Tag: PSI

  • ಪಿಎಸ್​ಐ ಆಗುವ ಛಲ- 1.36 ನಿಮಿಷದಲ್ಲಿ 400 ಮೀಟರ್ ಓಡಿ ಪಾಸಾದ ಗರ್ಭಿಣಿ!

    ಪಿಎಸ್​ಐ ಆಗುವ ಛಲ- 1.36 ನಿಮಿಷದಲ್ಲಿ 400 ಮೀಟರ್ ಓಡಿ ಪಾಸಾದ ಗರ್ಭಿಣಿ!

    ಕಲಬುರಗಿ: ಗರ್ಭಿಣಿಯೊಬ್ಬರು 1.36 ನಿಮಿಷದಲ್ಲಿ 400 ಮೀಟರ್ ಓಡಿದ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.

    ಆಗಸ್ಟ್ 11 ರಂದು ಕಲಬುರಗಿ ನಗರದ ಡಿಆರ್ ಪರೇಡ್ ಮೈದಾನದಲ್ಲಿ ಪಿಎಸ್‍ಐ ನೇಮಕಾತಿಯ ದೈಹಿಕ ಪರೀಕ್ಷೆ ನಡೆದಿತ್ತು. ಇದರಲ್ಲಿ ಅಶ್ವಿನಿ ಸಂತೋಷ್ ಕೋರೆ(24) ಪಾಲ್ಗೊಂಡಿದ್ದರು.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದ ನಿವಾಸಿಯಾಗಿರುವ ಅಶ್ವಿನಿ 10 ವಾರಗಳ ಗರ್ಭಿಣಿಯಾಗಿದ್ದರೂ ಓಟದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ 1.36 ನಿಮಿಷದಲ್ಲಿ 400 ಮಿಟರ್ ಓಡುವಲ್ಲಿ ಯಶಸ್ವಿಯಾಗಿ ಇದೀಗ ಸುದ್ದಿಯಾಗಿದ್ದಾರೆ.

    ಅಶ್ವಿನಿಯವರು ಪಿಎಸ್‍ಐ ಆಗಲೇಬೇಕು ಅನ್ನೋ ಹಠದಿಂದ ಓಡಿದ್ದಾರೆ. ಎರಡು ನಿಮಿಷದಲ್ಲಿ ಗುರಿ ಮುಟ್ಟಬೇಕಾಗಿತ್ತು. ಆದರೆ ನಿಗದಿತ ಸಮಯಕ್ಕೂ ಮೊದಲೇ ಓಡಿ ಗುರಿ ಮುಟ್ಟಿದ್ದಾರೆ. ಈ ಹಿಂದೆ ಎರಡು ಬಾರಿ ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಶ್ವಿನಿ ಹುದ್ದೆ ತಪ್ಪಿಸಿಕೊಂಡಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಇದೀಗ ಮತ್ತೆ ದೈಹಿಕ ಪರೀಕ್ಷೆ ಪಾಸಾಗಿದ್ದಾರೆ.

     

  • ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ

    ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ

    ಚಿಕ್ಕಮಗಳೂರು: ಮಲೆನಾಡ ಮಳೆ ಅಬ್ಬರಕ್ಕೆ ಮನೆ ಸುತ್ತಲೂ ನೀರು ತುಂಬಿಕೊಂಡು ದ್ವೀಪದಂತಿದ್ದ ಮನೆಯಲ್ಲಿದ್ದ ನಾಲ್ಕು ತಿಂಗಳ ಹಸುಗೂಸು ಸೇರಿದಂತೆ 9 ಜನರನ್ನು ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಆಲಂದೂರು ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಕಡಹೀನಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲಂದೂರು ಗ್ರಾಮದ ಮಂಗಳ, ಶೇಖರ್, ಲಲಿತಾ, ಚಂದ್ರಿಕಾ, ವಿಷ್ಣು, ಗೀತಾ ಅವರ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಇವರ ಜೊತೆ 4 ತಿಂಗಳ ಹಸುಗೂಸು ಸಹ ಸಿಲುಕಿತ್ತು. ಮನೆಯ ಸುತ್ತಲೂ ನೀರು ತುಂಬಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಹೋದ ಎನ್.ಆರ್.ಪುರ ಪಿಎಸ್‍ಐ ದಿಲೀಪ್ ಕುಮಾರ್, ಅಗ್ನಿಶಾಮಕ ದಳವರನ್ನ ಸ್ಥಳಕ್ಕೆ ಕರೆಸಿದ್ದರು.

