Tag: PSI

  • ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ- ಆಸ್ಪತ್ರೆಗೆ ದಾಖಲಿಸಿದ ಪಿಎಸ್‍ಐ

    ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆ- ಆಸ್ಪತ್ರೆಗೆ ದಾಖಲಿಸಿದ ಪಿಎಸ್‍ಐ

    – ಮಹಾಂತೇಶ್ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಹಾವೇರಿ: ರಸ್ತೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆಯೊಬ್ಬರನ್ನು ಪಿಎಸ್‍ಐ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಜಿಲ್ಲೆಯ ಬ್ಯಾಡಗಿ ತಾಲೂಕಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪರಿಚಿತ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಬಿದ್ದಿದ್ದರು. ಈ ಮಾಹಿತಿ ತಿಳಿಸಿದ ಬ್ಯಾಡಗಿ ಪಿಎಸ್‍ಐ ಮಹಾಂತೇಶ್, ಆಕೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

    ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನ ಕಂಡು ದಾರಿ ಹೋಕರೊಬ್ಬರು ಪಿಸಿಐಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಅವರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಪೆಟ್ಟಾದಂತೆ ಕಾಣ್ತಿದ್ದ ಮಹಿಳೆ ಮಾತನಾಡಲು ಬಾರದೆ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದರು.

    ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡೋದ್ರಿಂದ ಇನ್ನೂ ಸ್ವಲ್ಪ ಸಮಯವಾಗಿದ್ರೆ ಯಾವುದಾದ್ರೂ ವಾಹನಗಳು ಹಾಯ್ದು ಅನಾಹುತ ಸಂಭವಿಸೋ ಸಾಧ್ಯತೆಗಳಿದ್ದವು. ಹೀಗಾಗಿ ಪಿಎಸ್‍ಐ ಮಹಾಂತೇಶ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  • ಅಪಘಾತಕ್ಕೆ ಬಲಿಯಾದ ಶಿಕ್ಷಕನ ಬಳಿಯಿದ್ದ ಒಂದೂವರೆ ಲಕ್ಷ ಮರಳಿಸಿದ ಪಿಎಸ್‍ಐ

    ಅಪಘಾತಕ್ಕೆ ಬಲಿಯಾದ ಶಿಕ್ಷಕನ ಬಳಿಯಿದ್ದ ಒಂದೂವರೆ ಲಕ್ಷ ಮರಳಿಸಿದ ಪಿಎಸ್‍ಐ

    – ಆಂಜನೇಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ

    ಹಾವೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶಿಕ್ಷಕನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಮೊಬೈಲ್ ಫೋನ್ ನ್ನ ಮೃತ ಶಿಕ್ಷಕನ ಪತ್ನಿಗೆ ಮರಳಿಸಿ ಪಿಎಸ್‍ಐ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಸ್ಸೀಮ ಆಲದಕಟ್ಟಿ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಶಿಕ್ಷಕ 45 ವರ್ಷದ ಪರಶುರಾಮ ಕೋಲೂರ ಮೃತಪಟ್ಟಿದ್ರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಪಿಎಸ್‍ಐ ಆಂಜನೇಯ, ಮೃತನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಒಂದು ಮೊಬೈಲ್ ಫೋನ್ ನ್ನ ಮೃತನ ಪತ್ನಿ ದೀಪಾಳಿಗೆ ಒಪ್ಪಿಸಿದ್ದಾರೆ.

    ಹಣ ಮತ್ತು ಮೊಬೈಲ್ ಮರಳಿಸಿ ಮಾನವೀಯತೆ ಮೆರೆದ ಪಿಎಸ್‍ಐ ಆಂಜನೇಯ ಕಾರ್ಯಕ್ಕೆ ಮೃತನ ಪತ್ನಿ ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಗಾಂಜಾ ದಂಧೆಕೋರರಿಂದ ಪಿಎಸ್‍ಐ ಮೇಲೆ ಹಲ್ಲೆ

    ಗಾಂಜಾ ದಂಧೆಕೋರರಿಂದ ಪಿಎಸ್‍ಐ ಮೇಲೆ ಹಲ್ಲೆ

    ಶಿವಮೊಗ್ಗ: ಗಾಂಜಾ ಮಾರಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ್ದ ಪಿಎಸ್‍ಐ ಹಾಗೂ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಂಡಘಟ್ಟ ಗ್ರಾಮದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಆದರೂ ಪೊಲೀಸರು ಗಾಂಜಾ ದಂಧೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದಿದ್ದರು.

    ಈ ನಂತರ ಎಚ್ಚೆತ್ತ ಇಲಾಖೆ ಜಿಲ್ಲೆಯ ಎಲ್ಲೆಡೆ ದಾಳಿ ನಡೆಸಿ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕುಂಸಿ ಠಾಣೆ ಪಿಎಸ್‍ಐ ನವೀನ್ ಮಠಪತಿ ಹಾಗೂ ಸಿಬ್ಬಂದಿ ಮಂಡಘಟ್ಟ ಗ್ರಾಮಕ್ಕೆ ತೆರಳಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಸಹೋದರರಾದ ಮಧು ಹಾಗೂ ಮನುನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಪಿಎಸ್‍ಐ ನವೀನ್ ಮಠಪತಿ ಹಾಗೂ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

    ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿದ್ದ ಪಿಎಸ್‍ಐ ನವೀನ್ ಮಠಪತಿ ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಶಾಂತರಾಜ್ ಅವರು ಪಿಎಸ್‍ಐ ಅವರಿಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ ಈಗಾಗಲೇ ಆರೋಪಿಗಳ ಪತ್ತೆಗೆ ಶಿವಮೊಗ್ಗ ಗ್ರಾಮಾಂತರ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸುವುದಾಗಿ ತಿಳಿಸಿದ್ದಾರೆ.

  • ಯಾದಗಿರಿಯಲ್ಲಿ ಪಿಎಸ್‍ಐ ಸೇರಿ 16 ಜನರಿಗೆ ಕೊರೊನಾ, ಠಾಣೆ ಸೀಲ್‍ಡೌನ್

    ಯಾದಗಿರಿಯಲ್ಲಿ ಪಿಎಸ್‍ಐ ಸೇರಿ 16 ಜನರಿಗೆ ಕೊರೊನಾ, ಠಾಣೆ ಸೀಲ್‍ಡೌನ್

    ಯಾದಗಿರಿ: ಮಹಾರಾಷ್ಟ್ರ ಮತ್ತು ಬೆಂಗಳೂರು ಕಂಟಕದಿಂದ ಕೊರೊನಾದ ಹಾಟ್ ಸ್ಪಾಟ್ ಆಗಿರುವ ಯಾದಗಿರಿ, 1,300 ಕೊರೊನಾ ಪ್ರಕರಣಗಳ ಮೂಲಕ ನಾಗಲೋಟ ಮುಂದುವರೆಸಿದೆ.

    ಇಷ್ಟು ದಿನ ಜಿಲ್ಲೆಗೆ ಮರಳಿದ ಕಾರ್ಮಿಕರಿಗೆ ಅಂಟಿಕೊಂಡಿದ್ದ ಕೊರೊನಾ, ಈಗ ಕೊರೊನಾ ವಾರಿಯರ್ಸ್‍ಗೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಕೃಷಿ ಇಲಾಖೆ ಸೇರಿದಂತೆ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳನ್ನು ಕೊರೊನಾ ಟಾರ್ಗೆಟ್ ಮಾಡಿದೆ.

    ಶಹಪುರ, ಸುರಪುರ, ಬಿ.ಗುಡಿ ಪೊಲೀಸ್ ಠಾಣೆಗಳಿಗೆ ಕೊರೊನಾ ಕಾಲಿಟ್ಟಿದ್ದು, ಸೀಲ್‍ಡೌನ್ ಮಾಡಲಾಗಿದೆ. ಇದೀಗ ಮತ್ತೆ ಗುರುಮಿಠ್‍ಕಲ್ ಠಾಣೆಗೆ ವಕ್ಕರಿಸಿದೆ. ಠಾಣೆ ಪಿಎಸ್‍ಐ ಸೇರಿದಂತೆ ಒಟ್ಟು 16 ಸಿಬ್ಬಂದಿಗೆ ಕೊರೊನಾ ಧೃಡ ಪಟ್ಟಿದೆ. ಹೀಗಾಗಿ ಠಾಣೆಯನ್ನು ಸೀಲ್ ಮಾಡಿ, ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಾಯಕ್ಕಾಗಿ ಠಾಣೆ ಸಮೀಪದಲ್ಲಿ ದೂರು ಸ್ವೀಕರಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 29,383 ಜನರ ಮಾದರಿ ಪಡೆಯಲಾಗಿದೆ. ಈ ಪೈಕಿ 1,300 ಪಾಸಿಟಿವ್, 27,208 ನೆಗೆಟಿವ್ ಫಲಿತಾಂಶ ಬಂದಿದೆ. ಇನ್ನೂ 274 ಪ್ರಕರಣಗಳು ಸಕ್ರೀಯವಾಗಿದ್ದು, 893 ಜನ ಕೊರೊನಾ ಗೆದ್ದಿದ್ದಾರೆ.

  • ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐಗೆ ಕೊರೊನಾ ದೃಢ- ಸಚಿವೆಗೂ ಆತಂಕ

    ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐಗೆ ಕೊರೊನಾ ದೃಢ- ಸಚಿವೆಗೂ ಆತಂಕ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ(35)ಗೂ ಕೊರೊನಾ ಸೋಂಕು ತಗುಲಿದೆ.

    ಇವರು ಗ್ರಾಮಾಂತರ ಠಾಣೆಯ ಪಿಎಸ್‍ಐ ಆಗಿದ್ದು, ಶಿಡ್ಲಘಟ್ಟ ನಗರ ಠಾಣೆಯ ಪ್ರಭಾರ ಪಿಎಸ್‍ಐ ಸಹ ಆಗಿದ್ದರು. ಶಿಡ್ಲಘಟ್ಟ ತಾಲೂಕಿನ ಗ್ರಾಮಾಂತರ ಸೇರಿದಂತೆ ನಗರದಲ್ಲಿ ಸಹ 10 ಸಕ್ರಿಯ ಪ್ರಕರಣಗಳಿದ್ದು, ಕಂಟೈನ್ಮೆಂಟ್ ಝೋನ್ ನಲ್ಲಿ ಈ ಪಿಎಸ್‍ಐ ಕರ್ತವ್ಯ ನಿರ್ವಹಿಸಿದ್ದರು. ಕಂಟೈನ್ಮೆಂಟ್ ಝೋನ್ ನಲ್ಲಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ರ‌್ಯಾಂಡಮ್ ಟೆಸ್ಟ್  ಮಾಡಿಸಿದ್ದು, ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.

    ಸದ್ಯ ಸೋಂಕಿತ ಪಿಎಸ್‍ಐ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈದೀಗ ಶಿಡ್ಲಘಟ್ಟ ಗ್ರಾಮಾಂತರ ಹಾಗೂ ನಗರ ಠಾಣೆಯ ಸಿಬ್ಬಂದಿಗೂ ಕೊರೊನಾ ಆತಂಕ ಶುರುವಾಗಿದೆ. ಪಿಎಸ್‍ಐ ಪತ್ನಿ ಹಾಗೂ ಮಕ್ಕಳನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಸಹ ಪರೀಕ್ಷೆಗೆ ಓಳಪಡಿಸಲಾಗುತ್ತಿದೆ.

    ಪಿಎಸ್‍ಐಗೆ ಸೋಂಕು ದೃಢಪಡುವ ಮುನ್ನಾದಿನ ಶಿಡ್ಲಘಟ್ಟ ನಗರ ಹೊರವಲಯದ ಹನುಮಂತಪುರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸಹ ಭೇಟಿ ಮಾಡಿದ್ದರು. ಈ ವೇಳೆ ಸೋಂಕಿತ ಪಿಎಸ್‍ಐ ಸಚಿವರ ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪೊಲೀಸ್ ಇಲಾಖೆಯ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮಕ್ಕೂ ಸೋಂಕಿತ ಪಿಎಸ್‍ಐ ಭಾಗಿಯಾಗಿದ್ದರು. ಹೀಗಾಗಿ ಇವೆರೆಲ್ಲರಿಗೂ ಈಗ ಕೊರೊನಾ ಆತಂಕ ಶುರುವಾಗಿದೆ.

    ಶಿಡ್ಲಘಟ್ಟ ತಾಲೂಕಿನಲ್ಲಿ 11 ಕೊರೊನಾ ಸೋಂಕಿತ ಪ್ರಕರಣಗಳಾಗಿವೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗೆ ತಗುಲಿದ ಮೂರನೇ ಪ್ರಕರಣ ಇದಾಗಿದೆ. ಕೊರೊನಾ ವಾರಿಯರ್ ಆಗಿ ಹಗಲಿರುಳು ಶ್ರಮಿಸುತ್ತಿದ್ದ ಪಿಎಸ್‍ಐ ಸೋಂಕಿಗೆ ಗುರಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಪಿಎಸ್‍ಐ ಕರ್ತವ್ಯ ನಿರ್ವಹಿಸಿದ್ದ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅವರ ಮನೆ ಸೇರಿದಂತೆ ವಾಹನಗಳಿಗೆ ಸೋಂಕು ನಿವಾರಕ ರಾಸಾಯನಿಕ ಸಿಂಪಡನೆ ಮಾಡಲಾಗಿದೆ.

  • ಲಾಕ್‍ಡೌನ್ ಸಡಿಲಿಕೆ ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರೋ ಪಿಎಸ್‍ಐ

    ಲಾಕ್‍ಡೌನ್ ಸಡಿಲಿಕೆ ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರೋ ಪಿಎಸ್‍ಐ

    ಚಿಕ್ಕೋಡಿ: ಕೊರೊನಾ ಲಾಕ್‍ಡೌನ್ ಘೋಷಣೆ ಆದಾಗಿನಿಂದಲೂ ಲಾಕ್‍ಡೌನ್ ಜಾರಿ ಮಾಡಲು ಹಗಲಿರಳು ಶ್ರಮಿಸಿದ ಪೊಲೀಸರು ಲಾಕ್‍ಡೌನ್ ಸಡಿಲಿಕೆಯ ನಂತರ ರಿಲ್ಯಾಕ್ಸ್ ಆಗುತ್ತಿದ್ದಾರೆ.

    ಕೆಲ ಪೊಲೀಸರು ಲಾಕ್‍ಡೌನ್ ಸಡಿಲಿಕೆ ನಂತರ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯುತ್ತಿದ್ದರೆ, ಕೆಲವರು ಆಟ ಆಡಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸವನ್ನು ಕಳೆಯುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ಜವಾಬ್ದಾರಿ ಸೇರಿದಂತೆ ಹುಕ್ಕೇರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಷ್ಟೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು, ಇಷ್ಟೆಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಈ ನಡುವೆ ತಮ್ಮ ಬಿಡುವಿನ ವೇಳೆಯಲ್ಲಿ ದೈನಂದಿನ ಜಂಜಾಟಗಳನ್ನು ಮರೆತು ಅದ್ಭುತವಾಗಿ ಹಾರ್ಮೋನಿಯಂ ನುಡಿಸುತ್ತಾರೆ.

    ಹಾರ್ಮೋನಿಯಂ ನುಡಿಸುವುದನ್ನು ಯಾವುದೇ ಗುರು ಇಲ್ಲದೇ ಯುಟ್ಯೂಬ್ ನೋಡಿ ನುಡಿಸಲು ಕಲಿತಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆದ ನಂತರವೂ ಇವರ ತಮ್ಮ ಕರ್ತವ್ಯ ಮುಗಿಸಿ ಬಂದ ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸ ಕಳೆಯುತ್ತಿದ್ದರು. ಲಾಕ್‍ಡೌನ್ ಜಾರಿ ಇದ್ದ ಸಂದರ್ಭದಲ್ಲಿ ತಮ್ಮ 2 ವರ್ಷದ ಮಗಳು ಆಸ್ಪತ್ರೆಯಲ್ಲಿ ಇದ್ದರು, ಪತ್ನಿಯನ್ನು ಮಾತ್ರ ಆಸ್ಪತ್ರೆಯಲ್ಲಿ ಬಿಟ್ಟು ಶಿವಾನಂದ ಗುಡಗನಟ್ಟಿ ಲಾಕ್‍ಡೌನ್ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಕಾರಣವಾಗಿದ್ದರು.

  • 20 ಲಕ್ಷ ರೂ. ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಎಸ್‍ಐ

    20 ಲಕ್ಷ ರೂ. ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಎಸ್‍ಐ

    – ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

    ಶಿವಮೊಗ್ಗ: ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಜಿಲ್ಲೆಯ ಕುಂಸಿ ಠಾಣೆಯ ಪಿಎಸ್‍ಐ ನವೀನ್ ಮಠಪತಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ಮೇ 23 ರಂದು ಜಿಲ್ಲೆಯ ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದರು. ಮೃತಪಟ್ಟ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಭಾರತಿ ಎಂದು ಗುರುತಿಸಲಾಗಿತ್ತು. ದಂಪತಿ ಕಾರಿನಲ್ಲಿ ತುಪ್ಪೂರಿನಿಂದ ಕಡೂರಿಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು.

    ಪತ್ನಿ ಕಳೆದುಕೊಂಡು ದುಃಖದಲ್ಲಿದ್ದ ಸುಬ್ಬಯ್ಯನವರಿಗೆ ಕುಂಸಿ ಠಾಣೆ ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಪೊಲೀಸರು ಯಾಕೋ ಕರೆಯುತ್ತಿದ್ದಾರೆ ಏನಿರಬಹುದು ಎಂದು ಸುಬ್ಬಯ್ಯನವರ ಜೊತೆಗೆ ಕುಟುಂಬದ ಐದು ಜನ ಭಯದಿಂದಲೇ ಠಾಣೆಗೆ ಹೋಗಿದ್ದಾರೆ. ಈ ವೇಳೆ ಪಿಎಸ್‍ಐ ನವೀನ್ ಮಠಪತಿ ಅವರು ಅಪಘಾತವಾದ ಸ್ಥಳದಲ್ಲಿ ಸಿಕ್ಕಿತ್ತು ತೆಗೆದುಕೊಳ್ಳಿ ಎಂದು ಸುಮಾರು 15-20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನೀಡಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಮೃತ ಭಾರತಿ ಬಂಗಾರದ ಒಡವೆ ತೆಗೆದುಕೊಂಡು ಬಂದಿರುವುದನ್ನು ಪತಿ ಸುಬ್ಬಯ್ಯ ಅವರಿಗೆ ಹೇಳಿರಲಿಲ್ಲ. ಪತ್ನಿ ಕಳೆದುಕೊಂಡ ದುಃಖದಲ್ಲಿದ್ದ ಸುಬ್ಬಯ್ಯ ಚಿನ್ನಾಭರಣದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಪಿಎಸ್‍ಐ ಸ್ವಯಂ ಪ್ರೇರಿತರಾಗಿ ಹಿಂದಿರುಗಿಸಿ, ಇತರರಿಗೆ ಪ್ರೇರಣೆ ಆಗಿದ್ದಾರೆ. ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರಕ್ತದಾನ ಮಾಡಿ ಮಾದರಿಯಾದ ಪಿಎಸ್‍ಐ

    ರಕ್ತದಾನ ಮಾಡಿ ಮಾದರಿಯಾದ ಪಿಎಸ್‍ಐ

    ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿರುವಾಗಲೇ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲೆಯ ಗುಡಗೇರಿ ಪೊಲೀಸ್ ಠಾಣೆಯ ಪಿಎಸ್‍ಐ ನವೀನ ಜಕ್ಕಲಿಯವರು ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡುವ ಮೂಲಕ ರೋಗಿಯೊಬ್ಬರಿಗೆ ಜೀವದಾನ ಮಾಡಿದ್ದಾರೆ. ವಿಲಿಯಂ ವರ್ಗೀಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವ ಇರುವುದರಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿ ನವೀನ ಜಕ್ಕಲಿಯವರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ಹಿನ್ನೆಲೆ ವಾರಿಯರ್ಸ್‍ಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪೊಲೀಸ್ ಅಧಿಕಾರಿ ಸಾರ್ವಜನಿಕ ಸೇವೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಿಷೇಧಾಜ್ಞೆ ಉಲ್ಲಂಘನೆ- ಪ್ರಶ್ನಿಸಿದ ಮಹಿಳಾ ಪಿಎಸ್‍ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನ ದೌರ್ಜನ್ಯ

    ನಿಷೇಧಾಜ್ಞೆ ಉಲ್ಲಂಘನೆ- ಪ್ರಶ್ನಿಸಿದ ಮಹಿಳಾ ಪಿಎಸ್‍ಐ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷನ ದೌರ್ಜನ್ಯ

    ಮಂಡ್ಯ: ಕೊರೊನಾ ವಾರಿಯರ್ಸ್ ಮೇಲೆ ದೌರ್ಜನ್ಯ ಮುಂದುವರಿದಿದ್ದು, ಮಂಡ್ಯದಲ್ಲಿ ರಾಜಕೀಯ ಪುಡಾರಿಗಳು ಪೊಲೀಸರ ಮೇಲೆ ದೌರ್ಜನ್ಯ ಎಸಗಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಮಹಿಳಾ ಪ್ರೊಬೇಷನರಿ ಪಿಎಸ್‍ಐ ನಿಖಿತಾ ಮೇಲೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ದೌರ್ಜನ್ಯ ಎಸಗಿದ್ದಾರೆ. ವಿಜಯ್‍ಕುಮಾರ್ ಸರ್ಕಾರದ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮಂಗಳವಾರ ಸಂಜೆ ಏಳು ಗಂಟೆಯ ನಂತರ ಕೆ.ಆರ್.ಪೇಟೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ. ಈ ವೇಳೆ ವಿಜಯ್‍ಕುಮಾರ್ ಕಾರು ತಡೆದ ನಿಖಿತಾ, ನಿಷೇಧಾಜ್ಞೆ ಜಾರಿಯಲ್ಲಿದೆ ಓಡಾಟ ಮಾಡಬಾರದು ಎಂದಿದ್ದಾರೆ. ಈ ವೇಳೆ ವಿಜಯ್ ಕುಮಾರ್ ಆವಾಜ್ ಹಾಕಿದ್ದಾರೆ.

    ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನ್ನ ನೀನು ಕೇಳುವ ಹಾಗೆ ಇಲ್ಲ. ನಿನ್ನದು ಅತೀಯಾಗುತ್ತಿದೆ. ನೀನು ಪಿಎಸ್‍ಐ ಅಲ್ಲ ಇನ್ನೂ ಪ್ರೊಬೇಷನರಿ. ನಾನು ಸಿಎಂ, ಡಿಸಿಎಂ, ಡಿಸಿ, ಎಸ್‍ಪಿಗೆ ಕರೆ ಮಾಡುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದೀಯಾ ಅಂತಾ ದೂರು ನೀಡುತ್ತೇನೆ. ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದು ವಿಜಯ್‍ಕುಮಾರ್ ಬೆದರಿಸಿದ್ದಾನೆ.

    ಇದೀಗ ಅನಿತಾ ಅವರು ದೂರು ನೀಡಿದ್ದು, ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ವಿಜಯ್‍ಕುಮಾರ್ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಜಯ್‍ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಂತರ ಸ್ಟೇಷನ್ ಬೇಲ್‍ನಲ್ಲಿ ವಾಪಸ್ ಕಳುಹಿಸಿದ್ದಾರೆ. ರಾಜಕೀಯ ಪುಡಾರಿಗಳಿಗೆ ಜೈಲಿಲ್ಲ, ಸ್ಟೇಷನ್ ಬೇಲ್ ಸಿಕ್ಕಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾರ್ಯಕ್ರಮಕ್ಕೆ ತೆರಳಿ ಸನ್ಮಾನ ಸ್ವೀಕರಿಸಿ ಪಿಎಸ್‍ಐ ಎಡವಟ್ಟು

    ಕಾರ್ಯಕ್ರಮಕ್ಕೆ ತೆರಳಿ ಸನ್ಮಾನ ಸ್ವೀಕರಿಸಿ ಪಿಎಸ್‍ಐ ಎಡವಟ್ಟು

    – ಕಾರ್ಯಕ್ರಮದಲ್ಲಿ ಸಾವಿರ ಜನ ಭಾಗಿ
    – ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಪಾಲನೆ ಇಲ್ಲ

    ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದರೆ ಇನ್ನೊಂದೆಡೆ ಜಿಲ್ಲೆಯ ಚಡಚಣ ಪಿಎಸ್‍ಐ ಮಹಾ ಎಡವಟ್ಟು ಮಾಡಿದ್ದಾರೆ. ಲಾಕ್‍ಡೌನ್ ನಡುವೆ ಚಡಚಣ ಪಿಎಸ್‍ಐ ಮಹಾದೇವ ಯಲಿಗಾರ್ ಭರ್ಜರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲದೆ ಸನ್ಮಾನ ಸ್ವೀಕರಿಸಿದ್ದರು.

    ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಕೆಲ ಜನ ಕೊರೊನ ವಾರಿಯರ್ಸ್‍ಗೆಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮ ತಡೆಯುವುದನ್ನು ಬಿಟ್ಟು ಖುದ್ದು ತಾವು ಹಾಗೂ ತಮ್ಮ ಸಿಬ್ಬಂದಿ ಸಮೇತ ಹೋಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ 1 ಸಾವಿರಕ್ಕೂ ಅಧಿಕ ಜನರು ಭಾಗಿ ಆಗಿದ್ದರು.

    ಮಹಾರಾಷ್ಟ್ರದ ಗಡಿಯಾದ ಕಾರಣ ಚಡಚಣ ತಾಲೂಕಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್‍ಡೌನ್ ಮುಂದುವರೆಸಿದೆ. ಆದರೆ ರಾಜ್ಯ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಕಾರ್ಯಕ್ರಮ ನಡೆಸಲಾಗಿದೆ. ಶಿಸ್ತು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯಿಂದಲೇ ಮಹಾ ಯಡವಟ್ಟು ನಡೆದಿದೆ.