Tag: protection

  • ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್‍ನಲ್ಲಿ ನಡೆದಿದೆ.

    ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ ಪತ್ನಿ ತಮ್ಮ ಸ್ಕೂಟಿ ಮನೆ ಮುಂದೆ ನಿಲ್ಲಿಸಿದ್ದರು. ಸ್ಕೂಟಿ ನಿಲ್ಲಿಸಿದ ಪಕ್ಕದಲ್ಲಿದ್ದ ಮೂರು ಕಪ್ಪೆಗಳಲ್ಲಿ ಒಂದನ್ನ ಹಾವು ನುಂಗಿದೆ. ಹಾವು ಕಪ್ಪೆಯನ್ನ ನುಂಗುವುದನ್ನು ಮನೆಯವರು ನೋಡಿ ಕೂಗಿಕೊಂಡು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಹಾವು ಸ್ಕೂಟಿಯ ಹೆಡ್‍ಲೈಟ್ ಸೇರಿದೆ.

    ತಕ್ಷಣ ಮನೆಯವರು ಉರಗ ತಜ್ಞ ನರೇಶ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹರಸಾಹಸ ಪಟ್ಟರು  ಹಾವನ್ನ ತೆಗೆಯಲು ಸಾಧ್ಯವಾಗಲಿಲ್ಲ. ಸ್ಕೂಟಿಯ ಡೂಮ್ ಬಿಚ್ಚಲು ಮೆಕಾನಿಕ್‍ಗೆ ಕಾಲ್ ಮಾಡಿದ್ರೆ, ಆತ ಭಯ ಆಗುತ್ತೆ ಬಿಚ್ಚಲ್ಲ ಎಂದು ಬರಲಿಲ್ಲ.

    ಕೊನೆಗೆ ಸ್ನೇಕ್ ನರೇಶ್ ಸ್ಕೂಟಿಯನ್ನ ನಿರ್ಜನ ಪ್ರದೇಶಕ್ಕೆ ತಂದು ಮೋಟರ್ ಆನ್ ಮಾಡಿಕೊಂಡು ವೇಗವಾಗಿ ನೀರನ್ನ ಬಿಟ್ಟಿದ್ದಾರೆ. ಆಗ ಒಳಗಿದ್ದ ನಾಗರಹಾವು ಹೊರ ಬಂದಿದೆ. ತದನಂತರ ಹಾವನ್ನ ಸೆರೆ ಹಿಡಿದ ನರೇಶ್ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

    ಅರ್ಧ ಗಂಟೆಯಲ್ಲಿ ಬೆಂಕಿಯಿಂದ 14 ಜನರ ಪ್ರಾಣ ಉಳಿಸಿದ ಯುವಕ – ವಿಡಿಯೋ ವೈರಲ್

    ಬೀಜಿಂಗ್: 19 ವರ್ಷದ ಯುವಕನೊಬ್ಬ ಕ್ರೇನ್ ಸಹಾಯದಿಂದ ಅರ್ಧ ಗಂಟೆಯಲ್ಲಿ 14 ಮಂದಿ ಜನರ ಪ್ರಾಣವನ್ನು ಕಾಪಾಡಿರುವ ಘಟನೆ ಚೀನಾದ ಫೂಶುನ್ ನಗರದಲ್ಲಿ ನಡೆದಿದೆ.

    ಯುವಕ ಲ್ಯಾನ್ ಜುನ್ಸ್ ಜನರನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಚೀನಾದ ಲಿಯಾನಿಂಗ್ ಪ್ರದೇಶದ ಫುಶನ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

    ಲ್ಯಾನ್ ಲಿಯಾನಿಂಗ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಸಮೀಪದ ಪ್ರದೇಶದಲ್ಲಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಲ್ಯಾನ್ ತಕ್ಷಣವೇ ಕ್ರೇನ್ ಅನ್ನು ಕಟ್ಟಡದ ಬಳಿ ತೆಗೆದುಕೊಂಡು ಹೋಗಿದ್ದಾನೆ. ನಂತರ ಕ್ರೇನ್‍ನ ಬಾಸ್ಕೆಟ್‍ನಲ್ಲಿ ಜನರನ್ನು ಕೂರಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾನೆ.

    ಲ್ಯಾನ್ ಸುಮಾರು ಅರ್ಧ ಗಂಟೆಯಲ್ಲಿ 14 ಜನರ ಪ್ರಾಣವನ್ನು ಉಳಿಸಿದ್ದಾನೆ. ಇತ್ತ ಲ್ಯಾನ್ ಸಹಾಯ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    ಅಷ್ಟೇ ಅಲ್ಲದೇ ಜನರು ಯುವಕನ ಧೈರ್ಯವನ್ನು ಮೆಚ್ಚಿ ಭೇಷ್ ಎನ್ನತ್ತಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಲ್ಯಾನ್ “ಬೆಂಕಿ ಕಾಣಿಸಿಕೊಂಡ ತಕ್ಷಣ ನಾನು ಕಟ್ಟಡದ ಬಳಿ ಹೋದೆ. ಆ ಸಂದರ್ಭದಲ್ಲಿ ಕಟ್ಟಡದ ಒಳಗೆ ಸಿಲುಕಿಕೊಂಡವರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಮಾತ್ರ ಯೋಚಿಸುತ್ತಿದ್ದೆ. ತಕ್ಷಣ ಈ ಐಡಿಯಾ ಬಂದಿತ್ತು. ಹೀಗಾಗಿ ಕ್ರೇನ್ ಮೂಲಕ ಅವರನ್ನು ಬಚಾವ್ ಮಾಡಿದೆ” ಎಂದು ಹೇಳಿದ್ದಾನೆ.

  • ರಾತ್ರಿ ರೋಮಿಯೋಗಳಿಗೆ ಪೊಲೀಸರಿಂದ ಶಾಕ್

    ರಾತ್ರಿ ರೋಮಿಯೋಗಳಿಗೆ ಪೊಲೀಸರಿಂದ ಶಾಕ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ರೋಮಿಯೋಗಳಿಗೆ ಬೆಂಗಳೂರಿನ ಪೊಲೀಸರು ಶಾಕ್ ನೀಡಿದ್ದಾರೆ.

    ದಾರಿಯಲ್ಲಿ ನಿಂತು ಹುಡುಗಿಯರನ್ನ ಚುಡಾಯಿಸೋರ ಮೇಲೆ ಮತ್ತು ಅಕ್ಕ ಪಕ್ಕದವರಿಗೆ ತೊಂದರೆ ಕೊಡುವವರ ಮೇಲೆ ಖಾಕಿ ಕಣ್ಣು ಹಾಕಿದೆ. ಬೆಂಗಳೂರಿಗರ ರಕ್ಷಣೆಗೆ ಪೊಲೀಸರು ಹೊಸ ಕಾರ್ಯಾಚರಣೆಯನ್ನು ಶುರು ಮಾಡಿದ್ದು, ಡಿಸಿಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಈ ಸ್ಪೆಷಲ್ ಕಾರ್ಯಾಚರಣೆ ಮಾಡಲಾಗಿದೆ.

    ಹೆಬ್ಬಾಳ ಠಾಣಾ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ರಾತ್ರಿ ಹೊತ್ತು ಆಟೋ ಸ್ಟ್ಯಾಂಡ್, ಬಸ್‍ಸ್ಟ್ಯಾಂಡ್ ಮತ್ತು ರೈಲ್ವೆ ಸ್ಟೇಷನ್ ಬಳಿ ಯುವತಿ ಮತ್ತು ಮಹಿಳೆಯರನ್ನು ಚುಡಾಯಿಸುತ್ತಿದ್ದ 210 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆದವರಲ್ಲಿ ಹಲವರು ರೌಡಿಶೀಟರ್ ಗಳೂ ಇದ್ದಾರೆ. ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಹೆತ್ತವರನ್ನ ಕರೆಸಿ ಅವರ ಎದುರಲ್ಲೇ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ. ಡಿಸಿಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    – 15 ಜಿಲ್ಲೆಗಳ 12 ಲಕ್ಷ ಮಂದಿ ಸ್ಥಳಾಂತರ
    – 10 ಸಾವಿರ ಗ್ರಾಮದ ಮೇಲೆ ಪರಿಣಾಮ

    ಭುವನೇಶ್ವರ: ನಿರೀಕ್ಷೆಯಂತೆ ಫೋನಿ ಚಂಡ ಮಾರುತ ಇಂದು ಬೆಳಗ್ಗೆ 9 ಗಂಟೆಯ ವೇಳೆ ಪುರಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್, ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಣೆಯಾಗಿದ್ದು, 5 ಮಂದಿ ಮೊದಲ ದಿನವೇ ಬಲಿಯಾಗಿದ್ದಾರೆ.

    ಪ್ರಚಂಡ ಬಿರುಗಾಳಿಗೆ ತರಗೆಲೆಯಂತಾದ ಮರಗಳು, ಕರೆಂಟ್ ಕಂಬಗಳು ಪುರಿ ರಸ್ತೆಗೆ ಉರುಳಿ ಬಿದ್ದಿವೆ. ಇನ್ನೂ ಸಣ್ಣ ಪುಟ್ಟ ವಸ್ತುಗಳೆಲ್ಲಾ ಆಗಸದಲ್ಲಿ ಹಾರುತ್ತಿವೆ. ಸುಮಾರು 10 ಸಾವಿರ ಗ್ರಾಮಗಳಲ್ಲಿ ಫೋನಿ ಎಫೆಕ್ಟ್ ಆಗುತ್ತಿದೆ. ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರ ತೀರದಲ್ಲಿರುವ 15 ಜಿಲ್ಲೆಗಳ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೇ ಒಬ್ಬೊಬ್ಬರ ಕೈಯನ್ನು ಹಿಡಿದುಕೊಂಡು ತಮ್ಮ ಮನೆಗೆ ಸೇರಿಕೊಳ್ಳುತ್ತಿದ್ದಾರೆ.

    ರಣಭೀಕರ ಬಿರುಗಾಳಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕಬ್ಬಿಣದ ವಸ್ತುಗಳು, ಮರಗಳು ಸುಲಭವಾಗಿ ತೇಲಿಕೊಂಡು ಹೋಗುತ್ತಿದೆ. 1999ರ ನಂತರ ಒಡಿಶಾದಲ್ಲಿ ಇಷ್ಟೊಂದು ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುತ್ತಿದೆ ಎಂದು ಅಲ್ಲಿನ ಜನತೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಡಿಶಾ-ಆಂಧ್ರ ಕರಾವಳಿ ತೀರದಲ್ಲಿ ಸಂಚರಿಸುವ 103 ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಜನರ ರಕ್ಷಣಾ ಕಾರ್ಯ ನಡೆಸುತ್ತಿದೆ.

  • ಬೆಂಕಿ ಹೊತ್ತಿಕೊಂಡ ಬೈಕ್ – 4 ಕಿ.ಮೀ ಚೇಸ್ ಮಾಡಿ ಪೊಲೀಸರಿಂದ ರಕ್ಷಣೆ

    ಬೆಂಕಿ ಹೊತ್ತಿಕೊಂಡ ಬೈಕ್ – 4 ಕಿ.ಮೀ ಚೇಸ್ ಮಾಡಿ ಪೊಲೀಸರಿಂದ ರಕ್ಷಣೆ

    ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಬೆಂಕಿ ಹೊತ್ತಿಕೊಂಡಿದ್ದ ಬೈಕನ್ನು ಹಿಂಬಾಲಿಸಿಕೊಂಡು ಹೋಗಿ ಒಂದು ದೊಡ್ಡ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಇಟವಾದಲ್ಲಿ ಸೋಮವಾರ ನಡೆದಿದೆ. ಹೆದ್ದಾರಿಯಲ್ಲಿ ಬೈಕಿನಲ್ಲಿ ಓರ್ವ ಮಹಿಳೆ ಹಾಗೂ ಪುರುಷ ಹೊಗುತ್ತಿದ್ದರು. ಜೊತೆ ಒಂದು ಮಗು ಕೂಡ ಇತ್ತು. ವ್ಯಕ್ತಿ ಬೈಕನ್ನು ವೇಗವಾಗಿ ಓಡಿಸುತ್ತಿದ್ದನು.

    ಬೈಕಿನ ಸೈಡಿನಲ್ಲಿ ಹಾಕಿದ್ದ ಬ್ಯಾಗಿಗೆ ಬೆಂಕಿ ಹೊತ್ತಿಕೊಂಡಿದೆ. ಅದನ್ನು ಗಮನಿಸದೇ ಹೋಗುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಪೊಲೀಸ್ ವ್ಯಾನನ್ನು ದಾಟಿ ಮುಂದೆ ಹೋಗಿದೆ. ವ್ಯಾನಿನಲ್ಲಿದ್ದ ಪೊಲೀಸರು ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ್ದಾರೆ. ತಕ್ಷಣ ಆ ಬೈಕನ್ನು ಹಿಂಬಾಲಿಸಿದ್ದಾರೆ.

    ಬೈಕ್ ವೇಗವಾಗಿ ಹೋಗುತ್ತಿದ್ದರಿಂದ ಪೊಲೀಸರು ಸುಮಾರು 4 ಕಿ.ಮೀ ವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕೊನೆಗೂ ಪೊಲೀಸ್ ವ್ಯಾನ್ ಬೈಕ್ ಮುಂದೆ ಹೋಗಿ ಅಡ್ಡ ನಿಲ್ಲುವ ಮೂಲಕ ಅವರನ್ನು ತಡೆದಿದ್ದಾರೆ. ತಕ್ಷಣ ಬೈಕಿನಿಂದ ಎಲ್ಲರನ್ನು ಇಳಿಸಿ ಪೊಲೀಸರು ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ಪೊಲೀಸರು ಒಂದು ದೊಡ್ಡ ಅನಾಹುತ ತಪ್ಪಿಸಿದ್ದು, ಮೂವರ ಪ್ರಾಣವನ್ನು ಉಳಿಸಿದ್ದಾರೆ.

    ಸದ್ಯ ಈ ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ. ಪೊಲೀಸರು ಬೈಕ್ ಹಿಂಬಾಲಿಸಿರುವ ವಿಡಿಯೋವನ್ನು ಟ್ವೀಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೂವರೆಗೂ 14 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 18 ಸಾವಿರಕ್ಕೂ ಹೆಚ್ಚಿನ ಜನರು ಲೈಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ಕಾರ್ಯವನ್ನು ಮೆಚ್ಚಿ ಸಾವಿರಾರು ಮಂದಿ ಕಮೆಂಟ್ ಮಾಡುವ ಮೂಲಕ ಅಭಿನಂದಿಸುತ್ತಿದ್ದಾರೆ.

  • ಧಾರವಾಡದಲ್ಲಿ ಕಟ್ಟಡ ಕುಸಿತ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

    ಧಾರವಾಡದಲ್ಲಿ ಕಟ್ಟಡ ಕುಸಿತ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

    ಧಾರವಾಡ: ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಕಳೆದ ದಿನ ಇಬ್ಬರು ಮೃತಪಟ್ಟಿದ್ದರು. ಆದರೆ ಈಗ ಈ ದುರಂತದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

    ಸಲಿಮ್ ಮಕಾಂದರ್ ಮೃತ ದುರ್ದೈವಿ. ಇನ್ನು ಉಳಿದ ಮೂವರ ಗುರುತು ಪತ್ತೆಯಾಗಿಲ್ಲ. ಮಂಗಳವಾರ ರಾತ್ರಿ ಸುಮಾರು 1.30ಕ್ಕೆ ಎನ್‍ಡಿಆರ್‍ಎಫ್(National Disaster Response Force) ತಂಡ ಸ್ಥಳಕ್ಕೆ ಆಗಮಿಸಿದ್ದು, ಸುಮಾರು 30 ಜನರ ತಂಡದಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಎನ್‍ಡಿಆರ್‍ಎಫ್‍ಗೆ ಶ್ವಾನದಳ ಸಾಥ್ ನೀಡಿದೆ.

    ಕುಸಿದ ಕಟ್ಟಡದಲ್ಲಿ ಒಂದು ಕಂಪ್ಯೂಟರ್ ಸೆಂಟರ್ ಇರುವ ಸಾಧ್ಯತೆ ಇದ್ದು, ಕಂಪ್ಯೂಟರ್ ಸೆಂಟರ್‍ನಲ್ಲಿ ಸುಮಾರು 15 ವಿದ್ಯಾರ್ಥಿಗಳು ಇರುಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ 30 ದಾಟುವ ಸಾಧ್ಯತೆ ಇದೆ. ಇನ್ನೂ ಕಟ್ಟಡದ ಅವಶೇಷಗಳ ಅಡಿ 30ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದು, ಅವಷೇಶದಡಿ ಸಿಲುಕಿದವರಿಗೆ ನಿರಂತರವಾಗಿ ಪೈಪ್ ಮುಖಾಂತರ ನೀರು ಮತ್ತು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.

    ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಈವರೆಗೂ ರಕ್ಷಣಾ ಕಾರ್ಯದಲ್ಲಿ 54 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ಕಾರ್ಯಾಚರಣೆ ನೆಡೆಯುವ ಸಾದ್ಯತೆ ಇದೆ. ಈ ಹಿನ್ನೆಲೆಯಲ್ಲಿ ಘಾಜಿಯಾಬಾದ್ NDRFನ ಮತ್ತೊಂದು ತಂಡದ 78 ಸಿಬ್ಬಂದಿ ಧಾರವಾಡಕ್ಕೆ ಆಗಮಿಸಿದ್ದಾರೆ. ಘಟನಾ ಸ್ಥಳದಲ್ಲಿ ಅವರಿಂದಲೂ ಕಾರ್ಯಾಚರಣೆ ಮುಂದುವರಿಯಲಿದ್ದು, ಅವಶೇಷಗಳ ಅಡಿಯಲ್ಲಿ ನಾಲ್ಕು ಮೃತ ದೇಹ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಇತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಸಹ ರಾತ್ರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

    ಪ್ರಕರಣ ದಾಖಲು:
    ಧಾರವಾಡ ಬಹುಮಹಡಿ ಕಟ್ಟಡ ಕುಸಿತ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರು ಹಾಗೂ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಪೊಲೀಸರಿಗೆ ದೂರ ಸಲ್ಲಿಸಿದ್ದು, ರೇಣುಕಾ ಕನ್ಸ್ ಟ್ರಕ್ಷನ್ ಮಾಲೀಕ ವಿವೇಕ ಪವಾರ್, ಕಟ್ಟಡ ಮಾಲೀಕರಾದ ಬಸವರಾಜ್ ನಿಗದಿ, ರವಿ ಸವರದ, ಗಂಗಪ್ಪ ಶಿಂತ್ರಿ, ಮಹಾಬಲೇಶ್ವರ ಕುರಬಗುಡಿ, ರಾಜು ಘಾಟಿನ್ ವಿರುದ್ಧ ಕ್ರಿಮಿನಲ್ ಕೇಸನ್ನು ದಾಖಲಿಸಲಾಗಿದೆ.

    ಇವರೆಗೂ 49 ಜನರನ್ನು ರಕ್ಷಣೆ ಮಾಡಿ ಅವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಕೆಳಗೆ 12 ಜನ ಮಕ್ಕಳು ಸಿಲಿಕಿರುವ ಬಗ್ಗೆ ಮಾಹಿತಿ ಇದೆ. ಸದ್ಯಕ್ಕೆ ಅವರನ್ನು ಹೊರತರುವ ಕೆಲಸ ಭರದಿಂದ ಸಾಗಿದೆ. ಕಟ್ಟಡದ ಕೆಳಗಡೆ ಸಿಲುಕಿರುವ ಜನರಿಂದ ಕೂಗು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಆರ್‍ಎಫ್ ಹಾಗೂ ಎನ್‍ಎಸ್‍ಎಫ್ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಮುಖ್ಯವಾಗಿ ಜೀವ ಉಳಿಸುವುದಕ್ಕೆ ಮೊದಲ ಆಧ್ಯತೆ ನೀಡಲಾಗುತ್ತಿದ್ದು, ಕಟ್ಟಡ ಕೊರೆದು ಮಕ್ಕಳ ರಕ್ಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದುರಂತಕ್ಕೆ ಕಾರಣರಾದವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಪತಿಗಾಗಿ ಕಂಗಾಲು
    ಅಶೀತ್ ಹಿರೇಮಠ ಎಂಬವರು ಕಟ್ಟಡದಲ್ಲಿ ಮೂರು ತಿಂಗಳಿನಿಂದ ಪೇಂಟ್ ಅಂಗಡಿ ಇಟ್ಟುಕೊಂಡಿದ್ದರು. ಕಟ್ಟಡದ ಕುಸಿತದ ವೇಳೆ ಅಶೀತ್ ಅಂಗಡಿಯಲ್ಲಿದ್ದರು. ಇತ್ತ ಪತಿ ಕಾಣದೆ ಗರ್ಭಿಣಿ ಪತ್ನಿ ಕಂಗಲಾಗಿದ್ದು, ಆಸ್ಪತ್ರೆ ಆವರಣದಲ್ಲಿ ಅಶೀತ್‍ಗಾಗಿ ಕುಟುಂಬ ಕಾದು ಕುಳಿತಿತ್ತು. ಕೊನೆಗೂ ಸತತ 14 ಘಂಟೆಗಳ ಕಾರ್ಯಾಚರಣೆ ಬಳಿಕ ಅಶೀತ್ ಬದುಕಿ ಬಂದಿದ್ದಾರೆ.

    ನಡೆದಿದ್ದೇನು?
    ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಮಂಗಳವಾರ ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ ಕುಸಿದು ಬಿದ್ದಿತ್ತು. ಈ ಕಟ್ಟಡ ಕಾಮಗಾರಿಯಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದರು ಅಂತ ಹೇಳಲಾಗಿತ್ತು. ಈ ಪೈಕಿ 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, 27 ಮಂದಿಯನ್ನು ಜಿಲ್ಲಾಸ್ಪತ್ರೆ, 13 ಮಂದಿಗೆ ಕಿಮ್ಸ್, 6 ಮಂದಿಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    https://www.youtube.com/watch?v=WhgyTU-1oN8

  • ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಕೆಲ ದಿನಗಳಲ್ಲಿ ಬಣ್ಣಗಳ ಹೋಳಿ ಹಬ್ಬ ಬಂದೇ ಬಿಡುತ್ತದೆ. ಎಲ್ಲರೂ ಓಕುಳಿ ಹಬ್ಬದಲ್ಲಿ ಮಿಂದೇಳಲು ಈಗಿನಿಂದಲೇ ಸಿದ್ಧರಾಗುತ್ತಿದ್ದೀರ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಬಣ್ಣದ ಹಬ್ಬವನ್ನು ಆಚರಿಸುತ್ತೇವೆ. ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಕಾಮನ ದಹನ ಮಾಡಿ ಸಂಭ್ರಮಿಸುತ್ತೇವೆ. ಜೊತೆಗೆ ಎಲ್ಲದರಗಿಂತ ಮಿಗಿಲಾಗಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಫುಲ್ ಎಂಜಾಯ್ ಮಾಡುತ್ತೀರಿ.

    ಆದರೆ ಎಲ್ಲಿಂದರಲ್ಲಿ ಕಡಿಮೆ ಬೆಲೆಗೆ ಸಿಗುವ ಬಣ್ಣಗಳ ಖರೀದಿ ಬಗ್ಗೆ ಎಚ್ಚರವಿರಬೇಕು. ಕೆಲ ಹೊತ್ತಿನ ಬಣ್ಣ ಬದುಕಿನ ರಂಗನ್ನೇ ಕಿತ್ತುಕೊಳ್ಳಬಾರದು. ಹೀಗಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ದೂರವಿದ್ದರೆ ಒಳಿತು. ನಿಮ್ಮ ಚರ್ಮ, ತ್ವಚೆ, ಕೂದಲಿನ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆ ವಹಿಸಬೇಕು. ಹಾಗಾದರೆ ಆರೋಗ್ಯಕರ ಕಲರ್ ಫುಲ್ ಹೋಳಿಯಾಟ ಹೇಗೆ ಆಡಬೇಕು ಎಂಬ ಬಗ್ಗೆ ಸರಳವಾದ ಸಲಹೆಗಳು ನಿಮಗಾಗಿ. ಒಮ್ಮೆ ಈ ಸಲಹೆಗಳನ್ನು ಪಾಲಿಸಿ ನೋಡಿ ನೀವು ಕಾಮನ ಹಬ್ಬಕ್ಕಿಂತಲೂ ಹೆಚ್ಚು ಸಂಭ್ರಮಿಸುತ್ತೀರ.

    ಸಲಹೆಗಳು:
    * ಮೊಟ್ಟಮೊದಲಿಗೆ ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ಬಣ್ಣ ಬಳಸಿರಿ.
    * ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ.
    * ಚರ್ಮದ ಸಮಸ್ಯೆ ಹಾಗೂ ಅಲರ್ಜಿ ಇರುವವರು ಬಣ್ಣದಾಟದಿಂದ ಹೊರಗಿದ್ದರೆ ಒಳಿತು. ಇಲ್ಲವಾದಲ್ಲಿ ಧೂಳು, ರಾಸಾಯನಿಕ ನಿಮ್ಮ ದೇಹ ಸೇರಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ ಸಮಸ್ಯೆ ಎದುರಾಗಬಹುದು.
    * ಆಚರಣೆ ಬಳಿಕ ಉತ್ತಮವಾದ ಸೋಪ್ ಬಳಿಸಿ ಸ್ನಾನ ಮಾಡುವುದು ಅಗತ್ಯ.
    * ರಾಸಾಯನಿಕ ಮಿಶ್ರಣದ ಬಣ್ಣದ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ನ್ಯಾಚುರಲ್ ಕಲರ್ ಬಳಸಬೇಕು. ಕಣ್ಣಿನ ಹಾನಿ ತಪ್ಪಿಸಲು ಕನ್ನಡಕ ಬಳಸಿ.

    * ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜುವುದು, ರಬ್ ಮಾಡುವುದು ಮಾಡಲೇ ಬಾರದು. ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಶುದ್ಧ ನೀರಿನಿಂದ ತೊಳೆಯಬೇಕು.
    * ಸಾವಯವ ಬಣ್ಣಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋರಂಟಿ ಸೊಪ್ಪು, ಚೆಂಡು ಹೂ, ಅರಿಶಿನ ಪುಡಿ ಬಳಸಿ ಮನೆಯಲ್ಲಿ ಬಣ್ಣ ತಯಾರಿಸಬಹುದು.
    * ಹೋಳಿ ವೇಳೆ ತುಂಬು ತೋಳಿನ ಬಟ್ಟೆ ಧರಿಸಿದ್ದರೆ ಉತ್ತಮ.
    * ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿರಿ.
    * ಮುಖ, ತೋಳು, ಕಾಲುಗಳು ಮತ್ತು ಚರ್ಮದ ಯಾವುದೇ ತೆರೆದ ಭಾಗಕ್ಕೆ ಕ್ರೀಮ್ ಹಚ್ಚಿ ಹೊರಡಿ.
    * ಕಣ್ಣುಗಳ ರಕ್ಷಣೆಗಾಗಿ ಸನ್‍ಗ್ಲಾಸ್ ಧರಿಸುವುದು ಉತ್ತಮ.

    * ಕಡುಗಾಢವಾದ ಬಣ್ಣಗಳ ಬಳಕೆ ಬೇಡ. ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಹಾನಿಯೂ ಹೆಚ್ಚಿರುತ್ತದೆ..
    * ದೇಹದ ತೆರೆದ ಭಾಗದಲ್ಲಿ ಬಣ್ಣ ತಗುಲಿ ತುರಿಕೆ, ಕೆರೆತ, ನವೆ ಉಂಟಾದರೆ ತಕ್ಷಣವೇ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
    * ಮುಖಕ್ಕೆ ತಗುಲಿರುವ, ಅಂಟಿರುವ ಬಣ್ಣ ತೆಗೆಯಲು ಮೊದಲು ಮುಖವನ್ನು ತಣ್ಣೀರಿನಲ್ಲಿ ಅದ್ದಿ ಬಳಿಕ ಸೌಮ್ಯವಾದ ಕ್ರೀಮ್ ಹಚ್ಚಿ, ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮುಖಕ್ಕೆ ಅಂಟಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

    * ಹಾಲಿಗೆ ಸೂರ್ಯಕಾಂತಿ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಯಾವುದಾದರೊಂದು ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚರ್ಮಕ್ಕೆ ಹಚ್ಚಿ. ಇದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣವನ್ನು ತೆಗೆಯಬಹುದಾಗಿದೆ
    * ಜೊತೆಗೆ ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಸುಮಾರು ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ತೊಳೆಯುವುದರಿಂದ ಅಂಟಿರುವ ಬಣ್ಣ ಹೋಗುತ್ತದೆ. ಚರ್ಮದ ತಾಜತೆ ಹಾಗೇ ಉಳಿದಿರುತ್ತದೆ.

    ಇನ್ನು ಓಕುಳಿಯಾಟದ ವೇಳೆ ಕೂದಲಿಗಾಗುವ ಹಾನಿಯನ್ನು ತಡೆಯಬೇಕಾದ್ರೆ:
    * ಕೂದಲಿಗೆ ಬಣ್ಣವಾದಲ್ಲಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೂದಲಿಗೆ ಅಂಟಿಕೊಂಡಿದ್ದ ಬಣ್ಣ ಹೋಗೋವರೆಗೂ ನಿಧಾನವಾಗಿ ಉಜ್ಜಿ ತೊಳೆಯಬೇಕು.
    * ಗಟ್ಟಿ ಮೊಸರಿನಲ್ಲಿ ಮೆಂತ್ಯಕಾಳುಗಳನ್ನು ನೆನಸಿಡಿ. 5-10 ನಿಮಿಷದ ನಂತರ ಅದನ್ನು ತಲೆಗೆ ಹಚ್ಚಿ ಅರ್ಧಗಂಟೆ ಹಾಗೇ ಬಿಡಬೇಕು. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
    * ಪರಸ್ಪರ ಬಣ್ಣ ಎರಚಾಡುವುದಕ್ಕೂ ಮುಂಚೆಯೇ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮೆದುಳಿನ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
    * ಬೆಚ್ಚಗಿನ ಕೊಬ್ಬರಿಯನ್ನು ತಲೆಕೂದಲಿಗೆ ಹಚ್ಚಿ, ಕೂದಲ ಬುಡಕ್ಕೆ ಮಸಾಜ್ ಮಾಡಬೇಕು. ಇದರಿಂದ ಕೂದಲಿಗೆ ರಾಸಾಯನಿಕ ಮಿಶ್ರಿತ ಬಣ್ಣ ಅಂಟುವುದನ್ನು ತಡೆಯಬಹುದು.
    * ಓಕುಳಿಯಾಟದ ವೇಳೆ ಕೂದಲು ಬಿಡುವ ಬದಲಾಗಿ ಕೂದಲನ್ನು ಒಟ್ಟು ಮಾಡಿ ಜಡೆ ಎಣೆದುಕೊಂಡರೆ ಉತ್ತಮ.

    ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡಲು ತಯಾರಿ ಇಲ್ಲದಿದ್ದರೆ ಏನಾಗುತ್ತೆ?:
    * ನಿಮ್ಮ ಅವಶ್ಯಕತೆಯೆ, ಕ್ರೇಜ್‍ಅನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ಮನಸೋಇಚ್ಛೆ ಕಲರ್‍ಗಳು ದಾಂಗುಡಿ ಇಟ್ಟಿವೆ. ಇದರಿಂದ ಎಚ್ಚರವಾಗಿರಬೇಕು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟಬುತ್ತಿ.
    * ಕ್ವಾಲಿಟಿ ಇಲ್ಲದ ಬಣ್ಣಗಳ ಬಳಕೆಯಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇವೆ.
    * ಸಾಮಾನ್ಯವಾಗಿ ಬಣ್ಣಗಳಲ್ಲಿ ಟಾಕ್ಸಿಕ್ ರಾಸಾಯನಿಕ ಇರುವುದರಿಂದ ಅದು ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೆ ಕಣ್ಣಿನ ಕಣ್ಣಗುಡ್ಡೆಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
    * ಅಸ್ತಮಾ, ಉಸಿರಾಟದ ತೊಂದರೆ ಇರುವವರು ಶ್ವಾಸಕೋಶದ ತೊಂದರೆ ಅನುಭವಿಸಬೇಕಾಗುತ್ತದೆ.
    * ಬಣ್ಣ ಗುಣಮಟ್ಟದಲ್ಲವಾದರೆ ಅಲರ್ಜಿ, ತುರಿಕೆಯಂತಹ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

    ಯಾವ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಯವ್ಯಾವ ತೊಂದರೆಗಳು ಉಂಟಾಗುತ್ತೆ:
    * ಹಸಿರು ರಾಸಾಯನಿಕ ಬಣ್ಣದಲ್ಲಿರುವ ಕಾಪರ್ ಸಲ್ಫೇಟ್ – ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
    * ನೇರಳೆ ರಾಸಾಯನಿಕ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ – ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತೆ.
    * ಕಪ್ಪು ರಾಸಾಯನಿಕ ಬಣ್ಣದಲ್ಲಿರುವ ಲೆಡ್ ಆಕ್ಸೈಡ್ – ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತೆ.
    * ಕೆಂಪು ರಾಸಾಯನಿಕ ಬಣ್ಣದಲ್ಲಿರುವ ಮಕ್ರ್ಯೂರಿಕ್ ಸಲ್ಫೇಟ್ – ಚರ್ಮ ಸಮಸ್ಯೆಗೆ ಕಾರಣವಾಗುತ್ತೆ
    * ಸಿಲ್ವರ್ ರಾಸಾಯನಿಕ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ – ತುರಿಕೆ, ಕೆರೆತ ಸಮಸ್ಯೆಗೆ ಕಾರಣವಾಗುತ್ತೆ.

  • ಇಂಡೋನೇಷ್ಯಾ ಭೀಕರ ಸುನಾಮಿ – ಸಾವಿನ ಸಂಖ್ಯೆ 373ಕ್ಕೆ ಏರಿಕೆ

    ಇಂಡೋನೇಷ್ಯಾ ಭೀಕರ ಸುನಾಮಿ – ಸಾವಿನ ಸಂಖ್ಯೆ 373ಕ್ಕೆ ಏರಿಕೆ

    ಜಕಾರ್ತಾ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಭೀಕರ ಸುನಾಮಿಗೆ ಬಲಿಯಾದವರ ಸಂಖ್ಯೆ 373ಕ್ಕೆ ಏರಿದೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ರಕ್ಕಸ ಅಲೆಗಳ ಅಬ್ಬರಕ್ಕೆ ನೂರಾರು ಮನೆಗಳು, ಕಟ್ಟಡಗಳು ಕಣ್ಣೆದುರೇ ಕೊಚ್ಚಿ ಹೋಗಿವೆ. ಡಿಸೆಂಬರ್ 25ರವರೆಗೂ ರಕ್ಕಸ ಅಲೆಗಳು ಅಪ್ಪಳಿಸುವ ಮುನ್ನೆಚ್ಚರಿಕೆ ನೀಡಿದ್ದು, ಕಡಲ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ.

    ಇತ್ತ ಸುನಾಮಿ ಸಂಭವಿಸಿದ ಪ್ರಾಂತ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸೇನೆ ಸ್ಥಳೀಯ ಪೊಲೀಸರು, ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಸೇರಿದಂತೆ ಸ್ಥಳೀಯ ಸ್ವಯಂ ಸೇವಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

    ಶನಿವಾರದಂದು ಅನಾಖ್ ಕ್ರಾಕಟೋ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸಮುದ್ರದಲ್ಲಿ ಬೃಹತ್ ಅಲೆಗಳು ನಿರ್ಮಾಣವಾಗಿ ಸುನಾಮಿ ಸಂಭವಿಸಿತ್ತು. ಸುನಾಮಿ ಅಬ್ಬರಕ್ಕೆ ಇಂಡೋನೇಷ್ಯಾದ ಜಾವಾ ಹಾಗೂ ಸುಮಾತ್ರಾ ದ್ವೀಪಗಳು ತತ್ತರಿಸಿ ಹೋಗಿತ್ತು. ಅಲ್ಲದೇ 2018ರ ಸೆಪ್ಟೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಅಪ್ಪಳಿಸಿದ ಸುನಾಮಿಗೆ 2,500 ಮಂದಿ ಬಲಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    – 17 ಮಂದಿ ಮಹಿಳೆಯರು ಸೇರಿ 52 ಜನರ ರಕ್ಷಣೆ
    – ತೋಟದಿಂದ ಹೊರಕ್ಕೆ ಹೋದರೆ ಬೆತ್ತದಿಂದ ಏಟು

    ಹಾಸನ: ಇದು ನಾಗರೀಕ ಸಮಾಜ ತಲೆತಗ್ಗಿಸುವ ಅನಾಗರೀಕ ರೀತಿಯಲ್ಲಿ 52ಮಂದಿ ಕೂಲಿ ಕಾರ್ಮಿಕರನ್ನು ಜೀತಕ್ಕಾಗಿ ಇಟ್ಟುಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹಾಸನ ತಾಲೂಕಿನ ಸಾವಂಕನಹಳ್ಳಿಯ ಹೊರವಲಯದಲ್ಲಿರುವ ತೆಂಗಿನ ತೋಟದಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸಲಾಗುತಿತ್ತು. ನಾಲ್ವರು ಪುಟ್ಟ ಮಕ್ಕಳು, 17 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 52 ಮಂದಿಯನ್ನು ಜೀತ ಬಂಧನದಿಂದ ಮುಕ್ತಗೊಳಿಸಲಾಗಿದೆ.

    ರಾಜ್ಯದ ವಿವಿಧ ಭಾಗದಲ್ಲಿ ಬಿಕ್ಷೆ ಬೇಡುವವರನ್ನು, ಬೀದಿ ಬದಿಯ ವಾಸಿಗಳನ್ನು ಹೆಚ್ಚಿನ ಕೂಲಿ ಕೊಡುವುದಾಗಿ ನಂಬಿಸುವ ತಂಡವೊಂದನ್ನು ರಚಿಸಿಕೊಂಡಿದ್ದ ಪ್ರಮುಖ ಆರೋಪಿ ಮುನೇಶ್ ಈಗ ತಲೆ ಮರೆಸಿಕೊಂಡಿದ್ದಾನೆ. ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಬಂದ ಬಡ ಕೂಲಿ ಕಾರ್ಮಿಕರು ಮತ್ತು ಬಿಕ್ಷುಕರೇ ಇವರ ಟಾರ್ಗೆಟ್ ಆಗಿದ್ದರು. ಜೀವನಕ್ಕಾಗಿ ಊರೂರು ಅಲೆಯುವರನ್ನು ಹೊಂಚು ಹಾಕಿ ಈ ತೋಟಕ್ಕೆ ಕರೆದುಕೊಂಡು ಬರುತ್ತಿದ್ದರು.

    ಟೊಮೆಟೋ ಕೀಳುವ ಕೆಲಸ ತುಂಬಾ ಸುಲಭವಾದ ಕೆಲಸ ಮತ್ತು ಉತ್ತಮ ಸಂಬಳ ಬೇರೆ ಸಿಗುತ್ತೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದವರು ಮತ್ತೆ ಹೊರಕ್ಕೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಪ್ರಾಣಿಗಳಂತೆ ಅವರನ್ನು ಬೇರೆ ತೋಟಗಳಿಗೆ ಕೂಲಿಗೆ ಕರೆದುಕೊಂಡು ಹೋಗಿ ಮತ್ತೆ ಈ ತೋಟಕ್ಕೆ ವಾಪಸ್ ಕರೆದುಕೊಂಡು ಬಂದು ಒಂದು ಕಡೆ ಕೂಡಿಹಾಕಲಾಗುತಿತ್ತು. ಕೆಲವರು ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇನ್ನೂ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಇಲ್ಲಿಗೆ ಬಂದು ತಿಂಗಳುಗಳೇ ಕಳೆದಿವೆ. ಸಂಬಳವೂ ಇಲ್ಲ, ಊರಿಗೆ ವಾಪಸ್ ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸುತ್ತಿದ್ದರು.

    ತೆಂಗಿನಮರದ ಸೋಗೆ ನಿರ್ಮಿತ ಒಂದೇ ಕೊಠಡಿಯಲ್ಲಿ ಎಲ್ಲಾ ಕಾರ್ಮಿಕರನ್ನು ಕೂಡಿಹಾಕಿ ರಾತ್ರಿಹೊತ್ತು ಕಾವಲು ಕಾಯುತ್ತಿದ್ದರು. ನಿತ್ಯ ಕರ್ಮಗಳಿಗೆ ಸಹ ಹೊರಕ್ಕೆ ಹೋಗುವಂತಿರಲಿಲ್ಲ. ತೋಟ ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಯಾರಾದರೂ ಹೊರಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಬೆತ್ತದ ಕೋಲುಗಳಿಂದ ಹೊಡೆಯಲಾಗುತಿತ್ತು. ಎಲ್ಲ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಮುಂಜಾನೆ 5 ಗಂಟೆಯಿಂದ ಅವರನ್ನು ಬೇರೆ ಕಡೆ ಶುಂಠಿ ಬೆಳೆ ಕೀಳಲು ಕರೆದುಕೊಂಡು ರಾತ್ರಿಯವರೆಗೂ ದುಡಿಸಿಕೊಂಡು ಮತ್ತೆ ಇದೇ ತೋಟಕ್ಕೆ ವಾಪಾಸ್ ಕರೆದುಕೊಂಡು ಬಂದು ಕೂಡಿಹಾಕುತ್ತಿದ್ದರು.

    ಹಲವು ವರ್ಷಗಳಿಂದ ನಡೆಯುತಿದ್ದ ದುಷ್ಕರ್ಮಿಗಳ ತಂಡದ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಎಲ್ಲ ನಿರಾಶ್ರಿತರನ್ನು ಅಲ್ಲಿಂದ ಬಂಧಮುಕ್ತಗೊಳಿಸಲಾಗಿದೆ. ಪ್ರಮುಖ ಆರೋಪಿ ಮುನೇಶ್ ಮತ್ತು ಆತನ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮುನೇಶ್ ಜಿಲ್ಲೆಯ ಅರಸೀಕೆರೆಯ ನಿವಾಸಿಯಾಗಿದ್ದು, ಸಾವಂಕನಹಳ್ಳಿಯ ಈ ತೋಟವನ್ನು ಭೋಗ್ಯ ಮಾಡಿಕೊಂಡಿದ್ದಾನೆ. ಇದೀಗ ಹಾಸನ ಪೊಲೀಸರು ಈತನ ಪಾಪಿಕೃತ್ಯವನ್ನು ಭೇದಿಸಿ 52 ಮಂದಿ ಅಮಾಯಕರನ್ನು ಜೀತದಿಂದ ಬಂಧಮುಕ್ತಗೊಳಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಕಿಲಕಿಲ ನಗುವ ಮಗು ಮನೆಯಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಆ ಮಗು ಆರೋಗ್ಯವಾಗಿರಬೇಕೆಂದು ಮನೆಯಲ್ಲಿ ಎಲ್ಲರೂ ಬಯಸುತ್ತಾರೆ. ಆದರೆ ಚಳಿಗಾಲ ಬಂದರೆ ಸಾಕು ಮಕ್ಕಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಕೇರ್ ಮಾಡಬೇಕಾಗುತ್ತದೆ. ಈ ವಿಂಟರ್ ನಲ್ಲಿ ಆರೋಗ್ಯವಂತ ಮಗುವಿಗಾಗಿ ಹೀಗೆ ಮಾಡಿ.

    * ಶೀತ ಮತ್ತು ನೆಗಡಿ:
    – ನೆಗಡಿ ಮತ್ತು ಶೀತ ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳನ್ನು ಕಾಡುವ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳನ್ನು ತುಂಬಾ ಬೆಚ್ಚಗೆ ಇಡಬೇಕಾಗುತ್ತದೆ. ನೀರಿನಲ್ಲಿ ಹೆಚ್ಚು ಸಮಯ ಆಡಲು ಬಿಡಬಾರದು. ಮಕ್ಕಳಿಗೆ ಬಿಸಿ ನೀರು ಕುಡಿಸಬೇಕು. ಆಟವಾಡಿದ ಮೇಲೆ ಮಕ್ಕಳ ಕೈ, ಕಾಲುಗಳನ್ನು ನೀರಿನಿಂದ ತೊಳೆಯಬೇಕು. ಇದರಿಂದ ರೋಗಕಾರಕ ಕೀಟಾಣುಗಳು (viral infection) ಹರಡುವುದನ್ನು ತಡೆಯಬಹುದು.

    * ಉಸಿರಾಟ ಸಮಸ್ಯೆ:
    – ಚಳಿಗಾಲದ ವೇಳೆ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಚಳಿ ಇದ್ದಾಗ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ಕಡಿಮೆ ಮಾಡಬೇಕು. ಔಟಿಂಗ್ ಹೋಗಲೇಬೇಕಿದ್ದರೆ ಬೆಚ್ಚನೆಯ ಸ್ವೆಟರ್, ಸ್ಕಾರ್ಫ್, ಟೋಪಿ ಧರಿಸಿ ಕರೆದುಕೊಂಡು ಹೋಗಿ.

    * ಡ್ರೈ ಸ್ಕಿನ್:
    – ಮಕ್ಕಳು ಬೆಣ್ಣೆಯಂತಹ ಚರ್ಮ ಹೊಂದಿದ್ದರೆ ಎತ್ತಿಕೊಂಡು ಮುದ್ದಾಡಲು ಚೆಂದ. ಆದರೆ ರ‌್ಯಾಶಸ್, ಒರಟು ಚರ್ಮದಿಂದ ಇರಿಸುಮುರಿಸಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಲೋಷನ್, ಕ್ರೀಮ್ ಹಚ್ಚುವುದು. ಸ್ನಾನದ ಬಳಿಕ ಚರ್ಮದ ರಂಧ್ರಗಳು ಓಪನ್ ಆಗಿರುತ್ತವೆ. ಈ ವೇಳೆ ಲೋಷನ್ ಹಚ್ಚಿದರೆ ಚರ್ಮದ ಆಳಕ್ಕೆ ಇಳಿದು ದೀರ್ಘ ಕಾಲ ತೇವಾಂಶವನ್ನು ಕಾಪಾಡುತ್ತದೆ.

    * ಜ್ವರ, ನೆಗಡಿ, ಕೆಮ್ಮು ಬಾಧಿತರಿಂದ ದೂರ ಇರಿಸಿ:
    – ಇದು ದೊಡ್ಡ ಕಾಯಿಲೆ ಏನಲ್ಲ. ಆದರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಮಕ್ಕಳು ಹೆಚ್ಚಾಗಿ ಸೆನ್ಸಿಟೀವ್ ಆಗಿರುತ್ತಾರೆ. ಇದರಿಂದ ಬಹುಬೇಗನೇ ರೋಗಾಣುಗಳು ದೇಹ ಸೇರಬಹುದು. ಬಳಿಕ ಜ್ವರ, ನೆಗಡಿ, ಕೆಮ್ಮು, ಇತರೆ ಅಲರ್ಜಿಗಳಾಗಿ ಯಾತನೆ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಜ್ವರ, ಕೆಮ್ಮು ಬಂದವರಿಂದ ಆದಷ್ಟು ಮಕ್ಕಳನ್ನು ದೂರ ಇರಿಸಿ. ದೂರ ಇರುವಂತೆ ಸೂಚಿಸಿ. ಮನೆಯವರಾಗಲಿ, ಅಕ್ಕಪಕ್ಕದವರಾಗಲಿ ಯಾರೇ ಆಗಲಿ ನಮ್ಮ ಮಕ್ಕಳ ಆರೋಗ್ಯ ಮುಖ್ಯ.

    * ಹಣ್ಣು ತರಕಾರಿಗಳ ಸೇವನೆ:
    – ನಿಮ್ಮ ಮಕ್ಕಳಿಗೆ ವಿಟಮಿನ್‍ಯುಕ್ತ, ಪ್ರೊಟೀನ್‍ಯುಕ್ತ ಆಹಾರವನ್ನು ತಿನ್ನಿಸಿ. ಮನೆಯಲ್ಲೇ ತಯಾರಿಸಿದ ಆಹಾರವನ್ನು ಬಿಸಿ ಇರುವಾಗಲೇ ಸೇವಿಸುವಂತೆ ಬಲವಂತ ಮಾಡಿ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ.

    * ಪ್ರತ್ಯೇಕ ಬಾಟಲ್, ಹ್ಯಾಂಡ್ ಟವಲ್:
    – ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾದ ನೀರಿನ ಬಾಟಲ್, ಹ್ಯಾಂಡ್ ಟವಲ್ ಅನ್ನು ಕೊಟ್ಟು ಕಳಿಸಿ. ಇದರಿಂದ ಶಾಲೆಯಲ್ಲಿ ಮಕ್ಕಳೊಂದಿಗೆ ಆಡುವ ಮೂಲಕ ಹರಡಬಹುದಾದ ವೈರಲ್ ಸೋಂಕುಗಳನ್ನು ತಡೆಯಬಹುದು. ಮನೆಗೆ ಬಂದ ಬಳಿಕ ಬಾಟಲಿ ಮತ್ತು ಹ್ಯಾಂಡ್ ಟವಲ್ ಅನ್ನು ಡೆಟಲ್ ಹಾಕಿ ಬಿಸಿ ನೀರಿನಿಂದ ತೊಳೆದಿಡಿ.

    ಕೆಲವೊಂದು ಸಿಂಪಲ್ ಟಿಪ್ಸ್
    * ಕೈ ತೊಳೆಯಲು ಹ್ಯಾಂಡ್ ವಾಷಿಂಗ್ ಲಿಕ್ವಿಡ್ ಬಳಸಿ.
    * ಹೊರಗಿಂದ ಬಂದ ತಕ್ಷಣ ಕೈ, ಕಾಲು, ಮುಖ ತೊಳೆಯುವುದು.
    * ಕೈ ಬೆರಳುಗಳ ಮಧ್ಯೆ, ಉಗುರುಗಳ ಮಧ್ಯೆ ಚೆನ್ನಾಗಿ ತೊಳೆಯುವುದು.
    * ಮನೆಯಿಂದ ಹೊರ ಹೋಗುವಾಗ ಬೆಚ್ಚನೆಯ ಉಡುಪು ಧರಿಸುವುದು.
    * ಕಸ ಹಾಕಿ ಬಂದ ಬಳಿಕ, ಪ್ರಾಣಿಗಳನ್ನು ಮುಟ್ಟಿದ ನಂತ್ರ, ಟಾಯ್ಲೆಟ್‍ಗೆ ಹೋಗಿಬಂದ ಮೇಲೆ, ಮಕ್ಕಳಿಗೆ ಡೈಪರ್ ಚೇಂಜ್ ಮಾಡಿದ ನಂತ್ರ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳುವುದು.


    * ಸೀನುವಾಗ, ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಬಟ್ಟೆ ಬಳಸುವುದು.
    * ಮನೆಯಲ್ಲಿ, ಮತ್ತೆ ಹೊರ ಹೋಗುವಾಗ ಪ್ರತ್ಯೇಕ ನೀರಿನ ಬಾಟಲ್, ಹ್ಯಾಂಡ್ ಟವಲ್ ಬಳಸುವುದು.
    * ರಾತ್ರಿ ವೇಳೆ ಮಕ್ಕಳನ್ನು ಬೆಚ್ಚಗಿಡುವುದು.
    * ಮಲಗುವಾಗ ಮಕ್ಕಳ ಕೈ, ಕಾಲುಗಳಿಗೆ ಕ್ರೀಮ್ ಹಚ್ಚುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv