Tag: Prtotest

  • ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ

    ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ

    ನವದೆಹಲಿ: ಭಾರತೀಯ ಆಹಾರ ನಿಗಮ (FCI) ಕರ್ನಾಟಕಕ್ಕೆ ಮೊದಲು ಅಕ್ಕಿ ಕೊಡುವ ಭರವಸೆ ನೀಡಿತ್ತು, ಆದರೆ ಇದ್ದಕ್ಕಿದ್ದ ಹಾಗೇ ಅಕ್ಕಿ ನೀಡಲು ನಿರಾಕರಿಸಲಾಗುತ್ತಿದೆ.‌ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿದ್ದಾರೆ ಅನಿಸುತ್ತೆ, ಈ ರೀತಿಯ ದ್ವೇಷದ ರಾಜಕೀಯ ಮಾಡೋದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ (Amit Shah) ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ದೆಹಲಿಯಲ್ಲಿ (NewDelhi) ಮಾತನಾಡಿದ ಅವರು, ನಿನ್ನೆ ರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ, ಸೌಹಾರ್ದಯುತವಾಗಿ ಚರ್ಚೆ ಮಾಡಿದೆ. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರವಾಗಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದಿದ್ದೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣದಿಂದ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ: ಸಿಎಂ

    ಮೊದಲು FCI ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಈಗ ಅಕ್ಕಿ ನೀಡಲು ನಿರಾಕರಿಸುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ, ಇದು ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಿದ ಹಾಗೇ ಆಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ನೀಡುವಂತೆ ಸೂಚಿಸಲು ನವಿ ಮಾಡಿದ್ದೇನೆ. ಅದಕ್ಕೆ ಅವರು ಪೂರಕವಾಗಿ ಸ್ಪಂಧಿಸಿದ್ದು, ಕೇಂದ್ರ ಆಹಾರ ಸಚಿವ ಪಿಯೂಷ್ ಗೊಯೇಲ್ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

    ಈಗಾಗಲೇ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಬೇರೆ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಯಾವ ರಾಜ್ಯಗಳಲ್ಲೂ ಬೇಡಿಕೆ ಇರುವಷ್ಟು ಸಾಮರ್ಥ್ಯದಲ್ಲಿ ಪೂರೈಕೆಯಾಗದ ಹಿನ್ನೆಲೆ ಯೋಜನೆ ಜಾರಿ ಮಾಡುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರಧಾನಿ ಮೋದಿ ಕೊಲ್ಲುತ್ತೇನೆ ಎಂದು ಕರೆ ಮಾಡಿದ್ದ ವ್ಯಕ್ತಿ ಬಂಧನ

    ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಟ್ಟ ರಾಜಕೀಯ ಮಾಡುತ್ತಿದೆ. ಈಗಾಗಲೇ ತೆಲಂಗಾಣ, ಪಂಜಾಬ್ ಸೇರಿದಂತೆ ಎಲ್ಲಾ ಕಡೆ ಕೇಳಿದ್ದೇವೆ. ಆಂಧ್ರಪ್ರದೇಶದಿಂದ ಅಕ್ಕಿ ಆಮದು ಮಾಡಿಕೊಂಡರೆ ಪ್ರತಿ ಕೆಜಿಗೆ 42 ರೂ. ಆಗಲಿದೆ. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಆದರೆ ಅದು ಕೇವಲ ಒಂದು ತಿಂಗಳು ನೀಡಲು ಸಾಧ್ಯ ಎಂದು ಛತ್ತೀಸ್‌ಗಢ ಸರ್ಕಾರ ಹೇಳಿದೆ. ತೆಲಂಗಾಣ ಕೇವಲ ಗೋಧಿ ಮಾತ್ರ ಕೊಡೋಕೆ ಸಾಧ್ಯ ಅಂತ ಹೇಳಿದೆ. ಕರ್ನಾಟಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಲಭ್ಯವಿಲ್ಲ. ಹೀಗಾಗಿ ಓಪನ್ ಮಾರ್ಕೆಟ್‌ಗೆ ಹೋಗಬೇಕು. ಇದಕ್ಕೆ ಟೆಂಡರ್ ಕರೆಯಬೇಕು ಈ ಎಲ್ಲ ಪ್ರಕ್ರಿಯೆಗೆ 2 ತಿಂಗಳು ಸಮಯ ತೆಗೆದುಕೊಳ್ಳಲಿದೆ. ಕೇಂದ್ರೀಯ ಭಂಡಾರ, ಎನ್‌ಸಿಸಿಎಫ್, ನಾಫೆಡ್‌ನಿಂದ ಅಕ್ಕಿ ಖರೀದಿಗೆ ಕೊಟೆಷನ್ ಕೇಳಿದೆ. ನಾಳೆ ಅವರು ದರಪಟ್ಟಿ ನೀಡಿದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಇದರಿಂದಾಗಿ ಜುಲೈ 1 ರಿಂದ ಅಕ್ಕಿ ನೀಡುವುದು ಕಷ್ಟ ಆಗಬಹುದು ಎಂದು ಸಿಎಂ ಬುಧವಾರ ಹೇಳಿದ್ದರು.

  • ಇದೊಂದು ಸುಳ್ಳ, ಮಳ್ಳ ಸರ್ಕಾರ – ತಾಕತ್ತಿದ್ದರೆ ಅಕ್ಕಿ ಕೊಡಿ; ಬೊಮ್ಮಾಯಿ ಕಿಡಿ

    ಇದೊಂದು ಸುಳ್ಳ, ಮಳ್ಳ ಸರ್ಕಾರ – ತಾಕತ್ತಿದ್ದರೆ ಅಕ್ಕಿ ಕೊಡಿ; ಬೊಮ್ಮಾಯಿ ಕಿಡಿ

    ಬೆಂಗಳೂರು: ಕಾಂಗ್ರೆಸ್‌ನವರದ್ದು (Congress) ಸುಳ್ಳ, ಮಳ್ಳ ಸರ್ಕಾರ, ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಎಲ್ಲಿಂದಾದ್ರೂ ಖರೀದಿಸಿ ಅಕ್ಕಿ ಕೊಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಒತ್ತಾಯಿಸಿದ್ದಾರೆ.

    ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಸುಳ್ಳ-ಮಳ್ಳ ಸರ್ಕಾರ. ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ. 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಈಗಾಗಲೇ ಕೇಂದ್ರ ಬಡವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಕೊಡ್ತಿದೆ. ಈಗ ಅಕ್ಕಿ ಬರ್ತಿದ್ರೆ ಅದು ಕೇಂದ್ರ ಸರ್ಕಾರ ಕೊಡುತ್ತಿರೋ ಅಕ್ಕಿ ಎಂದು ಹೇಳಿದ್ದಾರೆ.

    ನುಡಿದಂತೆ ನಡೆದುಕೊಳ್ಳಿ:
    ಬಡವರಿಗೆ ಆಪತ್ತಿನಲ್ಲಿ ಮಿತ್ರನಾಗಿ ಬಂದವರು ಮೋದಿ (Narendra Modi). ಕಾಂಗ್ರೆಸ್‌ನವರು ಸುಳ್ಳುಕೋರರು, ಮೊದಲ ಸಂಪುಟ ಸಭೆಯಲ್ಲೇ ಅಕ್ಕಿ ಇಲ್ಲ ಅಂತಾ ಕಾಂಗ್ರೆಸ್‌ನವರಿಗೆ ಗೊತ್ತಿತ್ತು. ಅಕ್ಕಿ ಇಲ್ಲ ಅಂದ್ಮೇಲೆ ಮುಕ್ತ ಮಾರುಕಟ್ಟೆಯಿಂದ ಕೊಂಡುಕೊಳ್ಳಬೇಕಿತ್ತು. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಅಕ್ಕಿ ಕೊಡಿ. ಎಲ್ಲಿಂದಾದ್ರೂ ಖರೀದಿಸಿ ತಂದುಕೊಡಿ, ನುಡಿದಂತೆ ನಡೆದುಕೊಳ್ಳಿ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯದ ಪ್ರಗತಿ ಹಳ್ಳ ಹಿಡಿಸಿದ್ದಾರೆ:
    ಕಾಂಗ್ರೆಸ್‌ನವರು ಬಡವರಿಗೆ ಮೋಸ ಮಾಡ್ತಿದಾರೆ. ಕರೆಂಟ್ ಶಾಕ್ ಕೊಡ್ತಿದಾರೆ, ಶಾಲಾ ಮಕ್ಕಳಿಗೆ ಬಸ್‌ಗಳೇ ಸಿಗುತ್ತಿಲ್ಲ. ಕೈಗಾರಿಕೆಗಳು ಬಂದ್ ಆಗ್ತಿವೆ, ಕುಡಿಯುವ ನೀರಿಗೆ ಹಾಹಾಕಾರ ಶುರುವಾಗ್ತಿದೆ. ಕೇವಲ ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿಯ ಹಾದಿಯನ್ನ ಹಳ್ಳ ಹಿಡಿಸಿದ್ದಾರೆ. ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಸಚಿವರು ಕಮೀಷನ್ ಫಿಕ್ಸ್ ಮಾಡ್ಕೊಳ್ತಿದ್ದಾರೆ. ವರ್ಗಾವಣೆ ದಂಧೆಯೂ ಶುರುವಾಗಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಕಿಡಿ ಕಾರಿದ್ದಾರೆ.

    ಪೊಲೀಸ್ ರಾಜ್ಯಕ್ಕೆ ನಾವು ಹೆದರಲ್ಲ:
    ನಮ್ಮ ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಆಗಲೇ ಪೊಲೀಸ್ ರಾಜ್ಯ ಶುರುವಾಗಿದೆ. ಪ್ರಜಾಪ್ರಭುತ್ವ ವಿರೋಧಿ, ದಮನಕಾರಿ ನೀತಿ ಅನುಸರಿಸ್ತಿದ್ದಾರೆ. ನಾವು ನಿಮ್ಮ ಪೊಲೀಸ್ ರಾಜ್ಯಕ್ಕೆ ಹೆದರಲ್ಲ, ಎಷ್ಟು ದಿನ ಪೊಲೀಸ್ ರಾಜ್ಯ ನಡೆಸ್ತೀರಿ ಅಂತ ನೋಡ್ತೀವಿ.. ನಿಮ್ಮ ಲಾಟಿಯ ಶಕ್ತಿ ಹೆಚ್ಚೋ ನಮ್ಮ ರಟ್ಟೆಯ ಶಕ್ತಿ ಹೆಚ್ಚೋ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೊಳಗಾದ ನಾಲ್ವರ ಕುಟುಂಬಕ್ಕೆ ಪರಿಹಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಬಿಜೆಪಿ ಎಲ್ಲರಿಗೂ ಪರಿಹಾರ ಕೊಟ್ಟಿಲ್ಲವೆಂಬ ಸಿದ್ದರಾಮಯ್ಯ ಆರೋಪ ಸುಳ್ಳು. ಪರಿಹಾರ ಕೊಡುವಾಗ ಕಾನೂನು ಪ್ರಕಾರ ಕೊಡಬೇಕಾಗುತ್ತದೆ. ಎಲ್ಲೆಲ್ಲಿ ಕೋಮು ಗಲಭೆ ಆಗಿತ್ತೋ ಅಲ್ಲಿ ಕೊಟ್ಟಿದ್ದೇವೆ. ವೈಯಕ್ತಿಕ ಕಾರಣದಿಂದ ಹತ್ಯೆ ಆಗಿರುವುದಕ್ಕೆ ನಾವು ಪರಿಹಾರ ಕೊಟ್ಟಿಲ್ಲ. ತನಿಖೆಯ ಆಧಾರದ ಮೇಲೆ ಪರಿಹಾರ ನಿರ್ಧಾರ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.