾರು ಏನೇ ಸಮೀಕ್ಷೆ ಮಾಡಲಿ. ಜೆಡಿಎಸ್ ಕೂಡಾ ಸಮೀಕ್ಷೆ ಮಾಡಿದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ಈ ಬಾರಿ ಅಷ್ಟು ಸುಲಭವಲ್ಲ. ಜೆಡಿಎಸ್ ಬಗ್ಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಎಚ್‍ಡಿಕೆ ತಿಳಿಸಿದರು.
ಎಚ್.ವಿಶ್ವನಾಥ್ ಜೊತೆ ಅವರ ಹಲವು ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಯಾದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಬಾವುಟ, ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ವಿಶ್ವನಾಥ್ ಅವರ ಮಗ ಅಮಿತ್ ವಿಶ್ವನಾಥ್ ಕೂಡಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಶಾಸಕ ಜಿ.ಟಿ.ದೇವೆಗೌಡ, ಮಧು ಬಂಗಾರಪ್ಪ, ಮಾಜಿ ಶಾಸಕ ಬಂಡೇಪ್ಪ ಕಾಶಂಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.