Tag: protection

  • ಪುರದಮ್ಮ ಕಾಯ್ತಿದ್ದಾಳೆ, ಕಾಡಿಗೆ ಬೆಂಕಿ ಹಾಕಿದರೆ ಜೀವನ ಸರ್ವನಾಶ – ಅರಣ್ಯದಲ್ಲಿ ಬ್ಯಾನರ್

    ಪುರದಮ್ಮ ಕಾಯ್ತಿದ್ದಾಳೆ, ಕಾಡಿಗೆ ಬೆಂಕಿ ಹಾಕಿದರೆ ಜೀವನ ಸರ್ವನಾಶ – ಅರಣ್ಯದಲ್ಲಿ ಬ್ಯಾನರ್

    ಚಿಕ್ಕಮಗಳೂರು: ಈ ಅರಣ್ಯವನ್ನ ಪುರದಮ್ಮ ಹಾಗೂ ರೇವಣಸಿದ್ದೇಶ್ವರ ದೇವರು ಕಾಯುತ್ತಿದ್ದಾರೆ. ಈ ಅರಣ್ಯಕ್ಕೆ ಯಾರಾದರೂ ಬೆಂಕಿ ಹಾಕಿದರೆ ಅವರ ಜೀವನ ಸರ್ವನಾಶವಾಗಲಿದೆ ಎಂದು ಸ್ಥಳಿಯರೇ ಅರಣ್ಯ ರಕ್ಷಣೆಗೆ ಮುಂದಾಗಿ, ಅರಣ್ಯದಲ್ಲಿ ಬ್ಯಾನರ್ ಹಾಕಿರುವ ಅಪರೂಪದ ಘಟನೆಗೆ ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವಿಭಾಗ ಸಾಕ್ಷಿಯಾಗಿದೆ.

    ಈಗಾಗಲೇ ಕಾಡನ್ನ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಆದರೂ, ನಾನಾ ರೀತಿಯ ಮೂಢನಂಬಿಕೆಗಳಿಂದ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾರೆ. ಹಾಗಾಗಿ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್‍ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಹಾಕಿ, ಕಿಡಿಗೇಡಿಗಳಿಗೆ ಭಯ ಹುಟ್ಟಿಸಿದ್ದಾರೆ.

    ಅರಣ್ಯ ಅಧಿಕಾರಿಗಳು, ಕೇಸ್‍ಗೆಲ್ಲಾ ಹೆದರದವರು ದೇವರಿಗದರೂ ಹೆದರಿ ಬೆಂಕಿ ಹಾಕುವುದನ್ನ ನಿಲ್ಲಿಸಲಿ ಎಂದು ಈ ರೀತಿಯ ಬ್ಯಾನರ್ ಹಾಕಿದ್ದಾರೆ. ಈಗಾಗಲೇ ಅರಣ್ಯಕ್ಕೆ ಬೆಂಕಿ ಬೀಳುವುದನ್ನ ನಿಯಂತ್ರಿಸಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಇಲಾಖಾ ವ್ಯಾಪ್ತಿಯ ಜೊತೆ ಸಾರ್ವಜನಿಕರಿಗೆ ಜಾಗೃತಿಯನ್ನೂ ಮೂಡಿಸಿದ್ದಾರೆ. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಡನಂಬಿಕೆಗೆ ಅರಣ್ಯ ಬಲಿಯಾಗುತ್ತಿದೆ. ಹಾಗಾಗಿ, ಸಿಂದಿಗೆರೆ ಗ್ರಾಮದ ಜನ ಅರಣ್ಯ ರಕ್ಷಣೆ ದೇವರ ಮೊರೆ ಹೋಗಿದ್ದಾರೆ.

    ಇತ್ತೀಚೆಗೆ ಅರಣ್ಯ ಇಲಾಖೆ ಬೆಂಕಿ ಅವಘಡಗಳನ್ನ ನಿಯಂತ್ರಿಸಲು ಡ್ರೋಣ್ ಮೊರೆ ಹೋಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಹಾರಿಸಿ ಕಾಡಿಗೆ ಬೆಂಕಿ ಹಾಕುವವರ ಮೇಲೆ ನಿಗಾ ವಹಿಸಿತ್ತು. ಆದರೂ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಹಾಗಾಗಿ ಸ್ಥಳಿಯರು ಈ ಹೊಸ ದಾರಿಯ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ.

  • ಭಾರೀ ಮಳೆ- ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಆಕಳು, ಕರು ರಕ್ಷಣೆ

    ಭಾರೀ ಮಳೆ- ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಆಕಳು, ಕರು ರಕ್ಷಣೆ

    ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಧರ್ಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರವಾಹ ಉಂಟಾಗಿ ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಒಂದು ಆಕಳು ಮತ್ತು ಕರುವನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಸಿರಾಜ್ ಹಳೆಕೋಟಿ ಅವರಿಗೆ ಸೇರಿದ ಆಕಳು ಮತ್ತು ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ನೀರಿನಲ್ಲಿ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ನೀರಿನಿಂದ ಹೊರಬಂದ ತಕ್ಷಣ ಆಕಳು ಮತ್ತು ಕರು ಮನೆಯತ್ತ ಓಡಿದವು.

    ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

  • 25 ಅಡಿ ಆಳದ ಪಾಳು ಕೊಳಕ್ಕೆ ಬಿದ್ದ ಹಸು-ಕ್ರೇನ್ ಮೂಲಕ ಎತ್ತಿದ ಗ್ರಾಮಸ್ಥರು

    25 ಅಡಿ ಆಳದ ಪಾಳು ಕೊಳಕ್ಕೆ ಬಿದ್ದ ಹಸು-ಕ್ರೇನ್ ಮೂಲಕ ಎತ್ತಿದ ಗ್ರಾಮಸ್ಥರು

    ತುಮಕೂರು: ಮೇಯುತ್ತಿದ್ದಾಗ 25 ಅಡಿ ಆಳದ ಕೊಳಕ್ಕೆ ಉರುಳಿಬಿದ್ದು ಒದ್ದಾಡುತ್ತಿದ್ದ ಹಸುವನ್ನು, ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿ ಪಾರು ಮಾಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕು ಅರೆಕ್ಯಾತನಹಳ್ಳಿಯಲ್ಲಿ ನಡೆದಿದೆ.

    ರಂಗಧಾಮಯ್ಯ ಅವರು ಹಸು ಮೇಯಿಸಲು ತೋಟಕ್ಕೆ ಕರೆದುಕೊಂಡು ಬಂದಿದ್ದರು. ಈ ಹಸು ವೇಳೆ ಆಯತಪ್ಪಿ ಪಾಳು ಕೊಳ ಕ್ಕೆ ಬಿದ್ದಿದೆ. ನಂತರ ಎದ್ದು ಹೊರಬರಲಾಗದೆ ನರಳಾಡುತ್ತಿತ್ತು. ಹಸುವಿನ ಮಾಲೀಕನಿಗೂ ದಿಕ್ಕೆ ತೋಚದಂತಾಗಿತ್ತು. ಇದೀಗ ಹಸುವನ್ನು ಮೇಲಕ್ಕೆ ಎತ್ತಲಾಗಿದೆ. ಇದನ್ನೂ ಓದಿ:ಯಗಚಿ ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

    ಹಸು ಪಳು ಕೊಳ್ಳಕ್ಕೆ ಬಿದ್ದಿರುವ ವಿಷಯ ತಿಳಿದು ಬಂದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸದಸ್ಯರು ಹಸುವನ್ನು ಬಾವಿಯಿಂದ ಮೇಲೆತ್ತಲು ಯೋಜನೆ ರೂಪಿಸಿದರು. ನಂತರ ಬೃಹತ್ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಅದರ ಸಹಾಯದಿಂದ ಹಸುವಿನ ಜೀವ ರಕ್ಷಿಸಿದ್ದಾರೆ. ಕೊಳಕ್ಕೆ ಬಿದ್ದ ರಭಸಕ್ಕೆ ಹಸುವಿನ ಕಾಲು ಮುರಿದುಹೋಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

  • ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೃತ್ತನೀರಿಕ್ಷಕ ಎಂ.ಬಿ.ನವೀನ್ ಕುಮಾರ್ ಪೊಲೀಸ್ ಜೀಪಿನಲ್ಲಿ ಪತ್ತೆಯಾಗಿರುವ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

    ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಕರ್ತವ್ಯ ನಿಮಿತ್ತ ಹೊರ ಹೋಗಿ ಠಾಣೆಗೆ ವಾಪಾಸ್ಸಾಗುತ್ತಿದ್ದಾಗ ಬಸವಭವನದ ಬಳಿ ಬೈಕ್ ಸವಾರರೊಬ್ಬರು ಪೊಲೀಸ್ ಜೀಪಿನಲ್ಲಿ ಹಾವು ಇರೋದನ್ನ ಕಂಡಿದ್ದಾರೆ. ಕೂಡಲೇ ಪೊಲೀಸ್ ಜೀಪ್ ತಡೆದು ಸರ್ಕಲ್ ಇನ್ಸ್‍ಪೆಕ್ಟರ್‍ಗೆ ಮಾಹಿತಿ ನೀಡಿ ವಾಹನ ನಿಲ್ಲಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗರಕ್ಷಕ ಟೂಲ್ಸ್ ಬಾಕ್ಸ್ ಸೇರಿದ್ದ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಸೆರೆ ಸಿಕ್ಕ ಹಾವಿನ ಹೆಸರು ರಾಮಬಾಣದ ಹಾವು ಅಂತ ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾವು ಎಲ್ಲಿ ಯಾವಾಗ ಪೊಲೀಸ್ ಜೀಪ್ ಏರಿತೋ ಏನೋ ಆದರೆ ಅದೃಷ್ಟವಶಾತ್ ಹಾವಿನಿಂದ ಪೊಲೀಸರಿಗೆ ಯಾವುದೇ ತೊಂದರೆಯಾಗಿಲ್ಲ.

  • ಬೈಂದೂರಲ್ಲಿ 20 ಅಡಿ ಉದ್ದದ ಹೆಬ್ಬಾವು ರಕ್ಷಣೆ

    ಬೈಂದೂರಲ್ಲಿ 20 ಅಡಿ ಉದ್ದದ ಹೆಬ್ಬಾವು ರಕ್ಷಣೆ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಅರೆಶಿರೂರು ರವಿ ಶೆಟ್ಟಿ ಅವರ ಮನೆಯ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ.

    ಕರ್ನಾಟಕ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಅವರ ಮನೆಯ ಅಡಿಕೆ ತೋಟಕ್ಕೆ ಹೆಬ್ಬಾವು ಲಗ್ಗೆ ಇಟ್ಟಿತ್ತು. ಸಾಕಿದ ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಾರೆ. ಸುಮಾರು 20 ಅಡಿ ಉದ್ದ 50 ಕೆಜಿಯಷ್ಟು ಭಾರ ಇರುವ ಹಾವಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಹಿಡಿಯಲಾಗಿದೆ.

    ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರಾಜೀವ ಎಸ್ ಗೌಡರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ದೊಡ್ಡಗಾತ್ರದ ಹಾವನ್ನು ಒಬ್ಬರಿಂದ ಎತ್ತಿ ಹಿಡಿಯುವುದು ಆಗದಿದ್ದಾಗ ಅರಣ್ಯ ಇಲಾಖೆಯವರಿಗೆ ತಿಳಿಸಿದ ತಕ್ಷಣ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರಾದ ರಾಜೀವ್ ಎಸ್ ಗೌಡರು ಮತ್ತು ಸಹಾಯಕರಾದ ನಾರಾಯಣ ಗೌಡರು ಆಗಮಿಸಿ ಸಹಕರಿಸಿದರು.

    ಎರಡು ನಿಮಿಷ ಕಳೆದಿದ್ದರು ಹಾವು ನಾಯಿಯನ್ನು ನುಂಗುತ್ತಿತ್ತು. ಅಕ್ಕಪಕ್ಕದ ಮನೆಯವರು ಮತ್ತು ಮಕ್ಕಳು ಓಡಾಡುವ ಸ್ಥಳ ಆಗಿರುವುದರಿಂದ ಹಾವನ್ನು ಜಾಗರೂಕತೆಯಿಂದ ಹಿಡಿದು ಅರಣ್ಯ ಇಲಾಖೆ ಸಹಾಯ ಪಡೆದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ. ಹೆಬ್ಬಾವು ಹಿಡಿಯುವುದು ತಕ್ಷಣಕ್ಕೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ರವಿ ಶೆಟ್ಟಿ ಹೇಳಿದ್ದಾರೆ.

  • ಉಡುಪಿಯಲ್ಲಿ 700 ಮನೆ ಮುಳುಗಡೆ – 3500ಕ್ಕೂ ಹೆಚ್ಚು ಜನರ ರಕ್ಷಣೆ

    ಉಡುಪಿಯಲ್ಲಿ 700 ಮನೆ ಮುಳುಗಡೆ – 3500ಕ್ಕೂ ಹೆಚ್ಚು ಜನರ ರಕ್ಷಣೆ

    ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, 24 ಗಂಟೆಯಲ್ಲಿ 2500 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

    ಜಿಲ್ಲೆಯಾದ್ಯಂತ ಪ್ರವಾಹದ ವಾತಾವರಣ ಇದೆ, ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಣೆ ಆಗಿದೆ. ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕುದ್ರು ಪ್ರದೇಶದ ಜನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಿ ಉಡುಪಿ ಡಿಸಿ ಜಿ ಜಗದೀಶ್ ಮನವಿ ಮಾಡಿದ್ದಾರೆ.

    ರಾತ್ರಿ ವೇಳೆ ಮನೆ ಮುಳುಗಡೆಯಾದರೆ ರಕ್ಷಣಾಕಾರ್ಯ ಕಷ್ಟವಾಗುತ್ತದೆ. ಜಿಲ್ಲಾಡಳಿತದ ಜೊತೆ ಜನ ಕೈಜೋಡಿಸಿ, ಶೀಘ್ರ ಸುರಕ್ಷಿತ ಪ್ರದೇಶಕ್ಕೆ ಬನ್ನಿ ಎಂದು ಹೇಳಿದ್ದಾರೆ. ಕಳೆದ 24 ಗಂಟೆಯಲ್ಲಿ 700 ಮನೆಗಳು ಮುಳುಗಿದೆ. ಜಿಲ್ಲೆಯಲ್ಲಿ ಸುಮಾರು 2,500 ಜನರ ರಕ್ಷಣೆ ಮಾಡಲಾಗಿದೆ. ಸಾರ್ವಜನಿಕರು ಜನಪ್ರತಿನಿಧಿಗಳು ಸೇರಿ ಸಾವಿರಾರು ಜನರ ರಕ್ಷಣೆ ಮಾಡಿದ್ದಾರೆ. ತಗ್ಗು ಪ್ರದೇಶದಲ್ಲಿದ್ದ ಜನ ಸುರಕ್ಷಿತ ತಾಣಗಳಿಗೆ ಬನ್ನಿ ರಕ್ಷಣಾ ಕಾರ್ಯದಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯವಾದ ಎಂದರು.

  • ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರು: ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇಂದು 59 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

    ದೇವದುರ್ಗ ತಾಲೂಕಿನಲ್ಲಿ ದಾಳಿ ನಡೆಸಿ ಕೃಷಿ ಕೆಲಸಕ್ಕೆ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ, 59 ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.

    ಬಾಲಕಾರ್ಮಿಕ ಘಟಕದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಾಳಿ ಮಾಡಿದ್ದು, ದಾಳಿ ವೇಳೆ 10 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಿನ್ನೆ ಸಿರವಾರ ತಾಲೂಕಿನ ಕವಿತಾಳದಲ್ಲಿ ದಾಳಿ ನಡೆಸಿ 32 ಮಕ್ಕಳನ್ನು ರಕ್ಷಿಸಿದ್ದರು. ಇಂದು ಸಹ ಕಾರ್ಯಾಚರಣೆ ಮುಂದುವರಿಸಿದ ಅಧಿಕಾರಿಗಳ ತಂಡ, ಬಾಲಕ ಕಾರ್ಮಿಕರನ್ನು ರಕ್ಷಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

  • ಆತ್ಮಹತ್ಯೆ ಮಾಡಿಕೊಳ್ಳಲೆಂದು ಬೆಂಗ್ಳೂರಿಂದ ಜೋಗಕ್ಕೆ ಬಂದ ವ್ಯಕ್ತಿ

    ಆತ್ಮಹತ್ಯೆ ಮಾಡಿಕೊಳ್ಳಲೆಂದು ಬೆಂಗ್ಳೂರಿಂದ ಜೋಗಕ್ಕೆ ಬಂದ ವ್ಯಕ್ತಿ

    – ಜೀವನದಲ್ಲಿ ಜಿಗುಪ್ಸೆ, ಜಲಪಾತ ಕಂಡು ಜ್ಞಾನೋದಯ

    ಶಿವಮೊಗ್ಗ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರು ಮೂಲದ ಚೇತನ್ ಕುಮಾರ್ (35) ಎಂದು ಗುರುತಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ದಿನದಿಂದ ಕೆಲಸ ಇಲ್ಲದ ಕಾರಣ ಚೇತನ್ ಕುಮಾರ್ ಮನೆಯಲ್ಲಿಯೇ ಇರುತ್ತಿದ್ದನಂತೆ. ಈ ವೇಳೆ ತನ್ನನ್ನು ಮನೆಯಲ್ಲಿ ಯಾರು ಮಾತನಾಡಿಸುತ್ತಿರಲಿಲ್ಲ ಎಂದು ಯುವಕ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

    ಹೀಗಾಗಿಯೇ ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಇಂದು ಮುಂಜಾನೆ ಆಗಮಿಸಿದ್ದಾನೆ. ನಂತರ ರಾಣಿ ಫಾಲ್ಸ್ ಬಳಿ ಕುಳಿತು ಯೋಚನೆ ಮಾಡಿದಾಗ ಈತನಿಗೆ ಜ್ಞಾನೋದಯ ಆಗಿದೆಯಂತೆ. ಅಲ್ಲದೆ ಈ ಯುವಕ ಫಾಲ್ಸ್ ತುದಿಯಲ್ಲಿ ಕುಳಿತಿರುವುದನ್ನು ದೂರದಿಂದಲೇ ಗಮನಿಸಿದ ಭದ್ರತಾ ಸಿಬ್ಬಂದಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

    ನಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ವ್ಯಕ್ತಿಯ ಮನವೊಲಿಸಿ ಮೇಲಕ್ಕೆ ಕರೆ ತಂದಿದ್ದಾರೆ. ನಂತರ ಜೋಗ ಠಾಣೆಗೆ ಯುವಕನನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಯುವಕನನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸುವ ತಯಾರಿ ನಡೆಸಿದ್ದಾರೆ.

  • ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    – ಸಾರ್ವಜನಿಕರಿಂದ ಮೆಚ್ಚುಗೆ, ಅಧಿಕಾರಿಗಳಿಂದ 3 ಲಕ್ಷ ದಂಡ

    ಕ್ವೀನ್ಸ್‌ಲ್ಯಾಂಡ್: ಬಲೆಗೆ ಸಿಕ್ಕ ಮರಿ ತಿಮಿಂಗಿಲವನ್ನು ಬದುಕಿಸಲು ವ್ಯಕ್ತಿಯೋರ್ವ ಆಳದ ಸಮುದ್ರಕ್ಕೆ ಧುಮುಕಿ ದಿಟ್ಟತನ ಮೆರೆದಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸಮುದ್ರದಲ್ಲಿ ನಡೆದಿದೆ.

    ಈ ಸಹಾಯ ಮಾಡಿದ ವ್ಯಕ್ತಿಯನ್ನು ಜಾಂಗೊ ಎಂದು ಗುರುತಿಸಲಾಗಿದೆ. ಒಬ್ಬನೇ ಬೋಟಿನಲ್ಲಿ ಹೋಗಿ ತನ್ನ ಜೀವವನ್ನು ಲೆಕ್ಕಿಸದೆ ತಿಮಿಂಗಿಲಕ್ಕಾಗಿ ಸಮುದ್ರಕ್ಕೆ ಹಾರಿದ ಜಾಂಗೊ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಾಂಗೊಗೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡವನ್ನು ವಿಧಿಸಿದ್ದಾರೆ.

    ಜಾಂಗೊ ಮಾಡಿದ ಈ ಸಹಾಸವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ ಹಂಪ್‍ಬ್ಯಾಕ್ ಜಾತಿಗೆ ಸೇರಿದ ಮರಿ ತಿಮಿಂಗಲವೊಂದು ಸಮುದ್ಯದಲ್ಲಿ ಬಿಟ್ಟಿದ್ದ ಬಲೆಯೊಂದಕ್ಕೆ ಸಿಲುಕಿ ಹೊರಗೆ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ಕಂಡ ಜಾಂಗೊ ಒಂದು ಚಿಕ್ಕ ಬೋಟಿನಲ್ಲಿ ಹೋಗಿ ಏಕಾಏಕಿ ಸಮುದ್ರಕ್ಕೆ ಧುಮುಕಿ ಸುಮಾರು 5 ನಿಮಿಷಗಳ ಕಾಲ ಈಜಿ ತಿಮಿಂಗಿಲವನ್ನು ಬಲೆಯಿಂದ ಬಿಡಿಸಿ ವಾಪಸ್ ಬಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಾಂಗೊ, ನಮ್ಮ ಪರಿಸರದಲ್ಲಿ ಇರುವ ಪ್ರತಿಯೊಂದು ಜೀವರಾಶಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನನ್ನ ಜಾಗದಲ್ಲಿ ಯಾರೇ ಇದ್ದರೂ ತಿಮಿಂಗಿಲವನ್ನು ಆ ಪರಿಸ್ಥಿತಿಯಲ್ಲಿ ನೋಡಿದರೆ ನಾನು ಮಾಡಿದ ಕೆಲಸವನ್ನೇ ಮಾಡುತ್ತಿದ್ದರು. ಜೊತೆಗೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಳ್ಳೆ ಕೆಲಸ ಮಾಡಿದರೂ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಸಚಿವ ಮಾತನಾಡಿ, ಈ ರೀತಿಯ ಘಟನೆ ನಡೆದಾಗ ಅದನ್ನು ಮೀನುಗಾರಿಕೆ ಇಲಾಖೆಗೆ ತಿಳಿಸಬೇಕು. ಅದರಲ್ಲಿ ಪರಿಣಿತಿ ಪಡೆದವರು ಹೋಗಿ ರಕ್ಷಿಸುತ್ತಾರೆ. ಅದನ್ನು ಬಿಟ್ಟು ಈ ರೀತಿ ಜನರು ಸಹಾಸಕ್ಕೆ ಕೈ ಹಾಕಬಾರದು. ಇದರಿಂದ ಅವರ ಜೀವಕ್ಕೆ ಅಪಾಯವಿರುತ್ತದೆ. ಆದ್ದರಿಂದ ನಿಯಮವನ್ನು ಉಲ್ಲಂಘನೆ ಮಾಡಿದ ಜಾಂಗೊಗೆ 3 ಲಕ್ಷ ದಂಡವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಜಾಂಗೊ ಮಾಡಿದ ಕೆಲಸಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಅವರ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಜಾಂಗೊಗೆ ವಿಧಿಸಿರುವ ದಂಡವನ್ನು ಜನರು ಭರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಗೋ ಫಂಡ್‍ಮಿ ಎಂಬ ಸಂಸ್ಥೆ ಜಾಂಗೊಗೆ 3 ಲಕ್ಷ ರೂ. ಅನ್ನು ಬಹುಮಾನವಾಗಿ ನೀಡಿದೆ.

  • ವಿಶ್ವದ ಅಪರೂಪದ ಮೂಷಿಕ ಜಿಂಕೆ ರಕ್ಷಣೆ ಮಾಡಿದ ಕರಾವಳಿ ಕಾವಲುಪಡೆ ಪೊಲೀಸರು

    ವಿಶ್ವದ ಅಪರೂಪದ ಮೂಷಿಕ ಜಿಂಕೆ ರಕ್ಷಣೆ ಮಾಡಿದ ಕರಾವಳಿ ಕಾವಲುಪಡೆ ಪೊಲೀಸರು

    ಕಾರವಾರ: ವಿಶ್ವದಲ್ಲೇ ಅತೀ ವಿರಳವಾದ ಮೂಷಿಕ ಜಿಂಕೆಯನ್ನು ಅಂಕೋಲದ ಅರಬ್ಬಿ ಸಮುದ್ರಲ್ಲಿ ಬೇಲಿಕೇರಿ ಕರಾವಳಿ ಕಾವಲುಪಡೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಅಕ್ರಮ ಗೋವಾ ಮದ್ಯ ತಡೆಗಟ್ಟುವ ನಿಟ್ಟಿನಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ನಿರೀಕ್ಷಕ ಶ್ರೀಧರ್ ಎಸ್.ಆರ್ ನೇತೃತ್ವದ ಕರಾವಳಿ ಕಾವಲು ಪಡೆ ಈ ಜಿಂಕೆಯನ್ನು ರಕ್ಷಿಸಿದೆ. ಪೊಲೀಸರ ತಂಡ ಅಂಕೋಲ ತಾಲೂಕಿನ ಹಾರವಾಡದ ಕೋಡಾರ ಗುಡ್ಡದ ಬಳಿಯ ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೂಷಿಕ ಚಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ.

    ಏನಿದು ಮೂಷಿಕ ಜಿಂಕೆ?
    ಜಿಂಕೆ ಜಾತಿಯಲ್ಲಿ ಅತ್ಯಂತ ಕುಬ್ಜ ಜಿಂಕೆ ಈ ಮೂಷಿಕ ಜಿಂಕೆ. ಜಿಂಕೆಗಳು ಭೂಮಿಯ ಮೇಲ್ಭಾಗದಲ್ಲಿ ವಾಸ ಮಾಡುತ್ತವೆ. ಆದರೇ ಇವು ಬಿಲದಲ್ಲಿ ವಾಸ ಮಾಡುತ್ತದೆ. ದೇಹಾಕೃತಿಯಲ್ಲಿ ಹೆಗ್ಗಣದಂತೆ ಹೋಲುತ್ತದೆ. ಇಲಿಗಳಂತೆ ಬಿಲದಿಂದ ಹೊರಬರುವ ಇವು ಹುಲ್ಲು, ಎಲೆಗಳು ಇದರ ಪ್ರಮುಖ ಆಹಾರವಾಗಿದೆ. ಏಷ್ಯಾದ ಕಾಡುಗಳಲ್ಲಿ ಹೆಚ್ಚು ಇದರ ವಾಸ ಸ್ಥಾನವಾಗಿದ್ದು ಜನರ ಕಣ್ಣಿಗೆ ಬೀಳುವುದು ಅಪರೂಪ. ವಿಶ್ವದ ಅತೀ ಚಿಕ್ಕ ಸಸ್ತನಿಗಳ ಸಾಲಿನಲ್ಲಿ ಇದೂ ಕೂಡ ಒಂದಾಗಿದೆ.