Tag: pubic tv

  • ಬೆಂಗ್ಳೂರಿನ 30 ಹಾಟ್‍ಸ್ಪಾಟ್‍ಗಳಲ್ಲಿ ಟಫ್ ಲಾಕ್‍ಡೌನ್ ಶುರು- ಮನೆಯಿಂದ ಹೊರ ಬಂದ್ರೆ ಕಾದಿದೆ ಕಠಿಣ ಶಿಕ್ಷೆ

    ಬೆಂಗ್ಳೂರಿನ 30 ಹಾಟ್‍ಸ್ಪಾಟ್‍ಗಳಲ್ಲಿ ಟಫ್ ಲಾಕ್‍ಡೌನ್ ಶುರು- ಮನೆಯಿಂದ ಹೊರ ಬಂದ್ರೆ ಕಾದಿದೆ ಕಠಿಣ ಶಿಕ್ಷೆ

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಆದೇಶಿಸಿದ್ದ ಲಾಕ್ ಡೌನ್ ಅನ್ನು ಮೇ 3ರವರೆಗೂ ವಿಸ್ತರಿಸಲಾಗಿದೆ. ಈ ಮಧ್ಯೆ ಕೊರೊನಾ ಪ್ರಕರಣ ಹೆಚ್ಚಾಗುತ್ತಲೇ ಇದ್ದರೂ, ಜನ ಯಾವುದೇ ಭಯವಿಲ್ಲದೇ ಒಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲಿ ಗುರುತಿಸಲಾಗಿರುವ 30 ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ.

    ಹೌದು. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದೆ. 85 ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಬಿಬಿಎಂಪಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಂಟೈನ್‍ಮೆಂಟ್ ಝೋನ್‍ಗಳ ಫಿಕ್ಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ಕಂಟೈನ್‍ಮೆಂಟ್ ಝೋನ್ ಫಿಕ್ಸಿಂಗ್ ಭಾಗ ಫುಲ್ ಸೀಲ್‍ಡೌನ್ ಮಾಡಲಾಗುತ್ತದೆ. ಜನ ಹೊರಗೆ ಬಾರದ ಹಾಗೆ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ಬೆಂಗಳೂರಿನ 30 ಹಾಟ್‍ಸ್ಪಾಟ್‍ಗಳು ಕಂಟೈನ್‍ಮೆಂಟ್ ಆಗಿ ಬದಲು ಮಾಡುವ ಸಾಧ್ಯತೆಗಳಿವೆ.

    ಖಾಕಿ ಹದ್ದಿನ ಕಣ್ಣು:
    ಸೀಲ್‍ಡೌನ್ ಏರಿಯಾಗಳಿಗೆ ಪೊಲೀಸ್ ನಾಕಾಬಂಧಿ ಮಾಡಲಾಗುತ್ತಿದೆ. ಎಲ್ಲಾ ಪ್ರವೇಶದ್ವಾರಗಳಲ್ಲೂ ಶಾಶ್ವತವಾಗಿ ತಡೆಗೋಡೆ ಹಾಕಬೇಕು. ಯಾವುದೇ ವ್ಯಕ್ತಿ ಮನೆಯಿಂದ ಹೊರಬರುವಂತಿಲ್ಲ. ಸೀಲ್‍ಡೌನ್ ವಲಯದಲ್ಲಿ ಒಂದೇ ಒಂದು ನಿರ್ಗಮನ- ಮತ್ತು ಪ್ರವೇಶದ್ವಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರು ಎಮರ್ಜೆನ್ಸಿ ಪಾಸ್ ನೀಡುತ್ತಾರೆ. ಅಲ್ಲದೆ ಸೀಲ್‍ಡೌನ್ ಏರಿಯಾದಲ್ಲಿ ಹೆಚ್ಚು ನಿಗಾಕ್ಕೆ ಡ್ರೋಣ್ ಬಳಕೆ ಮಾಡಲಾಗುತ್ತದೆ.

    ಬಿಬಿಎಂಪಿಯಿಂದಲೂ ನಿಗಾ:
    ಬೆಂಗಳೂರು ನಿಯಂತ್ರಣ ವಲಯಕ್ಕೆ ಕಮಾಂಡರ್ ಗಳನ್ನು ನೇಮಿಸಲಾಗುತ್ತಿದೆ. ಸೀಲ್‍ಡೌನ್ ಏರಿಯಾಕ್ಕೆ ಎಕ್ಸ್ ಕ್ಯೂಟಿವ್ ಮ್ಯಾಜಿಸ್ಟ್ರೇಟ್‍ನ್ನು ಕಮಾಂಡರ್ ಆಗಿ ಆಯುಕ್ತರು ನೇಮಿಸಬೇಕು. ಈ ಕಮಾಂಡರ್ ಗೆ ಬಫರ್ ಝೋನ್‍ನ ಕಂಪ್ಲೀಟ್ ಜವಾಬ್ದಾರಿ ಹೊತ್ತಿರುತ್ತಾರೆ. ಬಿಬಿಎಂಪಿ ಹೊರತುಪಡಿಸಿದ ನಿಯಂತ್ರಿತ ವಲಯಗಳಿಗೆ ಡಿಸಿ ಕಮಾಂಡರನ್ನು ನೇಮಿಸಬೇಕು. ಬಿಬಿಎಂಪಿಯ ಹಿರಿಯ ಅಥವಾ ಕಿರಿಯ ಪ್ರಥಮ ದರ್ಜೆಯ ಅಧಿಕಾರಿಯಾಗಿರಬೇಕು. ಸೀಲ್‍ಡೌನ್ ಏರಿಯಾದ ಕಂಪ್ಲೀಟ್ ಗಡಿಯನ್ನು ಗುರುತಿಸಬೇಕು. ಸೀಲ್‍ಡೌನ್ ಏರಿಯಾದ ಪ್ರವೇಶ ಹಾಗೂ ನಿರ್ಗಮನ ಗಡಿ ಗುರುತಿಸಬೇಕು. ಕಮಾಂಡರ್ ಗಡಿಕೇಂದ್ರವನ್ನು ಸ್ಥಾಪಿಸಬೇಕು. ಸೀಲ್‍ಡೌನ್ ಏರಿಯಾದ ಗರ್ಭಿಣಿ ಹೃದ್ರೋಗಿಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಬೇಕು.

    ಆರೋಗ್ಯ ಇಲಾಖೆ ಕಣ್ಣು:
    ವಲಯಗಳಲ್ಲಿ ಔಟ್‍ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ಪ್ರತಿನಿತ್ಯವೂ ಜನರ ಆರೋಗ್ಯದ ನಿಯಮಿತ ತಪಾಸಣೆ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್‍ನಲ್ಲಿಡದೇ ಸರ್ಕಾರಿ ಸ್ವಾಧೀನದ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗುತ್ತದೆ. ಸೆಕೆಂಡರಿ ಕಾಂಟೆಕ್ಟ್ ಗಳಿಗೆ ಮಾತ್ರ ಗೃಹಬಂಧನ ವಿಧಿಸಲಾಗುತ್ತದೆ. ಹೆಲ್ತ್ ಪ್ರೊಫೈಲಿಂಗ್ ಪಟ್ಟಿ ರೆಡಿ ಮಾಡಬೇಕು. ಇಡೀ ಪ್ರದೇಶದ ಜನರಲ್ಲಿ ಜ್ವರ, ಶೀತ ಕಂಡು ಬಂದ್ರೆ ಅವರ ಸಂಪೂರ್ಣ ದಾಖಲೆ ರೆಡಿ ಇಟ್ಟುಕೊಂಡಿರಬೇಕು.

  • ಮದ್ಯ ಸಿಗುತ್ತಿಲ್ಲವೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟ

    ಮದ್ಯ ಸಿಗುತ್ತಿಲ್ಲವೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟ

    ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಮದ್ಯದ ಅಂಗಡಿ ಬಂದ್ ಆಗಿವೆ. ಪರಿಣಾಮ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.

    ಕೋಥಳಿ ಗ್ರಾಮದ ಪೋಪಟ್ ಈರಪ್ಪ ಬಡಿಗೇರಿ (44) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ಯದ ಅಂಗಡಿ ಬಂದ್ ಆಗಿದ್ದರಿಂದ ಪೋಪಟ್ ಸೋಮವಾರ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಕೋಥಳಿ ಗ್ರಾಮದ ಗಲ್ಲಿ ಗಲ್ಲಿ ಸುತ್ತಿ ನಾಪತ್ತೆಯಾಗಿದ್ದ. ಆದರೆ ಇಂದು ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಖಡಕಲಾಟ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏಪ್ರಿಲ್ 14ರವರೆಗೂ ಮದ್ಯ ಇಲ್ಲ:
    ಕುಡುಕರ ಮೇಲೆ ಕೊರೊನಾ ಸೈಡ್ ಎಫೆಕ್ಟ್ ಜಾಸ್ತಿ ಆಗಿದೆ. ಖಿನ್ನತೆಗೆ ಒಳಗಾಗಿ ಇದುವರೆಗೂ 10ಕ್ಕೂ ಹೆಚ್ಚು ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೇರಳ ಮಾದಿಯನ್ನು ಅನುಷ್ಠಾನಕ್ಕೆ ತರಬಹುದು ಎಂಬ ಊಹೆ ಸುಳ್ಳಾಗಿದೆ.

    ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 14ರವರೆಗೂ ಮದ್ಯದಂಗಡಿ ತೆರಯುವ ಪ್ರಶ್ನೆಯೇ ಇಲ್ಲ. ಮದ್ಯ ಬೇಕು ಎನ್ನುವವರು ಇನ್ನೂ ಎರಡು ವಾರ ಕಾಯಲೇ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

    ಬಸವರಾಜು ಬೊಮ್ಮಾಯಿ ಮಾತನಾಡಿ, ಈಗಲೇ ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ ಎಂದಿದ್ದಾರೆ. ಅಲ್ಲದೆ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ. ಈ ಮಧ್ಯೆ, ಕೇರಳದಲ್ಲಿ 45 ಮಂದಿ ಕುಡುಕರು, ವೈದ್ಯರಿಂದ ಚೀಟಿ ಬರೆಯಿಸಿಕೊಂಡು ಮದ್ಯ ಪಡೆದುಕೊಂಡಿದ್ದಾರೆ.

