Tag: public movies

  • ನಿಮ್ಮ ಪಬ್ಲಿಕ್‌ ಟಿವಿಗೆ 13ನೇ ಸಂಭ್ರಮ!

    ನಿಮ್ಮ ಪಬ್ಲಿಕ್‌ ಟಿವಿಗೆ 13ನೇ ಸಂಭ್ರಮ!

    “ಯಾರ ಆಸ್ತಿಯೂ ಅಲ್ಲ. ಇದು ನಿಮ್ಮ ಟಿವಿ” ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ನಿಮ್ಮ ಪಬ್ಲಿಕ್ ಟಿವಿಗೆ (PUBLiC TV) ಇಂದು 13ನೇ ಹುಟ್ಟುಹಬ್ಬದ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ (PUBLIC MOVIES) 7 ರ ಸಂಭ್ರಮ.

    ಪಬ್ಲಿಕ್ ಟಿವಿಯ ಈ 13 ವರ್ಷ ಸಾಧನೆಯ ಹಿಂದೆ ಸ್ಫೂರ್ತಿದಾಯಕ ಕಥೆಯಿದೆ. ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಮುಖ್ಯ ಕಾರಣ. ನಮ್ಮನ್ನು ನೀವು ನಿರಂತರವಾಗಿ ಪ್ರೋತ್ಸಾಹಿಸಿದ್ದರಿಂದ ನಾವು ಅಂಬೆಗಾಲಿನಿಂದ 12 ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ನಿಧಾನವಾಗಿ ನಡೆಯಲು ಆರಂಭಿಸಿದ್ದೇವೆ.

    12 ಪುಟ್ಟ ಹೆಜ್ಜೆಗಳನ್ನು ಇಟಿದ್ದೇವೆ ಹೌದು. ಆದರೆ ನಮ್ಮು ಮುಂದಿನ ಹೆಜ್ಜೆಯ ಮುಂದೆ ದೊಡ್ಡ ಸವಾಲಿದ್ದು ಇಂದು ಜನರ ಕೈಯಲ್ಲೇ ಟಿವಿಯಿದೆ. ಕೈಯಲ್ಲೊಂದು ಫೋನ್‌ ಇದ್ದರೆ ವಿಶ್ವದ ಸಕಲ ಮಾಹಿತಿಗಳು ಬೆರಳಂಚಿನಲ್ಲೇ ಸಿಗುತ್ತಿದೆ. ಸಾಮಾಜಿಕ ಜಾಲತಾಣಗಳು ಇಂದು ಮಾಧ್ಯಮವಾಗಿ ಬದಲಾಗಿದ್ದು ಲೆಕ್ಕವಿಲ್ಲದ್ದಷ್ಟು ಚಾನೆಲ್‌ಗಳು ಸೃಷ್ಟಿಯಾಗಿವೆ. ಪರಿಸ್ಥಿತಿ ಹೀಗಿರುವಾಗ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.

    ಇಚ್ಛಾಶಕ್ತಿ, ದೃಢ ಸಂಕಲ್ಪ, ಹಠ-ಛಲವಿದ್ದರೆ ಬೆಟ್ಟವನ್ನೇ ಕುಟ್ಟಿ ಪುಡಿಗಟ್ಟಬಹುದು ಎನ್ನುತ್ತಾರೆ ಹಿರಿಯರು. ಪಬ್ಲಿಕ್ ಟಿವಿಯ ಆರೋಹಣದ ಹಿಂದೆಯೂ ಇಂಥದ್ದೇ ಸ್ಫೂರ್ತಿದಾಯಕ ಕಥೆಯಿದೆ. ಹೆಚ್.ಆರ್.ರಂಗನಾಥ್ (HR Ranganath) ಅವರು ತಮ್ಮ ಪ್ರತಿಭೆ, ಸಾಮರ್ಥ್ಯವನ್ನೇ ಶಕ್ತಿಯಾಗಿಸಿ, ವೃತ್ತಿನಿಷ್ಠೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಉತ್ತಮ ತಂಡವನ್ನು ಕಟ್ಟಿದ್ದರಿಂದ ಪಬ್ಲಿಕ್‌ ಟಿವಿ ಇಂದು ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಾಗಿ ಹೊರಹೊಮ್ಮಿದೆ.

    ಈ 13 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಸುಲಭವಾಗಿರಲಿಲ್ಲ. ಹಲವು ಸಂಕಷ್ಟಗಳು ಬಂದರೂ ನಮ್ಮ ಕೈ ಹಿಡಿದು ಮುನ್ನಡೆಸಿದ್ದು ವೀಕ್ಷಕರಾದ ನೀವು. ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಕೋಟಿ ನಮನ. 13 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೆಯೇ ಮುಂದುವರಿಯಬೇಕು ಎನ್ನುವುದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತಾ 2012 ರಿಂದ 2024 ವರೆಗಿನ 12 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಹೇಗಿತ್ತು ಎಂಬ ಕಿರು ವಿವರವನ್ನು ಇಲ್ಲಿ ನೀಡಲಾಗಿದೆ.

    2012:
    ಜನರಿಗಾಗಿ, ಜನರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ ಆರಂಭಗೊಂಡಿತ್ತು. ಪರೀಕ್ಷೆ ಬರೆದು ತೇರ್ಗಡೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ತರಬೇತಿ ನೀಡಿದ ಬಳಿಕ ವಾಹಿನಿಯನ್ನು ಆರಂಭಿಸಲಾಗಿತ್ತು. ಉದ್ಯೋಗಿಗಳ ಪೈಕಿ ಶೇ.80 ರಷ್ಟು ಮಂದಿ ಮಾಧ್ಯಮ ಜಗತ್ತಿಗೆ ಹೊಸಬರು. ಲೋಕಾರ್ಪಣೆಗೊಂಡ ಮೊದಲ ವಾರ್ತೆಯಲ್ಲೇ ಭಾಷೆ, ನೆಲ, ಜಲದ ವಿಷಯದಲ್ಲಿ ನಾವು ರಾಜಿಯಾಗುವುದಿಲ್ಲ ಎಂದು ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ ಅವರು ಜನರಿಗೆ ಆಶ್ವಾಸನೆ ನೀಡಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾಹಿನಿಗೆ ಶುಭ ಹಾರೈಸಿದ್ದರು.

