ಬೆಂಗಳೂರು: ವಾಹಿನಿ ಆರಂಭಿಸುವುದು ಸುಲಭ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟ. ಹೀಗಿರುವಾಗ 11 ವರ್ಷಗಳ ಕಾಲ ಪಬ್ಲಿಕ್ ಮ್ಯೂಸಿಕ್ ಕೈ ಹಿಡಿದು ಮುನ್ನಡೆಸಿದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರೈಟ್‌ಮೆನ್ ಮೀಡಿಯಾ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಹೇಳಿದರು.
ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆದ ಪಬ್ಲಿಕ್ ಮ್ಯೂಸಿಕ್ 11ನೇ ವರ್ಷದ (PUBLiC Music 11 th Anivresray) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಬ್ಲಿಕ್ ಮ್ಯೂಸಿಕ್‌ಗೆ 11 ವರ್ಷ ಆಗಿರುವುದು ನನಗೂ ವಿಶೇಷ. ಇಂದು ಪಬ್ಲಿಕ್ ಟಿವಿಯಲ್ಲಿ ರಾಜಕೀಯ, ಸುತ್ತ ಘಟನೆಗಳನ್ನು ನೋಡುವಾಗ ಬಹಳ ಬೇಸರ ಆಗುತ್ತದೆ. ಆದರೆ ಮ್ಯೂಸಿಕ್‌ನಲ್ಲಿ ಆ ರೀತಿಯ ಸಮಸ್ಯೆ ಇಲ್ಲ. ಇಲ್ಲಿ ಹಾಡುಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಸಂಗೀತಕ್ಕೆ ನಮ್ಮನ್ನು ಆವರಿಸುವ ಶಕ್ತಿಯಿದೆ ಎಂದು ಬಣ್ಣಿಸಿದರು.
ಸಣ್ಣ ವಯಸ್ಸಿನಲ್ಲಿ ಸಂಗೀತ ಕಲಿಯಲು ಹೋಗುತ್ತಿದ್ದಾಗ ನಾನು ಪತ್ರಕರ್ತನಾಗುತ್ತೇನೆ. ದೊಡ್ಡ ಟಿವಿ ಕಟ್ಟುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಸಂಗೀತಗಾರನಾಗಬಹುದು ಅಂತ ಅಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಬೇರೆ ಏನೋ ಆಗಿದ್ದೇನೆ. ಈಗ ಹತ್ತಿರ ಹತ್ತಿರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದು 40 ವರ್ಷವಾಯಿತು. ಆದರೆ ಏನು ಆಗಬೇಕು ಅಂತ ಅಂದುಕೊಂಡಿದ್ದೇನೋ ಈಗ ಅದೇ ಮ್ಯೂಸಿಕ್ ನನ್ನನ್ನು ಕಾಪಾಡುತ್ತಿದೆ. ಮನಸ್ಸಿಗೆ ಸಮಾಧಾನ ನೀಡುತ್ತಿದೆ ಎಂದು ತಿಳಿಸಿದರು.
ರಾಜ್‌ಕುಮಾರ್, ವಿಷ್ಣುವರ್ಧನ್, ಸರೋಜಾದೇವಿ, ಭಾರತಿ, ಅಮಿತಾಬ್ ಬಚ್ಚನ್ ಈ ರೀತಿ ನಾಯಕ, ನಾಯಕಿಯರಾಗಿ ಬರುವ ಪೀಳಿಗೆ ಹೋಯ್ತು. ಈಗ ಮೂರು, ನಾಲ್ಕು ಸಿನಿಮಾ ಮಾಡುವಷ್ಟರಲ್ಲಿ ಹೊಸಬರು ಬರುತ್ತಾರೆ. ಅದೇ ರೀತಿ ಈಗ ಹಾಡುಗಾರರಿಗೆ, ಸಂಗೀತಕ್ಕೆ ಅವಕಾಶ ಸಿಗುತ್ತಿದೆ. ಟೆಕ್ನಾಲಜಿ ಸಹ ಸಹಕಾರ ನೀಡುತ್ತಿದೆ. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗುತ್ತಿದ್ದು ಹೊಸಬರಿಗೆ ಅವಕಾಶ ಸಿಗುತ್ತಿದೆ ಎಂದು ಹೇಳಿದರು.
ಮಧ್ಯೆ ಮಧ್ಯೆ ನಾವು ಎಡವಿರಬಹುದು. ಮತ್ತೆ ನಾವು ಚೇತರಿಸಿಕೊಂಡು ಬಂದಿದ್ದೇವೆ. ಆಡಿಯೋ ಕಂಪನಿಗಳ ಸಹಕಾರದಿಂದ ನಾವು ನಡೆದುಕೊಂಡು ಬಂದಿದ್ದೇವೆ. 11 ವರ್ಷಗಳ ದೀರ್ಘ ಪ್ರಯಾಣಕ್ಕೆ ಸಾಗಲು ಕಾರಣರಾದವರು ಕರ್ನಾಟಕದ ಜನತೆ, ಆಡಿಯೋ ಕಂಪನಿಗಳು, ಕೇಬಲ್ ಕಂಪನಿಗಳು ಮತ್ತು ಜಾಹೀರಾತುದಾರರು. ನಮಗೆ ಸಹಕಾರ ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯೂಸಿಕ್ ನಿರ್ದೇಶಕ ಅರ್ಜುನ್ ಜನ್ಯಾ, ಜಂಕಾರ್ ಮ್ಯೂಸಿಕ್ ಮುಖ್ಯಸ್ಥ ಭರತ್ ಜೈನ್, ಅಶ್ವಿನಿ ಆಡಿಯೋ ಮುಖ್ಯಸ್ಥ ಅಶ್ವಿನಿ ರಾಮಪ್ರಸಾದ್ ಭಾಗವಹಿಸಿ ಪಬ್ಲಿಕ್ ಮ್ಯೂಸಿಕ್‌ಗೆ ಶುಭ ಹಾರೈಸಿದರು.