    ಮನೆಯ ಸುತ್ತಲೂ ನೀರು ತುಂಬಿಕೊಂಡು ಜಲಾವೃತಗೊಂಡಿದ್ದು, ಮರಗಳು ಸಹ ಅಡ್ಡಾದಿಡ್ಡಿ ಬೆಳೆದಿದ್ದವು. ಮಳೆ ನೀರು ರಭಸವಾಗಿ ಹರಿಯುತ್ತಿದ್ದರಿಂದ ದೋಣಿ ಮೂಲಕ ರಕ್ಷಣೆ ಅಸಾಧ್ಯವಾಗಿತ್ತು. ಕೂಡಲೇ ದೊಡ್ಡ ಮರವನ್ನು ಕತ್ತರಿಸಿ, ನೆಲಕ್ಕೆ ಉರುಳಿಸಿ ಹಗ್ಗ ಕಟ್ಟಿಕೊಂಡು ಅದೇ ಮರದ ಮೇಲೆ ಹೋಗಿ ಅಗ್ನಿ ಶಾಮಕದಳ, ಪೊಲೀಸರು ಹಾಗೂ ಗ್ರಾಮಸ್ಥರು 8 ಜನ ಹಾಗೂ 4 ತಿಂಗಳ ಮಗುವನ್ನು ರಕ್ಷಿಸಿದ್ದಾರೆ.

    ಎನ್.ಆರ್.ಪುರ ಪಿಎಸ್‍ಐ ಸಮಯ ಪ್ರಜ್ಞೆಯಿಂದ 9 ಜನರ ಜೀವ ಉಳಿದಿದೆ. ಪೊಲೀಸರು ಸ್ಥಳಕ್ಕೆ ಹೋಗುವುದು ಸ್ವಲ್ಪ ತಡವಾಗಿದ್ದರೂ ಭಾರೀ ಜೀವಹಾನಿ ಸಂಭವಿಸುವ ಸಾಧ್ಯತೆ ಇತ್ತು. ಪೊಲೀಸರು ರಕ್ಷಿಸಿದ 9 ಜನರನ್ನೂ ಅವರ ಸಂಬಂಧಿಗಳ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

    ತಾಲೂಕು ಆಡಳಿತದಿಂದ ಮುಂಜಾಗೃತ ಕ್ರಮವಾಗಿ ಮುತ್ತಿನಕೊಪ್ಪ ಬಿಸಿಎಂ ಹಾಸ್ಟೆಲ್‍ನಲ್ಲಿ ನಿರಾಶ್ರಿತ ಕೇಂದ್ರ ತೆರೆದು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಅಡುಗೆಯವರು ಹಾಸ್ಟೆಲ್‍ನಲ್ಲಿ ತಂಗಿದ್ದು, ಮಳೆಯಿಂದ ಯಾರಿಗಾದರೂ ಸಮಸ್ಯೆಯಾದರೆ ಹಾಸ್ಟೆಲ್‍ಗೆ ಬಂದು ಉಳಿಯಬಹುದು. ತಾಲೂಕು ಆಡಳಿತ ಕೂಡ ಅಧಿಕಾರಿಗಳಿಗೆ ಅಲರ್ಟ್ ಆಗಿರಲು ಸೂಚಿಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್‍ಐ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್‍ಐ ಅಮಾನತು

    ರಾಯಚೂರು: ಹೊಟ್ಟೆ ಪಾಡಿಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿಯ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದ ಪಿಎಸ್‍ಐನ್ನು ಅಮಾನತು ಮಾಡಲಾಗಿದೆ.

    ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಮಾಡಲಾಗಿತ್ತು. ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಅಲ್ಲಲ್ಲಿ ವ್ಯಾಪಾರ ನಡೆಸುತ್ತಿದ್ದ, ತರಕಾರಿ ವ್ಯಾಪಾರಿಗಳನ್ನ ಪೊಲೀಸರು ಜಾಗ ಖಾಲಿ ಮಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಪಿಎಸ್‍ಐ ಅಝಮ್ ತರಕಾರಿ ಹಾಗೂ ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದರು. ಇದನ್ನೂ ಓದಿ: ವ್ಯಾಪಾರಿಗಳ ಮೇಲೆ ಖಾಕಿ ಖದರ್-ಕಾಲಿನಿಂದ ತರಕಾರಿ ಒದ್ದು ಪಿಎಸ್‍ಐ ದರ್ಪ

    ವೀಕೆಂಡ್ ಕರ್ಫ್ಯೂ ನೆಪದಲ್ಲಿ ಬಡ ವ್ಯಾಪಾರಿಗಳ ಜೊತೆ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಅಸಭ್ಯ ವರ್ತನೆ ತೋರಿದ ಅಝಮ್‍ನನ್ನು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಕಷ್ಟದಲ್ಲಿರುವ ಮಹಿಳೆಯರು, ವೃದ್ಧೆಯರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ವೀಕೆಂಡ್ ಕರ್ಫ್ಯೂ ಕರ್ತವ್ಯ ನಿರ್ವಹಿಸುವ ನೆಪದಲ್ಲಿ ಬಡ ಮಹಿಳಾ ವ್ಯಾಪಾರಿಗಳ ಮೇಲೆ ರಾಯಚೂರಿನ ಸದರ ಬಜಾರ್ ಠಾಣೆ ಪಿಎಸ್‍ಐ ಅಝಮ್ ಎಂಬ ಪೊಲೀಸ್ ಅಧಿಕಾರಿ ತಮ್ಮ ಅಹಂಕಾರ ತೋರಿಸಿದ್ದರು.

  • ನಿವೃತ್ತಿಗೆ ಎರಡು ತಿಂಗಳು ಇರುವಾಗಲೇ ಪಿಎಸ್‍ಐ ಕೊರೊನಾಗೆ ಬಲಿ

    ನಿವೃತ್ತಿಗೆ ಎರಡು ತಿಂಗಳು ಇರುವಾಗಲೇ ಪಿಎಸ್‍ಐ ಕೊರೊನಾಗೆ ಬಲಿ

    ಶಿವಮೊಗ್ಗ: ನಿವೃತ್ತಿಗೆ ಕೇವಲ ಎರಡು ತಿಂಗಳು ಇರುವಾಗ ಕೊರೊನಾ ಸೋಂಕು ತಗುಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

    ಮೃತಪಟ್ಟವರನ್ನು ಜಿಲ್ಲೆಯ ಭದ್ರಾವತಿಯ ಸಂಚಾರಿ ಠಾಣೆ ಪಿಎಸ್‍ಐ ರಮೇಶ್ ಕೆ.ಬಿ.(60) ಎಂದು ಗುರುತಿಸಲಾಗಿದೆ. ಮೃತ ಪಿಎಸ್ ಐ ರಮೇಶ್ ಮೂಲತಃ ಸಾಗರ ತಾಲೂಕಿನ ಬಾಳೆಗುಂಡಿ ಗ್ರಾಮದವರಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಮೇಶ್ ಅವರಿಗೆ ಮೇ.14 ರಂದು ಕೊರೊನಾ ಸೋಂಕು ದೃಢವಾಗಿತ್ತು. ಸೋಂಕು ಕಾಣಿಸಿಕೊಂಡ ಬಳಿಕ ಒಂದು ವಾರಗಳ ಕಾಲ ಹೋಮ್ ಐಸಲೋಷನ್ ಗೆ ಒಳಗಾಗಿದ್ದರು.

    ಹೋಮ್ ಐಸಲೋಷನ್ ನಲ್ಲಿರುವಾಗ ಉಸಿರಾಟದ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಹೀಗಾಗಿ ರಮೇಶ್ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೃತ ರಮೇಶ್ ಅವರಿಗೆ ಕೋವಿಡ್ ಸೋಂಕಿನ ಜೊತೆಗೆ ಹೃದಯ ಸಂಬಂಧಿ ಕಾಯಿಲೆ ಸಹ ಇದ್ದಿದ್ದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.10.66ಕ್ಕೆ ಇಳಿಕೆ- ಇಂದು 16,068 ಹೊಸ ಪ್ರಕರಣ, 364 ಸಾವು

    ಶುಕ್ರವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರು ಆಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬದುಕುವುದು ಕಷ್ಟವಿದೆ ಮನೆಗೆ ಕರೆದುಕೊಂಡು ಹೋಗಿ ಎಂದು ಮೃತ ರಮೇಶ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸ್ವಗ್ರಾಮ ಸಾಗರ ತಾಲೂಕಿನ ಬಾಳೆಗುಂಡಿಗೆ ಕರೆದುಕೊಂಡು ಹೋಗುತ್ತಿರುವಾಗಲೇ ಮಾರ್ಗ ಮಧ್ಯೆ ಪಿಎಸ್ ಐ ರಮೇಶ್ ಮೃತಪಟ್ಟಿದ್ದಾರೆ.

    ಮೃತ ಪಿಎಸ್ ಐ ರಮೇಶ್ ಜುಲೈ 31ಕ್ಕೆ ನಿವೃತ್ತಿ ಹೊಂದುತ್ತಿದ್ದರು. ನಿವೃತ್ತಿ ನಂತರ ಕುಟುಂಬ ಸದಸ್ಯರೊಂದಿಗೆ ಆನಂದದ ಜೀವನ ಕಳೆಯುವ ಜೊತೆಗೆ, ವಿಶ್ರಾಂತಿ ಪಡೆಯಬೇಕು ಎಂಬ ಕನಸು ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿವೃತ್ತಿಗೆ ಕೇವಲ ಎರಡು ತಿಂಗಳು ಇರುವಾಗಲೇ ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಮೃತ ರಮೇಶ್ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.

  • PSI ಮೂತ್ರ ಕುಡಿಸಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ: ಐಜಿಪಿ ದೇವ್ ಜ್ಯೋತಿ ರೇ

    PSI ಮೂತ್ರ ಕುಡಿಸಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ: ಐಜಿಪಿ ದೇವ್ ಜ್ಯೋತಿ ರೇ

    -ಪಿಎಸ್ಐ ವರ್ಗಾವಣೆ, ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

    ಚಿಕ್ಕಮಗಳೂರು: ವಿಚಾರಣೆಗೆಂದು ಕರೆತಂದು ಪಿಎಸ್‍ಐ ಬೇರೆ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಯುವಕನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದನು. ಆ ಪೊಲೀಸ್ ಠಾಣೆಗೆ ಇಂದು ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

    ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು, ಇದು ತುಂಬಾ ಗಂಭೀರವಾದ ಪ್ರಕರಣ. ಈ ಜಿಲ್ಲೆಯಲ್ಲಿ ಇಂತಹ ಪ್ರಕರಣ ಇದೇ ಮೊದಲು. ಈ ದೂರನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಜಿಲ್ಲಾ ಪೊಲೀಸ್ ಮೇಲೆಯೇ ಕಂಪ್ಲೇಂಟ್ ಇರೋದ್ರಿಂದ ಜಿಲ್ಲೆಯ ಪೊಲೀಸರೇ ವಿಚಾರಣೆ ನಡೆಸೋದು ಬೇಡ ಎಂದು ಸಿಐಡಿಗೆ ಹಸ್ತಾಂತರ ಮಾಡಿದ್ದೇವೆ ಎಂದರು.

    ಮೇ 23ರ ಭಾನುವಾರ ಪಿಎಸ್‍ಐ ಅರ್ಜುನ್ ಮಹಿಳೆ ಜೊತೆ ಮಾತನಾಡುತ್ತಿದ್ದಾನೆಂದು ಠಾಣೆಗೆ ಕರೆತಂದಿದ್ದ ಪುನೀತ್ ಎಂಬ ಯುವಕನ ವಿರುದ್ಧ ಅದೇ ಮಹಿಳೆ ಕೂಡ ದೂರು ನೀಡಿದ್ದು, ಪುನೀತ್ ಮೇಲೆ ಆ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ ಗೋಣಿಬೀಡು ಠಾಣೆಯ ಪಿ.ಎಸ್.ಐ. ಅರ್ಜುನ್‍ರನ್ನ ಅಮಾನುತ ಮಾಡಿ ಸ್ಥಳ ತೋರಿಸದೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ಪ್ರಕರಣದ ತನಿಖೆಯನ್ನ ಸರ್ಕಾರ ಸಿಐಡಿಗೆ ವಹಿಸಿದೆ. ಇಂದು ಗೋಣಿಬೀಡು ಠಾಣೆಗೆ ಭೇಟಿ ನೀಡಿದ ಐಜಿಪಿ ದೇವ್ ಜ್ಯೋತಿ ರೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದರು. ಪಿಎಸ್‍ಐ ವಿರುದ್ಧ ಆರೋಪ ಮಾಡಿರೋ ಪುನೀತ್ ಎಂಬ ಯುವಕನ ಸ್ವಗ್ರಾಮ ಕಿರಗುಂದ ಗ್ರಾಮಕ್ಕೂ ಭೇಟಿ ನೀಡಿದ್ದರು.

    ಆರೋಪಿತ ಪುನೀತ್, ವಿವಾಹಿತ ಮಹಿಳೆ ಜೊತೆ ಫೋನ್‍ನಲ್ಲಿ ಸಂಭಾಷಣೆ ನಡೆಸುತ್ತಿದ್ದಾನೆ. ಇದರಿಂದ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಮಹಿಳೆ ಪತಿ ದೂರು ನೀಡಿದ್ದನು. ಕೇಸ್ ಸಂಬಂಧ ಪುನೀತ್ ಎಂಬ ದಲಿತ ಯುವಕನನ್ನ ವಿಚಾರಣೆಗೆ ಕರೆತಂದಿದ್ದ ಪಿ.ಎಸ್.ಐ. ಅರ್ಜುನ್, ಜಾತಿ ನಿಂದನೆ ಮಾಡಿ, ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಆತನಿಗೆ ಠಾಣೆಗೆ ಬಂದಿದ್ದ ಮತ್ತೊಬ್ಬ ಆರೋಪಿ ಚೇತನ್ ಎಂಬವನ ಮೂತ್ರ ಕುಡಿಸಿದ್ದರು ಎಂದು ಪುನೀತ್ ಆರೋಪಿಸಿದ್ದನು.

  • ಬೀದಿಯಲ್ಲಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್‍ಐ

    ಬೀದಿಯಲ್ಲಿದ್ದ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್‍ಐ

    ಹಾವೇರಿ: ಕಳೆದ ಕೆಲವು ದಿನಗಳಿಂದ ಬೀದಿಯಲ್ಲಿ ವಾಸಮಾಡುತ್ತಿದ್ದ ವೃದ್ದೆಗೆ ಪಿಎಸ್‍ಐಯೊಬ್ಬರು ಚಿಕಿತ್ಸೆ ಕೊಡಿಸಿ ವೃದ್ದಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ 65 ವರ್ಷದ ವೃದ್ಧೆಯೊಬ್ಬಳು ಅನಾಥವಾಗಿ ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ಡಿ.ಕೆ.ಬಳಿಗಾರವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ವೃದ್ದೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

    ವಿಚಾರಣೆ ವೇಳೆ ವೃದ್ಧೆಯನ್ನು ಗೌರಮ್ಮ ಸಣ್ಮನಿ(65) ಎಂದು ಗುರುತಿಸಲಾಗಿದೆ. ಬಳಿಕ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಶಿಗ್ಗಾಂವಿ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದರು. ಗೌರಮ್ಮಳ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಮರಣದ ನಂತರ ಗೌರಮ್ಮ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ಅನಾಥೆಯಂತೆ ಜೀವನ ಸಾಗಿಸುತ್ತಿದ್ದಳು. ಮಾಹಿತಿದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಎಸ್‍ಐ ಬಳಿಗಾರ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

    ಗೌರಮ್ಮಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಆದರೆ ಯಾವುದಾದರೂ ಕಾರಣಕ್ಕೆ ಗೌರಮ್ಮನೇ ಸ್ವತಃ ಮನೆಬಿಟ್ಟು ಬಂದು ಅಲ್ಲಿ ಇಲ್ಲಿ ವಾಸ ಮಾಡಿಕೊಂಡಿದ್ದಾಳೋ ಅಥವಾ ಮಕ್ಕಳೇ ವೃದ್ದೆಯನ್ನು ಆರೈಕೆ ಮಾಡಲಾಗದೆ ಮನೆಯಿಂದ ಹೊರಗೆ ಹಾಕಿದ್ದಾರೋ ಎಂದು ತಿಳಿದುಬಂದಿಲ್ಲ. ಗೌರಮ್ಮ ಮಾತ್ರ ಥೇಟ್ ಅನಾಥಳಂತೆ ಕಾಗಿನೆಲೆ ಗ್ರಾಮ ಸೇರಿದಂತೆ ಅಲ್ಲಲ್ಲಿ ವಾಸವಾಗಿದ್ದಳು. ಆದರೆ ಪಿಎಸ್‍ಐ ಡಿ.ಕೆ.ಬಳಿಗಾರ ವೃದ್ದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪಿಎಸ್ ಐ ಬಳಿಗಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನೀನ್ಯಾರೇ ನಂಗೆ ಹೊಡಿಯೋಕೆ – ಮಹಿಳಾ ಪಿಎಸ್‍ಐಗೆ ಅವಾಜ್ ಹಾಕಿದ ಯುವತಿಗೆ ಕಪಾಳಮೋಕ್ಷ

    ನೀನ್ಯಾರೇ ನಂಗೆ ಹೊಡಿಯೋಕೆ – ಮಹಿಳಾ ಪಿಎಸ್‍ಐಗೆ ಅವಾಜ್ ಹಾಕಿದ ಯುವತಿಗೆ ಕಪಾಳಮೋಕ್ಷ

    ಮಂಡ್ಯ: ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ ಯುವತಿಯೊಬ್ಬಳು ರಂಪಾಟ ಮಾಡಿ ಪಿಎಸ್‍ಐ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಘಟನೆ ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿದೆ.

    ಸವಿತಾಗೌಡ ಪಾಟೀಲ್ ಕಪಾಳ ಮೋಕ್ಷ ಮಾಡಿದ ಪಿಎಸ್‍ಐ ಆಗಿದ್ದು, ಇವರು ಮಂಡ್ಯದ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಪೊಲೀಸರು ನೂರಡಿ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ ದಾಖಲಾತಿ ಪರಿಶೀಲನೆ ಮಾಡುತ್ತಿದ್ದರು. ಅಂತೆಯೇ ಸ್ಕೂಟರ್ ನಲ್ಲಿ ಬಂದ ಯುವತಿಯನ್ನ ಕೂಡ ತಡೆದು ದಾಖಲಾತಿ ಪರಿಶೀಲನೆ ಮಾಡಿದರು. ಈ ವೇಳೆ ನನ್ ಸ್ಕೂಟರ್ ಅನ್ನ ಯಾಕ್ ಮುಟ್ಟುತ್ತಿದ್ದೀರಾ?, ಅಲ್ಲದೆ ಸ್ಕೂಟರ್ ಮೇಲೆ ಕುಳಿತು ನನ್ನ ಗಾಡಿ ಯಾಕೆ ಕೊಡ್ಲಿ ಎಂದು ಅವಾಜ್ ಹಾಕಿದ್ದಾಳೆ.

    ಈ ವೇಳೆ ಮಹಿಳಾ ಪಿಎಸ್ ಐ ಸ್ಕೂಟರ್ ನಿಂದ ಇಳಿಯಮ್ಮ, ನಿನ್ ಹೆಸರೇನು..? ನಿಮ್ ತಂದೆಯನ್ನು ಠಾಣೆಗೆ ಕರೆಸು, ನೀನು ಬಾ ಎಂದು ಕರೆದರು. ಆಗ ಯುವತಿ ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದು ರಂಪಾಟ ಮಾಡಿದಳು. ಪರಿಣಾಮ ತಾಳ್ಮೆ ಕಳೆದುಕೊಂಡ ಸವಿತಾ ಗೌಡ, ನನ್ನನ್ನೇ ಹೇ ಅಂತೀಯಾ. ಲೋಫರ್… ಏನ್ ಮಾತಾಡ್ತೀಯಾ ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

    ಈ ವೇಳೆ ಇನ್ನೂ ಜೋರಾಗಿ ಕೂಗಾಡಿದ ಯುವತಿ, ಹೇ ಏನು ಯಾರು ನೀನು ನನ್ ಮೇಲೆ ಕೈ ಮಾಡೋಕೆ. ಇದನ್ನ ವೀಡಿಯೋ ಮಾಡ್ಲಾ ಯಾವಳೇ ನೀನು ನನಗೆ ಹೊಡೆಯೋಕೆ ಹೇ ಎಂದು ಯುವತಿ ರೇಗಾಡಿದ್ದಾಳೆ. ಆಗ ಸವಿತಾ ಅವರು ಯುವತಿಗೆ ಮತ್ತೊಂದು ಏಟು ಕೊಟ್ಟಿದ್ದಾರೆ. ಇದರಿಂದ ಕೆರಳಿದ ಯುವತಿ ಹೇ ಏನೆ ಮಾಡ್ತಿಯಾ ರಾಸ್ಕಲ್ ಎಂದು ಅವಾಜ್ ಹಾಕಿದ್ದಾಳೆ.

    ಯುವತಿ ರೇಗಾಡುತ್ತಿದ್ದಂತೆಯೇ ಪಿಎಸ್‍ಐ ಅವರು, ಠಾಣೆಗೆ ಬಾ ನೀನು ಎಂದು ಸ್ಕೂಟರ್ ತೆಗೆದುಕೊಂಡು ಹೋದರು. ಈ ವೇಳೆ ಮಹಿಳಾ ಪಿಎಸ್‍ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾಳೆ. ಆಗ ಪಿಇಎಸ್‍ಐ ಕೂಡ ನಾನು ಎಜುಕೇಟೆಡ್ ನೀನೇ ಅನ್ ಎಜುಕೇಟೆಡ್ ಎಂದು ಜರಿದರು. ಮತ್ತೆ ನಾನು ಎಜುಕೇಟೆಡ್ ನೀನು ಅನ್ ಎಜುಕೇಟೆಡ್ ರೀತಿ ಬಿಹೇವ್ ಮಾಡಿದ್ದು. ರೂಲ್ಸ್ ಗೊತ್ತಿಲ್ಲ ಪೊಲೀಸ್ ಅಂತೆ ಇವಳು. ವೀಡಿಯೋ ಮಾಡ್ಕೊತ್ತಿದ್ದೀರಾ ತಾನೇ ಮಾಡ್ಕೊಳಿ ಜಾಸ್ತಿ ಮಾತನಾಡಬಾರ್ದು ಎಂದು ಯುವತಿ ಮತ್ತೆ ಅವಾಜ್ ಹಾಕಿದ ಪ್ರಸಂಗ ನಡೆಯಿತು.

  • ಎಸ್‍ಪಿ ಹೆಸರು ಹೇಳಿ ಪಿಎಸ್‍ಐಗೆ ಮಕ್ಮಲ್ ಟೋಪಿ ಹಾಕಿದವ ಅರೆಸ್ಟ್

    ಎಸ್‍ಪಿ ಹೆಸರು ಹೇಳಿ ಪಿಎಸ್‍ಐಗೆ ಮಕ್ಮಲ್ ಟೋಪಿ ಹಾಕಿದವ ಅರೆಸ್ಟ್

    ಕಲಬುರಗಿ: ಜಿಲ್ಲೆಯ ಎಸ್‍ಪಿ ಸಿಮಿ ಮರಿಯಮ್ ಜಾರ್ಜ್ ಹೆಸರಲ್ಲಿ ಪಿಎಸ್‍ಐ ಬಳಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ್ ಹೂಗಾರಗೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದು, ನನಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಎಲ್ಲರೊಂದಿಗೆ ಒಳ್ಳೆಯ ಒಡನಾಟವಿದೆ ಅಂತ ಪಿಎಸ್‍ಐಗೆ ವಂಚಕ ಹೇಳಿದ್ದಾನೆ. ವಂಚಕನ ಜಾಲಕ್ಕೆ ಬಿದ್ದ ಪಿಎಸ್‍ಐ ಹೂಗಾರ ನಿಜಕ್ಕೂ ಈತ ಒಳ್ಳೆಯ ಪ್ರೊಫೈಲ್ ವ್ಯಕ್ತಿ ಎಂದು ನಂಬಿ ಸ್ನೇಹ ಬೆಳೆಸಿಕೊಂಡಿದ್ದಾರೆ.

    ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡ ವಂಚಕ ಖಾಸಿಂ, ಕೆಲ ದಿನಗಳ ನಂತರ ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದ್ರೆ ಎಸ್‍ಪಿ ಮೇಡಂಗೇ ಹೇಳಿ ಬಗೆಹರಿಸೋದಾಗಿ ನಂಬಿಸಿದ್ದಾನೆ. ಎಸ್‍ಪಿ ಸಿಮಿ ಮರಿಯಮ್ ಜಾರ್ಜ್ ಅವರ ಡಿಪಿಯನ್ನು ಇಟ್ಟು ಎಸ್‍ಪಿ ಮೇಡಂ ಅವರು ಕೆಲವೇ ಕೆಲವು ಜನರಿಗೆ ಅವರ ನಂಬರ್ ನೀಡಿದ್ದಾರೆ. ಅದರಲ್ಲಿ ನಾನು ಸಹ ಒಬ್ಬನಾಗಿದ್ದೆನೆ. ನಿಮ್ಮ ಬಳಿ ಸಹ ಈ ನಂಬರ್ ಇರಲಿ. ಆದರೆ ಯಾವುದೇ ಕಾರಣಕ್ಕು ಅವರಿಗೆ ಕಾಲ್ ಮಾಡಬೇಡಿ, ಏನೇ ಸಮಸ್ಯೆಯಾದ್ರೆ ಬರೀ ವಾಟ್ಸಪ್ ಅಂತ ಹೇಳಿದ್ದಾನೆ.

    ಕೆಲ ದಿನಗಳ ನಂತರ ಎಸ್‍ಎಂಜಿ ನಂಬರ್ ನಿಂದ ತುರ್ತಾಗಿ ಹಣ ಬೇಕಾಗಿದೆ ಅಂತ ಪಿಎಸ್‍ಐ ಕಡೆಯಿಂದ 2.5 ಲಕ್ಷ ಪಡೆದಿದ್ದಾನೆ. ನಂತರ ಕೆಲ ದಿನಗಳ ಬಳಿಕ ಮತ್ತೆ 6 ಲಕ್ಷ ಹಣ ಪಡೆದಿದ್ದಾನೆ.

    ಪಿಎಸ್‍ಐ ಹಣ ನೀಡಿದ್ದು ಯಾಕೆ..?
    ವಂಚಕ ಖಾಸೀಂ ತನ್ನ ಪರ್ಸನಲ್ ನಂಬರನ್ನೇ ಎಸ್‍ಪಿ ಅವರ ಮೊಬೈಲ್ ನಂಬರ್ ಅಂತ ನಂಬಿಸಿ ಬಿಟ್ಟಿದ್ದ. ಅದಾದ ಬಳಿಕ ನಮ್ಮ ತಂದೆಯವರಿಗೆ ಕೇರಳದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಹಣ ಬೇಕು ಅಂತ ವಾಟ್ಸಪ್ ಮೇಸೆಜ್ ಕಳುಹಿಸಿದ್ದಾನೆ. ಈ ವೇಳೆ ಮಂಜುನಾಥ ಹೂಗಾರ ಅವರು ಎಸ್‍ಪಿ ಅವರಿಗೆ ಹಣದ ಅವಶ್ಯಕತೆ ಇದೆ ಅಂತ ಮೊದಲಿಗೆ ತನ್ನ ಸ್ನೇಹಿತನಿಂದ ಎರಡೂವರೆ ಲಕ್ಷ ಸಾಲ ಪಡೆದಿದ್ದರು. ನಂತರ 6 ಲಕ್ಷ ಹಣ ಬೇಕು ಅಂತ ಎರಡನೇ ಬಾರಿ ವಾಟ್ಸಪ್ ಮೆಸೇಜ್ ಬಂದಾಗ ಪಿಎಸ್‍ಐ ಹೂಗಾರ ತನ್ನ ಸ್ಟೇಷನ್ ಬಜಾರ್ ವ್ಯಾಪ್ತಿಯ ಎಸ್‍ಬಿಐ ಬ್ಯಾಂಕಿನಲ್ಲಿಟ್ಟ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಕ್ಯಾನ್ಸಲ್ ಮಾಡಿಸಿ ಆರೋಪಿಗೆ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ: ಎರಡು ದಿನದ ಹಿಂದೆ ಅದೇ ನಂಬರ್ ನಿಂದ ಪಿಎಸ್‍ಐಗೆ ಒಂದು ವಾಟ್ಸಪ್ ವಾಯ್ಸ್ ಕಾಲ್ ಬಂದಿದ್ದು, ವಾಯ್ಸ್ ಕಾಲ್ ನಲ್ಲಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿ ಅನುಮಾನ ಬಂದಿದೆ. ಈ ಹಿನ್ನೆಲೆ ಪಿಎಸ್‍ಐ ಅವರು ವಂಚಕ ಖಾಸಿಂ ಪಟೇಲ್ ಮೇಲೆ ಅನುಮಾನ ಬಂದು ಎಸ್‍ಪಿ ಅವರನ್ನು ಸಂಪರ್ಕಿಸಿದ್ದಾರೆ. ಅದು ನನ್ನ ನಂಬರ್ ಅಲ್ಲ ನಿಮಗೆ ಮೋಸ ಮಾಡಿದ್ದಾನೆ ಹೋಗಿ ಪ್ರಕರಣ ದಾಖಲಿಸಿ ಎಂದು ಎಸ್ಪಿ ಸೂಚನೆ ನೀಡಿದ್ದಾರೆ.

