Tag: protest

  • ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗ್ಳೂರು ಬೀಫ್ ಫೆಸ್ಟ್ ಗೆ ಪೊಲೀಸರ ಬ್ರೇಕ್!

    ಬೆಂಗಳೂರು: ಕೇಂದ್ರ ಸರ್ಕಾರದ ಜಾನುವಾರು ಹತ್ಯೆ ಹಾಗು ಮಾರಾಟ ನಿಷೇಧ ಆದೇಶ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇವತ್ತು ಭಾರೀ ಗೋ ಜಟಾಪಟಿ ನಡೀತು. ಟೌನ್‍ಹಾಲ್ ಮುಂದೆ ಎಸ್‍ಎಫ್‍ಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಆದ್ರೆ, ಕೇರಳ ಮಾದರಿ ಬೀಫ್ ಫೆಸ್ಟ್ ನಡೆಸಲು ಮುಂದಾದಾಗ ಪೊಲೀಸರು ಅನುಮತಿ ನೀಡಿರಲಿಲ್ಲ. ಆದ್ರೆ ಸಂಜೆ ಹೊತ್ತಿಗೆ ಆಗಮಿಸಿದ ಎಸ್‍ಎಫ್‍ಐ ಕಾರ್ಯಕರ್ತರು ಬೀಫ್ ತಿಂದು ಪ್ರತಿಭಟನೆ ನಡೆಸಲು ಮುಂದಾದ್ರು. ತಡೆಯಲು ಬಂದ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು.

    ಇದಕ್ಕೂ ಮುನ್ನ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ಮಾಡ್ತಿದ್ದಾರೆ ಎಂದು ವಿಷಯ ತಿಳಿದು ಎಸ್‍ಎಫ್‍ಐ ವಿರುದ್ಧವಾಗಿ ಪ್ರತಿಭಟನೆಗೆ ಗೋ ಪರಿಪಾಲಕ ಸಂಘಟನೆಯವರು ಆಗಮಿಸಿದರು. ಎಸ್‍ಎಫ್‍ಐ ಪ್ರತಿಭಟನಾಕಾರರು ಆಗಮಿಸುವ ಮುನ್ನವೇ ಆಗಮಿಸಿದ ಇವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಸಂಘಟನೆಯ ಜೊತೆಯಲ್ಲಿ ಬಂದಿದ್ದ ಮಹಿಳೆಯರನ್ನೂ ಪೊಲೀಸರು ಬಂಧಿಸಿದರು. ಒಂದು ಹಂತದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವಂತ ಸನ್ನಿವೇಶ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದ್ರು. ಈ ಮೂಲಕ ಬೆಂಗಳೂರು ಬೀಫ್ ಫೆಸ್ಟ್ ನಡೆಸಲು ಮುಂದಾಗಿದ್ದ ಎಸ್‍ಎಫ್‍ಐ ಹಾಗೂ ಎಡಪಕ್ಷಗಳ ಕಾರ್ಯಕ್ರಮ ಠುಸ್ ಆಯಿತು.

    ದೇಶದ ಬೇರೆ ಕಡೆ ಏನಾಯ್ತು?: ದೇಶಾದ್ಯಂತ ವಿರೋಧ-ಪರವಾದ ನಡೀತಿದೆ. ವಿಶೇಷ ಏನಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಆದೇಶವನ್ನ ಪಾಲನೆ ಮಾಡೋಕೆ ಆಗಲ್ಲ. ಮೇಘಾಲಯದ ಬಿಜೆಪಿಯವರೆಲ್ಲಾ ದನದ ಮಾಂಸ ತಿಂತೇವೆ. ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದನದ ಮಾಂಸ ಮಾರಾಟವನ್ನ ಇನ್ನಷ್ಟು ಸರಳ ಮಾಡ್ತೇವೆ ಅಂತ ಬಿಜೆಪಿ ಮುಖಂಡ ಬರ್ನಾಡ್ ಮರಾಕ್ ಹೇಳಿದ್ದಾರೆ.