    2013:
    ಮೊದಲ ವರ್ಷದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಟಿಎಸ್‌ ನಾಗಾಭರಣ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಹೆಚ್‌.ಆರ್‌. ರಂಗನಾಥ್‌ ಅವರ ಪತ್ರಿಕೋದ್ಯಮ ಗುರು ಸತ್ಯ, ನಟ ನೆನಪಿರಲಿ ಪ್ರೇಮ್‌, ಕ್ರೀಡಾಪಟು ಗಿರೀಶ್‌, ಆಟೋ ಚಾಲಕ ವೇಣುಗೋಪಾಲ್‌ ಸೇರಿದಂತೆ ಹಲವು ಗಣ್ಯರ ಜೊತೆ ʼಪಬ್ಲಿಕ್‌ ವಿಥ್‌ ಪಬ್ಲಿಕ್ಸ್‌ʼ ಹೆಸರಿನ ಕಾರ್ಯಕ್ರಮ ನಡೆಯಿತು. ಅಂದು ಸಂಜೆ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರ ಸಂದರ್ಶನ ʼಕೃಷ್ಣ ಪಯಣʼ ನಡೆಯಿತು.

    2014:
    ರಾಷ್ಟ್ರವಾಪಿ ಲೋಕಪಾಲ್‌ ವಿರುದ್ಧ ಹೋರಾಟ ನಡೆದ ವರ್ಷ ಇದು. ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಅಂದೇ ಸಿಎಂ ಸಿದ್ದರಾಮಯ್ಯನವರ ಜೊತೆಗಿನ ವಿಶೇಷ ಸಂದರ್ಶನ ಸಹ ಪ್ರಸಾರವಾಗಿತ್ತು. 2014 ರ ಸೆಪ್ಟೆಂಬರ್‌ 27 ರಂದು ರೈಟ್‌ಮೆನ್‌ ಮೀಡಿಯಾದ ಎರಡನೇ ವಾಹಿನಿ ʼಪಬ್ಲಿಕ್‌ ಮ್ಯೂಸಿಕ್‌ʼ ಆರಂಭವಾಗಿತ್ತು.

    2015:
    ಸರಳವಾಗಿ ಪಬ್ಲಿಕ್‌ ಟಿವಿ ಕಚೇರಿಯಲ್ಲಿ 3ನೇ ವಾರ್ಷಿಕೋತ್ಸವ ನಡೆಯಿತು. ಪಬ್ಲಿಕ್‌ ಟಿವಿ ಸಹೋದ್ಯೋಗಿಗಳ ಜೊತೆ ಹೆಚ್‌ ಆರ್‌ ರಂಗನಾಥ್‌ ದಂಪತಿ ಅವರು ಕೇಕ್‌ ಕತ್ತರಿಸಿದರು. ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಪಬ್ಲಿಕ್‌ ಟಿವಿ ಕಚೇರಿಗೆ ಆಗಮಿಸಿ ಶುಭ ಹಾರೈಸಿದ್ದರು.

    2016:
    ಫೆಬ್ರವರಿ 3 ರಂದು ವಿಶ್ವ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 9 ಮಂದಿ ಮೃತಪಟ್ಟಿದ್ದರೆ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ಹನುಮಂತಪ್ಪ ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ವೀರ ಮರಣ ಹೊಂದಿದ್ದರು. 10 ಮಂದಿ ವೀರ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿತ್ತು.

    2017:
    ಪಬ್ಲಿಕ್‌ ಟಿವಿ 5ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ,  ದಿ.ಎಸ್‌ಎಂ ಕೃಷ್ಣ, ಕೇಂದ್ರ ಸಚಿವರಾಗಿದ್ದ ದಿ.ಅನಂತ್‌ ಕುಮಾರ್‌, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಆರ್‌ ಅಶೋಕ್‌ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 5ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಸಾಧಕರನ್ನು ಪುರಸ್ಕರಿಸಲಾಗಿತ್ತು. ಖ್ಯಾತ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

    2018:
    6ನೇ ವಾರ್ಷಿಕೋತ್ಸವದಂದು ಪಬ್ಲಿಕ್‌ ಟಿವಿಯ ಮಾತೃ ಸಂಸ್ಥೆ ರೈಟ್‌ ಮೆನ್‌ ಮೀಡಿಯಾದ ಮೂರನೇ ಕೂಡಿ ʼಪಬ್ಲಿಕ್‌ ಮೂವೀಸ್‌ʼ ಲೋಕಾರ್ಪಣೆಗೊಂಡ ವರ್ಷ. ಈ ವಾಹಿನಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌, ರಮೇಶ್‌ ಅರವಿಂದ್‌, ಶ್ರೀನಾಥ್‌, ಜಯಮಾಲಾ, ಲಹರಿ ಮ್ಯೂಸಿಕ್‌ ಸಂಸ್ಥೆಯ ಜಿ. ಮನೋಹರ ನಾಯ್ಡು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಭಾಗಿಯಾಗಿದ್ದರು.

