Tag: property

  • ಮಕ್ಕಳಿಂದಲೇ ತಂದೆಯ ಮೇಲೆ ಬಡಿಗೆ, ಕಲ್ಲಿನಿಂದ ಹಲ್ಲೆ!

    ಮಕ್ಕಳಿಂದಲೇ ತಂದೆಯ ಮೇಲೆ ಬಡಿಗೆ, ಕಲ್ಲಿನಿಂದ ಹಲ್ಲೆ!

    ಬಾಗಲಕೋಟೆ: ಆಸ್ತಿ ಹಂಚಿಕೆ ಮಾಡಿಲ್ಲವೆಂದು ಮಕ್ಕಳೇ ಹೆತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.

    ಶೇಕಪ್ಪ ಮನಗುಳಿ ಎಂಬ 80 ವರ್ಷದ ವ್ಯಕ್ತಿಯೇ ಹಲ್ಲೆಗೊಳದ ತಂದೆ. ಶೇಕಪ್ಪ 6 ಕೂರಗಿ ಜಮೀನನ್ನು ಹೊಂದಿದ್ದಾರೆ. ಇದೀಗ ಇವರ ಮಕ್ಕಳಾದ ಕನಕಪ್ಪ ಹಾಗೂ ಯಲ್ಲಪ್ಪ ನಮಗೆ ಆಸ್ತಿ ಪಾಲು ಮಾಡು ಎಂದು ಪೀಡಿಸುತ್ತಿದ್ರು. ಆದ್ರೆ ತಂದೆ ಶೇಕಪ್ಪ ಮಾತ್ರ ಮಕ್ಕಳ ಮಾತಿಗೆ ಒಪ್ಪಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಮಕ್ಕಳಾದ ಕನಕಪ್ಪ ಹಾಗೂ ಯಲಪ್ಪ ಬಡಿಗೆ ಹಾಗೂ ಕಲ್ಲಿನಿಂದ ಕೈ, ಕಾಲುಗಳಿಗೆ ಹೊಡೆದು ಮನಬಂದಂತೆ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಶೇಕಪ್ಪ ಸದ್ಯ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಕನಕಪ್ಪ ಹಾಗೂ ಯಲ್ಲಪ್ಪನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಜಾಗದ ವಿಷಯದಲ್ಲಿ ಕುಟುಂಬಗಳ ಮಧ್ಯೆ ಹೊಡೆದಾಟ- ಗರ್ಭಿಣಿ ಹೊಟ್ಟೆಗೆ ಪೆಟ್ಟು

    ಜಾಗದ ವಿಷಯದಲ್ಲಿ ಕುಟುಂಬಗಳ ಮಧ್ಯೆ ಹೊಡೆದಾಟ- ಗರ್ಭಿಣಿ ಹೊಟ್ಟೆಗೆ ಪೆಟ್ಟು

    ಗದಗ: ಮನೆ ಮುಂದಿನ ಜಾಗದ ವಿಷಯವಾಗಿ ಎರಡು ಕುಟುಂಬಗಳ ನಡುವೆ ನಡೆದ ಹೊಡೆದಾಟದಲ್ಲಿ ಗರ್ಭಿಣಿ ಹೊಟ್ಟೆಗೆ ಪೆಟ್ಟು ಬಿದ್ದ ಘಟನೆ ನಡೆದಿದೆ.

    ಈ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಗಲಾಟೆಯಲ್ಲಿ ಮೂರು ತಿಂಗಳು ಗರ್ಭಿಣಿ ಜ್ಯೋತಿ ರಾಠೋಡ್‍ಗೆ ಪೆಟ್ಟು ಬಿದ್ದಿದ್ದು, ಸದ್ಯ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.

    ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸ್ಕ್ಯಾನಿಂಗ್ ಮಾಡಿಸುವಂತೆ ಬೇಡಿಕೊಂಡರೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಇದ್ರಿಂದ ಮೂರ್ನಾಲ್ಕು ಗಂಟೆ ಜ್ಯೋತಿ ಯಾತನೆ ಅನುಭವಿಸುವಂತಾಗಿಯಿತು ಅಂತಾ ಆರೋಪ ವ್ಯಕ್ತವಾಗಿದೆ.

    ಈ ಬಗ್ಗೆ ಜ್ಯೋತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಜಾಗದ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಚಾಕು, ಚೂರಿ ತಗೊಂಡು ಬೆದರಿಸಿದ್ರು. ಕಾಲಲ್ಲಿ ಒದ್ದರು. ಇನ್ನೂ ಹೊಟ್ಟೆ ನೋವು ಇದೆ. ಸದ್ಯ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊಟ್ಟಿದ್ದಾರೆ ಹೊರತು ಸ್ಕ್ಯಾನಿಂಗ್ ಮಾಡಿಲ್ಲ, ಜಾಸ್ತಿ ಮಾತಾಡಿದ್ರೆ ಹೊಟ್ಟೆ ನೋವಾಗುತ್ತೆ ಅಂತಾ ಹೇಳಿದ್ದಾರೆ.

    ಈ ಬಗ್ಗೆ ಡ್ಯೂಟಿ ಡಾಕ್ಟರ್ ಬಸವರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಅವರಿಗೆ ಎಮೆರ್ಜೆನ್ಸಿ ಇಲ್ಲ. ಅಂತಹ ಸಂದರ್ಭದಲ್ಲಿ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಅಂತಾ ಹೇಳಿದ್ದಾರೆ.

  • ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಕಡ್ಡಾಯ ಮಾಡಿಲ್ಲ, ಇದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ

    ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಕಡ್ಡಾಯ ಮಾಡಿಲ್ಲ, ಇದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ

    ನವದೆಹಲಿ: ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ, ಇದೊಂದು ಸುಳ್ಳು ಸುದ್ದಿ ಪ್ರೆಸ್ ಇನ್‍ಫಾರ್ಮೆಶನ್ ಬ್ಯುರೋ ಸ್ಪಷ್ಟಪಡಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಪಿಐಬಿಯ ವಕ್ತಾರ ಫ್ರಾಂಕ್ ನೂರನ್ಹಾ ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಚಾರವಾಗಿ ಪೊಲೀಸ್ ದೂರು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

    ಖಾತೆಗಳಿಗೆ ಆಧಾರ್ ಕಡ್ಡಾಯ ಮಾಡಿದಂತೆ ಈಗ ಎಲ್ಲ ಭೂ ದಾಖಲೆಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಬೇಕು. ಈ ವರ್ಷದ ಆಗಸ್ಟ್ 14ರ ಒಳಗಡೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಿ, ಪಾರದರ್ಶಕತೆ ತರಲು ಭೂ ಒಡೆಯನ ಆಧಾರ್ ಸಂಖ್ಯೆಯನ್ನು ಸೇರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಜೂನ್ 15ರಂದು ಹೊರಡಿಸಿರುವ ಆದೇಶದಲ್ಲಿ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಸಹಿಯೂ ಇತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳನ್ನು ಹೆಸರಿಸಿ ಈ ಪತ್ರ ಬರೆಯಲಾಗಿದೆ ಸಲಹೆಗಳನ್ನು ಕೇಳಲಾಗಿತ್ತು.

     

     

  • `ಯುಗಪುರುಷ’ ಚಿತ್ರದ ನಟನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

    `ಯುಗಪುರುಷ’ ಚಿತ್ರದ ನಟನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

    ರಾಮನಗರ: ಸ್ಯಾಂಡಲ್‍ವುಡ್‍ನ `ಯುಗಪುರುಷ’ ಚಿತ್ರದ ನಟ ಅರ್ಜುನ್ ದೇವ್ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಸಿರುವ ಘಟನೆ ಇಂದು ರಾಮನಗರದಲ್ಲಿ ನಡೆದಿದೆ.

    ಜಮೀನು ವ್ಯಾಜ್ಯ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಹೊರಟಿದ್ದ ಸಂದರ್ಭದಲ್ಲಿ ನಟನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

    ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪ ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಸಂಬಂಧ ಇಂದು ನ್ಯಾಯಾಲದ ವಿಚಾರಣೆಗೆ ನಟ ಅರ್ಜುನ್ ದೇವ್ ಬೆಂಗಳೂರಿನಿಂದ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹೊರಟಿದ್ರು. ಬೆಂಗಳೂರು-ಮೈಸೂರು ಹೆದ್ದಾರಿಯ ಎಸ್‍ಬಿಐ ಬ್ಯಾಂಕ್ ಪಕ್ಕದ ಕೋರ್ಟ್‍ನ ಮುಂಭಾಗದ ಗೇಟ್ ಸಮೀಪ ಕಾರು ನಿಲ್ಲಿಸುತ್ತಿದ್ದಂತೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ರಾಡ್‍ನಿಂದ ಹಲ್ಲೆಗೆ ಮುಂದಾಗಿದ್ದಾರೆ.

    ಕಾರಿನ ಮುಂಭಾಗದ ಗ್ಲಾಸ್‍ಗೆ ರಾಡ್‍ನಿಂದ ಹೊಡೆದಿದ್ದು ಗ್ಲಾಸ್ ಜಖಂಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೋರ್ವ ದುಷ್ಕರ್ಮಿ ಲಾಂಗ್ ಹಿಡಿದಿದ್ದ ಎನ್ನಲಾಗ್ತಿದೆ.

    ಘಟನೆ ಸಂಬಂಧ ರಾಮನಗರದ ಐಜೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಟ ಅರ್ಜುನ್ ದೇವ್ ಅವರ ವಿಚಾರಣೆ ಮಾಡ್ತಿದ್ದಾರೆ.

  • ಗುಂಪು ಚದುರಿಸಲು ಬೂಟ್‍ನಿಂದ ಬಾರಿಸಿದ ಪಿಎಸ್‍ಐ: ವಿಡಿಯೋ ವೈರಲ್

    ಗುಂಪು ಚದುರಿಸಲು ಬೂಟ್‍ನಿಂದ ಬಾರಿಸಿದ ಪಿಎಸ್‍ಐ: ವಿಡಿಯೋ ವೈರಲ್

    ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆಯೇ ಕೈ ಕೈ ಮಿಲಾಯಿಸಿದ ವೇಳೆ ಪಿಎಸ್‍ಐ ಬೂಟ್‍ನಿಂದ ಹೊಡೆದು ದರ್ಪ ತೋರಿಸಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

    ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಇಪ್ಪತ್ತೈದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಾಧ್ಯಮಗಳಿಗೆ ತಡವಾಗಿ ವಿಡಿಯೋ ಲಭ್ಯವಾಗಿದೆ. ಸಿಂಗನಾಳ ಗ್ರಾಮದ ಶಿವಬಸಪ್ಪ ಹಾಗೂ ವೀರಭದ್ರಪ್ಪ ನಡುವೆ ಭೂವಿವಾದಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿತ್ತು. ಆಗ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ನಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಬೂಟ್ ನಿಂದ ಹೊಡೆದು ಗುಂಪನ್ನ ಚದುರಿಸಿದ್ದಾರೆ.

    ಗುಂಪು ಚದುರಿಸಬೇಕಾದ್ರೆ ಲಾಠಿ ಬಳಸಬೇಕು ಆದ್ರೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ಬಳಸಿರೋದು ವಿವಾದಕ್ಕೆ ಕಾರಣವಾಗಿದೆ. ಇದೀಗ ಪಿಎಸ್‍ಐ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    https://www.youtube.com/watch?v=1sMur_Y6GmI&feature=youtu.be

  • ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ರಾಯಚೂರು: ಸಿಂಧನೂರು ತಾಲೂಕಿನ ಮುಚ್ಚಳಕ್ಯಾಂಪ್ ಬಳಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಬೈಕ್‍ಗೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಸಿಂಧನೂರು ತಾಲೂಕಿನ ಗೀತಾಕ್ಯಾಂಪ್ ನಿವಾಸಿ 50 ವರ್ಷದ ಕೆ.ಪಾಪರೆಡ್ಡಿ ಕೊಲೆಯಾಗಿರುವ ವ್ಯಕ್ತಿ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಳೇ ವೈಷಮ್ಯ ಸಾಧಿಸಿ ಕೊಲೆ ಮಾಡಲಾಗಿದೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

    ಹೈದರಾಬಾದ್ ನಲ್ಲಿರುವ ಭೋಸ್ ರೆಡ್ಡಿ ಮತ್ತು ಸುಮನ್ ರೆಡ್ಡಿ ಎಂಬುವವರು ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯಾದ ಸ್ಥಳದಲ್ಲಿ ಮಚ್ಚು ಲಾಂಗುಗಳು ಪತ್ತೆಯಾಗಿದ್ದು, ಇದು ಸುಪಾರಿ ಕೊಲೆ ಅಂತ ಶಂಕಿಸಲಾಗಿದೆ.

    ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೊಲೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

  • ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಧಾರವಾಡ: ಕಿರಿಯ ಸಹೋದರನ ನಕಲಿ ಮರಣ ಪ್ರಮಾಣ ಪತ್ರ ತೆಗೆಸಿ ಆಸ್ತಿ ಲಪಟಾಯಿಸಲು ಅಣ್ಣನೊಬ್ಬನು ಹೊಂಚು ಹಾಕಿರೋ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

    ಧಾರವಾಡ ತಾಲೂಕಿನ ಮಾಳಮಡ್ಡಿಯ ನಿವಾಸಿಯಾದ ನಾನಾಸಾಹೇಬ್ ದೇಶಪಾಂಡೆ ಅವರು 2012 ರಲ್ಲಿ ಉತ್ತರಾಖಂಡ ಪ್ರವಾಸಕ್ಕೆ ಹೋದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ನಾನಾಸಾಹೇಬ ಸಹೋದರ ರಂಗಾರಾವ್ ದೇಶಪಾಂಡೆ 2000ರಲ್ಲಿಯೇ ತಮ್ಮನ ಮರಣ ಪ್ರಮಾಣಪತ್ರ ತೆಗೆಸಿದ್ದಾನೆ.

    ಅಮ್ಮಿನಬಾವಿ ಗ್ರಾಮದ ಬಳಿಯಿರುವ 8 ಎಕರೆ ಜಮೀನು ಲಪಟಾಯಿಸಲು ರಂಗರಾವ್ ಹೊಂಚು ಹಾಕಿದ್ದನು. ಆದರೆ ಇದು ನಾನಾಸಾಹೇಬ ಕುಟುಂಬಸ್ಥರಿಗೆ 2014ರಲ್ಲಿ ಆಸ್ತಿಯನ್ನು ವಿಭಜಿಸುವಾಗ ತಿಳಿದಿದೆ. ಆದ್ರೆ ಇದೂವರೆಗೂ ನಾನಾಸಾಹೇಬ ಪತ್ನಿ ಲಕ್ಷ್ಮೀಬಾಯಿ ಮತ್ತು ಪುತ್ರ ವೆಂಕಟೇಶ್ ಅವರಿಗೆ ಆಸ್ತಿಯನ್ನು ನೀಡಿಲ್ಲ. ಇದೀಗ ರಂಗಾರಾವ್‍ಗೆ ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹೇಗೆ ನಕಲಿ ಪ್ರಮಾಣ ಪತ್ರ ನೀಡಿದರು ಎಂದು ನಾನಾಸಾಹೇಬ್ ಪುತ್ರ ವೆಂಕಟೇಶ್ ಪ್ರಶ್ನಿಸುತ್ತಾರೆ.

    ಈ ಸಂಬಂಧ ನಾನಾಸಾಹೇಬ ಪುತ್ರ ವೆಂಕಟೇಶ್ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ಅಪ್ಪನ ಜೊತೆ ಸೇರಿ ಅತ್ತಿಗೆ ಮೇಲೆ ಮೈದುನ ಪೈಶಾಚಿಕ ಕೃತ್ಯ – ಕಾರವಾರದಲ್ಲೊಂದು ಬೆಚ್ಚಿಬೀಳಿಸುವ ಘಟನೆ

    ಅಪ್ಪನ ಜೊತೆ ಸೇರಿ ಅತ್ತಿಗೆ ಮೇಲೆ ಮೈದುನ ಪೈಶಾಚಿಕ ಕೃತ್ಯ – ಕಾರವಾರದಲ್ಲೊಂದು ಬೆಚ್ಚಿಬೀಳಿಸುವ ಘಟನೆ

    ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದೆ. ಬಡಪಾಯಿ ಸೊಸೆ ಮೇಲೆ ಅತ್ತೆ, ಮಾವ, ಮೈದುನರಿಂದಲೇ ಹೇಯ ಕೃತ್ಯ ನಡೆದಿದೆ.

    ಗೌರಿ ಪತಿ ಪಕೀರ್

    ಸೊಸೆ ಗೌರಿ ಪಕೀರ ಸಿದ್ದಿ ಮನೆಯವರಿಂದಲೇ ಹಲ್ಲೆಗೊಳಗಾದ ಮಹಿಳೆ. ಮಗನ ಹೆಸರಲ್ಲಿದ್ದ ಆಶ್ರಯ ಮನೆ ತಮ್ಮ ಹೆಸರಿಗೆ ಬರೆಸಬೇಕೆಂದು ಅತ್ತೆ ರೀಟಾ, ಮಾವ ಜೂಜೆ ಮತ್ತು ಮೈದುನ ಶಿವ ಮೂವರು ಸೇರಿ ಗೌರಿ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ.

    ಅತ್ತೆ ರೀಟಾ, ಮಾವ ಜೂಜೆ

    ಗೌರಿ ಪತಿ ಪಕೀರ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಸೊಸೆಯನ್ನ ಕಟ್ಟಿ ಹಾಕಿ ಕಣ್ಣುಗಳಿಗೆ ಖಾರದ ಪುಡಿ ಎರಚಿ ಕಿರುಕುಳ ನೀಡಿದ್ದಾರೆ. ಇನ್ನೂ ಮೃಗರೂಪಿ ಮಾವ ಮತ್ತು ಮೈದುನ ಗೌರಿಯವರ ಗುಪ್ತಾಂಗಗಳನ್ನ ಕಚ್ಚಿ ಗಾಯಗೊಳಿಸಿದ್ದಾರೆ.

    ತೀವ್ರವಾಗಿ ಗಾಯಗೊಂಡಿದ್ದ ಗೌರಿ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಪತ್ನಿಯ ಮೇಲೆ ಹಲ್ಲೆಯನ್ನು ಖಂಡಿಸಿ ಫಕೀರ್ ಯಲ್ಲಾಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಗೌರಿ ಅವರ ಅತ್ತೆ, ಮಾವ ಮತ್ತು ಮೈದುನ ನಾಪತ್ತೆಯಾಗಿದ್ದಾರೆ.

     

  • ಪೊಲೀಸರಿದ್ರೂ ಮಹಿಳೆಯ ಸೀರೆ ಬಿಚ್ಚಿ ಹಲ್ಲೆ -ಹಾಸನದಲ್ಲೊಂದು ಅಮಾನವೀಯ ಕೃತ್ಯ

    ಪೊಲೀಸರಿದ್ರೂ ಮಹಿಳೆಯ ಸೀರೆ ಬಿಚ್ಚಿ ಹಲ್ಲೆ -ಹಾಸನದಲ್ಲೊಂದು ಅಮಾನವೀಯ ಕೃತ್ಯ

    ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಹಿಳೆಯೊಬ್ಬರ ಸೀರೆ ಬಿಚ್ಚಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡ ಕುಂಚೇವು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಗ್ರಾಮದ ರಾಜಮ್ಮ ಹಲ್ಲೆಗೊಳಗಾದ ಮಹಿಳೆ. ಗ್ರಾಮದ ಮಂಜೇಗೌಡ ಎಂಬವರು ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿಸಿದ್ದಾರೆ ಎಂದು ರಾಜಮ್ಮ ಆರೋಪಿಸುತ್ತಿದ್ದಾರೆ.

    ರಾಜಮ್ಮ ಮತ್ತು ಪ್ರಮೀಳಾ ಕುಮಾರಿ ಎಂಬವರ ನಡುವೆ ಜಮೀನು ವಿವಾದ ಹಿನ್ನೆಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಏಪ್ರಿಲ್ ನಲ್ಲಿ ನ್ಯಾಯಾಲಯದ ತೀರ್ಪು ಸಹ ಪ್ರಕಟವಾಗಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಪ್ರಮೀಳಾ ಕುಮಾರಿಗೆ 3 ಎಕೆರೆ 37 ಗುಂಟೆ ಜಮೀನು ನೀಡಲಾಗಿತ್ತು. ಆದರೆ ಪ್ರಮೀಳಾ ಉಳಿದ ಜಮೀನಿಗಾಗಿ ಗಲಾಟೆ ನಡೆಸುತ್ತಿದ್ದರು.

    ಶುಕ್ರವಾರ ಜಮೀನಿನಲ್ಲಿ ಇಬ್ಬರ ನಡುವೆ ಸಂಧಾನ ನಡೆಸಲು ರೈತ ಮುಖಂಡ ಎನ್ನಲಾದ ಮಂಜೇಗೌಡ ಎಂಬವರು ತಮ್ಮ ಸಹಚರರೊಂದಿಗೆ ಆಗಮಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ರೈತ ಸಂಘದ ಕಾರ್ಯಕರ್ತೆ ರಾಜಮ್ಮ ಅವರ ಸೀರೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ.

    ಸ್ಥಳದಲ್ಲಿ ರೈತ ಸಂಘದ ಸದಸ್ಯರು, ಪೊಲೀಸರು ಮತ್ತು ಸ್ಥಳೀಯರಿದ್ರೂ ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ರಾಜಮ್ಮ ಆರೋಪಿಸಿದ್ದಾರೆ. ಈ ಸಂಬಂಧ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/eplzsrcwbuA

  • ಆಸ್ತಿಗಾಗಿ ಸ್ವಂತ ಮಗನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಪೋಷಕರು

    ಆಸ್ತಿಗಾಗಿ ಸ್ವಂತ ಮಗನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಪೋಷಕರು

    ಚಾಮರಾಜನಗರ: ಆಸ್ತಿಗಾಗಿ ತಂದೆ, ತಾಯಿ ಮತ್ತು ಕಿರಿಯ ಮಗ ಮೂವರು ಸೇರಿ ಹಿರಿಯ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಗೆಮರಳ್ಳಿ ಗ್ರಾಮದಲ್ಲಿ ನಡೆದಿದೆ.

    ಮುರುಗನ್ ಕೊಲೆಯಾದ ದುರ್ದೈವಿ. ತಂದೆ ಮಾರಪ್ಪ, ತಾಯಿ ಪುಷ್ಪ ಹಾಗು ತಮ್ಮ ಷಣ್ಮುಖ ಮೂವರು ಸೇರಿ ಮುರುಗನ್ ನನ್ನು ಕಬ್ಬಿಣದ ರಾಡಿನಿಂದ ತಲೆ ಭಾಗಕ್ಕೆ ಹೊಡೆದು ಕೊಲೆಗೈದಿದ್ದಾರೆ. ಭಾನುವಾರ ರಾತ್ರಿ ದನಗಳನ್ನು ಕೊಟ್ಟಿಗೆಯ ವಿಚಾರಚವಾಗಿ ಜಗಳ ನಡೆದಿತ್ತು. ಈ ವೇಳೆ ಮೂವರು ಸೇರಿ ಮುರುಗನ್ ಅವರನ್ನು ಕೊಲೆ ಮಾಡಿದ್ದಾರೆ.

    ಮುರುಗನ್ ಮತ್ತು ಷಣ್ಮುಖ ಇಬ್ಬರು ಸಹೋದರರು. ಇಬ್ಬರು ಬೇರೆ ಬೇರೆಯಾಗಿದ್ದು, ಮಾರಪ್ಪ ಮತ್ತು ಪುಷ್ಪಾ ಕಿರಿಯ ಮಗ ಷಣ್ಮುಖನೊಂದಿಗೆ ವಾಸವಾಗಿದ್ದರು. ಸಹೋದರರ ನಡುವೆ ಪದೇ ಪದೇ ಕೊಟ್ಟಿಗೆಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಕೊಲೆಯ ನಂತರ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಮೃತ ದೇಹವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಕೆಲವಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.