Tag: PSI

  • ಪಿಎಸ್‌ಐ ಫಲಿತಾಂಶ ಪ್ರಕಟಿಸುವಂತೆ ವಿಜಯೇಂದ್ರ ಆಗ್ರಹ

    ಪಿಎಸ್‌ಐ ಫಲಿತಾಂಶ ಪ್ರಕಟಿಸುವಂತೆ ವಿಜಯೇಂದ್ರ ಆಗ್ರಹ

    ಬೆಂಗಳೂರು: ಪಿಎಸ್‌ಐ ಪರೀಕ್ಷೆಯ ಫಲಿತಾಂಶ (PSI Exam Result) ಪ್ರಕಟಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ನೀರು – ಅ.16ರಂದು ಕಾವೇರಿ ಐದನೇ ಹಂತಕ್ಕೆ ಲೋಕಾರ್ಪಣೆ

    ಟ್ವೀಟ್‌ನಲ್ಲಿ ಏನಿದೆ?
    ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಚ್ಛ ನ್ಯಾಯಾಲಯದ ಆದೇಶದಂತೆ 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ನಡೆಸಿ 2024ರ ಮಾರ್ಚ್ 28 ರಂದು ಅಂತಿಮ ಪಟ್ಟಿ ಪ್ರಕಟಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಿ ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೇ ಇರುವುದು ಸರ್ಕಾರದ ಬೇಜವಾಬ್ದಾರಿತನವೋ ಅಥವಾ ಯೋಜಿತ ಧೋರಣೆಯೋ ಎಂಬ ಅನುಮಾನ ಪರೀಕ್ಷಾರ್ಥಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ: ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ; ನ್ಯಾಯಾಲಯದ ತೀರ್ಪನ್ನು ಗೌರವಿಸ್ತೇವೆ: ರೇಣುಕಾಸ್ವಾಮಿ ತಂದೆ

    ಈಗಾಗಲೇ ಅನೇಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ಕಳೆದ 4 ವರ್ಷಗಳಿಂದಲೂ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅಂತಿಮ ಆಯ್ಕೆ ಪಟ್ಟಿ ಎದುರು ನೋಡುತ್ತಿರುವುದು ಈ ಸರ್ಕಾರದ ಅರಿವಿಗೆ ಬಾರದಿರುವುದು ದುರ್ದೈವವೇ ಸರಿ. ಇದನ್ನೂ ಓದಿ: ರಾಜ್ಯಪಾಲ ಗೆಹ್ಲೋಟ್‌ಗೆ ಈಗ Z ಶ್ರೇಣಿಯ ಭದ್ರತೆ

    ಪದೇ ಪದೇ ಪರೀಕ್ಷೆ ಎದುರಿಸುವ ಉದ್ಯೋಗಾಕಾಂಕ್ಷಿಗಳನ್ನು ಗೊಂದಲಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ 545 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವ ಕಾಳಜಿ ತೋರಲಿ ಎಂದಿದ್ದಾರೆ. ಇದನ್ನೂ ಓದಿ: ರಾಯಚೂರು| ಕಾರು, ಲಾರಿ ಮಧ್ಯೆ ಭೀಕರ ಅಪಘಾತ – ಮೂವರ ದುರ್ಮರಣ

  • ಫಲಿತಾಂಶ ಪ್ರಕಟಿಸುವಂತೆ ಆಗ್ರಹ; ಪಿಎಸ್‌ಐ ಹುದ್ದೆ ಆಕಾಂಕ್ಷಿಗಳಿಂದ ಇಂದು ಪ್ರತಿಭಟನೆ

    ಫಲಿತಾಂಶ ಪ್ರಕಟಿಸುವಂತೆ ಆಗ್ರಹ; ಪಿಎಸ್‌ಐ ಹುದ್ದೆ ಆಕಾಂಕ್ಷಿಗಳಿಂದ ಇಂದು ಪ್ರತಿಭಟನೆ

    ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಫಲಿತಾಂಶ (PSI Exam Result) ಪ್ರಕಟ ಮಾಡುವಂತೆ ಆಗ್ರಹ ಪೊಲೀಸ್ ಹುದ್ದೆ ಆಕಾಂಕ್ಷಿಗಳು ಇಂದು ಪ್ರತಿಭಟನೆ (Protest) ನಡೆಸಲಿದ್ದಾರೆ.

    ಬೆಳಗ್ಗೆ 10 ಗಂಟೆಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಫಲಿತಾಂಶ ಪ್ರಕಟಿಸಲು ಆದೇಶ ನೀಡುವಂತೆ ಸರ್ಕಾರ ಹಾಗೂ ಗೃಹ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಇದನ್ನೂ ಓದಿ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ

    4 ವರ್ಷ ಕಳೆದರೂ ತಪ್ಪದ ಗೋಳು:
    2020ರಲ್ಲಿ 545 ಪಿಎಸ್‌ಐ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2021ರ ಅಕ್ಟೋಬರ್ 3ರಂದು ಪರೀಕ್ಷೆ ನಡೆಸಲಾಗಿತ್ತು. 2022ರ ಜನವರಿ 19ರಂದು ಫಲಿತಾಂಶ ಕೂಡ ಪ್ರಕಟವಾಗಿತ್ತು. ಆದ್ರೆ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿತ್ತು. ಇದನ್ನು ವಿರೋಧಿಸಿ ಆಯ್ಕೆಯಾದ ವಿದ್ಯಾರ್ಥಿಗಳು ನ್ಯಾಯಾಲಯದ ಕದ ತಟ್ಟಿದ್ದರು. ಇದನ್ನೂ ಓದಿ: ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ  

    ವಿಚಾರಣೆ ನಡೆಸಿದ್ದ ಕೋರ್ಟ್ 2023ರ ನವೆಂಬರ್ 19ರಂದು ಮರು ಪರೀಕ್ಷೆ ಸೂಕ್ತ ಎಂದು ಹೇಳಿತು. ಮರುಪರೀಕ್ಷೆಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಗಲಿಗೆ ಮರು ಪರೀಕ್ಷೆ ಜವಾಬ್ದಾರಿ ನೀಡಿತ್ತು. ಈ ಹಿನ್ನೆಲೆಯಲ್ಲಿ 2024ರ ಜನವರಿ 23ರಂದು ಪರೀಕ್ಷಾ ಪ್ರಾಧಿಕಾರ ಮರು ಪರೀಕ್ಷೆ ನಡೆಸಿತ್ತು. 2024ರ ಮಾರ್ಚ್ 1ರಂದು ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮುಂದಿನ ಪ್ರಕ್ರಿಯೆಗಾಗಿ ಕೆಎಸ್‌ಪಿ (ಕರ್ನಾಟಕ ರಾಜ್ಯ ಪೊಲೀಸ್)ಗೆ ವರ್ಗಾವಣೆ ಮಾಡಿತ್ತು. ಅದರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸರ್ಕಾರಕ್ಕೆ ತಮ್ಮ ರಕ್ತದಲ್ಲಿಯೂ ಸಹ ಪತ್ರ ಬರೆದು ಮನವಿ ಮಾಡಿದ್ದರು.

    ಇದೀಗ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಪ್ರತಿಭೆನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ | ಆರೋಪಿ ಧರ್ಮರಾಜ್ ಕಶ್ಯಪ್‌ ಅಪ್ರಾಪ್ತನಲ್ಲ – ಮೂಳೆ ಪರೀಕ್ಷೆಯಲ್ಲಿ ಸಾಬೀತು

  • ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

    ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

    ಬೆಂಗಳೂರು: ಯುಪಿಎಸ್‌ಸಿ (UPSC) ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ 402 ಪಿಎಸ್‌ಐ (PSI) ಹುದ್ದೆಗಳ ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಿದೆ. ಅ.3 ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ದಿನಾಂಕ ನಿಗದಿ ಮಾಡಿದೆ. ಬೆಳಗ್ಗೆ 10:30 ರಿಂದ 12:00 ರ ವೆರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12:30 ರಿಂದ 02:00 ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ (KEA) ತಿಳಿಸಿದೆ.ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ – ಇನ್ನೂ 14 ದಿನ ಜೈಲೇ ಗತಿ

    ಪಿಎಸ್‌ಐ ಪರೀಕ್ಷೆ ಜೊತೆಗೆ ವಿವಿಧ ಇಲಾಖೆಗಳ ಪರೀಕ್ಷೆಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟ ಮಾಡಿದೆ. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಜಿಟಿಟಿಸಿಯ (GTTC) ವಿವಿಧ ಹುದ್ದೆಗಳಿಗೆ ಸೆ.29 ಮತ್ತು ಅ.26 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅ.7ರಂದು ಪರೀಕ್ಷೆ ನಡೆಯಲಿದೆ.

    ಕೆ-ಸೆಟ್ (K-Set) ಪರೀಕ್ಷೆ ಸೇರಿದಂತೆ ರಾಯಚೂರು ವಿವಿ (Raichuru) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನ.24 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಮಾಹಿತಿ ನೀಡಿದೆ.ಇದನ್ನೂ ಓದಿ: ಟೊಮೆಟೋ ಬೆಳೆ ಲಾಸ್: ಸಾಲ ತೀರಿಸಲು ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ ಟೆಕ್ಕಿ ಅರೆಸ್ಟ್

  • ಪಿಎಸ್‌ಐ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ: ಕೆಇಎ

    ಪಿಎಸ್‌ಐ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ: ಕೆಇಎ

    ಬೆಂಗಳೂರು: ಸೆಪ್ಟೆಂಬರ್ 22 ರಂದು ನಿಗದಿಯಾಗಿರುವ ಪಿಎಸ್‌ಐ ಪರೀಕ್ಷೆ (PSI Exam) ದಿನಾಂಕ ಮುಂದೂಡಿಕೆ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ.

    ರಾಜಧಾನಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ತಯಾರಿ ನಡೆದಿದ್ದು, ಹೆಚ್ಚಿನ ನಿಗಾ ಇಡಲು ಪೊಲೀಸ್ ಇಲಾಖೆಯ ನೆರವು ಕೂಡ ಕೋರಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: ಹಾವೇರಿ ನಗರಸಭೆ `ಬಿಜೆಪಿ’ ತೆಕ್ಕೆಗೆ – ಬಹುಮತವಿದ್ದರೂ ಕಾಂಗ್ರೆಸ್‌ಗೆ ಭಾರೀ ಮುಖಭಂಗ

    ಈ ಸಂಬಂಧ ಗೃಹ ಸಚಿವರು ಹಾಗೂ ಡಿಜಿಪಿಗೂ ಪತ್ರ ಬರೆಯಲಾಗಿದೆ. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಅವರು ವಿವರಿಸಿದ್ದಾರೆ. ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ ಲಿಖಿತ ಪರೀಕ್ಷೆ ಬರೆಯಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ ಎಂದು ಪ್ರಸನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 231 ಸಾಕ್ಷಿ ಕೇಳಿ ಜೈಲಿನಲ್ಲಿ ದರ್ಶನ್‌ ಶಾಕ್‌!

    ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೀಕ್ಷೆ ಮುಂದೂಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದು, ಅದಕ್ಕೆ ಯಾರೂ ಕಿವಿಗೊಡಬಾರದು ಮನವಿ ಮಾಡಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಈ ಪರೀಕ್ಷೆ ಮುಂದೂಡಲಾಗಿದೆ. ಪುನಃ ಹಾಗೆಯೇ ಮಾಡಿದರೆ ಪರೀಕ್ಷೆ ನಡೆಸುವುದು ಯಾವಾಗ? ಇಷ್ಟಕ್ಕು ಯಾವುದಾದರು ಒಂದು ಪರೀಕ್ಷೆ ಇದ್ದೇ ಇರುತ್ತದೆ. ಹಾಗಂತ ಪರೀಕ್ಷೆ ಇಲ್ಲದ ದಿನ ಹುಡುಕುವುದು ಕೂಡ ಕಷ್ಟ. ನಾವು ಈ ದಿನಾಂಕವನ್ನು ಮೂರು ತಿಂಗಳ ಮೊದಲೇ ತೀರ್ಮಾನಿಸಿದ್ದು, ಆ ಪ್ರಕಾರ ಪರೀಕ್ಷೆ ನಡೆಸುತ್ತಿದ್ದೇವೆ ಎಂದು  ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹತ್ಯೆಯಾಗುವ ಮುನ್ನ ಎರಡು ಲಾರಿ ಮಧ್ಯೆ ಕುಳಿತು ಅಂಗಲಾಚಿದ್ದ ರೇಣುಕಾಸ್ವಾಮಿ

    ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ವಿಷಯದಲ್ಲಿ ಯಾವ ಅನುಮಾನವನ್ನೂ ಇಟ್ಟು ಕೊಳ್ಳುವುದು ಬೇಡ. ಗಾಳಿ ಸುದ್ದಿಗಳಿಗೆ ಮಹತ್ವ ಕೂಡ ಕೊಡಬೇಡಿ. ಯಾರು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುತ್ತಾರೋ ಅಂತಹವರಿಗೆ ಅನ್ಯಾಯವಾಗದ ಹಾಗೆ ನಾವು ಪರೀಕ್ಷೆ ನಡೆಸುತ್ತೇವೆ. ಇದು ನಮ್ಮ ಬದ್ಧತೆ. ಅಕ್ರಮಗಳಿಗೆ ಅವಕಾಶವೇ ಇಲ್ಲದಂತೆ ನಿಗಾ ಇಡಲಾಗುವುದು ಎಂದರು. ಇದನ್ನೂ ಓದಿ: ಪ್ರವಾಹ ತಡೆಯಲು ವಿಫಲ – ಉತ್ತರ ಕೊರಿಯಾದಲ್ಲಿ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ

    ವಿಮಾನ ನಿಲ್ದಾಣಗಳಲ್ಲಿ ಯಾವ ರೀತಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಾರೋ ಅದೇ ರೀತಿಯ ತಪಾಸಣೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ನಡೆಯುತ್ತದೆ. ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳ ಹೆಬ್ಬೆಟ್ಟು ಗುರುತು ಹಾಗೂ ಭಾವಚಿತ್ರವನ್ನು ಸಂಗ್ರಹಿಸಿಕೊಂಡಿದ್ದು, ಅದೇ ಡಾಟಾ ಇಟ್ಟುಕೊಂಡು ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ನಕಲಿ ಅಭ್ಯರ್ಥಿಗಳು ನುಸುಳುವುದಕ್ಕೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತಗಳನ್ನು ಮಾರಾಟಕ್ಕಿಟ್ಟಿಲ್ಲ: ನಿಖಿಲ್

  • ತವರು ಮನೆಗೆ ಹಣ ಕಳಿಸಿ ರಾಬರಿ ನಾಟಕವಾಡಿದ್ದ ಪಿಎಸ್‌ಐ ಪತ್ನಿಯ ಮೇಲೆ ಕೇಸ್

    ತವರು ಮನೆಗೆ ಹಣ ಕಳಿಸಿ ರಾಬರಿ ನಾಟಕವಾಡಿದ್ದ ಪಿಎಸ್‌ಐ ಪತ್ನಿಯ ಮೇಲೆ ಕೇಸ್

    ಬೆಂಗಳೂರು: ತವರು ಮನೆಗೆ ಹಣ ಕಳುಹಿಸಿ, ದರೋಡೆಯಾಗಿದೆ ಎಂದು ನಾಟಕವಾಡಿದ್ದ ಪಿಎಸ್‌ಐ ಪತ್ನಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

    ಅಶೋಕನಗರ ಠಾಣಾ ಪಿಎಸ್‌ಐ ಆಗಿರುವ ಪುಟ್ಟಸ್ವಾಮಿ ಅವರ ಮನೆಯಲ್ಲಿ 12 ಲಕ್ಷ ಹಣ ಹಾಗೂ ಚಿನ್ನಾಭರಣ ರಾಬರಿ ಆಗಿದೆ ಎಂದು ಜು.11 ರಂದು ದೂರು ಬಂದಿತ್ತು. ಪುಟ್ಟಸ್ವಾಮಿ ಪತ್ನಿ ಹಾಗೂ ಪತ್ನಿ ಸಹೋದರ ನೀಡಿದ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ವಂಚನೆ – ದುಬೈ ಮೂಲದ ಐವರು ಅರೆಸ್ಟ್

    ಇದೀಗ, ಪೊಲೀಸರು ಅಡಿಷನಲ್‌ ಕಮಿಷನರ್ ನೇತೃತ್ವದಲ್ಲಿ ಹಲವು ದಿನಗಳ ಕಾಲ ತನಿಖೆ ನಡೆಸಿ ಇದೊಂದು ಸುಳ್ಳು ‌ರಾಬರಿ ಪ್ರಕರಣ ಎಂದು ವರದಿ ನೀಡಿದ್ದಾರೆ. ಪಿಎಸ್‌ಐ ಪತ್ನಿ ಹಣ ಮತ್ತು ಚಿನ್ನಾಭರಣವನ್ನ ತವರು ಮನೆಗೆ ನೀಡಿ, ಗಂಡನಿಂದ ವಿಷಯ ಮರೆಮಾಚಲು ಈ ರೀತಿ ರಾಬರಿ ಕತೆ ಕಟ್ಟಿದ್ದರು ಎಂದು ತಿಳಿದು ಬಂದಿದೆ.

