Tag: PSI

  • ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಪಿಎಸ್‍ಐ

    ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಎಸ್‍ಐಯನ್ನು ಗುಂಡಿಕ್ಕಿ ಕೊಂದ ಪಿಎಸ್‍ಐ

    – ಕೊಲೆ ಮಾಡಿದ ಪಿಸ್ತೂಲ್‍ನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    – ಮೂರು ಬಾರಿ ಗುಂಡು ಹಾರಿಸಿದ ಪಾಗಲ್ ಪ್ರೇಮಿ

    ನವದೆಹಲಿ: ರಾತ್ರೋರಾತ್ರಿ ಮಹಿಳಾ ಎಸ್‍ಐ ಪ್ರೀತಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ದೀಪಾಂಶು ರತಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. 2018ರಲ್ಲಿ ಪ್ರೀತಿ ಹಾಗೂ ದೀಪಾಂಶು ದೆಹಲಿ ಪೊಲೀಸ್ ಸೇರಿದ್ದು, ಇಬ್ಬರು ಬ್ಯಾಚ್‍ಮೇಟ್ ಆಗಿದ್ದರು. ಶುಕ್ರವಾರ ರಾತ್ರಿ ಪ್ರೀತಿ ಅವರನ್ನು ಕೊಲೆ ಮಾಡಿದ ಬಳಿಕ ದೀಪಾಂಶು ಹರ್ಯಾಣದ ಸೋನಿಪತ್ ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಯನ್ನು ಕೊಲೆ ಮಾಡಿದ ಪಿಸ್ತೂಲಿನಲ್ಲಿಯೇ ದೀಪಾಂಶು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಗುಂಡಿಟ್ಟು ಮಹಿಳಾ ಎಸ್‍ಐ ಹತ್ಯೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದೀಪಾಂಶು ಪಿಎಸ್‍ಐ ಆಗಿದ್ದು, ಪ್ರೀತಿ ಜೊತೆ ತನ್ನ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದ. ಆದರೆ ಪ್ರೀತಿ ಆತನನ್ನು ಪ್ರೇಮ ನಿವೇದನೆಯನ್ನು ತಿರಸ್ಕರಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ದೀಪಾಂಶು ಗುಂಡಿಕ್ಕಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿ ಆಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

    ನಡೆದಿದ್ದೇನು?
    ದೆಹಲಿಯ ರೋಹಿಣಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಮಹಿಳಾ ಎಸ್‍ಐ ಪ್ರೀತಿ ಅಲ್ಲಾವತ್ ಮೇಲೆ ದೀಪಾಂಶು ಗುಂಡಿಕ್ಕಿ ಹತ್ಯೆ ಮಾಡಿದ್ದ. ನಗರದ ಪಾಟ್‍ಪರ್ಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪ್ರೀತಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಪ್ರೀತಿ ತನ್ನ ಡ್ಯೂಟಿ ಮುಗಿಸಿಕೊಂಡು ಮೆಟ್ರೋದಲ್ಲಿ ರೋಹಿಣಿ ಮೆಟ್ರೋ ಸ್ಟೇಷನ್‍ಗೆ ಹೋಗಿದ್ದರು. ನಿಲ್ದಾಣದಿಂದ ಇಳಿದು ಮನೆಗೆ ನಡೆದುಕೊಂಡು 50 ಮೀ. ದೂರ ಹೋಗುತ್ತಿದ್ದಂತೆ ದೀಪಾಂಶು ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ದೀಪಾಂಶು ಮೂರು ಬಾರಿ ಗುಂಡು ಹಾರಿಸಿದ್ದು, ಎರಡು ಬಾರಿ ಪ್ರೀತಿಗೆ ತಗುಲಿದೆ. ಮೂರನೇ ಬಾರಿ ಬುಲೆಟ್ ಪ್ರೀತಿ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಹಿಂದಿನ ಗ್ಲಾಸ್‍ಗೆ ತಗುಲಿದೆ. ಬುಲೆಟ್ ಪ್ರೀತಿ ತಲೆಗೆ ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಪ್ರೀತಿಯನ್ನು ಕೊಲೆ ಮಾಡಿದ ನಂತರ ದೀಪಾಂಶು ಅಲ್ಲಿಂದ ಪರಾರಿಯಾಗಿದ್ದ. ಘಟನೆಯನ್ನು ನೋಡಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಆಗಿರುವುದನ್ನು ಖಚಿತ ಪಡಿಸಿದ್ದಾರೆ. ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದರು.

    ಕೊಲೆಯಾದ ಸ್ಥಳದಿಂದ ಪ್ರೀತಿಯ ಮನೆ ಸ್ವಲ್ಪ ದೂರದಲ್ಲೇ ಇತ್ತು. ಸೋನಿಪತ್‍ನ ನಿವಾಸಿಯಾಗಿರುವ ಪ್ರೀತಿ ರೋಹಿಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದು, ಈ ವೇಳೆ ಆರೋಪಿ ಒಬ್ಬನೇ ಇರುವುದು ಗೊತ್ತಾಗಿತ್ತು. ಸಿಸಿಟಿವಿ ನೋಡಿ ಪೊಲೀಸರು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲೇ ದೀಪಾಂಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಕೊಪ್ಪಳ: ರೈತರನ್ನು ಸುಲಿಗೆ ಮಾಡಲು ಮುಂದಾಗಿದ್ದ ಜಿಲ್ಲೆಯ ಓರ್ವ ಪಿಎಸ್‍ಐ ಹಾಗೂ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಎಸ್‍ಪಿ ಜಿ.ಸಂಗೀತಾ ಅವರು ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಇಬ್ಬರು ಮಾಡಿದ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಸುದ್ದಿ ಆಧರಿಸಿ ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

    ಕಾರಟಗಿ ಪೊಲೀಸ್ ಠಾಣೆಯ ಪಿಎಸ್‍ಐ ವಿಜಯಕೃಷ್ಣ ಹಾಗೂ ಅದೇ ಠಾಣೆಯ ಪೇದೆ ಭೀಮಣ್ಣ ಸೇವೆಯಿಂದ ಅಮಾನತು ಆದವರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕಂದಾ ಗ್ರಾಮದ ರೈತ ಭಾಷಾಸಾಬ್ ವಲಿಸಾಬ್ ಅವರಿಗೆ ವಿಜಯಕೃಷ್ಣ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಶ್ರವಣಕುಮಾರ್ ಎಂಬಾತನ ಮಾತು ಕೇಳಿದ್ದ ಪಿಎಸ್‍ಐ ರೈತ ಭಾಷಾಸಾಬ್ ವಲಿಸಾಬ್‍ಗೆ ಬೆದರಿಕೆ ಹಾಕಿ, ಹಣಕ್ಕಾಗಿ ಪೀಡಿಸಿ ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರು. ಇದರಿಂದಾಗಿ ಭಾಷಾಸಾಬ್ ಎಸ್‍ಪಿ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಪಬ್ಲಿಕ್ ಟಿವಿ ಜನವರಿ 26ರಂದು ಪಿಎಸ್‍ಐ ವಿಜಯಕೃಷ್ಣ, ಪೇದೆ ಬೀಮಣ್ಣನದ ಹಣ ವಸಲಿ ಬಗ್ಗೆ ಸುದ್ದಿ ಮಾಡಿತ್ತು. ಕೊಪ್ಪಳ ಎಸ್‍ಪಿ ಸಂಗೀತಾ ಅವರು ಗಂಗಾವತಿ ಸಿಪಿಐ ಅವರಿಂದ ವರದಿ ತರಿಸಿಕೊಂಡು ಜನವರಿ 29ರಂದು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಏನಿದು ಪ್ರಕರಣ?:
    ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮವು ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದರು.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡಿದ್ದರಿಂದ ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದರು. ಅಷ್ಟೇ ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್ ಅವರಿಗೆ ಧಮ್ಕಿ ಹಾಕಿದ್ದರು. ಉಸುಕು ದಂಧೆ ಮಾಡಿ ಪ್ರತಿ ತಿಂಗಳು 35 ಸಾವಿರ ರೂ. ಮಾಮೂಲಿ ನೀಡುವಂತೆ ಪಿಎಸ್‍ಐ ವಿಜಯಕೃಷ್ಣ ಅವರು ಕೇಳಿದ್ದ ಬಗ್ಗೆ ಭಾಷಾಸಾಬ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಇದೆಲ್ಲವನ್ನೂ ಮನಗಂಡ ಎಸ್‍ಪಿ ಸಂಗೀತಾ ಅವರು ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ, ಅಧಿಕಾರ ದುರುಪಯೋಗ, ಠಾಣಾ ವ್ಯಾಪ್ತಿ ಮೀರಿದ ವ್ಯಕ್ತಿಯ ಮೇಲೆ ದೌರ್ಜನ್ಯ, ಹಲ್ಲೆ ಮಾಡುವ ಮೂಲಕ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೀಳರಿಮೆ ಮೂಡುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡವಳಿ) ನಿಯಮಗಳು 1965ರ ನಿಯಮದ ಪ್ರಕಾರ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

  • ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಕೊಪ್ಪಳ: ಮಾಮೂಲಿ ಕೊಡಲು ನಿರಾಕರಿಸಿದ ವ್ಯಕ್ತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಮಾಧ್ಯಮಗಳಿಗೆ ಅಥವಾ ಅಧಿಕಾರಿಗಳಿಗೆ ದೂರು ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಪಿಎಸ್‍ಯ ಒಬ್ಬರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜಿಲ್ಲೆಯ ಕಾರಟಗಿ ಪಿಎಸ್‍ಐ ವಿಜಯಕೃಷ್ಣ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದ ಗ್ರಾಮದ ಭಾಷಾಸಾಬ್ ಅವರಿಗೆ ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಭಾಷಾಸಾಬ್ ‘ನನ್ನ ಜೀವಕ್ಕೆ ಏನಾದರು ಆದರೆ ಅದಕ್ಕೆ ವಿಜಯಕೃಷ್ಣ ಕಾರಣ’ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಮರಳು ಸಾಗಾಟ ವಿಚಾರದಲ್ಲಿ ಭಾಷಾಸಾಬ್ ಹಾಗೂ ಕಾರಟಗಿ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ತಮ್ಮ ಠಾಣಾ ವ್ಯಾಪ್ತಿ ಮೀರಿ ಪೊಲೀಸರು ಭಾಷಾಸಾಬ್ ಟ್ರ್ಯಾಕ್ಟರ್ ಸೀಜ್ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ರಿವೇಂಜ್ ತಗೆದುಕೊಂಡ ಪೊಲೀಸರು ಭಾಷಾಸಾಬ್ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ವಿಷಯ ಮಾಧ್ಯಮದವರಿಗೆ ತಿಳಿಸಿದರೆ ರಿವಾಲ್ವರ್ ಇಟ್ಟು ಶೂಟ್ ಮಾಡುತ್ತೇನೆ ಎಂದು ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಜೀವಭಯದಲ್ಲಿರುವ ಭಾಷಾಸಾಬ್ ವಿಜಯಕೃಷ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ.

    ಈ ಘಟನೆಗೆ ಪ್ರಮುಖ ಕಾರಣ ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದಾರೆ.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡುತಿದ್ದು, ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದಾರೆ. ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್‍ಗೆ ಧಮ್ಕಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

  • ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ಬಳ್ಳಾರಿ: ಕಟಾವು ಮಾಡಿದ ತೊಗರಿ, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ಹಳ್ಳಿಯಲ್ಲಿನ ರೈತರು ರಸ್ತೆಗೆ ಹಾಕುವುದು ಸಾಮಾನ್ಯ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವುದೂ ಸತ್ಯ. ಈ ಕುರಿತು ಎಷ್ಟೇ ಹೇಳಿದರೂ ಕೇಳದ ರೈತರಿಂದ ಬೇಸತ್ತು ಪಿಎಸ್‍ಐಯೊಬ್ಬರು ರಸ್ತೆಯಲ್ಲಿ ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.

    ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಡಗಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ರೈತರು ತೊಗರಿ ಬೆಳೆ ಕಟಾವು ಮಾಡಿ, ರಸ್ತೆಯಲ್ಲಿ ಹಾಕಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ರೈತರಿಗೆ ಹರಪನಹಳ್ಳಿ ಪಿಎಸ್‍ಐ ಶ್ರೀಧರ್ ಸಾಕಷ್ಟು ಬಾರಿ ಹೇಳಿದರೂ, ರಸ್ತೆಯಲ್ಲೇ ತೊಗರಿ ಹಾಕಿಕೊಂಡು ಒಣಗಿಸುತ್ತಿದ್ದರು.

    ಇದರಿಂದ ಬೇಸತ್ತ ಪಿಎಸ್‍ಐ ಶ್ರೀಧರ್ ರಸ್ತೆಯಲ್ಲಿ ಹಾಕಿದ್ದ ತೊಗರಿಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಬೆಂಕಿ ಹಚ್ಚಲು ಹೋಗುತ್ತಿದ್ದಂತೆ ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಪಿಎಸ್‍ಐ ಬೆಂಕಿ ಹಚ್ಚಲು ಯತ್ನಿಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ರೈತರು ತೊಗರಿ, ಗೋಧಿ, ಸಜ್ಜೆ, ನವಣೆಗಳನ್ನು ರಸ್ತೆಗೆ ಹಾಕಿ ಬಿಡಿಸುತ್ತಾರೆ. ಅಲ್ಲದೆ ಒಣಗಿಸಲು ಸಹ ಹಾಕುತ್ತಾರೆ. ಆದರೆ ರೈತರ ಈ ಪದ್ಧತಿಯಿಂದಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಪೊಲೀಸರು ರೈತರಿಗೆ ಮನವಿ ಮಾಡುತ್ತಾರೆ. ಆದರೆ ರೈತರು ಒಕ್ಕಲು ಮಾಡಲು ಆಳು ಸಿಗದ ಕಾರಣ ಈ ಪದ್ಧತಿ ಅನಿವಾರ್ಯ ಎಂಬಂತಾಗಿದೆ.

  • ಆನೆಗೊಂದಿ ಉತ್ಸವದಲ್ಲಿ ‘ನನ್ನ ಗೆಳತಿ’ ಎಂದ ಪಿಎಸ್‍ಐ

    ಆನೆಗೊಂದಿ ಉತ್ಸವದಲ್ಲಿ ‘ನನ್ನ ಗೆಳತಿ’ ಎಂದ ಪಿಎಸ್‍ಐ

    – ಶಿಳ್ಳೆ, ಸ್ಟೆಪ್ಸ್ ಹಾಕಿದ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಕ್ಷೇತ್ರವಾಗಿರುವ ಆನೆಗೊಂದಿಯಲ್ಲಿ ಎರಡು ದಿನ ಉತ್ಸವ ನಡೆದಿದ್ದು, ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಪಿಎಸ್‍ಐಯೊಬ್ಬರು ‘ನನ್ನ ಗೆಳತಿ’ ಎಂದು ಹಾಡಿದ ಹಾಡು ಎಲ್ಲೆಡೆ ವೈರಲ್ ಆಗಿದೆ.

    ಆನೆಗೊಂದಿ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಕಳೆದ ಒಂದು ವಾರದಿಂದ ಉತ್ಸವದ ಯಶಸ್ಸಿಗಾಗಿ ಕೆಲಸ ಮಾಡಿದ್ದರು. ಆನೆಗೊಂದಿ ಉತ್ಸವದ ಶ್ರೀಕೃಷ್ಣದೇವರಾಯ ವೇದಿಕೆಯ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್‍ಐ ದೊಡ್ಡಪ್ಪ ಅವರು ‘ನನ್ನ ಗೆಳತಿ, ನನ್ನ ಗೆಳತಿ’ ಹಾಡನ್ನು ಹಾಡಿ ಎಲ್ಲರ ಮನ ಗೆದ್ದಿದ್ದಾರೆ. ಈ ಹಾಡಿಗೆ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಅವರು ಶಿಳ್ಳೆ ಹೊಡೆದು, ಡ್ಯಾನ್ಸ್ ಮಾಡಿ ಪಿಎಸ್‍ಐ ಅವರಿಗೆ ಪ್ರೋತ್ಸಾಹಿಸಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪಿಎಸ್‍ಐ ಹಾಡಿನ ಮೋಡಿಗೆ ಎಲ್ಲರೂ ಮನಸೋತಿದ್ದಾರೆ.

