ಗಂಗಾವತಿ ಠಾಣೆಯ ಪಿಎಸ್‍ಐ ರಾಮಣ್ಣ ಅವರಿಗೆ ಶಾಸಕರು ಫೋನ್‍ನಲ್ಲಿ ಸಾರ್ವಜನಿಕವಾಗಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ರಾಮಣ್ಣ ಬಳ್ಳಾರಿ ಜಲ್ಲೆಯ ಕಂಪ್ಲಿ ಪಟ್ಟಣಕ್ಕೆ ವರ್ಗವಾದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿದೆ.
ಏನಿದು ಘಟನೆ?: ಕೆಲವು ದಿನಗಳ ಹಿಂದೆ ಕುರಿಗಳ ಕಳ್ಳತನ ಪ್ರಕರಣದಲ್ಲಿ ಕೆಲವು ಮಾಂಸದಂಗಡಿಯ ಮಾಲೀಕರನ್ನು ಕರೆತಂದು ವಿಚಾರಣೆ ನಡೆಸಿದ್ದರು. ಮಾಂಸದ ಅಂಗಡಿಯ ವ್ಯಾಪಾರಿಗಳು ಶಾಸಕರ ಮುಂದೆ ಬಂದು ನಮ್ಮನ್ನ ವಿನಾಕಾರಣ ವಿಚಾರಣೆ ನಡೆಸುತ್ತಿದ್ದಾರೆ ಎಂದು ದೂರಿದ್ದರು. ವ್ಯಾಪಾರಿಗಳ ಮಾತು ಕೇಳುತ್ತಿದ್ದಂತೆ ಯೋಚನೆ ಮಾಡದೇ ಪಿಎಸ್‍ಐಗೆ ಕರೆ ಮಾಡಿ, ನಿಮಗೆ ಗಂಗಾವತಿ ಬೇಸರ ಆಗಿದ್ರೆ ಹೇಳಿ ವರ್ಗಾವಣೆ ಮಾಡಿಸ್ತೀನಿ. ನೀನು ಒಳ್ಳೆಯವನು ಅಂತಾ ಇಟ್ಟುಕೊಂಡಿದ್ದೇನೆ. ವಿನಾಕಾರಣ ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ರೆ ಪೊಲೀಸ್ ಸ್ಟೇಷನ್‍ಗೆ ಮುತ್ತಿಗೆ ಹಾಕಿಸ್ತೀನಿ ಎಂದು ಅವಾಜ್ ಹಾಕುವ ಮೂಲಕ ಅಧಿಕಾರ ದರ್ಪ ಮೆರೆದಿದ್ದಾರೆ.
ಇದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದು ಹೇಳಿರೋ ಸಾರ್ವಜನಿಕರು, ಪೊಲೀಸ್ ಇಲಾಖೆಯ ಕೆಲಸದಲ್ಲಿ ಮಧ್ಯಪ್ರವೇಶಿಸಿರುವ ಅನ್ಸಾರಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆಯೇ ಕೈ ಕೈ ಮಿಲಾಯಿಸಿದ ವೇಳೆ ಪಿಎಸ್‍ಐ ಬೂಟ್‍ನಿಂದ ಹೊಡೆದು ದರ್ಪ ತೋರಿಸಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಇಪ್ಪತ್ತೈದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಾಧ್ಯಮಗಳಿಗೆ ತಡವಾಗಿ ವಿಡಿಯೋ ಲಭ್ಯವಾಗಿದೆ. ಸಿಂಗನಾಳ ಗ್ರಾಮದ ಶಿವಬಸಪ್ಪ ಹಾಗೂ ವೀರಭದ್ರಪ್ಪ ನಡುವೆ ಭೂವಿವಾದಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿತ್ತು. ಆಗ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ನಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಬೂಟ್ ನಿಂದ ಹೊಡೆದು ಗುಂಪನ್ನ ಚದುರಿಸಿದ್ದಾರೆ.
ಗುಂಪು ಚದುರಿಸಬೇಕಾದ್ರೆ ಲಾಠಿ ಬಳಸಬೇಕು ಆದ್ರೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ಬಳಸಿರೋದು ವಿವಾದಕ್ಕೆ ಕಾರಣವಾಗಿದೆ. ಇದೀಗ ಪಿಎಸ್‍ಐ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಬೆಳಗಾವಿ: ಬಾರ್‍ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಜಿಲ್ಲೆಯ ಕುಡಚಿ ಠಾಣೆಯ ಪಿಎಸ್‍ಐ ಶಿವಶಂಕರ ಮುಕ್ರಿ ಅವರಿಗೆ ಇಲಾಖೆಯ ವಿಚಾರಣೆಯಲ್ಲಿ ಕ್ಲೀನ್ ಚೀಟ್ ನೀಡಲಾಗಿದೆ.
ಕುಡಚಿ ಪೊಲೀಸ್ ಠಾಣೆ ಪಿಎಸ್‍ಐ ಶಿವಶಂಕರ ಮುಕರಿ ಮಾರ್ಚ್ 13 ರಂದು ಕುಡಚಿ ಪಟ್ಟಣದ ಶಿವಶಕ್ತಿ ಬಾರ್‍ಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ರು. ಹಲ್ಲೆಯ ದೃಶ್ಯಗಳು ಬಾರ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ತನಿಖೆಯಲ್ಲಿ ಸಾಕ್ಷಿಗಳನ್ನ ಪರಿಗಣಿಸದ ತನಿಖಾಧಿಕಾರಿಗಳು, 15 ಪುಟಗಳ ಸಂಪೂರ್ಣ ತನಿಖಾ ವರದಿಯನ್ನ ಪಿಎಸ್‍ಐ ಪರವಾಗಿಯೇ ತಯಾರಿಸಿದ್ದಾರೆ. ದೂರುದಾರ ಬಾರ್ ಮಾಲೀಕರ ವಿರುದ್ಧವೇ ಇಡೀ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾ.18ರಂದು ಐಜಿಪಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಡಿಸಿಆರ್‍ಬಿ ಘಟಕದ ಡಿವೈಎಸ್ಪಿ ಎಸ್.ಎಂ.ನಾಗರಾಜ್ ಅವರಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಡಿವೈಎಸ್ಪಿ ನಾಗರಾಜ್ ಮಾರ್ಚ್ 27ರಂದೇ ವರದಿ ನೀಡಿದ್ದಾರೆ.
ಹಲ್ಲೆಗೊಳಗಾದ ಅಜೀತ್
ಇದನ್ನೂ ಓದಿ: ಮಾಮೂಲಿ ಕೊಡದಕ್ಕೆ ಬಾರ್ ಸಿಬ್ಬಂದಿಯನ್ನ ಮನಬಂದಂತೆ ಥಳಿಸಿದ ಪಿಎಸ್‍ಐ! ವರದಿಯಲ್ಲಿನ ಅಂಶಗಳೇನು?: 1. ಪಿಎಸ್‍ಐ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೇ ಅನುಮಾನವಿದೆ. ಬಾರ್ ನಲ್ಲಿ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟತೆ ಕೊರತೆಯಿದೆ ಎಂದು ಹೇಳಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ನಿಜವೆಂದು ನಂಬಲು ಸಾಧ್ಯವಿಲ್ಲ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2. ಬಾರ್ ಸಿಬ್ಬಂದಿಯಿಂದ ಉದ್ದೇಶಪೂರ್ವಕ ಘಟನೆಯ ಅತಿಯಾದ ರಂಜಿಸಿದ್ದು, ಇದಕ್ಕಾಗಿಯೇ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾದ ಅಜಿತ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಪಿಎಸ್‍ಐ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ, ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬುದು ಸುಳ್ಳು ಎಂದು ವರದಿಯಲ್ಲಿ ತಿಳಿಸಲಾಗಿದೆ.
3. ಘಟನೆ ದಿನ ಮದ್ಯ ಮಾರಾಟ ನಿಷೇಧವಿದ್ದರೂ ಬಾರ್ ನಲ್ಲಿ ಮದ್ಯ ಮಾರಾಟ ಮಾಡಲಾಗುತಿತ್ತು. ಪೊಲೀಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸಲು ಹಲ್ಲೆಯ ಆಪಾದನೆ ಮಾಡಲಾಗಿದೆ. ಇನ್ನೂ ಪಿಎಸ್‍ಐ ಪ್ರತಿ ತಿಂಗಳು 30ಸಾವಿರ ರೂ. ಮಾಮೂಲಿ ಪಡೆಯುತ್ತಾರೆಂಬ ಆರೋಪ ಶುದ್ಧ ಸುಳ್ಳು ಎಂದು ಸಾಬೀತಾಗಿದೆ. ಪಿಎಸ್‍ಐ ಶಿವಶಂಕರ ಮುಕರಿ ಬಾರ್‍ನಲ್ಲಿದ್ದ ಯಾವುದೇ ನೀರಿನ ಬಾಟಲ್, ತಂಪು ಪಾನೀಯ ದೋಚಿಲ್ಲ. ಬಾರ್ ಮಾಲೀಕ ಶಿವರಾಜ್ ನೀಡಿದ ದೂರು ಸತ್ಯಕ್ಕೆ ದೂರವಾದದ್ದು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲೆ 70 ವರ್ಷದ ವೃದ್ಧರೊಬ್ಬರ ಮೇಲೆ ಕರ್ತವ್ಯ ನಿರತ ಪಿಎಸ್‍ಐ ಕಪಾಳಮೋಕ್ಷ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಚೇಳೂರು ಸರ್ಕಲ್ ಬಳಿ ನಡೆದಿದೆ.
ಚಿಂತಾಮಣಿ ನಗರ ಠಾಣೆಯ ಕ್ರೈಂ ಪಿಎಸ್‍ಐ ನರಸಿಂಹಮೂರ್ತಿ ಅವರು ನಗರದ ವಿನೋಭಾ ಕಾಲೋನಿಯ ನಿವಾಸಿ ನಾರಾಯಣಪ್ಪ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ವೃದ್ಧನ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಪಿಎಸ್‍ಐ ವಿರುದ್ಧವೇ ತಿರುಗಿಬಿದ್ದ ವೃದ್ಧನ ಸಂಬಂಧಿಕರು ಹೃದಯ ಸಂಬಂಧಿ ರೋಗಿ ಮೇಲೆಯೇ ಹಲ್ಲೆ ಮಾಡ್ತೀರಾ ಅಂತ ಪಿಎಸ್‍ಐ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ನಡೆದಿದ್ದೇನು?: ನಾರಾಯಣಪ್ಪ ಅವರ ಮಗ ಬೈಕ್‍ನಲ್ಲಿ ಹೋಗುವಾಗ ಚೇಳೂರು ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಬೈಕನ್ನ ಪೊಲೀಸರು ವಶಕ್ಕೆ ಪಡೆದಿದ್ರು. ಹೀಗಾಗಿ ಮಗನ ಪರವಾಗಿ ಮಾತನಾಡಲು ಸ್ಥಳಕ್ಕೆ ನಾರಾಯಣಪ್ಪ ಬಂದಿದ್ದರು. ಆದ್ರೆ ಈ ವೇಳೆ ಸ್ಥಳಕ್ಕೆ ಬಂದ ಪಿಎಸ್‍ಐ ನರಸಿಂಹಮೂರ್ತಿ ಹಾಗೂ ವೃದ್ಧ ನಾರಾಯಣಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾರಾಯಣಪ್ಪ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಪಿಎಸ್‍ಐ ನರಸಿಂಹಮೂರ್ತಿ ಹಲ್ಲೆ ಮಾಡಿದರು ಎಂದು ಹೇಳಲಾಗುತ್ತಿದೆ.
ನಾರಾಯಣಪ್ಪ ಅವರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಕೆಂಡಾಮಂಡಲರಾದ ವೃದ್ಧನ ಸಂಬಂಧಿಕರು ಪಿಎಸ್‍ಐ ಅವರಿಗೆ ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಂಡರು. ಕೆಲಕಾಲ ಚೇಳೂರು ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಡಿವೈಎಸ್‍ಪಿ ಅವರು ಪಿಎಸ್‍ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಹಲ್ಲೆಗೊಳಾದ ನಾರಾಯಾಣಪ್ಪ ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರವಾರ: ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯ ಪಿಎಸ್‍ಐ ಲಂಚ ಸ್ವೀಕರಿಸಿ ಮತ್ತೆ ಬೇಡಿಕೆ ಇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬನವಾಸಿ ಠಾಣಾ ಪಿಎಸ್‍ಐ ಸುರೇಖಾ ಬಾಡ್ಕರ್ ನಾಲ್ಕು ದಿನಗಳ ಹಿಂದೆ ಅಕ್ರಮ ಮರಳು ಸಾಗಿಸುತಿದ್ದ ಲಾರಿಯನ್ನು ಹಿಡಿದು ಲಾರಿ ಮಾಲೀಕನಿಂದ 10 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದರು. ಲಾರಿ ಮಾಲೀಕ 4 ಸಾವಿರ ಹಣ ನೀಡಿ ಉಳಿದ 6 ಸಾವಿರ ಹಣವನ್ನು ಠಾಣೆಯಲ್ಲಿ ನೀಡಿದ್ದಾನೆ.
