Tag: protection

  • ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಅಂಗಡಿಯ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಹಾವು ಕಂಡು ಬೆಚ್ಚಿಬಿದ್ದರು!

    ಕಾರವಾರ: ಅಂಗಡಿಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದೊಳಗೆ ಹಾವೊಂದು ಗಂಟೆಗಟ್ಟಲೆ ಅವಿತು ಕುಳಿತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

    ಶಿರಸಿಯ ಸಿ.ಪಿ. ಬಜಾರ್ ರಸ್ತೆಯ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಆಭರಣ ಹಾವು ಅವಿತು ಕುಳಿತ್ತಿತ್ತು. ಇದನ್ನು ನೋಡಿದ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದ ಜನರು ಅದನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾರೊಬ್ಬರ ಹೆದರಿಕೆಗೂ ಬಗ್ಗದ ಹಾವು ಸ್ಕೂಟಿಯೊಳಗೆ ಸೇರಿ ಬೆಚ್ಚಗೆ ಕುಳಿತಿತ್ತು.

    ತಕ್ಷಣವೇ ವ್ಯಕ್ತಿಯೊಬ್ಬರು ಉರಗತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಪ್ರಶಾಂತ್ ಸ್ಥಳಕ್ಕೆ ಆಗಮಿಸಿ, ಆಭರಣ ಹಾವನ್ನು ದ್ವಿಚಕ್ರ ವಾಹನದಿಂದ ಹೊರಗೆ ತೆಗೆದು, ರಕ್ಷಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.

  • ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಮಳೆಯ ನೀರಿನಲ್ಲಿ ಮುಳುಗಿದ 21 ಮಕ್ಕಳಿದ್ದ ಸ್ಕೂಲ್ ಬಸ್

    ಲಕ್ನೋ: ಮಳೆ ನೀರು ತುಂಬಿದ್ದ ರೈಲ್ವೇ ಸೇತುವೆಯ ಕೆಳ ರಸ್ತೆ (ಅಂಡರ್ ಪಾಸ್)ನಲ್ಲಿ ಶಾಲೆಯೊಂದರ ಬಸ್ ಸಿಲುಕಿ, 21 ವಿದ್ಯಾರ್ಥಿಗಳು ಅದೃಷ್ಟವಶಾತ್ ಬದುಕಿಳಿದ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿದೆ.

    ಕಳೆದೆರಡು ದಿನಗಳಿಂದ ಭಾರೀ ಮಳೆಯಿಂದಾಗಿ ಕೇಳ ಸೇತುವೆ ಕೆಸರು ಮಿಶ್ರಿತ ನೀರಿನಿಂದ ತುಂಬಿತ್ತು. ಶುಕ್ರವಾರ ಸಂಜೆ ಮಕ್ಕಳನ್ನು ಮನೆಗೆ ಬಿಡಲು ಶಾಲಾ ಬಸ್ ಹೋಗಿತ್ತು. ಚಾಂದ್‍ಸರ ಸಮೀಪ ಸೇತುವೆಯ ಕೆಳಗೆ ಮಳೆ ನೀರು ತುಂಬಿರುವುದನ್ನು ಅರಿತ ಚಾಲಕ ಬಸ್ಸನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಅಷ್ಟೋತ್ತಿಗಾಗಲೇ ಸೈಲೆನ್ಸರ್ ಮತ್ತು ಎಂಜಿನ್‍ಗೆ ನೀರು ನುಗ್ಗಿತ್ತು.

    ನೀರಿನ ಮಟ್ಟ ಹೆಚ್ಚಾಗುತ್ತಿದಂತೆ ಬಸ್ಸಿನಲ್ಲಿದ್ದ ಮಕ್ಕಳು ಅಳಲು ಪ್ರಾರಂಭಿಸಿದರು. ತಕ್ಷಣವೇ ಜಾಗೃತರಾದ ಚಾಲಕ ಮತ್ತು ನಿರ್ವಾಹಕ ಮಕ್ಕಳನ್ನು ವಾಹನದಿಂದ ಹೊರಗಡೆ ತರಲು ಯತ್ನಿಸಿದರು. ಕೇವಲ ಇಬ್ಬರಿಂದ 21 ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವುದು ಕಷ್ಟವಾಗಿತ್ತು.

    ಮಕ್ಕಳು ಅಳುತ್ತಿರುವ ಹಾಗೂ ಚೀರುತ್ತಿರುವುದನ್ನು ಕೇಳಿದ ಚಾಂದ್‍ಸರ ಗ್ರಾಮಸ್ಥರು ಸ್ಥಳಕ್ಕೆ ಬಂದು, ವಾಹನ ಮುಳುಗುತ್ತಿರುವುದನ್ನು ನೋಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಜೊತೆ ಸೇರಿ ಬಸ್ ಕಿಟಕಿ, ಗಾಜು ಒಡೆದು ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊನೆಗೆ ಬಸ್ ಸಂಪೂರ್ಣವಾಗಿ ಮುಳುಗಲು ಆರಂಭಿಸಿತ್ತು. ಆದರೆ ಬಸ್ಸಿನಲ್ಲಿ ಇನ್ನೂ ಒಂದು ಮಗು ಇದ್ದಿದ್ದನ್ನು ಅರಿತ ವ್ಯಕ್ತಿಯೊಬ್ಬರು ಧೈರ್ಯದಿಂದ ನೀರಿನಲ್ಲಿ ನುಗ್ಗಿ, ಕಿಟಕಿಯ ಮೂಲಕ ಮಗುವನ್ನು ಹೊರತರುವ ಮೂಲಕ ಎಲ್ಲ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

  • ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಬೆಂಗ್ಳೂರು ಯುವಕ

    ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಬೆಂಗ್ಳೂರು ಯುವಕ

    ಕಾರವಾರ: ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದ ವೇಳೆ ಸಮುದ್ರಕ್ಕಿಳಿದಿದ್ದ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಕಿರಣಕುಮಾರ್(18) ನೀರಿನಲ್ಲಿ ಕೊಚ್ಚಿ ಹೋದ ಯುವಕ. ಮತ್ತೊಬ್ಬ ಕಾರ್ತಿಕ್ ಮುನಿರಾಜು (20) ಯುವಕನನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕದ ಚಂದ್ರಶೇಖರ, ಸುರೇಶ, ಗೌರಮ್ಮ, ಚೈತ್ರಾ, ಗೌರಮ್ಮ, ಸಂದೇಶ್ ಮತ್ತು ಶ್ರೀನಿವಾಸ್ ಸೇರಿ ಒಟ್ಟು 9 ಜನ ಕುಟುಂಬ ಸದಸ್ಯರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು.

    ಇವರಲ್ಲಿ ನಾಲ್ವರು ಸಮುದ್ರಕ್ಕೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣ ಸಮುದ್ರಕ್ಕೆ ಇಳಿದು ಓರ್ವನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಯುವಕನಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

    ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=RX9Cyag8y7g

  • ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ನಾಲ್ಕು ಜನ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದರು. ಈ ವೇಳೆ ಸ್ಥಳೀಯ ಮೀನುಗಾರರು ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

    ಭಟ್ಕಳದ ಬೆಳ್ನಿ ಗ್ರಾಮದ ತಿಮ್ಮಪ್ಪ ಮೊಗೇರ್, ರಾಮಚಂದ್ರ ಖಾರ್ವಿ, ಗಣಪತಿ ಖಾರ್ವಿ ಮತ್ತು ಶ್ರೀನಿವಾಸ್ ಖಾರ್ವಿ ಅವರನ್ನು ರಕ್ಷಣೆ ಮಾಡಲಾಗಿದೆ. ನಾಲ್ವರನ್ನು ಭಟ್ಕಳದ ಮುಂಡಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಈ ನಾಲ್ವರು ಅರಬ್ಬಿ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪ್ರಾಣಾಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

    ಈ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ಬೆಂಗಳೂರು: ಬಿಸಿಲಿನ ಬೇಗೆಗೆ ನೀರಿಲ್ಲದೆ ಬಾಯಾರಿಕೆಯಿಂದ ದಣಿದಿದ್ದ ನಾಗರಹಾವಿಗೆ ನೀರುಣಿಸಿರುವ ಅಪರೂಪದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಹಾರೋಕ್ಯಾತನಹಳ್ಳಿ ಬಳಿ ನಡೆದಿದೆ.

    ವಿಪರೀತ ಬಿಸಿಲಿನಿಂದಾಗಿ ದಣಿದು ಮಲಗಿದ್ದಲ್ಲೇ ಮಲಗಿದ್ದ ನಾಗರಹಾವಿಗೆ ಎಷ್ಟೇ ಶಬ್ಧ ಮಾಡಿದರೂ ಹಾಗೆಯೇ ಮಲಗಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಬಳಿಕ ಉರಗ ರಕ್ಷಕ ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಲೋಕೇಶ್ ಸ್ಥಳಕ್ಕೆ ಆಗಮಿಸಿ ಬಾಟಲ್ ಮೂಲಕ ನಾಗರಹಾವಿಗೆ ನೀರನ್ನು ಕುಡಿಸಿದ್ದಾರೆ. ಬಳಿಕ ಚೇತರಿಸಿಕೊಂಡ ನಾಗಪ್ಪ ಅತ್ತಿಂದಿತ್ತ ಓಡಾಡಿದ್ದಾನೆ. ಕೂಡಲೇ ಉರಗ ರಕ್ಷಕ ಲೋಕೇಶ್ ನಾಗರಹಾವನ್ನ ಹಿಡಿದು, ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ಕಂಡ ಜನತೆ ಮೂಕವಿಸ್ಮಿತರಾದರು.

  • ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಬೆಂಗಳೂರು: ನಗರದ ಮತ್ತಿಕೆರೆಯಲ್ಲಿ ಅಪರೂಪದ ಬಿಳಿ ನಾಗರಹಾವಿನ ಮರಿ ಪತ್ತೆಯಾಗಿದೆ. ಬೆಂಗಳೂರಿನ ಮಟ್ಟಿಗೆ ಇದು ಮೊದಲ ಬಿಳಿ ನಾಗರ ಅಂತ ಹೇಳಲಾಗುತ್ತಿದೆ.

    ಹಾವು ಮತ್ತಿಕೆರೆ ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ಕಾಣಿಸಿಕೊಂಡಿತ್ತು. ಸಂಪೂರ್ಣ ದೇಹ ಬೆಳ್ಳಗಿರುವ ನಾಗರ ಹಾವಿನ ಕಣ್ಣು ಕೆಂಪಾಗಿದೆ. ಹಿಂದೆ ಪಿಂಕ್ ಕಲರ್ ನ ನಾಗರ ನಾಮ ಕಾಣಿಸುತ್ತದೆ. ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕ ರಾಜೇಶ್ ಈ ಬಿಳಿ ನಾಗರಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆ ಮಾಡಿದ ಬಳಿಕ ಹಾವಿನ ಮರಿಯನ್ನ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಬೆಂಗಳೂರಲ್ಲಿ ಇಂತಹ ಅಪರೂಪದ ಹಾವು ಪತ್ತೆಯಾಗುತ್ತಿದೆ ಅಂದರೆ ನಮ್ಮ ಪರಿಸರ ಇಂತಹ ಜೀವಿಗಳಿಗೆ ಅನುಕೂಲಕರವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಪರಿಸರ ಉಳಿದರೆ ಇಂತಹ ಇನ್ನಷ್ಟು ಅದ್ಭುತಗಳನ್ನ ನಾವು ನೋಡಬಹುದು ಅನ್ನೋದು ರಾಜೇಶ್ ಅವರ ಅಭಿಪ್ರಾಯವಾಗಿದೆ.

  • ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ರೈತನಿಂದ 20 ಅಡಿ ಆಳಕ್ಕೆ ಬಿದ್ದ ನವಿಲು ರಕ್ಷಣೆ!

    ಬೀದರ್: 20 ಅಡಿ ಆಳದ ತೆರೆದ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲನ್ನು ಬೀದರ್ ತಾಲೂಕಿನ ಚಿಟ್ಟಾವಾಡಿಯ ರೈತರೊಬ್ಬರು ರಕ್ಷಣೆ ಮಾಡಿ ಮಾನವೀಯತೆ ತೋರಿಸಿದ್ದಾರೆ.

    ನವಿಲು ಕಣ್ಣು ಕಾಣದೆ ತೆರೆದ ಬಾವಿಗೆ ಬಿದ್ದಿದೆ. ಆಹಾರವಿಲ್ಲದೆ ಇಂದು ಮುಂಜಾನೆಯಿಂದ ಬಾವಿಯಲ್ಲಿ ಒದ್ದಾಡುತ್ತಿತ್ತು. ಬಾವಿಗೆ ಬಿದ್ದಿದ್ದ ರಾಷ್ಟ್ರ ಪಕ್ಷಿಯನ್ನು ರೈತ ಮಹಮ್ಮದ್ ಜಾಫರ್ ನೋಡಿದ್ದಾರೆ.

    ನಂತರ ಸ್ಥಳಿಯರಿಗೆ ಕರೆ ಮಾಡಿ, ಹಗ್ಗದ ಸಹಾಯದಿಂದ ಬಾವಿಯ ಕೆಳಗೆ ಇಳಿದಿದ್ದಾರೆ. ಬಳಿಕ ಬಾವಿಯಲ್ಲಿದ್ದ ನವಿಲನ್ನು ಹಗ್ಗದ ಸಹಾಯದಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮೇಲೆ ಎತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ನವಿಲನ್ನು ರಕ್ಷಣೆ ಮಾಡಿ ರೈತ ಜಾಫರ್ ಪಶು ಇಲಾಖೆಯ ಅಧಿಕಾರಿಗಳ ಬಳಿಗೆ ತಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನ ರಕ್ಷಿಸಿದ ಕುರಿಗಾಹಿಗಳು: ವಿಡಿಯೋ ವೈರಲ್

    ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನ ರಕ್ಷಿಸಿದ ಕುರಿಗಾಹಿಗಳು: ವಿಡಿಯೋ ವೈರಲ್

    ಕೊಪ್ಪಳ: ಕೆರೆಗೆ ಬೀಳುತ್ತಿದ್ದ ಕುರಿಮರಿಗಳನ್ನು ರಕ್ಷಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಪ್ಪಳ ತಾಲೂಕು ಅಳವಂಡಿ ಗ್ರಾಮದ ಹೊರ ವಲಯದಲ್ಲಿರುವ ಕರೆಯಲ್ಲಿ ಘಟನೆ ನಡೆದಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಯುವಕ ಸೇರಿ ಕೆರೆಗೆ ಬೀಳುತ್ತಿದ್ದ ಎರಡು ಕುರಿ ಮರಿಗಳನ್ನು ರಕ್ಷಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ:
    ಕೆರೆಯ ದಂಡೆಯಿಂದ ಮೇಲೆ ಬರಲು ಸಾಧ್ಯವಾದೆ ಎರಡು ಕುರಿಮರಿಗಳು ಕಷ್ಟಪಡುತ್ತಿದ್ದವು. ಕುರಿಗಾಹಿ ಮಹಿಳೆಯೊಬ್ಬರು ಕುರಿ ಮರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಸಾಧ್ಯವಾಗದಿದ್ದಾಗ ಯುವಕನೊಬ್ಬನನ್ನು ಕರೆಯುತ್ತಾರೆ. ಯುವಕನಿಂದಲೂ ಮರಿಗಳನ್ನು ರಕ್ಷಿಸಲು ಆಗದಿದ್ದಾಗ ಇಬ್ಬರು ಮಹಿಳೆಯರ ಜೊತೆಗೆ ಬಲೆ ಹಿಡಿದುಕೊಂಡು ಬಂದು, ಕುರಿ ಮರಿಗಳಿಗೆ ಬಲೆ ಹಾಕಿ ಮೇಲೆತ್ತಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=rOeujtnzlkU

  • ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ತಿರುವಂತನಪುರಂ: ರಸ್ತೆ ಅಪಘಾತದಲ್ಲಿ ದಾದಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಐದು ಮಕ್ಕಳ ಜೀವವನ್ನು ಉಳಿಸಿ ಬಳಿಕ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಮರಡು ಬಳಿಯ ಕಟ್ಟಿತ್ತರದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಲತಾ ಉಣ್ಣಿ, ಐದು ಮಕ್ಕಳ ಪ್ರಾಣ ಉಳಿಸಿ ಮೃತಪಟ್ಟ ದಾದಿ. ಸೋಮವಾರ ಸ್ಕೂಲ್ ವ್ಯಾನ್ `ಕಿಡ್ಜ್ ವರ್ಲ್ಡ್’ ಶಾಲೆಯಿಂದ ಎಂಟು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟಿತ್ತು.

    ಸುಮಾರು 3.45 ರ ವೇಳೆಗೆ ಕಟ್ಟಿತ್ತರ ರಸ್ತೆಯಲ್ಲಿ ವ್ಯಾನಿನ ಹಿಂಬದಿ ಚಕ್ರವು ಕೆಸರಿನಲ್ಲಿ ಸಿಲುಕಿದೆ. ನಂತರ ನಿಧಾನವಾಗಿ ಚಾಲಕ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯಾನ್ ಕೊಳದಲ್ಲಿ ಬಿದ್ದಿದೆ. ಪರಿಣಾಮ ಎಲ್ಲಾ ಮಕ್ಕಳು ನೀರಿನಲ್ಲಿ ಮುಳುಗಿದ್ದರು. ಲತಾ ಉಣ್ಣಿ ಅವರು ಕಿಟಿಕಿಯಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ನಾನು ಸಾಯುವ ಮುನ್ನ ಮಕ್ಕಳನ್ನು ಉಳಿಸೋಣ ಎಂದು ನಿರ್ಧಾರ ಮಾಡಿದ್ದು, ಅವರು ಒಬ್ಬರಂತೆ ಐದು ಮಕ್ಕಳನ್ನು ಕಿಟಿಕಿಯಿಂದ ಹೊರಗೆ ತಳ್ಳಿ ಅವರ ಜೀವವನ್ನು ಕಾಪಾಡಿದ್ದಾರೆ.

    ಅಲ್ಲೇ ಇದ್ದ ಸ್ಥಳೀಯರು ಗಮನಿಸಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಆ ಮಕ್ಕಳನ್ನು ಕಾಪಾಡಿದ್ದಾರೆ. ಈ ವೇಳೆ ಅವರು ಕಿಟಕಿಯಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಎಲ್ಲಾ ದೃಶ್ಯಗಳು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಪಘಾತದಲ್ಲಿ ಗಾಯಗೊಂಡಿದ್ದ ವಾಹನ ಚಾಲಕ ಅನಲ್ಕುಮಾರ್ ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ರಕ್ಷಿಸಿದ ಐದು ಮಕ್ಕಳು ಸುರಕ್ಷಿತರಾಗಿದ್ದು, ಅವರ ಪೋಷಕರು ಬಂದು ಕರೆದುಕೊಂಡು ಹೋಗುವವರೆಗೂ ಸಮೀಪದ ಒಂದು ಮನೆಯಲ್ಲಿ ಮಕ್ಕಳನ್ನು ಇರಿಸಲಾಗಿತ್ತು. ಆದರೆ ಈ ಘಟನೆಯಿಂದ 4 ವರ್ಷದ ವಿದ್ಯಾ ಲಕ್ಷ್ಮೀ ಮತ್ತು ಆದಿತ್ಯ ಎಸ್. ನಾಯರ್ ಸೇರಿದಂತೆ ಲತಾ ಉಣ್ಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಲತಾ ಉಣ್ಣಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದು, ಅವರ ಪತಿ ಕೆಎಲ್ ಅವರು ದೈನಂದಿನ ವೇತನ ಕಾರ್ಮಿಕರಾಗಿದ್ದಾರೆ. ಇವರು ಐದು ವರ್ಷಗಳಿಂದ `ಕಿಡ್ಜ್ ವರ್ಲ್ಡ್’ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

  • ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ಜೈಪುರ: ಭಾರತದ ಹಲವು ರಾಜ್ಯಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು, ರಾಜಸ್ಥಾನದ ಹಲವು ಗ್ರಾಮಗಳಲ್ಲಿ ಸಂಗ್ರಹಿಸಿರುವ ನೀರಿನ ದರೋಡೆ ತಪ್ಪಿಸಲು ಅಲ್ಲಿನ ಗ್ರಾಮಸ್ಥರು ಡ್ರಮ್ ಗಳಿಗೆ ಬೀಗ ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

    ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ದಾಟಿದ್ದು, ನೀರಿನ ಕೊರತೆ ಅಧಿಕವಾಗಿದೆ. ಈ ವೇಳೆ ತಮ್ಮ ಮನೆ ಅಂಗಳದಲ್ಲಿ ಸಂಗ್ರಹಿಸಿರುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಿದ್ದು, ಅದಕ್ಕಾಗಿ ಹಲವು ಗ್ರಾಮಗಳಲ್ಲಿ ಡ್ರಮ್ ಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಾಣಸಿಗುತ್ತದೆ.

    ಸ್ಥಳೀಯ ಪರಸರಾಂಪುರ ಗ್ರಾಮಕ್ಕೆ ವಾರಕ್ಕೆ ಒಮ್ಮೆ ಮಾತ್ರ ನೀರನ್ನು ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆ ಪೂರೈಸುತ್ತಿದ್ದು, ಈ ನೀರನ್ನು ಸಹ ದರೋಡೆಕೋರರು ಲೂಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಿದೆ. ಅದ್ದರಿಂದ ಮನೆ ಹೊರಾಂಗಣದಲ್ಲಿರುವ ಡ್ರಮ್ ಗಳಿಗೆ ಬೀಗ ಹಾಕಿ ನೀರನ್ನು ರಕ್ಷಣೆ ಮಾಡುತ್ತಿರುವುದಾಗಿ ಸ್ಥಳೀಯ ಮಾಧ್ಯಮವೊಂದಕ್ಕೆ ಗ್ರಾಮಸ್ಥರು ತಿಳಿಸಿದ್ದಾರೆ.

    ಯಾವ ಸಮಯದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಲವು ವೇಳೆ ರಾತ್ರಿ ಸಮಯದಲ್ಲಿ ದರೋಡೆಕೋರರು ಬಂದು ನೀರನ್ನು ಲೂಟಿ ಮಾಡಿದ್ದಾರೆ. ಇದರಿಂದ ಕುಡಿಯಲು ನೀರಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕಳ್ಳತನವಾಗದೇ ಇರಲು ಈ ಮಾರ್ಗ ಕಂಡುಕೊಂಡಿರುವುದಾಗಿ ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ.

    ಸ್ಥಳೀಯ ಪಂಚಾಯಿತಿ ನೀರಿನ ಮಿತ ಬಳಕೆಗೆ ಸಲಹೆ ನೀಡಿದೆ. ಹಲವರು ನೀರಿಗಾಗಿ ಹೋರಾಟ ಮಾಡುತ್ತಾರೆ. ಮೂರು ದಿನಕ್ಕೆ ಒಮ್ಮೆಯಾದರೂ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮದ ಮಹಿಳೆ ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಮಧ್ಯಪ್ರದೇಶ, ಉತ್ತರಾಖಂಡ, ಛತ್ತೀಸ್‍ಗಢ ರಾಜ್ಯಗಳ ಹಲವು ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇರುವುದಾಗಿ ವರದಿಯಾಗಿದೆ.