    ಸುಳ್ಳು ದೂರು ನೀಡಿದ ಪಿಎಸ್‌ಐ ಪತ್ನಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ‌ಅಷ್ಟೇ ಅಲ್ಲದೆ, ಪಿಎಸ್‌ಐ ಮೇಲೂ ಶಿಸ್ತು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗೆ ಸುಳ್ಳು ಕಥೆ ಕಟ್ಟಿ ಹಣ ದರೋಡೆ ನಾಟವಾಡಿದ ಪೊಲೀಸಪ್ಪನ ಕುಟುಂಬದ ಮೇಲೆ ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ. ಇದನ್ನೂ ಓದಿ: ನಾಗಮಂಗಲದ ತೋಟದ ಮನೆಯಲ್ಲಿ ಭ್ರೂಣ ಹತ್ಯೆ ದಂಧೆ – ಮೂವರು ಅರೆಸ್ಟ್

  • PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    – ಕೇಸ್‌ ದಾಖಲಾಗ್ತಿದ್ದಂತೆ ಶಾಸಕ ಚನ್ನಾರೆಡ್ಡಿ, ಪುತ್ರ ನಾಪತ್ತೆ

    ಯಾದಗಿರಿ: ಇಲ್ಲಿನ ನಗರ ಠಾಣೆ ಪಿಎಸ್‌ಐ ಪರಶುರಾಮ್‌ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ಹೊಣೆ ಹೊತ್ತಿರುವ ಸಿಐಡಿ ತನಿಖಾ ತಂಡ (CID Investigation Team) ಯಾದಗಿರಿಗೆ ಭಾನುವಾರ ಭೇಟಿ ನೀಡಿದೆ.

    ಪರಶುರಾಮ್‌ ಸಾವು ಪ್ರರಕರಣ ಸಂಬಂಧ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channa Reddy Patel) ಮತ್ತು ಅವರ ಪುತ್ರ ಪಂಪಣ್ಣಗೌಡ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಶನಿವಾರ (ಆ.3) ಆದೇಶ ಹೊರಡಿಸಿತ್ತು. ಸರ್ಕಾರ ಆದೇಶಿಸಿದ ಮರುದಿನವೇ ಡಿವೈಎಸ್‌ಪಿ (DYSP) ಪುನೀತ ನೇತೃತ್ವದ ಸಿಐಡಿ ತನಿಖಾ ತಂಡ ಯಾದಗಿರಿಗೆ (Yadagiri) ಭೇಟಿ ಕೊಟ್ಟಿದೆ.

    ಯಾದಗಿರಿ ನಗರ ಪೊಲೀಸ್‌ ಠಾಣೆಗೆ (Yadagiri City Police Station) ಭೇಟಿ ನೀಡಿದ್ದ ಸಿಐಡಿ ತಂಡ ಈಗಾಗಲೇ ಡಿವೈಎಸ್ಪಿ ಕಚೇರಿಯಲ್ಲಿ ಕೇಸ್‌ಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದೆ. ಇಂದೇ ಪೊಲೀಸರಿಂದ ಕೇಸ್ ಫೈಲ್ ಪಡೆದು, ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

    ಶಾಸಕ ಚನ್ನಾರೆಡ್ಡಿ, ಪಂಪಣ್ಣಗೌಡಗೆ ಬಂಧನ ನಾಪತ್ತೆ:
    ಇನ್ನೂ ಪರಶುರಾಮ್‌ ನಿಗೂಢ ಸಾವು ಪ್ರಕರಣದಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೇಸ್‌ ದಾಖಲಾಗುತ್ತಿದ್ದಂತೆ ಬಂಧನದ ಭೀತಿಗೆ ಒಳಗಾಗಿರುವ ಶಾಸಕ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಚೆನ್ನಾರೆಡ್ಡಿ ಹಾಗು ಪುತ್ರ ಪಂಪನಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕದಲ್ಲಿಯೂ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪರಶುರಾಮ್ ತಂದೆ ಹೇಳಿದ್ದೇನು?
    ಮಗನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಶುರಾಮ್ ತಂದೆ ಜನಕಮುನಿ, ಶುಕ್ರವಾರ ಮಧ್ಯಾಹ್ನ ಇಬ್ಬರೂ ಸೇರಿ ಮನೆಯಲ್ಲಿ ಅಡುಗೆ ಮಾಡಿದ್ದೆವು. ಚಿತ್ರಾನ್ನ ಮಾಡಿ ಊಟ ಮಾಡಿಕೊಂಡಿದ್ದೆವು. ಆನಂತರ ಅವನು ಹೋಗಿ ಅವನ ಕೋಣೆಯಲ್ಲಿ ಮಲಗಿದ್ದ. ರಾತ್ರಿ 8 ಗಂಟೆ ಹೊತ್ತಿಗೆ ಎಬ್ಬಿಸಲು ಹೋದಾಗ ಅವನು ಎದ್ದೇಳಲಿಲ್ಲ. ಬೆಡ್ ಬಳಿ ಸ್ವಲ್ಪ ರಕ್ತ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ರು ಅವನು ಬದುಕಲಿಲ್ಲ. ನಮ್ಮದು ತೀರಾ ಬಡತನದ ಕುಟುಂಬ. ಬಡತನದಲ್ಲೇ ಕಷ್ಟಪಟ್ಟು ಓದಿ ನೌಕರಿ ಪಡೆದಿದ್ದ. ಏನೇ ನೋವಾದರೂ ಅವನ ಹೆಂಡತಿ, ತಾಯಿ ಜೊತೆ ಹಂಚಿಕೊಳ್ತಿದ್ದ. ಶುಕ್ರವಾರ ಬೆಳಗ್ಗೆ ಯಾಕೋ ಬೇಜಾರಾಗಿದ್ದ. ಅವನ ಸಾವಿನಿಂದ ನಮಗೆಲ್ಲ ತುಂಬಾ ಆಘಾತವಾಗಿದೆ. ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು. ನನ್ನ ಸೊಸೆಗೆ ಬದುಕಲು ದಾರಿ ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ?
    ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಕಳೆದ ಗುರುವಾರ ಅವರನ್ನು ಪೊಲೀಸ್‌ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ (ಆ.2) ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ನಗರ ಠಾಣೆಗೆ ದೂರು ನೀಡಿದೆ. ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

  • ಪರಶುರಾಮ್‌ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ ಕೊಡೋದಕ್ಕೆ ತೀರ್ಮಾನ – ಪರಮೇಶ್ವರ್‌

    ಪರಶುರಾಮ್‌ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ ಕೊಡೋದಕ್ಕೆ ತೀರ್ಮಾನ – ಪರಮೇಶ್ವರ್‌

    ಬೆಂಗಳೂರು: ಮೃತ ಪಿಎಸ್‌ಐ ಪರಶುರಾಮ್ (PSI Parashuram) ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡೋದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ (G Parameshwara) ತಿಳಿಸಿದ್ದಾರೆ.

    ಪಿಎಸ್‌ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಮಾಡಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ, ಅಂತ ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತೆ. ಪರಶುರಾಮ್‌ ಪತ್ನಿಗೆ ಇಲಾಖೆಯಲ್ಲಿ ಕೆಲಸ (Government Job), ಪರಿಹಾರ ಕೊಡೋಕೆ ಸರ್ಕಾರ ತೀರ್ಮಾನ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    10 ತಿಂಗಳು ಸರ್ಕಾರ ಇರಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಮಾತುಗಳು ಬರೋದು ಸ್ವಾಭಾವಿಕ. ಅಸ್ಥಿರವಾಗುವ ಸೂಚನೆಗಳು ನಮ್ಮಲ್ಲಿ ಕಾಣಿಸ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ರಾಜ್ಯದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರ ಕುರಿತು ಮಾತನಾಡಿದ ಸಚಿವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇವತ್ತು (ಭಾನುವಾರ) ಸಂಜೆ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಸಭೆಯ ಅಜೆಂಡಾ ಏನಂತ ಗೊತ್ತಿಲ್ಲ. ಎಲ್ಲ ಮಂತ್ರಿಗಳನ್ನ ಕರೆದಿದ್ದಾರೆ. ರಾಜ್ಯಪಾಲರು ಸಿಎಂಗೆ ಶೋಕಾಸ್ ನೀಡಿದ್ದಾರೆ. ಸಂಪುಟ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೆಸೆಲ್ಯೂಷನ್ ಮಾಡಿ, ಶೋಕಾಸ್ ನೋಟಿಸ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಅಡ್ವಸರಿ ರೂಪದಲ್ಲಿ ಮನವಿ ಮಾಡಿದ್ದೇವೆ. ಈ ಬಗ್ಗೆ ಹೈಕಮಾಂಡ್, ಸುರ್ಜೆವಾಲಾ, ಕೆ.ಸಿ ವೇಣುಗೋಪಾಲ್‌ರನ್ನ ಕಳಿಸ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬಹುದು ಎಂದು ನುಡಿದಿದ್ದಾರೆ. ಇದನ್ನೂ ಓದಿ: Belagavi: ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್ – ಓರ್ವನ ರಕ್ಷಣೆ ಮತ್ತೋರ್ವ ನಾಪತ್ತೆ 

  • ಸ್ವಗ್ರಾಮದಲ್ಲಿ ಪಿಎಸ್ಐ ಪರಶುರಾಮ್‌ ಅಂತ್ಯಸಂಸ್ಕಾರ – ಮುಗಿಲು ಮುಟ್ಟಿದ ಆಕ್ರಂದನ

    ಸ್ವಗ್ರಾಮದಲ್ಲಿ ಪಿಎಸ್ಐ ಪರಶುರಾಮ್‌ ಅಂತ್ಯಸಂಸ್ಕಾರ – ಮುಗಿಲು ಮುಟ್ಟಿದ ಆಕ್ರಂದನ

    ಕೊಪ್ಪಳ: ಹೃದಯಾಘಾತದಿಂದ ಮೃತಪಟ್ಟಿದ್ದ ಪಿಎಸ್ಐ ಪರಶುರಾಮ್‌ (PSI Parashuram) ಮೃತದೇಹದ ಅಂತ್ಯಸಂಸ್ಕಾರ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಕಲ‌ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    ಪೊಲೀಸ್ ಇಲಾಖೆಯ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಿಎಸ್‌ಐ ಪರಶುರಾಮ್ ಅವರ ಅಂತಿಮದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಐಜಿ ಬಿ.ಜಿ.ಲೋಕೇಶ ಕುಮಾರ್, ಎಸ್ಪಿ ಡಾ. ರಾಮ್ ಅರಸಿದ್ದ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಗೌರವ ವಂದನೆಗಳನ್ನು ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಪಿಎಸ್‌ಐ ಪರಶುರಾಮ್‌ ಪಾರ್ಥಿವ ಶರೀರಕ್ಕೆ ಗೌರವವಂದನೆ ಸಲ್ಲಿಸಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಪರಶುರಾಮ್ ಪಾರ್ಥಿವ ಶರೀರ ಆಗಮಿಸಿತು. ಪಿಎಸ್‌ಐ ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಸಂಜೆ 6ಗಂಟೆ ಸರಿಯಾಗಿ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿ ಮೊದಲಿಗೆ ನೇರವಾಗಿ ಅವರ ಸ್ವಗೃಹಕ್ಕೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮ ತಲುಪುತ್ತಿದ್ದಂತೆ ಕುಟಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಪ್ರತಿಭಟನೆ: ಘಟನೆ ಖಂಡಿಸಿ ಸೋಮನಾಳದಲ್ಲಿ ಛಲವಾದಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಯಾದಗಿರಿ ಭ್ರಷ್ಟ ಶಾಸಕನಿಗೆ ಧಿಕ್ಕಾರ ಅಂತಾ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪಾರ್ಥಿವ ಶರೀರ ಇಟ್ಟ ಮೈದಾನದಲ್ಲಿಯೇ ಸಂಘಟನೆ ಪ್ರತಿಭಟನೆ ನಡೆಯಿತು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಆತನ ಪುತ್ರ ಬಂಧನಕ್ಕೆ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡಬೇಕೆಂದು ಆಗ್ರಹಿಸಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಮೃತರ ಕುಟುಂಬಕ್ಕೆ 2‌ ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿಗೆ ಅದೇ ಹುದ್ದೆಯನ್ನೂ ನೀಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಿಎಸ್‌ಐ ಪರಶುರಾಮ್ ಸಾವು : ಕೊನೆಗೂ ಶಾಸಕ, ಪುತ್ರನ ವಿರುದ್ಧ ಕೇಸ್‌

    ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಪಿಎಸ್‌ಐ ಪರಶುರಾಮ್ ಅಂತಿಮದರ್ಶನ ಪಡೆದರು. ಸಚಿವರು ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡುತ್ತಿದ್ದಂತೆ ದಲಿತ ಸಂಘಟನೆಗಳು ಮತ್ತು ಕುಟುಂಬದ ಸದಸ್ಯರು ಸಚಿವರನ್ನು ಭೇಟಿಯಾಗಿ ಪ್ರಕರಣ ತನಿಖೆಗೆ ಒತ್ತಾಯಿಸಿದರು. ಮೊದಲಿಗೆ ಕುಟುಂಬದ ಸದಸ್ಯರಿಗೆ ಸಂತಾಪ ನೀಡಿದ ಸಚಿವರು ಪ್ರಕರಣದ ಕುರಿತು ಸಿಎಂ ಇವರ ಗಮನಕ್ಕೆ ತರುವೆ. ನನ್ನ ಕ್ಷೇತ್ರದ ವ್ಯಕ್ತಿಗೆ ಈ ರೀತಿಯಾಗಿದ್ದು, ಇದೆಲ್ಲವನ್ನೂ ಸಿಎಂ ಇವರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವೆ ಎಂದು ಭರವಸೆ ನೀಡಿದರು. ಈ ನಡುವೆ ನೆರೆದಿದ್ದ ಜನರು ಮೃತರ ಪತ್ನಿಗೆ ಪಿಎಸ್‌ಐ ಹುದ್ದೆಯನ್ನೇ ನೀಡಬೇಕೆಂದು ಆಗ್ರಹಿಸಿದರು.

  • ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    ಬೆಂಗಳೂರು: ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್‌ (PSI Parashuram) ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಕೂಲಂಕಷ ತನಿಖೆ ನಡೆಸುವಂತೆ ಸಿಐಡಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

    ಪಿಎಸ್‌ಐ ಪರಶುರಾಮ್‌ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದರು. ಪಿಎಸ್‌ಐ ಸಾವು ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ನಗರ ಪೊಲೀಸ್‌ ಠಾಣೆಯಲ್ಲೇ ಮುಂದುವರಿಸಲು 30 ಲಕ್ಷ ರೂ. ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ ಬೇಡಿಕೆ ಇಟ್ಟಿದ್ದರು ಎಂದು ಮೃತ ಪರಶುರಾಮ್‌ ಪತ್ನಿ ಶ್ವೇತಾ ಆರೋಪಿಸಿದ್ದಾರೆ.

    ನನ್ನ ಪತಿ ಕಳೆದ 7 ತಿಂಗಳಿಂದ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಸೆನ್‌ ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರ ಠಾಣೆಯಲ್ಲೇ ಮುಂದುವರಿಯಲು 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನನ್ನ ಪತಿ ಮನನೊಂದಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಪಿಎಸ್‌ಐ ಸಾವು ವಿಚಾರವಾಗಿ ದಲಿತಪರ ಸಂಘಟನೆಗಳು ಪ್ರತಿಭಟನೆಗಳು ನಡೆಸುತ್ತಿವೆ. ಪರಶುರಾಮ್‌ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

  • ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    – ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್‌, ಪುತ್ರನ ವಿರುದ್ಧ ಗಂಭೀರ ಆರೋಪ
    – ಅಂಬುಲೆನ್ಸ್‌ ತಡೆದು ದಲಿತ ಸಂಘಟನೆಗಳಿಂದ ಪ್ರತಿಭಟನೆ

    ಯಾದಗಿರಿ: ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ (Parashuram) ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು  ದಲಿತ ಸಂಘಟನೆಗಳು ಆಗ್ರಹಿಸಿವೆ. ಅಷ್ಟೇ ಅಲ್ಲದೇ ಪರಶುರಾಮ್‌ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ (Channa Reddy Patel) ಮತ್ತು ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಕುಟುಂಬಸ್ಥರ ಆರೋಪ ಏನು?
    ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ (Congress MLA) ಚೆನ್ನಾರೆಡ್ಡಿ ಪಾಟೀಲ್‌ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್‌ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್‌ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.  ಇದನ್ನೂ ಓದಿ: ಕೋಲಾರದಲ್ಲಿ ಆಡಿ ಕಾರು ಮರಕ್ಕೆ ಡಿಕ್ಕಿ – ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು, ಓರ್ವ ಪಾರು

    ಪರಶುರಾಮ್‌ ಅವರು ಪಿಎಸ್‌ಐ ಹುದ್ದೆ ಪಡೆಯಲು 30 ಲಕ್ಷ ರೂ. ನೀಡಿದ್ದರು. ಈ ಹುದ್ದೆ ಪಡೆಯಲು ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

    ಕಾರ್ಯಕರ್ತರ ಪ್ರತಿಭಟನೆ:
    ಪಿಎಸ್‌ಐ ಪರಶುರಾಮ್‌ ಮೃತಪಟ್ಟ ಹಿನ್ನೆಲೆಯಲ್ಲಿ ಯಾದಗಿರಿಯ ದಲಿತ ಸಂಘಟನೆಗಳು ರಾತ್ರಿಯೇ ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಅಂಬುಲೆನ್ಸ್‌ ತಡೆದು ಪ್ರತಿಭಟಿಸಿದ್ದಾರೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬುಲೆನ್ಸ್‌ನಲ್ಲಿ ರವಾನೆ ಮಾಡಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್‌ ತಡೆದು ಪ್ರತಿಭಟಿಸಿದ್ದಾರೆ. ಉತ್ತಮ ಕೆಲಸದಿಂದ ಪರಶುರಾಮ್‌ ಅವರು ಹೆಸರು ಪಡೆದಿದ್ದರು. ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

     

    ಏನಿದು ಪ್ರಕರಣ?
    ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಗುರುವಾರ ಅವರನ್ನು ಪೊಲೀಸ್‌ ಸಿಬ್ಬಂದಿ ಬೀಳ್ಕೊಟ್ಟಿದ್ದರು. ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.