    ಕೇಂದ್ರದ ಆದೇಶದ ವಿರುದ್ಧವಾಗಿ ಕೇರಳ ರಾಜ್ಯ ತನ್ನದೇ ಪ್ರತ್ಯೇಕ ಕಾನೂನು ಜಾರಿಗೆ ಮುಂದಾಗಿದೆ. ನಾವೇನು ತಿನ್ನಬೇಕು ಅನ್ನೋದನ್ನ ದೆಹಲಿ ಅಥವಾ ನಾಗಪುರ ನಿರ್ಧರಿಸಲು ಸಾಧ್ಯವಿಲ್ಲ. ಅವರು ನಿರ್ಧರಿಸಿದರೆ ಅದನ್ನು ನಾವು ಪಾಲನೆ ಮಾಡಲ್ಲ ಅಂತ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಇನ್ನು ಕೇಂದ್ರ ರಾಜ್ಯದ ಅಧಿಕಾರವನ್ನ ಕತ್ತರಿಸ್ತಿದೆ. ರಾಜ್ಯಗಳ ವಿಚಾರದಲ್ಲಿ ಅನವಶ್ಯಕ ಮೂಗು ತೂರಿಸೋದು ಬೇಡ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಎಚ್ಚರಿಸಿದ್ರು. ಆದ್ರೆ, ಕೇರಳದ ಕಣ್ಣೂರಿನಲ್ಲಿ ನಿನ್ನೆ ಸಾರ್ವಜನಿಕವಾಗಿ ದನ ಕಡಿದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನಡೆಯನ್ನ ರಾಹುಲ್ ಗಾಂಧಿ ಖಂಡಿಸಿದ್ದು, ಕೆಲ ಕಾರ್ಯಕರ್ತರನ್ನ ಪಕ್ಷದಿಂದ ವಜಾ ಮಾಡಿದ್ದಾರೆ. ಇನ್ನು, ಚೆನ್ನೈನಲ್ಲಿ ಪ್ರಗತಿಪರರು ಹಾಗೂ ಅಲ್ಪಸಂಖ್ಯಾತ ಸಮುದಾಯ ಜನ ಮಳೆಯ ಮಧ್ಯೆನೂ ಭಾರಿ ಪ್ರತಿಭಟನೆ ನಡಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದೆ. ಜಾನುವಾರುಗಳ ಪಟ್ಟಿಯಿಂದ ಎಮ್ಮೆ, ಕೋಣಗಳನ್ನ ಹೊರಗಿಡಲು ನಿರ್ಧರಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.

     

  • ರೋಷನ್ ಬೇಗ್ ಎದೆಯ ಮೇಲೆ `ಜೈ ಮಹಾರಾಷ್ಟ್ರ’ ಅಂತಾ ಬರೀತಿವಿ: ಶಿವಸೇನೆ

    ರೋಷನ್ ಬೇಗ್ ಎದೆಯ ಮೇಲೆ `ಜೈ ಮಹಾರಾಷ್ಟ್ರ’ ಅಂತಾ ಬರೀತಿವಿ: ಶಿವಸೇನೆ

    ಬೆಳಗಾವಿ: ಸಚಿವ ರೋಷನ್ ಬೇಗ್ ಎದೆ ಮೇಲೆ ಕುಳಿತು `ಜೈ ಮಹಾರಾಷ್ಟ್ರ’ ಎಂದು ಬರೆಯುತ್ತೇವೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದು ಮತ್ತೆ ತಮ್ಮ ಪುಂಡಾಟಿಕೆಯನ್ನು ಮೆರೆದಿದೆ.

    ರೋಷನ್ ಬೇಗ್ ಡಿಎನ್‍ಎ ಪರೀಕ್ಷೆ ಅವಶ್ಯಕತೆ ಇದೆ. ಬೇಗ್ ಮೈಯಲ್ಲಿ ದೇಶಿಯ ರಕ್ತ ಹರಿಯುತ್ತಿಲ್ಲ ಇದು ದೇಶಕ್ಕೆ ಅಪಾಯಕಾರಿಯಾಗಿದೆ. ತಕ್ಷಣ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಬೆಳಗಾವಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಗಡಿ ಭಾಗದ ಮರಾಠಿಗರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

    ಇತ್ತ ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಯಾವುದೇ ಕಾರಣಕ್ಕೂ ಘೋಷಣೆಗಳನ್ನು ಕೂಗುವ ಹಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಬೆಳಗಾವಿ ಕ್ರೈಂ ಡಿಸಿಪಿ ಅಮರನಾಥ್ ರೆಡ್ಡಿ ಎಂಇಎಸ್‍ಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಸರ್ಕಾರವನ್ನು ತಲೆ ಕೆಳಗೆ ಕಾಲು ಮೇಲೆ ಮಾಡ್ತೀವಿ: ಕೊಲ್ಲಾಪುರದಲ್ಲಿ ಶಿವಸೇನೆಯಿಂದ ಧಮ್ಕಿ

    ಪ್ರತಿಭಟನೆಯಲ್ಲಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವಂತಿಲ್ಲ. ಶಾಂತ ರೀತಿಯಲ್ಲಿ ಮನವಿ ಪತ್ರ ಸಲ್ಲಿಸಲು ಎಂಇಎಸ್‍ಗೆ ಅವಕಾಶ ನೀಡಲಾಗಿದೆ. ನಗರದ ಸಂಬಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಲಿದೆ. ಮುಂಜಾಗೃತ ಕ್ರಮವಾಗಿ ಮಹಾರಾಷ್ಟ್ರ ಗಡಿಯವರೆಗೂ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.

    ಬೇಗ್ ವಿರುದ್ಧ ಆಕ್ರೋಶ ಯಾಕೆ?
    ಕೆಲವು ದಿನಗಳ ಹಿಂದೆ ಸಚಿವ ರೋಷನ್ ಬೇಗ್, ಎಂಇಎಸ್ ಸಂಘಟನೆಯ ಜಿಲ್ಲಾಪಂಚಾಯತ್ ಸದಸ್ಯರು ನಾಡವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ್ರೆ ಅವರ ಸದಸ್ಯತ್ವವನ್ನು ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಗೆ ಶಿವಸೇನೆ ಮತ್ತು ಎಂಇಎಸ್ ರೋಷನ್ ಬೇಗ್ ವಿರುದ್ಧ ತಿರುಗಿ ಬಿದ್ದಿವೆ.

    https://www.youtube.com/watch?v=fCXaf8bO3Os

     

  • ಕನ್ನಡಿಗರ ಹೋರಾಟ ಕೇರಳ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು!

    ಕನ್ನಡಿಗರ ಹೋರಾಟ ಕೇರಳ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು!

    – ಯಶಸ್ವಿಯಾಯ್ತು #KasaragoduKannadaUlisiಅಭಿಯಾನ

    ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ಮೇಲೆ ಕೇರಳ ರಾಜ್ಯ ಸರ್ಕಾರ ಕಡ್ಡಾಯವಾಗಿ ಮಲೆಯಾಳ ಭಾಷೆ ಹೇರಿರುವುದನ್ನು ಪ್ರತಿಭಟಿಸಿ ಕಾಸರಗೋಡಿನ ಕನ್ನಡಿಗರು ಇಂದು ಬೆಳಿಗ್ಗೆ ಕಲೆಕ್ಟರೇಟ್‍ಗೆ ನಡೆಸಿದ ದಿಗ್ಬಂಧನ ಯಶಸ್ವಿಯಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕನ್ನಡಿಗರು ಆಗಮಿಸಿ ಕಾಸರಗೋಡು ಜಿಲ್ಲಾ ಕಲೆಕ್ಟರೇಟ್ ದಿಗ್ಬಂಧನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

    ಕನ್ನಡ ಹೋರಾಟಗಾರರು ಜಿಲ್ಲಾ ಕೇಂದ್ರದ ಆಡಳಿತ ಕಚೇರಿ ಇರುವ ವಿದ್ಯಾನಗರ ಸಿವಿಲ್ ಸ್ಟೇಷನ್‍ನ ಎಲ್ಲಾ ದ್ವಾರಗಳ ಮುಂದೆ ಕುಳಿತು `ಕನ್ನಡ ಉಳಿಸಿ, ಕನ್ನಡ ರಕ್ಷಿಸಿ’ ಘೋಷಣೆಗಳನ್ನು ಕೂಗಿ ಕಚೇರಿ ಒಳಗೆ ಹೋಗಲು ಆಗಮಿಸಿದ್ದ ಸರ್ಕಾರಿ ನೌಕರರನ್ನು ತಡೆದರು. ಇದರಿಂದಾಗಿ ಸಿಬ್ಬಂದಿಗೆ ಸಿವಿಲ್ ಸ್ಟೇಷನ್‍ಗೆ ಪ್ರವೇಶಿಸಲು ಸಾಧ್ಯವಾಗದೇ ಸಿವಿಲ್ ಸ್ಟೇಷನ್‍ನ ಎಲ್ಲಾ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಜಿಲ್ಲಾಧಿಕಾರಿ, ಎಡಿಎಂ ಸಹಿತ ಯಾರಿಗೂ ಕಲೆಕ್ಟರೇಟ್‍ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ 5 ಗಂಟೆಯಿಂದಲೇ ಕನ್ನಡಾಭಿಮಾನಿಗಳು ಕಾಸರಗೋಡಿನತ್ತ ಆಗಮಿಸಿದ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳಿಗೂ ಕಚೇರಿಗೆ ತೆರಳಲು ಸಾಧ್ಯವಾಗಲಿಲ್ಲ.

    ಸಿವಿಲ್ ಸ್ಟೇಶನ್ ಮಹಾದ್ವಾರದಲ್ಲಿ ನಡೆದ ಚಳವಳಿಯನ್ನು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಬೇಳ ಶೋಕಮಾತಾ ಇಗರ್ಜಿಯ ಧರ್ಮಗುರು ವಿನ್ಸೆಂಟ್ ಡಿ’ಸೋಜಾ, ಧಾರ್ಮಿಕ ನೇತಾರ ಮೌಲಾನ ಅಬ್ದುಲ್ ಅಸೀಸ್ ಎಂಬಿವರು ಸಂಯುಕ್ತವಾಗಿ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಇದು ಕನ್ನಡ ವಿರೋಧಿ ಮಸೂದೆಯ ವಿರುದ್ಧ ಮಾತ್ರ ನಡೆಸುವ ದಿಗ್ಬಂಧನ ಚಳವಳಿಯಲ್ಲ, ಬದಲಾಗಿ ಕನ್ನಡ ವಿರೋಧಿಗಳ ಅಂತರಾಳದ ವಿರುದ್ಧ ನಡೆಸುತ್ತಿರುವ ಚಳವಳಿ ಎಂದು ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕನ್ನಡ ಭಾಷೆ ಅಳಿದರೆ ಕನ್ನಡ ಸಂಸ್ಕೃತಿಯೂ ಅಳಿಯಲಿದೆ. ಅಂತಹ ಯತ್ನವನ್ನು ನಾವು ಯಾವ ಬೆಲೆ ತೆತ್ತಾದರೂ ಹಿಮ್ಮೆಟ್ಟಿಸುತ್ತೇವೆ. ಕನ್ನಡದ ಮೇಲಿನ ದಬ್ಬಾಳಿಕೆಯನ್ನು ಕೊನೆಗೊಳಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯತ್ನಿಸಬೇಕಾಗಿದೆ ಎಂದು ಮೌಲಾನ ಅಬ್ದುಲ್ ಅಸೀಸ್ ಅಭಿಪ್ರಾಯಪಟ್ಟರು.

    ಸರ್ಕಾರ ಹೊರಡಿಸಿದ ಮಸೂದೆಯ ಹೊರಗೆ ಸಿಹಿ ಲೇಪಿಸಿದ್ದು ಒಳಗೆ ವಿಷ ಗುಳಿಗೆಯನ್ನು ತುಂಬಲಾಗಿದೆ. ಅದರ ವಿರುದ್ಧ ನಾವಿಂದು ಬೆವರು ಸುರಿಸಿ ಹೋರಾಟ ನಡೆಸುತ್ತಿದ್ದೇವೆ. ಅಗತ್ಯ ಬಂದಲ್ಲಿ ರಕ್ತ ಸುರಿಸಿ ಹೋರಾಟ ನಡೆಸಲೂ ನಾವು ಸಿದ್ಧ. ಕಾಸರಗೋಡಿನ 20 ಸಾವಿರದಷ್ಟು ಕೊಂಕಣಿ ಕ್ರೈಸ್ತರೂ ಈ ಹೋರಾಟದ ಜತೆಗಿದ್ದಾರೆಂದು ವಿನ್ಸೆಂಟ್ ಡಿ’ಸೋಜಾ ಅಭಿಪ್ರಾಯಪಟ್ಟರು.

    ಜಿಲ್ಲಾ ಪಂ. ಅಧ್ಯಕ್ಷ ಎ.ಜಿಸಿ ಬಶೀರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಕೀಂ ಕುನ್ನಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ನ್ಯಾಯವಾದಿ ಸುಬ್ಬಯ್ಯ ರೈ, ರವೀಶ ತಂತ್ರಿ ಕುಂಟಾರು, ಬಿ.ವಿ. ಕಕ್ಕಿಲಾಯ, ಹರ್ಷಾದ್ ವರ್ಕಾಡಿ, ಆಯಿಷಾ ಪೆರ್ಲ, ಕನ್ನಡ ಹಿರಿಯ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಯ್ಕ್, ಪುರುಷೋತ್ತಮ ಮಾಸ್ತರ್, ಉಮೇಶ್ ಸಾಲಿಯಾನ್, ಕಾಸರಗೋಡು ಚಿನ್ನಾ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಡಾ. ಸಿ. ಕೃಷ್ಣ ಭಟ್, ಕೇಶವ ಪ್ರಸಾದ್ ನಾಣಿತ್ತಿಲು, ಪ್ರಮೀಳಾ ಸಿ. ನಾಯಕ್, ವಾಮನ ರಾವ್ ಬೇಕಲ್, ಸೋಮಶೇಖರ ಜೆ.ಎಸ್, ಗಣಪತಿ ಕೋಟೆಕಣಿ, ಡಾ. ಮೋಹನ್ ಕುಮಾರ್ ಕುಂಟಾರು, ಪಿ.ಆರ್. ಸುನಿಲ್, ಕೃಷ್ಣ ಅಮೆಕ್ಕಳ, ಗೋಪಾಲ ಶೆಟ್ಟಿ ಅರಿಬೈಲು, ಹರಿಶ್ಚಂದ್ರ ಮಂಜೇಶ್ವರ, ಡಾ. ಜಯಪ್ರಕಾಶ್, ಟಿ.ಡಿ. ಸದಾಶಿವ ರಾವ್, ವೆಂಕಟ್ರಮಣ ಹೊಳ್ಳ, ಝೆಡ್. ಎ. ಕಯ್ಯಾರ್, ಹರೀಶ್ ಮಾಡ, ಅಶ್ರಫ್ ಮರ್ತ್ಯ, ಎ.ಕೆ.ಎಂ. ಅಶ್ರಫ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸವಿತಾ, ಎಸ್.ವಿ. ಭಟ್, ಶೇಂತಾರು ನಾರಾಯಣ ಭಟ್, ಸುಧಾಮಗೋಸಾಡ, ಶೈಲಜಾ ಭಟ್, ಜೋಗೇಂದ್ರ, ಪುಂಡರೀಕಾಕ್ಷ ಕೆ.ಎಲ್., ಬಾಲಕೃಷ್ಣ ಅಗ್ಗಿತ್ತಾಯ, ಜಯರಾಮ ಮಂಜತ್ತಾಯ, ಶಿವರಾಮ ಕಾಸರಗೋಡು, ಮಹಾಲಿಂಗೇಶ್ವರ ಭಟ್, ಡಾ. ಶ್ರೀಪಡ್ರೆ, ಬಾಲಕೃಷ್ಣ ವೊರ್ಕೂಡ್ಲು ಸೇರಿದಂತೆ ಹಲವರು ಕಲೆಕ್ಟರೇಟ್ ದಿಗ್ಬಂಧನದ ಮುಂಚೂಣಿಯಲ್ಲಿದ್ದರು.

    ಇದನ್ನೂ ಓದಿ: ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿದ್ದು ಯಾಕೆ?

  • ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ನೋಯ್ಡಾ: ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಲವ್ಕಶ್ ಎಂದು ಗುರುತಿಸಲಾಗಿದೆ.

    ಉತ್ತರಪ್ರದೇಶದ ಫಿರೋಜಾಬಾದ್ ನಿವಾಸಿಯಾಗಿರೋ ಈ ಬಾಲಕ ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಏಮ್ಸ್ ಆಸ್ಪತ್ರೆಗೆ ಹೆಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಫಿರೋಜಾಬಾದ್‍ನ ರಸ್ತೆಯಲ್ಲಿ ಬಿಲ್ಡರ್‍ಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಈ ಪ್ರತಿಭಟನೆಯಿಂದಾಗಿ ಮಾರ್ಗ ಮಧ್ಯೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮ ಆಂಬ್ಯುಲೆನ್ಸ್ ಮುಂದೆ ಚಲಿಸಲಾಗದೆ ಬಾಲಕ ವಾಹನದಲ್ಲೇ ಮೃತಪಟ್ಟಿದ್ದಾನೆ.

    ಬಾಲಕ ಶನಿವಾರ ಸಂಜೆ 4ರ ಸುಮಾರಿಗೆ ಬಾಲಕ ಆಂಬ್ಯುಲೆನ್ಸ್ ನಲ್ಲೇ ಮೃತಪಟ್ಟಿರುವುದಾಗಿ ಚಾಲಕನ ಸಹೋದರ ತಿಳಿಸಿದ್ದಾರೆ. ಆದ್ರೆ ಗೃಹಬಳಕೆದಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಅವರಿಗೆ ಬಾಲಕನ ಬಗ್ಗೆ ಮಾಹಿತಿ ಬಂದಿಲ್ಲವೆಂದು ಹೋರಾಟಗಾರರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸುಮಾರು 200 ಮಂದಿ ಗೃಹಬಳಕೆದಾರರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಯಾರೊಬ್ಬರು ಬಾಲಕನ ಸಹಾಯಕ್ಕೆ ಬಂದಿಲ್ಲ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ.

    ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಮಾಧ್ಯಮಗಳ ಮೂಲಕ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿದುಬಂದಿದೆ. 250 ಮಂದಿ ಪ್ರತಿಭಟನಾಕಾರರ ವಿರುದ್ಧ ಐಪಿಸಿ ಸೆಕ್ಷನ್ 147 ಹಾಗೂ 341ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಅಂತಾ ಎಸ್ಪಿ ಲವ ಕುಮಾರ್ ಹೇಳಿದ್ದಾರೆ.

  • ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ: ಮೂರು ವರ್ಷದ ಮಗುವೊಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಮೃತ ಬಾಲಕಿಯನ್ನು ಕಲ್ಗುಡಿ ಗ್ರಾಮದ ಅಮೃತಾ ಎಂದು ಗುರುತಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಶುಕ್ರವಾರ ಬೆಳಗ್ಗೆ ಪೋಷಕರು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಡಾ ಎಸ್ ಜಿ ಮಟ್ಟಿಗೆ ಸೇರಿದ ತೇಜಸ್ವಿನಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಂತೆಯೇ ಬಾಲಕಿಯನ್ನು ಪರೀಕ್ಷಿಸಿರುವ ವೈದ್ಯ ರಕ್ತದ ಕೊರತೆ ಇದ್ದು, ರಕ್ತ ಹಾಕಬೇಕು ಎಂದು ಹೇಳಿದ್ರು. ಆದ್ರೆ, ಸೂಕ್ತ ಸಮಯದಲ್ಲಿ ರಕ್ತ ನೀಡದಿರುವುದೇ ಸಾವಿಗೆ ಕಾರಣವಾಗಿದೆ. ವೈದ್ಯರು ಹೇಳುತ್ತಿದ್ದಂತಯೇ ರಕ್ತ ತಂದರೂ ಹಾಕಿಲ್ಲ ಎಂದು ಬಾಲಕಿ ಕುಟುಂಬ ಆಸ್ಪತ್ರೆ ಮುಂದೆ ನಿನ್ನೆ ರಾತ್ರಿ ಇಡೀ ಪ್ರತಿಭಟನೆ ನಡೆಸಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ಪಟ್ಟು ಹಿಡಿದಿದ್ರು.

    ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

     

  • ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಟೆಕ್ಸ್ಪೋಟರ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ಮಹಿಳಾ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ರು.

    ಪ್ರತಿ ವರ್ಷದಂತೆ ಕಾರ್ಮಿಕರ ವೇತನ ಹೆಚ್ಚಿಸಬೇಕು. ಆಡಳಿತ ಮಂಡಳಿ ಕಾರ್ಮಿಕರಿಗೆ ನೀಡಬೇಕಿದ್ದ ಸಾರಿಗೆ ವ್ಯವಸ್ಥೆ ಇನ್ನಿತರ ಮೂಲಭೂತ ಸೌಕರ್ಯವನ್ನ ನೀಡುವಲ್ಲಿ ವಿಫಲವಾಗಿದೆ. ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಜೊತೆಯ ಸಂಧಾನ ಮಾತುಕತೆ ನಡೆಸಿದ್ದಾರೆ. ಆಡಳಿತ ಮಂಡಳಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ನಂತರ ಕಾರ್ಮಿಕರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

     

  • ಮಂಡ್ಯ: ಹೆಚ್‍ಡಿಕೆ ಸ್ಥಳಕ್ಕೆ ಬರಬೇಕೆಂದು ನೀರಿನ ಟ್ಯಾಂಕ್ ಏರಿ ಮಾನಸಿಕ ಅಸ್ವಸ್ಥನ ಪ್ರತಿಭಟನೆ

    ಮಂಡ್ಯ: ಹೆಚ್‍ಡಿಕೆ ಸ್ಥಳಕ್ಕೆ ಬರಬೇಕೆಂದು ನೀರಿನ ಟ್ಯಾಂಕ್ ಏರಿ ಮಾನಸಿಕ ಅಸ್ವಸ್ಥನ ಪ್ರತಿಭಟನೆ

    ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಸ್ಥಳಕ್ಕೆ ಬರಬೇಕು ಹಾಗೂ ಫ್ರೀ ಡ್ರಿಂಕ್ಸ್, ಸಿಗರೇಟ್ ಬೇಕು ಅಂತ ಮಾನಸಿಕ ಅಸ್ವಸ್ಥನೊಬ್ಬ ನೀರಿನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯದ ಮಳ್ಳವಳ್ಳಿ ತಾಲೂಕಿನ ಅಂಕನಹಳ್ಳಿಯಲ್ಲಿ ಪ್ರಸನ್ನ ಎಂಬಾತ ವಿಚಿತ್ರ ಪ್ರತಿಭಟನೆ ಮೂಲಕ ಆತಂಕ ಸೃಷ್ಟಿಸಿದ್ದಾನೆ. ಇಂದು ಬೆಳ್ಳಂಬೆಳಗ್ಗೆ ನೀರಿನ ಟ್ಯಾಂಕ್ ಮೇಲೆ ಅರೆ ಬೆತ್ತಲಾಗಿ ಹತ್ತಿದ ಯುವಕ ಮದ್ಯ, ಸಿಗರೇಟ್ ಕೊಡದಿದ್ರೆ ಮೇಲಿಂದ ಜಿಗಿಯುತ್ತೀನಿ ಅಂತ ಬೆದರಿಕೆ ಹಾಕಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಯುವಕನನ್ನ ಎಷ್ಟೇ ಮನವೊಲಿಸಿದ್ರೂ ಕೆಳಗಿಳಿಯಲಿಲ್ಲ.

    ಕಡೆಗೆ ಅವನ ಬೇಡಿಕೆ ಈಡೇರಿಸೋದಾಗಿ ಹೇಳಿ ಉಪಾಯವಾಗಿ ಟ್ಯಾಂಕ್ ಮೇಲೆ ಹತ್ತಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

  • ನೀವು ಸ್ಥಳಕ್ಕೆ ಹೋಗೋದ್ರಿಂದ್ಲೇ ಪ್ರತಿಭಟನೆ ಹೆಚ್ಚಾಗ್ತಿದೆ- ಮಾಧ್ಯಮದ ವಿರುದ್ಧ ಕಾಗೋಡು ಗರಂ

    ನೀವು ಸ್ಥಳಕ್ಕೆ ಹೋಗೋದ್ರಿಂದ್ಲೇ ಪ್ರತಿಭಟನೆ ಹೆಚ್ಚಾಗ್ತಿದೆ- ಮಾಧ್ಯಮದ ವಿರುದ್ಧ ಕಾಗೋಡು ಗರಂ

    ಬೆಂಗಳೂರು: ಕಳೆದ ಹಲವು ಸಮಯಗಳಿಂದ ಮಡಿಕೇರಿಯ ದಿಡ್ಡಳ್ಳಿಯಲ್ಲಿ ನಡೆಯುತ್ತಿರೋ ಆದಿವಾಸಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

    ಇದು ಸ್ಥಳೀಯರನ್ನ ಒಕ್ಕಲೆಬ್ಬಿಸಿ ಮಾಡುತ್ತಿರೊ ಧರಣಿಯಾಗಿದ್ದು, ಮಾಧ್ಯಮಗಳ ಪ್ರಚಾರದಿಂದ ಈ ಧರಣಿ ಹೆಚ್ಚುತ್ತಿದೆ. ಮಾಧ್ಯಮಗಳು ಪ್ರತಿಭಟನಾ ಸ್ಥಳಕ್ಕೆ ಹೋಗುವುದರಿಂದಲೇ ಪ್ರತಿಭಟನೆ ಹೆಚ್ಚಾಗುತ್ತಿದೆ ಅಂತಾ ಕಿಡಿಕಾರಿದ್ದಾರೆ.

    ಅರಣ್ಯ ಭೂಮಿ ಕೊಡಲು ಹತ್ತಾರು ಕಾನೂನು ಇದೆ. ಪ್ರಸ್ತಾವನೆ ಸಲ್ಲಿಸಿ, ಕೇಂದ್ರಕ್ಕೆ ಕಳುಹಿಸಬೇಕು. ಬೇರೆ ಭೂಮಿ ಕೊಡಲು ಒಮ್ಮೆ ಒಪ್ಪುತ್ತಾರೆ, ಒಮ್ಮೆ ಗಲಾಟೆ ಮಾಡ್ತಾರೆ. ವಾಸ್ತವಿಕತೆ ಧರಣಿ ಸರಿಯಿಲ್ಲ. ಜನಾಂದೋಲನ, ನಮ್ಮ ಭೂಮಿ ನಮ್ಮ ಹಕ್ಕು ಅಂತ ಸಮಸ್ಯೆ ಇಟ್ಡು ಧರಣಿ ಮಾಡುತ್ತಿಲ್ಲ. ಸುಮ್ಮನೆ ಗಲಾಟೆ ಮಾಡಿಸುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅರೆಬೆತ್ತಲಾಗಿ ಮತ್ತೆ ಮರವೇರಿ ಪ್ರತಿಭಟನೆ ನಡೆಸಿದ ದಿಡ್ಡಳ್ಳಿ ನಿರಾಶ್ರಿತ ಮಹಿಳೆ!

    ಕಂದಾಯ ಭೂಮಿ ಕೊಡುತ್ತೇವೆ ಎಂದರೆ ಒಮ್ಮೆ ಆಯ್ತು ಅಂತಾರೆ, ಬಳಿಕ ಬೇಡ ಎನ್ನುತ್ತಾರೆ. 500 ಮನೆ ಮಂಜೂರು ಮಾಡಿದ್ದೇವೆ. ನಿವೇಶನ ಸಿದ್ಧವಾಗಿದೆ ಆದರೆ ಜನರಿಗೆ ಪ್ರತಿಭಟನೆ ನಡೆಸಲು ಕೆಲವರು ಪ್ರೇರೇಪಣೆ ಮಾಡುತ್ತಿದ್ದಾರೆ ಅಂತಾ ಅರೋಪಿಸಿದರು.

  • ಅರೆಬೆತ್ತಲಾಗಿ ಮತ್ತೆ ಮರವೇರಿ ಪ್ರತಿಭಟನೆ ನಡೆಸಿದ ದಿಡ್ಡಳ್ಳಿ ನಿರಾಶ್ರಿತ ಮಹಿಳೆ!

    ಅರೆಬೆತ್ತಲಾಗಿ ಮತ್ತೆ ಮರವೇರಿ ಪ್ರತಿಭಟನೆ ನಡೆಸಿದ ದಿಡ್ಡಳ್ಳಿ ನಿರಾಶ್ರಿತ ಮಹಿಳೆ!

    ಕೊಡಗು: ದಿಡ್ಡಳ್ಳಿ ಆದಿವಾಸಿ ಮಹಿಳಾ ಮುಖಂಡೆ ಮುತ್ತಮ್ಮ ಅವರು ಅರೆಬೆತ್ತಲಾಗಿ ಮರವೇರಿ ಪ್ರತಿಭಟನೆ ನಡೆಸ್ತಾ ಇದ್ದಾರೆ. ಆದಿವಾಸಿ ಜನರ ಗುಡಿಸಲುಗಳನ್ನು ತೆರವು ಮಾಡಿದ್ರೆ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುತ್ತಮ್ಮ ಬೆದರಿಸ್ತಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ದೇವಮಚ್ಚಿ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಗುಡಿಸಲು ನಿರ್ಮಿಸಿದ್ದ 600ಕ್ಕೂ ಅಧಿಕ ಆದಿವಾಸಿ ಜನರ ಕುಟುಂಬಗಳ ಗುಡಿಸಲು ಕಾರ್ಯಾಚರಣೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದೆ. ತೆರವು ಕಾರ್ಯಾಚರಣೆಯಲ್ಲಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ.

    ನಮ್ಮ ಕುಟುಂಬಗಳನ್ನು ಇಲ್ಲಿಂದ ತೆರವುಗೊಳಿಸಿದರೇ ಮರದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಮುತ್ತಮ್ಮ ಹೇಳುತ್ತಾರೆ. ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕು. ನಮ್ಮ ಕಷ್ಟಗಳನ್ನು ಆಲಿಸಬೇಕು ಎಂದು ಮುತ್ತಮ್ಮ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಸಾವಿರಾರು ನಿರಾಶ್ರಿತರು ಸೇರಿದ್ದು ಎಲ್ಲರ ಆಕ್ರಂದನ ಮುಗಿಲು ಮುಟ್ಟಿದೆ.

    ಡಿಸಂಬರ್‍ನಿಂದ ಭೂಮಿ ಮತ್ತು ವಸತಿಗೆ ಆಗ್ರಹಿಸಿ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸ್ತಾ ಇದ್ದ ಆದಿವಾಸಿ ಜನರು ಏಪ್ರಿಲ್ 28ರಂದು ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆಯಲ್ಲಿ ಜಿಲ್ಲಾಡಳಿತ ಗೊತ್ತುಮಾಡಿದ ಸ್ಥಳಕ್ಕೆ ಒಪ್ಪಿದ್ದರು. ಬಳಿಕ ಜಿಲ್ಲಾಡಳಿತ ಗೊತ್ತುಮಾಡಿರೋ ಸ್ಥಳಕ್ಕೆ ತೆರಳಲ್ಲ ಎನ್ನುವ ಮೂಲಕ ಜಿಲ್ಲಾಡಳಿತಕ್ಕೆ ದಿಡ್ಡಳ್ಳಿ ಆದಿವಾಸಿ ಜನರು ಟಾಂಗ್ ನೀಡಿದ್ದರು. ಅಲ್ಲದೇ ಕಳೆದ 5 ದಿನಗಳ ಹಿಂದೆ ರಸ್ತೆ ಬದಿಯಿದ್ದ ಗುಡಿಸಲುಗಳನ್ನು ದೇವಮಚ್ಚಿ ಮೀಸಲು ಅರಣ್ಯದೊಳಗೆ ಶಿಫ್ಟ್ ಮಾಡಿ ಹೋರಾಟ ತೀವ್ರಗೊಳಿಸಿದ್ದರು.

    ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮೈಕ್‍ನಲ್ಲಿ ಸ್ಥಳ ಬಿಟ್ಟು ತೆರಳುವಂತೆ ಮನವಿ ಮಾಡುತ್ತಿದ್ದಾರೆ. ಇಷ್ಟು ದಿನ ರಸ್ತೆ ಬದಿಯಲ್ಲಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸ್ತಾ ಇದ್ದವರು ಅರಣ್ಯ ಪ್ರವೇಶಿಸಿ ಇದ್ದ ಗುಡಿಸಲು ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಮಾತ್ರ ಶತಾಯ ಗತಾಯ ಅರಣ್ಯದೊಳಗೆ ಯಾವ ಗುಡಿಸಲು ಇರಲು ಬಿಡೋದಿಲ್ಲ ಎಂದು ಕಾರ್ಯಾಚರಣೆ ಆರಂಭಿಸಿದೆ. ಅರಣ್ಯದಿಂದ ಹೊರಬಿದ್ದಿರುವ ಆದಿವಾಸಿ ಜನರು ಜಿಲ್ಲಾಡಳಿತ ಜಿಲ್ಲೆಯ ಮೂರ್ನಾಲ್ಕು ಕಡೆಗಳಲ್ಲಿ ಗೊತ್ತು ಮಾಡಿರೋ ಸ್ಥಳಕ್ಕೆ ತೆರಳಬೇಕೆಂದು ಜಿಲ್ಲಾಡಳಿತರ ಪರ ಅಧಿಕಾರಿಗಳು ಆದಿವಾಸಿ ಜನರಲ್ಲಿ ಮನವಿ ಮಾಡ್ತಿದ್ದಾರೆ.

     

  • ದಿಡ್ಡಳ್ಳಿ ನಿರಾಶ್ರಿತ ಮಹಿಳೆಯಿಂದ ಮರವೇರಿ ಪ್ರತಿಭಟನೆ

    ದಿಡ್ಡಳ್ಳಿ ನಿರಾಶ್ರಿತ ಮಹಿಳೆಯಿಂದ ಮರವೇರಿ ಪ್ರತಿಭಟನೆ

    ಕೊಡಗು: ಭೂಮಿ ಮತ್ತು ವಸತಿಗೆ ಆಗ್ರಹಿಸಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ನಡೆಯುತ್ತಿರೋ ಹೋರಾಟ ತೀವ್ರಗೊಂಡಿದ್ದು, ಇಂದು ಆದಿವಾಸಿ ಮಹಿಳಾ ಮುಖಂಡರೊಬ್ಬರು ಮರವೇರಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

    ಮುತ್ತಮ್ಮ ಎಂಬವರೇ ಮರವೇರಿ ಪ್ರತಿಭಟನೆ ನಡೆಸಿದ ಮಹಿಳೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಹಾಗೂ ಉಪವಿಭಾಗಾಧಿಕಾರಿ ಪ್ರತಿಭಟನಾನಿರತ ದಿಡ್ಡಳ್ಳಿ ಆದಿವಾಸಿ ಜನರೊಂದಿಗೆ ಮಾತುಕತೆ ನಡೆಸಿದರು. ಕೊನೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮುತ್ತಮ್ಮ ಅವರೊಂದಿಗೆ ಫೋನ್‍ನಲ್ಲಿ ಮಾತನಾಡಿದಾಗ ಮರದಿಂದ ಕೆಳಗಿಳಿದರು.

    ಹಿಂದೆ ನಡೆದ ಸಭೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರು ಸರ್ಕಾರ ನಿಗದಿ ಮಾಡಿದ್ದ ಸ್ಥಳಕ್ಕೆ ತೆರಳಲು ಒಪ್ಪಿದ್ದು, ಈಗ ಪುನಃ ಪ್ರತಿಭಟನೆ ನಡೆಸುತ್ತಿರುವುದು ಸಂಶಯ ಮೂಡಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಹೇಳಿದರು.