Tag: protection

  • ಮೊಸಳೆ ವಿರುದ್ಧ ಹೋರಾಡಿ ತನ್ನ 3 ವರ್ಷದ ಮಗುವನ್ನು ರಕ್ಷಿಸಿದ ತಾಯಿ

    ಮೊಸಳೆ ವಿರುದ್ಧ ಹೋರಾಡಿ ತನ್ನ 3 ವರ್ಷದ ಮಗುವನ್ನು ರಕ್ಷಿಸಿದ ತಾಯಿ

    – ಮೊಸಳೆ ಮೂಗಿಗೆ ಬೆರಳಿಟ್ಟು ಮಗುವಿನ ರಕ್ಷಣೆ

    ಹರಾರೆ: ದೈತ್ಯ ಮೊಸಳೆ ವಿರುದ್ಧ ಹೋರಾಡಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಗಂಡು ಮಗುವನ್ನು ಕಾಪಾಡಿ ದಿಟ್ಟತನ ಮೆರದಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ.

    ತಾಯಿ ಎಂದರೆ ಹಾಗೇ ತನ್ನ ಮಕ್ಕಳಿಗಾಗಿ ಯಾವ ರೀತಿಯ ಅಪತ್ತು ಬಂದರೂ ಅದನ್ನು ಎದುರಿಸಿ ನಿಲ್ಲುತ್ತಾಳೆ. ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲು ತಾಯಿ ತನ್ನ ಮಕ್ಕಳನ್ನು ಬಿಟ್ಟಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮೊಸಳೆ ಬಾಯಿಗೆ ಸಿಕ್ಕಿದ್ದ ತನ್ನ ಮಗುವೊಂದನ್ನು ಮೊಸಳೆಯ ಬೆನ್ನ ಮೇಲೆ ಕುಳಿತು ಅದರ ಮೂಗಿನ ಒಳಗೆ ಬೆರಳುಗಳನ್ನು ಹಾಕಿ ತಾಯಿಯೊಬ್ಬರು ಕಾಪಾಡಿದ್ದಾರೆ.

    ಜಿಂಬಾಬ್ವೆಯ ಚಿರೆಡ್ಜಿ ಪಟ್ಟಣದ 30 ವರ್ಷದ ಮಹಿಳೆ ಮೌರಿನಾ ಮುಸಿಸಿನಿಯಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ರುಂಡೆ ನದಿಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮಕ್ಕಳನ್ನು ನದಿಯ ದಡದಲ್ಲಿ ಆಟವಾಡಲು ಬಿಟ್ಟ ಮೌರಿನಾ ನದಿಯಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ನದಿಯಲ್ಲಿ ಇದ್ದ ಮೊಸಳೆ ದಡದಲ್ಲಿ ಇದ್ದ ಮಕ್ಕಳ ಮೇಲೆ ದಾಳಿ ಮಾಡಿದೆ. ಮಕ್ಕಳು ಕಿರುಚಿದಾಗ ಈ ವಿಷಯ ತಾಯಿಗೆ ಗೊತ್ತಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಮೌರಿನಾ, ಮಕ್ಕಳು ಇದ್ದಕ್ಕಿಂತೆ ಕಿರುಚಿದಾಗ ನಾನು ಗಾಬರಿಗೊಂಡು ಅಲ್ಲಿಗೆ ಬಂದೆ. ಆಗಲೇ ಮೊಸಳೆ ತನ್ನ ಮೂರು ವರ್ಷದ ಮಗು ಗಿಡಿಯನ್ ಮೇಲೆ ದಾಳಿ ಮಾಡಿತ್ತು. ತಕ್ಷಣ ನಾನು ಅದರ ಬೆನ್ನ ಮೇಲೆ ಹತ್ತಿ ಕುಳಿತು ನನ್ನ ಕೈ ಬೆರಳುಗಳನ್ನು ಅದರ ಮೂಗಿಗೆ ಹಾಕಿದೆ. ನಂತರ ಇನ್ನೊಂದು ಕೈಯಲ್ಲಿ ನನ್ನ ಮಗುವನ್ನು ಬಿಡಿಸಿದೆ. ನಂತರ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.

    ನನಗೆ ನಾನು ಚಿಕ್ಕವಳಿದ್ದಾಗಲೇ ನಮ್ಮ ಹಿರಿಯರು ಮೊಸಳೆ ದಾಳಿ ಮಾಡಿದಾಗ ಏನು ಮಾಡಬೇಕು ಎಂದು ಹೇಳಿಕೊಟ್ಟಿದ್ದರು. ಅದರಂತೆ ನಾನು ಮಾಡಿದೆ. ಮೊಸಳೆ ಮೂಗಿನಲ್ಲಿ ಜೋರಾಗಿ ಉಸಿರಾಡುತ್ತೆ. ಅದು ದಾಳಿ ಮಾಡಿದಾಗ ಅದ ಮುಖದ ಮೇಲೆ ಕುಳಿತುಕೊಂಡು ತಕ್ಷಣ ಮೂಗಿಗೆ ಬೇರಳನ್ನು ಹಾಕಬೇಕು. ಬೆರಳನ್ನು ಹಾಕಿ ಮೂಗನ್ನು ಬ್ಲಾಕ್ ಮಾಡಿದರೆ ಅದು ಸುಸ್ತುಗುತ್ತದೆ. ಜೊತೆಗೆ ಬಾಲದಲ್ಲಿ ಹೊಡೆಯುವುದಿಲ್ಲ. ಈ ರೀತಿ ಮಾಡಿಯೇ ನಾನು ನನ್ನ ಮಗುವನ್ನು ಉಳಿಸಿಕೊಂಡೇ ಎಂದು ಮೌರಿನಾ ಹೇಳಿದ್ದಾರೆ.

    ಈ ಘಟನೆಯಲ್ಲಿ ಮಗುವಿಗೆ ಗಾಯವಾಗಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜಿಂಬಾಬ್ವೆಯ ರುಂಡೆ ನದಿಯಲ್ಲಿ ನೈಲ್ ಎಂಬ ಜಾತಿಯ ಮೊಸಳೆಗಳಿದ್ದು, ಈ ಮೊಸಳೆಗಳು ಸುಮಾರು 20 ಅಡಿಗಳಷ್ಟು ಉದ್ದ ಬೆಳೆಯುತ್ತವೆ.

  • ಕೊರೊನಾ – ವಿದೇಶಿಗಳಲ್ಲಿನ ಕನ್ನಡಿಗರ ರಕ್ಷಣೆಗೆ ಮನವಿ

    ಕೊರೊನಾ – ವಿದೇಶಿಗಳಲ್ಲಿನ ಕನ್ನಡಿಗರ ರಕ್ಷಣೆಗೆ ಮನವಿ

    ಬೆಂಗಳೂರು: ಇಟಲಿ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕೊರೊನಾ ವೈರಸ್ ಹಿನ್ನಲೆಯಲ್ಲಿ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆ ತರಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ.

    ಕೇಂದ್ರ ಸರ್ಕಾರವು ಈಗಾಗಲೇ ವಿವಿಧ ದೇಶಗಳಲ್ಲಿರುವ ಭಾರತೀಯರನ್ನು ಏರ್ ಲಿಫ್ಟ್ ಮಾಡುತ್ತಿರುವ ಬೆನ್ನಲ್ಲಿಯೇ ರಾಜ್ಯ ಸರ್ಕಾರವೂ ಕನ್ನಡಿಗರನ್ನು ವಾಪಸ್ ಕರೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

    ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಬುಧವಾರ ಮಾತನಾಡಿದ್ದಾರೆ. ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕೂಡ ಉಳಿದವರ ಜೊತೆ ವಾಪಸ್ ಕರೆ ತರಲಾಗುವುದು. ಭಾರತದಿಂದಲೇ ವಿವಿಧ ದೇಶಗಳಿಗೆ ತಜ್ಞ ವೈದ್ಯರನ್ನು ಕಳಿಸಿ ಅಲ್ಲಿಯೇ ಪ್ರತಿಯೊಬ್ಬರನ್ನು ತೀವ್ರವಾಗಿ ತಪಾಸಣೆಗೆ ಒಳಪಡಿಸಿ ವಾಪಸ್ ಕರೆತರಲಾಗುವುದು ಎಂದು ಕೇಂದ್ರವು ರಾಜ್ಯಕ್ಕೆ ಭರವಸೆ ನೀಡಿದೆ.

    ಕಚೇರಿ ಬಂದ್ ಇಲ್ಲ
    ಸರ್ಕಾರಿ ಸೇರಿದಂತೆ ಯಾವುದೇ ಕಚೇರಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ನೀಡಿಲ್ಲ ಎಂದು ಅಶ್ವತ್ಥನಾರಾಯಣ ಸ್ಪಷ್ಟ ಪಡಿಸಿದರು. ಚಿಕನ್ ತಿಂದರೆ ಕೊರೊನಾ ಬರುತ್ತದೆ ಎನ್ನುವುದು ಸುಳ್ಳ. ಈ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 2 ಗಂಟೆಯಿಂದ ನೀರಿನಲ್ಲಿ ಒದ್ದಾಡುತ್ತಿದ್ದ ನಾಯಿಯನ್ನು ಬಾವಿಗಿಳಿದು ರಕ್ಷಿಸಿದ ಮಹಿಳೆ

    2 ಗಂಟೆಯಿಂದ ನೀರಿನಲ್ಲಿ ಒದ್ದಾಡುತ್ತಿದ್ದ ನಾಯಿಯನ್ನು ಬಾವಿಗಿಳಿದು ರಕ್ಷಿಸಿದ ಮಹಿಳೆ

    ಮಂಗಳೂರು: ಬಾವಿಗೆ ಬಿದ್ದ ನಾಯಿಯನ್ನು ಮಹಿಳೆಯೊಬ್ಬರು ತಾವೇ ಬಾವಿಯಲ್ಲಿ ಇಳಿದು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಎಂ.ಜಿ ರಸ್ತೆ ಬಳಿಯಲ್ಲಿರುವ ಬಲ್ಲಾಳ್ ಬಾಗ್‍ನ ಬಿರುವೆರ್ ಕುಡ್ಲ ಮೈದಾನದ ಪಕ್ಕದ ಈ ಬಾವಿಗೆ ಒಂದು ಕಪ್ಪು ಬಣ್ಣದ ನಾಯಿ ಬಿದ್ದಿತ್ತು. ಆಹಾರ ಹುಡುಕುತ್ತ ಬಂದ ಬೀದಿ ನಾಯಿ ಈ ಬಾವಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿತ್ತು. ಸುಮಾರು ಎರಡು ಗಂಟೆಯಾದರೂ ಬಾವಿಯೊಳಗೆ ಬಿದ್ದಿದ್ದ ನಾಯಿಯನ್ನು ಯಾರು ರಕ್ಷಿಸಿರಲಿಲ್ಲ. ಬಾವಿಯಿಂದ ನಾಯಿ ಕೂಗುತ್ತಿದ್ದ ಸದ್ದನ್ನು ಕೇಳಿದ ಮಹಿಳೆಯೊಬ್ಬರು ಈ ಬಾವಿಯ ಒಳಗಡೆ ನೋಡಿದ್ದಾರೆ. ಬಳಿಕ ಅಲ್ಲೇ ಆಟವಾಡಲು ಬಂದ ಯುವಕರ ತಂಡಕ್ಕೆ ಈ ವಿಚಾರವನ್ನು ಹೇಳಿದ್ದಾರೆ. ಯುವಕರ ತಂಡ ಒಂದು ಹಗ್ಗದಲ್ಲಿ ಟಯರ್ ಕಟ್ಟಿ ಅದನ್ನು ಬಾವಿಯ ಒಳಗೆ ಹಾಕಿ ನಾಯಿಯನ್ನು ರಕ್ಷಣೆ ಮಾಡಲು ಮುಂದಾದರು.

    ಆದರೆ ಸುಸ್ತಾಗಿದ್ದ ನಾಯಿ ಈಜುತ್ತಲೇ ಬಾವಿಯ ಒಂದು ಬದಿಯಲ್ಲಿ ರಂಧ್ರವನ್ನು ಕೊರೆದು ಅಲ್ಲೇ ತನ್ನ ಜೀವವನ್ನು ರಕ್ಷಣೆ ಮಾಡಿಕೊಂಡಿತ್ತು. ಇನ್ನು ಯಾವ ಯುವಕರು ಕೂಡ ಬಾವಿಯ ಒಳಗೆ ಇಳಿದು ಆ ನಾಯಿಯನ್ನು ರಕ್ಷಣೆ ಮಾಡುವ ಧೈರ್ಯ ಮಾಡುವ ಕೆಲಸಕ್ಕೆ ಮುಂದಾಗಲಿಲ್ಲ. ಆಗ ಅವರಿಗೆ ನೆನಪಾಗಿದ್ದು, ಪ್ರಾಣಿಗಳ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ರಜಿನಿ. ಹೌದು ಬಾಂಬೆ ಮೂಲದವರಾದ ರಜಿನಿ ಮದುವೆಯಾದ ಬಳಿಕ ಮಂಗಳೂರಿನಲ್ಲೇ ನೆಲೆಸಿದ್ದಾರೆ. ಪ್ರಾಣಿ ಪ್ರೀತಿ ಹೊಂದಿರುವ ಇವರ ಬಗ್ಗೆ ತಿಳಿದ ಯುವಕರು ಅವರಿಗೆ ಕರೆ ಮಾಡಿದ ತಕ್ಷಣ ರಜಿನಿ ಸ್ಥಳಕ್ಕೆ ಬಂದಿದ್ದು, ನಾಯಿಯ ರಕ್ಷಣೆಗೆ ನಿಂತರು.

    ನಾಯಿಯ ಒದ್ದಾಟವನ್ನು ನೋಡಿದ ರಜಿನಿ ಹಿಂದೆ ಮುಂದೆ ನೋಡದೇ 15 ಅಡಿ ನೀರಿದ್ದ ಬಾವಿಗೆ ಇಳಿದಿದ್ದಾರೆ. ಹಗ್ಗ ಕಟ್ಟಿಕೊಂಡು ಇಳಿದ ರಜನಿ ನಾಯಿಯ ಬಳಿ ಹೋದರು. ಆಗ ನಾಯಿ ಗಾಬರಿಯಾಗಿ ಇವರಿಗೆ ಕಚ್ಚಲು ಮುಂದಾಗಿತ್ತು. ಆದರೂ ಕಷ್ಟಪಟ್ಟು ಹಗ್ಗವನ್ನು ಹಿಡಿದುಕೊಂಡೆ ನಾಯಿಯ ತಲೆಯನ್ನು ಸವರುತ್ತಾ ರಜಿನಿ ನಾಯಿನ್ನು ರಕ್ಷಣೆ ಮಾಡಿ ಮೇಲೆತ್ತಿಕೊಂಡು ಬಂದರು.

    ಪ್ರಾಣಿ ಪ್ರೀತಿಯಿಂದ ಸುತ್ತಾಮುತ್ತಲು ಹೆಸರುಗಳಿಸಿದ್ದ ರಜಿನಿ ಈಗ ಸಾಹಸ ಮೆರೆದು ಇಡೀ ಕರಾವಳಿಯಲ್ಲಿ ಮನೆ ಮಾತಾಗಿದ್ದಾರೆ. ಯಾಕಂದರೆ ಇವರು ಸಾಹಸ ಮಾಡಿ ನಾಯಿಯನ್ನು ರಕ್ಷಿಸಿರುವ ವಿಡಿಯೋ ಕರಾವಳಿಯಾದ್ಯಂತ ಫುಲ್ ವೈರಲ್ ಆಗಿದೆ. ಜೀವ ಉಳಿಸಿಕೊಂಡ ನಾಯಿ ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಕಾಲ್ಕಿತ್ತಿದೆ.

  • ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಅಯ್ಯಪ್ಪನ ಭಕ್ತರು

    ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಅಯ್ಯಪ್ಪನ ಭಕ್ತರು

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಫ್ಲೈಓವರ್ ಹತ್ತಿದ ವ್ಯಕ್ತಿಯೊಬ್ಬನನ್ನು ಅಯ್ಯಪ್ಪ ಸ್ವಾಮಿ ಭಕ್ತರು ರಕ್ಷಣೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನಗರದ ಹೊಸಕೆರೆಹಳ್ಳಿಯ ನೈಸ್ ರೋಡ್ ಬಳಿ ಈ ಘಟನೆ ನಡೆದಿದ್ದು, 45 ವರ್ಷದ ಅಪರಿಚಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಗಿರಿನಗರದ ಸುಮಾರು ಮೂವತ್ತುಕ್ಕೂ ಹೆಚ್ಚು ಜನರು ಇಂದು ಶಬರಿಮಲೆಗೆ ಹೊರಟಿದ್ದರು. ಹೊಸಕೆರೆಹಳ್ಳಿ ಮಾರ್ಗವಾಗಿ ನೈಸ್ ರೋಡ್‍ಗೆ ಎಂಟ್ರಿಯಾದ ವೇಳೆ ನೈಸ್ ರೋಡ್‍ನ ಫ್ಲೈಓವರ್ ಮೇಲೆ ವ್ಯಕ್ತಿವೊಬ್ಬ ರಸ್ತೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ.

    ತಕ್ಷಣ ವಾಹನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಅಯ್ಯಪ್ಪ ಸ್ವಾಮಿ ಭಕ್ತರು, ರಸ್ತೆಯ ಎರಡು ಕಡೆಯ ವಾಹನಗಳನ್ನು ನಿಲ್ಲಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಭಕ್ತರ ಕೈಗೆ ಸಿಗದೆ ಸುಮಾರು ಅರ್ಧ ಗಂಟೆಗಳ ಕಾಲ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ಕಡೆಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಆ ವ್ಯಕ್ತಿಯನ್ನು ಸುತ್ತುವರೆದು ಕೊನೆಗೆ ಆತನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

    ಇಷ್ಟೇಲ್ಲಾ ನಡೆಯೋ ಹೊತ್ತಿಗೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಆತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ. ಆ ವ್ಯಕ್ತಿ ಯಾರು? ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

  • ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ 6 ಉಡುಪಿ ಮೀನುಗಾರರ ರಕ್ಷಣೆ

    ಉಡುಪಿ: ಜೀವನದ ಬಂಡಿ ದೂಡಲು ಆ ಆರು ಮಂದಿ ಭೂಮಿಬಿಟ್ಟು ಕಡಲಿಗೆ ಇಳಿದಿದ್ದರು. ಕಡಲು ಮುನಿದಿತ್ತು. ಬೋಟನ್ನು ಬುಡಮೇಲು ಮಾಡಿದ ಸುಂಟರಗಾಳಿ ಆರು ಜನರನ್ನು ಸಮುದ್ರಕ್ಕೆ ಎಸೆದಿತ್ತು.

    ಉಡುಪಿ ಜಿಲ್ಲೆಯ ಕುಂದಾಪುರದ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ 30 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ನೋಂದಾಯಿತ ಮೀನುಗಾರಿಕಾ ಬೋಟ್‍ವೊಂದು ಭಾಗಶಃ ಮುಳುಗಿತ್ತು. ಸುತ್ತಮುತ್ತ ಒಂದೂ ಬೋಟ್ ಇರಲಿಲ್ಲ. ಕೊನೆಯ ಹಂತದಲ್ಲಿ ಜಿಪಿಎಸ್ ಮೂಲಕ ಮಾಹಿತಿ ರವಾನಿಸಲಾಯ್ತು. ಐದು ನಾಟಿಕಲ್ ಮೈಲ್ ದೂರದಲ್ಲಿದ್ದ ಮೀನುಗಾರಿಕಾ ಬೋಟ್ ಅಲ್ಲಿಗೆ ಬಂದು ಆ ಬೋಟ್ ನ ಸಹಾಯದಿಂದ ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

    ಮಲ್ಪೆಯ ಮೀನುಗಾರರಾದ ಬೋಟಿನ ಚಾಲಕ ವೆಂಕಟೇಶ ಹರಿಕಾಂತ, ನಂದೀಶ್ ಖಾರ್ವಿ, ಸಂತೋಷ, ಹುಲಿಯಪ್ಪ, ದುರ್ಗಪ್ಪ ಹರಿಕಾಂತ ಹಾಗೂ ಅಣ್ಣಪ್ಪ ಹರಿಕಾಂತ ಅವರು ಪ್ರಾಣಾಪಾಯದಿಂದ ಪಾರಾದವರು. ಮಲ್ಪೆಯ ನೋಂದಣಿ ಹೊಂದಿದ ಬೋಟ್ ಇದಾಗಿದ್ದು, ಕೋಡಿ ಕನ್ಯಾನದ ಜಯಲಕ್ಷ್ಮಿ ಅವರ ಹೆಸರಲ್ಲಿದೆ. ಜ.12 ರಂದು ರಾತ್ರಿ 10.30 ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಬೋಟ್ ತೆರಳಿದೆ. ಜ.14 ರಂದು ಗಂಗೊಳ್ಳಿಯಿಂದ ಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಬೋಟಿನ ಹಿಂದಿನ ಹಲಗೆ ತುಂಡಾಗಿ, ಬೋಟಿನೊಳಗೆ ನೀರು ಹೋಗಿದೆ.

    ಚಾಲಕ ವೆಂಕಟೇಶ್ ತಕ್ಷಣ ವೈಯರ್ ಲೆಸ್ ಫೋನ್ ಮೂಲಕ ಹತ್ತಿರದ ಬೋಟಿಗೆ ಸೂಚನೆ ಕೊಟ್ಟಿದ್ದು, ಕೂಡಲೇ ಅಲ್ಲೇ ಸಮೀಪದಲ್ಲಿದ್ದ ಸಾಯಿರಾಮ್ ಎನ್ನುವ ಬೋಟಿನವರು ಇದರಲ್ಲಿದ್ದ ಎಲ್ಲ 6 ಮಂದಿ ಮೀನುಗಾರರನ್ನು ಪಾರು ಮಾಡಿದ್ದಾರೆ. ಈ ಸಂಬಂಧ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್‍ಐ ಸಂದೀಪ್ ಜಿ.ಎಸ್., ಎಎಸ್‍ಐ ಭಾಸ್ಕರ, ಸಿಬ್ಬಂದಿಯಾದ ಸುರೇಂದ್ರ, ಮತ್ತಿತರರು ಮಾಹಿತಿ ಪಡೆದುಕೊಂಡಿದ್ದಾರೆ. ಬೋಟ್ ಮುಳುಗಿದ್ದರಿಂದ 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಬೋಟ್ ಭಾಗಶಃ ಮುಳುಗಡೆಯಾಗಿದ್ದು, ಇದನ್ನು ಮೇಲೆತ್ತುವ ಸಂಬಂಧ ಮೀನುಗಾರರು 2 ಬೋಟಿನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಟ್ ಮೇಲೆತ್ತುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

  • ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಳಿವಿನ ಅಂಚಿನಲ್ಲಿರುವ ಚಿಪ್ಪುಹಂದಿ ಕಾಣಿಸಿಕೊಂಡಿದೆ.

    ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ಜಮೀನಿನಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ. ಹಂಗಳಪುರ ಗ್ರಾಮದ ಜಮೀನೊಂದರ ಟೊಮೆಟೊ ಬೆಳೆಗೆ ಹಾಕಲಾಗಿದ್ದ ಬಲೆಗೆ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು.

    ಈ ವೇಳೆ ಅರಣ್ಯ ಇಲಾಖೆ ಮಾಹಿತಿ ಪಡೆದು ಸ್ಥಳಕ್ಕೆ ಬಂದು ಚಿಪ್ಪುಹಂದಿಯನ್ನು ರಕ್ಷಿಸಿ ಓಂಕಾರ್ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ. ಪ್ರಾಣಿಗಳನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಸೇರಿದಂತೆ ಇನ್ನಿತರ ಸಮೀಕ್ಷೆ ನಡೆಸಿದಾಗಲೂ ಚಿಪ್ಪುಹಂದಿ ಇರುವುದು ಪತ್ತೆಯಾಗಿರಲಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

    ಬಲೆಗೆ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು. ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ. ಹುಳ-ಹುಪ್ಪಟೆ, ಕೀಟಗಳನ್ನು ತಿಂದು ಬದುಕುವ ಈ ನಿಶಾಚಾರಿ ಪ್ರಾಣಿ ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯಾಧಿಕಾರಿ ಹೇಳಿದರು.

  • ಪೋಷಕರ ವಿರೋಧದ ನಡುವೆಯೇ ಮದ್ವೆಯಾದ ಪ್ರೇಮಿಗಳು- ರಕ್ಷಣೆಗೆ ಮೊರೆ

    ಪೋಷಕರ ವಿರೋಧದ ನಡುವೆಯೇ ಮದ್ವೆಯಾದ ಪ್ರೇಮಿಗಳು- ರಕ್ಷಣೆಗೆ ಮೊರೆ

    ಕೋಲಾರ: ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆಗಾಗಿ ಪೊಲೀಸರ ಮೋರೆ ಹೋಗಿದೆ. ಸಾಮಾಜಿಕ ಜಾಲತಾಣದ ಮೂಲಕ ರಕ್ಷಣೆ ಕೋರಿದ್ದಾರೆ.

    ಕೋಲಾರ ತಾಲೂಕು ನುಕ್ಕನಹಳ್ಳಿ ಗ್ರಾಮದ ಅಶ್ವಿನಿ ಹಾಗೂ ಶಿಳ್ಳಂಗೆರೆ ಗ್ರಾಮದ ಶ್ರೀನಿವಾಸ್ ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿರುವ ಪ್ರೇಮಿಗಳು ನೋಂದಣಿ ಕಚೇರಿಯಲ್ಲಿ ರಿಜಿಸ್ಟಾರ್ ಮದುವೆಯಾಗಿ, ರಕ್ಷಣೆ ನೀಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.

    ಪೋಷಕರು ಅಂತರ್ಜಾತಿ ವಿವಾಹಕ್ಕೆ ಒಪ್ಪದಿದ್ದರೂ ಅವರ ವಿರೋಧದ ನಡುವೆ ಅಶ್ವಿನಿ ಹಾಗೂ ಶ್ರೀನಿವಾಸ್ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗಿಯ ಮನೆಯವರಿಂದ ಇಬ್ಬರಿಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ತಲೆ ಮರೆಸಿಕೊಂಡಿರುವ ಪ್ರೇಮಿಗಳು ಆರೋಪಿಸಿದ್ದಾರೆ. ಹಾಗೆಯೇ ರಕ್ಷಣೆ ನೀಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಪ್ರೇಮಿಗಳ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ರಕ್ಷಣೆಗೆ ನಿಲ್ಲಬೇಕಾದ ಕೆಲ ಸಂಘಟನೆಗಳ ಮುಖಂಡರಿಂದಲೇ ಪ್ರೇಮಿಗಳಿಗೆ ಜೀವ ಬೆದರಿಕೆ ಇದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿದೆ.

  • ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ಹೈದರಾಬಾದ್: ಸೈಬರಾಬಾದ್ ಎನ್‍ಕೌಂಟರ್ ಮೂಲಕ ಹೈದರಾಬಾದ್ ಪೊಲೀಸರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೇ ರೀತಿ ಇದೀಗ ಎಎಸ್‍ಐ ಮಹಿಳೆಯ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೆ.ಮಾಣಿಕ್ಯಲ ರಾವ್ ಅವರು ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಯುವತಿ ಹಾರಿದ ಸೇತುವೆಯಿಂದಲೇ ಜಿಗಿದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲಿಂದ ಜಿಗಿದಿದ್ದಳು. ಆಗ 58 ವರ್ಷದ ಎಎಸ್‍ಐ ನದಿಗೆ ಹಾರಿ ಮಹಿಳೆಯನ್ನು ಕಾಪಾಡಿದ್ದಾರೆ.

    ಕೆ.ಮಾಣಿಕ್ಯಲ ರಾವ್ ಅವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅವನಿಗಡ್ಡ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನೋ ಆಕ್ಸಿಡೆಂಟ್ ಡೇ’ ನಿಮಿತ್ತ ಮಾಣಿಕ್ಯಲ ಅವರು ಸೇತುವೆ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಮಹಿಳೆ ಸೇತುವೆ ಮೇಲೆ ನಿಂತಿದ್ದಳು. ಸ್ಥಳೀಯರು ಮಹಿಳೆ ಸೇತುವೆ ಮೇಲೆ ನಿಂತಿರುವುದನ್ನು ಕಂಡು ನದಿಗೆ ಜಿಗಿಯುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ಯಲ ಹಾಗೂ ಇವರ ಸಹೋದ್ಯೋಗಿ ಗೋಪಿರಾಜು ಸಹ ಅನುಮಾನ ಪಟ್ಟಿದ್ದರು. ಹೀಗಾಗಿ ಸೇತುವೆ ಬಳಿಯೇ ನಿಂತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವ ಹೊತ್ತಿಗೆ ಮಹಿಳೆ ಆಗಲೇ ಸೇತುವೆ ಮೇಲಿಂದ ಜಿಗಿದೇ ಬಿಟ್ಟಿದ್ದಳು.

    ಇದನ್ನು ಮಾಣಿಕ್ಯಲ ಅವರು ಗಮನಿಸಿ, ತಕ್ಷಣ ನದಿಗೆ ಹಾರಿದ್ದಾರೆ. ಸುಮಾರು 500 ಮೀಟರ್ ಈಜಿ ನಂತರ ಮಹಿಳೆಯನ್ನು ರಕ್ಷಿಸಿದ್ದಾರೆ. ಆಗ ಗೋಪಿರಾಜು ಅವರು ಮೀನುಗಾರರ ಬಳಿ ತೆರಳಿದ್ದು, ಮೀನುಗಾರರು ಘಟನಾ ಸ್ಥಳಕ್ಕೆ ದೋಣಿಯನ್ನು ತಂದಿದ್ದಾರೆ.

    ಕೊನೆಗೂ ಮಾಣಿಕ್ಯಲ ಅವರು ಮಹಿಳೆಯನ್ನು ರಕ್ಷಿಸಿದ್ದು, ನಂತರ ಅವರನ್ನು ಅವನಿಗಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಸಹಜವಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಎಸ್‍ಪಿ ರವೀಂದ್ರನಾಥ ಬಾಬು ಮಾಣಿಕ್ಯಲ ಅವರ ಸಾಹಸವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ ಮಹಿಳೆ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ತಿರುವನಂತಪುರಂ: ಕೆಲಸ ಮಾಡುತ್ತಿದ್ದ ಕಾರ್ಮಿಕನ ಕುತ್ತಿಗೆಗೆ 10 ಅಡಿ ಹೆಬ್ಬಾವು ಸುತ್ತಿಕೊಂಡ ಘಟನೆ ತಿರುವನಂತಪುರಂನ ಕಾಲೇಜು ಆವರಣದಲ್ಲಿ ನಡೆದಿದೆ.

    ಕಾಲೇಜು ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ತೆರವುಗೊಳಿಸುತ್ತಿದ್ದ 58 ವರ್ಷದ ಭುವಚಂದ್ರನ್ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಹೆಬ್ಬಾವು ಗಟ್ಟಿಯಾಗಿ ಸುತ್ತಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಯರ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಕಾಲೇಜು ಆವರಣದಲ್ಲಿ ಪೊದೆ ತೆರವುಗೊಳಿಸುತ್ತಿದ್ದ ನಾಯರ್ ಅವರಿಗೆ ಪೊದೆಯೊಳಗೆ ಉದ್ದವಾದ ಬಟ್ಟೆಯ ರೀತಿಯ ವಸ್ತು ಕಂಡು ಬಂದಿದೆ. ನಂತರ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ಹೆಬ್ಬಾವು ಎಂದು ಗೊತ್ತಾಗಿದೆ. ನಂತರ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರನ್ನು ಕರೆದು ಹಾವನ್ನು ಹಿಡಿದು ಚೀಲಗೆ ತುಂಬುವ ಸಮಯದಲ್ಲಿ ಕೈಯಿಂದ ಹೆಬ್ಬಾವು ತಪ್ಪಿಸಿಕೊಂಡಿದೆ. ಅದನ್ನು ಮತ್ತೆ ಹಿಡಿಯಲು ಹೋದ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ.

    https://www.youtube.com/watch?v=_UM_PMB6iVI#action=share

    ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಬೇರೆ ಕಾರ್ಮಿಕರು ಭಯಗೊಂಡು ನಾಯರ್ ಅವರ ರಕ್ಷಣೆ ಮಾಡದೇ ನಿಂತು ಬಿಟ್ಟಿದ್ದಾರೆ. ಆದರೆ ಅಲ್ಲಿದ್ದ ಕೆಲ ಸ್ಥಳೀಯರು ನಾಯರ್ ಅವರು ಉಸಿರುಗಟ್ಟಿರುವುದನ್ನು ಕಂಡು ಹಾವನ್ನು ಕುತ್ತಿಗೆಯಿಂದ ಬಿಡಿಸಿ ಅದನ್ನು ಚೀಲಕ್ಕೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಅರಣ್ಯ ಅಧಿಕಾರಿಗಳು ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡ ಕಾರಣ ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡಿದ್ದ ಭುವಚಂದ್ರನ್ ನಾಯರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರ ಈಗ ಚೇತರಿಸಿಕೊಳ್ಳುತ್ತಿದ್ದಾರೆ.