Tag: Public T

  • ಗೃಹ ಇಲಾಖೆಯಲ್ಲಿ ಅಮೂಲಾಗ್ರ ಸುಧಾರಣೆ ತರುತ್ತೇನೆ: ಅರಗ ಜ್ಞಾನೇಂದ್ರ

    ಗೃಹ ಇಲಾಖೆಯಲ್ಲಿ ಅಮೂಲಾಗ್ರ ಸುಧಾರಣೆ ತರುತ್ತೇನೆ: ಅರಗ ಜ್ಞಾನೇಂದ್ರ

    ತುಮಕೂರು: ಗೃಹ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನ ಪಡುತ್ತೇನೆ ಎಂದು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಜವಾಬ್ದಾರಿ ನನಗೆ ಹೊಸದು. ನಾಳೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸುತ್ತೆನೆ. ಆ ಮೂಲಕ ಅಧಿಕೃತವಾಗಿ ಚಾರ್ಜ್ ತೆಗೆದುಕೊಳ್ಳುತ್ತೇನೆ ಎಂದರು.

    ಪೊಲೀಸ್ ಇಲಾಖೆ ಸಶಕ್ತವಾಗಿ ಕೆಲಸ ಮಾಡುವ ಹಾಗೆ ಶಕ್ತಿ ತುಂಬಬೇಕೆಂದು ಯೋಚನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇಲಾಖೆಯಲ್ಲಿ ಇಷ್ಟು ವರ್ಷ ತರಲಾಗದೇ ಇದ್ದ ಏನಾದರೊಂದು ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಜೊತೆಗೆ ಔರಾದ್ಕರ್ ವರದಿ ಅಧ್ಯಯನ ಮಾಡಿ ಪೊಲೀಸರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಯತ್ನ ಪಡುತ್ತೆನೆ ಎಂದು ಭರವಸೆ ನೀಡಿದರು.

  • ಕೋವಿಡ್ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಆಗಲ್ಲ-ಎಚ್.ಕೆ ಪಾಟೀಲ್

    ಕೋವಿಡ್ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಆಗಲ್ಲ-ಎಚ್.ಕೆ ಪಾಟೀಲ್

    ಗದಗ: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಿಎಂ ಬಿಎಸ್‍ವೈ ನೀಡಿರುವ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಸಾಕಗಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಟೀಕೆ ಮಾಡಿದ್ದಾರೆ.

    ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಎಚ್.ಕೆ ಪಾಟೀಲ್, ಯಡಿಯೂರಪ್ಪ ಕೊರೊನಾ ಕಷ್ಟಕಾಲದಲ್ಲಿ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನ ಇಲ್ಲ. ಅದರಲ್ಲೂ ಕಲಾ ತಂಡದಲ್ಲಿ ಎಂಟತ್ತು ಜನರಿರುತ್ತಾರೆ ಅವರಿಗೆ 3 ಸಾವಿರ ಯಾವ ಲೆಕ್ಕ ಎಂದು ಹೇಳುವ ಮೂಲಕ ಆರ್ಥಿಕ ಪ್ಯಾಕೇಜ್ ಬಗ್ಗೆ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

    ಟೀಕೆ ಬಂದಿದೆ ಎಂದು ನೀವು ಈ ಕುರಿತು ಯೋಚಿಸಿಸುವುದು ಬೇಡ ಯಡಿಯೂರಪ್ಪನವರೇ ವ್ಯವಹಾರಿಕವಾಗಿ ಆಲೋಚಿಸಿ. ಆಗ ನಿಮಗೆ ತಿಳಿಯುತ್ತದೆ. ತಕ್ಷಣವೇ ಬಡವರಿಗೆ ಮೂರು ಪಟ್ಟು ಹಣ ಕೊಡಲು ವ್ಯವಸ್ಥೆ ಮಾಡಿ ಇದನ್ನು ಹೊರತು ಪಡಿಸಿ. ನೀವು ಈಗ ಕೊಟ್ಟಿರುವ ಪ್ಯಾಕೇಜ್‍ನಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ನಿರ್ಣಯ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಕೊಡಿ. ಆಗಲೇ ಜನರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

  • ವಿಷ್ಣು ವಿಶಾಲ್ ಜೊತೆ ಜ್ವಾಲಾಗುಟ್ಟಾ ಮದ್ವೆಗೆ ಮುಹೂರ್ತ ನಿಗದಿ

    ವಿಷ್ಣು ವಿಶಾಲ್ ಜೊತೆ ಜ್ವಾಲಾಗುಟ್ಟಾ ಮದ್ವೆಗೆ ಮುಹೂರ್ತ ನಿಗದಿ

    – ಯಾರು ಈ ವಿಷ್ಣು ವಿಶಾಲ್?

    ಚೆನ್ನೈ: ಇದೇ ಏಪ್ರಿಲ್ 22ರಂದು ಭಾರತೀಯ ಬ್ಯಾಡ್ಮಿಂಟನ್ ಡಬಲ್ ವಿಭಾಗದ ತಾರೆ ಜ್ವಾಲಾಗುಟ್ಟಾ ಗೆಳೆಯ, ನಟ ವಿಷ್ಣು ವಿಶಾಲ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಜ್ವಾಲಾಗುಟ್ಟಾ ಜನ್ಮದಿನದಂದೇ ನಟ ವಿಶಾಲ್ ಪ್ರಪೋಸ್ ಮಾಡಿದ್ದರು. ಅದೇ ದಿನ ವಿಷ್ಣು ವಿಶಾಲ್ ಪ್ರಪೋಸಲ್ ಸ್ವೀಕರಿಸಿದ್ದ ಜ್ವಾಲಾಗುಟ್ಟಾ, ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಆಪ್ತರ ಸಮ್ಮುಖದಲ್ಲಿ ಇದೇ 22ರಂದು ನಾವು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಮಗೆ ನೀವು ತೋರಿಸಿದ ಪ್ರೀತಿಗೆ ಚಿರಋಣಿ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ. ಪ್ರೀತಿ, ನಿಷ್ಠೆ, ಸ್ನೇಹದೊಂದಿಗೆ ಒಂದಾಗಿ ನಮ್ಮ ಜೀವನದ ಹೊಸ ಪ್ರಯಾಣ ಆರಂಭಿಸುತ್ತಿದ್ದೇವೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಸಿದ್ದಾರೆ. 37 ವರ್ಷದ ಜ್ವಾಲಾ ಗುಟ್ಟಾ 2010 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು, ಅರ್ಜುನ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ.

    36 ವರ್ಷದ ನಟ ವಿಷ್ಣು ವಿಶಾಲ್ ಮೂಲತಃ ತಮಿಳುನಾಡಿನ ವೆಲ್ಲೊರು ಮೂಲದವರು. ಇವರ ಮೂಲ ಹೆಸರು ವಿಶಾಲ್ ಕುಡವಾಲ. ಹೆಚ್ಚಾಗಿ ತಮಿಳಿನ ಕ್ರೀಡಾ ಆಧಾರಿತ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಶಾಲ್, 2009 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. 17ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ವೆನ್ನಿಲಾ ಕಬ್ಬಡಿ ಕುಝೂ, ಬಲೆ ಪಾಂಡೀಯನ್, ಕಾದನ್, ಸಿಲ್ಲುಕುವರಿಪಟ್ಟಿ ಸಿಂಗಮ ಇವರ ಪ್ರಮುಖ ಚಿತ್ರಗಳು. ಜೊತೆಗೆ ತಮಿಳಿನ ಹಲವು ಚಿತ್ರಗಳನ್ನ ನಿರ್ಮಾಣ ಸಹ ಮಾಡಿದ್ದಾರೆ. ಈ ಹಿಂದೆ 2010ರಲ್ಲಿ ತಮಿಳು ಖ್ಯಾತ ನಟ ಕೆ ನಟರಾಜ್ ರ ಪುತ್ರಿ ರಜನಿ ನಟರಾಜ್ ರನ್ನ ಮದುವೆಯಾಗಿದ್ದರು. ಕಾರಣಾಂತರಗಳಿಂದ 2018ರಲ್ಲಿ ಜೋಡಿ ಕಾನೂನತ್ಮಾಕವಾಗಿ ಬೇರ್ಪಟ್ಟಿತ್ತು. ಇದೇ 22ಕ್ಕೆ ಬ್ಯಾಡ್ಮಿಂಟನ್ ತಾರೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

     

  • ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ: ಈಶ್ವರಪ್ಪ

    ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ: ಈಶ್ವರಪ್ಪ

    ಧಾರವಾಡ: ನೋಟು ಕೌಂಟಿಂಗ್ ಮಷಿನ್ ಇಟ್ಟುಕೊಳ್ಳುವದರಲ್ಲಿ ತಪ್ಪಿಲ್ಲ, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಹುಚ್ಚರ ರೀತಿಯಲ್ಲಿ ಮಾತನಾಡುವುದು ಶೋಭೆ ತರಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ವ್ಯಾಪಾರ ಮಾಡುವವರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇರುತ್ತದೆ. ಇದನ್ನು ಹೊರತು ನೋಟು ಪ್ರಿಂಟ್ ಮಷಿನ್ ಇಲ್ಲವಲ್ಲಾ ಎಂದರು. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಬಂದವರು. ಹೀಗಾಗಿ ಏನೇನೂ ಮಾತನಾಡುತ್ತಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಏನೇನೂ ಮಾತಡುತ್ತಿದ್ದು, ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ ಎಂದರು.

    ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲವು ಸಾಧಿಸುತ್ತೇವೆ ಎಂದ ಈಶ್ವರಪ್ಪ, ಅನುದಾನದ ಹಂಚಿಕೆ ಅಸಮಾಧಾನ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಎಲ್ಲವೂ ಸರಿಯಾಗುತ್ತದೆ. ಆ ವಿಷಯ ಮುಗಿದು ಹೋಗಿದೆ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಎರಡು ದಿನದಲ್ಲಿ ಪ್ರಚಾರಕ್ಕೆ ಬರುತ್ತಾರೆ. ಸಿ.ಡಿ ವಿಷಯದ ಬಗ್ಗೆ ಕೇಳಬೇಡಿ. ಸಿ.ಡಿ ವಿಷಯ ಅಸಹ್ಯ ಹುಟ್ಟಿಸುತ್ತದೆ. ಅದರ ಬಗ್ಗೆ ನಾನು ಎಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂದರು.

  • 8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    – ದಂಡ, ಲಾಠಿ ಏಟು, ವಾಹನ ಸೀಜ್

    ಬೆಂಗಳೂರು: ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಮೊದಲ ದಿನದ ನೈಟ್‍ಕರ್ಫ್ಯೂ ಮುಕ್ತಾಯವಾಗಿದ್ದು, ಇನ್ನೂ 9 ದಿನ ನೈಟ್‍ಕರ್ಫ್ಯೂ ಇರಲಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ತುಮಕೂರು, ಕಲಬುರಗಿ, ಬೀದರ್, ಉಡುಪಿ, ಮಣಿಪಾಲದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿಯಲ್ಲಿದೆ. ಏಪ್ರಿಲ್ 20ರವರೆಗೆ ನೈಟ್‍ಕರ್ಫ್ಯೂ ಇರಲಿದೆ.

    ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಹೋಟೆಲ್, ಬೀದಿಬದಿ ಹೋಟೆಲ್‍ಗಳು, ಅಂಗಡಿ ಮುಂಗಟ್ಟುಗಳು, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್, ಥಿಯೇಟರ್ ಎಲ್ಲವೂ 10 ಗಂಟೆಯಷ್ಟೊತ್ತಿಗೆ ಬಾಗಿಲು ಹಾಕಿದ್ದವು. ನೈಟ್‍ಕರ್ಫ್ಯೂ ಹೇರಿಕೆ ಆಗಿರುವ ನಗರಗಳಲ್ಲಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರು. ಮುಖ್ಯರಸ್ತೆ, ಫ್ಲೈಓವರ್ ಗಳನ್ನು ಬಂದ್ ಮಾಡಿದ್ದರು. ಆದರೆ ಖಾಸಗಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಐಡಿ ಕಾರ್ಡ್ ತೋರಿಸಿದರೆ ಓಡಾಡಲು ಅವಕಾಶ ಇದೆ. ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಆನ್‍ಲೈನ್ ಹೋಂ ಡೆಲಿವರಿ ಸೇವೆ, ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.

    ಬೆಂಗಳೂರು: ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಬೆಂಗಳೂರು ನಗರ ಬಹುತೇಕ ಬಿಕೋ ಎನ್ನುತ್ತಿತ್ತು. ರಾಜಧಾನಿಯ ಪ್ರಮುಖ ಫ್ಲೈಓವರ್ ಗಳು, ಮುಖ್ಯರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದರು. 10 ಗಂಟೆ ಬಳಿಕವೂ ಓಡಾಡ್ತಿದ್ದ ವಾಹನ ಸವಾರರನ್ನು ತಪಾಸಣೆ ಬಿಗಿ ಆಗಿತ್ತು. ಯಶವಂತಪರದಲ್ಲಿ ಮಾಸ್ಕ್ ಹಾಕದೇ ಒಂದೇ ಕಾರಲ್ಲಿ ಪ್ರಯಾಣಿಸ್ತಿದ್ದ ನಾಲ್ವರಿಗೆ ಪೊಲೀಸರು ದಂಡ ವಿಧಿಸಿದರು. ನೈಟ್‍ಪಾರ್ಟಿಯ ಹಾಟ್‍ಸ್ಪಾಟ್ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಇಂದಿರಾ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಎಲ್ಲವೂ ಬಂದ್ ಆಗಿತ್ತು. ಬನ್ನೇರುಘಟ್ಟದಲ್ಲಿ ಪೊಲೀಸರು ಬೈಕ್‍ಗಳನ್ನು ವಶಕ್ಕೆ ಪಡೆದು ದಂಡ ಹಾಕಿದರು.

    ಕಲಬುರಗಿ: ಕಲಬುರಗಿ ನಗರದಲ್ಲೂ ನೈಟ್‍ಕರ್ಫ್ಯೂ ಬಿಗಿಯಾಗಿತ್ತು. ನೈಟ್‍ಕರ್ಫ್ಯೂ ವೇಳೆಯೂ ಸಂಚರಿಸ್ತಿದ್ದ ಬೈಕ್ ಸವಾರನಿಗೆ ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಬಾರಿಸಿದರು. ರಾತ್ರಿ 11 ಗಂಟೆ ವೇಳೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೈಟ್‍ಕರ್ಫ್ಯೂ ನಡುವೆಯೂ ಓಡಾಡಿದರು. ಆದರೆ ಅವರ ವಾಹನವನ್ನು ಪೊಲೀಸರು ತಡೆಯಲಿಲ್ಲ. ಬಸವಕಲ್ಯಾಣದಲ್ಲಿ ಉಪ ಚುನಾವಣೆ ಪ್ರಚಾರ ಮುಗಿಸಿಕೊಂಡು ಖಾಸಗಿ ಕಾರ್ಯಕ್ರಮಕ್ಕಾಗಿ ಜಮೀರ್ ಕಲಬುರಗಿಗೆ ಬಂದಿದ್ದರು.

    ಮಂಗಳೂರು: ನೈಟ್‍ಕರ್ಫ್ಯೂ ವೇಳೆ ಮಂಗಳೂರಲ್ಲಿ ಪೊಲೀಸ್ ಜೀಪ್ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿದ. ತೊಕ್ಕೊಟ್ಟು ಫ್ಲೈಓವರ್ ಕೆಳಗೆ ನಿಲ್ಲಿಸಿದ ಪೊಲೀಸ್ ಜೀಪ್‍ಗೆ ಕಲ್ಲು ಎಸೆದು ಬಳಿಕ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ನುಗ್ಗಿದ. ಆತನನ್ನು ಹಿಡಿದ ಸ್ಥಳೀಯರು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು. ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ಖುದ್ದು ಪೊಲೀಸ್ ಆಯುಕ್ತ ಶಶಿಕುಮಾರ್ ಗಸ್ತು ಕೈಗೊಂಡರು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ, ತಪಾಸಣೆಯನ್ನು ಬಿಗಿಗೊಳಿಸಿದ್ದರು. ಈ ವೇಳೆ ಯುವಕನೊಬ್ಬ ತನ್ನನ್ನು ಬಿಡುವಂತೆ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.

    ಮೈಸೂರು: ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಬಿಗಿ ಆಗಿತ್ತು. ರಾತ್ರಿ 10 ಗಂಟೆ ಬಳಿಕ ಜನರ ಓಡಾಟ ಸ್ತಬ್ಧವಾಗಿತ್ತು. ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ನೇತೃತ್ವದಲ್ಲಿ ಅಶ್ವಾರೋಹಿ ದಳ ಗಸ್ತು ತಿರುಗಿತು. ನಗರದಲ್ಲಿ ನೈಟ್‍ಕರ್ಫ್ಯೂ ಜಾರಿಗಾಗಿಯೇ 1,200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಾಕಾಬಂಧಿ, ತಪಾಸಣೆ ಎಲ್ಲವೂ ಬಿಗಿ ಆಗಿತ್ತು.

    ಬೀದರ್: ಬೀದರ್ ನಗರದಲ್ಲೂ ನೈಟ್‍ಕರ್ಫ್ಯೂ ಜಾರಿ ಬಿಗಿ ಆಗಿತ್ತು. ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಪೊಲೀಸರು ದಂಡ ಹಾಕಿದರು. ಕೆಲವರಿಗೆ ಎಚ್ಚರಿಕೆಯನ್ನೂ ನೀಡಿದರು. ನಗರದ ಬಸವೇಶ್ವರ ವೃತ, ಅಂಬೇಡ್ಕರ್ ವೃತ, ಹರಳಯ್ಯ ವೃತ, ಚೌಬಾರ್, ಗವಾನ್ ಚೌಕ್, ಬೊಮ್ಮಗೊಂಡೆಶ್ವರ ವೃತದಲ್ಲಿ ಪೊಲೀಸರ ತಪಾಸಣೆ ಹೆಚ್ಚಿತ್ತು.

    ಉಡುಪಿ: ಉಡುಪಿ, ಮಣಿಪಾಲದಲ್ಲೂ ಮೊದಲ ದಿನ ನೈಟ್‍ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಆಗಿತ್ತು. ವಿದೇಶಿ, ಹೊರರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿರುವ ಮಣಿಪಾಲ ತಡರಾತ್ರಿವರೆಗೂ ಗಿಜಿಗುಡುವ ನಗರ. ಆದ್ರೆ ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲವೂ ಸ್ತಬ್ಧ ಆಗಿತ್ತು. ಖುದ್ದು ಜಿಲ್ಲಾಧಿಕಾರಿ ಜಗದೀಶ್ ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಎಚ್ಚರಿಕೆ ನೀಡಿದರು.

  • ಬಿಗ್‍ಬಾಸ್ ಮುಂದೆ ವೈಷ್ಣವಿ ಮತ್ತು ಶುಭಾ ಇಟ್ಟ ಬೇಡಿಕೆ ಏನು ಗೊತ್ತಾ?

    ಬಿಗ್‍ಬಾಸ್ ಮುಂದೆ ವೈಷ್ಣವಿ ಮತ್ತು ಶುಭಾ ಇಟ್ಟ ಬೇಡಿಕೆ ಏನು ಗೊತ್ತಾ?

    ಬೆಂಗಳೂರು: ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಬೀಗಿದ ಅನುಬಂಧ ತಂಡದ ಕ್ಯಾಪ್ಟನ್ ಶುಭಾ ಮತ್ತು ತಂಡದ ಸದಸ್ಯೆ ವೈಷ್ಣವಿ ತಮಗೆ ಕೈ ನೋವಿದೆ ಹಾಗಾಗಿ ನಾವು ಕೇಳಿದ್ದನ್ನು ಕೊಡಿಸಿ ಎಂದು ಬಿಗ್ ಬಾಸ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

    ಟಾಸ್ಕ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ನಿಧಿ ಪ್ಲಾಸ್ಟರ್ ಹಾಕಿಕೊಂಡು ಹೊರ ಬರುತ್ತಿದ್ದಂತೆ ಏನ್ ಕೊಟ್ರು ಎಂದು ಶುಭಾ ಪ್ರಶ್ನೆ ಎತ್ತಿ ಏನ್ ಜ್ಯೂಸ್ ಕೊಟ್ರು ಎಂದು ಕೇಳಿದರು. ಈ ವೇಳೆ ನಿಧಿ ಪ್ಲಾಸ್ಟರ್ ಹಾಕಿ ಜ್ಯೂಸ್ ಕೊಟ್ರು ಎಂದರು. ಈ ವೇಳೆ ಜೊತೆಗಿದ್ದ ಶುಭಾ ಮತ್ತು ವೈಷ್ಣವಿ ಕೈ ಹಿಡಿದುಕೊಂಡು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ನಮಗೆ ಕೈ ನೋವಿದೆ ಹಾಗಾಗಿ ನಮಗೆ ಜ್ಯೂಸ್ ಕೊಡಿಸಬೇಕಾಗಿ ಬೇಡಿಕೆ ಇಟ್ಟರು.

    ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನೋವಿನಿಂದ ನರಳುವಂತೆ ನಮಗೆ ಕೈ ತುಂಬಾ ನೋವು ಆಗುತ್ತಿದೆ. ಹಾಗಾಗಿ ಜ್ಯೂಸ್ ಕೊಡಿಸಿ ಎಂದರು ನಂತರ ಶುಭಾ, ವೈಷ್ಣವಿ ಬಳಿ ಯಾವ ಜ್ಯೂಸ್ ಆಗಬಹುದೆಂದು ಕೇಳಿದರು. ವೈಷ್ಣವಿ ಫ್ರುಟ್ ಪಂಚ್ ಜ್ಯೂಸ್ ಆಗಬಹುದು. ನಮ್ಮನ್ನಿಬ್ಬರನ್ನೇ ಕರೆದು ಜ್ಯೂಸ್ ಕೊಡಿಸಿ ಇಲ್ಲದಿದ್ದರೆ ಎಲ್ಲರೂ ಬರಬಹುದು. ಫ್ರುಟ್ ಪಂಚ್ ಇಲ್ಲದಿದ್ದರೆ ವಾಟರ್‌ಮೆಲನ್ ಕೂಡ ಆಗಬಹುದೆಂದು ಮನವಿ ಮಡಿಕೊಂಡರು.

    ಇವರ ನಾಟಕಕ್ಕೆ ಕರಗಿ ಬಿಗ್ ಬಾಸ್ ಜ್ಯೂಸ್ ಕೊಡಿಸುತ್ತಾರಾ? ಇಲ್ಲವೋ ಎನ್ನುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

  • ಟಯರ್ ಸ್ಫೋಟಗೊಂಡು ಪಲ್ಟಿಯಾದ ಬಸ್

    ಟಯರ್ ಸ್ಫೋಟಗೊಂಡು ಪಲ್ಟಿಯಾದ ಬಸ್

    ಕಾರವಾರ: ಹೊನ್ನಾವರ ತಾಲೂಕಿನ ಖರ್ವಾ-ಯಲಗುಪ್ಪಾ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಟಯರ್ ಸ್ಪೋಟಗೊಂಡು ಬಸ್ ಪಲ್ಟಿಯಾಗಿದೆ.

    ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಹೊನ್ನಾವರ ಮಾರ್ಗವಾಗಿ ಕುಮಟಾಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯ ಟಯರ್ ಸ್ಫೋಟವಾಗಿದೆ. ಈ ವೇಳೆ ವಾಹನದಲ್ಲಿದ್ದ 20 ಮಂದಿಯ ಪೈಕಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬಾಲಕಿ ಅತ್ಯಾಚಾರ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

    ಬಾಲಕಿ ಅತ್ಯಾಚಾರ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ನಂಬಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ ಮೂಲದ ಸಂತ್ರಸ್ತೆ ಈ ಹಿಂದೆ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ನಂತರ ಇನ್ನೊಂದು ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಸಂತ್ರಸ್ತ ಬಾಲಕಿಯು ತನ್ನ ಗೆಳತಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದಳು. ಈ ಸಂದರ್ಭ ಆರೋಪಿಗಳೊಂದಿಗೆ ಸ್ನೇಹ ಬೆಳೆದಿತ್ತು. ಕೆಳದಿನಗಳ ನಂತರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಬಾಲಕಿಯ ಪ್ರೇಮವನ್ನು ದುರುಪಯೋಗ ಪಡಿಸಿಕೊಂಡ ಆರೋಪಿಗಳಿಬ್ಬರು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ.

    ಬಾಲಕಿಯ ತಾಯಿ ನೀಡಿದ ದೂರಿನ ಮೆರೆಗೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈಗಾಗಲೇ ಸಂತ್ರಸ್ತ ಬಾಲಕಿಯನ್ನು ಭಟ್ಕಳದ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಸಚಿವ, ಸಂಸದರ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

    ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟ ಕಾಸಿಲ್ಲ ಎಂದು ಹೇಳುವ ಸರ್ಕಾರ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.

    ಸಚಿವರು, ಸಂಸದರಿಗೆ ಹೊಸ ಕಾರು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಶೋರೂಂ ದರ 22 ಲಕ್ಷಕ್ಕೆ ಖರೀದಿ ಮಿತಿ ನಿಗದಿ ಮಾಡಲಾಗಿತ್ತು. ಈಗ ಶೋರೂಮ್ ದರ 23 ಲಕ್ಷಕ್ಕೆ ಖರೀದಿ ಮಿತಿ ಏರಿಕೆ ನಿಗದಿ ಪರಿಷ್ಕರಿಸಿ ಆದೇಶಿಸಲಾಗಿದೆ. 60 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

    ಕೊರೊನಾ ಕಾಲದಲ್ಲೇ ಇದು ಎರಡನೇ ಬಾರಿ ಖರೀದಿ ದರ ಮಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರೋಬ್ಬರಿ 32ಸಚಿವರು, 28 ಸಂಸದರು ಹೊಸ ಕಾರು ಖರೀದಿ ಮಾಡ್ತಾರಾ ಎನ್ನಲಾಗುತ್ತಿದೆ. 60 ಕಾರು ಖರೀದಿ ಮಾಡಿದ್ರೆ ರಾಜ್ಯದಕ್ಕೆ ಬೊಕ್ಕಸಕ್ಕೆ ಬರೋಬ್ಬರಿ 13.80 ಕೋಟಿ ರೂ. ಹೊರೆ ಬೀಳಲಿದೆ.

    ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಕೊರೊನಾ ಕಾರಣವನ್ನು ಹೇಳುತ್ತಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲು ದುಡ್ಡಿಲ್ಲ ಎಂದು ಹೇಳುತ್ತಾರೆ. ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಯಾಗತ್ತಿಲ್ಲ. ತೆರಿಗೆ ಕಡಿಮೆ ಮಾಡಿ ತೈಲ ಬೆಲೆ ಇಳಿಸಿ ಎಂದರೂ ಕೇಳದ ಸರ್ಕಾರ ಈಗ ನಮ್ಮ ತೆರಿಗೆ ಹಣದಿಂದಲೇ ಕಾರು ಖರೀದಿಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.


    ಸಚಿವರಿಗೆ ವಾಹನ ಬೇಕು ನಿಜ. ಆದರೆ ಸುಸಜ್ಜಿತವಾಗಿರಬೇಕು. ಆದರೆ ಐಶಾರಾಮಿಯಾಗಿರಬೇಕು ಎಂಬ ನಿಯಮವಿಲ್ಲ. ಕೋವಿಡ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕಾದ ಸರ್ಕಾರವೇ ಖರ್ಚು ಮಾಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

  • 406 ಪಾಸಿಟಿವ್, 5 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ – 15,786 ಮಂದಿಗೆ ಲಸಿಕೆ

    406 ಪಾಸಿಟಿವ್, 5 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ – 15,786 ಮಂದಿಗೆ ಲಸಿಕೆ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 406 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 306 ಜನ ಡಿಸ್ಚಾರ್ಜ್ ಆಗಿದ್ದಾರೆ. 6 ಜನ ಕೊರೊನಾಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ ಒಟ್ಟು 54,682 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 15,786 (ಶೇ.29)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಇಂದು ಬಾಗಲಕೋಟೆ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಹಾವೇರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,46,860 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,28,767 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,792 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,282 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 4009 ಆಂಟಿಜನ್ ಟೆಸ್ಟ್, 55,626 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 59,635 ಮಂದಿಗೆ ಪರೀಕ್ಷೆ ಮಾಡಲಾಗಿದೆ.

    ಇಂದು ಬೆಂಗಳೂರಿನಲ್ಲಿ 256, ಕೇಸ್ ವರದಿಯಾಗಿದೆ. ತುಮಕೂರು 24, ದಕ್ಷಿಣ ಕನ್ನಡ 20, ಕಲಬುರಗಿ 14, ಮೈಸೂರು 12, ಮತ್ತು ಬೆಳಗಾವಿಯಲ್ಲಿ 11 ಮಂದಿಗೆ ಸೋಂಕು ಬಂದಿದೆ. ಒಟ್ಟು 125 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 63, ಕಲಬುರಗಿ 10, ಹಾಸನ 5, ದಕ್ಷಿಣ ಕನ್ನಡ 3 ಮತ್ತು ಉಡುಪಿಯ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.