Tag: PSI

  • ಪಿಎಸ್‍ಐ ಥಳಿತಕ್ಕೆ ಯುವಕ ಸಾವು: ಗ್ರಾಮಸ್ಥರಿಂದ ಆರೋಪ

    ಪಿಎಸ್‍ಐ ಥಳಿತಕ್ಕೆ ಯುವಕ ಸಾವು: ಗ್ರಾಮಸ್ಥರಿಂದ ಆರೋಪ

    ರಾಯಚೂರು: ಪೊಲೀಸ್ ವಶದಲ್ಲಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

    ಗಬ್ಬೂರು ಗ್ರಾಮದ ನಿವಾಸಿ ಶಿವಕುಮಾರ (23) ಮೃತ ಯುವಕ. ಶಿವಕುಮಾರನನ್ನು ಪಿಎಸ್‍ಐ ಮುದುರಂಗಪ್ಪ ಅವರ ಥಳಿಸಿದ್ದಾರೆ. ಹೀಗಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಶಿವಕುಮಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನು ತಳ್ಳಿಹಾಕಿರುವ ಪೊಲೀಸರು, ಯುವಕ ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಗಬ್ಬೂರು ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ವಿಸರ್ಜನೆ ಮಾಡಲಾಯಿತು. ಈ ವೇಳೆ ಗಲಾಟೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶಿವಕುಮಾರನನ್ನು ಭಾನುವಾರ ಸಂಜೆ 4:30 ಗಂಟೆಗೆ ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸ್ ಜೀಪ್‍ನಲ್ಲಿ ಠಾಣೆಗೆ ಕರೆದೊಯ್ಯುತ್ತಿದ್ದಾಗ ಶಿವಕುಮಾರಗೆ ಮೂರ್ಛೆ ರೋಗ ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಶಿವಕುಮಾರ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಶಿವಕುಮಾರ ಸಾವಿಗೆ ಪಿಎಸ್‍ಐ ಮುದುರಂಗಪ್ಪ ಅವರೇ ಕಾರಣ. ಅವರು ಜೀಪ್‍ನಲ್ಲಿ ಶಿವಕುಮಾರಗೆ ಥಳಿಸಿದ್ದಾರೆ. ಇದರಿಂದಾಗಿ ಆತ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಪಿಎಸ್‍ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಮೃತ ಶಿವಕುಮಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು, ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಜೀಪ್‍ಗೆ ಕಲ್ಲು ಜಖಂಗೊಳಿಸಿದ್ದಾರೆ. ಇತ್ತ ಶಿವಕುಮಾರ ಮೃತ ದೇಹವನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

  • ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಗಣೇಶ ಹಬ್ಬದಂದು ಕರ್ತವ್ಯ ನಿರ್ವಹಿಸದೇ ಮನೆಯಲ್ಲಿ ಮಲಗಿದ್ದ ಪಿಎಸ್‍ಐ ಅಮಾನತು

    ಧಾರವಾಡ: ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ನಿರ್ವಹಿಸದೇ ಮನೆಗೆ ಹೋಗಿ ಮಲಗಿ ಕರ್ತವ್ಯಲೋಪ ಎಸಗಿದ್ದ ಪಿಎಸ್‍ಐಯನ್ನು ಧಾರವಾಡ ಎಸ್‍ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಧಾರವಾಡ ಜಿಲ್ಲೆಯ ಗರಗ ಠಾಣೆಯ ಪಿಎಸ್‍ಐ ಸಮೀರ್ ಮುಲ್ಲಾ ಅಮಾನತಾಗಿದ್ದಾರೆ. ಗರಗ ಠಾಣಾ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನ ಮೆರವಣಿಗೆ ಸಾಗುವಾಗ ಸ್ವಲ್ಪ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಮಧ್ಯರಾತ್ರಿ 2 ಗಂಟೆಗೆ ಖುದ್ದು ಜಿಲ್ಲಾ ಮಹಿಳಾ ಎಸ್‍ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

    ಈ ವೇಳೆ ಪಿಎಸ್‍ಐಗೆ ರಾತ್ರಿ ಗಸ್ತು ತಿರುಗುವಂತೆ ಸೂಚಿಸಿ ಹೋಗಿದ್ದರು. ಆದರೆ, ಪಿಎಸ್‍ಐ ಸಮೀರ್ ಮುಲ್ಲಾ ಎಸ್‍ಪಿ ಹೋಗುತ್ತಿದ್ದಂತೆ ಮನೆಗೆ ವಾಪಸ್ ತೆರಳಿದ್ದಾರೆ. ಎಸ್‍ಪಿ ಮತ್ತೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ಪಿಎಸ್‍ಐ ಸಮೀರ್ ಮುಲ್ಲಾ ಗಸ್ತು ನಿರ್ವಹಿಸದೇ ಮನೆಗೆ ಹೋಗಿದ್ದನ್ನು ಗಮನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ವರ್ತಿಕಾ ಕಟಿಯಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಮೀರ್ ಮುಲ್ಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

