Tag: protest

  • 4ನೇ ದಿನಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ- ನಾನು ಖಂಡೀಸ್ತೀನಿ ಅಂದ್ರು ಪ್ರಥಮ್

    4ನೇ ದಿನಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ- ನಾನು ಖಂಡೀಸ್ತೀನಿ ಅಂದ್ರು ಪ್ರಥಮ್

    ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ನಡೆಸ್ತಿರೋ ಅಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

    ಬುಧವಾರದಂದು ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ, ನೀಡಿದ ಭರವಸೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ವೇತನ ಹೆಚ್ಚಳವಾಗೋ ತನಕ ಇಲ್ಲಿಂದ ಕದಲಲ್ಲ ಅಂತ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಬೆಳಗ್ಗೆ ಸುಡು ಬಿಸಿಲು, ರಾತ್ರಿಯ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಮಹಿಳೆಯರು ಫ್ರೀಡಂಪಾರ್ಕ್ ಬಳಿಯ ರಸ್ತೆಯಲ್ಲಿ ಮಲಗಿ ಹೋರಾಟ ತೀವ್ರಗೊಳಿಸಿದ್ದಾರೆ.

    ಇವರ ಪ್ರತಿಭಟನೆಗೆ ಬಿಗ್‍ಬಾಸ್ ವಿನ್ನರ್ ಪ್ರಥಮ್ ಮತ್ತು ನರ್ಸ್ ಜಯಲಕ್ಷ್ಮಿ ಕೂಡ ಸಾಥ್ ನೀಡಿದ್ರು. ಬೇಸರದಲ್ಲಿದ್ದ ಕಾರ್ಯಕರ್ತೆಯರನ್ನ ಪ್ರಥಮ್ ಮಧ್ಯರಾತ್ರಿ ನಗಿಸುವ ಪ್ರಯತ್ನ ಮಾಡಿದ್ರು.

    ನಮ್ಮ ಬಾಲ್ಯದ ಜೀವನವನ್ನ, ಈಗ ಸರ್ಕಾರಿ ಶಾಲೆಯಲ್ಲಿ ಯಾರು ಓದ್ತಿದ್ದಾರೆ ಅವರ ಭವಿಷ್ಯವನ್ನ ಸದೃಢಗೊಳಿಸೋದಕ್ಕೆ ಇವರ ಪಾತ್ರ ಬಹಳ ಮಹತ್ವದ್ದು. ಎಲ್ಲಾ ದಾಸೋಹಗಳಲ್ಲಿ ಬಹಳ ಪ್ರಮುಖವಾದ ಪಾತ್ರ ಇವರದ್ದಿರುತ್ತದೆ. ಒಂಚೂರು ವೇತನ ಪರಿಷ್ಕರಣೆ ಮಾಡೋಕಾಗಲ್ಲ ಅಂದ್ರೆ ಹೇಗೆ? ಇವರಿಗೆ ಯಶಸ್ಸು ಸಿಗೋವರೆಗೂ ಜೊತೆಯಲ್ಲಿರಬೇಕು ಅಂತ ನಿರ್ಧರಿಸಿದ್ದೇನೆ. ಇಷ್ಟು ಹೆಂಗಸರು ಬೀದಿಯಲ್ಲಿದ್ದಾರೆ. ಇವರ ಶ್ರಮಕ್ಕೆ, ನೋವಿಗೆ, ಕಷ್ಟಕ್ಕೆ ಪರಿಹಾರ ಸಿಗದಿದ್ರೆ ಖಂಡಿತವಾಗಿಯೂ ಖಂಡಿಸ್ತೀನಿ ಅಂದ್ರು.

    ಇದೇ ವೇಳೆ ಮಾತನಾಡಿದ ಜಯಲಕ್ಷ್ಮೀ, ಇವರ ಹೋರಾಟದಲ್ಲಿ ಕೈಜೋಡಿಸಬೇಕೆಂದು ಬಂದಿದ್ದೀನಿ. ನಮ್ಮಂತವರು ಇವರಿಗೆ ಬಂಬಲ ನೀಡಿದ್ರೆ ಸರ್ಕಾರದ ಮೇಲೆ ಒತ್ತಡ ಹೇರೋಕೆ ಸಹಾಯವಾಗುತ್ತೆ. ಇಲ್ಲಿ ಸಾಕಷ್ಟು ಗರ್ಭಿಣಿಯರು ಇದ್ದಾರೆ, ಬಾಣಂತಿಯರು, ಪುಟ್ಟ ಮಕ್ಕಳಿದ್ದಾರೆ. ಅವರ ನಿತ್ಯಕರ್ಮಕ್ಕೆ, ಬಟ್ಟೆ ಬದಲಯಿಸಬೇಕೆಂದರೆ ಎಷ್ಟು ಕಷ್ಟವಾಗುತ್ತಿದೆ. ಇದು ಮುಖ್ಯಮಂತ್ರಿಗಳಿಗೆ ಯಾಕೆ ಅರ್ಥವಾಗ್ತಿಲ್ಲ ಅಂತ ನನಗೆ ಅನ್ನಿಸುತ್ತದೆ. ಅವರು ಇಲ್ಲಿ ಬಂದು ಎಲ್ಲಾ ಹೆಂಗಸರಿಗೆ ಸ್ಪಂದಿಸಿದ್ರೆ ದೊಡ್ಡ ವ್ಯಕ್ತಿಯಾಗ್ತಾರೆ. ಪ್ರತಿ ಸೆಲೆಬ್ರಿಟಿ ಹಾಗೂ ಸಾಮಾನ್ಯ ಜನರು ಇಲ್ಲಿಗೆ ಬಂದು ಪ್ರತಿಭಟನಾಕಾರರಿಗೆ ಬೆಂಬಲಿಸಬೇಕು ಅಂದ್ರು.

    ಬುಧವಾರ ಸಭೆಗೆ ನಮ್ಮನ್ನು ಸಿಎಂ ಕರೆದೇ ಇಲ್ಲ. ಸರ್ಕಾರ ನಮ್ಮ ಒಗ್ಗಟ್ಟನ್ನು ಮುರಿಯೋ ಯತ್ನ ಮಾಡ್ತಿದೆ. ಆದ್ರೆ, ಇದು ಫಲಿಸಲ್ಲ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಹೋರಾಟ ನಿರಂತರ ಅಂತಾ ಅಂಗನವಾಡಿ ನೌಕರರ ಮುಖ್ಯಸ್ಥೆ ವರಲಕ್ಷ್ಮಿ ಸ್ಪಷ್ಪಡಿಸಿದ್ರು.

  • ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    – ಹೋರಾಟಕ್ಕೆ ಕೈಜೋಡಿಸಿದ ಸಹಸ್ರಾರು ಮಂದಿ

    ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ರಾತ್ರಿಯೂ ಮುಂದುವರೆದಿದೆ.

    ಪ್ರತಿಭಟನಾಕಾರರು ನಗರದ ಫ್ರೀಡಂಪಾರ್ಕ್‍ನ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಸಹ ಮಲಗಿ ಪ್ರತಿಭಟಿಸಿದ್ರು. ವೇತನ ಹೆಚ್ಚಳವಾಗುವ ತನಕ ನಾವು ಇಲ್ಲಿಂದ ಕದಲೋದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಆಗಿ ತಿಳಿಸಿದ್ರು. ಗಾಳಿ ಚಳಿಯನ್ನ ಲೆಕ್ಕಿಸದೇ ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಬೀದಿಯಲ್ಲಿ ಮಲಗಿದ್ರು. ಈ ದೃಶ್ಯಗಳು ಎಲ್ಲರ ಮನಕಲುಕುವಂತಿದ್ದವು.

    ಇನ್ನು ಸರ್ಕಾರ ಬೀದಿಯಲ್ಲಿ ಮಲಗಿರೋರಿಗೆ ಅಂತಾ ನೂರಾರು ಜಮಾಖಾನಗಳನ್ನು ಕಳುಹಿಸಿಕೊಟ್ಟಿತ್ತು. ಆದ್ರೆ ಇವುಗಳನ್ನು ಸ್ವೀಕರಿಸಲು ಒಪ್ಪದ ಅಂಗನವಾಡಿ ಕಾರ್ಯಕರ್ತರು ನಾವು ರಸ್ತೆಯ ಮೇಲೆ ಮಲಗ್ತೀವಿ. ನಿಮ್ಮ ಜಮಖಾನ ಬೇಡ ಅಂತಾ ವಾಪಸ್ ಕಳುಹಿಸಿಕೊಟ್ಟರು. ಪೌರಕಾರ್ಮಿಕರು ರಸ್ತೆಯನ್ನ ಸ್ವಚ್ಛಗೊಳಿಸಿದ್ರು. ಆ ರಸ್ತೆಯ ಮೇಲೆಯೇ ಸಾವಿರಾರು ಜನ ಮಲಗಿ ರಾತ್ರಿ ಕಳೆದರು.

    ಮಂಗಳವಾರದಂದು ಶೌಚಾಲಯ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಫ್ರೀಡಂ ಪಾರ್ಕ್ ಬಳಿ 20ಕ್ಕೂ ಹೆಚ್ಚು ಇ ಟಾಯ್ಲೆಟ್‍ಗಳ ವ್ಯವಸ್ಥೆಯನ್ನ ಕಲ್ಪಿಸಿದೆ. ವಿಪರ್ಯಸ ಅಂದ್ರೆ ಇ ಟಾಯ್ಲೆಟ್‍ಗಳನ್ನು ಬಳಸೋದು ಹೇಗೆ ಅನ್ನೋದು ಪ್ರತಿಭಟನಾ ನಿರತರಾದ ಕೆಲವು ಹೆಣ್ಣುಮಕ್ಕಳಿಗೆ ಗೊತ್ತಿಲ್ಲದೆ ನಿತ್ಯ ಕರ್ಮಗಳನ್ನು ಪೂರೈಸಲು ನಾನಾ ಅವಸ್ಥೆ ಪಡ್ತಿದ್ದಾರೆ. ಅಹೋರಾತ್ರಿ ಧರಣಿಯಲ್ಲಿ ಇಲ್ಲಿಯತನಕ ಸುಮಾರು 12ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದವರಿಗೆ 108 ಅಂಬುಲೆನ್ಸ್‍ನಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗ್ತಿದೆ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ಕುಡಿಯೋ ನೀರನ್ನು ಪೂರೈಕೆ ಮಾಡಲಾಗ್ತಿದೆ.

    ಹೋರಾಟ ಮತ್ತಷ್ಟು ತೀವ್ರಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದು, ಇದೀಗ ರಾಜ್ಯದ ಮೂಲೆ ಮೂಲೆಗಳಿಂದ ಸರಿಸುಮಾರು 20 ಸಾವಿರ ನೌಕರರು ಬೆಂಗಳೂರಿಗೆ ಧಾವಿಸ್ತಿದ್ದಾರೆ. ರೈಲು, ಬಸ್‍ಗಳ ಮೂಲಕ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಇದ್ರಿಂದಾಗಿ ಇವತ್ತು ಮತ್ತಷ್ಟು ಟ್ರಾಫಿಕ್ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.

    ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೊಮ್ಮೆ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಮಾತನಾಡೋದಾಗಿ ಹೇಳಿದ್ದಾರೆ. ಆ ಮಾತುಕತೆಯಾದ್ರೂ ಸಫಲವಾಗುತ್ತಾ ಕಾದು ನೋಡಬೇಕಿದೆ.

  • ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

    ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

    ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಸಂಬಳ ಏರಿಕೆಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಸರ್ಕಾರ ಸಮಸ್ಯೆಯನ್ನು ಬಗೆ ಹರಿಸುವ ಬದಲು ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವ ವಾದವನ್ನು ಮುಂದಿಟ್ಟಿದೆ.

    ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ನಿಯಮ 69ರ ಅಡಿ ಚರ್ಚೆ ಆರಂಭವಾಯಿತು. ಪ್ರತಿಪಕ್ಷದ ನಾಯಕರು ಸರ್ಕಾರ ನಡೆಯನ್ನು ಟೀಕಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಚಿವೆ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದರು.

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಗೌರವ ಧನ ಕೊಡಲು ಆರಂಭವಾಗಿದ್ದು, ಅಂದಿನಿಂದಲೂ ಕೇಂದ್ರ ಸರ್ಕಾರ ಶೇ.90 ರಷ್ಟು ಗೌರವಧನ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಾಲು ಕಡಿತಗೊಳಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಪ್ರತಿ ವರ್ಷ ನಾವು 500 ರೂ ಹೆಚ್ಚಳ ಮಾಡಿದ್ದೇವೆ. ಆದ್ರೆ 2016-17ರಲ್ಲಿ ಹೆಚ್ಚಳ ಮಾಡಿಲ್ಲ, ಅದು ಕೇಂದ್ರ ಸರ್ಕಾರದ ಕ್ರಮದಿಂದ ಆಗಿಲ್ಲ. ಬರೀ ಮಾತನಾಡಬಹುದು, ಕಾಳಜಿ ತೋರಿಸಬಹುದು.ಆದ್ರೆ ಕೇಂದ್ರ ಸರ್ಕಾರ ಪಾಲು ಕಡಿಮೆ ಮಾಡಿದ್ದು ಯಾಕೆ? ಇದು ಮಹಿಳಾ ಪರ ಕಾಳಜಿನಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು

    ಸಿಎಂ ಈ ರೀತಿ ಮಾತನ್ನು ಆಡಿದಾಗ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ಸಿಟಿ ರವಿ ಮಾತನಾಡಿ, ಹೆಚ್ಚಿನ ಹಣ ನೀಡಲು ನಿಮಗೇನು ಬಂದಿದೆ? ಗೋವಾ, ತಮಿಳುನಾಡಿನಲ್ಲಿ ಕೊಟ್ಟಿಲ್ವಾ ಎಂದು ಮರು ಪ್ರಶ್ನೆ ಹಾಕಿದರು.

    ಈ ವೇಳೇ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕಾಂಗ್ರೆಸ್ ಶಾಸಕರು ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿದರೆ, ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಬಿಜೆಪಿ ಅವರದ್ದು ಭಂಡತನದ ಪರಮಾವಧಿ ಎಂದು ಸಿಎಂ ಹೇಳುತ್ತಿದ್ದಂತೆ ಪ್ರತಿಭಟನೆ ಜೋರಾಗಿ ಕೊನೆಗೆ ಸ್ಪೀಕರ್ ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

    ಹೊರೆಯಾಗಲ್ಲ: ಜಗದೀಶ್ ಶೆಟ್ಟರ್ ಮಾತನಾಡಿ, ಹಿಂದೆ ನಾನು ಸಿಎಂ ಆಗಿದ್ದಾಗ ದಿನಗೂಲಿ ನೌಕರರ ಖಾಯಂ ಮಾಡಿದ್ದೇನೆ. ಕೆಳಹಂತದ ನೌಕರರ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಪೌರ ಕಾರ್ಮಿಕರನ್ನು ಖಾಯಂ ಮಾಡಿ. ಅದಕ್ಕೆ ಸಂಬಂಧಿಸಿದ ಯಾವುದೇ ಬಿಲ್ ತಂದ್ರೂ ಬೆಂಬಲಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ 10,000 ರೂ ವೇತನ ನಿಗದಿ ಪಡಿಸಿ. ಹೆಣ್ಣುಮಕ್ಕಳು ಕಣ್ಣೀರು ಹಾಕಿ ಶಾಪ ಹಾಕಿದ್ರೆ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ನಿನ್ನೆ ಇಡೀ ರಾತ್ರಿ ಬೀದಿಯಲ್ಲಿ ಮಹಿಳೆಯರು ಮಲಗಿದ್ದಾರೆ. ಸಂಬಳ ಏರಿಕೆ ಮಾಡಿದರೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.

    ಶೀಘ್ರವೇ ಸ್ಪಂದಿಸಿ: ಯಾವುದೇ ಒಂದು ಸಮುದಾಯದವರು ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲ ಸಮುದಾಯಕ್ಕೆ ಸೇರಿದವರು ಅಂಗನವಾಡಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಮನವಿಗೆ ಸರ್ಕಾರ ಸ್ಪಂದಿಸಲೇಬೇಕು. ಕನಿಷ್ಠ ವೇತನ ಹತ್ತು ಸಾವಿರ ಕೇಳ್ತಿದ್ದಾರೆ ಇದ್ರಲ್ಲಿ ನ್ಯಾಯ ಇದೆ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದರು.

    ಕಾರ್ಯಕರ್ತೆಯರ ಬೇಡಿಕೆ ಏನು?
    ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದು, ವೇತನ 7 ಸಾವಿರದಿಂದ 10 ಸಾವಿರ ರೂ. ಹೆಚ್ಚಳ ಮಾಡಬೇಕು. ಸಹಾಯಕಿಯರ ವೇತನ 3,500 ರಿಂದ 7,500 ರೂ. ಹೆಚ್ಚಳ ವಾಗಬೇಕು. ಸಹಾಯಕಿಯರಿಗೆ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.

    ಪ್ರತಿಭಟನೆ ಯಾಕೆ?
    ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ಮತ್ತು ಸಹಾಯಕಿಯರಿಗೆ 3 ಸಾವಿರ ರೂ. ಸಂಬಳ ಸಿಗುತಿತ್ತು. ಈ ವರ್ಷದ ಬಜೆಟ್‍ನಲ್ಲಿ ಸರ್ಕಾರ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಮತ್ತು ಸಹಾಯಕಿಯರಿಗೆ 500 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಈ ಹೆಚ್ಚಳ ನಮಗೆ ಸಾಲುವುದಿಲ್ಲ. ಹತ್ತಿರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸರ್ಕಾರಗಳು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಹಾಯಕಿಯರಿಗೆ 7,500 ರೂ. ನೀಡುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನಮಗೆ ಇಷ್ಟೇ ಸಂಬಳ ನೀಡಬೇಕೆಂದು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

    ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

    – ಅನ್ನ ನೀರಿಲ್ಲದೇ ಮಹಿಳೆಯರು ನಿತ್ರಾಣ, ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಾರ್ಯಕರ್ತೆಯರು

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಫ್ರೀಡಂ ಪಾರ್ಕ್‍ನಲ್ಲಿ ನಡೆದ ಈ ಧರಣಿಗೆ ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ.

    ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಚ್‍ಡಿಕೆ, ಪ್ರತಿಭಟನಾಕಾರರ ಅಹವಾಲು ಆಲಿಸಿ ಬೆಂಬಲ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಿಮ್ಮ ಸೇವೆಗೆ 612 ಕೋಟಿ ರೂ. ಕೊಡಬೇಕು. ಸರ್ಕಾರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಿತ್ತು. ಸದನದಲ್ಲಿ ನಿಮ್ಮ ಪರ ಮಾತನಾಡ್ತಿನಿ ಅಂತಾ ಭರವಸೆ ನೀಡಿದರು.

    ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರೋ ನಿಮಗೆ ನೀರಿಲ್ಲ. ಹೀಗಾಗಿ ನೀರಿನ ಟ್ಯಾಂಕರ್ ಕಳಿಸುತ್ತೇನೆ. ನಿತ್ಯ ಕರ್ಮದ ವ್ಯವಸ್ಥೆ ಮಾಡಲು ಪೊಲೀಸರಿಗೆ ಸೂಚಿಸುತ್ತೇನೆ. ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲು ಸೂಚಿಸುತ್ತೇನೆ. ಅಂಗನವಾಡಿ ಸಮಸ್ಯೆಗೆ ಮುಖ್ಯಮಂತ್ರಿ ಬಂದು ಸ್ಪಂದಿಸಬೇಕಿತ್ತು. ಈ ಬಗ್ಗೆ ಸಿಎಂ ಜೊತೆ ದೂರವಾಣಿ ಮೂಲಕ ಮಾತನಾಡ್ತೀನಿ. ನಿಮಗೆ ಆಗಿರೋ ತೊಂದರೆಗೆ ನಾನು ಕ್ಷಮೆಯಾಚಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತೆ ನಡೆದುಕೊಂಡಿರಲಿಲ್ಲ. ಇದೀಗ ನೀವು ಒಪ್ಪಿಕೊಂಡರೆ ತಿಂಡಿ ವ್ಯವಸ್ಥೆ ಮಾಡ್ತೀನಿ ಅಂತಾ ಹೇಳಿದರು.

    ಸರ್ಕಾರದ ವಿರುದ್ಧ ಕಿಡಿ: ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ಇವರ ಕಣ್ಣಲ್ಲಿ ನೀರು ಹಾಕಿಸಿ ಈ ಸರ್ಕಾರ ಏನ್ ಸಾಧನೆ ಮಾಡುತ್ತೆ? ಆ ಭವನ ಈ ಭವನ ಅಂತಾ ಕಟ್ಟುತ್ತಾರೆ. ಅದಕ್ಕೆ ನೂರಾರು ಕೋಟಿ ರೂ. ಹಣ ವ್ಯಯ ಮಾಡ್ತಾರೆ. ಯೋಜನೆ ಹೆಸರಲ್ಲಿ ಸರ್ಕಾರ ಕಮಿಷನ್ ಪಡೆಯುತ್ತದೆ. ಯಾವುದಾದ್ರೂ ಒಂದು ಯೋಜನೆಯ ಕಮಿಷನ್ ನಿಲ್ಲಿಸಿದ್ರೆ ಈ ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಿಸಬಹುದು ಅಂತಾ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ಮಹಿಳೆಯರನ್ನು ರಸ್ತೆ ಮೇಲೆ ಮಲಗಿಸಿದ್ರೆ ಇವರಿಗೆ ಗೌರವ ಬರುತ್ತಾ? ಸರ್ಕಾರಕ್ಕೆ ಕನಿಕರ ಇಲ್ವಾ? ಅಂತಾ ಕಿಡಿಕಾರಿದ ಎಚ್‍ಡಿಕೆ ಇವರಿಗೆ ಕುಡಿಯುವ ನೀರಿಲ್ಲ ಅಂತಾ ಸಿಎಂ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿದ್ರು.

    ಅನ್ನ, ನೀರು ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ನಡೆಸಿದ್ದು, ಕೆಲವು ಮಹಿಳೆಯರು ಹಸಿವಿನಿಂದ ನಿತ್ರಾಣರಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿದ್ದಾರೆ. ಕಳೆದ 21 ಗಂಟೆಗಳಿಂದ ಅಂಗನವಾಡಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕ ಚಿಕ್ಕ ವಯಸ್ಸಿನ ನೂರಾರು ಮಕ್ಕಳು ಬೀದಿಯಲ್ಲೇ ನಿದ್ದೆಹೋಗಿದ್ದರು. ಅಂಗನವಾಡಿ ನೌಕರರು ರಸ್ತೆಯಲ್ಲಿ ನಿದ್ದೆಗೆ ಜಾರಿದ್ದಾಗ ಸಾವಿರಾರು ಪೊಲೀಸರು ರಕ್ಷಣೆ ನೀಡಿದ್ರು.

  • ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರು ಆಹೋರಾತ್ರಿ ಧರಣಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಜಾಮ್‍ಗೆ ಸಾಕ್ಷಿಯಾಗಿದೆ.

    ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಪ್ರಮಾಣದ ವಾಹನ ದಟ್ಟಣೆ ಉಂಟಾಗಿದೆ. ಒಕುಳಿಪುರಂ, ರಾಜಾಜಿನಗರ ಎಂಟ್ರೆಂನ್ಸ್, ಆನಂದರಾವ್ ವೃತ್ತ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ, ಪ್ಯಾಲೇಸ್ ರಸ್ತೆ, ಕೆ.ಜಿ ರೋಡ್, ಕಾರ್ಪೋರೇಷನ್, ಮಲ್ಲೇಶ್ವರಂ, ರೇಸ್‍ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ಕೃಷ್ಣ ಫ್ಲೋರ್ ಮಿಲ್ ಜಂಕ್ಷನ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಟ್ರಾಫಿಕ್ ಜಾಮ್‍ನಿಂದಾಗಿ ವಾಹನ ಸವಾರರು ಬೆಳ್ಳಂಬೆಳಗ್ಗೆ ಹೈರಾಣಾಗಿದ್ದಾರೆ. ಸೂಕ್ತ ಬದಲಿ ಮತ್ತು ಪರ್ಯಾಯ ಮಾರ್ಗಗಳಿಲ್ಲದೇ ವಾಹನ ಸವಾರರು ತತ್ತರಿಸಿದ್ದಾರೆ.

    ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್‍ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು.

  • ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    – ನಿತ್ಯ ಕರ್ಮ ಮುಗಿಸಲು ಸಾಲುಗಟ್ಟಿದ ಮಹಿಳೆಯರು

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹ್ರಹಿಸಿ ಅಂಗನವಾಡಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ಸಾವಿರಾರು ಮಂದಿ ಪ್ರತಿಭಟನೆ ಮಾಡ್ತಿರುವ ಜಾಗದಲ್ಲಿ ಮೂಲಭೂತ ಸೌಲಭ್ಯಗಳೇ ಸರಿಯಾಗಿಲ್ಲ.

    ಸಾವಿರಾರು ಮಂದಿಗೆ ಇರೋದು ಒಂದೇ ಶೌಚಾಲಯ. ರಾತ್ರಿಯಿಡೀ ರಸ್ತೆಯಲ್ಲಿ ಮಲಗಿದ್ದ ಸಾವಿರಾರು ಮಹಿಳೆಯರು ಬೆಳಗಿನ ಜಾವವೇ ನಿತ್ಯ ಕರ್ಮಗಳನ್ನು ಮುಗಿಸಲು ಮುಗಿಬಿದ್ದಿದ್ದಾರೆ. ಸಾಲುಗಟ್ಟಿ ನಿಂತಿದ್ದಾರೆ. ಈ ಸರತಿ ಸಾಲಿನ ಉದ್ದವೇ ಸರಿಸುಮಾರು ಅರ್ಧ ಕಿಲೋಮೀಟರ್‍ನಷ್ಟಿದೆ. ಮುಖ ತೊಳಿಯಲು ಸರಿಯಾಗಿ ನೀರು ಕೂಡ ಸಿಕ್ತಿಲ್ಲ.

    ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್‍ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು. ಫ್ರೀಡಂಪಾರ್ಕ್ ರಸ್ತೆ ಬಳಿ ಪ್ರತಿಭಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿದೆ.

     

  • ಶಾಸಕ ಬಿ.ಆರ್.ಪಾಟೀಲರಿಂದ ಧಮ್ಕಿ ಪ್ರಕರಣ- ಪತ್ರಕರ್ತರ ಸಂಘದಿಂದ ಪ್ರತಿಭಟನೆ

    ಶಾಸಕ ಬಿ.ಆರ್.ಪಾಟೀಲರಿಂದ ಧಮ್ಕಿ ಪ್ರಕರಣ- ಪತ್ರಕರ್ತರ ಸಂಘದಿಂದ ಪ್ರತಿಭಟನೆ

    ಕಲಬುರಗಿ: ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿ ಮೇಲೆ ಶಾಸಕ ಬಿ.ಆರ್.ಪಾಟೀಲ್ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಶಾಸಕ ಬಿ.ಆರ್.ಪಾಟೀಲ್ ಮಾಧ್ಯಮಗಳಿಗೆ ನಿಂದಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯ ತಡೆಯಲು ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಸೇರಿದಂತೆ ಶಿವರಂಜನ್ ಸತ್ಯಂಪೇಟೆ, ಪಿಟಿಐ ಜೋಶಿ, ರವಿ ನರೋಣ, ಸಿದ್ದು ಸುಬೇದಾರ, ದೇವಿಂದ್ರಪ್ಪ ಕೊಪ್ಪನೂರು ಮುಂತಾದ ಹಲವು ಪತ್ರಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಬಿ.ಆರ್.ಪಾಟೀಲ್ ಅವರ ಮಾಜಿ ಆಪ್ತ ಸಹಾಯಕ ದೇವೆಂದ್ರ ಬಿರಾದಾರ ಅವರ ಕಾಮದಾಟದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಕೋಪಗೊಂಡ ಶಾಸಕರು ವರದಿಗಾರ ಪ್ರವೀಣ್ ರೆಡ್ಡಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದರು.

     

  • ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ: ದರ್ಶನ್

    ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ: ದರ್ಶನ್

    ಬೆಂಗಳೂರು: ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ ಅಂತ ನಟ ದರ್ಶನ್ ಹೇಳಿದ್ದಾರೆ.

    ಇಂದು ಫ್ರೀಡಂ ಪಾರ್ಕ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ದರ್ಶನ್, ಖಂಡಿತ ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಸಾಥ್ ಕೊಡ್ತಿನಿ. ಪಕ್ಕದ ರಾಜ್ಯದ ಎಲ್ಲಾ ಊಟ ನಮ್ಮ ಊರಲ್ಲಿ ಸಿಗುತ್ತೆ. ಅದೇ ನಮ್ಮ ಊಟ ಉಪ್ ಸಾರು ಮುದ್ದೆ ಬೇರೆ ಊರಲ್ಲಿ ಸಿಗುತ್ತಾ ಎಂದು ಪ್ರಶ್ನಿಸಿ ಖಂಡಿತ ಡಬ್ಬಿಂಗ್ ಬೇಡ ಅಂದ್ರು.

    ಜಗ್ಗೇಶ್ ಗರಂ: ಇದೇ ವೇಳೆ ನಟ ಜಗ್ಗೇಶ್ ಮಾತನಾಡಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾನು ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದಕ್ಕೆ ಅದ್ಯಾರಿಗೋ 50 ಲಕ್ಷ ಲಾಸ್ ಆಗಿದ್ಯಂತೆ. ನಾನು ಕಟ್ಟಿಕೊಡಬೇಕಂತೆ. ನೀನು ಸಿಗು ಕಟ್ಟಿಕೊಡ್ತೀನಿ. ನಾನೇನು ರೇಪ್ ಮಾಡಿದ್ದಿನಾ? ಕಳ್ಳತನ ಮಾಡಿದ್ದಿನಾ? ಕನ್ನಡದ ಪರ ಸೊಲ್ಲೆತ್ತಿದ್ದೀನಿ. ಜೈಲಿಗೆ ಕಳಿಸಿದ್ರೆ ಸಂತೋಷವಾಗಿ ಹೋಗ್ತಿನಿ. ಕಾಲರ್ ಎತ್ತಿ ಬೇಕಾದ್ರೆ ಕನ್ನಡಕ್ಕಾಗಿ ಜೈಲಿಗೆ ಹೋಗ್ತೀನಿ. ಇದಕ್ಕೆಲ್ಲಾ ಕೇರ್ ಮಾಡಲ್ಲ ಅಂದ್ರು.

    ಕನ್ನಡದ ನೆಲಕ್ಕೆ 35 ರ್ವಗಳಿಂದ ನಮ್ಮದೇ ಆದ ಕಲಾ ಸೇವೆ ಮಾಡಿದ್ದೇವೆ. ನಮಗೆ ಎಲ್ಲವೂ ಸಿಕ್ಕಿದೆ. ಮುಂದಿನ ಪೀಳಿಗೆಯವರು ಬೆಳೆಯೋದು ಬೇಡ್ವಾ? ಅಂದ್ರು. ಎಫ್‍ಎಂ ರೇಡಿಯೋಗಳ ವಿರುದ್ಧ ವಾಗ್ದಾಳಿ ಮಾಡಿದ ಜಗ್ಗೇಶ್, ಕನ್ನಡ ಸ್ಟೇಷನ್ ಅಂತ ಇರೋದು. ಆದ್ರೆ ಹಿಂದಿ ಹಾಡು ಹಾಕ್ತಾರೆ. ಈಗ ನಮ್ಮ ಸಿನಿಮಾವನ್ನ ಕಸೆದುಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯದಲ್ಲಿ ಕನ್ನಡಿಗರು ಹೆಚ್ಚು ಜನರಿದ್ದಾರೆ. ಅಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ ಅಂತ ಪ್ರಶ್ನಿಸಿದ್ರು.

    80 ವರ್ಷಗಳ ಇತಿಹಾಸವಿರುವ ಈ ಕನ್ನಡ ಚಿತ್ರರಂಗವನ್ನ ಸಾಯಿಸಬೇಡಿ. ಕನ್ನಡ ಶಾಲೆಗಳ ಮುಚ್ಚಿ ಹೋದಾಗ ಏನ್ ಮಾಡಿದ್ರಿ ಸ್ವಾಮಿ ಅಂತ ಪ್ರಶ್ನಿಸಿದ್ರು. ಹೆದರಿಕೆ ಕರೆಗಳು ಬರ್ತಿವೆ. ನಾನು ಈ ರೀತಿಯ ಫೋನ್ ಕಾಲ್‍ಗಳಿಗೆ ಹೆದರೋದಿಲ್ಲ ಅಂತ ಹೇಳಿದ್ರು.

    ನಿರ್ದೇಶಕ ಎಂಎಸ್ ರಮೇಶ್: ಯಾವುದೇ ಕಾರಣಕ್ಕೂ ಡಬ್ಬಿಂಗ್ ಬರಲು ಬಿಡಲ್ಲ.

    ಸಾಧು ಕೋಕಿಲ: ತಾಕತ್ ಇದ್ರೆ ಎಲ್ಲ ಭಾಷೆಯನ್ನ ಕನ್ನಡ ಭಾಷೆಯಲ್ಲಿ ಡಬ್ ಮಾಡಲಿ. ಅದು ಮಾಡೋಕೆ ಆಗಲ್ಲ. ಸಿನಿಮಾ ಯಾಕೆ ಡಬ್ ಮಾಡ್ತಾರೆ.

    ಬುಲೆಟ್ ಪ್ರಕಾಶ್: ಹೋರಾಟ ಇಲ್ಲಿಗೆ ನಿಲ್ಲಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ನಡೆಯುತ್ತೆ.

    ನಾಗತಿಹಳ್ಳಿ ಚಂದ್ರಶೇಖರ್: ಕಂಠದಾನ ಮಾಡಿ ಇಡೀ ಸಿನಿಮಾ ಪ್ರೋಸೆಸ್ ಮಟ್ಟ ಹಾಕಲಾಗುತ್ತಿದೆ. ಇದು ಕಥೆ ಮತ್ತು ಸೃಜನಶೀಲ ಚಿತ್ರಗಳಿಗೆ ಅಪಾಯಕಾರಿ. ಒಟ್ಟು ಭಾಷೆಗೆ ಪೆಟ್ಟು ಬೀಳುತ್ತಿದೆ. ಕನ್ನಡ ಪರ ಹೋರಾಟಗಾರರು ನಮ್ಮ ನಾಡು ನುಡಿಗಾಗಿ ಹೋರಾಟ ಮಾಡ್ತಿದ್ದಾರೆ. ಸಂಸ್ಕೃತಿಯ ಬಗ್ಗೆ ಸ್ವಲ್ಪನಾದ್ರೂ ಗೌರವ ಕೊಡಬೇಕು.

    ವಿ.ಮನೋಹರ್: ಡಬ್ಬಿಂಗ್‍ಗೆ ಅವಕಾಶ ನೀಡಿದ್ರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ.

    ಹಾಸ್ಯ ನಟ ಮಿತ್ರ: ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಸಿನಿಮಾಗಳು ಬರಬಾರದು. ನಮ್ಮ ಹೋರಾಟ ಮುಂದುವರೆಯುತ್ತೆ.

    ಸೃಜನ್: ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಕುಟುಂಬ ಕೆಲಸ ಮಾಡ್ತಿದೆ. ಡಬ್ಬಿಂಗ್ ಬಂದ್ರೆ ಅವರ ಕುಟುಂಬ ಬೀದಿಗೆ ಬರುತ್ತೆ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಬೇಡ. ಡಬ್ಬಿಂಗ್ ಸಿನಿಮಾ ನೋಡೋಲ್ಲ ಅಂತ ಪ್ರಮಾಣ ಮಾಡಿ ಆಗ ಡಬ್ಬಿಂಗ್ ಬರಲ್ಲ.

    ಪ್ರಜ್ವಲ್ ದೇವರಾಜ್: ಚಿತ್ರರಂಗದಿಂದ ಸಾವಿರಾರು ಕುಟುಂಬಗಳು ಊಟ ಮಾಡ್ತಿವೆ. ದೊಡ್ಡವರ ಮಾರ್ಗದರ್ಶನದಲ್ಲಿ ಹೋರಾಟ ಮಾಡ್ತಿವಿ.

    ಮಂಡ್ಯ ರಮೇಶ್: ನಿರ್ಮಾಪಕರು ಮನಸ್ಸು ಮಾಡಿದ್ರೆ ಡಬ್ಬಿಂಗ್ ನಿಲ್ಲಿಸೋದು ದೊಡ್ಡ ವಿಷಯವಲ್ಲ. ಡಬ್ಬಿಂಗ್ ಕಲಾವಿದರು ಯಾವುದೇ ಡಬ್ಬಿಂಗ್ ಮಾಡಬಾರದು. ಡಬ್ಬಿಂಗ್ ಖಂಡಿತ ಬೇಡ.

    ಪ್ರತಿಭಟನೆಯಲ್ಲಿ ಭಾಗಿಯಾದವರು: ದರ್ಶನ್, ಜಗ್ಗೇಶ್, ಸೃಜನ್ ಲೋಕೇಶ್, ದರ್ಶನ್, ಪ್ರಜ್ವಲ್ ದೇವರಾಜ್, ದಿನಕರ್ ತುಗುದೀಪ್, ಕವಿರಾಜ್, ವಾಟಾಳ್ ನಾಗರಾಜ್, ಪ್ರವೀಣ್ ಕುಮಾರ್ ಶೆಟ್ಟಿ, ಕುಮಾರ್, ನಟ ರವಿಶಂಕರ್, ತಬಲನಾಣಿ, ನಿರ್ದೇಶಕ ಸಾಯಿಪ್ರಕಾಶ್, ಮಿತ್ರಾ, ಸಂಗೀತ ನಿರ್ದೇಶಕ ವಿ. ಮನೋಹರ್ ಸೇರಿದಂತೆ ಸ್ಯಾಂಡಲ್‍ವುಡ್‍ನ ನಟರು, ನಿದೇಶಕರು, ಕನ್ನಡಪರ ಸಂಘಟನೆಗಳು ಹಾಗೂ ಕಿರುತೆರೆ ನಟರು ಡಬ್ಬಿಂಗ್ ವಿರುದ್ಧದ ಪ್ರತಿಭಟನಾಯಲ್ಲಿ ಭಾಗಿಯಾಗಿದ್ರು.

     

  • ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಮೂಲನಕ್ಷೆ ಬಿಟ್ಟು ಹಾವೇರಿ ತಾಲೂಕಿನ ಕಳ್ಳಿಹಾಳ ಮತ್ತು ತೋಟದಯಲ್ಲಾಪುರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರಿಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅಜ್ಜಪ್ಪ ಮತ್ತು ಹೊನ್ನಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು. ಕಳೆದ ಎರಡು ವರ್ಷಗಳಿಂದ ಕಳ್ಳಿಹಾಳ ಗ್ರಾಮದ ಬಳಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಮೂಲನಕ್ಷೆಯನ್ನ ತೋರಿಸುತ್ತಿಲ್ಲ. ಮೊದಲು ಸರ್ವೇ ಮಾಡಿದ ಜಮೀನು ಬೇರೆ, ಆದ್ರೆ ಈಗ ಕಾಲುವೆ ನಿರ್ಮಾಣ ಮಾಡುತ್ತಿರೋ ಜಮೀನುಗಳು ಬೇರೆ. ಹಾಗಾಗಿ ಅಧಿಕಾರಿಗಳು ಮೂಲನಕ್ಷೆಯನ್ನ ತೋರಿಸಿ ತುಂಗಾಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.

    ಕಳ್ಳಿಹಾಳ ಹಾಗೂ ತೋಟದಯಲ್ಲಾಪುರ ಗ್ರಾಮದ ರೈತರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಇದೂವರೆಗೂ ಯಾರು ಕಾಲುವೆ ನಿರ್ಮಾಣದ ಮೂಲಕ್ಷೆಯನ್ನು ತೋರಿಸಿಲ್ಲ. ಇನ್ನು ಅಸ್ವಸ್ಥಗೊಂಡ ಅಜ್ಜಪ್ಪ ಹಾಗೂ ಹೊನ್ನಪ್ಪ ರೈತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಜಲ್ಲಾಸ್ಪತ್ರೆ ಮುಂದೆ ರೈತರು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಕಲೆ ಸಮಯ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಇನ್ನಾದ್ರೂ ಅಧಿಕಾರಿಗಳು ಪರಿಶೀಲನೆ ಮಾಡಿ ಮೂಲನಕ್ಷೆ ತೋರಿಸಿ ಕಾಲುವೆ ನಿರ್ಮಾಣ ಮಾಡಬೇಕಿದೆ.

     

  • ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ಪ್ರತಿಭಟನೆಗೆ ನಾನು ಬರ್ತಿನಿ: ಶಿವರಾಜ್ ಕುಮಾರ್

    ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ಪ್ರತಿಭಟನೆಗೆ ನಾನು ಬರ್ತಿನಿ: ಶಿವರಾಜ್ ಕುಮಾರ್

    ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಕರಾವಳಿಗೆ ತೊಂದರೆಯಾದ್ರೆ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರ ಜೊತೆ ಕನ್ನಡ ಚಿತ್ರರಂಗ ಕೂಡಾ ಹೋರಾಟ ಕೈಗೆತ್ತಿಕೊಳ್ಳಲು ಹಿಂಜರಿಯಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಬರದಿಂದ ತತ್ತರಿಸಿದೆ. ಬರ ಬಂದಾಗಷ್ಟೇ ಸರಕಾರ ಎಚ್ಚೆತ್ತುಕೊಳ್ಳುವುದಲ್ಲ. ಬರ ಬರದಂತೆ ತಡೆಯಲು ಸರ್ಕಾರ ಯೋಜನೆ ರೂಪಿಸಬೇಕು. ಸರ್ಕಾರ ಬರ ನಿರ್ವಹಣೆ ಮಾಡಲು ವಿಫಲವಾಗಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.

    ರಾಜ್ಯದ ಯಾವುದೇ ಭಾಗದಲ್ಲಿಯೂ ತೊಂದರೆಯಾದರೆ ಎಲ್ಲರೂ ಒಗ್ಗಟನಿಂದ ಹೋರಾಟ ಮಾಡೋಣ. ಕಂಬಳಕ್ಕಾಗಿ ರಾಜ್ಯದ ಎಲ್ಲ ಕಡೆಯೂ ಹೋರಟ ನಡೆಯಿತು. ಕಂಬಳ ಕರಾವಳಿ ಜನರ ಗುರುತಾಗಿದೆ. ಕನ್ನಡ ಚಿತ್ರಗಳನ್ನು ಡಬ್ಬಿಂಗ್ ಮಾಡೋದಕ್ಕೆ ನನ್ನ ವಿರೋಧ ಬಹಳ ಹಿಂದಿನಿಂದಲೂ ಇದೆ. ಇಂದಿಗೂ ನಾನು ಡಬ್ಬಿಂಗ್‍ನ್ನು ವಿರೋಧಿಸುತ್ತೇನೆ. ಕನ್ನಡದಲ್ಲೇ ಸಾಕಷ್ಟು ಒಳ್ಳೆಯ ಕಥೆಗಳು ಇದೆ. ಕನ್ನಡಿಗರೂ ಕನ್ನಡ ಕಥೆಗಳನ್ನು ಬೆಂಬಲಿಸುತ್ತಾರೆ ಎಂದು ಶಿವರಾಜ್ ಕುಮಾರ್ ಡಬ್ಬಿಂಗ್‍ಗೆ ವಿರೋಧ ವ್ಯಕ್ತಪಡಿಸಿದರು.

    ಶಿವರಾಜ್ ಕುಮಾರ್ ತುಳು ಭಾಷೆಯ ರಾಜೇಶ್ ಬ್ರಹ್ಮಾವರ್ ನಿರ್ಮಾಣದ ಕೆಂಜ ಚೇತನ್ ಕುಮಾರ್ ನಿರ್ದೇಶನದ ಕಟಪಾಡಿಯ ಕಟ್ಟಪ್ಪ ಎನ್ನುವ ಚಿತ್ರದ ಹಾಡಿನ ಧ್ವನಿಮುದ್ರಣಕ್ಕೆ ಚಾಲನೆ ನೀಡಿದರು. ಹಾಡಿನ ಝಲಕ್ ಗುಂಗುನಿಸುತ್ತಿದ್ದಂತೆ ಶಿವಣ್ಣ ತಲೆದೂಗಿಸಿದ್ರು.