Tag: protest

  • ಸರ್ಕಾರದ ವಿರುದ್ಧ ಕೆಎಎಸ್ ಅಧಿಕಾರಿ ಕೆ. ಮಥಾಯಿ ಸೈಕಲ್ ಪ್ರೊಟೆಸ್ಟ್

    ಸರ್ಕಾರದ ವಿರುದ್ಧ ಕೆಎಎಸ್ ಅಧಿಕಾರಿ ಕೆ. ಮಥಾಯಿ ಸೈಕಲ್ ಪ್ರೊಟೆಸ್ಟ್

    ಬೆಂಗಳೂರು: ಸರ್ಕಾರಿ ವಾಹನ ಕೊಡದಿದ್ದಕ್ಕೆ ಕೆಎಎಸ್ ಅಧಿಕಾರಿ ಮಥಾಯಿ ಸೈಕಲ್ ಪ್ರತಿಭಟನೆ ನಡೆಸುವ ಮೂಲಕ ಗಾಂಧಿಗಿರಿ ಮೆರೆಯುತ್ತಿದ್ದಾರೆ.

    ಬೆಂಗಳೂರಿನ ರಾಜನಕುಂಟೆಯ ನಿವಾಸದಿಂದ ಎಂಎಸ್ ಬಿಲ್ಡಿಂಗ್‍ನಲ್ಲಿರುವ ಕಚೇರಿವರೆಗೂ ಮಥಾಯಿ ಸೈಕಲ್‍ನಲ್ಲೇ ಬರ್ತಿದ್ದಾರೆ. ಸದ್ಯ ಸಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಥಾಯಿ, ಈ ಹಿಂದೆ ಐಎಎಸ್ ಅಧಿಕಾರಿಗಳಿಂದ ಕಿರುಳವಾಗ್ತಿರೋದಾಗಿ ಲೋಕಯುಕ್ತರಿಗೆ ದೂರು ನೀಡಿದ್ದರು.

    ಈ ಬಗ್ಗೆ ಮಾತನಾಡಿದ ಮಥಾಯಿ, ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುವಾಗ ಅಂದಿನ ಕಮಿಷನರ್ ಲಕ್ಷ್ಮಿನಾರಾಯಣ್ ಅಕ್ರಮದ ಬಗ್ಗೆ ನಾನು ವರದಿ ನೀಡಿದೆ. ಆ ಹಿನ್ನೆಲೆಯಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು ಕರ್ತವ್ಯದಲ್ಲಿ ನನಗೆ ತೊಂದರೆ ನೀಡ್ತಿದ್ದಾರೆ. 11 ತಿಂಗಳಿಂದ ನನಗೆ ಸರ್ಕಾರಿ ವಾಹನ ನೀಡಿಲ್ಲ. ನಮ್ಮ ಮನೆಯಿಂದ ವಿಧಾನಸೌಧಕ್ಕೆ 35 ಕಿಲೋಮೀಟರ್ ಆಗುತ್ತೆ. ಬಿಬಿಎಂಪಿ ಜಾಹೀರಾತು ಹಗರಣದಲ್ಲಿ ವರದಿ ಮಾಡಿದ್ದು ತಪ್ಪಾ? ಅಂತ ಪ್ರಶ್ನಿಸಿದ್ದಾರೆ.

    ಸಕಾಲ ಇಲಾಖೆಯಲ್ಲಿ ನಾನು ಕರ್ತವ್ಯಕ್ಕೆ ಸೇರ್ಪಡೆಯಾದಾಗ ಐಎಎಸ್ ಅಧಿಕಾರಿ ಕಲ್ಪನ ನಿಮಗೆ ತುಂಬಾ ಜನ ಶತ್ರುಗಳಿದ್ದಾರೆ ಅಂದಿದ್ರು. ಆದ್ರೆ ಇವಾಗ ಅವರೇ ನನಗೆ ತೊಂದರೆ ಕೊಡ್ತಿದ್ದಾರೆ. ನಾನು ಬರುವ ಮುಂಚೆ ನನ್ನ ಪೋಸ್ಟ್ ಗೆ ಸಕಾಲದಲ್ಲಿ ವಾಹನ ವ್ಯವಸ್ಥೆ ಇತ್ತು. ಅದನ್ನು ಕಟ್ ಮಾಡಿದ್ರು ಎಂದು ಮಥಾಯಿ ಹೇಳಿದ್ದಾರೆ.

  • ವೇತನ ಹೆಚ್ಚಳ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏರ್‍ಪೋರ್ಟ್ ನೌಕರರ ಪ್ರತಿಭಟನೆ

    ವೇತನ ಹೆಚ್ಚಳ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏರ್‍ಪೋರ್ಟ್ ನೌಕರರ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ಕಾರ್ಮಿಕರ ವೇತನ ಹೆಚ್ಚಳ ಮತ್ತು ಯೂನಿಯನ್ ಗೆ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗೇಟ್ ಬಳಿ ಜಮಾಯಿಸಿದ ನೂರಾರು ಕಾರ್ಮಿಕರು ಏರ್ ಇಂಡಿಯಾ ಸ್ಯಾಟ್ಸ್ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏರ್‍ಪೋರ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನ ಸೇರಿದಂತೆ ಸೂಕ್ತ ಸೌಲಭ್ಯಗಳನ್ನ ನೀಡುತ್ತಿಲ್ಲ. ಹೀಗಾಗಿ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗೆ ಏರ್ ಇಂಡಿಯಾ ಸ್ಯಾಟ್ಸ್ ನ ಎಲ್ಲ ಕಾರ್ಮಿಕರು ಒಟ್ಟಾಗಿ ಯೂನಿಯನ್ ಸಂಘಟನೆ ಮಾಡಿಕೊಂಡಿದ್ರು. ಆದರೆ ಈ ಸಂಘಟನೆಗೆ ಆಡಳಿತ ಮಂಡಳಿ ಮಾನ್ಯತೆ ನೀಡುತ್ತಿಲ್ಲ ಅಂತ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

    ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಮೂರು ದಿನಗಳಲ್ಲಿ ಆಡಳಿತ ಮಂಡಳಿ ಕಾರ್ಮಿಕರ ಬೇಡಿಕೆಗಳಿಗೆ ಸ್ವಂದಿಸದಿದಲ್ಲಿ ಕಾರ್ಮಿಕರೆಲ್ಲ ಒಗ್ಗಟ್ಟಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಯೂನಿಯನ್ ಸಂಘಟನಾ ಕಾರ್ಯದರ್ಶಿ ಸತೀಶ್ ಎಚ್ಚರಿಕೆ ನೀಡಿದ್ದಾರೆ.

  • ರಾಜ್ಯ ಸರ್ಕಾರದಿಂದ ಎಸಿಬಿ ದುರುಪಯೋಗ: ಸಿಎಂ ವಿರುದ್ಧ ಬಿಜೆಪಿಯಿಂದ ಭಾರೀ ಪ್ರತಿಭಟನೆ

    ರಾಜ್ಯ ಸರ್ಕಾರದಿಂದ ಎಸಿಬಿ ದುರುಪಯೋಗ: ಸಿಎಂ ವಿರುದ್ಧ ಬಿಜೆಪಿಯಿಂದ ಭಾರೀ ಪ್ರತಿಭಟನೆ

    ಬೆಂಗಳೂರು: ರಾಜ್ಯ ಸರ್ಕಾರ ಬಿ.ಎಸ್ ಯಡಿಯೂರಪ್ಪ ಅವರನ್ನು ಹಣಿಯಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಇಂದು ಬಿಜೆಪಿ ನಾಯಕರು ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ. ಎಸಿಬಿ ಅಧಿಕಾರಿಗಳು ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಎಸ್‍ವೈ ವಿರುದ್ಧ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹೇರಿರುವ ವಿಚಾರ ಬೆಳಕಿಗೆ ಬಂದಿದೆ.

    ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಕೆಯಾದ ಅರ್ಧ ಗಂಟೆಗೆ ಎಫ್‍ಐಆರ್ ದಾಖಲು ಮಾಡಿದ್ದಾರೆ. 80 ಲಕ್ಷದ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಮುಂದೆ ಕೇಸ್ ಆಗಿ ಒಂದು ವರ್ಷ ಆಯ್ತು. ಸಿದ್ದರಾಮಯ್ಯ ನಿದ್ದೆ ಮಾಡ್ತಿದ್ದಾರೆ ತೊಂದರೆ ಕೊಡಬಾರದು ಅಂತಾ ಎಸಿಬಿ ಇನ್ನೂ ಎಫ್‍ಐಆರ್ ಹಾಕಿಲ್ಲ. ಎಸಿಬಿಗೆ ಸಿದ್ದರಾಮಯ್ಯನವರೇ ಹೆಡ್ ಆಗಿದ್ದಾರೆ ಎಂದು ಮಾಜಿ ಡಿಸಿಎಂ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಟೀಕಿಸಿದರು.

    ಜನ ಗೇಟ್ ಪಾಸ್ ಕೊಡ್ತಾರೆ:  ಬಸವರಾಜೇಂದ್ರ ದೂರು ಕೊಟ್ಟಿದ್ದಕ್ಕೆ ಅವರನ್ನ ಸರ್ಕಾರ ಕೊಡಗಿಗೆ ತಕ್ಷಣ ಟ್ರಾನ್ಸ್ ಫರ್ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಡಿ.ರೂಪಾ ಅವರನ್ನೂ ಟ್ರಾನ್ಸ್ ಫರ್ ಮಾಡಿದ್ರು. ಅಧಿಕಾರಿಗಳು ರಕ್ಷಣೆ ಇಲ್ಲದೆ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ನಿದ್ದೆ ಮಾಡೋ ಈ ಸರ್ಕಾರಕ್ಕೆ ಇನ್ನೂ ನಾಲ್ಕು ತಿಂಗಳು ಮಾತ್ರ ಇರೋದು. ಸರ್ಕಾರಕ್ಕೆ ಜನ ಗೇಟ್ ಪಾಸ್ ಕೊಡಲು ನಿರ್ಧರಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯ 900 ಎಕರೆ ಡಿನೋಟಿಫೈ ಮಾಡಿದ್ರೆ ಅದು ರೀಡು ಅಂತೆ. ಅದೇ ಯಡಿಯೂರಪ್ಪ, ಕುಮಾರಸ್ವಾಮಿ, ಎಸ್‍ಎಂ ಕೃಷ್ಣ ಅವರು ಮಾಡಿದ್ರೆ ಡಿನೋಟಿಫಿಕೇಶನ್ ಅಂದ್ರ ಹೆಂಗೆ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ಮೇಲೆ ಎಷ್ಟೇ ಕೇಸ್ ಹಾಕಿದ್ರೂ ನಾವು ಹೆದರಲ್ಲ. ಯಡಿಯೂರಪ್ಪ ಜೊತೆ ನಾವಿದ್ದೇವೆ ಎಂದು ಹೇಳಿದರು.

    ಕುರ್ಚಿ ಬಿಟ್ಟು ತೊಲಗಿ: ಸಿಎಂ ಅಧಿಕಾರಿಗಳಿಗೆ ಧಮ್ಕಿ ಹಾಕಿ ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ಹಾಕಿಸಿದ್ದಾರೆ. ಸಿಎಂ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಮಹದೇವಪ್ಪ ಅವರಿಗೆ ನೋಟಿಸ್ ನೀಡಿ. ಅಕ್ರಮ ಗಣಿಗಾರಿಕೆ ವಿರುದ್ಧ ದೂರಿನ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಎಸಿಬಿ ಮುಖ್ಯಸ್ಥ ಎಂ.ಎನ್ ರೆಡ್ಡಿಗೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದ್ದಾರೆ.

    ಬಸವರಾಜೇಂದ್ರ ಅವರು ಹೇಳಿದ್ದು ಸರಿಯಾಗಿದೆ. ಸಿಎಂ ಪ್ರತಿ ದಿನ ಅಧಿಕಾರಿಗಳಿಗೆ ಧಮ್ಕಿ ಹಾಕಿ ಬಿಜೆಪಿ ನಾಯಕರ ವಿರುದ್ಧ ಕೇಸ್ ಹಾಕಿಸಲು ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಟ್ಟು ತೊಲಗಿ ನಿಮ್ಮ ಪಾಪದ ಕೊಡ ತುಂಬಿದೆ ಎಂದು ಕಿಡಿಕಾರಿದರು.

    ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗ ಮಾಡಿಕೊಂಡು, ಇಲ್ಲದ್ದನ್ನ ಹುಡುಕಿ ಯಡಿಯೂರಪ್ಪ ವಿರುದ್ಧ ಎಸಿಬಿ ಮೂಲಕ ಕೇಸ್ ದಾಖಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿ. ಸೋಮಣ್ಣ ಟೀಕಿಸಿದರು.

    ಸಿಎಂ 550 ಎಕರೆ ಡಿನೋಟಿಫೈ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನ ಜೈಲಿಗೆ ಕಳಿಸಲು ಸಾಕಷ್ಟು ಪುರಾವೆಗಳಿದ್ದಾರೆ. ಅದಕ್ಕಿಂತ ಮೊದಲು ಬಿಜೆಪಿ ನಾಯಕರನ್ನ ಜೈಲಿಗೆ ಕಳಿಸಬೇಕು ಅಂತಾ ಸಿಎಂ ಎಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

    ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಶೋಕ್, ಮಾಜಿ ಸಚಿವ ವಿ ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯ ನಾಯ್ಡು, ಅರವಿಂದ್ ಲಿಂಬಾವಳಿ, ಬಿಜೆಪಿಯ ಶಾಸಕರು, ಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು, ಬೆಂಗಳೂರು ಬಿಜೆಪಿಯ ಜಿಲ್ಲಾಧ್ಯಕ್ಷ ಸುಬ್ಬಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    https://twitter.com/ShobhaBJP/status/898871570424143872

     

  • ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಆಚರಣೆ ಹತ್ತಿಕ್ಕುವ ಕೆಲಸ: ಮುತಾಲಿಕ್

    ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಆಚರಣೆ ಹತ್ತಿಕ್ಕುವ ಕೆಲಸ: ಮುತಾಲಿಕ್

    ದಾವಣಗೆರೆ: ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹಾಕುವುದು ಸರಿಯಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಆದರೆ ಗಣಪತಿ ಹಬ್ಬ ಆಚರಿಸಲು 10 ಲಕ್ಷ ಬಾಂಡ್ ಇಡಬೇಕು ಮತ್ತು ವಾದ್ಯಗೋಷ್ಠಿಗಳು ಇರಬಾರದು ಎನ್ನುವ ನಿರ್ಬಂಧಗಳನ್ನು ಹಾಕಿದ್ದಾರೆ. ಇವರು ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

    ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧಗಳಿವೆ. ಆದರೆ ಮುಸ್ಲಿಂ ಹಬ್ಬಕ್ಕೆ ಯಾಕೆ ನಿರ್ಬಂಧ ಇಲ್ಲ. ಮಸೀದಿಯಲ್ಲಿ ಬೆಳಗಿನ ಜಾವ ಶಬ್ಧವನ್ನು ಏಕೆ ಹತ್ತಿಕ್ಕುತ್ತಿಲ್ಲ. ಗಣೇಶ ಹಬ್ಬದಲ್ಲಿ ಗಲಾಟೆಯಾಗದಂತೆ ಹಿಂದೂ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಗಣಪತಿ ಹಬ್ಬಕ್ಕೆ ಹಾಕಿದ ನಿರ್ಬಂಧಗಳನ್ನು ತೆಗೆಯದಿದ್ದರೆ ಇದೇ ತಿಂಗಳ 18 ರಂದು ರಾಜ್ಯಾದ್ಯಂತ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರ ಸ್ವಾಗತಾರ್ಹ. ಶ್ರೀರಾಮಸೇನೆ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಮೋದ್ ಮುತಾಲಿಕ್ ಭರವಸೆ ನೀಡಿದರು. ಕುಲಗೆಟ್ಟ ರಾಜಕಾರಣವನ್ನ ಸರಿ ಮಾಡಲು ಉಪೇಂದ್ರ ಅವರು ರಾಜಕಾರಣಕ್ಕೆ ಬರಬೇಕು. ಸ್ವಾರ್ಥ, ಗೂಂಡಾಗಿರಿ, ಜಾತಿ ತುಂಬಿಕೊಂಡಿರುವ ಈ ರಾಜಕಾರಣವನ್ನ ಸರಿಮಾಡಲು ಹೊಸಬರು ಬರಲಿ ಎಂದು ಹೇಳಿದರು.

    ಉಪೇಂದ್ರ ಅವರ ನಿಲುವುಗಳು ಉತ್ಕೃಷ್ಟವಾಗಿದ್ದು ಹೊಸ ನಾಯಕರನ್ನು ಹುಟ್ಟು ಹಾಕಲಿ. ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.

  • ಕಾವ್ಯ ಸಾವಿನ ನ್ಯಾಯಕ್ಕಾಗಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ- ಮೇಯರ್ ಸೇರಿದಂತೆ ಸಾವಿರಾರು ಜನ ಭಾಗಿ

    ಕಾವ್ಯ ಸಾವಿನ ನ್ಯಾಯಕ್ಕಾಗಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ- ಮೇಯರ್ ಸೇರಿದಂತೆ ಸಾವಿರಾರು ಜನ ಭಾಗಿ

    ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣದಲ್ಲಿ ಪೊಲೀಸರ ವಿಳಂಬ ತನಿಖೆ ವಿರೋಧಿಸಿ `ಜಸ್ಟಿಸ್ ಫಾರ್ ಕಾವ್ಯ’ ಹೋರಾಟ ಸಮಿತಿ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

    ಕಾವ್ಯ ಸಾವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಹಾಗೂ ಆಕೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ಮಂಗಳೂರಿನ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಗೆ ಭಾಗವಹಿಸಿಲು ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕಾವ್ಯ ಹೆತ್ತವರು, ಸೌಜನ್ಯ ಪೋಷಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದಾರೆ. ಡಿಸಿ ಕಚೇರಿ ಮುಂಭಾಗ ರಸ್ತೆ ಬಂದ್ ಮಾಡಿರುವುದರಿಂದ ಬಸ್ಸುಗಳ ಓಡಾಟಕ್ಕೆ ಪೊಲೀಸರು ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

    ಪ್ರತಿಭಟನೆಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಸಹ ಬೆಂಬಲ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್ ಕಾವ್ಯ ಆತ್ಮಹತ್ಯೆಯೋ, ಕೊಲೆಯೋ ಅನ್ನೋದು ತನಿಖೆಯಾಗಬೇಕು. ಒಟ್ಟಿನಲ್ಲಿ ಸತ್ಯ ಹೊರಬರಲಿ, ಕಾವ್ಯಾ ಹೆತ್ತವರ ಪ್ರಶ್ನೆಗಳಿಗೆ ಉತ್ತರ ಸಿಗಲಿ. ಕಾವ್ಯ ಸಾವಿಗೆ ನ್ಯಾಯಕ್ಕಾಗಿ ನಮ್ಮ ಪೂರ್ಣ ಬೆಂಬಲ ಇದೆ ಎಂದ್ರು.

    ಕಾವ್ಯ ಕ್ರೀಡಾ ವಿದ್ಯಾರ್ಥಿನಿಯಾಗಿದ್ದು ಎಂದಿಗೂ ಆತ್ನಹತ್ಯೆ ಮಾಡಿಕೊಳ್ಳಲಾರಳು. ಸತ್ಯ ಹೊರ ಬರುವವರೆಗೂ ನಮ್ಮ ಹೋರಾಟ ನಿರಂತರವಾಗಲಿದ್ದು, ಪರಿಹಾರ ಮೊತ್ತ ಕೊಡಿಸಲು ಮೇಯರ್ ಆಗಿ ನನ್ನ ಪ್ರಯತ್ನ ಮಾಡುವೆ. ಆದ್ರೆ ತನಿಖೆ ವಿಚಾರದಲ್ಲಿ ಯಾವುದೇ ಪಕ್ಷ ಮೂಗು ತೂರಿಸಬಾರದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನ್ಯಾಶನೆಲ್ ಲೆವಲ್ ಬ್ಯಾಡ್ಮಂಟನ್ ಆಟಗಾರ್ತಿಯಾಗಿರೋ 15 ವರ್ಷದ ಕಾವ್ಯ ಜುಲೈ 20 ರಂದು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು. ಆದ್ರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇದರಿಂದ ಪೋಷಕರು ಇದೊಂದು ಕೊಲೆ ಎಮದು ಆರೋಪಿಸಿದ್ದರು. ಘಟನೆಯ ಬಳಿಕ ಅನೇಕ ಪ್ರತಿಭಟನೆಗಳು ನಡೆದಿದ್ದು, ಹಾಸ್ಟೆಲ್ ನ ಸಿಸಿಟಿವಿ ಕೂಡ ಬಿಡುಗಡೆ ಮಾಡಲಾಗಿತ್ತು.

    ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿಯಾಗಿರುವ ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು.

    ಇದನ್ನೂ ಓದಿ: ಕಾವ್ಯ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

  • ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ

    ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ

    ಉಡುಪಿ: ಮಣಿಪಾಲ ನಗರದ ಬಸ್ ನಿಲ್ದಾಣದ ರಸ್ತೆಯನ್ನು ರಸ್ತೆ ಅಂತ ಕರೆಯೋದು ಕಷ್ಟ. ಯಾಕಂದ್ರೆ ರಸ್ತೆ ಅನ್ನೋದಕ್ಕೆ ಅಲ್ಲಿ ರಸ್ತೆ ಇಲ್ಲ. ಬರೀ ಹೊಂಡ- ಗುಂಡಿಗಳಿಂದಲೇ ತುಂಬಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮತ್ತು ತಾರನಾಥ ಮೆಸ್ತಾ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಹಲವು ಮನವಿಗಳಿಂದ ಬೇಸತ್ತು ನಿತ್ಯಾನಂದ ಒಳಕಾಡು ಅವರು ರಸ್ತೆಯಲ್ಲಿರುವ ಹೊಂಡಕ್ಕೆ ಇಳಿದು ಈಜಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ರಸ್ತೆಯಲ್ಲಿರುವ ಹೊಂಡದ ಆಳ ಎಷ್ಟಿದೆ ಅಂದ್ರೆ ನಿತ್ಯಾನಂದ ಒಳಕಾಡು ಮಲಗಿದವರು ಮುಳುಗುವಷ್ಟು ಹೊಂದಿದೆ ಎಂದು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ದೇಶದಲ್ಲೇ ಮಣಿಪಾಲಕ್ಕೆ ಒಂದು ವಿಶಿಷ್ಟ ಸ್ಥಾನಮಾನವಿದೆ. ಆದರೆ ಮಣಿಪಾಲದ ಈ ರಸ್ತೆ ಪಂಚಾಯತ್ ರಸ್ತೆಗಿಂತ ಕೀಳು ಮಟ್ಟಕ್ಕೆ ಇಳಿದಿದೆ. ವಾರದಲ್ಲಿಯೇ ಮೂರ್ನಾಲ್ಕು ಅಪಘಾತಗಳು ಆಗುತ್ತಿದೆ ಎಂದರು.

    ಇದು ಕೆಎಂಸಿ ಆಸ್ಪತ್ರೆ ಇರುವ ಪ್ರದೇಶ. ಹೀಗಾಗಿ ಇಲ್ಲಿ ಅಂಬುಲೆನ್ಸ್ ಓಡಾಟ ಇಲ್ಲಿ ಜಾಸ್ತಿ. ಆದ್ರೆ ಹೊಂಡ ಗುಂಡಿಯ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಅನಾರೋಗ್ಯ ಪೀಡಿತರಿಗೆ ಇದು ನರಕದ ರೀತಿಯಲ್ಲಿರುವ ರಸ್ತೆ ಆಗಿದೆ. ನಗರಸಭೆಗೆ ಕೇಳಿದ್ರೆ ಇದು ರಾಷ್ಟ್ರೀಯ ಹೆದ್ದಾರಿ ಅಂತ ಹೇಳುತ್ತಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿದ್ರೆ ಇದು ನಗರಸಭೆಯ ಜವಾಬ್ಧಾರಿ ಅಂತ ಹೇಳುತ್ತಾರೆ ಎಂದು ಹೇಳಿದರು.

    ಈ ಹಿಂದೆ ನಿತ್ಯಾನಂದರ ಸಮಾಜ ಸೇವೆಯನ್ನು ಪಬ್ಲಿಕ್ ಟಿವಿ ಗುರುತಿಸಿ, ‘ಪಬ್ಲಿಕ್ ಹಿರೋ’ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರ ಮಾಡಿತ್ತು.

    https://youtu.be/FUzwjukmN0U

  • ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಳ: ನಿನ್ನೆ ಎಷ್ಟಿತ್ತು? ಇಂದು ಎಷ್ಟು ಹೆಚ್ಚಾಗಿದೆ?

    ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಳ: ನಿನ್ನೆ ಎಷ್ಟಿತ್ತು? ಇಂದು ಎಷ್ಟು ಹೆಚ್ಚಾಗಿದೆ?

    ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಿಂದ(ಕೆಆರ್‍ಎಸ್) ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಭಾನುವಾರ 4067 ಕ್ಯೂಸೆಕ್ ನೀರನ್ನು ಬಿಟ್ಟಿದ್ದರೆ, ಸೋಮವಾರ 6067 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

    ಆಗಸ್ಟ್ 4ರಂದು 4787 ಕ್ಯೂಸೆಕ್ ಒಳ ಹರಿವು ಇದ್ದರೆ, ಸೋಮವಾರ 13509 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೇಮಾವತಿ ಜಲಾಶಯದಿಂದ ನೀರನ್ನು ಬಿಟ್ಟ ಕಾರಣ ಜಲಾಶದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ.

    124.80 ಅಡಿ ಗರಿಷ್ಟ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ  ಇಂದು 92.30 ಅಡಿ ನೀರು ಸಂಗ್ರಹವಾಗಿದೆ. 49.45 ಟಿಎಂಸಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಇಂದು 17.35 ಟಿಎಂಸಿ ನೀರು ಸಂಗ್ರಹವಾಗಿದೆ.

    ಜಿಲ್ಲೆಯ ನಾಲೆಗೆ ನೀರು ಹರಿಸುವಂತೆ ಪ್ರತಿಭಟನೆ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಕ್ಯಾರೆ ಎನ್ನದೇ ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ನಾಲೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸುತ್ತಿರೋ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮೈಮೇಲೆ ಸಗಣಿ ಸುರಿದುಕೊಂಡು ಆಕ್ರೋಶವನ್ನ ಹೊರಹಾಕಿದರು.

    ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮತ್ತಿತರರು, ತಮ್ಮ ಮೈ ಮೇಲೆ ಸೆಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರ ಕಾವೇರಿ ಕೊಳ್ಳದ ರೈತರನ್ನ ಕಡೆಗಣಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನ ಭರ್ತಿ ಮಾಡಿ ಅಂತಾ ಸಾಕಷ್ಟು ಸಲ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಇನ್ನು ಮಾಜಿ ಪ್ರಧಾನಿ ದೇವೇಗೌಡರು ಸಹ ಹೇಮಾವತಿ ಭಾಗಕ್ಕೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ನೀರು ಬಿಡಿಸುತ್ತಾರೆ. ಆದರೆ ಕಾವೇರಿ ಭಾಗದವರು ನಾವೇನು ಮಾಡಿದ್ದೀವಿ ಅಂತಾ ಪ್ರತಿಭಟನಾಕಾರರು ಪ್ರಶ್ನೆ ಮಾಡಿದ್ದಾರೆ.

    ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಬರುವ ಸ್ವಾತಂತ್ರ್ಯ ದಿನಾಚರಣೆದಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಧ್ವಜಾರೋಹಣಕ್ಕೆ ಅಡ್ಡಿಪಡಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆಯನ್ನು ನೀಡಿದ್ದಾರೆ.

  • ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

    ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

    ಕಾರವಾರ: ಓವರ್‍ಟೇಕ್ ಮಾಡಿದ್ದನ್ನ ಪ್ರಶ್ನಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಖಾಸಗಿ ಬಸ್ ಚಾಲಕ ಹಾಗೂ ಏಜೆಂಟ್ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

    ಚಂದ್ರಹಾಸ್ ಬೀಸನಳ್ಳಿ ಹಾಗೂ ಏಕನಾಥ್ ಎಂಬವರು ಹಲ್ಲೆಗೊಳಗಾದ ಬಸ್ ಚಾಲಕರು. ಚಂದ್ರಹಾಸ್ ಮತ್ತು ಏಕನಾಥ್ ಇಬ್ಬರೂ ಅತಿ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಸುಗಮ ಟೂರಿಸ್ಟ್ ಬಸ್ ಸಂಸ್ಥೆಯ ವಾಹನ ಚಾಲಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕಚೇರಿಯ ಒಳಗೆ ಕರೆದುಕೊಂಡು ಹೋಗಿ ಕಚೇರಿಯ ಏಜೆಂಟ್ ಸಂತೋಷ್ ಶೆಟ್ಟಿ ಹಾಗೂ ಆತನ ಸಹಚರರು ಸೇರಿ ಹಲ್ಲೆ ನೆಡೆಸಿದ್ದಾರೆ.

    ಆಗಿದ್ದೇನು?: ಇಂದು ಬೆಳಗ್ಗೆ ಕೆಎಸ್‍ಆರ್‍ಟಿಸಿ ನಗರ ಸಾರಿಗೆ ಬಸ್ ಮುದಗಾ ದಿಂದ ಕಾರವಾರಕ್ಕೆ ಬರುತ್ತಿರುವಾಗ ಬಿಣಗಾ ಗ್ರಾಮದ ಬಳಿ ಬೆಂಗಳೂರಿನಿಂದ ಕಾರವಾರಕ್ಕೆ ಬರುತಿದ್ದ ಸುಗಮ ಟ್ರಾವೆಲ್ಸ್ ಅತೀ ವೇಗದಿಂದ ಸರ್ಕಾರಿ ಬಸ್ ಅನ್ನು ಓವರ್ ಟೇಕ್ ಮಾಡಿತ್ತು. ಇದರಿಂದಾಗಿ ಸರ್ಕಾರಿ ಬಸ್ ಅಪಘಾತವಾಗುವುದರಲ್ಲಿತ್ತು. ಹೀಗಾಗಿ ನಿಲ್ದಾಣಕ್ಕೆ ಬಂದವೇಳೆ ಇದನ್ನು ಸರ್ಕಾರಿ ಬಸ್ ಚಾಲಕರಾದ ಚಂದ್ರಹಾಸ್ ಹಾಗೂ ಏಕನಾಥ್ ಪ್ರಶ್ನಿಸಿದ್ರು. ಇದರಿಂದ ಕೋಪಗೊಂಡ ಖಾಸಗಿ ಬಸ್ ಚಾಲಕರು ಚಂದ್ರಹಾಸ್ ಮತ್ತು ಏಕನಾಥ್‍ರ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಇಬ್ಬರು ಸರ್ಕಾರಿ ಬಸ್ ಚಾಲಕರು ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಕಾರಣದಿಂದ ಸರ್ಕಾರಿ ಬಸ್ ಸಿಬ್ಬಂದಿ ನಗರದ ವಿವಿಧಡೆ ಸಂಚರಿಸುವ ಸರ್ಕಾರಿ ಬಸ್ಸುಗಳನ್ನು ಸ್ಥಗಿತಗೊಳಿಸಿ ಸುಗಮ ಟ್ರಾವೆಲ್ಸ್ ಕಚೇರಿ ಎದುರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲವು ಕಾಲ ನಗರದ ಹೃದಯ ಭಾಗದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಸಹ ನಿರ್ಮಾಣವಾಗಿತ್ತು.

    ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಸುಗಮ ಟ್ರಾವೆಲ್ಸ್ ನ ಸಂತೋಷ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡ ನಂತರ ಸಾರಿಗೆ ನೌಕರರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಇನ್ನೂ ಸಂತೋಷ್ ಶೆಟ್ಟಿಯ ಸಹಚರರಾದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ನಾಪತ್ತೆಯಾಗಿರುವ ನಾಲ್ವರ ಪತ್ತೆಗಾಗಿ ಜಾಲ ಬೀಸಿದ್ದಾರೆ.

     +

     

     

  • ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆಯ ವರದಿ

    ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆಯ ವರದಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಹೈಸ್ಕೂಲಿನ ವಿದ್ಯಾರ್ಥಿನಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢ ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದೆ.

    ಮರಣೋತ್ತರ ಪರೀಕ್ಷೆಯ ವರದಿಯಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಪಣಂಬೂರು ಎಸಿಪಿ ರಾಜೇಂದ್ರ ಅವರು ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದ್ದರೂ ವಿಧಿ ವಿಜ್ಞಾನ ಇಲಾಖೆಯ ವರದಿ ಹಾಗೂ ಆ ವರದಿಯಿಂದ ವೈದ್ಯರು ನೀಡುವ ವರದಿಯಂತೆ ಪ್ರಕರಣದ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಎಸಿಪಿ ತಿಳಿಸಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಈ ಎಲ್ಲಾ ವರದಿಗಳು ಸರಿಯಾಗಿ ಆಗಬೇಕಿರುವುದರಿಂದ ಇನ್ನೂ 15 ದಿನಗಳ ಕಾಲ ಆಗುವ ಸಾಧ್ಯತೆ ಇದೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸರು ಕೂಡ ಎಲ್ಲಾ ರೀತಿಯ ತನಿಖೆಗಳನ್ನೂ ಮಾಡುತ್ತಿದ್ದಾರೆ. ಈಗಾಗಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್, ಕಾವ್ಯಾಳ ಸಹಪಾಠಿಗಳು, ಹಾಸ್ಟೆಲ್ ವಾರ್ಡನ್‍ರನ್ನು ವಿಚಾರಣೆ ನಡೆಸಿದ್ದ ಎಸಿಪಿ ತಂಡ ಕಾವ್ಯಾಳ ಹೆತ್ತವರಿಂದಲೂ ಮಾಹಿತಿ ಪಡೆದಿದ್ದಾರೆ.

    ಕಾವ್ಯಾಳ ಸಾವಿನ ರಹಸ್ಯ ನಿಗೂಢವಾಗಿದ್ದು, ಈ ಕುರಿತು ಸುದ್ದಿಯಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದರಿಂದ ಪೊಲೀಸರೂ ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸೂಕ್ತ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಹೆಚ್ಚುತ್ತಲೇ ಇದೆ.

    ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

  • ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮೂಡಬಿದಿರೆಯ ಆಳ್ವಾಸ್‍ನ 10ನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ. ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವಿನ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ಮಾಡಿದ್ರೆ, ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ಕಾರ್ಯಕರ್ತರು ಮಂಗಳೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.

    ಈ ಹಿನ್ನೆಲೆಯಲ್ಲಿ ಶನಿವಾರದ ಪಬ್ಲಿಕ್ ಟಿವಿ ಬಿಗ್‍ಬುಲೆಟಿನ್‍ನಲ್ಲಿ ಈ ಕುರಿತಂತೆ ಚರ್ಚೆ ನಡೀತು. ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ನಾನು ಕೂಡ ಆಗ್ರಹಿಸುತ್ತೇನೆ. ಅವರಿಗಷ್ಟೇ ಅಲ್ಲದೇ ನನ್ನ ಸಂಸ್ಥೆಗೂ ನ್ಯಾಯ ಬೇಕು ಅಂದ್ರು.

    ಮೋಹನ್ ಆಳ್ವ ನೀಡಿದ ಉತ್ತರಕ್ಕೆ ಕಾವ್ಯಶ್ರೀಯ ತಾಯಿ ಕೂಡ ಸಹಮತ ವ್ಯಕ್ತಪಡಿಸಿದ್ರು. ನಮಗೆ ಪ್ರವೀಣ್ ಮೇಲೆ ಡೌಟ್ ಇದೆ. ತನಿಖೆ ನಡೆಯಬೇಕು ಅಂದ್ರು. ಇದೇ ವೇಳೆ ಮಾತಾಡಿದ ವಿದ್ಯಾರ್ಥಿ ಸಂಘಟನೆ ಮುಖಂಡ ದಿನಕರ್ ಶೆಟ್ಟಿ, ದೈಹಿಕ ಶಿಕ್ಷಕ ಪ್ರವೀಣ್ ರನ್ನು ಕೆಲಸದಿಂದ ತೆಗೆದುಹಾಕುವಂತೆ ಆಗ್ರಹಿಸಿದ್ರು. ಇದಕ್ಕೆ ಉತ್ತರಿಸಿದ ಆಳ್ವ, ಮೊನ್ನೆಯೇ ಆ ಕೆಲಸ ಮಾಡಿದ್ದೇನೆ ಅಂದ್ರು.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ 

    https://www.youtube.com/watch?v=75vzrVm8Z6w

    https://www.youtube.com/watch?v=O1dTEqQsZ80

    ಇದನ್ನೂ ಒದಿ: ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ 

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಇದನ್ನೂ ಓದಿ: ಮಂಗ್ಳೂರಿನ ಆಳ್ವಾಸ್ ನಲ್ಲಿ SSLC ವಿದ್ಯಾರ್ಥಿನಿ ನಿಗೂಢ ಸಾವು- ಕೊಲೆ ಎಂದು ಪೋಷಕರ ಆರೋಪ