Tag: property

  • ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ.

    ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ ಚಟವಿತ್ತು. ಹೀಗಾಗಿ ಪತ್ನಿ ದೂರವಾದ ಬಳಿಕ ಈತ ಪಕ್ಕದ ಗ್ರಾಮದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು. ಪ್ರತೀ ದಿನ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು.

    ಅಂತೆಯೇ ಸೋಮವಾರವೂ ಕೂಡ ತಾಯಿಯ ಬಳಿ ಬಂದು ಹಣ ಕೇಳಿದ್ದಾನೆ. ಆದ್ರೆ ತಾಯಿ ಮಾತ್ರ ಆತನಿಗೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಮಗ ಸುಬ್ರಹ್ಮಣ್ಯಂ ತಾಯಿ ಮಲಗಿದ್ದ ಸಂದರ್ಭದಲ್ಲಿ ಹೊದಿಕೆಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ ತಾಯಿಯನ್ನು ನೋಡಲೆಂದು ಬೆಲ್ಲಮ್ಮ ಮಗಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ಬೆಲ್ಲಮ್ಮ ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ 1.5 ಎಕರೆ ಜಮೀನಿದೆ. ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಖರೀದಿಸಲು ತಾಯಿ ದೊಡ್ಡ ಮಗನಿಗೆ 50,000 ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಎರಡನೇ ಮಗ ಸುಬ್ರಹ್ಮಣ್ಯಂ ತನಗೂ ಹಣ ಕೊಡುವಂತೆ ಹಾಗೂ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರಿದ್ದನು ಎಂಬುದಾಗಿ ವರದಿಯಾಗಿದೆ.

    ಸದ್ಯ ತಾಯಿ ಕೊಲೆ ಪ್ರಕರಣ ಸಂಬಂಧ ಮಗಳು ಸ್ಥಳೀಯ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ. ಮೃತ ಬೆಲ್ಲಮ್ಮ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಜಮೀನು ವ್ಯಾಜ್ಯ ಬಗೆಹರಿಸುವಂತೆ ಒತ್ತಾಯಿಸಿ ಟವರ್ ಏರಿ ಕುಳಿತ ಮಂಡ್ಯದ ವ್ಯಕ್ತಿ!

    ಜಮೀನು ವ್ಯಾಜ್ಯ ಬಗೆಹರಿಸುವಂತೆ ಒತ್ತಾಯಿಸಿ ಟವರ್ ಏರಿ ಕುಳಿತ ಮಂಡ್ಯದ ವ್ಯಕ್ತಿ!

    ಮಂಡ್ಯ: ನಕಲಿ ದಾಖಲೆ ಸೃಷ್ಟಿಸಿ ತನ್ನ ಜಮೀನನ್ನು ಹಣವಂತರು ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಿ ರೈತರೊಬ್ಬರು ಟವರ್ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ಉಪ್ಪರಕನಹಳ್ಳಿ ಗ್ರಾಮದ ಕೃಷ್ಣ ಎಂಬ ರೈತ ನಗರದ ಸಂಜಯ ವೃತ್ತದಲ್ಲಿರುವ ಟವರ್ ಏರಿ ಕುಳಿತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾರೆ. ತನ್ನ ಜಮೀನಿನ ಎದುರುಬದಿಯಲ್ಲಿ ಇರುವವರು ಹಣವಂತರಾಗಿದ್ದಾರೆ. ಅವರು ನಕಲಿ ದಾಖಲೆ ಸೃಷ್ಟಿಸಿ ತನ್ನ ಜಮೀನು ಲಪಟಾಯಿಸಲು ಹೊರಟಿದ್ದಾರೆ. ಈ ಬಗ್ಗೆ ತಹಶಿಲ್ದಾರ್ ಸೇರಿದಂತೆ ಹಲವರಿಗೆ ಮನವಿ ಪತ್ರ ಕೊಟ್ಟಿದ್ದೇನೆ. ಕಚೇರಿಗೆ ದಿನನಿತ್ಯ ಅಲೆದರೂ ಸಮಸ್ಯೆ ಮಾತ್ರ ಇತ್ಯರ್ಥವಾಗುತ್ತಿಲ್ಲ. 40 ವರ್ಷದಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ಕಳೆದುಕೊಳ್ಳುವ ಬದಲು ಆತ್ಮಹತ್ಯೆಗೆ ಶರಣಾಗುವುದೇ ಮೇಲು ಎಂದು ರೈತ ಕೃಷ್ಣ ಅಸಹಾಯಕತೆ ಹೊರಹಾಕುತ್ತ ಟವರ್ ಮೇಲೆ ಕುಳಿತಿದ್ದಾರೆ.

    ಸಮಸ್ಯೆ ಬಗೆಹರಿಸೋದಾಗಿ ಹೇಳಿ ಕೃಷ್ಣನನ್ನು ಕೆಳಗಿಳಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿದಂತೆ ಹಲವರು ಹರಸಾಹಸಪಟ್ಟರುಸ. ಸತತ ಒಂದೂವರೆ ಗಂಟೆಗಳ ಕಾಲ ಮನವೊಲಿಸಿದ ನಂತರ ರೈತ ಕೃಷ್ಣ ಟವರ್ ನಿಂದ ಕೆಳಗಿಳಿದಿದ್ದಾರೆ. ಇದ್ರಿಂದಾಗಿ ಸ್ಥಳದಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣ ತಿಳಿಯಾದಂತಾಗಿದೆ.

     

  • ಕೈಗೆ ಹಗ್ಗ ಕಟ್ಟಿ, ಚಾಕುವಿನಿಂದ ಚುಚ್ಚಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡ್ರು!

    ಕೈಗೆ ಹಗ್ಗ ಕಟ್ಟಿ, ಚಾಕುವಿನಿಂದ ಚುಚ್ಚಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡ್ರು!

    ಬೆಂಗಳೂರು: ಆಸ್ತಿ ಕಬಳಿಕೆಗೆ ದರೋಡೆ ಮಾಡೋ ನೆಪದಲ್ಲಿ ಕೊಲೆ ಯತ್ನ ಮಾಡಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕು ಅದ್ದಿಗಾನಹಳ್ಳಿಯಲ್ಲಿ ನಡೆದಿದೆ.

    ಅದೃಷ್ಟವಶಾತ್ ಸಾವಿನ ದವಡೆಗೆ ಸಿಲುಕಿದ ವಿಜಯ್ ಕುಮಾರ್ ಬಚಾವಾಗಿದ್ದಾರೆ. ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ವಿಐಟಿ ಮತ್ತು ರಾಜಾನುಕುಂಟೆ ರಸ್ತೆ ತಿಮ್ಮಸಂದ್ರ ಬಳಿ ಭಾನುವಾರ ರಾತ್ರಿ 7.30ಕ್ಕೆ ದರೋಡೆ, ಕೊಲೆ ಯತ್ನ ನಡೆಸಿದ್ದಾರೆ.

    ವಿಜಯ್ ಕುಮಾರ್ ಕೈಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ಇಟ್ಟು ಚಾಕುವಿನಿಂದ ಚುಚ್ಚಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಜೊತೆಗೆ ಮೊಬೈಲ್ ಮತ್ತು 10,000 ರೂ. ನಗದು ಕಸಿದು ಪರಾರಿಯಾಗಿದ್ದಾರೆ.

    ಶನಿವಾರ ಅದ್ದಿಗಾನಹಳ್ಳಿಯಲ್ಲಿ ವಿಜಯ್ ಕುಮಾರ್ ಕುಟುಂಬದ ದಾಯಾದಿಗಳ ನಡುವೆ ಆಸ್ತಿ ಹಂಚಿಕೆ ವಿಷಯಕ್ಕೆ ಜಗಳ ನಡೆದಿತ್ತು. ಕುಟುಂಬಸ್ಥರು ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಕೊಲೆ ಯತ್ನ ನಡೆದಿರಬಹುದೆಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ತೆರಳಿದ್ದು, ಘಟನೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ.

  • 10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    10 ವರ್ಷದ ಬಾಲಕನ ಜೊತೆ 21 ವರ್ಷದ ಯುವತಿಯ ಮದ್ವೆ ಮಾಡಿಸಿದ ಅಣ್ಣ!

    ಚಂಡೀಗಢ: ಆಸ್ತಿಗಾಗಿ ಅಣ್ಣನೇ 21 ವರ್ಷದ ಸಹೋದರಿಯನ್ನು ತನ್ನ ಸೋದರ ಸಂಬಂಧಿ 10 ವರ್ಷದ ಬಾಲಕನ ಜೊತೆ ಮದುವೆ ಮಾಡಿಸಿರುವ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಈ ಘಟನೆ ಪಿಂಡ ಭಟಿಯಾನ್ ನಗರದ ಹೊರವಲಯದಲ್ಲಿರುವ ಭಾಂಗ್ಸಿಕಾ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಅಣ್ಣ ಮೇಹ್‍ವಿಷ್ ಮುಂದೇ ನಿಂತು ತನ್ನ ಸಹೋದಸಂಬಂಧಿ ಅಲ್ಲಾ ದತ್ತಾ ಬಾಲಕನ ಜೊತೆ ಮದುವೆ ಮಾಡಿಸಿದ್ದಾನೆ. ಇದನ್ನೂ ಓದಿ: ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

    ತಮ್ಮ ಕುಟುಂಬದ ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಬಲವಂತವಾಗಿ ಯುವತಿಗೆ ಮದುವೆ ಮಾಡಲಾಗಿದೆ. ಈ ಮದುವೆ ಕುರಿತು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿವಾಹ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯವಲ್ಲಿ ಮಕ್ಕಳ ರಕ್ಷಣಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಪಂಜಾಬ್ ಕಾನೂನು ಪ್ರಕಾರ, 18 ವರ್ಷದೊಳಗೆ ಮದುವೆಯಾದರೆ ಅದನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಬಾಲ್ಯವಿವಾಹ ಮಾಡಿಸಿದ ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

  • ಕುಡಿದ ಮತ್ತಿನಲ್ಲಿ ತಾಯಿ ಸಹೋದರನ ಮೇಲೆಯೇ ಗುಂಡು ಹಾರಿಸಿದ್ಳು!

    ಕುಡಿದ ಮತ್ತಿನಲ್ಲಿ ತಾಯಿ ಸಹೋದರನ ಮೇಲೆಯೇ ಗುಂಡು ಹಾರಿಸಿದ್ಳು!

    ನವದೆಹಲಿ: ಕುಡಿದ ಮತ್ತಿನಲ್ಲಿದ್ದ 47 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಸಹೋದರನ ಮೇಲೆಯೇ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ.

    ಈ ಘಟನೆ ದೆಹಲಿಯ ಡಿಫೆನ್ಸ್ ಕಾಲೊನಿಯಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು 12.43ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.

    ಆರೋಪಿ ಮಹಿಳೆಯನ್ನು ಸಂಗೀತ ಎಂದು ಗುರುತಿಸಲಾಗಿದ್ದು, ಈಕೆ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಳು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

    ಮಗಳ ಗುಂಡಿನ ದಾಳಿಯ ಪರಿಣಾಮ ತಾಯಿ ಗೀತಾ ಹಾಗೂ ಮಗ ಹರಸರಮ್ ಅಪಾಯದಿಂದ ಪಾರಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ತಾರಕಕ್ಕೇರಿ ಸಂಗೀತಾ ಗುಂಡಿನ ದಾಳಿ ನಡೆಸಿರಬಹುದು. ಪ್ರಕರಣ ಸಂಬಂಧ ತನಿಗೆ ನಡೆಯುತ್ತಿದ್ದು, ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿರುವುದರಿಂದ ಅವರ ಹೇಳಿಕೆ ಪಡೆಯಲು ವೈದ್ಯರ ಅನುಮತಿಗಾಗಿ ಕಾಯುತ್ತಿದ್ದೇವೆ ಅಂತ ಪೊಲೀಸರು ತಿಳಿಸಿದ್ದಾರೆ.

    ಗುರುವಾರ ರಾತ್ರಿ ಸುಮಾರು 12.43ರ ವೇಳೆಗೆ ಗುಂಡಿನ ದಾಳಿಯಾಗಿರೋ ಕುರಿತು ಮಾಹಿತಿಯೊಂದು ಬಂದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದಾಗ ಗುಂಡು ಹಾರಿಸಿದ ಮಹಿಳೆ ಮತ್ತು ಆಕೆಯ ತಾಯಿ, ಸಹೋದರನ ಮಧ್ಯೆ ಜೋರಾಗಿ ವಾಗ್ವಾದಗಳು ನಡೆಯುತ್ತಿದ್ದವು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಇನ್ನು ಆರೋಪಿ ಸಂಗೀತಾಳನ್ನು ಹಾಗೂ ಅವಳ ಕೈಯಲ್ಲಿದ್ದ ಪಿಸ್ತೂಲ್ ಕೂಡ ವಶಕ್ಕೆ ಪಡೆಯಲಾಗಿದೆ ಅಂತ ದೆಹಲಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

    ಘಟನೆ ಸಂಬಂಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಮಕ್ಕಳಿಗೆ ತಿಂಡಿ ತರುತ್ತಿದ್ದವ ಮನೆ ಮುಂದೆಯೇ ಹೆಣವಾದ!

    ಮಕ್ಕಳಿಗೆ ತಿಂಡಿ ತರುತ್ತಿದ್ದವ ಮನೆ ಮುಂದೆಯೇ ಹೆಣವಾದ!

    ಬೆಂಗಳೂರು: ಆಸ್ತಿಗಾಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೊತ್ತನೂರಿನಲ್ಲಿ ನಡೆದಿದೆ.

    ನಾಗರಾಜ್ ಹಂತಕರಿಂದ ಹತ್ಯೆಗೊಳಗಾದ ದುರ್ದೈವಿ. ಇವರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಕ್ಕಳಿಗೆ ತಿಂಡಿ ತೆಗೆದುಕೊಂಡು ಮನೆಗೆ ಬಂದಿದ್ದ ಸಂದರ್ಭದಲ್ಲಿ ಮನೆ ಮುಂದೆಯೇ ಹಂತಕರು ಕೊಚ್ಚಿ ಕೊಲೆ ಮಾಡಿದ್ದಾರೆ.


    ನಾಗರಾಜ್ ಕೊತ್ತನೂರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸ್‍ನೆಸ್ ಎಂದು ಯಾವಾಗಲೂ ಬ್ಯುಸಿಯಾಗಿದ್ದರು. ಹೆಂಡತಿ ಮಕ್ಕಳ ಜೊತೆ ಆರಾಮಾಗೇ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ರಾಜಕೀಯವಾಗಿ ಅವರ ಏರಿಯಾದಲ್ಲಿ ಗುರುತಿಸಿಕೊಂಡಿದ್ದು, ಕೊತ್ತನೂರಿನಲ್ಲಿ ಸ್ವಲ್ಪ ಆಸ್ತಿ ಮಾಡಿಕೊಂಡಿದ್ದರು. ಆದರೆ ಹಲವು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು ಎನ್ನಲಾಗಿದೆ. ನಾಗರಾಜನ ಸೋದರ ಸಂಬಂಧಿಗಳು ಆಗಾಗ ಆಸ್ತಿಯಲ್ಲಿ ಪಾಲು ಕೇಳುತ್ತಾ ಇದ್ದರು. ಆದರೆ ನಾಗರಾಜ್ ಮಾತ್ರ ಪಾಲು ಕೊಡುವುದಕ್ಕೆ ಒಪ್ಪಿರಲಿಲ್ಲ ಎಂದು ಹೇಳಲಾಗಿದೆ.

    ನಾಗರಾಜು ಎಂದಿನಂತೆ ಕೆಲಸ ಮುಗಿಸಿ ಬುಧವಾರ ರಾತ್ರಿ ಮನೆಗೆ ಹಿಂದಿರುಗಿದ್ದರು. ಮಕ್ಕಳಿಗಾಗಿ ಬಿಸ್ಕೆಟ್ ಮತ್ತು ಬ್ರೆಡ್ ತೆಗೆದುಕೊಂಡು ಮನೆ ಹತ್ತಿರ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಆಸ್ತಿಯ ಜಿದ್ದಿಗೆ ಬಿದ್ದಿದ್ದ ಸಂಬಂಧಿಗಳಾದ ಮನೋಜ್ ಹಾಗೂ ಹರೀಶ್ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ನಾಗರಾಜ್ ಮಾವ ಮುನಿರಾಜು ಹೇಳಿದ್ದಾರೆ.

    ಈ ಬಗ್ಗೆ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ನಾಗರಾಜ್ ಕುಟುಂಬ ಮಾತ್ರ ಮನೆ ಯಜಮಾನನ್ನು ಕಳೆದುಕೊಂಡು ರೋಧಿಸುತ್ತಿದೆ.

  • ಜೀವಂತ ಗಂಡನ ತಿಥಿ ಮಾಡಿ ಪ್ರಿಯಕರ ಜೊತೆಗೂಡಿ ಕೋಟಿ ಹಣ ಲೂಟಿ- ತುಮಕೂರಿನಲ್ಲಿ ನ್ಯಾಯಕ್ಕಾಗಿ ಪತಿ ಅಲೆದಾಟ

    ಜೀವಂತ ಗಂಡನ ತಿಥಿ ಮಾಡಿ ಪ್ರಿಯಕರ ಜೊತೆಗೂಡಿ ಕೋಟಿ ಹಣ ಲೂಟಿ- ತುಮಕೂರಿನಲ್ಲಿ ನ್ಯಾಯಕ್ಕಾಗಿ ಪತಿ ಅಲೆದಾಟ

    ತುಮಕೂರು: ಆಸ್ತಿಗೋಸ್ಕರ ಗಂಡ ಬದಕಿದ್ರು ಸತ್ತೋಗಿದ್ದಾನೆ ಅಂತ ಊರಿಗೆಲ್ಲಾ ಕರೆದು ತಿಥಿ ಊಟ ಹಾಕಿಸಿರೋ ವಿಲಕ್ಷಣ ಘಟನೆ ತುಮಕೂರಿನಲ್ಲಿ ನಡೆದಿದೆ.

    ಗುಬ್ಬಿ ತಾಲೂಕಿನ ಸಿಎಸ್ ಪುರದ ರಾಮಚಂದ್ರಯ್ಯ 30 ವರ್ಷಗಳ ಹಿಂದೆ ಜಯಮ್ಮ ಅನ್ನೋರನ್ನ ಮದ್ವೆಯಾಗಿದ್ರು. 5 ಕೋಟಿಗೂ ಹೆಚ್ಚು ಬೆಲೆಬಾಳೋ ಆಸ್ತಿ ಹೊಂದಿರೋ ಇವರಿಗೆ ಮದ್ವೆ ವಯಸ್ಸಿಗೆ ಬಂದಿರೋ ಇಬ್ಬರು ಮಕ್ಕಳು ಇದ್ದಾರೆ.

    ಆದ್ರೆ ಜಯಮ್ಮ ಆಸೆ ಮಾತ್ರ ಆನೆ ಗಾತ್ರದ್ದು. ಗಂಡನಿಗೆ ಸ್ವಲ್ಪ ಅನಾರೋಗ್ಯ ಹಿಡಿದಿದ್ದೇ ತಡ ಅವರನ್ನ ಮನೆಯಿಂದ ಹೊರಹಾಕಿ, ತನ್ನ ಪ್ರಿಯಕರ ಹಾಗೂ ತನ್ನ ಸಂಬಂಧಿಕರ ಜೊತೆ ಸೇರಿಕೊಂಡು ಆಸ್ತಿ ಲಪಟಾಯಿಸಲು ಗಂಡನ ಹೆಸರಲ್ಲಿ ಊರಿಗೆಲ್ಲಾ ತಿಥಿ ಊಟ ಹಾಕಿಸಿ ಮಜಾ ಮಾಡ್ತಿದ್ದಾರೆ.

    ಈ ವಿಷಯ ಗೊತ್ತಾಗಿ ಗಂಡ ಊರಿಗೆ ಬಂದ್ರೆ ಅವರನ್ನ ಬೆದರಿಸಿ ಹಲ್ಲು ಮುರಿಯುವ ಹಾಗೆ ಹೊಡೆದು 10 ವರ್ಷ ಇತ್ತ ತಲೆ ಹಾಕದಂತೆ ನೋಡಿಕೊಂಡ್ರು. ಕಡೆಗೆ ಈ ವಿಷಯ ಊರಿಗೆಲ್ಲಾ ಗೊತ್ತಾಗಿ ಜಯಮ್ಮಳಿಗೆ ಜನರೇ ಛೀಮಾರಿ ಹಾಕಿದ್ದಾರೆ.

    ಸದ್ಯ ಗಂಡ ರಾಮಚಂದ್ರ ನಾನು ಬದುಕಿದ್ದೀನಿ ಅಂತ ಪ್ರೂವ್ ಮಾಡೋಕೆ ಅವರಿಗೆ ಶಿಕ್ಷೆ ಕೊಡಿಸೋಕೆ ಹೋರಾಡ್ತಿದ್ದಾರೆ.

  • 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಮುಂಬೈ: ನಕಲಿ ಛಾಪಾಕಾಗದ ಹಗರಣದ ಮಾಸ್ಟರ್ ಮೈಂಡ್ ಅಬ್ದುಲ್ ಕರೀಂಲಾಲ್ ತೆಲಗಿ ಪತ್ನಿ ಶಹಿದಾ ತಮ್ಮ ಬಳಿಯಿರುವ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಲು ಮುಂದಾಗಿದ್ದಾರೆ.

    ಪುಣೆ ಸೆಷನ್ ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡುವ ಮುಂಚೆಯೇ ಸ್ವಪ್ರೇರಿತವಾಗಿ 100 ಕೋಟಿಯ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಶಹಿದಾ ಅವರು ದಾನ ನೀಡಲಿರುವ ಆಸ್ತಿಗಳಲ್ಲಿ 9 ಪ್ರಾಪರ್ಟಿಗಳು ಕರ್ನಾಟಕದಲ್ಲಿವೆ.

    ಕೋಟ್ಯಾಂತರ ರೂಪಾಯಿ ಮೌಲ್ಯದ ಛಾಪಾಕಾಗದ ಹಗರಣದಲ್ಲಿ ಸಿಬಿಐ, ತೆಲಗಿಯ ಕೋಟ್ಯಾಂತರ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ ಕರ್ನಾಟಕದಲ್ಲಿರುವ 9 ಪ್ರಾಪರ್ಟಿಗಳು ಶಹಿದಾ ಒಡೆತನದಲ್ಲಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿಲ್ಲ. ಕೃಷಿ ಭೂಮಿ, ವಾಣಿಜ್ಯ ಮಳಿಗೆಗಳು, ಫ್ಲ್ಯಾಟ್ ಗಳು ಸೇರಿದಂತೆ ಒಟ್ಟು 9 ಆಸ್ತಿಗಳು ಕರ್ನಾಟಕದಲ್ಲಿವೆ.

    ದಾನ ಮಾಡುತ್ತಿರುವುದು ಏಕೆ?: ನನಗೆ ಇರುವುದು ಒಬ್ಬಳೇ ಮಗಳು. ಆದರೆ ಆಕೆಗೆ ಮದುವೆಯಾಗಿದ್ದು, ಹಗರಣದಿಂದ ಗಳಿಸಿರುವ ಆಸ್ತಿ ನಮಗೆ ಬೇಡ ಎಂದು ಮಗಳ ಮನೆಯವರು ಹೇಳಿದ್ದಾರೆ. ಹಾಗಾಗಿ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲು ಇಚ್ಚಿಸಿದ್ದೇನೆ ಎಂದು ಶಾಹಿದಾ ತಿಳಿಸಿದ್ದಾರೆ.

    ಸಿಬಿಐ ಕೆಲವು ದಿನಗಳಲ್ಲಿ ಶಹಿದಾರ ಒಡೆತನದಲ್ಲಿರುವ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಿತ್ತು. ಆದರೆ ಅದಕ್ಕೂ ಮುಂಚೆಯೇ ಶಾಹಿದಾ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ಆಕ್ಟೋಬರ್ 26ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. 2006ರ ಜನವರಿ 17ರಂದು ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಲಭಿಸಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ತೆಲಗಿಗೆ 2007ರ ಜೂನ್ 28ರಂದು 13 ವರ್ಷ ಶಿಕ್ಷೆಯಾಗಿತ್ತು.

     

  • ತನಗೆ ಸೇರಬೇಕಾದ ಆಸ್ತಿ ಬೇಕೆಂದು ಮೊಬೈಲ್ ಟವರ್ ಏರಿ ಕುಳಿತ ಯುವಕ

    ತನಗೆ ಸೇರಬೇಕಾದ ಆಸ್ತಿ ಬೇಕೆಂದು ಮೊಬೈಲ್ ಟವರ್ ಏರಿ ಕುಳಿತ ಯುವಕ

    ಹಾವೇರಿ: ಆಸ್ತಿಯಲ್ಲಿ ತನ್ನ ಪಾಲು ಬೇಕು ಎಂದು ಆಗ್ರಹಿಸಿ, ಮೊಬೈಲ್ ಟವರ್ ಏರಿ ಕುಳಿತು ಯುವಕ ಪ್ರತಿಭಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಮೊಬೈಲ್ ಟವರ್ ಏರಿದ ಯುವಕನನ್ನ ಯಲ್ಲಪ್ಪ ದೊಡ್ಡಲಿಂಗಣ್ಣವರ(34) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರದಲ್ಲಿ ದೊಡ್ಡಪ್ಪ ಮತ್ತು ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾರೆ. ನಮಗೆ ಸೇರಬೇಕಾದ ಆಸ್ತಿಯನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರಾದ ಶ್ರೀಪತಿ, ಶಿವಪ್ಪ ಮತ್ತು ಚಿಕ್ಕಪ್ಪ ಮಾರುತಿ ಕಸೆದುಕೊಂಡಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.

    ಸ್ಥಳಕ್ಕೆ ಹಾನಗಲ್ ತಹಶೀಲ್ದಾರ ಬಂದು ನ್ಯಾಯ ಕೊಡಿಸೋವರೆಗೂ ಟವರ್ ನಿಂದ ಕೆಳಗಿಳಿಯೋದಿಲ್ಲ ಎಂದು ಯಲ್ಲಪ್ಪ ಹಠ ಹಿಡಿದಿದ್ದಾರೆ. ಸದ್ಯ ಸ್ಥಳೀಯರು ಟವರ್ ನಿಂದ ಕೆಳಗೆ ಇಳಿಯುವಂತೆ ಯುವಕನಿಗೆ ಮನವೊಲಿಸುತ್ತಿದ್ದಾರೆ.

    ಸ್ಥಳಕ್ಕೆ ಆಡೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಆಸ್ತಿ ಕೇಳಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಆಸ್ತಿ ಕೇಳಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಹುಬ್ಬಳ್ಳಿ: ಆಸ್ತಿಗಾಗಿ ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಅರಳಿಕಟ್ಟೆ ಕಾಲೋನಿಯ 30 ವರ್ಷದ ಇಮ್ರಾನ್ ನೂರ್ ಅಹ್ಮದ್ ಕೊಲೆಯಾದ ದುರ್ದೈವಿ. ತಾಯಿ ಮೌಸಂಬಿ ಹಾಗೂ ಸಂಬಂಧಿಕರು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಇಮ್ರಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇಮ್ರಾನ್ ನನ್ನು ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸಹಜ ಸಾವು ಎಂದು ಬಿಂಬಿಸಲಾಗಿತ್ತು.

    ಹಾಗಾಗಿ ಮೃತನ ಪತ್ನಿಯ ಸಂಬಂಧಿಕರು ಶಹರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವವನ್ನು ಪರೀಕ್ಷೆಗೆ ಒಳಪಡೆಸಲಾಗಿದೆ.