Tag: protection

  • ಮಳೆ ನೀರಿನಿಂದ ತನ್ನ ಮರಿಗಳನ್ನು ರಕ್ಷಿಸಿದ ನಾಯಿ – ದೃಶ್ಯ ನೋಡಿದ್ರೆ ಕಣ್ಣಂಚಲ್ಲಿ ಬರುತ್ತೆ ನೀರು

    ಮಳೆ ನೀರಿನಿಂದ ತನ್ನ ಮರಿಗಳನ್ನು ರಕ್ಷಿಸಿದ ನಾಯಿ – ದೃಶ್ಯ ನೋಡಿದ್ರೆ ಕಣ್ಣಂಚಲ್ಲಿ ಬರುತ್ತೆ ನೀರು

    ಕೋಲಾರ: ಮಳೆ ನೀರಿನ ಅವಾಂತರದಿಂದ ತಾಯಿ ನಾಯಿ ತನ್ನ ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಟ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಇಂದು ಸಂಜೆ ಬಂದ ಮಳೆಗೆ ಚರಂಡಿಯಲ್ಲಿ ನೀರು ತುಂಬಿಕೊಂಡಿದೆ. ಅದೇ ಚರಂಡಿ ಬಳಿ ಇದ್ದ ನಾಯಿ ಮರಿಗಳ ರಕ್ಷಣೆಗಾಗಿ ತಾಯಿ ನಾಯಿ ಅರಣ್ಯ ರೋಧನೆ ನಡೆಸಿತು. ನಾಯಿ ಮರಿಗಳನ್ನು ರಕ್ಷಿಸುವ ಕರುಣಾಜನಕ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕೋಲಾರದ ಗೌರಿಪೇಟೆಯ 5ನೇ ಕ್ರಾಸ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ.

    ಮಳೆಯಾಗಿ ಚರಂಡಿಯಲ್ಲಿ ನೀರು ತುಂಬಿಕೊಂಡ ಪರಿಣಾಮ ನಾಯಿಯ ಪರದಾಟ, ಗೋಳಾಟ ಹೇಳ ತೀರದಂತಾಗಿತ್ತು. ತನ್ನ 5 ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೊಂದು ಚರಂಡಿಗೆ ಸಾಗಿಸಿದ ನಾಯಿಯ ತಾಯಿ ಪ್ರೀತಿಯನ್ನು ಕಂಡ ಸ್ಥಳಿಯರ ಕಣ್ಣಾಲೆಗಳು ನೀರು ತುಂಬಿಕೊಂಡಿತ್ತು. ಕಿಂಡಿಯಂತಿರುವ ಸಣ್ಣ ಸಂದಿಯಲ್ಲಿ ತನ್ನ 5 ಮಕ್ಕಳನ್ನು ಪಾರು ಮಾಡಿದ ನಾಯಿ ಸಾಹಸಕ್ಕೆ ಸಾಟಿಯೇ ಇಲ್ಲವಾಗಿತ್ತು. ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಒಂದೊಂದಾಗಿ ಹೊತ್ತೊಯ್ದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿತು.

    ಮಳೆಯಲ್ಲೇ ನಾಯಿ ತನ್ನ ಮರಿಗಳನ್ನ ರಕ್ಷಣೆ ಮಾಡುವ ಮನಕಲಕುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಒಂದು ಕಡೆ ಮಳೆ, ಮತ್ತೊಂದೆಡೆ ಕಿಂಡಿಯಂತಿರುವ ಸಣ್ಣ ಕಾಲುವೆಯಲ್ಲಿ ಮರಿಗಳನ್ನು ರಕ್ಷಣೆ ಮಾಡಿದ ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಬರುತ್ತವೆ.

  • ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಅಜ್ಜ-ಮೊಮ್ಮಗಳ ರಕ್ಷಣೆ

    ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಅಜ್ಜ-ಮೊಮ್ಮಗಳ ರಕ್ಷಣೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅಜ್ಜ ಹಾಗೂ ಮೊಮ್ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಗಂಗಾವತಿ ತಾಲೂಕಿನ ಸಾಣಾಪೂರ ನಿವಾಸಿಗಳಾದ ಅಜ್ಜ ಹುಲಗಪ್ಪ ಮತ್ತು ಮೊಮ್ಮಗಳಾದ ಲಾವಣ್ಯಳನ್ನು ಸ್ಥಳೀಯರು ಕಾಪಾಡಿದ್ದಾರೆ. ಹುಲಗಪ್ಪ ಅವರು ತಮ್ಮ ಬೈಕಿನಲ್ಲಿ ಮೊಮ್ಮಗಳನ್ನು ಕರೆದುಕೊಂಡು ನದಿ ನೋಡಲು ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲೇ ಹರಿಯುತ್ತಿದ್ದ ಅಪಾರ ಪ್ರಮಾಣದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.

    ಕೆಲ ದೂರದಲ್ಲಿ ಕೊಚ್ಚಿ ಹೋಗುತ್ತಿರುವ ಅಜ್ಜ ಹಾಗೂ ಆತನ ಮೊಮ್ಮಗಳನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಕೊನೆಗೂ ಅಜ್ಜ, ಮೊಮ್ಮಗಳನ್ನು ರಕ್ಷಿಸುವ ಮೂಲಕ ಅಪಾಯದಿಂದ ಪಾರು ಮಾಡಿದ್ದಾರೆ.

  • ಜಾನುವಾರು ಬಿಟ್ಟು ಬರಲ್ಲ- ಪ್ರವಾಹದ ಮಧ್ಯೆ ಸಿಲುಕಿದ ಮೂವರು ಪಟ್ಟು

    ಜಾನುವಾರು ಬಿಟ್ಟು ಬರಲ್ಲ- ಪ್ರವಾಹದ ಮಧ್ಯೆ ಸಿಲುಕಿದ ಮೂವರು ಪಟ್ಟು

    ಬಾಗಲಕೋಟೆ: ಪ್ರವಾಹದಲ್ಲಿ ಸಿಲುಕಿದಾಗ ರಕ್ಷಣೆ ಮಾಡಿದರೆ ಸಾಕು ಎಂದು ಕೆಲವರು ಕಾಯುತ್ತಿರುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಮೂವರು, ರಕ್ಷಣಾ ತಂಡ ಮನೆಯ ಬಳಿ ತೆರಳಿ ರಕ್ಷಣೆಗೆ ಮುಂದಾದರೂ ನಾವು ಜಾನುವಾರುಗಳನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.

    ದಿನೇ ದಿನೇ ಪ್ರವಾಹ ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯವೂ ಅಷ್ಟೇ ಸವಾಲಾಗಿ ಪರಿಣಮಿಸಿದೆ. ಅದರಂತೆ ಗ್ರಾಮದ ಮನೆಗಳಲ್ಲಿ ಸಿಲುಕಿರುವ ಜನರನ್ನು ಹುಡುಕಿ ಎನ್‍ಡಿಆರ್‍ಎಫ್ ಹಾಗೂ ನೇವಿ ತಂಡ ರಕ್ಷಣಾ ಕಾರ್ಯ ಮಾಡುತ್ತಿದೆ. ಹಾಗೆಯೇ ರಕ್ಷಣೆ ಮಾಡಲು ತೆರಳಿದಾಗ ರಾಸುಗಳನ್ನು ಬಿಟ್ಟು ಬರುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದ್ದಾರೆ.

    ಅಥಣಿ ತಾಲೂಕಿನ ಜನವಾಡ ಗ್ರಾಮ ಸಂಪೂರ್ಣ ಮುಳುಗಿದ ಪರಿಣಾಮ ಇಂದು ಎನ್‍ಡಿಆರ್‍ಎಪ್ ತಂಡ 50 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಆದರೆ, ಇಡೀ ಗ್ರಾಮ ಪ್ರವಾಹದಲ್ಲಿ ಮುಳುಗಿದರೂ ಜನವಾಡ ಗ್ರಾಮದ ಮೂವರು ಮಾತ್ರ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ.

    ದಂಪತಿ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಗ್ರಾಮ ಬಿಟ್ಟು ಬರಲು ನಿರಾಕರಿಸಿದ್ದಾರೆ. ಪ್ರವಾಹದ ಮಧ್ಯೆಯೇ ನಾಗಪ್ಪ ಗುರವ್, ಮಾಲವ್ವ ಗುರವ್ ದಂಪತಿ ಮನೆಬಿಟ್ಟು ಬರಲು ನಿರಾಕರಿಸಿದ್ದಾರೆ. ಅಲ್ಲದೇ ಮತ್ತೊಬ್ಬ ವ್ಯಕ್ತಿ ಗೋಪಾಲ ಎನ್ನುವವರು ಸಹ ಪ್ರವಾಹದ ಮಧ್ಯೆಯೇ ಉಳಿದುಕೊಂಡಿದ್ದಾರೆ. ದಂಪತಿ ಸೇರಿದಂತೆ ಮೂವರಿಗೂ ಎನ್‍ಡಿಆರ್‍ಎಫ್ ತಂಡ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದರೂ ಮನೆ ಬಿಟ್ಟು ಬರಲು ನಿರಾಕರಿಸಿದ್ದಾರೆ. ಮನೆಯಲ್ಲಿನ ಜಾನುವಾರುಗಳನ್ನು ರಕ್ಷಣೆ ಮಾಡಿದರೆ ಮಾತ್ರ ನಾವು ಬರುತ್ತೇವೆ ಎಂದು ಪಟ್ಟು ಹಿಡಿದು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ, ದಂಪತಿಯ ಇಬ್ಬರು ಪುತ್ರರು ಪ್ರವಾಹದಿಂದ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ.

  • ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದಾತ ಸ್ಥಳೀಯರಿಂದ ರಕ್ಷಣೆ

    ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದಾತ ಸ್ಥಳೀಯರಿಂದ ರಕ್ಷಣೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಉಂಟಾದ ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಜಮಖಂಡಿಯ ಕಡಕೋಳ ರಸ್ತೆಯಲ್ಲಿ ವ್ಯಕ್ತಿ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ತಕ್ಷಣ ಓಡಿಹೋಗಿ ಬೈಕ್ ಸಮೇತ ಸವಾರನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಕೃಷ್ಣಾ ನದಿಯ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಈ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಸ್ಥಳಾಂತರ ಕಾರ್ಯಾಚರಣೆಯನ್ನು ಖುದ್ದು ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ನಡೆಯುತ್ತಿದ್ದು, ಟ್ರ್ಯಾಕ್ಟರ್ ಮೂಲಕ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

  • ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವಿನ ರಕ್ಷಣೆ

    ಕೋಲಾರ: ಶೌಚಾಲಯದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಹಸುವೊಂದನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕೋಲಾರದ ಗೌರಿಪೇಟೆಯಲ್ಲಿ ನಡೆದಿದೆ.

    ಗೌರೀಪೇಟೆ 4ನೇ ರಸ್ತೆಯಲ್ಲಿ ಖಾಲಿ ನಿವೇಶನದಲ್ಲಿದ್ದ ಗುಂಡಿಯ ಬಳಿ ಮೇಯಲು ಹೋದ ಹಸು ಆಯ ತಪ್ಪಿ ಗುಂಡಿಗೆ ಬಿದ್ದಿತ್ತು. ಕಿರುಚುತಿದ್ದ ಹಸುವನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.

    ಈ ವೇಳೆ ತಕ್ಷಣ ಸ್ಥಳಕ್ಕೆ ಬಂದ ಅಗ್ನಶಾಮಕ ಸಿಬ್ಬಂದಿ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಹಸುವನ್ನು ಮೇಲೆತ್ತಿ ರಕ್ಷಣೆ ಮಾಡಿದರು. ಇದಕ್ಕೆ ಸ್ಥಳೀಯರು ಕೈ ಜೋಡಿಸಿ ಮಾನವೀಯತೆ ಮೆರೆದಿದ್ದಾರೆ.

  • ಕಸಾಯಿಖಾನೆಗೆ ಸಾಗಿಸುತ್ತಿದ್ದ 60 ಜಾನುವಾರುಗಳ ರಕ್ಷಣೆ

    ಕಸಾಯಿಖಾನೆಗೆ ಸಾಗಿಸುತ್ತಿದ್ದ 60 ಜಾನುವಾರುಗಳ ರಕ್ಷಣೆ

    ಹಾಸನ: ಕಸಾಯಿಖಾನೆಗೆ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ ನಡೆದಿದೆ.

    ಜಾನುವಾರುಗಳನ್ನು ಹಾಸನದಲ್ಲಿ ಖರೀದಿ ಮಾಡಿ ಅವುಗಳನ್ನು ಬೆಂಗಳೂರಿನ ಕಡೆಗೆ ಕರುಗಳ ಕಾಲು ಕಟ್ಟಿ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಾರಿ ಮಧ್ಯೆ ಪೊಲೀಸರನ್ನು ಕಂಡ ವಾಹನ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

    ಈ ಘಟನೆಯಲ್ಲಿ 60 ಕ್ಕೂ ಹೆಚ್ಚು ಕರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರ ಜೊತೆಗೆ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಉಡುಪಿ: ಜೀವ ಪಣಕ್ಕಿಟ್ಟ ಯುವಕರು ನದಿಯಲ್ಲಿ ಮುಳುಗುತ್ತಿದ್ದ ಹಸು ರಕ್ಷಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮುಂಗಾರು ಕೊಂಚ ಚುರುಕಾಗಿರುವುದರಿಂದ ಕುಂದಾಪುರದ ಪಂಚ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕಳೆದೆರಡು ದಿನದಿಂದ ನದಿಯ ರಭಸ ಜಾಸ್ತಿಯಾಗಿದೆ. ನದಿ ನೀರಿನ ಸೆಳೆತಕ್ಕೆ ಹಸುವೊಂದು ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

    ಗಂಗೊಳ್ಳಿಯ ಕೆಲ ಯುವಕರಿಗೆ ಇದು ಗೊತ್ತಾಗಿದೆ. ಕೂಡಲೇ ನಾಲ್ಕಾರು ಯುವಕರು ದೋಣಿ ಹತ್ತಿ ನದಿಗಿಳಿದಿದ್ದಾರೆ. ಈಜುತ್ತಾ ಮುಳುಗುತ್ತಿದ್ದ ಹಸುವಿನ ಚೂಪು ಕೊಂಬಿಗೆ ಹಗ್ಗ ಹಾಕಿದ್ದಾರೆ. ಸಮುದ್ರದ ಕಡೆ ಸಾಗಿ ಹೋಗುತ್ತಿದ್ದ ಹಸುವನ್ನು ದಡಕ್ಕೆ ಮುಟ್ಟಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಉದ್ದ ಹಗ್ಗದ ತುದಿ ದಡದಲ್ಲಿರುವವರಿಗೆ ಸಿಕ್ಕ ಕೂಡಲೇ ಹಸುವನ್ನು ದಡಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗಂಗೊಳ್ಳಿಯ ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು, ಅಣ್ಣಪ್ಪ ಹಾಗೂ ಗೆಳೆಯರು ಜೀವ ಪಣಕ್ಕಿಟ್ಟು ಕೊನೆಗೂ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಳುಗುವವನಿಗೆ ಹುಲುಕಡ್ಡಿ ಸಿಕ್ಕರೂ ಒಮ್ಮೆ ಬಚಾವ್ ಆಗುತ್ತದೆಯಂತೆ. ಅದರಂತೆ ಈಗ ಯುವಕರು ಸಾಹಸದಿಂದ ಹಸು ತನ್ನ ಪ್ರಾಣವನ್ನು ಉಳಿಸಿಕೊಂಡಿದೆ.

    ನಾವು ಸಮುದ್ರ ತೀರದವರು, ಸಮುದ್ರ ಮತ್ತು ನದಿಯಲ್ಲಿ ಈಜಿ ದಡ ಸೇರುವ ಚಾಕಚಕ್ಯತೆ ಇದೆ. ದನವೂ ಈಜುತ್ತದೆ. ಆದರೆ ನೀರಿನ ರಭಸ ಜಾಸ್ತಿಯಾಗಿರುವುದರಿಂದ ಸಮುದ್ರದ ಕಡೆ ಹೋಗುತಿತ್ತು. ಹಗ್ಗ ಹಾಕಿ ನೀರಿನ ವಿರುದ್ಧ ದಿಕ್ಕಿಗೆ ಎಳೆದು ಹಾಕಿದ್ದೇವೆ ಎಂದು ಅಣ್ಣಪ್ಪ ಹೇಳಿದ್ದಾರೆ.

  • ಟೂತ್‍ಬ್ರಶ್ ಬಳಸುವ ಮುನ್ನ ಕೀಟಾಣುಗಳಿಂದ ರಕ್ಷಿಸಿ

    ಟೂತ್‍ಬ್ರಶ್ ಬಳಸುವ ಮುನ್ನ ಕೀಟಾಣುಗಳಿಂದ ರಕ್ಷಿಸಿ

    ಪ್ರತಿನಿತ್ಯ ಎದ್ದ ಕೂಡಲೇ ನಾವು ಮೊದಲು ಮಾಡುವ ಕೆಲಸವೇ ಹಲ್ಲುಜ್ಜುವುದು. ಹೆಚ್ಚಿನವರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಹಲ್ಲುಜ್ಜಿದ ನಂತರ ಯಾವುದೋ ಬ್ರಶ್ ಸ್ಟ್ಯಾಂಡ್‍ನಲ್ಲಿ ಇಟ್ಟು ಮರುದಿನ ಬೆಳಗ್ಗೆ ಅದನ್ನು ಉಪಯೋಗಿಸುವವರೆಗೂ ಅದರ ಬಗ್ಗೆ ಗಮನಕೊಡುವುದಿಲ್ಲ. ಬ್ರಶ್ ರಕ್ಷಣೆ ಮಾಡಬೇಕು ಅಂದರೆ ಅಯ್ಯೋ ನಮ್ಮ ಬ್ರಶನ್ನು ಬೇರೆ ಯಾರು ಉಪಯೋಗಿಸುತ್ತಾರೆ ಬಿಡಿ ಎಂಬ ಮಾತುಗಳು ಸರ್ವೇಸಾಮಾನ್ಯ. ನಾವು ಹಲ್ಲುಜ್ಜಿ ಇಟ್ಟಂತಹ ಬ್ರಶ್‍ಗಳನ್ನು ನಮಗೆ ತಿಳಿಯದೇ ದಿನನಿತ್ಯ ಬೇರೆ ಯಾರೋ ಬಳಕೆ ಮಾಡುತ್ತಿರುತ್ತಾರೆ ಎಂದರೆ ನಮಗೆ ಆಶ್ಚರ್ಯ ಸಹಜ.

    ಹೌದು, ರಾತ್ರಿಯಾದರೆ ಲಗ್ಗೆಯಿಡುವ ಕ್ರಿಮಿಕೀಟಗಳು ನಮ್ಮ ಟೂತ್‍ಬ್ರಶನ್ನು ದಾಳಿ ಮಾಡುತ್ತವೆ. ಬಳಸಿ ಇಡುವಂತಹ ಟೂತ್ ಬ್ರಶ್‍ಗಳಲ್ಲಿ ಸೂಕ್ಷ್ಮ ಕ್ರಿಮಿಗಳು, ವೈರಸ್‍ಗಳು ಹಾಗೂ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಸೋಂಕನ್ನು ಉಂಟುಮಾಡುತ್ತವೆ. ನಿತ್ಯಬಳಕೆಯ ಟೂತ್‍ಬ್ರಶ್‍ಗಳಲ್ಲಿ ಅನೇಕ ಕ್ರಿಮಿಕೀಟಗಳು ಶೇಖರಣೆಯಾಗುತ್ತವೆ. ಇವು ಅಪಾಯಕಾರಿ. ಹಲ್ಲುಜ್ಜುವ ಮುನ್ನ ಹಾಗೂ ಹಲ್ಲುಜ್ಜಿದ ನಂತರ ಅವುಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿದರೆ ಒಳ್ಳೆಯದು.


    ಹಲ್ಲುಜ್ಜುವ ಬ್ರಶ್‍ಗಳನ್ನು ಬಳಸುವುದು ಎಷ್ಟು ಮುಖ್ಯವೋ ಅದನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಬಳಸಿದ ಬ್ರಶ್ ಅನ್ನು ಹಲವರು ವಾಶ್‍ಬೇಸನ್‍ನ ಮೇಲೆ ಇಡುತ್ತಾರೆ ಅಥವಾ ಮೆಡಿಕಲ್ ಕಪಾಟಿನೊಳಗೆ ಇಡುತ್ತಾರೆ. ಹೀಗೆ ಮಾಡುವುದರಿಂದ ನೀವು ಬ್ರಶ್‍ಗಳನ್ನಷ್ಟೇ ಕಾಪಾಡಬಹುದು. ಆದರೆ ಕ್ರಿಮಿಕೀಟಾಣುಗಳಿಂದ ಹೇಗೆ ರಕ್ಷಿಸುತ್ತೀರಿ?

    ನಮಗೆಲ್ಲ ತಿಳಿದಿರುವಂತೆ ಶೌಚಾಲಯದಲ್ಲಿ ಕಾಯಿಲೆ ಉಂಟು ಮಾಡುವಂತಹ ಅನೇಕ ಸೂಕ್ಷ್ಮಾಣು ಜೀವಿಗಳು ಸಂಗ್ರಹವಾಗಿರುತ್ತವೆ. ಅಲ್ಲೇ ನಾವು ಟೂತ್‍ಬ್ರಶ್ ಇಟ್ಟರೆ ಲಕ್ಷಾಂತರ ಸೂಕ್ಷ್ಮಜೀವಿಗಳು ನಮ್ಮ ಬ್ರಶ್‍ಗಳ ಮೇಲೂ ಕೂರುತ್ತವೆ. ಮರುದಿನ ನಮಗೆ ತಿಳಿಯದಂತೆ ಆ ಸೂಕ್ಷ್ಮಾಣುಗಳು ನಮ್ಮ ಬಾಯಿಯೊಳಗೆ ನೇರವಾಗಿ ಹೋಗುತ್ತವೆ.

    ಸೂಕ್ತ ಸ್ಥಳ ಯಾವುದು?
    ಸಾಮಾನ್ಯವಾಗಿ ನಾವು ವಾಸಿಸುವ ಎಲ್ಲಾ ಸ್ಥಳಗಳಲ್ಲೂ ಸುಕ್ಷ್ಮಾಣುಗಳು ವಾಸಿಸುತ್ತಲೆ ಇರುತ್ತವೆ. ಆದರೆ ನಿಮ್ಮ ಟೂತ್ ಬ್ರಶ್‍ಗಳನ್ನು ಇಡಲು ಸ್ನಾನದ ಕೋಣೆ ಸೂಕ್ತವಲ್ಲ. ಒಂದು ವೇಳೆ ಸ್ನಾನದ ಕೋಣೆಯಲ್ಲಿಟ್ಟರೆ ನಾವೇ ಟಾಯ್ಲೆಟ್ ಪ್ಲೂಮ್ ನಂತಹ ಸೂಕ್ಷ್ಮಾಣುಗಳಿಗೆ ಆಹ್ವಾನ ಕೊಟ್ಟಂತೆ. ನಮ್ಮೊಳಗೆ ಸೂಕ್ಷ್ಮಾಣುಗಳು ಎಷ್ಟು ಸೇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಶೌಚಾಲಯದ ಬಳಿಯೇ ನಿಮ್ಮ ಟೂತ್‍ಬ್ರಶ್‍ಗಳಿದ್ದರೆ ಖಂಡಿತಾ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತವೆ.

    1. ಯಾವಾಗಲು ಬ್ರಶ್‍ಗಳನ್ನು ಬಳಕೆಯ ಮೊದಲು ಒಣಗುವಂತಹ ಜಾಗದಲ್ಲಿ ಇಡಬೇಕು.
    2. ಮಲಗುವ ಕೋಣೆಯಲ್ಲಿ ಸ್ಟ್ಯಾಂಡ್ ಅಳವಡಿಸಿ ಶೇಖರಿಸಬಹುದು.
    3. ಸದಾ ಗಾಳಿ ಬೆಳಕು ಬರುವ ತೆರೆದ ಜಾಗದಲ್ಲಿ ಇಡಬಹುದು.
    4. ಯಾವಾಗಲೂ ಮನೆ ಮಂದಿಯೆಲ್ಲರ ಬ್ರಶ್‍ಗಳನ್ನು ಒಟ್ಟಿಗೆ ಇಡುತ್ತೇವೆ ಇದು ತಪ್ಪು. ನಿಮ್ಮ ಬ್ರಶ್ ಗಳನ್ನು ಬೇರೆ ಬ್ರಶ್‍ಗಳಿಂದ ದೂರವಿಡಿ.
    5. ಶೌಚಾಲಯ ಅಥವಾ ಸಿಂಕ್ ಬಳಿ ಇಡುವುದನ್ನು ನಿಯಂತ್ರಿಸಿ.
    6. ಶೌಚಾಲಯ ಶುಚಿಗೊಳಿಸುವ ಆ್ಯಸಿಡ್, ಫಿನಾಯಿಲ್ ಗಳಿಂದ ದೂರವಿಡಿ.

    ಟೂತ್‍ಬ್ರಶ್‍ಗಳ ರಕ್ಷಣೆ:
    1. ಬ್ರಶ್‍ಗಳನ್ನು ಬಳಸಬೇಕಾದರೆ ಒಂದು ಕಪ್ ನೀರಿಗೆ ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಹಾಕಿಕೊಂಡು ಅದರಲ್ಲಿ 30 ಸೆಕೆಂಡುಗಳ ಕಾಲ ಮುಳುಗಿಸಿಡಿ. ನಂತರ ಬ್ರಶ್ ಅನ್ನು ಬಿಸಿ ನೀರಿನಿಂದ ತೊಳೆಯಿರಿ.
    2. ಹೈಡ್ರೋಜನ್ ಪರಾಕ್ಸೈಡ್ ಇಲ್ಲವಾದರೆ ಮೌತ್‍ವಾಶ್‍ಗಳನ್ನು ಬಳಸಬಹುದು.
    3. ಬ್ರಶನ್ನು ಸ್ವಚ್ಛಗೊಳಿಸಲು ಸ್ವಲ್ಪ ವಿನೇಗರ್ ಬಳಸಬಹುದು.
    4. ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್‍ಬ್ರಶ್ ಬದಲಿಸುವುದು ಒಳ್ಳೆಯದು.
    5. ಬ್ರಶ್ ಮುಂಭಾಗವನ್ನು ರಕ್ಷಿಸುವಂತಹ ಕ್ಯಾಪ್‍ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಎಲ್ಲಾ ವಿಧಾನಗಳಿಂದ ಟೂತ್ ಬ್ರಶ್ ಗಳನ್ನು ರಕ್ಷಿಸಬಹುದು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಪರೂಪದ ಬಿಳಿ ಬಣ್ಣದ ನಾಗರಹಾವು

    ಅಪರೂಪದ ಬಿಳಿ ಬಣ್ಣದ ನಾಗರಹಾವು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಬಿಳಿ ಬಣ್ಣದ ನಾಗರಹಾವು ಪ್ರತ್ಯಕ್ಷವಾಗಿದೆ.

    ನ್ಯಾಯಂಗ ಬಡಾವಣೆಯ ಬಳಿ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿದೆ. ಬಿಳಿ ಬಣ್ಣದ ನಾಗರಹಾವು ಕಾಣಸಿಗುವುದು ತೀರಾ ಅಪರೂಪವಾಗಿದೆ. ಆದರೆ ಬಡಾವಣೆಯ ಖಾಲಿ ಸೈಟ್‍ವೊಂದರಲ್ಲಿ ಬಿಳಿ ನಾಗರಹಾವು ಕಾಣಿಸಿಕೊಂಡಿದೆ.

    ಬಿಳಿ ನಾಗರಹಾವನ್ನು ನೋಡಿದ ಜನರು ತಕ್ಷಣ ಉರಗ ತಜ್ಞ ಮೋಹನ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಮೋಹನ್ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ನಾಗರ ಹಾವು ಸಂಪೂರ್ಣ ಬಿಳಿ ಬಣ್ಣದಿಂದ ಕೂಡಿದ್ದು, ಅಪರೂಪದ ಹಾವನ್ನು ನೋಡಲು ಅನೇಕ ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.

    ಮೋಹನ್ ಅವರು ಹಾವನ್ನು ರಕ್ಷಣೆ ಮಾಡುವಾಗ ಅಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

  • ನವಿಲನ್ನ ಅರ್ಧ ನುಂಗಿ ಪರದಾಡ್ತಿದ್ದ ಹೆಬ್ಬಾವಿನ ರಕ್ಷಣೆ

    ನವಿಲನ್ನ ಅರ್ಧ ನುಂಗಿ ಪರದಾಡ್ತಿದ್ದ ಹೆಬ್ಬಾವಿನ ರಕ್ಷಣೆ

    ಚಾಮರಾಜನಗರ: ನವಿಲನ್ನು ಅರ್ಧ ನುಂಗಿ ಪರದಾಡುತ್ತಿದ್ದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

    ಬೆಳಗ್ಗಿನ ಜಾವ ಹೆಬ್ಬಾವು ನವಿಲನ್ನು ಹಿಡಿದು ನುಂಗಲು ಮುಂದಾಗಿದೆ. ಆದರೆ ಹೆಬ್ಬಾವಿನ ಗಂಟಲಿನ ಭಾಗದಲ್ಲಿ ನವಿಲು ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಹೆಬ್ಬಾವು ನವಿಲನ್ನು ನುಂಗಲು ಸಾಧ್ಯವಾಗಿಲ್ಲ. ಹೀಗಾಗಿ ಹೆಬ್ಬಾವು ನವಿಲನ್ನು ನುಂಗಲು ಆಗದೆ ಉಗುಳಲೂ ಆಗದೇ ಪರದಾಡುತ್ತಿತ್ತು.

    ಇದನ್ನು ನೋಡಿದ ಸ್ಥಳೀಯರು ತಕ್ಷಣ ಚಾಮರಾಜನಗರದ ಉರಗ ತಜ್ಞ ಸ್ನೇಕ್ ಚಾಂಪ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಚಾಂಪ್, ಗ್ರಾಮಸ್ಥರ ಸಹಾಯದಿಂದ ಹೆಬ್ಬಾವಿನ ಬಾಯಲ್ಲಿ ಸಿಕ್ಕಿದ್ದ ನವಿಲನ್ನು ಹೊರ ತೆಗೆದಿದ್ದಾರೆ. ನಂತರ ಹೆಬ್ಬಾವನ್ನು ಅರಣ್ಯ ಭಾಗದ ಕೆರೆಯ ಬಳಿ ಬಿಟ್ಟಿದ್ದಾರೆ.