  • ಮಹಿಳೆಯರ ಮೇಲೆ ಹಲ್ಲೆ – ಆರೋಪ ಸಾಬೀತಾದರೆ ಶಿಕ್ಷೆ ಪಡೆಯುವೆ ಎಂದ ಪಿಎಸ್‍ಐ

    ಮಹಿಳೆಯರ ಮೇಲೆ ಹಲ್ಲೆ – ಆರೋಪ ಸಾಬೀತಾದರೆ ಶಿಕ್ಷೆ ಪಡೆಯುವೆ ಎಂದ ಪಿಎಸ್‍ಐ

    ಚಿಕ್ಕಬಳ್ಳಾಪುರ: ಅಸಹಾಯಕ ಮಹಿಳೆಯರನ್ನು ಠಾಣೆಗೆ ಕರೆಸಿ ಹಿಗ್ಗಾಮುಗ್ಗಾ ಬಾರಿಸಿದ ಆರೋಪವೊಂದು ರಾಮನಗರ ಜಿಲ್ಲೆ ಕನಕಪುರ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಮೇಲೆ ಕೇಳಿ ಬಂದಿದೆ.

    ಪಿಎಸ್‍ಐ ಅನಂತರಾಮ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಮನೆ ಭೋಗ್ಯದ ವಿಚಾರವಾಗಿ ಮಾತನಾಡಲು ಠಾಣೆಗೆ ತಾಯಿ, ಮಗಳಾದ ಗಿರಿಜಾಂಬ ಮತ್ತು ಲಕ್ಷ್ಮೀದೇವಿ ಇಬ್ಬರನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಗಿರಿಜಾಂಬ ತಂದೆ ಶಿವಲಿಂಗಚಾರಿ ಕನಕಪುರದಲ್ಲಿ ಮುನಿರುದ್ರಾಚಾರಿ ಎಂಬವರಿಂದ ಮನೆ ಭೋಗ್ಯಕ್ಕೆ ಪಡೆದಿದ್ದರು. ಲೀಸ್‍ನ ಅವಧಿ ಮುಗಿದ್ದರೂ ಸಹ ಶಿವಲಿಂಗಚಾರಿ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ನಿಮ್ಮ ಹಣವನ್ನು ವಾಪಸ್ ನೀಡಿದ್ದೇನೆ ಮನೆ ಖಾಲಿ ಮಾಡಿ ಎಂದರೂ ಸಹ ಶಿವಲಿಂಗಚಾರಿ ಮನೆ ಖಾಲಿ ಮಾಡಿರಲಿಲ್ಲ. ಶಿವಲಿಂಗಚಾರಿ ಮನೆ ಖಾಲಿ ಮಾಡಲು ಒಪ್ಪದಿದ್ದಾಗ ಮುನಿರುದ್ರಾಚಾರಿ ಪೊಲೀಸ್ ಠಾಣೆ ಮಟ್ಟಿಲೇರಿದರು.

    ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಕ್ಕೆ ಪಿಎಸ್‍ಐ ಸಂಧಾನ ಮಾಡಿಸಲು ಮುಂದಾಗಿದ್ದಾರೆ. ಸಂಧಾನ ಮಾತುಕತೆಗೆ ಪಿಎಸ್‍ಐ ಶಿವಲಿಂಗಾಚಾರಿ ಮಗಳು, ಹೆಂಡತಿಯನ್ನು ಠಾಣೆಗೆ ಕರೆಯಿಸಿದ್ದರು. ಈ ವೇಳೆ ಪಿಎಸ್‍ಐ ಅನಂತರಾಮ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಹಿಳೆಯರು ರಾಮನಗರ ಜಿಲ್ಲಾ ಎಸ್‍ಪಿಗೆ ದೂರು ನೀಡಿದ್ದರು.

    ಪಿಎಸ್‍ಐ ಅನಂತರಾಮ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಮಹಿಳೆಯರ ಮೇಲೆ ಹಲ್ಲೆ ಮಾಡಿಲ್ಲ, ಬೇಕಿದ್ದರೆ ವಿಚಾರಣೆ ನಡೆಸಿ. ನಾನು ಸಂಧಾನ ಮಾಡಿಸಲು ಅವರನ್ನು ಠಾಣೆಗೆ ಕರೆಸಿದೆ. ಆದರೆ ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿಲ್ಲ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಯಲಿ. ಹಲ್ಲೆ ನಡೆದಿರುವುದು ಸಾಬೀತಾದರೆ ನಾನು ಯಾವ ಶಿಕ್ಷೆ ಬೇಕಾದರೂ ಪಡೆದುಕೊಳ್ಳುತ್ತೇನೆ ಎಂದು ಪಿಎಸ್‍ಐ ಅನಂತರಾಮ್ ತಿಳಿಸಿದ್ದಾರೆ.

  • ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‍ಐ, ಪೇದೆ ಅಮಾನತು

    ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‍ಐ, ಪೇದೆ ಅಮಾನತು

    ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಠಾಣೆಯ ಪಿಎಸ್‍ಐ ಹಾಗೂ ಪೇದೆಯನ್ನು ಅಮಾನತುಗೊಳಿಸಲಾಗಿದೆ.

    ನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಬಿ.ಮರಿಯಮ್ ಹಾಗೂ ಸದರ್ ಬಜಾರ್ ಠಾಣೆಯ ಪೇದೆ ಆಂಜನೇಯ ಅಮಾನತುಗೊಂಡಿದ್ದಾರೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಆದೇಶ ಹೊರಡಿಸಿದ್ದಾರೆ.

    ವಿದ್ಯಾರ್ಥಿನಿಯ ಪೋಷಕರು ಮಗಳು ನಾಪತ್ತೆಯಾದ ಕುರಿತು ದೂರು ದಾಖಲಿಸಲು ಏಪ್ರಿಲ್ 13ರಂದು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಪಿಎಸ್‍ಐ ಬಿ.ಬಿ.ಮರಿಯಮ್ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ.

    ಬಂಧಿತ ಆರೋಪಿ ಸುದರ್ಶನ್ ಯಾದವ್‍ನ ಮಾವ, ಸದರ್ ಬಜಾರ್ ಠಾಣೆಯ ಪೇದೆ ಆಂಜನೇಯ ಮೃತಳ ಮೊಬೈಲ್ ಹಾಗೂ ವಾಹನದ ಕೀಯನ್ನು ಪೋಷಕರಿಗೆ ಮುಂಚಿತವಾಗಿಯೇ ಹಿಂತಿರುಗಿಸಿದ್ದ. ಅಷ್ಟೇ ಅಲ್ಲದೇ ಪೇದೆ ಆಂಜನೇಯ ಅವರಿಂದ ಆರೋಪಿಯ ರಕ್ಷಣೆಯಾಗುವ ಸಾಧ್ಯತೆ ಇದೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ದೂರಿದ್ದರು. ಹೀಗಾಗಿ ಅಮಾನತುಗೊಳಿಸಲಾಗಿದೆ.

    ವಿದ್ಯಾರ್ಥಿನಿಯ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನೇತಾಜಿ ನಗರ ಪೊಲೀಸ್ ಠಾಣೆ ಅಧಿಕಾರಿಗೆ ಡೆತ್‍ನೋಟ್ ಸಿಕ್ಕಿತ್ತು. ಹೀಗಾಗಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಆತ್ಮಹತ್ಯೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು.

    ವಿದ್ಯಾರ್ಥಿನಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿ ಸುದರ್ಶನ್ ಯಾದವ್ ನನ್ನು ಸಿಐಡಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಕಾರಾಗೃಹದಿಂದ ನಾಲ್ಕು ದಿನಗಳ ಮಟ್ಟಿಗೆ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಸಿಐಡಿ ಎಸ್.ಪಿ.ಶರಣಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮಂಗಳವಾರ ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಆರೋಪಿಯ ಸ್ನೇಹಿತರ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಇಂದು ಆರೋಪಿಯನ್ನ ರಿಮ್ಸ್ ಆಸ್ಪತ್ರೆಯಲ್ಲಿ ಪುನಃ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವಿಚಾರಣೆ ಮುಂದುವರಿಸಿದ್ದಾರೆ.

    ವಿದ್ಯಾರ್ಥಿನಿ ಸಾವು ಪ್ರಕರಣದ ಹಿನ್ನೆಲೆ ನ್ಯಾಯಕ್ಕಾಗಿ ರಾಯಚೂರಿನಲ್ಲಿ ಹೋರಾಟಗಳು ನಿರಂತರವಾಗಿ ನಡೆದಿವೆ. ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

    ಯಾವುದೇ ಲೋಪದೋಷಕ್ಕೆ ಅವಕಾಶವಿಲ್ಲ. ತಪ್ಪಿತಸ್ಥರನ್ನ ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅವಶ್ಯಕತೆಯಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಹುದು, ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂದು ಸಚಿವ ನಾಡಗೌಡ ಪ್ರತಿಕ್ರಿಯಿಸಿದರು.

  • ಒಬ್ಬರ ಹಿಂದೆ ಒಬ್ಬರಂತೆ ಐವರು ತರಬೇತಿ ಪಿಎಸ್‍ಐಗಳು ಕುಸಿದು ಬಿದ್ರು

    ಒಬ್ಬರ ಹಿಂದೆ ಒಬ್ಬರಂತೆ ಐವರು ತರಬೇತಿ ಪಿಎಸ್‍ಐಗಳು ಕುಸಿದು ಬಿದ್ರು

    ಕಲಬುರಗಿ: ನಿರ್ಗಮನ ಪಥ ಸಂಚಲನದಲ್ಲಿ ಐದು ಜನ ತರಬೇತಿ ಪಿಎಸ್‍ಐ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ನಡೆದಿದೆ.

    ನಾಗನಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮನ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಎಂಬಿ ಪಾಟೀಲ್ ಭಾಷಣದ ಮಧ್ಯೆಯೇ ಒಬ್ಬರ ಹಿಂದೆ ಒಬ್ಬರು ಐವರು ತರಬೇತಿ ಪಿಎಸ್‍ಐ ಕುಸಿದು ಬಿದ್ದಿದ್ದಾರೆ.

    ಸಚಿವರಿಗಾಗಿ ಸುಮಾರು ಬೆಳಗ್ಗೆ 7 ಗಂಟೆಯಿಂದ ಬಿಸಿಲಿನಲ್ಲಿ ತರಬೇತಿ ಪಿಎಸ್‍ಐಗಳು ಕಾದು ನಿಂತಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಬರಬೇಕಾದ ಗೃಹ ಸಚಿವರು ಒಂದೂವರೆ ಗಂಟೆ ತಡವಾಗಿ ಸುಮಾರು 9.30ಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೇ ನಿಂತಿದ್ದರಿಂದ ಸುಸ್ತಾಗಿ ಬಿದ್ದಿದ್ದಾರೆ. ಸುಮಾರು 267 ಪಿಎಸ್‍ಐಗಳು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ನೀರು, ಆಹಾರವಿಲ್ಲದೇ ಕಾಯುತ್ತಿದ್ದರು.

    ಇತ್ತ ತರಬೇತಿ ಪಿಎಸ್‍ಐಗಳು ಕುಸಿದು ಬೀಳುತ್ತಿದ್ದರೂ ಕೂಡ ಗೃಹ ಸಚಿವರು ಭಾಷಣವನ್ನು ಮುಂದುವರಿಸಿದ್ದರು. ಇದರಿಂದ ಅಲ್ಲಿದ್ದ ಜನರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಿಕ್ಷಣಾರ್ಥಿ ಅಸ್ವಸ್ಥಗೊಂಡರು ಭಾಷಣ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಮಾನವಿಯತೆ ಮರೆತರಾ ಎಂಬ ಪ್ರಶ್ನೆ ಮೂಡಿದೆ.

    https://www.youtube.com/watch?v=YjwbHzPIZuE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು- ಬಿ ರಿಪೋರ್ಟ್ ಸಲ್ಲಿಸಲು 3 ಲಕ್ಷ ರೂ. ಲಂಚ ಕೇಳಿದ ಪಿಎಸ್‍ಐ..!

    ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು- ಬಿ ರಿಪೋರ್ಟ್ ಸಲ್ಲಿಸಲು 3 ಲಕ್ಷ ರೂ. ಲಂಚ ಕೇಳಿದ ಪಿಎಸ್‍ಐ..!

    ಬಳ್ಳಾರಿ: ಅಧಿಕಾರಿಗಳು ಏನಾದರೂ ಕೆಲಸ ಮಾಡಿಕೊಟ್ಟರೆ ಅಷ್ಟೋ ಇಷ್ಟೋ ಲಂಚ ಪಡೆಯೋದು ಮಾಮೂಲು. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪ್ರಕರಣವೊಂದರಲ್ಲಿ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ. ನಿಮ್ಮ ಬಳಿ ಹಣ ಇಲ್ಲದಿದ್ದರೆ ಪೋಸ್ಟ್ ಡೇಟ್ ಹಾಕಿ ಚೆಕ್ ಕೊಡಿ ಎಂದು ಕೇಳುತ್ತಾನೆ. ಅಲ್ಲದೆ ಲಂಚದ ಹಣಕ್ಕಾಗಿ ವೈದ್ಯನ ಮನೆ ಮುಂದೆ ಕುಳಿತುಕೊಂಡು ಲಂಚ ವಸೂಲಿ ಮಾಡಿಕೊಂಡು ಬಾ ಎಂದು ಕೇಳುತ್ತಾನೆ.

    ಕೃಷ್ಣ ನಾಯ್ಕ್ ಲಂಚ ಪಡೆದ ಪಿಎಸ್‍ಐ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಪಿಎಸ್‍ಐ ಆಗಿರುವ ಕೃಷ್ಣಾ, ಮೂರು ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ.

    2016ರ ಮೇ 28ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಣಂತಿಗೆ ಓವರ್‍ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ಮಧುಕುಮಾರ್ ಹಾಗೂ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಪ್ರಕಾಶ್ ರೆಡ್ಡಿ ವಿರುದ್ಧ ದೂರು ದಾಖಲಾಗಿತ್ತು.

    ಬಾಣಂತಿ ಮೃತಪಟ್ಟ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದಾಖಲಾದ ಪ್ರಕರಣದ ತನಿಖೆಗೆ ಇಳಿದ ಪಿಎಸ್‍ಐ ಕೃಷ್ಣ ನಾಯ್ಕ್ ವೈದ್ಯರ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲು ಬರೋಬ್ಬರಿ ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಗುಡೇಕೋಟೆ ವೈದ್ಯಾಧಿಕಾರಿ ಮಧುಕುಮಾರ್ ಬಳಿಯೂ ಈಗಾಗಲೇ ಮೂರು ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಕರಣದ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾದ ನಂತರವೂ ಬಾಣಂತಿಗೆ ಆಪರೇಷನ್, ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯ ಪ್ರಕಾಶ್ ರೆಡ್ಡಿ ಅವರಿಗೂ ಮೂರು ಲಕ್ಷ ರೂಪಾಯಿ ಲಂಚ ನೀಡುವಂತೆ ಪಿಎಸ್‍ಐ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಏನಾಯ್ತು ಪೊಸ್ಟ್ ಡೇಟ್ ಚೆಕ್ ನೀಡಿ, ಇಲ್ಲದಿದ್ದರೆ ನಿಮ್ಮ ಮನೆ ಮುಂದೆ ಆಪ್ತನನ್ನು ಕಳುಹಿಸಿ ಲಂಚ ವಸೂಲಿ ಮಾಡಿಸುತ್ತೀನಿ ಎಂದು ಭ್ರಷ್ಟ್ ಪಿಎಸ್‍ಐ ಹೇಳಿದ್ದಾರೆ.

    ವೈದ್ಯಕೀಯ ಚಿಕಿತ್ಸೆ ವೇಳೆ ರೋಗಿಗಳು ಮೃತಪಡೋದನ್ನು ನಾವೂ ನೋಡಿರುತ್ತೇವೆ. ಆದರೆ ಆಪರೇಷನ್ ಮಾಡದಿದ್ದರೂ ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾದ ವೈದ್ಯರ ಬಳಿ ಮೂರು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು ಪಿಎಸ್‍ಐ ಇದೀಗ ಸಿಕ್ಕಿಕೊಂಡಿದ್ದಾರೆ. ವೈದ್ಯರಿಗೆ ಪಿಎಸ್‍ಐ ಹಾಗೂ ಪಿಎಸ್‍ಐ ಆಪ್ತ ವ್ಯಕ್ತಿಯೊಬ್ಬರು ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ ಆಡಿಯೋಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಕುಟುಂಬಕ್ಕೆ ಒಂದು ತಿಂಗಳ ವೇತನ ನೀಡಿದ ಪಿಎಸ್‍ಐ

    ಹುತಾತ್ಮ ಯೋಧನ ಕುಟುಂಬಕ್ಕೆ ಒಂದು ತಿಂಗಳ ವೇತನ ನೀಡಿದ ಪಿಎಸ್‍ಐ

    ರಾಯಚೂರು: ಜಿಲ್ಲೆಯ ದೇವದುರ್ಗಾ ಪೊಲೀಸ್ ಠಾಣೆಯ ಪಿಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿರುವ ಎಲ್‍ಬಿ ಅಗ್ನಿ ಅವರು ತಮ್ಮ ಒಂದು ತಿಂಗಳ ವೇತನವನ್ನು ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ನೀಡಿದ್ದಾರೆ.