    ಪಿಎಸ್‍ಐ ಹಾಡುವಾಗ ವೇದಿಕೆ ಮೇಲಿದ್ದ ಇತರ ಅಧಿಕಾರಿಗಳು ಕೂಡ ಸ್ಟೆಪ್ ಹಾಕಿದ್ದು ವಿಶೇಷವಾಗಿತ್ತು. ಅಧಿಕಾರಿಗಳ ಹಾಡಿಗೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ನಾವು ಕೆಲಸಕ್ಕೂ ಸೈ, ಡ್ಯಾನ್ಸ್-ಹಾಡಿಗೂ ಸೈ ಎಂದು ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ.

    ಆನೆಗೊಂದಿ ಉತ್ಸವ ಎರಡು ದಿನಗಳ ಕಾಲ ನಡೆದಿದ್ದು, ಉತ್ಸವದಲ್ಲಿ ಗಾಯಕ ವಿಜಯ್‍ಪ್ರಕಾಶ್, ನಟ ಯಶ್ ಪಾಲ್ಗೊಂಡಿದ್ದರು. ಈ ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಕೊಪ್ಪಳ ಜಿಲ್ಲಾಡಳಿತ ಯಶಸ್ವಿಯಾಗಿ ನಡೆಸಿಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದೆ.

  • ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಜಿ ಶಾಸಕನ ಸಹೋದರರು ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಕೆ.ಆರ್ ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ ರವಿ ಹಾಗೂ ಕೆ.ಬಿ ಈಶ್ವರ್ ಪ್ರಸಾದ್ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡರಿಗೆ ಬೆದರಿಕೆ ಹಾಕಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದು ಈ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 2:15ರ ಸುಮಾರಿಗೆ ರವಿ ಹಾಗೂ ಈಶ್ವರ್ ಪ್ರಸಾದ್‍ಗೆ ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ ಪಿಎಸ್‍ಐ ಬ್ಯಾಟರಾಯಗೌಡ ಅವರು ಹೇಳಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಇದ್ದ ರವಿ ಹಾಗೂ ಈಶ್ವರ್ ಪ್ರಸಾದ್ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ.

    ಜನವರಿ 1ರಂದು ಈ ಇಬ್ಬರ ಮೇಲೂ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ ದೂರು ದಾಖಲಿಸಿದ್ದು ಎಫ್‍ಐಆರ್ ದಾಖಲಾಗಿದೆ. ಸದ್ಯ ರವಿ ಪರಾರಿಯಾಗಿದ್ದು, ಈಶ್ವರ್ ಪ್ರಸಾದ್ ಪೊಲೀಸರ ವಶದಲ್ಲಿ ಇದ್ದಾರೆ. ಈ ಬಗ್ಗೆ ಗುರುವಾರ ಜಾಮೀನಿಗೆ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಸೆಷನ್ ಕೋರ್ಟ್ ಅರ್ಜಿಯನ್ನು ನಿರಾಕರಿಸಿದೆ.

  • ಭಾರತ್ ಬಂದ್: ಪಿಎಸ್‍ಐ ಪರೀಕ್ಷೆಗಳು ಮುಂದೂಡಿಕೆ

    ಭಾರತ್ ಬಂದ್: ಪಿಎಸ್‍ಐ ಪರೀಕ್ಷೆಗಳು ಮುಂದೂಡಿಕೆ

    ಹುಬ್ಬಳ್ಳಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ ಹಿನ್ನಲೆಯಲ್ಲಿ ಜ.7ರಿಂದ 28ರವರೆಗೆ ನಡೆಯಬೇಕಾಗಿದ್ದ ಪಿಎಸ್‍ಐ ಸಿವಿಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ಪರೀಕ್ಷೆಯನ್ನ ಮುಂದೂಡಲಾಗಿದೆ.

    ಅರ್ಹ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯನ್ನು ದಿನಾಂಕ ಜ.07 ರಿಂದ ಜ.28 ರವರೆಗೂ ನಿಗದಿಪಡಿಸಲಾಗಿತ್ತು. ಆದರೆ ಜ.8ರಂದು ಭಾರತ ಬಂದ್ ಘೋಷಣೆಯಾಗಿರುವುದರಿಂದ ಸದರಿ ದಿನಾಂಕದಂದು ಇಟಿ/ಪಿಎಸ್‍ಟಿ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಲು ತೊಂದರೆಯುಂಟಾಗುವ ಸಾಧ್ಯತೆ ಇರುವ ಕಾರಣ ಪರೀಕ್ಷೆಯನ್ನು ಜ.13ರಂದು ನಿಗದಿಪಡಿಸಲಾಗಿದೆ. ಸದರಿ ಆದೇಶದಂತೆ ಇಟಿ/ಪಿಎಸ್‍ಟಿ ಪರೀಕ್ಷೆಗೆ ಹಾಜರಾಗುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತ ಆರ್.ದಿಲೀಪ್ ತಿಳಿಸಿದ್ದಾರೆ.

  • ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ಯಾದಗಿರಿ: ರಾಜಕೀಯ ವಿಚಾರವಾಗಿ ನಮ್ಮದು ದೋಸ್ತಿ ಇಲ್ಲ ಅನ್ನೋ ಯಡಿಯೂರಪ್ಪ ಅವರು ಆಡಳಿತಾತ್ಮಕ ವಿಷಯದಲ್ಲಿ ದೇವೇಗೌಡರ ಒತ್ತಡಕ್ಕೆ ಮಣಿದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಯಾದಗಿರಿ ಸಿಟಿ ಸ್ಟೇಷನ್ ಪಿಎಸ್‌ಐ ಬಾಪುಗೌಡ ಪಾಟೀಲ್‌ರನ್ನ ಕಲಬುರಗಿಯ ಐಜಿ ಕಚೇರಿಗೆ ಸರ್ಕಾರ ಎತ್ತಂಗಡಿ ಮಾಡಿದೆ. ದೇವೇಗೌಡರು ಹೇಳಿದ್ದರಿಂದಾಗಿ ನಾನು ಕ್ರಮ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸಿಎಂ ಅವರ ಈ ಕ್ರಮವನ್ನು ದೇವೇಗೌಡರು ಸ್ವಾಗತಿಸಿದ್ದಾರೆ.

    ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪಗೆ ನಾನು ಪತ್ರ ಬರೆದಿದ್ದೆ. ಇದನ್ನೇ ಏನೋ ಸಾಧನೆ ಎಂದು ನಮ್ಮ ಕಾರ್ಯಕರ್ತರು ಹಿಗ್ಗೋದು ಬೇಡ. ದ್ವೇಷ ಸಾಧಿಸೋದೂ ಬೇಡ. ಶಾಂತವಾಗಿರಿ ಅಂತ ಸಲಹೆ ನೀಡಿದ್ದಾರೆ. ಆದರೆ ರಾಜಕೀಯ ಒತ್ತಡಕ್ಕೆ ಎಸ್‌ಐ ವರ್ಗಾವಣೆ ಮಾಡಿರೋದು ಈಗ ವ್ಯಾಪಕ ಚರ್ಚೆಗೀಡಾಗಿದೆ. ಇದನ್ನು ಓದಿ: ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಪಿಎಸ್‌ಐ ಅಮಾನತಿಗಾಗಿ ದೇವೇಗೌಡ ಹೋರಾಟವನ್ನು ಸಚಿವ ಸಿ.ಟಿ ರವಿ ಅಣಕಿಸಿದ್ದಾರೆ. ದೊಡ್ಡವರು ದೊಡ್ಡವರ ರೀತಿ ನಡೆದುಕೊಳ್ಳಬೇಕು. ದೊಡ್ಡವರು ಸಣ್ಣವರ ರೀತಿಯಲ್ಲಿ ನಡೆದುಕೊಳ್ಳಬಾರದು ಅಂದಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಪ್ರಶ್ನಿಸಿ ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಶರಣಗೌಡ ಕಂದಕೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಎಸ್‌ಐ ಬಂಧಿಸಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ಕಾರ್ಯಕರ್ತರು, ಎಸ್‌ಐ ವರ್ಗಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಧರಣಿ ಮಾಡಿದ್ದರು. ಇದನ್ನು ಓದಿ: ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಹೆಚ್‌ಡಿಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದರು. ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.

  • ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಯಾದಗಿರಿ: ನಗರ ಠಾಣೆ ಪಿಎಸ್‍ಐ ಬಾಪುಗೌಡ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳ ತಿಕ್ಕಾಟದ ಸ್ವರೂಪ ಪಡೆದುಕೊಂಡಿದೆ.

    ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದು ಎಸ್.ಪಿ ಋಷಿಕೇಶ್ ಭಗವಾನ್ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡಲು ನಿರ್ಧರಿಸುತ್ತಿದ್ದಂತೆ ಜಿಲ್ಲಾ ಪೋಲಿಸ್ ಇಲಾಖೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಎಸ್‍ಐ ಅಮಾನತು ಮಾಡಿದರೆ ಸಾಮೂಹಿಕವಾಗಿ ನಮ್ಮನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದಿರುವ ನಗರ ಠಾಣೆಯ ಸುಮಾರು 69 ಸಿಬ್ಬಂದಿ ಎಸ್ಪಿಗೆ ಒತ್ತಡ ಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಇತ್ತ ಜೆಡಿಎಸ್ ಕಾರ್ಯಕರ್ತರಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಜೆಡಿಎಸ್ ಕಾರ್ಯಕರ್ತರ ಮನವೊಲಿಸಲು ಸ್ವತಃ ಈಶಾನ್ಯ ವಲಯದ ಐಜಿಪಿ ಮನೀಶ್ ಅವರು, ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಒಂದು ಕಡೆ ರಾಜಕೀಯ ಒತ್ತಡ ಮತ್ತೊಂದು ಕಡೆ ಸಿಬ್ಬಂದಿಗಳ ಒತ್ತಡ ಎಸ್‍ಪಿ ಋಷಿಕೇಶ್ ಭಗವಾನ್ ಅವರಿಗೆ ನುಂಗಲಾರದ ತುಪ್ಪದಂತಾಗಿದೆ.

    ತಮ್ಮ ಬೇಡಿಕೆ ಈಡೇರದ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲವೆಂದು ಜೆಡಿಎಸ್ ಕಾರ್ಯಕರ್ತರರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾಳೆಯಿಂದ ಉಗ್ರ ರೂಪದ ಹೋರಾಟದ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಪ್ರತಿಭಟನೆಗೆ ಸಾಥ್ ನೀಡುವ ಸಾಧ್ಯತೆಯಿದೆ.

    ಪ್ರತಿಭಟನೆಗೆ ಕಾರಣವೇನು?
    ಜೆಡಿಎಸ್ ಕಾರ್ಯಕರ್ತ ಮಾರ್ತಾಂಡ ಅವರಿಗೆ ಪಿಎಸ್‍ಐ ಬಾಪುಗೌಡರಿಂದ ಎನ್‍ಕೌಂಟರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಯಾದಗಿರಿ ನಗರ ಪೊಲೀಸ್ ಠಾಣೆ ಎದುರು ಏಕಾಏಕಿ ಪ್ರತಿಭಟನೆ ಶುರು ಮಾಡಿದ್ದಾರೆ. ಸಿಎಂ ಬಿಎಸ್‍ವೈ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ಮಾರ್ತಾಂಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶರಣನಗೌಡ ಕಂದಕೂರ ಪಾತ್ರವಿದೆ ಎಂದು ಸುಳ್ಳು ಸಾಕ್ಷಿ ಹೇಳಲು ಪಿಎಸ್‍ಐ ಬಾಪುಗೌಡ ಮಾರ್ತಾಂಡ ಅವರಿಗೆ ಬಲವಂತ ಮಾಡಿದ್ದಾರೆ. ಮಾರ್ತಾಂಡ ಮೇಲೆ ಕಾನೂನು ಬಾಹಿರವಾಗಿ ಕ್ರಮಕ್ಕೆ ಪಿಎಸ್‍ಐ ಮುಂದಾಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯುತ್ತಿದೆ.

  • ದೂರು ನೀಡಲು ಬಂದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡ ಪಿಎಸ್‍ಐ

    ದೂರು ನೀಡಲು ಬಂದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡ ಪಿಎಸ್‍ಐ

    -ಪತ್ನಿ ಜೊತೆ ಸೇರಿ ವಿಷ ಕುಡಿಸಿ ಮಹಿಳೆಯ ಕೊಲೆಗೆ ಯತ್ನ

    ದಾವಣಗೆರೆ: ಪತಿ -ಪತ್ನಿ ಜಗಳದ ಪ್ರಕರಣದಲ್ಲಿ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯನ್ನೇ ಪಿಎಸ್‍ಐ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಲ್ಲದೆ ಈಗ ತನ್ನ ಪತ್ನಿಯ ಜೊತೆ ಸೇರಿ ಮಹಿಳೆಗೆ ವಿಷ ಕುಡಿಸಿ ಕೊಲೆ ಮಾಡಲು ಸಹ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ದಾವಣಗೆರೆಯ ಹದಡಿ ಠಾಣೆಯಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದ ರಾಜೇಂದ್ರ ನಾಯ್ಕ್ ಪ್ರಸ್ತುತ ಈಗ ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮಹಿಳೆಗೆ ನ್ಯಾಯ ಕೊಡಿಸುವ ನೆಪದಲ್ಲಿ ಆಕೆಯ ಜೊತೆ ಸರಸ-ಸಲ್ಲಾಪ ಮಾಡಿದ್ದಲ್ಲದೇ ಹಣವನ್ನು ಪೀಕಿದ್ದಾನೆ ಎಂದು ದೂರು ದಾಖಲಾಗಿದೆ.

    ಏನಿದು ಪ್ರಕರಣ?
    ರಾಜೇಂದ್ರ ಹಿಂದೆ ಹದಡಿ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದಾಗ ಆ ಠಾಣೆಯ ವ್ಯಾಪ್ತಿಗೆ ಬರುವ ಗ್ರಾಮವೊಂದರಲ್ಲಿ ಪತಿ- ಪತ್ನಿಯ ಜಗಳ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಆ ಕೇಸ್‍ನಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾಹಿತ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದಲ್ಲದೆ, ಆಕೆಗೆ ಮನೆ ಮಾಡಿಟ್ಟು ಕಣ್ಣಮುಚ್ಚಾಲೆ ಆಟವಾಡುತ್ತಿದ್ದನು. ರಾಜೇಂದ್ರಗೆ ಮದುವೆಯಾದರೂ ಸಹ ಪರ ಸ್ತ್ರೀಯರ ಸಂಗ ಬಿಡುತ್ತಿರಲಿಲ್ಲ.

    ಕೆಲ ದಿನಗಳ ನಂತರ ರಾಜೇಂದ್ರ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಜೊತೆ ಜಗಳವಾಡಿದ್ದಾನೆ. ತನಗೆ ನ್ಯಾಯ ಕೊಡಿಸುವಂತೆ ಕೇಳಿದ್ದಕ್ಕೆ ಪಿಎಸ್‍ಐ ರಾಜೇಂದ್ರ ತನ್ನ ಪತ್ನಿ ಜೊತೆ ಸೇರಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಲ್ಲದೇ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.

    ನೊಂದ ಮಹಿಳೆಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ನೀಡಿದರೂ ಸಹ ಮೇಲಾಧಿಕಾರಿಗಳು ಆತನ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಪೊಲೀಸ್ ಅಧಿಕಾರಿಗಳಿಗೆ ಒಂದು ನ್ಯಾಯ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.