Tag: protest

  • ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸಮಗ್ರ ನೀರಾವರಿ ಯೋಜನೆಗೆ ಒತ್ತಾಯಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಅಜ್ಜಿಯೊಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದ ಘಟನೆ ನಡೆದಿದೆ.

    ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಎದುರಿನಿಂದ ಮೆರವಣಿಗೆ ಹೋಗಿ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದರು. ಮಾತ್ರವಲ್ಲದೇ ಚಾಲುಕ್ಯ ಸರ್ಕಲ್ ಮಧ್ಯೆಯೇ ಪ್ರತಿಭಟನಾಕಾರರು ಕುಳಿತ ಪರಿಣಾಮ ಸರ್ಕಲ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇದರಿಂದ ಯಾವುದೇ ಅಹಿತರ ಘಟನೆ ನಡೆಯಬಾರದೆಂದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.


    ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಬಯಲುಸೀಮೆಯ ನೀರಿನ ಸಮಸ್ಯೆಗೆ ಏನು ಪರಿಹಾರ ಕೊಟ್ಟಿದ್ದೀರಿ?. ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಚಿಕ್ಕಾಬಳ್ಳಾಪುರ ರೈತರು ಕೂಡ ಇಂದು ಖುದ್ದಾಗಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಬಂದ್ ಸಹ ನಡೆಸುತ್ತೇವೆ. ಕರ್ನಾಟಕ ಬಂದ್ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ ತಜ್ಞರ ಸಮಿತಿ ರಚನೆ ಮಾಡಿ ನೀರಿನ ಪರಿಹಾರ ನೀಡೋದಾಗಿ ಹೇಳಿತ್ತು. ಆದ್ರೇ ಈಗ ಸಿಎಂ ನಿದ್ದೆಗಣ್ಣಲ್ಲಿದ್ದಾರೆ ಅಂತಾ ಇತ್ತ ಚಿಕ್ಕಬಳ್ಳಾಪುರ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯೊಬ್ಬರನ್ನೂ ಕೂಡ ಯಾವುದೇ ಮುಲಾಜಿಲ್ಲದೇ ಧರಧರನೇ ಎಳೆದೊಯ್ದಿದ್ದಾರೆ.

     

  • ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇಂದು ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ಅಸ್ವಸ್ಥರಾಗಿ ಸುಸ್ತಾದಂತೆ ಕಂಡುಬಂದರು.

    ಇಂದು ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಖಂಡಿಸಿ, ಹುನಗುಂದ ತಾಲೂಕು ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಉಮಾಶ್ರೀ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಉಮಾಶ್ರೀ ಅಸ್ವಸ್ಥರಾಗುತ್ತಿದ್ದಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು.

    ಉಮಾಶ್ರೀ ಅವರಿಗೆ ಯಾವುದೇ ತೊಂದರೆಯಿಲ್ಲ, ವಿಶ್ರಾಂತಿ ಅಗತ್ಯವಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಕುಸುಮಾ ಮಾಗಿ ಹೇಳಿದ್ದಾರೆ.

     

  • ಡೈರಿ ಸ್ಫೋಟ- ಮೈಸೂರಿನ ಸಿಎಂ ನಿವಾಸದ ಎದುರು ಬಿಜೆಪಿ ಪ್ರತಿಭಟನೆ

    ಡೈರಿ ಸ್ಫೋಟ- ಮೈಸೂರಿನ ಸಿಎಂ ನಿವಾಸದ ಎದುರು ಬಿಜೆಪಿ ಪ್ರತಿಭಟನೆ

    ಮೈಸೂರು: ರಾಜ್ಯ ನಾಯಕರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ವಿಚಾರ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

    ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

    ಮೈಸೂರಿನಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಮುಖಂಡರಾದ ರಾಮದಾಸ್, ಎಂ.ಶಿವಣ್ಣ ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

     

  • ರಾಯಚೂರು: ಟವರ್ ಏರಿ ಸರ್ಕಾರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿ ಪ್ರತಿಭಟನೆ

    ರಾಯಚೂರು: ಟವರ್ ಏರಿ ಸರ್ಕಾರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿ ಪ್ರತಿಭಟನೆ

    ರಾಯಚೂರು: ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಕೃಷಿ ತಾಂತ್ರಿಕ ಪದವಿಧರರನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರ್ ವಿದ್ಯಾರ್ಥಿಯೋರ್ವ ಮೊಬೈಲ್ ಟವರ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.

    ರಾಯಚೂರು ಕೃಷಿ ವಿವಿಯಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಸಂಕೇತ್ ನಗರದ ಲಿಂಗಸುಗೂರು ರಸ್ತೆಯಲ್ಲಿರುವ ಎಸಿಬಿ ಕಚೇರಿ ಬಳಿಯ ಟವರ್ ಹತ್ತಿ ಸುಮಾರು 2 ಗಂಟೆಗಳ ಕಾಲ ಹೋರಾಟ ನಡೆಸಿದ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಕೊನೆಗೆ ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ಮನವೊಲಿಸಿದ್ದರಿಂದ ಸಂಕೇತ್ ಕೆಳಗಿಳಿದಿದ್ದಾನೆ.

    ಸ್ಥಳಕ್ಕೆ ಧಾವಿಸಿದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕೂಡಲೇ ಸರ್ಕಾರದ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.

    ಕಳೆದ 7 ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೀಗ ಜಡಿದು ಹೋರಾಟ ನಡೆಸಿದರೂ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ.

    ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಸೆಪ್ಟೆಂಬರ್ 16, 2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಇಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಫೆಬ್ರವರಿ 23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತಿಮವಾಗಿ ಮನವಿಯನ್ನು ಸಲ್ಲಿಸುತ್ತೇವೆ. ಸಮಸ್ಯೆಗೆ ಸ್ಪಂದಿಸದಿದ್ದರೇ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಅಂತ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

     

  • 50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    – 37 ನೇ ದಿನಕ್ಕೆ ಕಾಲಿಟ್ಟ ಸಸಲಾಟ್ಟಿ ಏತ ನೀರಾವರಿ ಪ್ರತಿಭಟನೆ

    ಬಾಗಲಕೋಟೆ: ಐವತ್ತು ವರ್ಷಗಳ ಕಾಲ ಕಾಂಗ್ರೆಸ್‍ನವರು ಆಡಳಿತ ನಡೆಸಿ ದೇಶ ಲೂಟಿ ಹೊಡೆದಿದ್ದಾರೆ ಹಾಗಾಗಿ ಅವ್ರ ಮನೆಗಳ ಮೇಲೆಯೇ ಐಟಿ ದಾಳಿಯಾಗುತ್ತಿವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಹೇಳಿದ್ದಾರೆ.

    ಸಸಲಾಟ್ಟಿ ಏತ ನೀರಾವರಿ ಜಾರಿಗೆ ಆಗ್ರಹಿಸಿ ನೆಡೆಯುತ್ತಿರುವ ರೈತ ಪ್ರತಿಭಟನೆ 37ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಘಟಕ ಇಂದು ಮುಧೋಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

    ಜಗದೀಶ್ ಶೆಟ್ಟರ್ ಮಾತನಾಡಿ, ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿಯಾಗಿದೆ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ್ತಿಲ್ಲ, ಕೂಡಲೇ ಅವ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ರು. ಇನ್ನು ಎಂಎಲ್‍ಸಿ ಗೋವಿಂದ್‍ರಾಜ್ ಅವ್ರ ಡೈರಿ ಬಗ್ಗೆ ಸೂಕ್ತ ತನಿಖೆಯಾದ್ರೆ ಸಿಎಂ ಸಿದ್ಧರಾಮಯ್ಯ ಮನೆಗೆ ಹೋಗ್ತಾರೆ. ಇನ್ನು ಡೈರಿ ಬಗ್ಗೆಯೂ ತನಿಖೆಯಾಗಲಿ, ಅನಂತ್‍ಕುಮಾರ್ ಹಾಗು ಯಡಿಯೂರಪ್ಪ ಡೈರಿ ಸಂಭಾಷಣೆ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

    ಸಿಎಂ ಸಿದ್ದರಾಮಯ್ಯ ದಾಖಲೆ ಇಲ್ಲದೇ ಬಿಎಸ್‍ವೈ ಬಗ್ಗೆ ಮಾತನಾಡ್ತಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪಕ್ಕದ ಜಿಲ್ಲೆಯವ್ರೇ ಆದ್ರೂ ಈ ಭಾಗದ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಚಿಂತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ರೆ ಈ ಯೋಜನೆಯನ್ನ ಕೂಡಲೇ ಜಾರಿಗೊಳಿಸಬೇಕು. ಜಾರಿ ಆಗದೇ ಇದ್ದರೆ ಮುಂದೆ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಈ ಭಾಗದ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ರೆ ಈ ಬಾರಿಯ ಬಜೆಟ್‍ನಲ್ಲಿ 10 ಸಾವಿರ ಕೋಟಿ ರೂ. ತೆಗೆದಿಡಬೇಕು. ನೀರಾವರಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಇರುವ ಅವಕಾಶಗಳನ್ನ ಸಚಿವ ಎಂ.ಬಿ ಪಾಟೀಲ್ ಸರಿಯಾಗಿ ಬಳಸಿಕೊಳ್ಳದಿದ್ರೆ ಮುಂದಿನ ಜನ್ಮದಲ್ಲಿ ಅವರು ನೀರಾವರಿ ಮಂತ್ರಿ ಆಗಲ್ಲ ಎಂದರು.

    ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸುವಿಕೆ ಬಗ್ಗೆ ಮಾತನಾಡಿ, ಪಕ್ಷದ ವತಿಯಿಂದ ಬ್ರಿಗೇಡ್ ಸಮಾವೇಶ ಮಾಡಲಾಗುತ್ತೆ. ಇನ್ನು ಯಡಿಯೂರಪ್ಪ ಹಾಗೂ ನಮ್ಮ ಮಧ್ಯೆ ಇದ್ದ ಸಮಸ್ಯೆ ಬಗೆಹರಿದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿ ನಕ್ಕರು.

     

  • ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ, ಅಭಿಮಾನಿಗಳ ಪ್ರತಿಭಟನೆ

    ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ, ಅಭಿಮಾನಿಗಳ ಪ್ರತಿಭಟನೆ

    ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ ಬಳಿದು ಅವಮಾನ ಮಾಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಯಲಬುರ್ಗಾ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್‍ರ ಕಟೌಟ್‍ಗೆ ಕೆಲ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಆಕ್ರೋಶಗೊಂಡ ಜನರು ಟಿಪ್ಪು ಸುಲ್ತಾನ ವೃತ್ತದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದರು. ಆದರೆ ಪ್ರತಿಭಟನಾ ಮೆರವಣಿಗೆ ನಡೆಸಲು ಪೊಲೀಸರು ಒಪ್ಪಿಗೆ ನೀಡದಕ್ಕೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯ ಕಲೆ ಸಮಯ ಮಾತಿನ ಚಕಮಕಿ ಸಹ ನಡೆಯಿತು.

    ಪ್ರತಿಭಟನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸ್ಥಳದಲ್ಲಿ ಟಿಪ್ಪುಸುಲ್ತಾನ ಅಭಿಮಾನಿಗಳು ಧರಣಿ ನಡೆಸುತ್ತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

     

  • ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಧಾರವಾಡ: ಕಳೆದ ಜೂನ್ 15 ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ ಗೌಡನ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

    ಈ ವೇಳೆ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರೇ ಈ ಕೊಲೆಗೆ ಕಾರಣ ಎಂದು ಆರೋಪ ಮಾಡಿದ ಕೊಲೆಯಾದ ಯೋಗೀಶಗೌಡ ಪತ್ನಿ ಮಲ್ಲಮ್ಮ, ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಆರೋಪಿಸಿದರು. ಕೊಲೆಯ ಹಿಂದೆ ಜಮೀನು ವಿವಾದ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಈ ಕೊಲೆಹೆ ರಾಜಕೀಯ ಕಾರಣವಿದೆ ಹಾಗೂ ನಮಗೆ ಬೆದರಿಕೆ ಪತ್ರ ಬರುತ್ತಿದ್ದು, ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಇನ್ನು ಪ್ರತಿಭಟನೆ ವೇಳೆ ಯೋಗೀಶ ಗೌಡ ಪತ್ನಿ ಮಲ್ಲಮ್ಮ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆಯೂ ನಡೆಯಿತು.

     

  • ರಾಯಚೂರು ಕೃಷಿ ವಿವಿಗೆ ಬೀಗ ಜಡಿದು ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭಟನೆ

    ರಾಯಚೂರು ಕೃಷಿ ವಿವಿಗೆ ಬೀಗ ಜಡಿದು ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭಟನೆ

    ರಾಯಚೂರು: ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ಎಂಜಿನಿಯರ್‍ಗಳನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗೇಟ್ ಗೆ ಬೀಗ ಜಡಿದು ಹೋರಾಟ ನಡೆಸಿದ್ದಾರೆ.

    ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 16 ,2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಎಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಹಾಗೇ ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ತರಗತಿ ಹಾಗೂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವುದರಿಂದ ಕೃಷಿ ವಿವಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ. ಅಧಿಸೂಚನೆ ಹೊರಡಿಸುವುದು ಸರ್ಕಾರ ಮಟ್ಟದ ನಿರ್ಧಾರವಾಗಿರುವುದರಿಂದ ವಿವಿ ಚಟುವಟಿಕೆಗಳಿಗೆ ಅಡ್ಡಿ ಪಡಿಸದಂತೆ ವಿವಿ ಕುಲಪತಿ ಪಿ.ಎಂ.ಸಾಲಿಮಠ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಸರ್ಕಾರ ತಾರತಮ್ಯ ನೀತಿ ಬಿಟ್ಟು ನಮ್ಮನ್ನ ಪರಿಗಣಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

  • ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ: ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಆಗ್ರಹಿಸಿ ಗದಗನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನವಾದ ಇಂದು ಮುಂದುವರೆದಿದೆ. ಇಂದು ನಡೆಯುವ ಹೋರಾಟವನ್ನ ಬಸವ ಯೋಗ ಸಮೀತಿಯ ಯೋಗ ಶಿಬಿರ ಮೂಲಕ ಆರಂಭವಾಗಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಮತ್ತು ಪ್ರತಿಮಾ ನಾಯಕ್ ಎಂಬವರ ಶುಗರ್ ಲೆವಲ್ ಕಡಿಮೆ ಆಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಮಾ ನಾಯಕ್ ಮಾತ್ರ ಕೇವಲ ನೀರು ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಪ್ರತಿಭಟನ ನಿರರತ ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ.

    ವೈದ್ಯರು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೆಮಠರನ್ನು ಚೆಕಪ್ ಮಾಡಲು ಹೋದಾಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿ ಚೆಕಪ್ ಬೇಡ ಎಂದು ಹೇಳಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಇಂದು ಅನೇಕ ಸ್ವಾಮಿಜುಗಳು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರು, ಪರಿಸರ ಪ್ರೇಮಿಗಳು ಹಾಗೂ ಗದಗ ಜಿಲ್ಲಾ ವಕೀಲರ ಸಂಘದಿಂದ ಇಂದು ತಮ್ಮ ಕಾರ್ಯಕಲಾಪಗಳನ್ನ ಬಹಿಷ್ಕರಿಸಿ ಹೋರಾಟಕ್ಕೆ ಸಾಥ್ ನೀಡ್ತಿದ್ದಾರೆ.

    ಕಪ್ಪತ್ತಗುಡ್ಡ ಉಳಿಯುವಿಕೆಗೆ ಬೃಹತ್ ಪ್ರಮಾಣದಲ್ಲಿ ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ರೂ ಇತ್ತ ಮುಖ್ಯಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.

  • ಬಸ್ ತಳ್ಳಿದ ಪ್ರಭಾರ ಎಸ್‍ಪಿ- ಕೆಎಸ್‍ಆರ್‍ಟಿಸಿ ಡ್ರೈವರ್‍ಗೆ ಕ್ಲಾಸ್

    ಉಡುಪಿ: ಸಾಸ್ತನದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ಪ್ರತಿಭಟನೆ ವೇಳೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ತುಂಬಲಾಯ್ತು. ಬಸ್ ತುಂಬಿದರೂ ನಿಂತಿದ್ದ ಬಸ್ಸು ಸ್ಟಾರ್ಟ್ ಆಗ್ಲೇ ಇಲ್ಲ. ಹೈವೇ ಮಧ್ಯೆ ಬಸ್ ಇದ್ದುದರಿಂದ ರೋಡ್ ಬ್ಲಾಕ್ ಆಯ್ತು. ದಿಕ್ಕು ತೋಚದ ಪ್ರಭಾರ ಎಸ್‍ಪಿ ವಿಷ್ಣುವರ್ಧನ ಪ್ರತಿಭಟನಾಕಾರರನ್ನು ತುಂಬಿದ್ದ ಬಸ್ ತಳ್ಳಲು ಶುರು ಮಾಡಿದರು.

    ಪ್ರಭಾರ ಎಸ್‍ಪಿ ಸೇರಿದಂತೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್- ಎಸ್‍ಐ ಮಧು ಸೇರಿದಂತೆ ಪೊಲೀಸರು ಬಸ್ಸನ್ನು ಸುಮಾರು ದೂರ ತಳ್ಳಿದರು. ವಿಪರೀತ ಜನ ಇದ್ದುದರಿಂದ ಮತ್ತಷ್ಟು ದೂರ ಬಸ್ಸನ್ನು ತಳ್ಳಿ ಜರ್ಕ್ ಹೊಡೆದು ಸ್ಟಾರ್ಟ್ ಮಾಡಿಸಬೇಕಾಯ್ತು.

    ಪೊಲೀಸರು ಬಂದೋಬಸ್ತ್ ಮಾಡುವುದರ ಜೊತೆ ಎಕ್ಸ್ಟ್ರಾ ಡ್ಯೂಟಿ ಮಾಡಬೇಕಾಗಿ ಬಂತು. ಬಂಧಿತರನ್ನು ಸ್ಥಳಾಂತರಗೊಳಿಸಿ ಬಂದ ಪೊಲೀಸರು, ಕೆಎಸ್‍ಆರ್‍ಟಿಸಿ ಚಾಲಕ ಮತ್ತು ನಿರ್ವಾಹಕನಿಗೆ ಚೆನ್ನಾಗಿಯೇ ಕ್ಲಾಸ್ ತಗೊಂಡ್ರಂತೆ. ಮೊದಲೇ ಉರಿ ಬಿಸಿಲಿನಲ್ಲಿ ಅರ್ಧ ದಿನ ನಿಂತು ಬೆಂದಿದ್ದ ಪೊಲೀಸರಿಗೆ ಬಸ್ ಚಾಲೂ ಆಗದಿದ್ದುದು ಸಿಕ್ಕಾಪಟ್ಟೆ ಗರಂ ಆಗಲು ಕಾರಣವಾಯ್ತು.

    ಉಡುಪಿಯ ಸಾಸ್ತಾನದಲ್ಲಿ ಟೋಲ್ ಗೇಟ್ ವಿಚಾರವಾಗಿ ದೊಡ್ಡ ಪ್ರತಿಭಟನೆ ನಡೆಯಿತು. ಹೈವೇ ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದೆಂದು ಪ್ರತಿಭಟನಾಕಾರರು ಟೋಲ್ ಮುತ್ತಿಗೆ ಮಾಡಿದ್ರು.