Tag: property

  • ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯಿಂದ ಅಮ್ಮನಿಗೆ ತಲಾಖ್ ಕೊಡಿಸಿದ!

    ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯಿಂದ ಅಮ್ಮನಿಗೆ ತಲಾಖ್ ಕೊಡಿಸಿದ!

    ಮಂಡ್ಯ: ಆಸ್ತಿಗಾಗಿ ಸ್ವಂತಮಗನೇ ಗಂಡನಿಂದ ತಲಾಖ್ ಕೊಡಿಸಿದ್ದಾನೆ ಎಂದು ಹೆತ್ತ ತಾಯಿ ಆರೋಪ ಮಾಡುತ್ತಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಗ್ರಾಮದ ನಿವಾಸಿಗಳಾದ ಅಬ್ದುಲ್ ಮಜೀದ್ ಮತ್ತು ಫಾತೀಮಾ ಬೀ ಎಂಬ ವೃದ್ಧ ದಂಪತಿಗಳು ಮಗನ ವಿರುದ್ಧ ಆರೋಪ ಮಾಡುತ್ತಿದ್ದಾರೆ.

    ತಂದೆ ಮತ್ತು ತಾಯಿ ಹೆಸರನಲ್ಲಿರೋ ಆಸ್ತಿಗಾಗಿ ಇವರ ನಾಲ್ವರು ಮಕ್ಕಳು ವೃದ್ಧ ತಂದೆ-ತಾಯಿ ದಂಪತಿಯನ್ನು ಹೊರ ಹಾಕಿದ್ದಾರೆ. ಇನ್ನು ಇವರ ಕೊನೆಯ ಮಗ ನಾಗಮಂಗಲದಲ್ಲಿ ವಕೀಲನಾಗಿರೋ ಮಹಮದ್ ಗೌಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಂದೆಯಿಂದ ತಾಯಿಗೆ ತಲಾಖ್ ಕೊಡಿಸಿರುವುದಾಗಿ ಖಾಲಿ ಪೇಪರ್ ಗೆ ಸಹಿ ಮಾಡಿಸಿಕೊಂಡು ತವರಿಗೆ ಅಟ್ಟಿ ತನ್ನ ದುಷ್ಟತನ ಮೆರೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ವೃದ್ಧ ದಂಪತಿಗಳಿಗೆ ಒಟ್ಟು ಆರು ಜನ ಮಕ್ಕಳು. ಐದು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಹೆಣ್ಣು ಮಗಳು ಮತ್ತು ಹಿರಿಯ ಮಗನನ್ನು ಬಿಟ್ಟು ಉಳಿದ ನಾಲ್ವರು ಮಕ್ಕಳು ಆಸ್ತಿ ಬರೆಸಿಕೊಂಡು ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ್ದಾರಂತೆ. ಇದ್ರಿಂದ ಮಾನಸಿಕವಾಗಿ ನೊಂದು, ಬೆಂದಿರೋ ಈ ವೃದ್ಧ ಜೀವಗಳು ಈಗ ಮಂಡ್ಯದ ಹಿರಿಯ ನಾಗರೀಕರ ಸಹಾಯವಾಣಿಯ ಮೊರೆ ಹೋಗಿದ್ದಾರೆ.

    ನಾನು ಪತ್ನಿಗೆ ತಲಾಖ್ ಕೊಟ್ಟಿಲ್ಲ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಆದ್ರೆ ಆಸ್ತಿಗಾಗಿ ಮಗ ಈ ರೀತಿ ಮಾಡಿದ್ದಾನೆ. ಹೀಗಾಗಿ ತಮಗೆ ಮೋಸ ಮಾಡಿ ಲಪಟಾಯಿಸಿರೋ ತಮ್ಮ ಆಸ್ತಿ ಮತ್ತು ಮನೆಯನ್ನು ವಾಪಸ್ಸು ಕೊಡಿಸಿ. ನಮಗೆ ರಕ್ಷಣೆ ಕೊಡಿಸಿ ಅಂತ ಈಗ ಇಲಾಖೆಗೆ ದೂರು ಕೊಟ್ಟಿದ್ದಾರೆ. ಅಲ್ದೆ ನಮಗೆ ಅದೇ ನಮ್ಮ ಮನೆಯಲ್ಲಿ ಬಾಳಲು ಅವಕಾಶ ಮಾಡಿ ಕೊಡಿ ಅಂತ ಮೊರೆ ಇಡ್ತಿದ್ದಾರೆ.

  • ಆಸ್ತಿ ವಿಚಾರಕ್ಕೆ ಜಗಳ ತೆಗೆದು ಅತ್ತಿಗೆಯ ಮೇಲೆ 9 ತಿಂಗಳವರೆಗೆ ಅತ್ಯಾಚಾರವೆಸಗಿದ

    ಮುಂಬೈ: ವ್ಯಕ್ತಿಯೊಬ್ಬ ತನ್ನ ಅಣ್ಣನ ಹೆಂಡತಿಯ ಮೇಲೆ 9 ತಿಂಗಳವರೆಗೆ ನಿರಂತರವಾಗಿ ಅತ್ಯಾಚಾರವೆಸಗಿರೋ ಘಟನೆ ಮುಂಬೈ ಬಳಿಯ ಕಲ್ಯಾಣ್ ನಲ್ಲಿ ನಡೆದಿದೆ.

    ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 35 ವರ್ಷದ ವ್ಯಕ್ತಿ ಅಣ್ಣನ ಮನೆಗೆ ಆಗಾಗ ಬಂದು ಹೋಗುತ್ತಿದ್ದ. 40 ವರ್ಷದ ಸಂತ್ರಸ್ತೆಯ ಗಂಡ ಅಂದ್ರೆ ಆರೋಪಿಯ ಅಣ್ಣ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಅತ್ಯಾಚಾರವೆಸಗಿದ ಮೈದುನ ಮಹಿಳೆಗೆ ತನ್ನ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದ.

    ಫೆಬ್ರವರಿಯಲ್ಲಿ ಮಹಿಳೆಯ ಗಂಡನನ್ನು ಥಾಣೆಯಲ್ಲಿ ಮೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಒಬ್ಬರೇ ಇದ್ದಾಗ ಆರೋಪಿ ಅವರ ಮನೆಗೆ ಹೋಗಿದ್ದ. ಆಸ್ತಿಯಲ್ಲಿ ತನ್ನ ಪಾಲು ಕೊಡಲು ಕೇಳಿದ್ದ. ಇದಕ್ಕೆ ವಕೀಲರೊಬ್ಬರನ್ನು ನೇಮಿಸುವುದಾಗಿ ಮಹಿಳೆ ಹೇಳಿದ್ದರು. ಇದರಿಂದ ಕೋಪಗೊಂಡು ಆತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ಅಂದಿನಿಂದ ಆರೋಪಿ ಅನೇಕ ಬಾರಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

     

    9 ತಿಂಗಳ ನಿಂತರ ಲೈಂಗಿಕ ದೌರ್ಜನ್ಯದ ನಂತರ ಮಹಿಳೆ ಧೈರ್ಯ ಮಾಡಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ನಾವು ಕೂಡಲೇ ಆರೋಪಿಯನ್ನ ಬಂಧಿಸಿದ್ದೇವೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಸುತ್ತಿಗೆಯಿಂದ ಹೊಡೆದು ಮಗನಿಂದಲೇ ಅಪ್ಪನ ಬರ್ಬರ ಕೊಲೆ

    ಸುತ್ತಿಗೆಯಿಂದ ಹೊಡೆದು ಮಗನಿಂದಲೇ ಅಪ್ಪನ ಬರ್ಬರ ಕೊಲೆ

    ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಾಮಮೂರ್ತಿ ನಗರ ಸಮೀಪದ ಕಲ್ಕೆರೆ ಗ್ರಾಮದ ನಿವಾಸಿ ನಾರಾಯಣ ಸ್ವಾಮಿ (60) ತನ್ನ ಮಗನಿಂದಲೇ ಭೀಕರವಾಗಿ ಕೊಲೆಯಾಗಿರುವ ದುರ್ದೈವಿ ಅಪ್ಪ. ನಾರಾಯಣ ಸ್ವಾಮಿ ಪತ್ನಿ ಹಾಗು ಮಗ ಮನೋಜ್ ಇಬ್ಬರನ್ನು ಬಿಟ್ಟು ನಗರದ ಕೌದೇನಹಳ್ಳಿಯಲ್ಲಿ ತನ್ನ ಬೇರೊಂದು ಬಿಲ್ಡಿಂಗ್ ನಲ್ಲಿ ವಾಸವಿದ್ದರು.

    ನಾರಾಯಣಸ್ವಾಮಿ ಹೆಂಡತಿ ಹಾಗೂ ಮಗನಿಗೆ ಬಾಡಿಗೆ ಹಣವನ್ನು ನೀಡದೆ ಇರುವುದರಿಂದ ಇದೇ ವಿಷಯಕ್ಕೆ ತಂದೆ ಮಗನ ನಡುವೆ ಶನಿವಾರ ರಾತ್ರಿ ಗಲಾಟೆ ಶುರುವಾಗಿದೆ. ಆದರೆ ಜಗಳ ವಿಕೋಪಕ್ಕೆ ತಿರುಗಿ ಮನೋಜ್ ಕೈಗೆ ಸಿಕ್ಕ ಸುತ್ತಿಗೆಯಿಂದ ತಂದೆಯ ತಲೆಗೆ ಜೋರಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ನಾರಾಯಣ ಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಆರೋಪಿ ಮನೋಜ್ ಘಟನೆ ಬಳಿಕ ಪರಾರಿಯಾಗಿದ್ದಾನೆ.

    ಸದ್ಯಕ್ಕೆ ರಾಮಮೂರ್ತಿನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆಸ್ತಿ ವಿಷಯಕ್ಕಾಗಿ ಅಣ್ಣ ತಮ್ಮಂದಿರು ಕಿತ್ತಾಡಿಕೊಂಡು ಸಾಯುವುದನ್ನು ಹೆಚ್ಚು, ಆದರೆ ಇಲ್ಲಿ ಹೆತ್ತ ಮಗನೇ ತಂದೆಯನ್ನು ಕೊಲೆಗೈದಿರುವುದು ವಿಪರ್ಯಾಸದ ಸಂಗತಿಯಾಗಿದೆ.

  • ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ. ಬೇನಾಮಿ ಗಿಫ್ಟ್ ಪಡೆಯೋದರಲ್ಲಿ ಅವರು ನಿಸ್ಸೀಮರು. ಅದರ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದಿಡ್ತೇನೆಂದು ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ಪಾವಗಡದಲ್ಲಿ ಸಚಿವ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ನನಗೆ ಬೇನಾಮಿ ಆಸ್ತಿಯ ಗಿಫ್ಟ್ ಕೊಡುವ ಆಗತ್ಯವಿಲ್ಲ. ತಾಲೂಕಿನ ಜನ ಎಲ್ಲ ಗಿಫ್ಟ್ ಕೊಟ್ಟಿದ್ದು ಅವರ ಗಿಫ್ಟ್ ಬೇಕಾಗಿಲ್ಲ. ಡಿಕೆಶಿ ರಾಜಕೀಯ ಜೀವನ ಬಹುಶಃ ಇಲ್ಲಿಗೆ ಮುಗಿಯುತ್ತಿದ್ದು, ಸ್ವಾರ್ಥಕ್ಕಾಗಿ ಸಾರ್ವಜನಿಕ ಜೀವನ ಬಳಸಿಕೊಂಡಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಪರಿವರ್ತನ ಯಾತ್ರೆಯ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದು ಪರಿವರ್ತನೆಯ ವಾತಾವರಣ ಸೃಷ್ಟಿಯಾಗ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ರಾಜ್ಯಕ್ಕೆ ಬೇಕೆಂದು ಜನರು ಕೈ ಜೋಡಿಸ್ತಿದ್ದಾರೆ. ತಾಲೂಕು ಮುಖಂಡರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗ್ತಿದ್ದೇವೆ. ಕನಕಪುರದ ನಂದಿನಿಗೌಡರವರು ಕೂಡಾ ಬಿಜೆಪಿ ಸೇರುತ್ತಿದ್ದಾರೆ. ನಾನು ಯಾವುದೇ ನಿಬಂಧನೆಗಳನ್ನ ಒಡ್ಡಿ ಪಕ್ಷ ಸೇರುತ್ತಿಲ್ಲ. ಯೋಗ್ಯತೆಗೆ ತಕ್ಕಂತೆ ದುಡಿಸಿಕೊಳ್ಳುತ್ತೆ ಎನ್ನುವ ಭರವಸೆಯಿದೆ ಎಂದರು.

    ಡಿಕೆಶಿಗೆ ನಾವು ಬೆಂಬಲ ಕೊಟ್ಟಾಗ ರಾಜಕೀಯವಾಗಿ ಬಹಳ ಶಕ್ತಿವಂತರಾಗಿದ್ದರು. ಇವತ್ತು ಯಾರಿಗೆ ಶಕ್ತಿ ಕೊಟ್ಟಿದ್ದೇವೆ ಅಂತಾ ಅರ್ಥವಾಗಿದೆ. ಅವರಿಂದ ತಾಲೂಕಿಗೆ ಕೊಡುಗೆ ಶೂನ್ಯ, ಅವರು ಕೆಲಸಗಳೇನು ಮಾಡಿಲ್ಲ. ಮತ ಹಾಕಿಸಿಕೊಂಡು ಮುಖಂಡರ ಮನೆಗೆ ಹೋಗಿ ಅವರ ಸಂತೃಪ್ತಿಗೊಳಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಬಂದು ಸಹಾಯ ಬೇಡಿದ್ರು, ಸಹಾಯ ಮಾಡಿದ್ವಿ. ಆದರೆ ಸರ್ಕಾರ ಮುಗಿಯುತ್ತಾ ಬಂದ್ರೂ ಅನುಕೂಲವಾಗದಿದ್ದಾಗ ಮಾತನಾಡಲೇಬೇಕಾಗಿದೆ. ನಾನು ಬಿಜೆಪಿಗೆ ಹೋಗ್ತಿರುವ ಸಂಕಟ ಅವರನ್ನ ಕಾಡ್ತಿದೆ ಎಂದು ಹೇಳಿದ್ದಾರೆ.

    ಬುಧವಾರ ಆಪ್ತರ ಮನೆಗೆ ಸಚಿವ ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ಭೇಟಿ ಮಾಡಿದ್ದ ಮುಖಂಡರೆಲ್ಲಾ ಈಗ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರು ಬರ್ತಾರೆ, ಬಲವಂತಕ್ಕೆ ಬಂದು ಡ್ರಾಮಾ ಮಾಡಿ ಹೋಗ್ತಾರೆ. ಅವರನ್ನ ತಾಲ್ಲೂಕಿನ ಜನ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಅಂತಹ ಮಹತ್ವ ಕೊಡುವ ಅಗತ್ಯ ಸಹ ಇಲ್ಲ. ಜನಗಳ ಕೆಲಸ ಮಾಡಬೇಕಾದ್ದು ಅವರ ಕರ್ತವ್ಯ. ಅವರು 30 ವರ್ಷಗಳಿಂದ ಈ ಕೆಲಸ ಮಾಡಬೇಕಿತ್ತು. ಇಂದು ಕಾಂಗ್ರೆಸ್ ಅಧಿಕಾರ ಮುಗಿಸುವಂತಹ ಸಮಯ. ಕೊನೆಯಗಳಿಗೆಯಲ್ಲಿ ವಾರಕ್ಕೊಮ್ಮೆ ಬರ್ತೀನಿ ಅಂತಿದ್ದಾರೆ. ಅವರಿಗೆ ನಾನು ಬಿಜೆಪಿಗೆ ಸೇರುತ್ತಿರುವುದು ನೋವಿದೆ. ಅವರ ರಾಜಕೀಯ ಉನ್ನತಿಗೆ ತಾಲೂಕು ಮುಖ್ಯವಾಗಿತ್ತು. ತಾಲೂಕಿನ ಜನ ಪರಿವರ್ತನೆ ಆಗ್ತಿರೋದು ಅವರ ಹತಾಶೆಗೆ ಕಾರಣವಾಗಿದೆ. ಇವತ್ತು ನಮಗೆ ಶುಭದಿನ, ಮುಂದಿನ ದಿನಗಳಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆಂದು ಹೇಳಿದರು.

  • ಬಾಬಾ ರಾಮ್‍ರಹೀಮ್ ಸಿಂಗ್ ಆಸ್ತಿಗೆ ಕೊನೆಗೂ ಸಿಕ್ಕಳು ಉತ್ತರಾಧಿಕಾರಿ!

    ಬಾಬಾ ರಾಮ್‍ರಹೀಮ್ ಸಿಂಗ್ ಆಸ್ತಿಗೆ ಕೊನೆಗೂ ಸಿಕ್ಕಳು ಉತ್ತರಾಧಿಕಾರಿ!

    ಬೆಂಗಳೂರು: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಜೈಲುಪಾಲಾಗಿರುವ ಹಿನ್ನೆಲೆಯಲ್ಲಿ ಇದೀಗ ಎಲ್ಲರಿಗೂ ಮೂಡಿರುವ ಪ್ರಶ್ನೆ ಎಂದರೆ ದೇಶ, ವಿದೇಶಗಳಲ್ಲಿರುವ ಸಂಸ್ಥೆಗಳಿಗೆ ಯಾರು ಉತ್ತರಾಧಿಕಾರಿ ಎಂಬುದು. ಈ ಪ್ರಶ್ನೆಗೆ ಉತ್ತರವೂ ಸಿಕ್ಕಂತೆ ಕಾಣ್ತಿದೆ.

    ರಾಮ್ ರಹೀಂ ಬಾಬಾ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದಾಗ ಬಾಬಾ ಜೊತೆಯಲ್ಲೇ ಕಾಣಿಸಿಕೊಂಡಿದ್ದ ಮಹಿಳೆ ಹಾಗೂ ಬಾಬಾ ಮಗಳೆಂದೇ ಕರೆಯಲ್ಪಡುತ್ತಿರುವ ಹನಿಪ್ರೀತ್ ಇನ್ಸಾನ್ ಮುಂದಿನ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಯಾರು ಈ ಹನಿಪ್ರೀತ್ ಇನ್ಸಾನ್?: ಹನಿಪ್ರೀತ್ ಇಸಾನ್ ಮೂಲ ಹೆಸರು ಪ್ರಿಯಾಂಕ ತನೇಜಾ. ಹನಿಪ್ರೀತ್ ಹರಿಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯ ಫತೇಪುರ ಮೂಲದ ಮಹಿಳೆ. ಹನಿಪ್ರೀತ್ 1999ರಲ್ಲಿ ಸಿರ್ಸಾದ ಬಾಬಾ ರಾಮ್ ರಹೀಂ ಹಿಂಬಾಲಕನನ್ನು ಮದ್ವೆಯಾಗಿದ್ದರು. ಮದ್ವೆಯಾದ ಬಳಿಕ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿ ಬೇರೆಯಾಗಿದ್ದರು. 2009ರಲ್ಲಿ ಹನಿಪ್ರೀತ್ ಇನ್ಸಾನ್ ರನ್ನು ಬಾಬಾ ಮಗಳಾಗಿ ದತ್ತು ಪಡೆದುಕೊಂಡಿದ್ದಾರೆ.

    ಅಂದಿನಿಂದ ಮಗಳಾದ ಹನಿಪ್ರೀತ್ ಬಾಬಾನ ಎಲ್ಲ ಆಪ್ತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಡೇರಾ ಸಚ್ಚಾ ಸೌಧ ಮಾತ್ರ ಹನಿಪ್ರೀತ್ ಮತ್ತು ಬಾಬಾ ನಡುವೆ ಕೇವಲ ಅಪ್ಪ-ಮಗಳ ಸಂಬಂಧವಿದೆ ಎಂದು ಹೇಳಿದೆ. ಆದರೆ ಮೆಸೆಂಜರ್ ಆಫ್ ಗಾಡ್ ಸಿನಿಮಾದಲ್ಲಿ ಬಾಬಾಗೆ ಹೀರೋಯಿನ್ ಆಗಿ ಹನಿಪ್ರೀತ್ ಕಾಣಿಸಿಕೊಂಡಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

     

  • 22 ಕೋಟಿ ರೂ. ಸರ್ಕಾರಿ ಆಸ್ತಿಯನ್ನು ಕೇವಲ 28 ಸಾವಿರ ರೂ.ಗೆ ಮಾರಿದ್ರು!

    22 ಕೋಟಿ ರೂ. ಸರ್ಕಾರಿ ಆಸ್ತಿಯನ್ನು ಕೇವಲ 28 ಸಾವಿರ ರೂ.ಗೆ ಮಾರಿದ್ರು!

    ಬೀದರ್: 22 ಕೋಟಿ ರೂ. ಬೆಲೆಬಾಳುವ ಸರ್ಕಾರದ ಆಸ್ತಿಯನ್ನು ಕೇವಲ 28 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವಂಥ ಅಕ್ರಮ ಬೀದರ್ ನಗರಸಭೆಯಲ್ಲಿ ನಡೆದಿದೆ.

    ನಗರಸಭೆ ಆಯುಕ್ತ ಕೆ. ನರಸಿಂಹಮೂರ್ತಿ ಹಾಗೂ ಹಿರಿಯ ಉಪ ನೋಂದಣಾಧಿಕಾರಿ ಎಸ್.ಎಂ ಹೆಮೇಶ್ ಕೆಲ ಖಾಸಗಿ ವ್ಯಕ್ತಿಗಳಿಗೆ ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಕೇವಲ 28 ಸಾವಿರಕ್ಕೆ ಮಾರಾಟ ಮಾಡಿದ್ದಾರೆಂದು ಡಿಯುಡಿಸಿ ಅಧಿಕಾರಿ ನಗರದ ಮಾರ್ಕೆಟ್ ಠಾಣೆಯಲ್ಲಿ ಕ್ರೀಮಿನಲ್ ಕೇಸ್ ದಾಖಲಿಸಿದ್ದರು. ಇದೀಗ ಪೊಲೀಸರು ನಗರಸಭೆ ಆಯುಕ್ತರು ಹಾಗೂ ಉಪನೊಂದಣಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಇನ್ನು ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ಸಚಿವರು ಪತ್ರ ಬರೆದಿದ್ದು, ತನಿಖೆ ಕೈಗೊಂಡು ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಡಿಯುಡಿಸಿ ಅಧಿಕಾರಿಗಳ ದೂರಿನ ಮೇರೆಗೆ ಮುನ್ಸಿಪಲ್ ಕಾಯ್ದೆ ಮತ್ತು ಕ್ರೀಮಿನಲ್ ಕೇಸ್ ದಾಖಲು ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಎಸ್‍ಪಿ ದೇವರಾಜ್ ಹೇಳಿದ್ದಾರೆ.

  • ಜಮೀನಿನಲ್ಲೇ ತಂದೆಯ ತಲೆಗೆ ಕೊಡಲಿಯಲ್ಲಿ ಹೊಡೆದು ಬರ್ಬರವಾಗಿ ಕೊಲೆಗೈದ ಮಗ!

    ಜಮೀನಿನಲ್ಲೇ ತಂದೆಯ ತಲೆಗೆ ಕೊಡಲಿಯಲ್ಲಿ ಹೊಡೆದು ಬರ್ಬರವಾಗಿ ಕೊಲೆಗೈದ ಮಗ!

    ಮಂಡ್ಯ: ಆಸ್ತಿ ಆಸೆಗಾಗಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ನಿವಾಸಿ ಬೊಮ್ಮೇಗೌಡ ಎಂಬವರೇ ಮಗನಿಂದಲೇ ಹತರಾದ ದುರ್ದೈವಿ.

    ಬೊಮ್ಮೇಗೌಡ ಮತ್ತು ಅವರ ಮಗ ಮಂಜುಗೆ ಆಸ್ತಿ ವಿಚಾರವಾಗಿ ಪದೇ ಪದೇ ಗಲಾಟೆಯಾಗುತ್ತಿತ್ತು. ಇಂದು ಎಂದಿನಂತೆ ಅಪ್ಪ ಮಕ್ಕಳಿಬ್ಬರು ಜಮೀನಿನ ಬಳಿ ಕೆಲಸಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಆಸ್ತಿ ಬರೆದು ಕೊಡುವಂತೆ ಮಂಜು ತನ್ನ ತಂದೆ ಬೊಮ್ಮೇಗೌಡನನ್ನು ಕೇಳಿದ್ದಾನೆ. ಈ ವಿಷ್ಯವಾಗಿ ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ಇದ್ರಿಂದ ಕೋಪಗೊಂಡ ಮಂಜು ಕೊಡಲಿಯಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ತ್ರಾವವಾಗಿ ಬೊಮ್ಮೇಗೌಡ ಸಾವನ್ನಪ್ಪಿದ್ದಾರೆ.

    ತಂದೆಯನ್ನು ಕೊಲೆ ಮಾಡಿದ ಬಳಿಕ ಮಂಜು ನಾಪತ್ತೆಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕಿಕ್ಕೇರಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಧಾರವಾಡ: ಆಸ್ತಿವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಶಾಂತಿ ನಗರದಲ್ಲಿ ನಡೆದಿದೆ.

    ಯಲ್ಲವ್ವ ನಾಯ್ಕರ್, ಭಾರತಿ ಪತಂಗಿ, ಪ್ರದೀಪ್ ಪತಂಗಿ ಎಂಬವರು ಗಂಭೀರವಾಗಿ ಗಾಯಗೊಂಡರು. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಯಲ್ಲವ್ವಾ ನಾಯ್ಕರ್ ಮತ್ತು ಮಗಳು ಭಾರತಿ ಪಂತಂಗಿ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗವಾಡ ಗ್ರಾಮದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಹುಬ್ಬಳ್ಳಿಗೆ ಕೆಲಸವನ್ನು ಅರಿಸಿಕೊಂಡು ಬಂದಿದ್ದರು.

    ಆದ್ರೆ ಯಲ್ಲವ್ವಾರ ಪತಿಗೆ ಇಬ್ಬರು ಹೆಂಡತಿಯರು. ಯಲ್ಲವ್ವಾ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು ಹೀಗಾಗಿ ಯಲ್ಲವ್ವಾ ಪತಿಯ ಹೆಸರಲ್ಲಿ ಇದ್ದ 14 ಎಕರೆ ಜಮೀನು ವಿವಾದ ಸವದತ್ತಿ ಕೋರ್ಟ್ ನಲ್ಲಿತ್ತು. ಕಾರಣ ಸವದತ್ತಿ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶ ನೀಡಿದ್ದು ಯಲ್ಲವ್ವಾರಿಗೆ ನ್ಯಾಯಾಲಯ ಹೆಚ್ಚಿನ ಭಾಗವನ್ನು ನೀಡಿ ಆದೇಶ ಮಾಡಿತ್ತು. ಇದನ್ನು ಸಹಿಸದ ಯಲ್ಲವ್ವಾರಂಡನ ಮೊದಲ ಪತ್ನಿಯ ಮಗ ಈ ಕೃತ್ಯ ಮಾಡಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.

    ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಹೆತ್ತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಮಗ!

    ಹೆತ್ತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಮಗ!

    ವಿಜಯಪುರ: ಆಸ್ತಿ ಹಣಕ್ಕಾಗಿ ಹೆತ್ತ ತಂದೆಯನ್ನೆ ಮಗ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ತಾಲೂಕಿನ ಬೂತನಾಳ ತಾಂಡಾದ ನಿವಾಸಿ ತೇವು ಚವ್ಹಾಣ ಎಂಬವರೇ ಮಗನಿಂದಲೆ ಕೊಲೆಯಾದ ದುರ್ದೈವಿ. ಮೋಹನ್ ಚವ್ಹಾಣ ತಂದೆಯನ್ನ ಕೊಲೆಗೈದ ಪಾಪಿ ಮಗ.

    ಕಳೆದ ಕೆಲವು ದಿನಗಳ ಹಿಂದೆ ತಂದೆ ತೇವು ಚವ್ಹಾಣ 4 ಎಕರೆ ಜಮೀನು ಮಾರಾಟ ಮಾಡಿದ್ದರು. ಆ ಬಳಿಕದಿಂದ ಜಮೀನು ಮಾರಾಟದ ಹಣಕ್ಕಾಗಿ ಮೋಹನ್ ತಂದೆಯನ್ನು ಪೀಡಿಸುತ್ತಿದ್ದು, ಹಣ ಕೊಡದ ಸಿಟ್ಟಿನಿಂದ ತಂದೆಯನ್ನೇ ಕೊಲೈಗಿದ್ದಾನೆ. ಬಳಿಕ ಕೊಡಲಿ ಸಮೇತ ಮನೆ ಬಳಿ ಮೋಹನ ಕುಳಿತು ಬಿಟ್ಟಿದ್ದನು.

    ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೋಹನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಮನೆಗೆ ಬೆಂಕಿ ಹಾಕಿ ಸಹೋದರನನ್ನು ಸೇರಿದಂತೆ ನಾಲ್ವರನ್ನು ಜೀವಂತ ಸುಟ್ಟ!

    ಪಾಟ್ನಾ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಹೋದರ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಜೀವಂತವಾಗಿ ಸುಟ್ಟ ದಾರುಣ ಘಟನೆ ಭಾನುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.

    ಬಿಹಾರದ ಕತಿಹಾರ್ ಜಿಲ್ಲೆಯಯಲ್ಲಿ ಈ ಘಟನೆ ಸಂಭವಿಸಿದೆ. ಕೇದಾರ್ ಸಿಂಗ್(45) ಪತ್ನಿ ಪ್ರತಿಮಾ ದೇವಿ(40) ಅವರ ಇಬ್ಬರು ಪುತ್ರಿಯರಾದ ಡಿಂಪಲ್ ಕುಮಾರಿ(15) ಮತ್ತು ಸೋನಿ(17) ಮೃತಪಟ್ಟವರು. ಕೋಣೆಯಲ್ಲಿ ಮಲಗಿದ್ದ ಮಗ ಲಕ್ಷ್ಮಣ್ ಕುಮಾರ್ ಸಿಂಗ್(12) ಘಟನೆಯಿಂದ ಪಾರಾಗಿದ್ದಾನೆ.

    ಕೇದಾರ್ ಸಿಂಗ್ ಮತ್ತು ಆತನ ಸಹೋದರನ ಮಧ್ಯೆ ಪೂರ್ವಜರ ಆಸ್ತಿ ವಿಷಯದ ಬಗ್ಗೆ ಜಗಳವಿತ್ತು. ಹೀಗಾಗಿ ಈ ಆಸ್ತಿ ದ್ವೇಷದಿಂದ ಕೇದಾರಸಿಂಗ್ ಹಾಗೂ ಆತನ ಕುಟುಂಬಸ್ಥನ್ನ ಮನೆಯಲ್ಲಿ ಮಲಗಿದ್ದ ವೇಳೆ ಹೊರಗಡೆಯ ಬಾಗಿಲ ಕೊಂಡಿಯನ್ನು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ಆ ವೇಳೆ ಬೆಂಕಿ ಹತ್ತಿದಾಗ ಎಚ್ಚರಗೊಂಡ ಕೇದಾರ್ ಸಿಂಗ್ ಕಿರುಚಾಡಿತೊಡಗಿದ್ದಾರೆ. ಕೇದಾರ್ ಸಿಂಗ್ ಸಹೋದರ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದವರನ್ನು ಕಾಪಾಡಲು ಆಗದಿದ್ದಾಗ ಮನೆಯಲ್ಲಿ ಸುಟ್ಟು ಹೋಗಿದ್ದರು.

    ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗ ಲಕ್ಷ್ಮಣ್ ಸಿಂಗ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇದಾರ್ ಸಿಂಗ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗ ಆರೋಪಿ ಕೇದಾರ್ ಸಿಂಗ್ ನಾಪತ್ತೆಯಾಗಿದ್ದಾನೆ.