    ಪುಲ್ವಾಮಾ ದಾಳಿಯಲ್ಲಿ 40 ಯೋಧರು ಸಾವನ್ನಪ್ಪಿದ್ದು, ಯೋಧರ ಸಾವಿನ ಸುದ್ದಿ ಕೇಳಿ ಅಘಾತವಾಯಿತು. ನಮ್ಮ ರಾಜ್ಯ ಒಬ್ಬ ಯೋಧರು ಸಾವನ್ನಪ್ಪಿದ ತಿಳಿದ ಬಳಿಕ ಅವರ ಕುಟುಂಬಕ್ಕೆ ಸಹಾಯ ಮಾಡಲು ಯೋಚಿಸಿದೆ. ಅದರಂತೆ ನನ್ನ ಒಂದು ತಿಂಗಳ ವೇತನ 45 ಸಾವಿರ ರೂ. ಗಳನ್ನು ಅವರ ಕುಟುಂಬಕ್ಕೆ ನೀಡುತ್ತೇನೆ. ಈ ಮೂಲಕ ಯೋಧರಿಗೆ ನೈತಿಕ ಬೆಂಬಲ ನೀಡುವುದು ನನ್ನ ಉದ್ದೇಶವಷ್ಟೇ ಎಂದು ತಿಳಿಸಿದ್ದಾರೆ. ಇದರಂತೆ ಗುರು ಅವರ ತಂದೆ ಹೊನ್ನಯ್ಯ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.  ಇದನ್ನು ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಇತ್ತ ಯೋಧನ ಕುಟುಂಬಕ್ಕೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ 3 ಲಕ್ಷ ರೂ. ಹಾಗೂ ಡಿಸಿಸಿ ಬ್ಯಾಂಕ್ 2 ಲಕ್ಷ ರೂ. ಹಣವನ್ನು ಸಹಾಯ ಮಾಡಿದೆ. ಇದೇ ವೇಳೆ ಗುಡಿಗೆರೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಕ್ಷ ವತಿಯಿಂದ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ, ಸಂತ್ವಾನ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

    ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

    ಬೆಂಗಳೂರು: ನಮ್ಮನ್ನು ಹೋಗು ಅನ್ನೋದಿಕೆ ನೀನ್ಯಾರು ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕಿದ ಪುಂಡನಿಗೆ ಪಿಎಸ್‍ಐ ನಡುರಸ್ತೆಯಲ್ಲೇ ಡಿಚ್ಚಿ ಹೊಡೆದು ಬೆದರಿಸಿದ ಘಟನೆ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ನಡೆದಿದೆ.

    ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಗ್ಲುಷನ್ ಶಾಧೀ ಮಾಲ್ ಕಮಿಟಿಗೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಗಲಾಟೆ ನಡೆದಿದೆ. ಎಲೆಕ್ಷನ್ ಮುಗಿದ ಬಳಿಕ ಸಾರ್ವಜನಿಕರಿಗೆ ಇಲ್ಲಿಂದ ಹೋಗುವಂತೆ ಇನ್ಸ್‌ಪೆಕ್ಟರ್‌ ನಾಗರಾಜು ಸೂಚನೆ ನೀಡಿದ್ದಾರೆ.

    ಆಗ ಅಲ್ಲಿದ್ದ ಕೆಲ ಪುಂಡರು, ನಮ್ಮನ್ನು ಹೋಗೂ ಅನ್ನೋಕೆ ನೀನ್ಯಾರು ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಜೊತೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೇ ಜಗಳವು ತಾರಕಕ್ಕೇರಿ ಪೊಲೀಸರು ಮತ್ತು ಸಾರ್ವಜನಿಕರು ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿತ್ತು.

    ಈ ವೇಳೆ ಎಂಟ್ರಿಯಾದ ಪಿಎಸ್‍ಐ ಕಿರಣ್, ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕುತ್ತಿದ್ದ ಆ ಪುಂಡನಿಗೆ ಡಿಚ್ಚಿ ಹೊಡೆದು ಬೆದರಿಸಿದ್ದಾರೆ. ತಕ್ಷಣ ಪೊಲೀಸರು ಮತ್ತು ಮುಸ್ಲಿಂ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿಎಸ್‍ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಪಾನಮತ್ತ ಚಾಲಕ!

    ಪಿಎಸ್‍ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಪಾನಮತ್ತ ಚಾಲಕ!

    ತುಮಕೂರು: ಕುಡಿದ ಅಮಲಿನಲ್ಲಿದ್ದ ಕಾರಿನ ಚಾಲಕನೊಬ್ಬನು ಕರ್ತವ್ಯ ನಿರತರಾಗಿದ್ದ ಪಿಎಸ್‍ಐ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ಪರಿಣಾಮ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಉಪ್ಪಾರಳ್ಳಿ ಬಳಿ ನಡೆದಿದೆ.

    ತುಮಕೂರು ನಗರದ ಜಯನಗರ ಠಾಣಾ ಪಿಎಸ್‍ಐ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ ವೇಳೆ ಉಪ್ಪಾರಳ್ಳಿ ಅಂಡರ್ ಪಾಸ್ ಬಳಿ ಎರ್ಟಿಗಾ ಕಾರು ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ. ಇದನ್ನು ಗಮನಿಸಿದ ಪಿಎಸ್‍ಐ ನವೀನ್ ವಾಹನ ತಡೆದು ನಿಲ್ಲಿಸಿ, ಫೈನ್ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಸ್ಥಳದಿಂದ ಕಾರಿನೊಂದಿಗೆ ತಪ್ಪಿಸಿಕೊಳ್ಳಲು ಚಾಲಕ ಮುಂದಾಗಿಕ್ಕೆ ಸ್ಟೇರಿಂಗ್ ಹಿಡಿದು ಮುಂದೆ ಹೋಗದಂತೆ ಪಿಎಸ್‍ಐ ತಡೆದಿದ್ದಾರೆ.

    ಮೊದಲೇ ಕುಡಿದ ನಶೆಯಲ್ಲಿದ್ದ ಚಾಲಕ ಪಿಎಸ್‍ಐ ತನ್ನನ್ನು ತಡೆದಿದ್ದಕ್ಕೆ ಕೋಪಗೊಂಡಿದ್ದಾನೆ. ಅಲ್ಲದೇ ಸಿಟ್ಟಿಗೆದ್ದು ಪಿಎಸ್‍ಐ ಮೇಲೆಯೇ ವಾಹನ ಹತ್ತಿಸಲು ಪ್ರಯತ್ನ ಪಟ್ಟಿದ್ದಾನೆ. ಈ ಘಟನೆಯಲ್ಲಿ ಪಿಎಸ್‍ಐ ಮುಖ, ಕೈ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ದೂರು ನೀಡಿದ್ದು, ಆರೋಪಿ ಮೇಲೆ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿಡ್ನಾಪ್ ಕೇಸಲ್ಲಿ ಪಿಎಸ್‍ಐ- ಪಿಎಸ್‍ಐ ಹಾಗೂ ಮುಖ್ಯಪೇದೆ ಅಮಾನತು

    ಕಿಡ್ನಾಪ್ ಕೇಸಲ್ಲಿ ಪಿಎಸ್‍ಐ- ಪಿಎಸ್‍ಐ ಹಾಗೂ ಮುಖ್ಯಪೇದೆ ಅಮಾನತು

    ಚಿಕ್ಕಬಳ್ಳಾಪುರ: ಸುಳ್ಳು ಪ್ರಕರಣ ಸೃಷ್ಟಿಸಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿಸಿದ ಪಿಎಸ್‍ಐ ಹಾಗೂ ಮುಖ್ಯಪೇದೆಯೊಬ್ಬರನ್ನು ಪೊಲೀಸ್ ಇಲಾಖೆ ಅಮಾನತುಗೊಳಿಸಲಾಗಿದೆ.

    ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಮುಖ್ಯಪೇದೆ ಇನಾಯತ್ ಉಲ್ಲಾ ಕಿಡ್ನಾಪ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪೊಲೀಸ್ ಸಿಬ್ಬಂದಿ. ಚಿಕ್ಕಬಳ್ಳಾಪುರದ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಮುಖ್ಯಪೇದೆ ಇನಾಯತ್ ಉಲ್ಲಾ ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

    ಯಾಕೆ ಅಮಾನತು..?

    ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ವಿಜಯ್ ರೆಡ್ಡಿ 2017ರ ನವೆಂಬರ್ 9ರಂದು ಮಳಮಾಚನಹಳ್ಳಿ ಬಳಿ ಬೆಂಗಳೂರು ಮೂಲದ ಮದನ್ ಗೋಪಾಲ್ ಎಂಬಾತನನ್ನ ಬಂಧಿಸಿದ್ದರು. ಈತನ ವಿರುದ್ಧ ಅಕ್ರಮ ಶ್ರೀಗಂಧ ಕಳ್ಳಸಾಗಾಣಿಕೆ ಪ್ರಕರಣ ದಾಖಲಿಸಿ ಫಾರೆಸ್ಟ್ ಆ್ಯಕ್ಟ್‌ನಡಿ ಕೇಸ್ ಮಾಡಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ನವೆಂಬರ್ 9 ರಂದು ಮದನ್ ಗೋಪಾಲ್ ಬಂಧನವಾಗಿದ್ದರು. ಅಲ್ಲದೆ ನವೆಂಬರ್ 10ರಂದು ಎಫ್‍ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಎಸ್‍ಐ ರತ್ನಯ್ಯ ದೂರದಾರರನ್ನಾಗಿ ಮಾಡಲಾಗಿತ್ತು. ಆದ್ರೆ ಈ ಘಟನೆ ನಡೆದ ದಿನದಂದು ನಾನು ರಜೆಯಲ್ಲಿದ್ದೆ. ಪಿಎಸ್‍ಐ ವಿಜಯ್ ರೆಡ್ಡಿ ಒತ್ತಡ ಹಾಕಿ ಶ್ರೀಗಂಧ ಸಾಗಾಣಿಕೆ ಮಾಡುತ್ತಿದ್ದ ಮದನ್ ಗೋಪಾಲ್‍ನನ್ನ ಬಂಧಿಸಿ ಠಾಣೆಗೆ ಕರೆತಂದಿರುವುದಾಗಿ ಬಲವಂತವಾಗಿ ದೂರು ದಾಖಲಿಸಿಕೊಂಡಿದ್ದರು ಎಂದು ಎಎಸ್‍ಐ ತಿಳಿಸಿದ್ದಾರೆ.

     

    ಅಷ್ಟೇ ಅಲ್ಲದೆ, ನಾನು ಹಾಗೂ ಪಿಎಸ್‍ಐ ವಿಜಯ್ ರೆಡ್ಡಿ ಸೇರಿ ಪರಿಚಯಸ್ಥರಿಗೆ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಿವಾದದಲ್ಲಿದ್ದ ಜಮೀನಿನ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಜಮೀನಿಗಾಗಿ ವಿಜಯ್ ರೆಡ್ಡಿ ಷಡ್ಯಂತ್ರ ರೂಪಿಸಿ ನನ್ನನ್ನು ಕಿಡ್ನಾಪ್ ಮಾಡಿಸಿದ್ದರು ಹಾಗೂ ನನ್ನ ಮೇಲೆ ಸುಳ್ಳು ಪ್ರಕರಣ ಹಾಕಲಾಗಿತ್ತು ಎಂದು ಮದನ್ ಗೋಪಾಲ್ ಪೊಲೀಸರ ಬಳಿ ತಿಳಿಸಿದ್ದಾನೆ.

    ಕರ್ತವ್ಯ ದುರ್ಬಳಕೆ ಗೊತ್ತಾಗಿದ್ದು ಹೇಗೆ?

    ಸುಳ್ಳು ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮದನ್ ಗೋಪಾಲ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬೆಂಗಳೂರು ಕಮೀಷನರ್ ಬಳಿ ತೆರಳಿದ್ದರು. ಆಗ ತನ್ನನ್ನ 2017ರ ನವೆಂಬರ್ 9ರಂದು ಅಪರಿಚಿತರು ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮಾಡಿದ್ದರು. ಹಾಗೆಯೇ ವಿಜಯ್ ರೆಡ್ಡಿ ತನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಅಂತ ದೂರು ನೀಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಕಮೀಷನರ್, ನಗರದ ಎಸಿಪಿ ವಾಸು ಅವರಿಗೆ ಪ್ರಕರಣದ ತನಿಖೆ ನಡೆಸಲು ಸೂಚನೆ ನೀಡಿದ್ದರು.

    ಈ ಬಗ್ಗೆ ತನಿಖೆ ಕೈಗೊಂಡ ಎಸಿಪಿ ವಾಸು ಅವರಿಗೆ, ಉದ್ದೇಶಪೂರ್ವಕವಾಗಿ ಮದನ್ ಗೋಪಾಲ್ ವಿರುದ್ಧ ಪಿತೂರಿ ನಡೆಸಿರುವ ವಿಷಯ ತಿಳಿದುಬಂದಿದೆ. ಹೀಗಾಗಿ ಪ್ರಕರಣದಲ್ಲಿ ಶಿಡ್ಲಘಟ್ಟ ಪಿಎಸ್‍ಐ ವಿಜಯ್ ರೆಡ್ಡಿ ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಪಿಎಸ್‍ಐ ವಿಜಯ್ ರೆಡ್ಡಿ ವಶಕ್ಕೆ ಪಡೆಯಲು ಎಸಿಪಿ ವಾಸು ನೇತೃತ್ವದ ಪೊಲೀಸರ ತಂಡ ಹುಡುಕಾಟ ಆರಂಭಿಸಿದರು. ಆದ್ರೆ ಪಿಎಸ್‍ಐ ವಿಜಯ್ ರೆಡ್ಡಿ ಕಳೆದ 5 ದಿನಗಳಿಂದ ಕರ್ತವ್ಯಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ಇದೆಲ್ಲ ಪ್ರಕರಣ ಬೆಳಕಿಗೆ ಬಂದ ನಂತರ ಪಿಎಸ್‍ಐ ವಿಜಯ್ ರೆಡ್ಡಿ ಹಾಗೂ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿರುವ ಆರೋಪದಡಿ ಮುಖ್ಯಪೇದೆ ಇನಾಯತ್‍ನನ್ನ ಅಮಾನತು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv