Tag: public school

  • ಸಿಎಸ್ಸಾರ್ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ವಿಳಂಬ – ಡಿ.ಕೆ‌ ಶಿವಕುಮಾರ್ ಅಸಮಾಧಾನ

    ಸಿಎಸ್ಸಾರ್ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ವಿಳಂಬ – ಡಿ.ಕೆ‌ ಶಿವಕುಮಾರ್ ಅಸಮಾಧಾನ

    ಬೆಂಗಳೂರು: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (Public School) ಮಾದರಿಯಲ್ಲಿ ಸಿಎಸ್ಸಾರ್ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D,K Shivakumar) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಶನಿವಾರ ಮುಂದುವರೆದ ರಾಜ್ಯ ಪ್ರಗತಿ ಪರಿಶೀಲನೆ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆಯಲ್ಲಿ ಡಿಸಿಎಂ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪ್ರತಿ ವರ್ಷ 8000 ಕೋಟಿ ರೂ. ಸಿಎಸ್ಸಾರ್ ನಿಧಿ ಲಭ್ಯವಿದ್ದು, ಇದನ್ನು ಸಿಎಸ್ಸಾರ್ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ವರ್ಷದ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಇದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ರಾಜ್ಯದ ಕಾರ್ಪೊರೇಟ್ ಸಂಸ್ಥೆಗಳು ಸಿಎಸ್ಸಾರ್ ನಿಧಿಯನ್ನು ಅನ್ಯ ರಾಜ್ಯಗಳ ಖಾಸಗಿ ಸೇವಾ ಸಂಸ್ಥೆಗಳಿಗೆ (NGO)ಗಳಿಗೆ ಚೆಕ್ ನಲ್ಲಿ ಕೊಟ್ಟು ಅದರಲ್ಲಿ 50% ರಷ್ಟನ್ನು ನಗದು ಸ್ವರೂಪದಲ್ಲಿ ವಾಪಸ್ಸು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದೊಂದು ಅಕ್ರಮ, ಇದರಿಂದ ನಮ್ಮ ರಾಜ್ಯದ ನಿಧಿ ದುರುಪಯೋಗ ಆಗುತ್ತಿದೆ. ಇದನ್ನು ನಮ್ಮ ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಬಳಸುವುದು ನಿಮ್ಮ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

    ಕಾರ್ಪೊರೇಟ್ ಸಂಸ್ಥೆಗಳು CSR ನಿಧಿಯನ್ನು ನಮಗೆ ನಗದು ಸ್ವರೂಪದಲ್ಲಿ ಕೊಡುವುದು ಬೇಡ. ಮೂರೂ ಗ್ರಾಮ ಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆ ಕಟ್ಟಿಕೊಡಲಿ. ಜಮೀನು ಬೇಕಿದ್ದರೆ ಸರಕಾರದಿಂದಲೇ ಕೊಡೋಣ. ನೀವೇ ಜಾಗ ಗುರುತಿಸಿ. ನಾವು ವಿನ್ಯಾಸ ಕೊಡೋಣ. ಅವರು ಕಟ್ಟಡ ಕಟ್ಟಿ, ಮೂಲಸೌಕರ್ಯ ಒದಗಿಸಲಿ. ಆ ಶಾಲಾ ಕಟ್ಟಡದ ಮೇಲೆ ರಾಜ್ಯ ಸರಕಾರದ ಜತೆಗೆ ಆಯಾ ಸಂಸ್ಥೆಗಳ ಹೆಸರಿನ ಫಲಕ ಹಾಕಿಕೊಳ್ಳಲಿ. ಈ ಶಾಲೆಗಳಿಗೆ ಖಾಸಗಿ ಶಾಲೆಗಳಿಂದ ತಲಾ ಒಬ್ಬರು ನುರಿತ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿ ವಹಿಸೋಣ ಎಂದಿದ್ದಾರೆ.

    ನನ್ನ ಕ್ಷೇತ್ರದಲ್ಲಿ ತಲಾ 9 ರಿಂದ 12 ಕೋಟಿ ರೂ. ವೆಚ್ಚ ಮಾಡಿ 13 ಸಿಎಸ್ಸಾರ್ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಕಡೆ ಮಾತ್ರ ಕೆಲಸ ಆಗುತ್ತಿದೆ. ಬಹುತೇಕ ಕಡೆ ಯಾರೂ ಆಸಕ್ತಿಯನ್ನೇ ವಹಿಸಿಲ್ಲ ಎಂದು ಕಿಡಿ ಕಾರಿದ್ದಾರೆ.

    ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿನ ಕಾರ್ಪೊರೇಟ್ ಸಂಸ್ಥೆಗಳಿಗೆ ಕೂಡಲೇ ಪತ್ರ ಬರೆದು, ಸಭೆ ಕರೆದು ಪಬ್ಲಿಕ್ ಶಾಲೆಗಳ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿ. ಈವರೆಗೂ ಕಾರ್ಪೊರೇಟ್ ಸಂಸ್ಥೆಗಳು ಏನು ಮಾಡಿವೆ ಎಂಬುದರ ಮಾಹಿತಿ ಪಡೆಯಿರಿ. ಶಿಕ್ಷಣ ಇಲಾಖೆ ವಿನ್ಯಾಸ (ಡಿಸೈನ್) ನೀಡುತ್ತದೆ. ಅದನ್ನು ಆಧರಿಸಿ ಕಟ್ಟಡ ಕಟ್ಟಲು ಸೂಚನೆ ಕೊಡಿ. ಒಂದೊಂದು ತಾಲೂಕಿಗೆ ಒಂದು ಮಾದರಿ ಶಾಲೆ ನಿರ್ಮಿಸಿ, ಅದರ ವಿನ್ಯಾಸದ ಮೇರೆಗೆ ಮೂರು ಪಂಚಾಯಿತಿಗೆ ಒಂದು ಶಾಲೆ ನಿರ್ಮಾಣದ ಗುರಿ ನಿಗದಿ ಮಾಡಿ ಎಂದು ಡಿಸಿ ಹಾಗೂ ಸಿಇಓ ಗಳಿಗೆ ಸೂಚನೆ ನೀಡಿದ್ದಾರೆ.

    ಶಾಲೆಗಳ ನಿರ್ಮಾಣಕ್ಕೆ ಸಿಎಸ್ಸಾರ್ ನಿಧಿ ಬಳಕೆ ಸಂಬಂಧ ಬೆಂಗಳೂರು ಕಾರ್ಪೊರೇಟ್ ಸಂಸ್ಥೆಗಳ ಸಭೆ ಕರೆಯಲು ಬೆಂಗಳೂರು ಜಿಲ್ಲಾಧಿಕಾರಿ, ಸಿಇಓಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಸಭೆ ಕರೆದು ಸಿಎಸ್ಸಾರ್ ಶಾಲೆ ನಿರ್ಮಾಣ ತ್ವರಿತಗತಿಯಲ್ಲಿ ಆಗುವಂತೆ ಕ್ರಮ ಕೈಗೊಳ್ಳಬೇಕು. ತಾವೇ ಆಗಾಗ್ಗೆ ಡಿಸಿ ಮತ್ತು ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

  • ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

    ಶಾಲೆ ಆವರಣದಲ್ಲಿ ಕಾಲುಜಾರಿ ಬಿದ್ದು 10 ವರ್ಷದ ಬಾಲಕ ಸಾವು!

    ಘಜಿಯಾಬಾದ್: ಇಲ್ಲಿನ ಇಂದಿರಾಪುರಂ ಶಾಲೆಯ ಎರಡನೇ ಮಹಡಿಯ ಆವರಣದಲ್ಲಿ 10 ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

    ಅರ್ಮನ್ ಸೆಹಗಲ್ ಮೃತ ದುರ್ದೈವಿ ಬಾಲಕ. ಈತ ಇಂದಿರಾಪುರಂ ಜಿ ಜಿ ಗೊಯೆಂಕಾ ಪಬ್ಲಿಕ್ ಸ್ಕೂಲ್ ನಲ್ಲಿ 4 ನೇ ತರಗತಿ ಓದುತ್ತಿದ್ದನು.

    ಏನಿದು ಘಟನೆ?: ತಂದೆ ಗುಲ್ಶನ್ ಸೆಹಗಲ್ ಮಗ ಅರ್ಮನ್ ನನ್ನು ಮಂಗಳವಾರ ಬೆಳಗ್ಗೆ 7.30ರ ವೇಳೆಗೆ ಶಾಲೆಗೆ ಬಿಟ್ಟು ಬಂದಿದ್ದರು. ಅಂದು ಅರ್ಮನ್ ಗೆ ವಾರದ ಪರೀಕ್ಷೆ ನಡೆಯುವುದಿತ್ತು. ಹೀಗಾಗಿ ಮಗನನ್ನು ತಂದೆ ಬೇಗನೆ ಶಾಲೆಗೆ ಬಿಟ್ಟು ಬಂದಿದ್ದರು. ಗುಲ್ಶನ್ ಮನೆಗೆ ಹಿಂದಿರುಗುತ್ತಿದ್ದಂತೆಯೇ ಅರ್ಮನ್ ಶಾಲೆಯ ಆವರಣದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಹೀಗಾಗಿ ಆತನನ್ನು ಕೂಡಲೇ ನಗರದ ಶಾಂತಿ ಗೋಪಾಲ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಶಾಲೆಯಿಂದ ಕರೆ ಬಂದಿದೆ. ಅಂತೆಯೇ ಅರ್ಮನ್ ಪೋಷಕರು ಆಸ್ಪತ್ರೆಗೆ ಕೂಡಲೇ ತೆರಳಿದ್ರು. ಆದ್ರೆ ಅದಾಗಲೇ ವೈದ್ಯರು ಆತ ಮೃತಪಟ್ಟಿದ್ದಾನೆ ಅಂತ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ತೀವ್ರ ಗಾಯಗಳಾಗಿರುವುದರಿಂದ ಬಾಲಕ ಮೃತಪಟ್ಟಿದ್ದಾನೆ ಅಂತ ಹೇಳಲಾಗಿದೆ.

    ಹೆತ್ತವರ ಆರೋಪವೇನು?: ಶಾಲೆಯ ಶಿಕ್ಷಕರ ನಿರ್ಲಕ್ಷ್ಯಕ್ಕೆ ನನ್ನ ಮಗ ಬಲಿಯಾಗಿದ್ದಾನೆ ಅಂತ ಆರೋಪಿಸುತ್ತಿದ್ದಾರೆ. ಮಗ ಶಾಲೆಯಲ್ಲಿ ಬಿದ್ದ ಕೂಡಲೇ ಯಾರೊಬ್ಬರು ನಮಗೆ ಮಾಹಿತಿ ನೀಡಿಲ್ಲ. ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನಮಗೆ ಕರೆ ಮಾಡಿದ್ದಾರೆ ಅಂತ ಅರ್ಮನ್ ತಾಯಿ ಸ್ವಾತಿ ಸೆಹಗಲ್ ತಿಳಿಸಿದ್ದಾರೆ.

    ಅರ್ಮನ್ ಕಾಲು ಜಾರಿ ಬಿದ್ದ ಕೂಡಲೇ ಅಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ ಅಂತ ಶಾಲೆಯವರು ಹೇಳುತ್ತಾರೆ. ಆದ್ರೆ ಇದು ಸುಳ್ಳು. ಶಾಲೆಯ ಆವರಣದಲ್ಲಿ ನೀರು ಇದ್ದುದರಿಂದ ಆತ ಕಾಲು ಜಾರಿ ಬಿದ್ದಿದ್ದಾನೆ. ಇಲ್ಲಿ ನಿಜ ವಿಚಾರವನ್ನು ಶಾಲೆಯ ಆಡಳಿತ ಮಂಡಳಿ ಮುಚ್ಚಿಡುತ್ತಿದೆ. ನನ್ನ ಎದುರೇ ಅರ್ಮನ್ ಕಾಲು ಜಾರಿ ಬಿದ್ದಿದ್ದಾನೆ ಅಂತ ಆತನ ಕ್ಲಾಸ್ ಟೀಚರ್ ಹೇಳುತ್ತಿದ್ದಾರೆ. ಆದ್ರೆ ಇದನ್ನು ನಾನು ನಂಬಲ್ಲ. ನನ್ನ ಮಗ ಅಷ್ಟೊಂದು ದುರ್ಬಲನಲ್ಲ. ಹೀಗಾಗಿ ಆವರಣದಲ್ಲಿ ನೀರಿದ್ದ ಕಾರಣವೇ ಆತ ಕಾಲು ಜಾರಿ ಬಿದ್ದಿದ್ದಾನೆ. ಯಾಕಂದ್ರೆ ನಾನು ಆತನ ದೇಹವನ್ನು ಪರಿಶೀಲಿಸಿದಾಗ ಬಟ್ಟೆ ಒದ್ದೆಯಾಗಿತ್ತು ಅಂತ ಸ್ವಾತಿ ಆರೋಪಿಸಿದ್ದಾರೆ.

    ಆದ್ರೆ ಸ್ವಾತಿ ಅವರ ಆರೋಪಗಳನ್ನು ಶಾಲೆಯ ಪ್ರಾಂಶುಪಾಲೆ ಡಾ. ಕವಿತಾ ಶರ್ಮಾ ತಳ್ಳಿ ಹಾಕಿದ್ದಾರೆ. ಶಾಲೆಯಲ್ಲಿ ಆ ದಿನ ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಅರ್ಮನ್ ಪೆನ್ಸಿಲ್ ತರಲೆಂದು ಎಕ್ಸಾಂ ಹಾಲ್ ನಿಂದ ಹೊರಗಡೆ ಹೋಗಿದ್ದನು. ಈ ವೇಳೆ ಶಾಲೆಯ ಕಾರಿಡಾರ್ ನಲ್ಲಿ ಆತ ಕಾಲು ಜಾರಿ ಬಿದ್ದಿದ್ದಾನೆ ಅಂತ ಹೇಳಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆಯಾಗಿದೆ. ಆತ ಇನ್ನೊಂದು ಕ್ಲಾಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆತನನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಆತ ಬಿದ್ದ ಜಾಗ ಅಥವಾ ಸುತ್ತಲೂ ನೀರು ಇರಲಿಲ್ಲ. ಪ್ರಕರಣದ ಕುರಿತಂತೆ ಪೊಲಿಸರು ತನಿಖೆ ಮುಂದುವರೆಸಿದ್ದಾರೆ ಅಂತ ಹೇಳಿದ್ರು.

    ಅರ್ಮನ್ ಕಾಲು ಜಾರಿ ಬಿದ್ದ ಜಾಗದ ಸುತ್ತಮುತ್ತ ಸಿಸಿಟಿವಿ ಅಳವಡಿಸಿಲ್ಲ ಅಂತ ಶಾಲೆಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಬಾಲಕ ಪೋಷಕರ ಆರೋಪದ ಮೇರೆಗೆ ಇದೀಗ ಶಾಲೆಯ ಪ್ರಾಂಶುಪಾಲೆ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.