    2019:
    ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ನೀಡಿದ ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜನವರಿಯಲ್ಲಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಪ್ತ ಸಂವತ್ಸರ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿತ್ತು. ಸಂಭ್ರಮಾಚರಣೆಯ ಬದಲು ಶ್ರೀಗಳ ಗೌರವಾರ್ಥ ಮಠದ ದಾಸೋಹ ನಿಧಿಗೆ ವಾಹಿನಿ ವತಿಯಿಂದ ಅಳಿಲು ಸೇವೆ ಮಾಡಲು ನಿರ್ಣಯಿಸಲಾಯಿತು. ಅದರಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಿದ್ದಲಿಂಗ ಶ್ರೀಗಳಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರಿಸಿದ್ದರು.

    2020:
    2019ರ ಕೊನೆಯಲ್ಲಿ ಆರಂಭಗೊಂಡ ಕೋವಿಡ್‌ 2020ರ ಆರಂಭದಲ್ಲಿ ವಿಶ್ವಾದ್ಯಂತ ಹರಡಲು ಆರಂಭವಾಯಿತು. ಈ ಕಾರಣಕ್ಕೆ ಪಬ್ಲಿಕ್‌ ಟಿವಿಯ 8ನೇ ವರ್ಷ ಮತ್ತು ಪಬ್ಲಿಕ್‌ ಮೂವೀಸ್‌ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ. ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಸರಳವಾಗಿ ಕೇಕ್‌ ಕತ್ತರಿಸುವ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಲಾಕ್‌ಡೌನ್‌ ನಿಂದ ಸಂಕಷ್ಟ ಅನುಭವಿಸಿದ ಜನರಿಗೆ ನೆರವಾಗಲು ಹೆಚ್‌.ಆರ್‌.ರಂಗನಾಥ್‌ ಅವರು ನಡೆಸಿಕೊಡುತ್ತಿದ್ದ ʼಮನೆಯೇ ಮಂತ್ರಾಲಯʼ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಸಂಕಷ್ಟದಲ್ಲಿದ್ದ ಸಾವಿರಾರು ಮಂದಿಗೆ ಈ ಕಾರ್ಯಕ್ರಮ ಸಹಾಯ ನೀಡಿತ್ತು. ಇದರ ಜೊತೆ ರಾಜ್ಯದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ನೆರವು ನೀಡಲು ರೋಟರಿ ಸಹಾಯೋಗದೊಂದಿಗೆ ʼಜ್ಞಾನದೀವಿಗೆʼ ಹೆಸರಿನಲ್ಲಿ ಉಚಿತ ಟ್ಯಾಬ್ಲೆಟ್‌ ನೀಡುವ ಮಹತ್ವಾಕಾಂಕ್ಷಿಯ ಯೋಜನೆಗೆ ಚಾಲನೆ ನೀಡಲಾಗಿತ್ತು.

     

    2021:
    9ನೇ ವರ್ಷದ ಸಂಭ್ರಮಾಚರಣೆಗೂ ಕೋವಿಡ್‌ ಭೀತಿ ಇತ್ತು. ಈ ಕಾರಣಕ್ಕೆ ಸರಳವಾಗಿಯೇ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಲಾಯಿತು. ಅಂದು ಸಂಜೆ ʼದಿಗ್ಗಜರ ಬೆಳ್ಳಿ ಹಬ್ಬʼ ವಿಶೇಷ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಮತ್ತು ರಂಗನಾಥ್‌ ಅವರನ್ನು ದಿವ್ಯಜ್ಯೋತಿ ಅವರು ಸಂದರ್ಶಿಸಿದರು.

     

    2022:
    ಪಬ್ಲಿಕ್‌ ಟಿವಿಗೆ ದಶಕದ ಸಂಭ್ರಮ. ಹತ್ತು ವರ್ಷ ಪೂರೈಸಿದ ಹಿನ್ನಲೆ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ʼಪಬ್ಲಿಕ್ ರಥʼ ರಾಜ್ಯದ್ಯಾಂತ ಸಂಚಾರ ಮಾಡಿತ್ತು. ಮಾಜಿ ಸಿಎಂ ಯಡಿಯೂರಪ್ಪನವರು ಪಬ್ಲಿಕ್‌ ರಥಕ್ಕೆ ಚಾಲನೆ ನೀಡಿದ್ದರು. ವಾರ್ಷಿಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಟ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ ನಾಯ್ಡು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್‌ ಗೌರವಾರ್ಥ ‘ಶಕ್ತಿಧಾಮʼಕ್ಕೆ 25 ಲಕ್ಷ ರೂ.ನೀಡಲಾಯಿತು. ಅಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದರು. ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಯ ಎಲ್ಲಾ ಸಿಬ್ಬಂದಿಗೆ ಸನ್ಮಾನ ಮಾಡಲಾಗಿತ್ತು.

     

    2023:
    ಪಬ್ಲಿಕ್‌ ಟಿವಿ ಎಲ್ಲಾ ವಿಭಾಗದ ಮುಖ್ಯಸ್ಥರು ಕೇಕ್‌ ಕತ್ತರಿಸುವ ಮೂಲಕ 11 ವರ್ಷದ ಸಂಭ್ರಮಾಚರಣೆ ಮಾಡಲಾಯಿತು. ಒಂದು ಸಂಸ್ಥೆ ಬೆಳೆಯಬೇಕಾದರೆ ಉದ್ಯೋಗಿಗಳ ಪಾಲು ದೊಡ್ಡದು. ಉದ್ಯೋಗಿಗಳು ಶ್ರದ್ಧೆಯಿಂದ ಕೆಲಸ ಮಾಡಿದರೆ ಆ ಸಂಸ್ಥೆ ಮುಂದುವರಿಯುತ್ತದೆ. ಸಿಬ್ಬಂದಿಯಿಂದಲೇ ನಮ್ಮ ಸಂಸ್ಥೆಗೆ ಗೌರವ ಬಂದಿದೆ. ಪಬ್ಲಿಕ್‌ ಟಿವಿಗೆ ಗೌರವ ಬರಲು ಕಾರಣಾರಾದವರನ್ನು ಗೌರವಿಸಲು ಸಹೋದ್ಯೋಗಿಗಳ ಕೈಯಿಂದ ಕೇಕ್‌ ಕತ್ತರಿಸಲಾಗಿದೆ ಎಂದು ಹೆಚ್‌.ಆರ್‌.ರಂಗನಾಥ್‌ ಈ ಸಂದರ್ಭದಲ್ಲಿ ತಿಳಿಸಿದ್ದರು.

     

    2024:
    ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ 12 ವರ್ಷದ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ಕರ್ನಾಟಕದ ʼನವರತ್ನʼಗಳನ್ನು ಸನ್ಮಾನಿಸಲಾಯಿತು.

    ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌, ರಾಮನ ಮೂರ್ತಿಗೆ ಮೂಲವಾದ ಕೃಷ್ಣ ಶಿಲೆಯನ್ನು ನೀಡಿದ ಜಾಗದ ಮಾಲೀಕ ರಾಮದಾಸ್‌, ರಾಮಮೂರ್ತಿ ನಿರ್ಮಾಣ ಮಾಡಿದ ಗಣೇಶ್‌ ಭಟ್‌, ಅಡಿಪಾಯ ಹಾಕುವುದರಿಂದ ಹಿಡಿದು ಕೆತ್ತನೆವರೆಗೂ ಎಲ್ಲಾ ಕಲ್ಲುಗಳ ಪರೀಕ್ಷೆಯನ್ನು ಮಾಡಿದ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ಪ್ರಾಂಶುಪಾಲ ಡಾ.ರಾಜನ್‌ ಬಾಬು, ಮುಹೂರ್ತ ನೀಡಿದ ವಿಜಯೇಂದ್ರ ಶರ್ಮಾ, ದೇಗುಲದ ಲೈಟಿಂಗ್ ಹೊಣೆ ಹೊತ್ತ ರಾಜೇಶ್‌ ಶೆಟ್ಟಿ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನನ ಶರ್ಮಾ, ಲೋಗೋ ವಿನ್ಯಾಸಗಾರ ರಮೇಶ್‌ ಜಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ, ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್‌ ನಾಯ್ಡು ಅವರು ಅಭಿನಂದಿಸಿದ್ದರು.

     

  • ಪಬ್ಲಿಕ್ ಟಿವಿಗಿಂದು 8ನೇ ವರ್ಷದ ಹುಟ್ಟುಹಬ್ಬ – ಹರಸಿ ಬೆಳೆಸಿದ ವೀಕ್ಷಕರಿಗೆ ಧನ್ಯವಾದ

    ಪಬ್ಲಿಕ್ ಟಿವಿಗಿಂದು 8ನೇ ವರ್ಷದ ಹುಟ್ಟುಹಬ್ಬ – ಹರಸಿ ಬೆಳೆಸಿದ ವೀಕ್ಷಕರಿಗೆ ಧನ್ಯವಾದ

    ಬೆಂಗಳೂರು: ಜನ್ಮದಿನದ ಸಡಗರ ಅಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ? ಕಳೆದ ಎಂಟು ವರ್ಷಗಳಿಂದ ಕನ್ನಡಿಗರ ಮನೆ ಮನಗಳಲ್ಲಿ ಸ್ಥಾನ ಪಡೆದಿರೋ ವಾಹಿನಿ ನಿಮ್ಮ ಪಬ್ಲಿಕ್ ಟಿವಿ. ಸುದ್ದಿ ಜಗತ್ತಿನಿಂದ ಹಿಡಿದು, ಮ್ಯೂಸಿಕ್ ಮತ್ತು ಸಿನಿಮಾ.. ಹೀಗೆ ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿರುವ ನಮ್ಮ ವಾಹಿನಿಗಳು ಕನ್ನಡಿಗರ ನೆಚ್ಚಿನ ಚಾನೆಲ್ ಗಳು. ಇವತ್ತು ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಗೆ ಎಂಟು ಸಂವತ್ಸರ ತುಂಬಿದ ಸಾರ್ಥಕತೆ. ನಮ್ಮನ್ನು ಹರಸಿ ಬೆಳೆಸಿದ ‘ಪಬ್ಲಿಕ್’ಗೆ ಅಂದ್ರೆ ನಿಮಗಿದೋ ಸಾಷ್ಟಾಂಗ ನಮಸ್ಕಾರ.

    ಸುದ್ದಿ ಪ್ರಪಂಚ ವಿಶಾಲವಾಗಿ ಬೆಳೆಯುತ್ತಿದೆ. ನಿಷ್ಪಕ್ಷಪಾತ ಸುದ್ದಿ ಬಿತ್ತರ, ವಸ್ತು ನಿಷ್ಠ ವಿಶ್ಲೇಷಣೆ, ಮತ್ತು ಸ್ಪಷ್ಟ ಮಾಹಿತಿ ಕೊಡುವುದು ಸವಾಲಿನ ಕೆಲಸ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದ್ರೆ ಯಾವುದೇ ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ಯಾವ ಮುಲಾಜಿಲ್ಲದೇ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಚಾನೆಲ್ ನ ಅನಿವಾರ್ಯತೆ ಕನ್ನಡಿಗರಿಗಿದ್ದರೆ, ಅವರ ಆ ಅನಿವಾರ್ಯತೆಯನ್ನು ಪರಿಪೂರ್ಣವಾಗಿ ಈಡೇರಿಸೋ ಹೊಣೆ ಹೊರಲು ಸಜ್ಜಾಗಿದ್ದೇ ನಿಮ್ಮ ಪಬ್ಲಿಕ್ ಟಿವಿ.

    ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

    ಓರ್ವ ನುರಿತ, ಪಾರಂಗತ ನಾಯಕನಿಲ್ಲದೆ ಲಕ್ಷ್ಯ ತಲುಪೋ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿಜಗತ್ತಿನ ಯಾನ ಎಂಟು ಸಂವತ್ಸರ ಪೂರೈಸಿ ಅಬಾಧಿತವಾಗಿ ಸಾಗಿದೆ ಅಂದ್ರೆ, ಅದಕ್ಕೆ ಕಾರಣ ರಂಗನಾಥ್ ಅವರಂಥ ಸಮರ್ಥ ನಾಯಕನ ಸಾರಥ್ಯದಲ್ಲಿ ಹೊರಟದ್ದೇ ಹೊರತು ಬೇರೇನೂ ಅಲ್ಲ.

    ಸುದ್ದಿವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. ಇನ್ನು ಪಬ್ಲಿಕ್ ಟಿವಿಯ ಮತ್ತೊಂದು ಅನನ್ಯ ಕೊಡುಗೆ ಪಬ್ಲಿಕ್ ಮೂವೀಸ್. ಅಲ್ಪಕಾಲದಲ್ಲೇ ಕನ್ನಡಿಗರ ಮನೆಗೆದ್ದ ಪಬ್ಲಿಕ್ ಮೂವೀಸ್ ಎಂಬ ಕೂಸಿಗೂ ಇಂದು ಎರಡು ವರ್ಷ.

    ಪಬ್ಲಿಕ್ ಟಿವಿಯ ಪ್ರತಿ ಮೈಲಿಗಲ್ಲಿನಲ್ಲೂ ಹೆಗಲಿಗೆ ಹೆಗಲು ಕೊಟ್ಟು, ಪ್ರತಿ ಹಂತದಲ್ಲೂ ನಮ್ಮನ್ನು ಹರಸಿ ಬೆಳೆಸಿದ ವೀಕ್ಷಕ ಮಹಾಪ್ರಭುಗಳಿಗೆ ಧನ್ಯವಾದ. ನಿಮ್ಮ ಸಹಕಾರ ಹೀಗೇ ಇರಲಿ. ಹಾಗೇ ಪಬ್ಲಿಕ್ ಟಿವಿಯ ಬೆಳವಣಿಗೆಗೆ ಕಾರಣರಾದ ಕೇಬಲ್ ಆಪರೇಟರ್ಸ್ ಹಾಗೂ ಜಾಹೀರಾತುದಾರರಿಗೂ ನಾವು ಚಿರಋಣಿ.

  • ಬರುತ್ತಿದೆ ಪಬ್ಲಿಕ್ ಮೂವೀಸ್ – ಸ್ಯಾಂಡಲ್‍ವುಡ್ ಸೆನ್ಸೇಷನ್!

    ಬರುತ್ತಿದೆ ಪಬ್ಲಿಕ್ ಮೂವೀಸ್ – ಸ್ಯಾಂಡಲ್‍ವುಡ್ ಸೆನ್ಸೇಷನ್!

    ಯಾವುದೇ ಒತ್ತಡಗಳಿಗೆ ಜಗ್ಗದೆ, ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸದೇ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಪಬ್ಲಿಕ್ ಟಿವಿಗೆ ಈಗ 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. `ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ’ ಎಂಬ ಘೋಷ ವಾಕ್ಯದೊಂದಿಗೆ 2012ರ ಫೆಬ್ರವರಿ 12ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿ ಇಂದು ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಭ್ರಮವನ್ನು ಮತ್ತಷ್ಟು ಸುಮಧುರವಾಗಿಸಲು ನಾವು ಫೆಬ್ರವರಿ 12ರಂದೇ ‘ಪಬ್ಲಿಕ್ ಮೂವೀಸ್’ ಚಾನೆಲ್‍ಗೆ ಚಾಲನೆ ನೀಡುತ್ತಿದ್ದೇವೆ.

    ಹಿಂದೆ ನ್ಯೂಸ್ ಕೆಲವರ ಆಸಕ್ತಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಸುದ್ದಿ ಪ್ರಪಂಚ, ಎಲ್ಲರ ಅಗತ್ಯವಸ್ತು. ನಿಷ್ಪಕ್ಷಪಾತ ಸುದ್ದಿ ಬಿತ್ತರ, ವಸ್ತುನಿಷ್ಠ ವಿಶ್ಲೇಷಣೆ, ಮತ್ತು ಸ್ಪಷ್ಟ ಮಾಹಿತಿ ನೀಡುವುದು ಸವಾಲಿನ ಕೆಲಸ. ಸುದ್ದಿಲೋಕ ಈಗ ಮೊದಲಿನಂತಿಲ್ಲ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದರೆ ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

    ಓರ್ವ ನುರಿತ, ಪಾರಂಗತ ನಾಯಕನಿಲ್ಲದೆ ಲಕ್ಷ್ಯ ತಲುಪುವ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿ ಜಗತ್ತಿನ ಯಾನ 6 ಸಂವತ್ಸರ ಪೂರೈಸಿ 7ನೇ ವಸಂತದತ್ತ ಅಬಾಧಿತವಾಗಿ ಸಾಗಿದೆ ಎಂದರೆ ಅದಕ್ಕೆ ಕಾರಣ, ಅಂಥ ಸಮರ್ಥ ಮತ್ತು ಅರ್ಹ ನಾಯಕನ ಸಾರಥ್ಯದಲ್ಲಿ ಹೊರಟದ್ದೇ ಹೊರತು ಬೇರೇನೂ ಅಲ್ಲ. ದಕ್ಷ ಮತ್ತು ದೃಢವಾದ ತಂಡ ಕಟ್ಟಿಕೊಂಡು, ಹೊಸ ಪ್ರತಿಭೆಗಳನ್ನು ಹೆಕ್ಕಿ, ತಿಂಗಳುಗಟ್ಟಲೆ ಸಾಣೆ ಹಿಡಿದು, ಸಶಕ್ತ ತಂಡವನ್ನು ಕಟ್ಟಿದ ಕೀರ್ತಿ ರಂಗನಾಥ್ ಅವರಿಗೇ ಸಲ್ಲಬೇಕು.

    ಟಿಆರ್ ಪಿ ಸಮರದಲ್ಲಿ ಬೇರುಮಟ್ಟದಿಂದ ಶುರುಮಾಡಿ ಅಲ್ಪಕಾಲದಲ್ಲೇ ಕನ್ನಡಿಗರ ಮನೆ – ಮನ ಎರಡರ ಮೇಲೂ ಆಧಿಪತ್ಯ ಸ್ಥಾಪಿಸಿದ ಹೆಮ್ಮೆ ನಮ್ಮದು. ಅದಕ್ಕೆ ಕಾರಣ ಇಲ್ಲದಿಲ್ಲ. ದಿನನಿತ್ಯದ ಆಗುಹೋಗುಗಳನ್ನು ಕಾಟಾಚಾರದ ಸುದ್ದಿಯಾಗಿಸದೆ ಸಮಾಚಾರಕ್ಕೊಂದು ಸದಾಚಾರದ ಚೌಕಟ್ಟು ಹಾಕಿ, ವೃತ್ತಾಂತಕ್ಕೆ ವೃತ್ತಿಪರತೆಯ ವಿಶ್ಲೇಷಣೆ ನೀಡುವುದು ಪಬ್ಲಿಕ್ ಟಿವಿಯ ಸತ್ವ ಹಾಗೂ ತತ್ವ. ನಾವು ಯಾವ ಪಟ್ಟಭದ್ರರ ಗುಲಾಮರೂ ಅಲ್ಲ. ನಮಗೆ ಯಾರ ಮುಲಾಜೂ ಇಲ್ಲ.

    ಸಮಾಜಕ್ಕೆ ಸತ್ಯ, ಸ್ಪಷ್ಟ, ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಪಬ್ಲಿಕ್ ಟಿವಿಗೆ ಸಾಟಿ ಮತ್ತೊಂದಿಲ್ಲ. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಎಲ್ಲಾ ಚಾನೆಲ್ ಗಳಲ್ಲೂ ರಾತ್ರಿ 9ರ ಸಮಯ ಪ್ರೈಮ್ ಬುಲೆಟಿನ್ ಗೆ ಮೀಸಲು. ಆದ್ರೆ ಪಬ್ಲಿಕ್ ಟಿವಿಯ ರಾತ್ರಿ 9ರ ಬಿಗ್ ಬುಲೆಟಿನ್ ವೈಶಿಷ್ಟ್ಯತೆ ಮತ್ತು ಆಕರ್ಷಣೆಯ ಕೇಂದ್ರಬಿಂದು, ವಾಹಿನಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್. ಸುದ್ದಿಗೆ ತಮ್ಮ ಮೊನಚು ಮಾತುಗಳ ಹೊಳಪು ಕೊಟ್ಟು, ದರ್ಶಕರಿಗೆ ಸುದ್ದಿಯನ್ನು ಅರ್ಥೈಸುವ ಪರಿಗೆ, ಕನ್ನಡಿಗರು ಮಾರು ಹೋಗಿದ್ದರಲ್ಲಿ ವಿಶೇಷವೇನಿಲ್ಲ. ಎಚ್.ಆರ್.ರಂಗನಾಥ್ ಸಾರಥ್ಯದ ಬಿಗ್ ಬುಲೆಟಿನ್ ಇಂದು ಕರ್ನಾಟಕದ ಮನೆ ಮಾತು.

    ಬಿಗ್ ಬುಲೆಟಿನ್ನಿನ ಭಾಗವಾದ ಪಬ್ಲಿಕ್ ಹೀರೋ, ಸಮಾಜದಲ್ಲಿ ಎಲೆಮರೆ ಕಾಯಿಗಳಂತಿದ್ದೂ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಅಸಲಿ ಹೀರೋಗಳನ್ನು ಗುರುತಿಸಿ, ಅಭಿನಂದಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಬೆಳಕು ಪಬ್ಲಿಕ್ ಟಿವಿಯ ಮತ್ತೊಂದು ಹೆಬ್ಬಯಕೆ ಸಾಕಾರವಾಗಿಸಿದ ಕಾರ್ಯಕ್ರಮ. ನೊಂದವರ ಕಣ್ಣೀರನ್ನು ಒರೆಸುವುದು ಮಾತ್ರವಲ್ಲ, ಅವರಿಗೆ ವಾಸ್ತವದಲ್ಲಿ ನೆರವಾಗುವ ನೆಂಟನ ಪಾತ್ರ ವಹಿಸುವ ಅರ್ಥಪೂರ್ಣ ಕಾರ್ಯಕ್ರಮವಿದು. ಕಳೆದ 6 ವರ್ಷಗಳಲ್ಲಿ ಇಂಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪಬ್ಲಿಕ್ ಟಿವಿ ಯಶಸ್ವಿಯಾಗಿ ಪ್ರಸಾರ ಮಾಡಿದೆ. ತನ್ಮೂಲಕ ವೀಕ್ಷಕ ಪ್ರಭುಗಳ ಹೃದಯವನ್ನೂ ಗೆದ್ದಿದೆ. ಇದರ ಜೊತೆಗೆ ಸ್ಪೆಷಲ್ ಟೈಮ್, ಜಿಂದಗಿ, ಫಸ್ಟ್ ನ್ಯೂಸ್, ನ್ಯೂಸ್ ಕೆಫೆ, ನಿತ್ಯಪೂಜೆ, ರಾಶಿ ಭವಿಷ್ಯ, ಮಿರರ್, ಬೆಂಗಳೂರು ಟುಡೇ ಎಂಬಿತ್ಯಾದಿ ಅನೇಕ ಕಾರ್ಯಕ್ರಮಗಳ ಮೂಲಕ ನಿಮ್ಮ ಮನೆ ತಲುಪಿದ್ದೇವೆ.

    ಸುದ್ದಿ ವಲಯದಲ್ಲಿ ಗೆದ್ದು, ಲೋಕ ಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. 2014ರ ಸೆಪ್ಟೆಂಬರ್ 28ರಂದು ಲೋಕಾರ್ಪಣೆಯಾದ ವಾಹಿನಿ ಕನ್ನಡಿಗರ ಸಂಗೀತ ದಾಹ ತೀರಿಸುತ್ತಾ ನಮ್ಮ ಸಂಗೀತ ವಾಹಿನಿಯೂ ಯಶಸ್ವಿಯಾಗಿ ಸಾಗುತ್ತಿದೆ. ಇದರೊಂದಿಗೆ ಪಬ್ಲಿಕ್ ಟಿವಿಯ ವೆಬ್‍ಸೈಟ್ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ನೀವು ನಮ್ಮ ಬೆನ್ನಿಗೆ ನಿಂತಿದ್ದೀರಿ.

    ರೈಟ್ ಮೆನ್ ಮೀಡಿಯಾ ಸಮೂಹದ ಮೂರನೇಯ ವಾಹಿನಿಯಾಗಿ ಈಗ ಪಬ್ಲಿಕ್ ಕಾಮಿಡಿ/ಮೂವೀಸ್ ಲೋಕಾರ್ಪಣೆಯಾಗಿದೆ. ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಮ್ಯೂಸಿಕ್ ಗೆ ಹೇಗೆ ಸಹಕಾರ ನೀಡಿದ್ದೀರೋ ಅದೇ ರೀತಿಯಾಗಿ ಪಬ್ಲಿಕ್ ಮೂವೀಸ್‍ಗೆ ಸಹಕಾರ ನೀಡುತ್ತೀರಿ ಎನ್ನುವ ಆಶಾವಾದ ನಮ್ಮದು. ನಿಮ್ಮ ಪ್ರೀತಿ, ಸಹಕಾರ ಹೀಗೇ ಮುಂದುವರಿಯಲಿ ಎಂಬ ವಿನಮ್ರ ಆಶಯ ನಮ್ಮದು.

  • ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಬೆಂಗಳೂರು: ಪಬ್ಲಿಕ್ ಟಿವಿ ಸಮೂಹದ ಮೂರನೇ ಚಾನಲ್ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಫೆಬ್ರವರಿ 12ರಿಂದ ನಿಮ್ಮ ಮುಂದೆ ಬರಲಿದೆ. ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಟೆಸ್ಟ್ ಸಿಗ್ನಲ್ ಆರಂಭವಾಗಿದೆ.

    ಈ ಹಿನ್ನೆಲೆಯಲ್ಲಿಂದು ಪಬ್ಲಿಕ್ ಟಿವಿ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ.ಹರೀಶ್ ಕುಮಾರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು.

    ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.

    2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.

    ಈಗಾಗಲೇ ನಿಖರ ಸುದ್ದಿ, ಮನಸ್ಸಿಗೆ ಮುದ ನೀಡುವ ಸಂಗೀತದ ಮೂಲಕ ನಿಮ್ಮ ಮನಗೆದ್ದಿರುವ ಪಬ್ಲಿಕ್ ಟಿವಿ, ಈಗ ಸಿನಿಮಾದ ಮೂಲಕ ನಿಮ್ಮ ಮನರಂಜಿಸಲು ಆಗಮಿಸುತ್ತಿದೆ.

    ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಚಾನೆಲ್ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು.

     

  • ಪಬ್ಲಿಕ್ ಟಿವಿ ಸಮೂಹದ ‘ಪಬ್ಲಿಕ್ ಮೂವೀಸ್’ ಫೆ.12ಕ್ಕೆ ಶುಭಾರಂಭ

    ಪಬ್ಲಿಕ್ ಟಿವಿ ಸಮೂಹದ ‘ಪಬ್ಲಿಕ್ ಮೂವೀಸ್’ ಫೆ.12ಕ್ಕೆ ಶುಭಾರಂಭ

    – ಪಬ್ಲಿಕ್ ಟಿವಿಗೆ 6ನೇ ವರ್ಷದ ಸಂಭ್ರಮ

    ಬೆಂಗಳೂರು: ಕರ್ನಾಟಕದಲ್ಲಿ ಮನೆ ಮಾತಾಗಿರುವ ಪಬ್ಲಿಕ್ ಟಿವಿ ಈಗ ಸಿನೆಮಾ ಕ್ಷೇತ್ರಕ್ಕೂ ಕಾಲಿಡುತ್ತಿದೆ. ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಮೂಹದಿಂದ ಆರಂಭವಾಗಲಿರುವ ‘ಪಬ್ಲಿಕ್ ಮೂವೀಸ್’ ಚಾನೆಲ್ ಫೆ.12ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಎಚ್.ಆರ್.ರಂಗನಾಥ್ ನೇತೃತ್ವದ ಪಬ್ಲಿಕ್ ಮೂವೀಸ್ ಚಾನೆಲ್ ಉದ್ಘಾಟನೆಗೆ ಚಿತ್ರರಂಗದ ಪ್ರಮುಖ ಗಣ್ಯರು ಆಗಮಿಸಿ ಶುಭ ಕೋರಲಿದ್ದಾರೆ.

    ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.

    2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.

    ಪಬ್ಲಿಕ್ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಪಬ್ಲಿಕ್ ಮೂವೀಸ್ ನಿಮಗೆ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು.

    ಪಬ್ಲಿಕ್ ಮೂವೀಸ್ ಫೇಸ್ ಬುಕ್ ಪೇಜ್ ಲೈಕ್ ಮಾಡಿ: https://www.facebook.com/PublicTVMovies

    ಟ್ವಿಟ್ಟರ್‍ನಲ್ಲಿ ಪಬ್ಲಿಕ್ ಮೂವೀಸ್ ಫಾಲೋ ಮಾಡಿ: https://twitter.com/PublicTVMovies

  • ಪಬ್ಲಿಕ್ ಟಿವಿಯಿಂದ ಮತ್ತೊಂದು ಚಾನೆಲ್ – ‘ಪಬ್ಲಿಕ್ ಮೂವೀಸ್’ ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆ

    ಪಬ್ಲಿಕ್ ಟಿವಿಯಿಂದ ಮತ್ತೊಂದು ಚಾನೆಲ್ – ‘ಪಬ್ಲಿಕ್ ಮೂವೀಸ್’ ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆ

    ಬೆಂಗಳೂರು: ಸಮಸ್ತ ಕನ್ನಡದ ಜನತೆಗೆ ಪಬ್ಲಿಕ್ ಟಿವಿ ವತಿಯಿಂದ ಸಂತಸದ ಸುದ್ದಿ. ನೀವು ಹರಸಿ, ಹಾರೈಸಿ ಬೆಳೆಸಿದ ನಿಮ್ಮ ರೈಟ್‍ಮೆನ್ ಮೀಡಿಯಾದ ಪಬ್ಲಿಕ್ ಟಿವಿ ನ್ಯೂಸ್ ಹಾಗೂ ಪಬ್ಲಿಕ್ ಮ್ಯೂಸಿಕ್ ಚಾನೆಲ್ ಜೊತೆಗೆ ಹೊಸದೊಂದು ಚಾನೆಲ್ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

    2018ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ 6ನೇ ವರ್ಷದ ಸಂಭ್ರಮಾಚರಣೆ ವೇಳೆ ನಿಮ್ಮ ಪಬ್ಲಿಕ್ ಟಿವಿ ಸಮೂಹದ 3ನೇ ಚಾನೆಲ್ ಪಬ್ಲಿಕ್ ಮೂವೀಸ್ ಲಾಂಚ್ ಆಗಲಿದೆ. ಪಬ್ಲಿಕ್ ಮ್ಯೂಸಿಕ್ 3ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಈ ವಿಷಯವನ್ನು ಘೋಷಣೆ ಮಾಡಿದ್ರು.

    ಇದೇ ವರ್ಷ ಫೆಬ್ರವರಿ 12 ರಂದು ಪಬ್ಲಿಕ್ ಟಿವಿ 5ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತು. ಸೆಪ್ಟೆಂಬರ್ 28 ಅಂದ್ರೆ ಇಂದು ಪಬ್ಲಿಕ್ ಮ್ಯೂಸಿಕ್ ಚಾನೆಲ್ ತನ್ನ ಮೂರನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ. ಇದೀಗ ಈ ಎರಡು ಚಾನೆಲ್‍ಗಳ ಜೊತೆ ಪಬ್ಲಿಕ್ ಮೂವೀಸ್ ಚಾನೆಲ್ ಕೂಡ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

    ಈ ಬಾರಿ ಮೂರು ವರ್ಷ ಪ್ಲಸ್ಸು ಎಂಬ ಕಾನ್ಸೆಪ್ಟ್ ನೊಂದಿಗೆ ಪಬ್ಲಿಕ್ ಮ್ಯೂಸಿಕ್ ನಿಮ್ಮ ಮುಂದೆ ಬಂದಿದೆ. ಮೂರನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ನಟ ಧ್ರುವಾ ಸರ್ಜಾ, ನಟಿ ರಚಿತಾ ರಾಮ್, ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಮುಖ್ಯ ಅತಿಥಿಗಳಾಗಿದ್ರು. ಆನಂದ್ ಆಡಿಯೋ ಸಂಸ್ಥೆಯ ಮಾಲೀಕರಾದ ಶ್ಯಾಮ್, ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆಯ ಮಾಲೀಕರಾದ ಅಶ್ವಿನಿ ರಾಮ್‍ಪ್ರಸಾದ್, ಸ್ವರ್ಣ ಆಡಿಯೋ ರೆಕಾರ್ಡಿಂಗ್ ಕಂಪೆನಿಯ ಇಬ್ಬರು ಮಾಲೀಕರಾದ ನವೀನ್ ಯಜಮಾನ್ ಹಾಗೂ ಶಶಾಂಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

     ಪಬ್ಲಿಕ್ ಮ್ಯೂಸಿಕ್ 2ನೇ ವರ್ಷದ ಸಂಭ್ರಮಾಚರಣೆ ವೇಳೆ ದಾಖಲೆಯ ಮ್ಯೂಸಿಕಲ್ ಮ್ಯಾರಥಾನ್ ಕಾರ್ಯಕ್ರಮ ಮಾಡಿದ್ದಾಗ ನೀವು ನೀಡಿದ್ದ ಅಭೂತಪೂರ್ವ ಬೆಂಬಲ ನಮಗೆ ಇನ್ನೂ ನೆನಪಿದೆ. ನಮ್ಮನ್ನು ನಿರಂತರ ಬೆಂಬಲಿಸಿ, ಕೈಹಿಡಿದು ಮುನ್ನಡೆಸಿದ ನಿಮಗೆ ಹೃದಯಪೂರ್ವಕ ಕೃತಜ್ಞತೆಗಳು.