Tag: protection

  • ಕರಾವಳಿ ಮಳೆ – ಅಧಿಕಾರಿಗಳ ಜೊತೆ ಮಾತನಾಡಿದ ಮೋದಿ

    ಕರಾವಳಿ ಮಳೆ – ಅಧಿಕಾರಿಗಳ ಜೊತೆ ಮಾತನಾಡಿದ ಮೋದಿ

    ಬೆಂಗಳೂರು: ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕರಾವಳಿ, ಉಡುಪಿ, ಮಂಗಳೂರು ಸೇರಿದಂತೆ ಕರ್ನಾಟಕದ ಇತರೇ ಭಾಗಗಳ ಜನರ ರಕ್ಷಣೆಗೆ ಅಗತ್ಯ ಸಹಕಾರ ನೀಡಲು ಸೂಚಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಕ್ಷಣೆಗೆ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದು, ಅಪಾಯಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸಹಕಾರ ನೀಡಲು ಅಧಿಕಾರಿಗಳ ಬಳಿ ಮಾತನಾಡಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಏಷ್ಯಾ ರಾಷ್ಟ್ರಗಳ ವಿದೇಶಿ ಪ್ರವಾಸದಲ್ಲಿದ್ದು, ಇಂಡೋನೇಷಿಯಾ, ಸಿಂಗಾಪುರ, ಮಲೇಷಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಸದ ಭಾಗವಾಗಿ ಇಂದು ಇಂಡೋನೇಷಿಯಾ ಗೆ ಭೇಟಿ ನೀಡಿದ್ದು, ಬಳಿಕ ಸಿಂಗಾಪುರ ಹಾಗೂ ಮಲೇಷಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

    ಮುಕುನು ಚಂಡಮಾರುತದ ಪ್ರಭಾವಕ್ಕೆ ಕರಾವಳಿಯ ಮೂರು ಜಿಲ್ಲೆಗಳು ತತ್ತರಿಸಿ ಹೋಗಿದ್ದು, ಮಂಗಳೂರಿನ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿ ಪ್ರವಾಹ ಭೀತಿ ಎದುರಾಗಿದೆ. ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ, ಮಂಗಳೂರು – ಕೇರಳ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಉಡುಪಿ ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ 34 ವರ್ಷದ ಶೀಲಾ ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ 2 ಬೋಟ್ ಗಳಲ್ಲಿ ಒಂದು ಮುಳುಗಿದ್ದು, ಮುಳುಗುವ ಹಂತದಲ್ಲಿದ್ದ ಮತ್ತೊಂದು ಬೋಟ್ ಮತ್ತು ನಾಲ್ವರು ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.

    https://www.youtube.com/watch?v=-TAoAb4cibM

  • ನಾಲ್ಕನೇ ಮಹಡಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ರಕ್ಷಿಸಿ ರಿಯಲ್ ಸ್ಪೈಡರ್ ಮ್ಯಾನ್ ಆದ ಯುವಕ – ವಿಡಿಯೋ ನೋಡಿ

    ನಾಲ್ಕನೇ ಮಹಡಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ರಕ್ಷಿಸಿ ರಿಯಲ್ ಸ್ಪೈಡರ್ ಮ್ಯಾನ್ ಆದ ಯುವಕ – ವಿಡಿಯೋ ನೋಡಿ

    ಪ್ಯಾರಿಸ್: ಸಿನಿಮಾಗಳಲ್ಲಿ ಸ್ಪೈಡರ್ ಮ್ಯಾನ್ ಕಷ್ಟದಲ್ಲಿರುವವರನ್ನು ರಕ್ಷಿಸುವ ಹಾಗೇ ಯುವಕನೊಬ್ಬ ನೋಡ ನೋಡುತ್ತಿದಂತೆ ನಾಲ್ಕನೇ ಮಹಡಿ ಹತ್ತಿ ಬಾಲಕನ್ನು ರಕ್ಷಿಸಿರುವ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.

    ಮಮೌದೌ ಗಸ್ಸಮ್ ಎಂಬ ಯುವಕ ಕಟ್ಟಡ ಹತ್ತಿ ಮಗುವಿನ ಪ್ರಾಣವನ್ನು ಉಳಿಸಿದ್ದು, ಆಕಸ್ಮಾತ್ ಆಗಿ ನಾಲ್ಕನೇ ಮಹಡಿಯಿಂದ ಮಗು ಜಾರಿ ನೇತಾಡುತ್ತಿತ್ತು. ಈ ವೇಳೆ ಜೀವದ ಹಂಗು ತೊರೆದ ಯುವಕ ಬರಿಗೈಯಲ್ಲಿ ಕಟ್ಟಡ ಹತ್ತಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ್ದಾನೆ.

    ಬಾಲಕನ ರಕ್ಷಣೆಗೆ ಮಗುವಿನ ತಂದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಆದರೆ ಅವರು ಬರುವಷ್ಟರಲ್ಲಿ ಬಾಲಕನನ್ನು ರಕ್ಷಿಸಿ ಯುವಕ ಕೆಳಗಿಳಿಸಿದ್ದಾನೆ. ಸದ್ಯ ಯುವಕ ಸಾಧನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳನ್ನು ಕಂಡ ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಯುವಕನ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಕಳೆದ ಐದು ತಿಂಗಳ ಹಿಂದೆಯಷ್ಟೇ ಇಟಲಿಯಿಂದ ಪ್ಯಾರಿಸ್ ಗೆ ಬಂದಿದ್ದ ಮಮೌದೌ ಸಾಧನೆಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುವಲ್ ಶ್ಲಾಘನೆ ಸೂಚಿಸಿ ತಮ್ಮ ದೇಶದ ಪೌರತ್ವ ನೀಡಿ ಗೌರವಿಸಿದ್ದಾರೆ. ಸದ್ಯ ಫ್ರೆಂಚ್ ಪೌರತ್ವ ಪಡೆದಿರುವ ಮಮೌದೌ ಸದ್ಯ ಉದ್ಯೋಗವನ್ನು ಪಡೆದಿದ್ದಾರೆ.

  • ಅಭಿಮಾನಿಗಳಿಗೆ ಹೊಸ ಸಂದೇಶ ನೀಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಅಭಿಮಾನಿಗಳಿಗೆ ಹೊಸ ಸಂದೇಶ ನೀಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಹೊಸ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡುವ ಮುಲಕ ತಮ್ಮ ಅಭಿಮಾನಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಕಾಡು ಉಳಿದರೆ ನಾಡು, ಪ್ರಾಣಿ ಪಕ್ಷಿ ಪೃಕೃತಿಯನ್ನ ಉಳಿಸೋದು ಮನುಷ್ಯನ ಜವಾಬ್ದಾರಿ. ಆದರೆ ಸರ್ಕಾರದಿಂದ ಇಂಥಹ ಎಷ್ಟೇ ಸಲಹೆ ಸೂಚನೆ ಜಾಗೃತಿ ಕಾರ್ಯಕ್ರಮ ನಡೆದರೂ ಅದ್ಯಾಕೋ ಜನರ ಕಿವಿಗೆ ಹೋಗೋದೇ ಇಲ್ಲ. ಪೃಕೃತಿ ವಿಕೋಪದಿಂದ ಮಳೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ಕಾಡು ಕ್ಷೀಣಿಸುತ್ತಲೇ ಇದೆ. ಆದರೆ ಈ ಬಾರಿ ಕಾಡಿನ ರಕ್ಷಣೆಗಾಗಿ ಸರ್ಕಾರ ಮಹಾನ್ ಪರಿಸರ ಪ್ರೇಮಿಯೊಬ್ಬರನ್ನ ಆಯ್ಕೆ ಮಾಡಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂಲಕ ಈ ಬಾರಿ ಅರಣ್ಯ ಸಂಪತ್ತಿನ ಮಹ್ವತ್ವ ಸಾರೋಕೆ ಹೊರಟಿದೆ.

    ದಿನನಿತ್ಯದ ಜೀವನದಲ್ಲಿ ದರ್ಶನ್‍ಗೆ ಪ್ರಾಣಿ- ಪಕ್ಷಿಗಳು ಅವಿಭಾಜ್ಯ ಅಂಗ. ದರ್ಶನ್ ಲಕ್ಷಾಂತರ ಖರ್ಚು ಮಾಡಿ ಮೈಸೂರು ಮೃಗಾಲಯದಲ್ಲಿ ಹುಲಿ ಆನೆಯನ್ನ ದತ್ತು ಪಡೆದು ಸಲಹುತ್ತಿದ್ದಾರೆ. ವರ್ಷಕ್ಕೆ ಒಮ್ಮೆಯಾದ್ರೂ ಕಾಡಿಗೆ ಪ್ರವಾಸ ಬೆಳೆಸಿ ಪೃಕೃತಿ ಮಡಿಲಲ್ಲಿ ಆಶ್ರಯಿಸುತ್ತಾರೆ. ಆದ್ದರಿಂದ ಈಗ ದರ್ಶನ್ ಕೂಡ ಕಾಡು ರಕ್ಷಣಾ ಜಾಗೃತಿ ಅಭಿಯಾನಕ್ಕೆ ಮನಃಪೂರ್ತಿ ಕೈಜೋಡಿಸಿ ಎಂಡೋರ್ಸ್ ಮಾಡಲಿದ್ದಾರೆ.

    ದರ್ಶನ್ ಎಂಡೋರ್ಸ್ ಮಾಡಿದ್ರೆ ಅದು ಹೆಚ್ಚಿನ ಜನಕ್ಕೆ ತಲುಪಬಲ್ಲದು ಅನ್ನೋದು ಅಭಿಪ್ರಾಯ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಅರಣ್ಯ ರಕ್ಷಣಾ ಸಮಿತಿ ದರ್ಶನ್ ಸಂದೇಶ ನೀಡಿರುವ ವಿಡಿಯೋ ಒಂದನ್ನ ಬಿಡುಗಡೆ ಮಾಡಿತ್ತು. ಇದೀಗ ಜೂನ್ 5 ರಂದು ಅರಣ್ಯ ರಕ್ಷಣಾ ಸಮಿತಿ ವತಿಯಿಂದ ನೂತನ ಸಂದೇಶವಿರುವ ಹೊಚ್ಚ ಹೊಸ ವೀಡಿಯೋವೊಂದು ರಿಲೀಸ್ ಆಗಲಿದೆ. ಈ ವೀಡಿಯೋವನ್ನ ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಮುಂತಾದ ಜಾಗದಲ್ಲಿ ಶೂಟ್ ಮಾಡಲಾಗಿದೆ.

    ಈ ವಿಡಿಯೋದಲ್ಲಿ ದರ್ಶನ್ ಗಿಡ ನೆಡುವುದರ ಮೂಲಕ ಮಹತ್ವದ ಭೂಮಿಯ ರಕ್ಷಣೆಯ ಚುಟುಕು ಸಂದೇಶ ನೀಡುತ್ತಿದ್ದಾರೆ. ಸದ್ಯಕ್ಕೆ ಅವರು `ಯಜಮಾನ’ ಸಿನಿಮಾವನ್ನು ಮಾಡುತ್ತಿದ್ದಾರೆ. ತಮ್ಮ ಬ್ಯುಸಿ ಶೂಟಿಂಗ್ ನಲ್ಲೂ ಅರಣ್ಯ ರಕ್ಷಣೆಗೆ ಗಾಗಿ ಸಾಥ್ ನೀಡಿದ್ದಾರೆ.

  • ಎರಡು ಅಂತಸ್ತಿನಿಂದ ಬೀಳ್ತಿದ್ದ ಬಾಲಕಿಯನ್ನು ರಕ್ಷಿಸಿದ ಅಂಗಡಿ ಮಾಲೀಕ

    ಎರಡು ಅಂತಸ್ತಿನಿಂದ ಬೀಳ್ತಿದ್ದ ಬಾಲಕಿಯನ್ನು ರಕ್ಷಿಸಿದ ಅಂಗಡಿ ಮಾಲೀಕ

    ಬೀಜಿಂಗ್: ಎರಡು ಅಂತಸ್ತಿನ ಮೇಲಿನಿಂದ ಬಾಲಕಿಯೊಬ್ಬಳನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಅಂಗಡಿ ಮಾಲೀಕ ಫೋನ್ ನಲ್ಲಿ ಮಾತನಾಡುತ್ತಾ ಎದುರಿನ ಕಟ್ಟಡದಿಂದ ಬೀಳುತ್ತಿದ್ದ ಬಾಲಕಿಯನ್ನು ನೋಡಿದ್ದಾರೆ. ತನ್ನ ಅಂಗಡಿಗೂ ಬಾಲಕಿ ಬೀಳುತ್ತಿದ್ದ ಕಟ್ಟಡಕ್ಕೆ ಅಂದಾಜು 40 ಮೀಟರ್ ದೂರವಿದ್ರೂ ಕ್ಷಣಾರ್ಧದಲ್ಲಿ ಓಡಿ ಹೋಗಿ ಆಕೆಯನ್ನು ಕ್ಯಾಚ್ ಹಿಡಿದಿದ್ದಾರೆ.

    ರಸ್ತೆಯಲ್ಲಿ ಬಾಲಕಿ ಬೀಳುತ್ತಿದ್ದನ್ನು ಹಲವರು ಅಸಹಾಯಕರಾಗಿ ನೋಡುತ್ತಿದ್ದರು. ಅಂಗಡಿ ಮಾಲೀಕನ ಸಮಯ ಪ್ರಜ್ಞೆಯಿಂದಾಗಿ ಬಾಲಕಿಯ ಜೀವ ಉಳಿದಿದೆ. ನೈಋತ್ಯ ಚೀನಾದ ಚಾಂಗ್ಕಿಂಗ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂಗಡಿ ಮಾಲೀಕ ಕಟ್ಟಡದಿಂದ ಬೀಳುತ್ತಿದ್ದ ಬಾಲಕಿಯನ್ನು ಕ್ಯಾಚ್ ಹಿಡಿದಿರುವ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

    ಇತ್ತೀಚೆಗೆ ಏಪ್ರಿಲ್ 30ರಂದು ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬಾಲಕನನ್ನು ಚಾಲಕ ಕಾರ್ ನಿಲ್ಲಿಸಿ ತನ್ನ ಪ್ರಾಣವನ್ನು ಲೆಕ್ಕಿಸದೇ ಆತನನ್ನು ರಕ್ಷಣೆ ಮಾಡಿದ್ದರು.

  • ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ.

    ಘಟನೆಯ ವಿವರ: ಶುಕ್ರವಾರ ಮಹಾಲಕ್ಷ್ಮಿ ರೈಲ್ವೇ ನಿಲ್ದಾಣದಲ್ಲಿ ರೈಲು ಚಲಿಸಿದೆ, ಇದನ್ನು ನೋಡಿ ತಾಯಿಯೊಬ್ಬರು ಬಾಲಕಿಯ ಕೈ ಹಿಡಿದು ಓಡಿ ಬಂದಿದ್ದಾರೆ. ರೈಲಿನ ಬಾಗಿಲು ಬಳಿ ಬರುತ್ತಿದ್ದಂತೆ ಪೋಷಕರು ರೈಲನ್ನು ಹತ್ತಿದ್ದಾರೆ. ಈ ವೇಳೆ ಬಾಲಕಿ ರೈಲು ಹತ್ತಲು ಪ್ರಯತ್ನ ಮಾಡಿದ್ದಾಳೆ. ಆದರೆ ರೈಲು ಚಲಿಸುತ್ತಿದ್ದರಿಂದ ಹತ್ತಲಾಗದೇ ಕಾಲು ಜಾರಿ ರೈಲಿನ ಕೆಳಗೆ ಬಿದ್ದಿದ್ದಾಳೆ. ಅಲ್ಲೆ ಇದ್ದ ಯೋಧ ಇದನ್ನು ನೋಡಿ ಬಂದು ತನ್ನ ಪ್ರಾಣವನ್ನು ಲೆಕ್ಕಿಸದೆ ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ಎಳೆದು ಕೊಂಡು ಕಾಪಾಡಿದ್ದಾರೆ. ಸದ್ಯಕ್ಕೆ ಈ ಘಟನೆಯಿಂದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

    ಯೋಧ ಸಚಿನ್ ಪೋಲ್ ಬಾಲಕಿಯನ್ನು ರಕ್ಷಿಸಿರುವ ವಿಡಿಯೋ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೋಧನ ಸಮಯ ಪ್ರಜ್ಞೆ ಮತ್ತು ಸಹಾಸದಿಂದ ಅದೃಷ್ಟವಶಾತ್ ಬಾಲಕಿ ಬಚಾವ್ ಆಗಿದ್ದಾಳೆ.

    ಯೋಧ ಸಚಿನ್ ಪೋಲ್ ಎರಡು ವರ್ಷಗಳಿಂದ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇವರ ಸಾಹಸಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

  • ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ಲಕ್ನೋ: ಕೊಳಚೆ ನೀರು ಹರಿಯುವ ಕಾಲುವೆಯಲ್ಲಿ ನಾಯಿ ಮರಿಯೊಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಟೆಕ್ಕಿಯೊಬ್ಬರು ಕೇವಲ 6 ಗಂಟೆಯಲ್ಲಿ ಡ್ರೋಣ್ ತಯಾರಿಸಿ ರಕ್ಷಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ.

    ರಾಜ್ ಮಿಲಿಂದರ್ (27) ನಾಯಿ ಮರಿಯನ್ನು ರಕ್ಷಿಸಿದ ಟೆಕ್ಕಿ. ಬೆಳಗ್ಗೆ ವಾಕಿಂಗ್ ಮಾಡಲು ತೆರಳಿದ್ದ ರಾಜ್, ನಾಯಿ ಮರಿ ಮೋರಿಯಲ್ಲಿ ಬಿದ್ದು ಒದ್ದಾಡುವುದನ್ನು ಕಂಡು ರಕ್ಷಿಸಲು ಸ್ಥಳೀಯರ ಸಹಾಯ ಕೇಳಿದ್ದಾರೆ. ಆದರೆ ಯಾರು ಸಹಾಯ ಮಾಡಲು ನಿರಾಕರಿಸಿ ನಾಯಿ ಮರಿ ಅಲ್ಲಿಯೇ ಸಾಯಲಿ ಎಂದು ಹೇಳಿದ್ರಂತೆ. ಈ ವೇಳೆ ನಾಯಿ ಮರಿಯನ್ನು ರಕ್ಷಿಸಬೇಕು ಎಂದು ತೀರ್ಮಾನಿಸಿದ ರಾಜ್ ನೇರ ಲ್ಯಾಬ್‍ಗೆ ತೆರಳಿ ಡ್ರೋಣ್ ತಯಾರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸುವ ರಾಜ್, ನಾಯಿ ಮರಿ ರಕ್ಷಿಸಲು ಸಹಾಯ ಕೇಳಿದ ವೇಳೆ ಎರಡು ದಿನಗಳಿಂದ ಮೋದಿಯಲ್ಲಿ ಅದು ಸಿಕ್ಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಷಯ ತಿಳಿಯಿತು. ಅದ್ದರಿಂದ ಅದನ್ನು ರಕ್ಷಣೆ ಮಾಡಲು ನಿರ್ಧರಿಸಿ ಎಐ ಕಂಟ್ರೋಲ್ ಡ್ರೋಣ್ ತಯಾರಿಸಿದ್ದಾಗಿ ಹೇಳಿದ್ದಾರೆ.

    ಡ್ರೋಣ್ ಗೆ ರೊಬೋಟಿಕ್ ಕೈ ಜೋಡಿಸಲಾಗಿತ್ತು, ಬಳಿಕ ರಿಮೋಟ್ ಕಂಟ್ರೋಲ್ ಬಳಸಿ ಅದನ್ನು ನಿಯಂತ್ರಣ ಮಾಡಲಾಯಿತು. ಅಲ್ಲದೇ ಅದಕ್ಕೆ ಸ್ಮಾರ್ಟ್ ಸೆನ್ಸಾರ್ ಅಳವಡಿಸಲಾಗಿತ್ತು. ಇದರಿಂದ ನಾಯಿಯನ್ನು ರಕ್ಷಣೆ ಮಾಡಲು ಸಾಧ್ಯವಾಯಿತು. ಕೊಳಚೆ ಕಾಲುವೆಗೆ ಇಳಿದು ನಾಯಿ ಮರಿಯನ್ನು ರಕ್ಷಿಸುವುದು ಅಸಾಧ್ಯವಾಗಿತ್ತು. ಅದ್ದರಿಂದ ಅನಿವಾರ್ಯವಾಗಿ ಡ್ರೋಣ್ ಸಹಾಯ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.

  • ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್‍ನ್ನು ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.

    ಕೆಎ 01 ಎಜಿ ನಂಬರ್ ನ ಲಾಮಾ ಟ್ರಾವೆಲ್ಸ್ ಗೆ ಸೇರಿದ ಬಸ್ ಸುಮಾರು 42 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟಿತ್ತು. ಈ ವೇಳೆ ಮೈಸೂರು ರಸ್ತೆಯ ಆರ್‍ವಿ ಕಾಲೇಜ್ ಬಳಿ ತಡೆದ ನಾಲ್ವರು ವ್ಯಕ್ತಿಗಳು ನಾವು ಪೊಲೀಸರು ಅಂತಾ ಹೇಳಿ ಬಸ್ ಡ್ರೈವರ್ ನ ಕೆಳಗಿಳಿಸಿ ಬಸ್‍ನ್ನು ಅಪಹರಿಸಿದ್ದರು.

    ಅಪಹರಿಸಿ ಆರ್ ಆರ್ ನಗರದ ಪಟ್ಟಣಗೆರೆಯ ಗೋಡಾನ್‍ವೊಂದರಲ್ಲಿ ಸುಮಾರು ಒಂದು ಗಂಟೆಗಳ ಕಾಲ ಬಂಧನದಲ್ಲಿ ಇಟ್ಟಿದ್ದರು. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದ ಸುಮಾರು 30 ಕ್ಕೂ ಹೆಚ್ಚು ಜನರ ತಂಡ ಗೋಡಾನ್‍ ನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

    ಪ್ರಾಥಮಿಕ ಮಾಹಿತಿ ಪ್ರಕಾರ ಫೈನಾನ್ಸ್ ವಿಚಾರವಾಗಿ ಈ ಕಿಡ್ನಾಪ್ ನಡೆದಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!

    ಮಹಿಳೆ ಮೇಲಿನ ಅತ್ಯಾಚಾರವನ್ನ ತಪ್ಪಿಸಲು ಚಲಿಸುತ್ತಿರುವ ರೈಲಿನಿಂದ ಜಿಗಿದ ಪೊಲೀಸ್ ಪೇದೆ!

    ಚೆನ್ನೈ: ಮಹಿಳೆಯ ಮೇಲಿನ ಅತ್ಯಾಚಾರವನ್ನು ತಡೆಯಲು ಪೊಲೀಸ್ ಪೇದೆಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಸಂತ್ರಸ್ತೆಯನ್ನ ರಕ್ಷಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ರೈಲ್ವೆ ರಕ್ಷಣಾ ಪಡೆಯ 26 ವರ್ಷದ ಶಿವಾಜಿ ಎಂಬವರೇ ಮಹಿಳೆಯನ್ನು ರಕ್ಷಣೆ ಮಾಡಿದ ಕಾನ್ಸ್ ಸ್ಟೇಬಲ್. ಈ ಘಟನೆ ಸೋಮವಾರ ರಾತ್ರಿ ಚೆನ್ನೈನ ಪಾರ್ಕ್ ಟೌನ್ ನಿಲ್ದಾಣದಲ್ಲಿ ನಡೆದಿದೆ. ಸದ್ಯಕ್ಕೆ ಆರೋಪಿಯನ್ನು ಸರ್ಕಾರಿ ರೈಲ್ವೇ ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.

    ಘಟನೆಯ ವಿವರ?: ಸೋಮವಾರ ರಾತ್ರಿ ಶಿವಾಜಿ ಸೇರಿದಂತೆ ಮತ್ತೊಬ್ಬ ಕಾನ್ಸ್ ಸ್ಟೇಬಲ್ ಮತ್ತು ಸಬ್ ಇನ್ಸ್ ಪೆಕ್ಟರ್ ಎಸ್.ಸುಬ್ಬಯ್ಯ ಅವರು ವೆಲಚೇರಿಯಿಂದ ಚೆನ್ನೈ ಬೀಚ್‍ಗೆ ಗಸ್ತು ಕರ್ತವ್ಯಕ್ಕಾಗಿ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

    ಈ ವೇಳೆ ಚಿಂತಾದ್ರಿಪೇಟ್ ನಿಲ್ದಾಣದಿಂದ ರೈಲು ಹೊರಟಾಗ ರಾತ್ರಿ ಸುಮಾರು 11.45ಕ್ಕೆ ಪಕ್ಕದ ಬೋಗಿಯಿಂದ ಮಹಿಳೆಯೊಬ್ಬರ ಚೀರಾಟ ಕೇಳಿಬಂದಿದೆ. ಆದರೆ ಆ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಒಳಗಿನಿಂದಲೇ ಹೋಗುವ ವ್ಯವಸ್ಥೆಯಿರಲಿಲ್ಲ. ಆದ್ದರಿಂದ ಶಿವಾಜಿ ಮುಂದಿನ ನಿಲ್ದಾಣ ಪಾರ್ಕ್ ಟೌನ್ ನಲ್ಲಿ ರೈಲು ನಿಧಾನವಾಗುದನ್ನು ಕಾಯುತ್ತಿದ್ದರು. ರೈಲು ನಿಧಾನವಾಗುತ್ತಿದ್ದಂತೆ ಕೂಡಲೇ ಬೋಗಿಯಿಂದ ಪ್ಲಾಟ್‍ಫಾರ್ಮ್ ಗೆ ಶಿವಾಜಿ ಹಾರಿ ವೇಗವಾಗಿ ಮಹಿಳೆ ಇದ್ದ ಬೋಗಿಗೆ ಓಡಿದ್ದಾರೆ.

    ಆ ಬೋಗಿಯಲ್ಲಿ 25 ವರ್ಷದ ಮಹಿಳೆಯ ಮೇಲೆ ಸತ್ಯರಾಜ್ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿದ್ದನು. ತಕ್ಷಣ ಆತನನ್ನು ತಳ್ಳಿ ಮಹಿಳೆಯನ್ನ ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಶಿವಾಜಿ ಜೊತೆ ಇದ್ದವರು ಬಂದು, ಪ್ರಜ್ಞಾಹೀನ ಸ್ಥಿಯಲ್ಲಿದ್ದ ಸಂತ್ರಸ್ತೆಯನ್ನು ತಕ್ಷಣ ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಇನ್ನು ಇತರೆ ಪೊಲೀಸರು ಬಂದು ಆರೋಪಿಯನ್ನು ಥಳಿಸಿ ಬಂಧಿಸಿದ್ದು, ಆರೋಪಿ ವಿರುದ್ಧ ಅತ್ಯಾಚಾರಕ್ಕೆ ಯತ್ನದ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

    ಪೇದೆ ಶಿವಾಜಿ ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಿಸಿದ್ದು, ಇದರಿಂದ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲದೇ ರೈಲ್ವೇ ಪೊಲೀಸ್ ಇಲಾಖೆ ಕೂಡ ಶಿವಾಜಿ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಶಿವಾಜಿ ಮತ್ತು ಅವರ ತಂಡಕ್ಕೆ 5 ಸಾವಿರ ನಗದು ಬಹುಮಾನವನ್ನು ಘೋಷಿಸಿದೆ.

  • ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ.

    ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ ಸಚಿನ್ ಕಡವೆಯನ್ನ ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಣಿಗೆಬೈಲು ಅರಣ್ಯಾಧಿಕಾರಿ ಉಲ್ಲಾಸ್ ಹಾಗೂ ಸಿಬ್ಬಂದಿಗಳು ಕಡವೆಗೆ ಚಿಕಿತ್ಸೆ ನೀಡಿ, ನೀರು ಕುಡಿಸಿ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.

  • 50 ಅಡಿ ಎತ್ತರದ ಬ್ರಿಡ್ಜ್ ಮೇಲೆ 2 ಮೇಕೆಗಳ ಪರದಾಟ – ಹೋಗಿದ್ದು ಹೇಗೆ?

    50 ಅಡಿ ಎತ್ತರದ ಬ್ರಿಡ್ಜ್ ಮೇಲೆ 2 ಮೇಕೆಗಳ ಪರದಾಟ – ಹೋಗಿದ್ದು ಹೇಗೆ?

    ವಾಷಿಂಗ್ಟನ್: ಎರಡು ಮೇಕೆಗಳು 50 ಅಡಿ ಎತ್ತರದ ಸೇತುವೆಯ ಮೇಲೆ ಹೋಗಿ ಸಿಲುಕಿಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ.

    ಮೇಕೆಗಳು ಸೇತುವೆ ಮೇಲೆ ಹೇಗೆ ಹೋಗಿದ್ದು, ಎಂದು ಮಾತ್ರ ಯಾರಿಗೂ ಗೊತ್ತಿಲ್ಲ. ಹತ್ತಿರದ ಫಾರ್ಮ್ ವೊಂದರಿಂದ ತಪ್ಪಿಸಿಕೊಂಡಿದ್ದ ಈ ಮೇಕೆಗಳು, ಮಳೆ ಬರುತ್ತಿದ್ದ ಕಾರಣ ಸೇತುವೆಯ ಕೆಳಗಿನ ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆಯಲು ಸೇತುವೆಯ ಎಂಟು ಇಂಚು ಅಗಲದ ಕಿರಿದಾದ ಜಾಗದಲ್ಲಿ ಹೋಗಿವೆ ಎನ್ನಲಾಗಿದೆ.

    ಈ ಎರಡು ಮೇಕೆಗಳು ಮಹೋನಿಂಗ್ ನದಿಯ ಸೇತುವೆ ಮೇಲೆ ಸಿಲುಕಿಕೊಂಡಿದ್ದು, ಇದನ್ನು ಸ್ಥಳೀಯ ಪೊಲೀಸರು ಗಮನಿಸಿದ್ದಾರೆ. ನಂತರ ಅವರು ಸಾರಿಗೆ ಇಲಾಖೆ ಮತ್ತು ಹೆದ್ದಾರಿ ಟೋಲ್ ಅಧಿಕಾರಿಗಳಿಗೆ ಕರೆ ಮಾಡಿ ಮೇಕೆಗಳ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.

    ಮಾಹಿತಿ ತಿಳಿದ ಸಾರಿಗೆ ಇಲಾಖೆಯ ದೊಡ್ಡ ಕ್ರೇನ್ ಮೂಲಕ ಸ್ಥಳಕ್ಕೆ ಬಂದು ಎರಡೂ ಮೇಕೆಗಳನ್ನ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಅವರು ಮೇಕೆ ರಕ್ಷಣೆ ಮಾಡಿದ ಸಾಹಸದ ಫೋಟೋಗಳನ್ನ ಟೋಲ್ ಪ್ರಾಧಿಕಾರಿಗಳು ಪೆನ್ಸಿಲ್ವೇನಿಯಾ ಟರ್ನ್ ಪೈಕ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಒಂದು ಫೋಟೋದಲ್ಲಿ ಕಿರಿದಾದ ಸೇತುವೆ ಬಳಿ ಎರಡು ಮೇಕೆಗಳು ಸಿಲುಕಿಕೊಂಡಿರುವುದು ಕಾಣಬಹುದಾಗಿದೆ. ಇನ್ನೊಂದರಲ್ಲಿ ಅವುಗಳನ್ನು ರಕ್ಷಿಸಲು ಬಂದ ಕ್ರೇನ್ ಹಾಗೂ ಮೂರನೇ ಫೋಟೋದಲ್ಲಿ ಇಬ್ಬರು ರಕ್ಷಣಾ ಸಿಬ್ಬಂದಿ ಕ್ರೇನ್ ಮೂಲಕ ಮೇಕೆಗಳ ಬಳಿ ಹೋಗಿ ರಕ್ಷಿಸಿರುವುದನ್ನು ಕಾಣಬಹುದಾಗಿದೆ.

    ಫೇಸ್ ಬುಕ್ ನಲ್ಲಿ ಮೇಕೆಗಳ ರಕ್ಷಣೆ ಮಾಡಿದ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ಇವರೆಗೆ ಸುಮಾರು 21 ಸಾವಿರ ಲೈಕ್ಸ್ ಬಂದಿದ್ದು, 56 ಸಾವಿರ ಮಂದಿ ಇದನ್ನು ಶೇರ್ ಮಾಡಿದ್ದಾರೆ.