Tag: protection

  • ಮೃಗಾಲಯದಲ್ಲಿ ಪಕ್ಷಿಗಳನ್ನು ತಿನ್ನುತ್ತಿದ್ದ ಹಾವಿನ ಸ್ಥಳಾಂತರ

    ಮೃಗಾಲಯದಲ್ಲಿ ಪಕ್ಷಿಗಳನ್ನು ತಿನ್ನುತ್ತಿದ್ದ ಹಾವಿನ ಸ್ಥಳಾಂತರ

    ಚಿತ್ರದುರ್ಗ: ಜಿಲ್ಲೆಯಲ್ಲಿರುವ ಕಿರು ಮೃಗಾಲಯದಲ್ಲಿ ಪಕ್ಷಿಗಳ ಮೊಟ್ಟೆ ಹಾಗು ಪಾರಿವಾಳ ನುಂಗುತಿದ್ದ ನಾಗರಹಾವನ್ನು ಉರಗತಜ್ಞರ ಸಹಾಯದಿಂದ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.

    ಉರಗತಜ್ಞ ಚೇತನ್ ಅವರ ಸಹಾಯದಿಂದ ನಾಗರವನ್ನು ಸೆರೆ ಹಿಡಿದಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಆವರಣದಿಂದ ಸ್ಥಳಾಂತರಿಸಿ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

    ಮೃಗಾಲಯದ ಆವರಣದಲ್ಲಿ ಈ ಹಾವು ಹಲವು ದಿನಗಳಿಂದ ನಿರ್ಭಯವಾಗಿ ಓಡಾಡುತ್ತಾ, ಪಕ್ಷಿ ಹಾಗೂ ಅವುಗಳ ಮೊಟ್ಟೆಯನ್ನು ನುಂಗಿತ್ತಿತ್ತು. ಇದರಿಂದ ಮೃಗಾಲಯದಲ್ಲಿರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಅಲ್ಲದೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸಿಬ್ಬಂದಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು.

    ಇದೀಗ ನಾಗರಹಾವುವನ್ನು ಸುರಕ್ಷಿತವಾಗಿ ಸೆರೆ ಹಿಡಿದಿರುವುದರಿಂದ ಮೃಗಾಲಯಕ್ಕೆ ನಾಗರಹಾವಿನಿಂದ ಮುಕ್ತಿ ಸಿಕ್ಕಂತಾಗಿದೆ. ಸೆರೆ ಹಿಡಿದ ಹಾವನ್ನು ಜೋಗಿಮಟ್ಟಿ ಅರಣ್ಯಕ್ಕೆ ಬಿಡಲಾಗಿತು. ಹೀಗಾಗಿ ನಾಗರಹಾವಿನ ಭಯದಿಂದ ಪ್ರವಾಸಿಗರಲ್ಲಿ ಏರ್ಪಟ್ಟಿದ್ದ ಆತಂಕ ಕೂಡ ಶಮನವಾಗಿದೆ.

  • 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಕಾರವಾರ: ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಜಿಲ್ಲೆಯ ಅಮದಳ್ಳಿಯಲ್ಲಿ ಗ್ರಾಮದಲ್ಲಿ ಪತ್ತೆಯಾಗಿದೆ.

    ಗ್ರಾಮದ ಗಾಂವಕರವಾಡದ ಪ್ರಮೋದ ಗಾಂವಕರ ಮನೆಯ ಹಿತ್ತಲಿನಲ್ಲಿ ಈ ಹಾವು ಕಾಣಿಸಿಕೊಂಡಿದೆ. ಮನೆಯವರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮನೆಯವರು ಮಾತ್ರವಲ್ಲದೆ ಸ್ಥಳೀಯ ನಾಗರಿಕರನ್ನೂ ಕೂಡ ಈ ಹಾವು ಭಯಪಡುವಂತೆ ಮಾಡಿತ್ತು.

    ಸ್ಥಳೀಯರು ಉರಗಪ್ರೇಮಿ ಮಹೇಶ ನಾಯ್ಕ ಹಾಗೂ ನಾಗರಾಜ್ ಶೇಟ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಉರಗ ಪ್ರೇಮಿಗಳು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಕಾಳಿಂಗವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪವನ್ನು ಹಿಡಿದು ಬಯಲು ಪ್ರದೇಶದಲ್ಲಿ ಎಲ್ಲರಿಗೂ ಪ್ರದರ್ಶಿಸಿದ್ದಾರೆ. ಹೆಡೆಯನ್ನು ಎತ್ತಿ ಬುಸುಗುಡುತ್ತಾ ನಾಲಿಗೆಯನ್ನು ಹೊರ ತೆಗೆದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಮಕ್ಕಳು ಕೂಡ ಅದನ್ನು ಹಿಡಿದು ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ.

    ಸದ್ಯಕ್ಕೆ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  • ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಬಲೆಯಲ್ಲಿ ಸಿಲುಕಿದ್ದ ನಾಗರಹಾವೊಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಡುಹೊಳೆ ಗ್ರಾಮದಲ್ಲಿ ನಡೆದಿದೆ.

    ಕಾರ್ಕಳದ ಹೆಬ್ರಿ ಸಮೀಪದ ಕಾಡುಹೊಳೆಯ ನಿವಾಸಿ ಜಿನ್ನಪ್ಪ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಬಲೆಗೆ ಸಿಲುಕಿಕೊಂಡಿದ್ದು, ಆದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಗುರುರಾಜ್ ಸನಿಲ್ ಸ್ಥಳಕ್ಕೆ ಭೇಟಿ ನೀಡಿ ನಾಗರ ಹಾವನ್ನು ಬಹಳ ಶ್ರಮವಹಿಸಿ ಬಿಡಿಸಿದ್ದಾರೆ. ನಾಗರಹಾವು ದೈಹಿಕವಾಗಿ ಬಹಳ ಮೃದು ಆಗಿರುವುದರಿಂದ ಹಾವಿಗೆ ಘಾಸಿಯಾಗದಂತೆ ಒಂದೊಂದೇ ಬಲೆಯ ಕಣಗಳನ್ನು ಕತ್ತರಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರೂ ಕೂಡ ಹಾವನ್ನು ಬಿಡಿಸಲು ಸಹಾಯ ಮಾಡಿದ್ದಾರೆ.

    ನಾಗರಹಾವಿನ ಹೆಡೆಯ ಭಾಗವನ್ನು ಬಿಡಿಸುವ ಸಂದರ್ಭದಲ್ಲಿ ಬಹಳ ಪ್ರಾಯಾಸಪಡಬೇಕಾಗಿ ಬಂತು. ಸುಮಾರು ಒಂದು ಗಂಟೆಗಳ ಕಾಲ ಗುರುರಾಜ್ ಸನಿಲ್ ಶ್ರಮವಹಿಸಿ ಹಾವಿನ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಬೆಂಗಳೂರು: ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಟಿ.ದಾಸರಹಳ್ಳಿಯ ಬಾಗಲಗುಂಟೆ ಬಳಿ ಘಟನೆ ನಡೆದಿದೆ.

    ಕೆಂಡಕ್ಕೆ ಬಿದ್ದ ಮಹಿಳೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಗ್ರಾಮದೇವತೆ ಉತ್ಸವದ ವೇಳೆ ಅವಘಡ ಸಂಭವಿಸಿದೆ.

    ಗೌರಮ್ಮ ಅವರು ದೇವರಿಗೆ ಹರಕೆ ಮಾಡಿಕೊಂಡಿದ್ದು, ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿ ಸಾರ್ವಜನಿಕರು ಆಕೆಯನ್ನು ಮೇಲಕ್ಕೆಳೆದು ರಕ್ಷಿಸಿದ್ದಾರೆ. ಆದರೆ ಅದಾಗಲೇ ಗಂಭೀರ ಗಾಯಗೊಂಡಿರುವ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮ ದೇವತೆಯ ಜಾತ್ರೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇಂದು ಜಾತ್ರೆಯ ಕೊನೆ ಆಚರಣೆಯಾಗಿ ಕೆಂಡಾ ಹಾಯುವ ಸಾಂಪ್ರಾದಾಯಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಘಟನೆಯಿಂದ ದೇವಾಲಯದ ಆವರಣದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ.

    ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಆರ್ಚರು ಕೆಂಡ ಹಾಯುವಾಗ ಜಾರಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು.

     

     

  • ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

    ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

    ಪ್ಯಾರಿಸ್: ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಅದರ ಜೊತೆ ಸೆಲ್ಫೀ ತೆಗೆದುಕೊಂಡು ಫೇಸ್‍ಬುಕ್‍ನಲ್ಲಿ ಶೋ ಆಫ್ ಮಾಡಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಫ್ರಾನ್ಸ್‍ನಲ್ಲಿ ನಡೆದಿದೆ.

    24 ವಯಸ್ಸಿನ ವ್ಯಕ್ತಿಯೊಬ್ಬ ಸಿಂಹದ ಮರಿ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದ. ಇದನ್ನ ನೋಡಿದ್ದ ಪೊಲೀಸರು ಆತನನ್ನು ಟ್ರೇಸ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಆತ ಆ ಸಿಂಹದ ಮರಿಯನ್ನ ಬೇರೆಲ್ಲೋ ಬಿಟ್ಟು ಬಂದಿದ್ದ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಅನಾಥವಾಗಿ ಬಿಡಲಾಗಿದ್ದ ಸಿಂಹದ ಮರಿಯನ್ನ ರಕ್ಷಣೆ ಮಾಡಿದ್ದಾರೆ.

    ಬುಧವಾರ ಆತ ತಿಳಿಸಿದ್ದ ಖಾಲಿ ಅಪಾರ್ಟ್‍ಮೆಂಟ್ ಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಹಾರವಿಲ್ಲದೆ ಸೊರಗಿದ್ದ ಸಿಂಹದ ಮರಿಯನ್ನು ರಕ್ಷಿಸಿ, ಅದನ್ನು ಈಗ ಪ್ರಾಣಿಗಳನ್ನು ಆರೈಕೆ ಮಾಡುವ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಕಾಡುಪ್ರಾಣಿಯನ್ನ ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದ ಮೇಲೆ ಅ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.

    ಪ್ಯಾರಿಸ್ ಅಗ್ನಿಶಾಮಕ ಸಿಬ್ಬಂದಿ ಸಿಂಹದ ಮರಿಯ ರಕ್ಷಣೆಯ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಡು ಪ್ರಾಣಿಗಳೆಂದರೆ ಸಾಕು ಪ್ರಾಣಿಗಳಂತಲ್ಲ ಅಥವಾ ಗೊಂಬೆಗಳಲ್ಲ ಎಂದು ಪ್ರತಿಯೊಬ್ಬರಿಗೂ ನೆನಪಿಸುವುದು ಬಹಳ ಮುಖ್ಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಿಂಹದ ಮರಿಯನ್ನ ರಕ್ಷಿಸಿದ್ದಕ್ಕೆ ಜನರು, ತಾಯಿಯಿಂದ ಬೇರೆಯಾದ ಮರಿಯನ್ನು ಕಾಪಾಡಿದ್ದಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ 2016ರಲ್ಲಿ ಪ್ಯಾರಿಸ್‍ನಲ್ಲಿ ಇದೇ ರೀತಿ ಸಿಂಹದ ಮರಿಯೊಂದನ್ನ ಅನಾಥ ಮಾಡಲಾಗಿತ್ತು. ಡ್ರಗ್ ಡೀಲರ್‍ಗಳು ಒಂದು ಫೋಟೋಗೆ ಕೆಲವು ಯೂರೋ ನಿಗದಿಪಡಿಸಿ ಮರಿಯನ್ನ ಬಾಡಿಗೆ ಕೊಡುತ್ತಿದ್ದರು ಎಂದು ವರದಿಯಾಗಿದೆ.

  • ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ತಡರಾತ್ರಿಯೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನೂ ಬಿಸಿಲ ನಗರಿ ಬಳ್ಳಾರಿಯಲ್ಲಿ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಿಂಧವಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ರೈತರೊಬ್ಬರನ್ನು ರಕ್ಷಣೆ ಮಾಡಲಾಗಿದೆ.

    ಗುರುವಾರ ಎಂದಿನಂತೆ ತೋಟಕ್ಕೆ ತೆರಳಿದ್ದ ರೈತ ಶ್ರೀನಿವಾಸ್ ಹಳ್ಳದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜೀವದಾಸೆಗೆ ಮರವೇರಿ ಕುಳಿತಿದ್ದರು. ಈ ಮಾಹಿತಿ ಪಡೆದ ಜಿಲ್ಲಾಡಳಿತ 125 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿಯೊಂದಿಗೆ ರೈತ ಶ್ರೀನಿವಾಸ್ ಅವರನ್ನು ರಕ್ಷಣೆ ಮಾಡಿದೆ. ಈ ರಕ್ಷಣಾ ಕಾರ್ಯವನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯಚಾರಣೆ ವೇಳೆ ಬಳ್ಳಾರಿ ಎಸಿ, ತಹಶೀಲ್ದಾರ್, ಡಿವೈಎಸ್‍ಪಿ, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ರೈತ ಶ್ರೀನಿವಾಸ್ ಅಂಗವಿಕಲರಾಗಿದ್ದು, 12 ಗಂಟೆಗಳ ಕಾಲ ಮರ ಹತ್ತಿ ಕುಳಿತ ಧೈರ್ಯವನ್ನು ಮೆಚ್ಚಿ ಮಾಜಿ ಶಾಸಕ, ಗಣಿ ಉದ್ಯಮಿ ಸೂರ್ಯನಾರಾಯಣ ರೆಡ್ಡಿ 11 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

    ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಸುತ್ತ ಮುತ್ತ ಡ್ರೋನ್ ಕ್ಯಾಮೆರಾದ ಮೂಲಕ ಮಳೆ ದೃಶ್ಯಗಳನ್ನ ಪಬ್ಲಿಕ್ ಟಿವಿ ಸೆರೆ ಹಿಡಿದಿದೆ. ಫೋಟೋಗ್ರಾಫರ್ ಮಹೇಶ್ ಹನ್ಸಿ ಅನ್ನೋವ್ರು ಡ್ರೋನ್ ಬಳಸಿ ಈ ದೃಶ್ಯ ತೆಗೆದಿದ್ದಾರೆ.

     

    ಅತ್ತ ರಾಯಚೂರಿನ ಲಿಂಗಸುಗೂರಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಬುದ್ದಿನ್ನಿ ಕೆರೆ ಒಡೆದಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೀರು ನುಗ್ಗಿದೆ. ಗುಡಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಬುದ್ದಿನ್ನಿ, ಮಟ್ಟೂರಿನಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಜಾವ ಕೆರೆ ಒಡೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ತುಂಬಿದ್ದು, ಕೆರೆ ಒಡೆದ ಹಿನ್ನೆಲೆಯಲ್ಲಿ ಮಸ್ಕಿ ನಾಲಾ ಡ್ಯಾಮಿಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಮ್ ನಿಂದ ಹೆಚ್ಚುವರಿ ನೀರು ಹಳ್ಳಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

    ಹಾಸನ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ತಾಲೂಕಿನ ತೇಜೂರು ಗ್ರಾಮದಲ್ಲಿ ಐದು ಮನೆಗಳು ಕುಸಿದಿವೆ. ಘಟನಾ ಸಂದರ್ಭದಲ್ಲಿ ಮನೆಯಲ್ಲಿದ್ದ ಮಗು ಪಾರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

    ಕಲಬುರಗಿ ಜಿಲ್ಲೆಯಲ್ಲಿ ಸತತ ಮಳೆಯ ಹಿನ್ನೆಲೆಯಲ್ಲಿ ಸೇಡಂ ಪಟ್ಟಣದ ಕಮಲಾವತಿ ನದಿ ಉಕ್ಕಿ ಹರಿದಿದೆ. ಎರಡು ತಿಂಗಳ ಹಿಂದೆಯಷ್ಟೆ ಒಂದೂವರೆ ಕೋಟಿ ರೂ. ಹಣ ಖರ್ಚು ಮಾಡಿ ನದಿಗೆ ನಿರ್ಮಾಣ ಮಾಡಲಾಗಿದ್ದ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಳಪೆ ಕಾಮಾಗಾರಿಯೇ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಲು ಕಾರಣ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

     

    ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ರಾತ್ರಿ ವರುಣ ಆರ್ಭಟಿಸಿದ್ದಾನೆ. ರಾತ್ರಿ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದ್ದು ಅದರಲ್ಲೂ ಚನ್ನಪಟ್ಟಣ ಹಾಗು ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಬೈಕ್ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜೋರು ಮಳೆ ನಿಂತ ಬಳಿಕ ಮಧ್ಯರಾತ್ರಿಯ ವರೆಗೂ ಸಹ ತುಂತುರು ಮಳೆ ಮುಂದುವರೆದಿತ್ತು.

  • ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

    ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

    ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ.

    ಮಂಗಳವಾರ ಪ್ರೊ.ನಿಂಗಪ್ಪ ಎಂಬುವವರ ಕಾರನ್ನು ಚಾಲಕ ಸಂಬಂಧಿಕರನ್ನು ಕರೆತರಲು ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದ. ಆದರೆ ಅತಿಯಾಗಿ ಸುರಿದ ಮಳೆಯ ಪರಿಣಾಮ ಕುಂಟಪಾಲನಹಳ್ಳಿಯ ಪಕ್ಕದಲ್ಲಿದ್ದ ಹಳ್ಳವೊಂದು ತುಂಬಿ ಸೇತುವೆಯ ಮೇಲೆ ನೀರು ಹರಿಯಲು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಕಾರು ಸೇತುವೆಯ ಮಧ್ಯ ಸಿಲುಕಿಗೊಂಡಿದ್ದು, ಮುಂದೆ ಹೋಗಲು ಸಾಧ್ಯವಾಗಲಿಲ್ಲ. ತಕ್ಷಣ ಚಾಲಕ ಕಾರಿನಿಂದ ಕೆಳಗಿಳಿದಿದ್ದಾನೆ. ನೀರಿನ ರಭಸ ಹೆಚ್ಚಾದಂತೆ ಕಾರು ಕೊಚ್ಚಿ ಹೋಗಿ ಕೆಸರಲ್ಲಿ ಸಿಲುಕಿಕೊಂಡಿದೆ. ಇಂದು ಆ ಕಾರನ್ನು ಗ್ರಾಮಸ್ಥರು ಬಂದು ಮೇಲಕ್ಕೆತ್ತಿದ್ದಾರೆ.

    ಇನ್ನೂ ಮಳೆಯಿಂದ ಲಾರಿಯೊಂದು ತಡರಾತ್ರಿ ಹಳ್ಳಕ್ಕೆ ಉರುಳಿ ಬಿದ್ದಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಬಳಿ ನಡೆದಿದೆ.

    ಗದಗ ನಗರದ ಮಹ್ಮದ್ ಹುಸೇನ್ ಎಂಬುವವರಿಗೆ ಸೇರಿದ ಲಾರಿ ಬಿತ್ತನೆ ಬೀಜವನ್ನು ಸಾಗಿಸುತ್ತಿತ್ತು. ಮಂಗಳವಾರ ಲಾರಿ ಕೊಪ್ಪಳ ಜಿಲ್ಲೆಯ ಕುಕನೂರಿಗೆ ಬಿತ್ತನೆ ಬೀಜವನ್ನು ತಲುಪಿಸಿ ಹಾತಲಗೇರಿ ಮಾರ್ಗವಾಗಿ ಗದಗಕ್ಕೆ ವಾಪಾಸಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಗೆ ಗದಗ ಹಾತಲಗೇರಿ ರಸ್ತೆ ಮಧ್ಯದಲ್ಲಿ ಹರಿಯುವ ಗದ್ದಿಹಳ್ಳ ತುಂಬಿ ರಸ್ತೆಯ ಮೇಲೆ ಹರಿದ ಪರಿಣಾಮ ಲಾರಿ ನೀರಿನಲ್ಲಿ ಸಿಲುಕಿಕೊಂಡಿತ್ತು.

    ಈ ಘಟನೆ ನಡೆದಾಗ ಲಾರಿಯಲ್ಲಿದ್ದ ಚಾಲಕ ರಾಜೇಸಾಬ್ ಸೇರಿದಂತೆ ಇತರೇ 5 ಜನ ಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಆಗ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಹಾತಲಗೇರಿ ಗ್ರಾಮಸ್ಥರು ಲಾರಿಯಲ್ಲಿದ್ದವರನ್ನ ರಕ್ಷಣೆ ಮಾಡುವ ಮೂಲಕ ಜೀವಹಾನಿ ತಪ್ಪಿಸಿದ್ದಾರೆ.

    ಇದನ್ನು ಓದಿ: ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ

  • ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

    ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ.


    ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನವಯುಗ ಟೋಲ್ ಬಳಿ ಟಿಕೆಟ್ ತೆಗೆದು ಮುಂದೆ ಪ್ರಯಾಣ ಬೆಳೆಸಿದರು. ಆದರೆ ಟೋಲ್ ಮಧ್ಯೆಯೇ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಕಾರಿನಿಂದ ಕೆಳಗಿಳಿದ್ದಾರೆ.

    ನಂತರ ಕಾರು ಧಗಧಗನೆ ಉರಿಸಲು ಪ್ರಾರಂಭಿಸಿದೆ. ಇದನ್ನು ನೋಡಿ ಕೆಲ ಕಾಲ ಸ್ಥಳಿಯರಲ್ಲಿ ಆತಂಕ ಉಂಟಾಗಿತ್ತು. ಬೆಂಕಿಯ ತೀವ್ರತೆಗೆ ಕಾರು ಭಾಗಶಃ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ದೇವನಹಳ್ಳಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಂಕಿ ಅವಘಡದಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

  • ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

    ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

    ಹುಬ್ಬಳ್ಳಿ: ವೇಗವಾಗಿ ಬಂದ್ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಮಿನಿ ಲಾರಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಡೆದಿದೆ.

    ಹಾವೇರಿ ಮೂಲದ ಮಿನಿ ಲಾರಿ ಚಾಲಕ ಶಿವಕುಮಾರ ಹಾಗೂ ಕ್ಲೀನರ್ ಈರಣ್ಣ ಎಂಬವರು ಲಾರಿಯಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಿನಿ ಲಾರಿ ವೇಗವಾಗಿ ಬಂದು ಹಿಂಬದಿಯಿಂದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ನಡುವೆ ಸಿಲುಕಿಕೊಂಡಿದ್ದ ಚಾಲಕ ಶಿವಕುಮಾರ್‍ರನ್ನು ಸ್ಥಳೀಯರು ಹಾಗೂ ಸಂಚಾರಿ ಪೊಲೀಸರು ಸತತ ಒಂದು ಗಂಟೆ ಕಾಲ ಶ್ರಮವಹಿಸಿ ಲಾರಿಯಿಂದ ಹೊರಗಡೆ ತೆಗೆದಿದ್ದಾರೆ. ಕೊನೆಗೆ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಿ ಶಿವಕುಮಾರ್ ರನ್ನು ಹೊರಗಡೆ ತೆಗೆದು ಅವರ ಪ್ರಾಣವನ್ನು ಕಾಪಾಡಿದ್ದಾರೆ.

    ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಮೀನುಗಾರಿಕೆ ಬೋಟ್ ಮುಳುಗಡೆ- 23 ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಅಳಿವೆಗೆ ಸಿಲುಕಿ ಮುಳುಗಡೆಯಾದ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಗೋಡು ಅಳಿವೆ ತೀರದಲ್ಲಿ ರಾತ್ರಿ ವೇಳೆ ನೆಡೆದಿದೆ.

    ಯಾಸಿನ್ ಹೆಸರಿನ ಯಾಂತ್ರಿಕ ಬೋಟ್‍ನಲ್ಲಿ ಸುಮಾರು 23 ಮೀನುಗಾರರಿದ್ದು, ಅಳಿವೆಯಲ್ಲಿ ಸಿಲುಕಿದ್ದವರನ್ನು ಮೂರು ಬೋಟ್‍ಗಳ ಮೂಲಕ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕಾಸರಗೋಡು ಬಂದರು ತೀರದ ಬಳಿ ಹೆಚ್ಚು ಹೂಳು ತುಂಬಿದ್ದರಿಂದಾಗಿ ಈ ಅವಘಡ ನೆಡೆದಿದೆ.

    ಕಳೆದ ಎರಡು ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಬಂದರು ಇಲಾಖೆ ಹೂಳನ್ನು ತೆಗೆಸದ ಕಾರಣ ಈ ರೀತಿಯ ಘಟನೆ ನೆಡೆಯುತ್ತಿದೆ. ಇದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತಹ ಸ್ಥಿತಿಗೆ ತಲುಪಿದೆ.

    ಈ ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.