  • ಕಲಬುರಗಿಯಲ್ಲಿ ಇಂದಿನಿಂದ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭ: ಶ್ರೀರಾಮುಲು

    ಕಲಬುರಗಿಯಲ್ಲಿ ಇಂದಿನಿಂದ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭ: ಶ್ರೀರಾಮುಲು

    – ಉಳಿದ ಜಿಲ್ಲೆಗಳಲ್ಲೂ ಶೀಘ್ರವೇ ಲ್ಯಾಬ್ ಸೌಲಭ್ಯ

    ಬೆಂಗಳೂರು: ಕೊರೊನಾ ಲಕ್ಷಣ ಪತ್ತೆಗೆ ಇಂದಿನಿಂದ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಆರಂಭ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

    ವಿಧಾನಸೌಧದಲ್ಲಿ ಶೂನ್ಯವೇಳೆಯಲ್ಲಿ ಕೊರೊನಾ ಕುರಿತು ನಡೆದ ಚರ್ಚೆ ಬಳಿಕ ಸಚಿವ ಶ್ರೀರಾಮುಲು ಉತ್ತರಿಸಿದರು. ಇಂದೇ ಕಲಬುರಗಿಯಲ್ಲಿ ಪ್ರಯೋಗಾಲಯ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಇದೂವರೆಗೆ 5 ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು 2, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ತಲಾ 1 ಪರಿಕ್ಷಾ ಲ್ಯಾಬ್ ಗಳು ಇವೆ. ಉಳಿದ ಜಿಲ್ಲೆಗಳಲ್ಲೂ ಸದ್ಯದಲ್ಲೇ ಪರೀಕ್ಷಾ ಲ್ಯಾಬ್ ತೆರೆಯುತ್ತೇವೆ. ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರು ಗಳಲ್ಲೂ ಶೀಘ್ರದಲ್ಲೇ ಲ್ಯಾಬ್‍ಗಳು ಬರಲಿವೆ. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಉಪಕರಣ ಖರೀದಿಗೆ ಅನುಮತಿ ನೀಡಿದ್ದೇವೆ ಎಂದು ಇದೇ ವೇಳೆ ಆರೋಗ್ಯ ಸಚಿವರು ತಿಳಿಸಿದರು. ಇದನ್ನೂ ಓದಿ: ಮತ್ತೆರಡು ಪಾಸಿಟಿವ್ – ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿಕೆ

    ಭೀತಿಯಲ್ಲಿ ಕಲಬುರಗಿ:
    ಕಲಬುರಗಿಯಲ್ಲಿ ಸಿದ್ದಿಕ್ ಸಾವು ಬಳಿಕ ಭೀತಿ ಹೆಚ್ಚಳವಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ತಿದ್ದೇವೆ. ಬಹಳಷ್ಡು ಜನರನ್ನು ಪರೀಕ್ಷಗೆ ಒಳಪಡಿಸುತ್ತಿದ್ದೇವೆ. ಏರ್ ಪೋರ್ಟ್ ಗಳಲ್ಲಿ ಇದೂವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

  • ಹಾಸನದಲ್ಲಿ ಈಗ ಇರೋದು ದೇವೇಗೌಡ್ರ ಕುಟುಂಬದ ವಿರುದ್ಧದ ರಾಜಕಾರಣ: ಎ.ಮಂಜು

    ಹಾಸನದಲ್ಲಿ ಈಗ ಇರೋದು ದೇವೇಗೌಡ್ರ ಕುಟುಂಬದ ವಿರುದ್ಧದ ರಾಜಕಾರಣ: ಎ.ಮಂಜು

    ಹಾಸನ: ಎಚ್‍ಡಿ ಕುಮಾರಸ್ವಾಮಿ, ರೇವಣ್ಣ ತಮ್ಮ ಮಕ್ಕಳಿಗಾಗಿ ದೇವೇಗೌಡರನ್ನು ತೆಗೆದರು. ಆದರೆ ಲಾಭ ಪಡೆದವರು ರೇವಣ್ಣ ಮತ್ತು ಮಗ ಮಾತ್ರ ಎಂದು ಮಾಜಿ ಸಚಿವ ಎ.ಮಂಜು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್, ದಳ, ಬಿಜೆಪಿ ಅಂತ ರಾಜಕಾರಣ ಇಲ್ಲ. ಇಲ್ಲಿ ಇರೋದು ದೇವೇಗೌಡರ ಕುಟುಂಬದ ವಿರುದ್ಧದ ರಾಜಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಉಳಿಯಬೇಕು ಅಂದ್ರೆ ನಾವು ಒಟ್ಟಿಗೆ ಸೇರಿ ಅವರನ್ನು ಸದೆಬಡಿಯಬೇಕು ಎಂದು ತಿಳಿಸಿದ್ರು.

    ಈಗ ನಮ್ಮ ಸರ್ಕಾರ ಇದೆ. ಜನಪರವಾದ ಕೆಲಸ ಮಾಡಲು ಅವಕಾಶ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ 4 ರಿಂದ 5 ಕ್ಷೇತ್ರ ಗೆಲ್ಲುತ್ತೇವೆ. ನಾವು ದೇವೇಗೌಡರ ಕುಟುಂಬದ ವಿರೋಧಿಗಳು. ಇಡೀ ಜಿಲ್ಲೆಯ 70 ರಷ್ಟು ಜನ ದೇವೇಗೌಡರ ಕುಟುಂಬದ ವಿರೋಧ ಇದ್ದಾರೆ. ದೇವೇಗೌಡರು ಕೊನೆ ಸಾರಿ ಪಾರ್ಲಿಮೆಂಟ್‍ನಲ್ಲಿ ಗೆಲ್ಲಲಿ ಎಂದು ಆಸೆಪಟ್ಟೆ. ಆದರೆ ಮಕ್ಕಳು ಮೊಮ್ಮಕ್ಕಳನ್ನ ರಾಜಕೀಯವಾಗಿ ಉಳಿಸಲು ಹೊರಟರು. ದೇವೇಗೌಡರು ಇದುವರೆಗೂ ಪಕ್ಷ ಸಂಘಟನೆ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿಲ್ಲ ಎ.ಮಂಜು ಕಿಡಿಕಾರಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರೇವಣ್ಣ ಆರೋಪ ಮಾಡೋದ್ರಲ್ಲಿ ನಿಸ್ಸೀಮರು. ಇವರಿಬ್ಬರು ಅಣ್ಣ-ತಮ್ಮಂದಿರು ಸೇರಿಕೊಂಡು ಕ್ಯಾಬಿನೆಟ್, ಸರ್ಕಾರದ ಆದೇಶ ಇಲ್ಲದೇ ಇರೋದನ್ನು ಸ್ಯಾಂಕ್ಷನ್ ಮಾಡಿದ್ದಾರೆ. ಈ ರೀತಿಯ ಕಾನೂನು ಅವರು ಅಣ್ಣ, ತಮ್ಮಂದಿರು ಇದ್ದಾಗ ಮಾತ್ರ ನಡೆಯುತ್ತೆ. ಯಡಿಯೂರಪ್ಪ ರಾಜ್ಯದ ಬಗ್ಗೆ ಚಿಂತೆ ಇರುವ ಅಪರೂಪದ ಮುಖ್ಯಮಂತ್ರಿ. ಯಡಿಯೂರಪ್ಪ ಹೋರಾಟದಿಂದ ಬಂದವರು. ಆದರೆ ಇವರು ಅಪ್ಪನ ಹೆಸರು, ಕೃಪಾಪೋಷಿತದಿಂದ ಬಂದವರು ಎಂದು ಆಕ್ರೋಶ ಹೊರಹಾಕಿದ್ದಾರೆ.

  • ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆಯಲಿದೆ ಸಿಸಿಬಿ- ಯಾರಿಗೆಲ್ಲ ಬೆದರಿಕೆ ಹಾಕಿದ್ದ?

    ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆಯಲಿದೆ ಸಿಸಿಬಿ- ಯಾರಿಗೆಲ್ಲ ಬೆದರಿಕೆ ಹಾಕಿದ್ದ?

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುವುದು ಬಹುತೇಕ ಖಚಿತವಾಗಿದೆ.

    ಬೆಂಗಳೂರಿನಲ್ಲಿ ಡಬಲ್ ಮರ್ಡರ್‍ಗಳು ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಭೂಗತ ಪಾತಕಿ ರವಿ ಪೂಜಾರಿ, ಸಿಸಿಬಿ ಎಸಿಪಿ ವೇಣುಗೋಪಾಲ್ ಆ್ಯಂಡ್ ಟೀಂ ಪಾತಕಿಯನ್ನ ವಿಚಾರಣೆ ಮಾಡಲಿದ್ದಾರೆ.

    ಪಶ್ಚಿಮ ಆಫ್ರಿಕಾದ ಸೆನೆಗಲ್‍ನಿಂದ ಕಾನೂನು ಪ್ರಕ್ರಿಯೆ ಮುಗಿಸಿ ಕರೆದುಕೊಂಡು ಬಂದಿದ್ದಾರೆ. ಪಾತಕಿ ರವಿಯನ್ನ ಸೆನೆಗಲ್‍ನಿಂದ ಲಾ ಆ್ಯಂಡ್ ಆರ್ಡರ್ ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದ ತಂಡ ಭಾನುವಾರ ರಾತ್ರಿ ಬೆಂಗಳೂರಿಗೆ ಕರೆದುಕೊಂಡು ಬಂದಿದೆ.

    ಏರ್‍ಪೋರ್ಟ್ ನಿಂದ ಪಾತಕಿ ರವಿ ಪೂಜಾರಿಯನ್ನು ನೇರವಾಗಿ ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ಡಾನ್ ರವಿ ಪೂಜಾರಿಯನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ. ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗೆ ಬೇಕಾಗಿರುವ ಕಾರಣ ಆರೋಪಿಯನ್ನ ಸಿಸಿಪಿ ಪೊಲೀಸ್ರು ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ.

    ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ಇವೆ. ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನು. ಬಾಲಾ ಜ್ವಾಲೆಯನ್ನು ಕೊಲೆ ಮಾಡಿದ್ದ ರವಿ ಪೂಜಾರಿ ಭೂಗತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದು, ಭೂಗತ ಪಾತಕಿ ಚೋಟಾ ರಾಜನ್ ತಂಡಕ್ಕೆ ಸೇರ್ಪಡೆಯಾಗಿದ್ದನು. 1990ರಲ್ಲಿ ದುಬೈಗೆ ಎಸ್ಕೇಪ್ ಆಗಿದ್ದ ರವಿ ಪೂಜಾರಿ ಅಲ್ಲಿಂದಲೇ ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹಾರ್, ನಿರ್ಮಾಪಕ ರಾಕೇಶ್ ರೋಷನ್‍ಗೆ ಬೆದರಿಕೆ ಹಾಕಿದ್ದನು. ತನ್ನ ಹಿಂಬಾಲಕರ ಮೂಲಕ ಮುಂಬೈನಲ್ಲಿ ಓಂಪ್ರಕಾಶ್ ಕುಕ್ರೆಜಾ ಕೊಲೆ, ಬಿಲ್ಡರ್ಸ್ ಕೊಲೆಗೆ ಯತ್ನಿಸಿದ್ದನು.

  • ಬಾಲ ಮಂದಿರದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್

    ಬಾಲ ಮಂದಿರದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್

    – ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಅಧಿಕಾರಿಗಳ ಅಮಾನತು

    ರಾಯಚೂರು: ಬೇಲಿಯೆ ಎದ್ದು ಹೊಲ ಮೇಯ್ದಂತೆ ಅನ್ನೋ ಹಾಗೆ ಬಾಲಕಿಯರನ್ನು ರಕ್ಷಣೆ ಮಾಡಬೇಕಾದ ರಾಯಚೂರಿನ ಸರ್ಕಾರಿ ಬಾಲಮಂದಿರದ ಓರ್ವ ಸೆಕ್ಯೂರಿಟಿ ಗಾರ್ಡ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಜಿಲ್ಲೆಯ ಬಾಲಮಂದಿರವೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದಯ್ಯ ಅತ್ಯಾಚಾರ ಎಸೆಗಿದ ಆರೋಪಿ. ಸಿದ್ದಯ್ಯ ನವೆಂಬರ್ 11ರಂದು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಬಾಲಕಿಯ ಅಣ್ಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಬಳಿಕವೂ ಬಾಲಮಂದಿರ ಅಧಿಕಾರಿಗಳಾದ ಸಯ್ಯದ್ ಪಾಷಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ. ಬಳಿಕ ಒತ್ತಡದ ಮೇರೆಗೆ ಕೊನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಯಚೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಬಾಲಮಂದಿರಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಅವರು ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಯ್ಯದ್ ಪಾಷಾ ಹಾಗೂ ಗುರುಪ್ರಸಾದ್ ಅವರನ್ನ ಅಮಾನತು ಮಾಡಿದ್ದಾರೆ. ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲಕಿಯರ ಬಾಲಮಂದಿರದಲ್ಲಿಯ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಹಾಯಕ ಆಯುಕ್ತರಿಗೆ ಸೂಚಿಸಿದ್ದು, ತನಿಖಾ ತಂಡಗಳನ್ನ ರಚಿಸಲಾಗಿದೆ.

    ಆರೋಪಿ ಸಿದ್ದಯ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ. ನಾನಾ ಕಾರಣಕ್ಕೆ ಬಾಲಮಂದಿರ ಸೇರುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಸಿಗಬೇಕಾದ ಸ್ಥಳದಲ್ಲೇ ರಕ್ಷಣೆ ಇಲ್ಲದಿರುವುದು ದುರಂತವೇ ಸರಿ. ಈಗಲಾದರೂ ಅಧಿಕಾರಿಗಳು ಬಾಲಮಂದಿರದ ವಾತಾವರಣವನ್ನೇ ಬದಲಿಸಬೇಕಿದೆ.

  • ಕುಡಿಯೋ ನೀರಿನ ಬಿಲ್ ಪಾಸ್ ಮಾಡಲು 1.20 ಲಕ್ಷ ಲಂಚಕ್ಕೆ ಒತ್ತಾಯ- ಲೇಡಿ ಪಿಡಿಒ ವಿರುದ್ಧ ದೂರು

    ಕುಡಿಯೋ ನೀರಿನ ಬಿಲ್ ಪಾಸ್ ಮಾಡಲು 1.20 ಲಕ್ಷ ಲಂಚಕ್ಕೆ ಒತ್ತಾಯ- ಲೇಡಿ ಪಿಡಿಒ ವಿರುದ್ಧ ದೂರು

    ಉಡುಪಿ: ಕುಡಿಯುವ ನೀರಿನ ಬಿಲ್ ಪಾಸ್ ಮಾಡಲು ಒಂದು ಲಕ್ಷ 20 ಸಾವಿರ ರುಪಾಯಿ ಲಂಚಕ್ಕೆ ಪಿಡಿಒ ಬೇಡಿಕೆಯಿಟ್ಟಿದ್ದಾರೆಂಬ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಕಳೆದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಬರ ಬಂದಿತ್ತು. ಈ ಸಂದರ್ಭದ ಅಕ್ರಮ ಈಗ ಬೆಳಕಿಗೆ ಬಂದಿದೆ.

    ಕುಂದಾಪುರದ ಯಡಮೊಗೆ ಗ್ರಾಮಕ್ಕೂ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಆದೇಶ ಮಾಡಿತ್ತು. ಇದರ ಪ್ರಕಾರ ಟೆಂಡರ್ ಆಗಿದೆ, ನೀರು ಪೂರೈಕೆಯೂ ಆಗಿದೆ. ಆಗ ಪಿಡಿಓ ಆಗಿದ್ದ ಸುಮಾ ಟ್ಯಾಂಕರ್ ನೀರು ಟೆಂಡರ್ ದಾರನ ಬಳಿ ಕಮಿಷನ್ ಕುದುರಿಸಿದ್ದಾರೆ. ಸುಮಾ ಟೆಂಡರ್ ಪಡೆದವನ ಜೊತೆ ಮಾತನಾಡಿದ ಆಡಿಯೋ ಈಗ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೇಸಿಗೆಯಲ್ಲಿ ನೀರು ಪೂರೈಸಿದ ಬಿಲ್ 5 ಲಕ್ಷದ 68 ಸಾವಿರ ಆಗಿತ್ತು. ಅದನ್ನು ಪಾಸ್ ಮಾಡಿಸಲು ಪಿಡಿಓ ಗೆ 1 ಲಕ್ಷ 20 ಸಾವಿರ ಲಂಚ ಕೊಡಬೇಕು ಎಂದು ಸುಮಾ ಆಡಿಯೋ ಕ್ಲಿಪ್ ನಲ್ಲಿ ಒತ್ತಾಯ ಮಾಡಿದ್ದಾರೆ.

    ರೌಂಡ್ ಫಿಗರ್ ಅಮೌಂಟ್ ಫಿಕ್ಸ್ ಆಗಿತ್ತು. ಅದನ್ನು ಕೊಡಲೇ ಬೇಕು ಎಂದು ಟೆಂಡರ್ ದಾರನ ಬಳಿ ಆಡಿಯೋದಲ್ಲಿ ಚೌಕಾಶಿ ನಡೆಯುತ್ತದೆ. ಸದ್ಯ ಸಿದ್ದಾಪುರ ಗ್ರಾಮ ಪಂಚಾಯತ್ ನಲ್ಲಿ ಸುಮಾ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ಮೇಲೆ ಕುಂದಾಪುರ ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಸಿಇಒ, ಡಿಸಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಆದರೆ ಇನ್ನೂ ಕ್ರಮಕೈಗೊಂಡಿಲ್ಲ. ಒಂದು ಪಂಚಾಯತ್ ನ ಗೋಲ್ಮಾಲ್, ಲಂಚಾವತಾರ ಬೆಳಕಿಗೆ ಬಂದಿದೆ. ಪಂಚಾಯತ್ ಉಪಾಧ್ಯಕ್ಷ ಬಾಲಚಂದ್ರ ಹೆಬ್ಬಾರ್ ದೂರು ನೀಡಿದ್ದಾರೆ.

  • ಟಿವಿ ನೋಡುವುದರಲ್ಲಿ ದಂಪತಿ ಬ್ಯುಸಿ- ಟಬ್‍ನಲ್ಲಿ ಬಿದ್ದು ಪುತ್ರಿ ಸಾವು

    ಟಿವಿ ನೋಡುವುದರಲ್ಲಿ ದಂಪತಿ ಬ್ಯುಸಿ- ಟಬ್‍ನಲ್ಲಿ ಬಿದ್ದು ಪುತ್ರಿ ಸಾವು

    ತಿರುವನಂತಪುರಂ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕ ಸುಜೀತ್ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ದಂಪತಿಯ ಪುತ್ರಿ ಮನೆಯ ಟಬ್‍ನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಎರಡು ವರ್ಷದ ಬಾಲಕಿ ರೇವತಿ ಸಂಜನಾ ಮೃತ ದುರ್ದೈವಿ. ತೂತ್ತುಕುಡಿ ಸಮೀಪದ ಥ್ರೇಸ್‍ಪುರಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ರೇವತಿ ಪೋಷಕರು ಸುಜೀತ್ ರಕ್ಷಣಾ ಕಾರ್ಯಾಚರಣೆಯನ್ನು ಟಿವಿಯಲ್ಲಿ ನೋಡುತ್ತಿದ್ದರು. ಈ ವೇಳೆ ರೇವತಿ ಆಟವಾಡುತ್ತಾ ಟಬ್‍ನಲ್ಲಿ ಬಿದ್ದಿದ್ದಾಳೆ. ಮಗಳು ಕಾಣಿಸದೆ ಇರುವುದರಿಂದ ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಸಿಗದಿದ್ದಾಗ ಟಬ್‍ನಲ್ಲಿ ನೋಡಿದ್ದು, ಬಾಲಕಿ ಪತ್ತೆಯಾಗಿದ್ದಾಳೆ. ತಕ್ಷಣವೇ ರೇವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು, ಬಾಲಕಿ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್‍ವೆಲ್‍ಗೆ ಶುಕ್ರವಾರ ಸಂಜೆ ಸುಜಿತ್(2) ಆಯಾತಪ್ಪಿ ಬಿದ್ದಿದ್ದನು. ಸುಮಾರು 600 ಅಡಿ ಆಳದ ಬೋರ್‍ವೆಲ್‍ನಲ್ಲಿ ಬಿದ್ದ ಸುಜಿತ್ 100 ಅಡಿ ಆಳದಲ್ಲಿ ಸಿಲುಕಿದ್ದನು. ಕಳೆದ ನಾಲ್ಕು ದಿನಗಳಿಂದ ಸುಜಿತ್ ನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ ಹರಸಾಹಸ ಪಟ್ಟರೂ ಬಾಲಕನ ಜೀವ ಉಳಿಸಲು ಆಗಲಿಲ್ಲ. ಜಿಲ್ಲಾಡಳಿತ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ.

    ವಿಪರೀತ ದುರ್ವಾಸನೆ ಬರುತ್ತಿರುವ ಕಾರಣ ಅಧಿಕಾರಿಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ನಾವು ಬಾಲಕನನ್ನು ರಕ್ಷಣೆ ಮಾಡಲು ಸಾಕಷ್ಟು ಕಷ್ಟಪಟ್ಟೆವು ಆದರೆ ನಮ್ಮಿಂದ ಆತನನ್ನು ಜೀವಂತವಾಗಿ ಕೊಳವೆಬಾವಿಯಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊಳವೆಬಾವಿಯಿಂದ ಮೃತದೇಹದ ಕೊಳೆತ ದುರ್ವಾಸನೆ ಬರುತ್ತಿದ್ದ ಕಾರಣ ಆತ ಮೃತಪಟ್ಟಿರುವುದು ಖಚಿತವಾಗಿದೆ. ಬಾಲಕನ ಮೃತದೇಹ ಹೆರತೆಗೆಯಲಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.

  • ಯಾರದ್ದೋ ಮನೆಗೆ ಹೋಗಿ ನಾವು ಅಕ್ಕಿ ತಿಂದಿಲ್ಲ: ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್

    ಯಾರದ್ದೋ ಮನೆಗೆ ಹೋಗಿ ನಾವು ಅಕ್ಕಿ ತಿಂದಿಲ್ಲ: ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್

    ಕೋಲಾರ: ಸೋತ ನಂತರ ಹತಾಷರಾಗಿ ಹೀಗೆ ಮಾತನಾಡುತ್ತಿದ್ದಾರೆ. ಯಾರ ಮನೆ ಅಕ್ಕಿಯನ್ನೂ ನಾವು ತಿಂದಿಲ್ಲ. ಸರ್ಕಾರದ ಅಕ್ಕಿ ತಿಂದಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ನಿವೃತ್ತ ಯೋಧರ ಕುಟುಂಬ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಮುನಿಯಪ್ಪ ಅವರು ಹಿರಿಯರು. 28 ವರ್ಷಗಳ ಕಾಲ ಸಂಸದರಾಗಿದ್ದವರು. ಅವರ ಬಗ್ಗೆ ಮಾತನಾಡಲ್ಲ ಎನ್ನುತ್ತಲೇ ತಿರುಗೇಟು ನೀಡಿದ್ದಾರೆ.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ. ಈ ಮೂಲಕ ಶಾಸಕರು ರಾಜೀನಾಮೆಗೆ ಸಿದ್ಧರಾಗಲಿ, ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಮುನಿಸ್ವಾಮಿ ತಿಳಿಸಿದರು.

    ಮಾಜಿ ಸಂಸದರು ಹೇಳಿದ್ದೇನು?:
    ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು, ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಿಸಿದಂಥವರು ಬಿಜೆಪಿ ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ನೋವು ನನಗಿದೆ. ಅಲ್ಲದೆ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಅಕ್ಕಿ ತಿಂದು ಮೋದಿಗೆ ವೋಟ್ ಹಾಕಿದ್ದಾರೆ. ಅವರು ಇದುವರೆಗೂ ಒಬ್ಬ ಯುವಕನಿಗೆ ಉದ್ಯೋಗ ಕೊಡಿಸಿಲ್ಲ. ಪುಲ್ವಾಮಾ ಹಾಗೂ ಏರ್‍ಸ್ಟ್ರೈಕ್‍ನ ತಂತ್ರಗಾರಿಕೆಯಿಂದ ಮೋದಿ ಜನರನ್ನ ಮೋಡಿ ಮಾಡಿ ಗೆದ್ದಿದ್ದಾರೆ ಎಂದು ಕಿಡಿಕಾರಿದ್ದರು.

    ನಾನು ಮಂತ್ರಿಯಾಗಿದ್ದಾಗ ಕೈಗಾರಿಕಾ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೆ.ಸಿ.ವ್ಯಾಲಿ ಯೋಜನೆಗೆ ಶ್ರಮಿಸಿದ್ದೇನೆ. ಇನ್ನೂ ನಾನು ಗೆಲ್ಲಸಿದ ನನ್ನ ಹಿತೈಷಿಗಳೇ, ಪಕ್ಷದ ಶಾಸಕರೇ ನನ್ನ ಸೋಲಿಗೆ ಕಾರಣವಾದರು. ಹೈಕಮಾಂಡ್‍ನಲ್ಲಿ ನಿರ್ಧಾರವಾಗಿದೆ. ಸರ್ಕಾರ ಸುಭದ್ರವಾಗಿರಬೇಕು ಎನ್ನುವ ಕಾರಣಕ್ಕೆ ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಕೆ.ಸಿ.ಯೋಜನೆಯ ಜನಕರೇ ಬೇರೆ, ಲಾಲಿ ಹಾಡಿದವರೇ ಬೇರೆ. ಈ ಕಥೆಯನ್ನ ಸಂಪೂರ್ಣವಾಗಿ ಬಿಚ್ಚಿಡುವೆ ಕಾಯಬೇಕು ಎಂದು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    – ಲೋಕಲ್ ಎಲೆಕ್ಷನ್ ನಲ್ಲಿ ಬಿಎಸ್‍ವೈಗೆ ಮುಖಭಂಗ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಳೆದ ಮೂರು ದಶಕಗಳಿಂದ ಇದ್ದ ಬಿಜೆಪಿ ಅಧಿಕಾರ ಅಂತ್ಯಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಯಡಿಯೂರಪ್ಪ ಲೋಕಲ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

    ಇಂದು ಪ್ರಕಟಗೊಂಡ ಪುರಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ದಯಾನೀಯ ಸೋಲು ಕಂಡಿದ್ದಾರೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಇಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ.

    ಜಿಲ್ಲೆಯಲ್ಲಿ ಚುನಾವಣೆ ನಡೆದ ಐದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಎರಡಲ್ಲಿ ಅಧಿಕಾರ ಹಿಡಿದರೆ ಒಂದರಲ್ಲಿ ಕಾಂಗ್ರೆಸ್, ಇನ್ನು ಎರಡರಲ್ಲಿ ಮೈತ್ರಿಕೂಟ ಅಧಿಕಾರ ಹಿಡಿದಿವೆ. ಇದೂವರೆಗೂ ಕಾಂಗ್ರೆಸ್ ವಶದಲ್ಲಿದ್ದ ಸಾಗರ ಪುರಸಭೆ ಈಗ ಬಿಜೆಪಿ ವಶವಾಗಿದೆ. ಸಾಗರ ನಗರಸಭೆಯ ಒಟ್ಟು ಸ್ಥಾನ 31 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗೆದ್ದು, ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರರು 5ಸ್ಥಾನದಲ್ಲಿ ಗೆದ್ದಿದ್ದಾರೆ.

    ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಲ್ಲಿ ಬಿಜೆಪಿ 2, ಜೆಡಿಎಸ್ 3, ಕಾಂಗ್ರೆಸ್ 7, ಪಕ್ಷೇತರರು 5 ಸ್ಥಾನದಲ್ಲಿ ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿದಿದೆ.

    ಅಧಿಕಾರ ಮೈತ್ರಿಗೆ
    ಸೊರಬ ಪಟ್ಟಣ ಪಂಚಾಯ್ತಿಯ 12 ಸ್ಥಾನಗಳಲ್ಲಿ ಬಿಜೆಪಿ 6 ಗೆದ್ದಿದ್ದು, ಒಂದು ಎಂಎಲ್‍ಎ ಹಾಗೂ ಒಂದು ಎಂಪಿ ಮತ ಪಡೆದು ಬಹುಮತದಿಂದ ಪಂಚಾಯ್ತಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 4, ಜೆಡಿಎಸ್ 1, ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಹೊಸನಗರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದಿದೆ. ಕಾಂಗ್ರೆಸ್ 4, ಜೆಡಿಎಸ್ 3 ಸ್ಥಾನಗಳನ್ನು ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿಯಲಿದೆ.