Tag: protest

  • ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ರೂ ಗಾಯಾಳು ದಂಪತಿಯನ್ನ ದಾರಿಯಲ್ಲೇ ಬಿಟ್ಟು ಹೋದ ಪೊಲೀಸರು

    – ಮಾನವೀಯತೆ ಮರೆತ ಪಣಂಬೂರು ಪೊಲೀಸರು

    ಮಂಗಳೂರು: ಎರಡು ಕುಟುಂಬಗಳ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ದಂಪತಿಯನ್ನ ಪೊಲೀಸರು ಆಸ್ಪತ್ರೆಗೆ ಒಯ್ಯುವ ಬದಲು ನಡು ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಮಂಗಳೂರಿನ ಬೆಂಗ್ರೆ ಎಂಬಲ್ಲಿ ನಡೆದಿದೆ.

    ಮೆಹಮೂದ್ ಮತ್ತು ಅವರ ಪತ್ನಿ ಫಮೀನಾ ಎಂಬವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮನೆಯಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಒಯ್ಯುವುದಾಗಿ ಹೇಳಿ ಜೀಪಿನಲ್ಲಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕುಳೂರು ಎಂಬಲ್ಲಿ ಪೊಲೀಸರು ಗಾಯಾಳು ದಂಪತಿ ಮತ್ತು ಮಗುವನ್ನು ಜೀಪಿನಿಂದ ಇಳಿಸಿ ಹೋಗಿದ್ದರು.

    ವಿಷಯ ತಿಳಿದ ಡಿವೈಎಫ್‍ಐ ಕಾರ್ಯಕರ್ತರು ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. 20 ನಿಮಿಷ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರೂ ಪೊಲೀಸರು ಆಗಮಿಸಿರಲಿಲ್ಲ. ಬಳಿಕ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಣಂಬೂರು ಪೊಲೀಸರ ಅಮಾನವೀಯತೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಪರಿಹಾರಕ್ಕಾಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ಜೋತು ಬಿದ್ದ ರೈತರು

    ಅನಂತಪುರ: ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಹೈಟೆನ್ಷನ್ ವಿದ್ಯುತ್ ವಯರ್‍ಗೆ ಜೋತು ಬಿದ್ದ ಪ್ರತಿಭಟನೆ ನಡೆಸಿದ ಘಟನೆ ಆಂಧ್ರದ ಅನಂತಪುರದ ಮಡಕಶಿರಾ ತಾಲೂಕಿನ ಮಳವಾಯಿ ಗ್ರಾಮದಲ್ಲಿ ನಡೆದಿದೆ.

    ಕರ್ನಾಟಕಕ್ಕೆ ವಿದ್ಯುತ್ ಸರಬರಾಜು ಮಾಡಲು ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಹೈಟೆನ್ಷನ್ ವಿದ್ಯುತ್ ಕಂಬ ಆಳವಡಿಕೆ ಕಾಮಗಾರಿಗೆ ರೈತರು ಅಡ್ಡಿಪಡಿಸಿ ಹೈಟೆನ್ಷನ್ ವಯರ್‍ಗೆ ಜೋತು ಬೀಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

    ಹುನ್ನಾರ ಸಾಬ್ ಹಾಗೂ ಅವರ ಮಗ ನಬೀರ್ ವಯರ್ ಹಿಡಿದು ಪ್ರತಿಭಟನೆ ನಡೆಸಿದವರು. ಪಾವಗಡದಿಂದ ಮಧುಗಿರಿಗೆ 220 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತರ ಜಮೀನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹುನ್ನಾರ್ ಸಾಬ್ ಎಂಬವರ ಒಂದು ಎಕರೆ ಜಮೀನಿನಲ್ಲಿ ಲೈನ್ ಹಾದು ಹೋಗಿದೆ. ಇದಕ್ಕಾಗಿ ಸರ್ಕಾರ 90 ಸಾವಿರ ರೂ. ಪರಿಹಾರ ನೀಡಿದೆ.

    ಜಮೀನು ಸಂಪೂರ್ಣವಾಗಿ ವಿದ್ಯುತ್ ಲೈನ್ ಆವರಿಸಿಕೊಂಡಿದ್ದು ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಇದರಿಂದ ಜಮೀನಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಕಾಮಗಾರಿ ತಡೆದು ಹುನ್ನಾರ್ ಸಾಬ್ ಮತ್ತು ಅವರ ಮಗ ನಬೀರ್ ಪ್ರತಿಭಟಿಸಿದ್ದಾರೆ. ಹುನ್ನಾರ್ ಸಾಬ್ ಅವರು ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ಮಂಡಲದ ನೆಲವಾಯಿಲು ಗ್ರಾಮದ ನಿವಾಸಿಗಳಗಿದ್ದಾರೆ.

    ಪ್ರತಿಭಟನೆ ಸಂದರ್ಭದಲ್ಲಿ ಲೈನ್ ಮೇಲೆ ಎಳೆದಿದ್ದರಿಂದ ಹುನ್ನಾರ್ ಸಾಬ್ 50 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಹುನ್ನಾರ್ ಸಾಬ್ ಅವರಿಗೆ ಬೆನ್ನು ಮೂಳೆ ಮುರಿದಿದೆ. ಹುನ್ನಾರ್ ಸಾಬ್‍ರನ್ನು ಆಸ್ಪತ್ರೆಗೂ ಸೇರಿಸದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಮಾನವೀಯತೆ ತೋರಿದ್ದಾರೆ. ಹುನ್ನಾರ್ ಸಾಬ್ ಇದೀಗ ಮಡಕಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    https://www.youtube.com/watch?v=u1BilsUayeY

     

  • ಮಹಿಳಾ ಮೀಸಲಾತಿ ವಿಚಾರವಾಗಿ ಹೊತ್ತಿ ಉರಿದ ನಾಗಾಲ್ಯಾಂಡ್- ಸರ್ಕಾರಿ ಕಚೇರಿಗಳಿಗೆ ಬೆಂಕಿ

    ಕೊಹಿಮಾ: ನಾಗಾಲ್ಯಾಂಡ್‍ನಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

    ಸರ್ಕಾರಿ ಕಚೇರಿಗಳು ವಾಹನಗಳಿಗೆ ಜನ ಬೆಂಕಿಹಚ್ಚಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಗೋಲಿಬಾರ್ ಮಾಡಿದ್ದು ಎರಡು ದಿನಗಳ ಹಿಂದೆ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ನಾಗಾಲ್ಯಾಂಡ್‍ನಲ್ಲಿ ಧೀಮ್‍ಪುರ್‍ನಲ್ಲಿ ಇಂಥದ್ದೊಂದು ದುರ್ಘಟನೆ ನಡೆದುಹೋಗಿದೆ.

    ಸಂವಿಧಾನದ ಅನುಸೂಚಿ 371(ಎ) ಅನ್ವಯ ಸಾಂಪ್ರದಾಯಿಕ ಕಾನೂನುಗಳನ್ನು ಅನುಸರಿಸಲು ನಮಗೆ ಹಕ್ಕಿದೆ. ನಮ್ಮ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ರಾಜಕೀಯ ಹಕ್ಕು ಕೊಡುವುದಿಲ್ಲ. ಅವರು ಚುನಾವಣೆಗಳಲ್ಲಿ ಭಾಗವಹಿಸಲು ಆಕ್ಷೇಪವಿಲ್ಲ. ಆದರೆ ಯಾವುದೇ ಮೀಸಲಾತಿ ನೀಡಬಾರದು. ಇದರಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಅಂತ ಬುಡಕಟ್ಟು ಜನಾಂಗದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪುರಸಭೆ ಕಚೇರಿ, ಸಾರಿಗೆ ಕಚೇರಿ, ಡೆಪ್ಯೂಟಿ ಕಮೀಷನರ್ ಕಚೇರಿ, ಪ್ರೆಸ್ ಕ್ಲಬ್, ಸರ್ಕಾರಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಳೆದ ಬುಧವಾರ 12 ಟೌನ್‍ಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದ ವೇಳೆ ಮಹಿಳೆಯರಿಗೆ ಮೀಸಲಾತಿ ನೀಡುವವರೆಗೂ ಚುನಾವಣೆ ರದ್ದು ಮಾಡಬೇಕು ಅಂತ ಆಗ್ರಹಿಸಿದ್ರು. ಗೋಲಿಬಾರ್ ಖಂಡಿಸಿ ಸಿಎಂ ಟಿ.ಆರ್.ಜೀಲಿಯಾಂಗ್ ಗುರುವಾರ ಸಂಜೆ 4 ಗಂಟೆಯೊಳಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಸಿಎಂ ರಾಜೀನಾಮೆ ನೀಡದ ಕಾರಣ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಬೀದಿಗಿಳಿದ ಪ್ರತಿಭಟನಕಾರರು ರೊಚ್ಚಿಗೆದ್ದು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಾಕಿದ್ದಾರೆ.

    ಇದ್ರಿಂದ 2 ತಿಂಗಳ ಮಟ್ಟಿಗೆ ಚುನಾವಣೆಯನ್ನ ಸರ್ಕಾರ ಮುಂದೂಡಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನಾಪಡೆಗಳನ್ನ ನಿಯೋಜಿಸಲಾಗಿದೆ.