ಠಾಣೆಯಲ್ಲಿ ಲಂಚ ನೀಡುವಾಗ ತನ್ನ ಮೊಬೈಲ್‍ನಲ್ಲಿ ದೃಶ್ಯಾವಳಿಯನ್ನು ಸೆರೆ ಹಿಡಿದು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾನೆ. ಈಗ ಜಿಲ್ಲೆಯಾದ್ಯಾಂತ ಈ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು: ಆರೋಪಿಗಳನ್ನು ಠಾಣೆಯಿಂದ ಬಿಟ್ಟು ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಶೋಕಾಸ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಎನ್‍ಆರ್‍ಪುರ ಠಾಣೆ ಪಿಎಸ್‍ಐ ಸುನೀತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಭೇಟಿ ನೀಡಿ ಮನವೊಲಿಸಿದ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಣ್ಣಾಮಲೈ ಶುಕ್ರವಾರ ಮುಂಜಾನೆ 4.30ರವರೆಗೂ ಎನ್.ಆರ್.ಪುರದಲ್ಲೇ ಇದ್ದು, ಪರಿಸ್ಥಿತಿಯನ್ನು ನಿಭಾಯಿಸಿದರು.
ಹನಿಟ್ರ್ಯಾಪ್ ಪ್ರಕರಣದ ಆರೋಪಿಗಳನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದರು. ಠಾಣೆ ಪೊಲೀಸರು ಆರೋಪಿಗಳನ್ನು ಬಿಟ್ಟುಕಳುಹಿಸಿ, ನಂತರ ಪ್ರಕರಣ ದಾಖಲಿಸಿದ್ದರು. ಎಎಸ್ಪಿ ಅಣ್ಣಪ್ಪನಾಯ್ಕ ಅವರಿಗೆ ತನಿಖೆ ನಡೆಸಲು ಎಸ್ಪಿ ಸೂಚಿಸಿದ್ದರು.
ಪ್ರಕರಣ ನಿರ್ವಹಿಸುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಜಗನ್ನಾಥ ಮತ್ತು ಪಿಎಸ್‍ಐ ಸುನೀತಾ ಕರ್ತವ್ಯ ಲೋಪ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಎಸ್ಪಿ ಇಬ್ಬರಿಗೂ ನೋಟಿಸ್ ನೀಡಿದ್ದರು. ತಪ್ಪು ಮಾಡಿರುವುದು ಸಾಬೀತಾದರೆ ಇಬ್ಬರ ವಿರುದ್ಧವೂ ಕ್ರಮಜರುಗಿಸುವ ಅಧಿಕಾರ ತನಗೆ ಇದೆ ಎಂದು ಎಸ್ಪಿ ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಅಮಾನತು ಆಗುವ ಭೀತಿಯಲ್ಲಿ ಪಿಎಸ್ ಐ ಆತ್ಮಹತ್ಯೆಗೆ ಯತ್ನಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು: ಗನ್ ತೋರಿಸಿದ್ದಕ್ಕೆ ಪಿಎಸ್‍ಐಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಗ್ತಿ ಹಳ್ಳಿ ಗ್ರಾಮದ ಬಳಿ ಗ್ರಾಮಾಂತರ ಪಿಎಸ್‍ಐ ಗವಿರಾಜ್ ಅವರ ಕಾರಿಗೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ಪಿಎಸ್‍ಐ ಹಾಗೂ ಸ್ಥಳೀಯರ ನಡುವೆ ಗಲಾಟೆಯಾಗಿದ್ದು, ಪಿಎಸ್‍ಐ ಗವಿರಾಜ್ ಜನರ ಮಧ್ಯೆ ಗನ್ ಹೊರಕ್ಕೆ ತೆಗೆದಿದ್ದಾರೆ. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಗವಿರಾಜ್ ಅವರ ಕಪಾಳಕ್ಕೆ ಬಾರಿಸಿದ್ದಾನೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಎಸ್‍ಪಿ ಅಣ್ಣಾಮಲೈ, ನಾನು ತಂದೆ ತಾಯಿಗೆ ಹುಟ್ಟಿರೋದು. ಧೈರ್ಯವಿದ್ದರೆ ರೋಡ್ ಬ್ಲಾಕ್ ಮಾಡಿ ನೋಡೋಣ ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ
ಘಟನೆಗೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರ ಮೇಲೆ ಐಪಿಸಿ ಸೆಕ್ಷನ್ 326, 353, 504, 506ರ ಅನ್ವಯ ಕೇಸ್ ದಾಖಲಿಸಲಾಗಿದೆ.