    ಹೀಗಾಗಿ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ಪಿಎಸ್‍ಐ ಮಂಜುನಾಥ್ ಹೂಗಾರ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿಯನ್ನು ಸ್ಟೇಷನ್ ಬಜಾರ್ ಪೊಲೀಸರು ಆರೋಪಿ ಖಾಸಿಂ ಪಟೇಲ್ ಬಂಧಿಸಿದ್ದು, ಬಂಧಿತನಿಂದ 2 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.

  • ಬಸ್ ನಿಲುಗಡೆಗಾಗಿ ಪ್ರತಿಭಟನೆ – ವಿದ್ಯಾರ್ಥಿ ಮೇಲೆ ಪಿಎಸ್‍ಐ ಹಲ್ಲೆ

    ಬಸ್ ನಿಲುಗಡೆಗಾಗಿ ಪ್ರತಿಭಟನೆ – ವಿದ್ಯಾರ್ಥಿ ಮೇಲೆ ಪಿಎಸ್‍ಐ ಹಲ್ಲೆ

    ಬೀದರ್: ಬಸ್ ನಿಲುಗಡೆಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

    ಹಲವು ದಿನಗಳಿಂದ ಅಣದೂರು ಗ್ರಾಮದಲ್ಲಿ ಸಾರಿಗೆ ಬಸ್ಸುಗಳು ನಿಲ್ಲಿಸದೇ ಸಂಚಾರ ಮಾಡುತ್ತಿದ್ದವು. ಸಾರಿಗೆ ಸಿಬ್ಬಂದಿಯ ಈ ನಡೆಗೆ ರೋಸಿ ಹೋದ ವಿದ್ಯಾರ್ಥಿಗಳು ಇಂದು ಬೆಳಗ್ಗೆಯಿಂದ ಬೀದರ್ ತಾಲೂಕಿನ ಅಣದೂರು ಬಳಿ ಬೀದರ್ – ಕಲಬುರಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಈ ವೇಳೆ ಸ್ಥಳಕ್ಕೆ ಬಂದ ಜನವಾಡ ಪಿಎಸ್‍ಐ ಶಿವರಾಜ್ ಪಾಟೀಲ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಕೈ ಬಿಡುವಂತೆ ಹೇಳಿದ್ದಾರೆ. ಪಟ್ಟು ಬಿಡದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಇದರಿಂದಾಗಿ ಸಚಿನ್ ಮಾಲೆ ಎಂಬ ಕಾಲೇಜು ವಿದ್ಯಾರ್ಥಿಯ ಮೇಲೆ ಪಿಎಸ್‍ಐ ಹಲ್ಲೆ ಮಾಡಿದ್ದಾರೆ.

    ಪ್ರತಿಭಟನಾ ನಿರತ ಶಾಲಾ – ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಪಿಎಸ್‍ಐ ವಿರುದ್ಧ ಇದೀಗ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್, ಗರ್ಭಪಾತ- ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಪಿಎಸ್‍ಐ ದೂರು!

    ಮೈಸೂರು: ಮದುವೆಯಾಗುವುದಾಗಿ ಹೇಳಿ ವಂಚಿಸಿದ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಆನಂದ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಅವರೇ ಆನಂದ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ.

    ಮೈಸೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐಗಳ ಮಧ್ಯೆ ಪರಿಚಯವಾಗಿದ್ದು, ಈ ಪರಿಚಯ ಪ್ರೇಮಕ್ಕೆ ತಿರುಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿ ಸುತ್ತಾಟ ನಡೆಸಿದೆ.

    ಇತ್ತ ಆನಂದ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದು, ಮುದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಈ ಮಧ್ಯೆ ಆನಂದ್ ಬೇರೊಂದು ಮದುವೆ ಆಗಿದ್ದಾನೆ. ಬಳಿಕ ಆತ ನನ್ನನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳಾ ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯ ನನಗೆ ಆನಂದ್ ನಿಂದ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮಹಿಳಾ ಪಿಎಸ್‍ಐ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನಂತೆ ಪಿಎಸ್‍ಐ ಆನಂದ್ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಸದ್ಯ ಪೊಲೀಸರ ಲವ್ವಿಡವ್ವಿ ಕೇಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.