Tag: pseudo call

  • ಅಪ್ಪ 1 ಕೋಟಿ ಕೊಡಿ- ಕಿಡ್ನ್ಯಾಪ್ ನಾಟಕವಾಡಿದ ಯುವತಿ

    ಅಪ್ಪ 1 ಕೋಟಿ ಕೊಡಿ- ಕಿಡ್ನ್ಯಾಪ್ ನಾಟಕವಾಡಿದ ಯುವತಿ

    – ಇನಿಯನ ಜೊತೆ ಜೂಟ್ ಆಗಲು ಮಾಸ್ಟರ್ ಪ್ಲಾನ್

    ಲಕ್ನೋ: ಬಾಯ್ ಫ್ರೆಂಡ್ ಸಹಾಯದಿಂದ 19 ವರ್ಷದ ಯುವತಿ ತನಗೆ ತಾನೇ ಕಿಡ್ನ್ಯಾಪ್ ಮಾಡಿಕೊಂಡು ಮನೆಯವರ ಬಳಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಏತಾಹ್ ಜಿಲ್ಲೆಯ ನಗ್ಲಾ ಭಜ್ನಾ ಗ್ರಾಮದಲ್ಲಿ ಶನಿವಾರ ಘಟನೆ ನಡೆದಿದೆ. ಗುರುವಾರ ರಾತ್ರಿ ಯುವತಿ ಕಾಣೆಯಾಗಿದ್ದು, ತನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಹಲವು ಬಾರಿ ಕರೆ ಮಾಡಿ ಮಾತನಾಡಿ, ಕೂಗಾಡುವುದು, ಚೀರಾಡುವುದನ್ನು ಮಾಡಿದ್ದಾಳೆ. ಅಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಆಗ ಯುವತಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

    ಕುಟುಂಬಸ್ಥರು ದೂರು ನೀಡುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕಾಣೆಯಾಗಿರುವ ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ಯಾರೋ ನುರಿತ ಅಪಹರಣಕಾರರೇ ಯುವತಿಯನ್ನು ಅಪಹರಿಸಿರಬೇಕು ಎಂದು ಆರಂಭದಲ್ಲಿ ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಈ ವೇಳೆ ಪೊಲೀಸರಿಗೆ ಅನುಮಾನ ಬಂದಿದೆ. ಅಪಹರಣಕಾರನ ನಿರಂತರ ಮಾತುಕತೆ ಹಾಗೂ ದೀರ್ಘ ಗಂಟೆಗಳ ಕರೆಗಳಿಂದಾಗಿ ಅನುಮಾನ ಮೂಡಿದೆ. ನಂತರ ಯುವತಿಯ ಮೊಬೈಲ್ ನಂಬರ್ ಟ್ರೇಸ್ ಮಾಡಲಾಗಿದೆ. ಆಗ ಯುವತಿಯೇ ಹುಸಿ ಕರೆ ಮಾಡುತ್ತಿದ್ದಾಳೆ ಎಂಬುದು ತಿಳಿದಿದೆ. ಅಲ್ಲದೆ ಶನಿವಾರ ಯುವತಿ ತಮ್ಮ ಮನೆಯ 100 ಮೀ. ಅಂತರದಲ್ಲಿಯೇ ಸಂಚರಿಸಿದ್ದಾಳೆ ಎಂದು ಏತಾಹ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಎಸ್‍ಪಿ ರಾಹುಲ್ ಕುಮಾರ್ ವಿವರಿಸಿದ್ದಾರೆ.

    ಯುವತಿ ಹಾಗೂ ಆಕೆಯ ಪ್ರಿಯತಮ ಅದೇ ಪ್ರದೇಶದವರಾಗಿದ್ದು, ಎರಡು ವರ್ಷಗಳಿಂದ ಇವರಿಬ್ಬರು ಸಂಬಂಧ ಹೊಂದಿದ್ದರು. ಯುವತಿಯ ಮನೆಯಲ್ಲಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕುಟುಂಬಸ್ಥರು 1 ಕೋಟಿ ರೂ.ಗಳಲ್ಲಿ ಶಾಲೆ ತೆರೆಯಲು ಯೋಚಿಸಿರುವ ಕುರಿತು ಯುವತಿಗೆ ತಿಳಿದಿತ್ತು. ಹೀಗಾಗಿ ಹಣ ಸುಲಿಗೆ ಮಾಡಿ ನಂತರ ಪ್ರಿಯತಮನೊಂದಿಗೆ ಓಡಿ ಹೋಗಲು ಸಂಚು ರೂಪಿಸಿದ್ದಳು.

    ಪೊಲೀಸ್ ವಿಚಾರಣೆ ವೇಳೆ ಯುವತಿ ಬಾಯ್ಬಿಟ್ಟಿದ್ದು, ಆಕೆಯ ಪ್ರಿಯತಮ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಿದ ನಂತರ ಎಫ್‍ಐಆರ್ ದಾಖಲಿಸಲಾಗುವುದು ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.