Tag: property

  • ಎಲೆಕ್ಷನ್ ಹೊತ್ತಲ್ಲೇ ಯಡಿಯೂರಪ್ಪ, ಕುಮಾರಸ್ವಾಮಿಗೆ ಬಿಗ್ ಶಾಕ್

    ಎಲೆಕ್ಷನ್ ಹೊತ್ತಲ್ಲೇ ಯಡಿಯೂರಪ್ಪ, ಕುಮಾರಸ್ವಾಮಿಗೆ ಬಿಗ್ ಶಾಕ್

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತಮ್ಮ ಪಕ್ಷದ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಎದುರಾಗಿದೆ.

    ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಶನ್ ಪ್ರಕರಣಕ್ಕೆ ಮರುಜೀವ ಬಂದಿದ್ದು, ಈ ಮೂಲಕ ಮೂರು ವರ್ಷದ ಹಿಂದಿನ ಕೇಸ್‍ನಲ್ಲಿ ನಾಯಕರು ಮತ್ತೆ ಕಾನೂನು ಹೋರಾಟ ಮುಂದುವರೆಸುವಂತಾಗಿದೆ.

    ಏನಿದು ಪ್ರಕರಣ?: ಗಂಗೇನಹಳ್ಳಿ ಡಿನೋಟಿಫಿಕೇಶನ್ ಸಂಬಂಧ 2015ರಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಬಿ.ಎಸ್‍ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಹೆಚ್‍ಡಿ ಕುಮಾರಸ್ವಾಮಿಯವರು ತಮ್ಮ ಅತ್ತೆ ವಿಮಲಮ್ಮನಿಗೆ 51 ಗುಂಟೆ ಜಮೀನನ್ನು ನೀಡಿದ್ದರು. ವಿಮಲಮ್ಮ ತಮ್ಮ ಮಗ ಶೇಖರಯ್ಯನ ಹೆಸರಿಗೆ ಈ ಆಸ್ತಿಯನ್ನ ರಿಜಿಸ್ಟರ್ ಮಾಡಿಕೊಟ್ಟಿದ್ದರು. ಇದೀಗ ಇದೇ ಜಮೀನಿಗೆ ಸಂಬಂಧಿಸಿದಂತೆ ಬಿಎಸ್ ವೈ ಕೂಡಾ ಆರೋಪ ಎದುರಿಸುವಂತಾಗಿತ್ತು.

    ಈ ನಡುವೆ ಜಾಮೀನಿನ ಡಿನೋಟಿಫಿಕೇಷನ್ ಕೇಸ್ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ರದ್ದು ಮಾಡುವಂತೆ ಬಿಎಸ್‍ವೈ ಹೈಕೋರ್ಟ್ ಮೊರೆ ಹೋಗಿದ್ದರು. ಇಲ್ಲಿವರೆಗೆ ಹೈಕೋರ್ಟ್‍ನಲ್ಲಿ ಪ್ರಕರಣ ಉಳಿದಿತ್ತು. ಈ ಪ್ರಕರಣದ ತನಿಖೆಯನ್ನ ಮುಂದುವರಿಸಬೇಕು. ಆರೋಪ ಪಟ್ಟಿ ಯಾಕೆ ಸಲ್ಲಿಸಿಲ್ಲ. ಪ್ರಕರಣ ನಡೆದು ಮೂರು ವರ್ಷವಾದ್ರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಏ.3ರಂದು ಮರು ಆಕ್ಷೇಪಣೆ ಸಲ್ಲಿಸಿದ್ದರು.

    ಬಿಎಸ್‍ವೈ ಸಿಎಂ ಆಗಿದ್ದಾಗ ಜಾಗ ಡಿನೋಟಿಫಿಕೇಶನ್ ಮಾಡಲು ಹೇಳಿದ್ರು. ರಾಜಶೇಖರಯ್ಯ ಎಂಬವರು ಈ ಜಾಗವನ್ನ ಡಿನೋಟಿಫೈ ಮಾಡಿಸಿಕೊಂಡಿದ್ರು. ಯಾವುದೇ ದಾಖಲೆಯನ್ನ ಸಲ್ಲಿಸದೆ ಬಿಳಿ ಹಾಳೆಯಲ್ಲಿ ಬರೆದು ಕೊಡಲಾಗಿದೆ ಅನ್ನೋ ಅಂಶಗಳನ್ನು ಜಯಕುಮಾರ್ ತಮ್ಮ ಆಕ್ಷೇಪಣೆಯಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲೀಗ ಕೇಸಿಗೆ ಮತ್ತೆ ಜೀವ ಬಂದಂತಾಗಿದೆ.

  • ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಬಳ್ಳಾರಿ: 9 ತಿಂಗಳು ಕಾಲ ಹೊಟ್ಟೆಯಲ್ಲಿ ಹೊತ್ತುಕೊಂಡು ಹೆತ್ತು ಸಾಕಿದ ಮಗನೇ ತಾಯಿ ಎದೆಗೆ ಜಾಡಿಸಿ ಒದ್ದ ಅಮಾನವೀಯ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

    ಹೊಸಪೇಟೆಯ ಸರ್ದಾರ್ ಮೊಹಲ್ಲಾದಲ್ಲಿ ಮಹಮ್ಮದ್ ಗಫೂರ್ ಎಂಬಾತನೇ ತಾಯಿ ಎದೆಗೆ ಒದ್ದ ಪಾಪಿ ಮಗ. ಈತ ಆಸ್ತಿಗಾಗಿ ತನ್ನ 70 ವರ್ಷದ ಹೆತ್ತ ತಾಯಿಯನ್ನು ಒದ್ದು ವಿಕೃತಿ ಮೆರೆದಿದ್ದಾನೆ. ಕಳೆದ ಆರು ತಿಂಗಳಿನಿಂದ ಈ ದುಷ್ಟಮಗ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹಿಂಸಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

    ಸೋಮವಾರ ಮತ್ತೆ ಆಸ್ತಿಗಾಗಿ ಮಗ ತಗಾದೆ ತೆಗೆದಿದ್ದು, ತಾಯಿ ಮಾಬುನ್ನಿಯನ್ನು ಕಾಲಿನಿಂದ ಒದಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಸದ್ಯ ಮಗನಿಂದ ಹಲ್ಲೆಗೆ ಒಳಗಾದ ಪುತ್ರನ ವಿರುದ್ಧ ತಾಯಿ ಹೊಸಪೇಟೆ ಬಡಾವಣೆ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಾಯುವ ಮುಂಚೆ ಈ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿಯನ್ನ ವಿಲ್ ಮಾಡಿದ ಅಭಿಮಾನಿ

    ಸಾಯುವ ಮುಂಚೆ ಈ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿಯನ್ನ ವಿಲ್ ಮಾಡಿದ ಅಭಿಮಾನಿ

    ಮುಂಬೈ: ವೃದ್ಧೆಯೊಬ್ಬರು ಸಾಯುವ ಮುಂಚೆ ತನ್ನೆಲ್ಲಾ ಆಸ್ತಿಯನ್ನ ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ವಿಲ್ ಮಾಡಿಟ್ಟಿದ್ದು, ಕುಟುಂಬಸ್ಥರು ಅಚ್ಚರಿಪಟ್ಟಿದ್ದಾರೆ.

    ಮುಂಬೈನ ಮಲಬಾರ್ ಹಿಲ್ ನಿವಾಸಿಯಾದ 62 ವರ್ಷದ ವೃದ್ಧೆ ನಿಶಿ ಹರಿಶ್ಚಂದ್ರ ತ್ರಿಪಾಠಿ ಸಂಜಯ್ ದತ್ ಹೆಸರಿಗೆ ವಿಲ್ ಮಾಡಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತನ್ನ ಹೆಸರಿಗೆ ಅಭಿಮಾನಿಯೊಬ್ಬರು ಈ ರೀತಿ ಆಸ್ತಿಯನ್ನ ಬರೆದಿರುವ ವಿಷಯ ತಿಳಿದ ಸಂಜಯ್ ದತ್ ಕೂಡ ಆಶ್ಚರ್ಯಪಟ್ಟಿದ್ದಾರೆ.

    ಪತ್ರಿಕೆಯೊಂದರ ವರದಿಯ ಪ್ರಕಾರ, ಸಂಜಯ್ ದತ್‍ಗೆ ಜನವರಿ 29ರಂದು ಪೊಲೀಸರು ಕರೆ ಮಾಡಿ, ನಿಮ್ಮ ಅಭಿಮಾನಿಯೊಬ್ಬರು 15 ದಿನಗಳ ಮುಂಚೆ ಸಾವನ್ನಪ್ಪಿದ್ದು, ತನ್ನ ಖಾತೆ ಹಾಗು ಬ್ಯಾಂಕ್ ಲಾಕರ್‍ನಲ್ಲಿರುವ ಎಲ್ಲಾ ಹಣವನ್ನ ನಿಮ್ಮ ಹೆಸರಿಗೆ ವಿಲ್ ಬರೆದಿದ್ದಾರೆ ಎಂದು ತಿಳಿಸಿದ್ದರು. ವೃದ್ಧೆ ಸಂಜಯ್ ದತ್ ಅವರ ದೊಡ್ಡ ಅಭಿಮಾನಿಯಾಗಿದ್ದರಿಂದ ಈ ರೀತಿ ಆಸ್ತಿಯನ್ನ ಅವರ ಹೆಸರಿಗೆ ಬರೆದಿರಬಹುದು ಎಂದುಕೊಂಡು ಪೊಲೀಸರು ನಟ ಸಂಜ್ ದತ್ ಗಮನಕ್ಕೆ ಈ ವಿಷಯವನ್ನ ತರಬೇಕೆಂದು ಅಂದುಕೊಂಡಿದ್ದರು.

    ವೃದ್ಧೆ ಸಾಯುವುದಕ್ಕೆ ಕೆಲವು ತಿಂಗಳ ಹಿಂದೆ ಬ್ಯಾಂಕಿಗೆ ವಿವರವಾಗಿ ಬರೆದ ಪತ್ರ ಹಾಗು ನಾಮಿನೇಷನ್ ಅಜಿಯನ್ನ ಸಲ್ಲಿಸಿದ್ದರು. ಸಂಜಯ್ ದತ್ ಅವರ ಪಾಲಿ ಹಿಲ್ ವಿಳಾಸವನ್ನ ನೀಡಿ, ಸಂಜಯ್ ದತ್ ಅವರೇ ನಾಮಿನಿ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

    ಆಸ್ತಿ ಬೇಡವೆಂದ ಸಂಜಯ್: ನಟ ಸಂಜಯ್ ದತ್ ಅಭಿಮಾನಿಯ ಆಸ್ತಿಯನ್ನ ನಿರಾಕರಿಸಿದ್ದಾರೆ. ಹಣವನ್ನ ವೃದ್ಧೆಯ ಕುಟುಂಬಸ್ಥರಿಗೆ ವಾಪಸ್ ನೀಡುವಂತೆ ವೃದ್ಧೆ ಖಾತೆ ಹೊಂದಿರುವ ವಾಲ್ಕೆಶ್ವರ್ ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾನೂನು ಪ್ರಕ್ರಿಯೆಯ ಪ್ರಕಾರ ವೃದ್ಧೆಯ ಎಲ್ಲಾ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನ ಮರಳಿ ಕುಟುಂಬಸ್ಥರಿಗೆ ವರ್ಗಾಯಿಸುವಂತೆ ನಟ ಹೇಳಿರುವುದಾಗಿ ಸಂಜಯ್ ದತ್ ಪರ ವಕೀಲರಾದ ಸುಭಾಷ್ ಜಾಧವ್ ತಿಳಿಸಿದ್ದಾರೆ.

    ಸಂಜಯ್ ದತ್ ಸದ್ಯ ಸಾಹೇಬ್ ಬೀವಿ ಔರ್ ಗ್ಯಾಂಗ್‍ಸ್ಟರ್ 3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ದತ್ ಜೀವನಾಧಾರಿತ ಚಿತ್ರವಾದ ‘ಸಂಜು’ ದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‍ಕುಮಾರ್ ಹಿರಾನಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಜೂನ್ ವೇಳೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

    ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

    ಮಾಸ್ಕೋ: ತನ್ನ ತಂದೆ ತಾಯಿ ಹಾಗೂ 10 ವರ್ಷದ ತಂಗಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ 22 ವರ್ಷದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಆಸ್ತಿಯೆಲ್ಲಾ ತಾನೊಬ್ಬನೇ ಅನುಭವಿಸಬೇಕು ಎಂಬ ಆಸೆಯಿಂದ ರಷ್ಯಾದ ಯುವಕ ತನ್ನ ಇಡೀ ಕುಟುಂಬವನ್ನ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಇಲ್ಲಿನ ಪೊಲೀಸರ ವರದಿಯ ಪ್ರಕಾರ ಆರೋಪಿಯ ತಂದೆ-ತಾಯಿ ಅತ್ಯಂತ ಶ್ರೀಮಂತರಾಗಿದ್ದು, ಅವರು ಸತ್ತ ನಂತರ ಆಸ್ತಿಯೆಲ್ಲಾ ತನ್ನದಾಗುತ್ತದೆ ಎಂದು ಉದ್ದೇಶಿಸಿದ್ದ.

    ಆದ್ರೆ ಡಿಟೆಕ್ಟೀವ್ ಗಳ ಮೂಲಕ ತಂದೆ ತಾಯಿಗೆ ಈ ವಿಷಯ ಗೊತ್ತಾಗಿತ್ತು. ಹೀಗಾಗಿ ಅವರು ಸಾಯುವ ನಾಟಕವಾಡಲು ನಿರ್ಧಾರ ಮಾಡಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಸುಪಾರಿ ಹಂತಕನಂತೆ ವೇಷ ತೊಟ್ಟರು. ಆರೋಪಿ ಮಗ ತನ್ನ ಕುಟುಂಬಸ್ಥರನ್ನ ಎಲ್ಲಿ, ಹೇಗೆ ಕೊಲೆ ಮಾಡಬೇಕೆಂದು ಸುಪಾರಿ ಹಂತಕನಿಗೆ ಸೂಚನೆಗಳನ್ನ ನೀಡಿದ್ದ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ? ನಾಯಿಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದ. ತನ್ನ ಮೂವರು ಕುಟುಂಬಸ್ಥರನ್ನ ಕೊಲ್ಲುವುದಕ್ಕೆ ಹಣ ಕೊಡಲು ಒಪ್ಪಿಕೊಂಡಿದ್ದ ಆರೋಪಿ, ಕೊಲೆಯಾದ ತಂದೆ ತಾಯಿಯ ಫೋಟೋ ನೋಡಬೇಕೆಂದು ಕೇಳಿದ್ದ.

    ರಷ್ಯಾದ ಸೋಚಿಯಲ್ಲಿರುವ ಮನೆಯಲ್ಲಿ ಡಿಟೆಕ್ಟೀವ್‍ಗಳು ಕೊಲೆಯ ನಾಟಕ ಮಾಡಿಸಿದ್ರು. ತಂದೆ ತಾಯಿ ಸತ್ತವರಂತೆ ನಾಟಕವಾಡಿದ್ರು. ಮೈಮೇಲೆ ಕೃತಕವಾದ ರಕ್ತ ಚೆಲ್ಲಿಕೊಂಡು ನೆಲದ ಮೇಲೆ ಬಿದ್ದು ಸತ್ತು ಹೋಗಿರುವವರಂತೆ ನಟಿಸಿದ್ದರು. ಇದರ ಫೋಟೋಗಳನ್ನ ಕ್ಲಿಕ್ಕಿಸಲಾಗಿತ್ತು. ಫೋಟೋಗಳಲ್ಲಿ ನೋಡಿದಾಗ ಅವರ ನಾಟಕ ಎಷ್ಟು ನೈಜವಾಗಿತ್ತೆಂದರೆ ಆರೋಪಿ ಮಗ ಅದನ್ನ ನೋಡಿ ತನ್ನ ಪೋಷಕರು ಸತ್ತಿದ್ದಾರೆ ಎಂದೇ ತಿಳಿದಿದ್ದ. ಆದ್ರೆ ಆರೋಪಿಯ ತಂಗಿಯ ಫೋಟೋವನ್ನ ಪೊಲೀಸರು ಬಿಡುಗಡೆ ಮಾಡದ ಕಾರಣ ಆಕೆ ಈ ನಾಟಕದಲ್ಲಿ ಭಾಗಿಯಾಗಿದ್ದಳಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ.

    ಸುಪಾರಿ ಹಂತಕನಂತೆ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿ ಆರೋಪಿಗೆ ಸಾವಿನ ನಟನೆಯ ಫೋಟೋ ತೋರಿಸಿದಾಗ ಆತ ಸಂತೋಷಗೊಂಡಿದ್ದ. ಆಸ್ತಿ ತನ್ನದಾದ ಕೂಡಲೇ 38 ಸಾವಿರ ಪೌಂಡ್ಸ್ (ಅಂದಾಜು 34 ಲಕ್ಷ ರೂ.) ಕೊಡುವುದಾಗಿ ಹೇಳಿದ್ದ.

    ಆದ್ರೆ ಸುಪಾರಿ ಹಂತಕ ಎಂದುಕೊಂಡಿದ್ದ ವ್ಯಕ್ತಿಯೇ ತನ್ನನ್ನು ಬಂಧಿಸಲು ಬಂದಾಗ ಆರೋಪಿಗೆ ಆಶ್ಚರ್ಯವಾಗಿತ್ತು. ಅನಂತರ ಆತ ತಾನು ಪೋಷಕರನ್ನು ಕೊಲ್ಲಲು ಸಂಚು ರೂಪಿಸಿದ್ದು ಇದೇ ಮೊದಲೇನಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

    ಕೊಲೆ ಹೇಗೆ ಮಾಡಬೇಕೆಂದು ಆತ ಇಂಟರ್ನೆಟ್‍ನಲ್ಲಿ ಸಾಕಷ್ಟು ಸರ್ಚ್ ಮಾಡಿದ್ದ. ಒಂದು ಬಾರಿ ವಿಷ ಹಾಕಲು ಯತ್ನಿಸಿದ್ದು, ಮತ್ತೊಂದು ಬಾರಿ ಕಾರಿನ ಥರ್ಮಾಮೀಟರ್ ಮುರಿಯಲು ಯತ್ನಿಸಿದ್ದ. ಹೀಗೆ ಮಾಡಿದ್ರೆ ಪಾದರಸ(ಮಕ್ರ್ಯೂರಿ) ಆವಿಯಿಂದ ಸಾಯುತ್ತಾರೆ ಎಂದುಕೊಂಡಿದ್ದ. ಆದ್ರೆ ಎರಡೂ ಬಾರಿ ಆತನ ಪ್ರಯತ್ನ ವಿಫಲವಾಗಿತ್ತು.

    ತಮ್ಮ ಮಗನೇ ಈ ರೀತಿ ಮಾಡಿದನಲ್ಲ ಎಂದು ತಂದೆ ತಾಯಿ ಇನ್ನೂ ಆಘಾತದಲ್ಲಿದ್ದಾರೆ. ಆರೋಪ ಸಾಬೀತಾದರೆ ಮಗ 15 ವರ್ಷಗಳ ಜೈಲು ಶಿಕ್ಷೆ ಅನುಭವಿಸಲಿದ್ದಾನೆ.

    https://www.youtube.com/watch?v=FwxU9Rw7wI0

  • ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದ್ವೆಯಾದ 83ರ ತಾತ

    ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದ್ವೆಯಾದ 83ರ ತಾತ

    ಜೈಪುರ: 83 ವರ್ಷದ ವೃದ್ಧನೊಬ್ಬ ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದುವೆಯಾಗಿರುವ ಘಟನೆ ರಾಜಸ್ತಾನದ ಕರೌಲಿಯಲ್ಲಿ ನಡೆದಿದೆ.

    ಕರೌಲಿ ಜಿಲ್ಲೆಯ ಸೌಮರದಾ ನಿವಾಸಿ ಸುಖಾರಾಮ್ ತನ್ನ 83ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಅದು ತನಗಿಂತ 53 ವರ್ಷ ಚಿಕ್ಕ ಮಹಿಳೆಯನ್ನ ಮದುವೆಯಾಗಿದ್ದಾರೆ. ಆದರೆ ಇಲ್ಲಿ ವಿಶೇಷವೆಂದರೆ 83ರ ತಾತ 30ರ ಮಹಿಳೆಯನ್ನು ಮದುವೆಯಾಗಿದ್ದು, ಅದು ತನ್ನ ಮೊದಲ ಪತ್ನಿ ಎದುರಲ್ಲೇ ಎರಡನೇ ಮದುವೆಯನ್ನ ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ.


    ಗ್ರಾಮದ ಮುಖ್ಯಸ್ಥರು ಸೇರಿದತೆ ಸುಖಾರಾಮ್ ಮೊದಲ ಪತ್ನಿಯಾದ ಬಾಟು ಹಾಗೂ ಇಬ್ಬರು ಮಕ್ಕಳು, ಅವರ ಪತಿಯರು ಸೇರಿ ಮದುವೆ ಮಾಡಿಸಿದ್ದಾರೆ. ವರನ ಮೆರವಣಿಗೆ ವೇಳೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಸುಖಾರಾಮ್ ಅಕ್ಕಪಕ್ಕದ ಐದು ಗ್ರಾಮಗಳಿಗೆ ಮದುವೆಗೆ ಆಹ್ವಾನ ನೀಡಿದ್ದು, ಹಿಂದೂ ಪದ್ಧತಿಯಂತೆ ಮದುವೆ ಮಾಡಿಕೊಂಡಿದ್ದಾರೆ. ಸುಖಾರಾಮ್ ಗೆ ಇಬ್ಬರು ಪುತ್ರಿಯರು. ಇವರ ಪುತ್ರ 30 ವರ್ಷದಲ್ಲಿಯೇ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದನು. ಸುಖಾರಾಮ್ ಶ್ರೀಮಂತರಾಗಿದ್ದು, ದೆಹಲಿಯಲ್ಲೂ ಆಸ್ತಿಯಿದೆ. ಆದ್ದರಿಂದ ಇವರ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ಕೊನೆಗಾಲದಲ್ಲಿ ತಮ್ಮನ್ನು ನೋಡಿಕೊಳ್ಳಲು ಮಗಬೇಕೆಂದು ಮೊದಲ ಪತ್ನಿಯ ಒಪ್ಪಿಗೆ ಪಡೆದು ಎರಡನೇ ಮದುವೆಯಾಗಿದ್ದಾರೆ.

    ಸುಖಾರಾಮ್ ಮದುವೆಯಾದ ವಧು ರಮೇಶಿ ಇವರಿಗೆ 30 ವರ್ಷ ವಯಸ್ಸಾಗಿದ್ದು, ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಆಕೆಗೂ ಸಹೋದರಿಯರಿದ್ದು ಅವರೆಲ್ಲರಿಗೂ ಮದುವೆಯಾಗಿದೆ. ಬಡ ಹುಡುಗಿಗೆ ಬಾಳು ನೀಡಲು ಉದ್ದೇಶದಿಂದಲೂ ಸುಖಾರಾಮ್ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

  • ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಬೆಳಗಾವಿ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತಪಟ್ಟು ಅನೇಕ ತಿಂಗಳುಗಳು ಕಳೆದಿವೆ. ಆದರೆ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ.

    ಆಸ್ತಿಗಾಗಿ ತೆಲಗಿ ಸಹೋದರರು ಜಗಳವಾಡಿದ್ದು, ತೆಲಗಿ ಪತ್ನಿ ಶಹೀದಾ ಹಾಗೂ ಮಗಳು ಸನಾ ಮೇಲೆ ಹಲ್ಲೆ ನಡೆಸಿದ್ದಾರೆ. ಶಹೀದಾ ಈಗಾಗಲೇ ಪತಿಯ ಛಾಪಾಕಾಗದ ವ್ಯವಹಾರದಿಂದ ಬಂದ ಹಣವನ್ನು ಕೋರ್ಟ್ ಗೆ ಒಪ್ಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪುಣೆ ಕೋರ್ಟ್ ಗೆ ಅರ್ಜಿವೊಂದನ್ನು ಸಹ ಸಲ್ಲಿಸಿದ್ದಾರೆ. ಇದನ್ನೂ ಓದಿ: 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಇದು ತೆಲಗಿ ಸಹೋದರ ಅಜೀಂ, ರಹಿಂ ಹಾಗೂ ಅವರ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ಭಾನುವಾರ ಸಂಜೆ ಈ ವಿಚಾರ ಸಂಬಂಧ ಮನೆಯಲ್ಲಿ ಗಲಾಟೆ ನಡೆದಿದೆ. ಅಜೀಂ, ರಹೀಂ ಹಾಗೂ ಆತನ ಮಕ್ಕಳು ಗರ್ಭಿಣಿ ಸನಾಳ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಇದನ್ನೂ ಓದಿ:   ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ತೆಲಗಿ ನಿಧನ

    ಈ ಬಗ್ಗೆ ಸನಾ ಹಾಗೂ ಶಹೀದಾ ತೆಲಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • 6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    ಅಹಮದಾಬಾದ್: ಮಲತಾಯಿಯೊಬ್ಬಳು 6 ವರ್ಷದ ಮಗನನ್ನು ಕೊಲೆ ಮಾಡಿ ಸೂಟ್‍ಕೇಸ್ ನಲ್ಲಿ ಶವವನ್ನ ತುಂಬಿದ್ದ ಘಟನೆ ಗುಜರಾತ್‍ನ ಕೃಷ್ಣನಗರ್ ನಲ್ಲಿ ನಡೆದಿದೆ.

    ಝೀನಲ್ ಮಗನನ್ನು ಕೊಲೆ ಮಾಡಿದ ಪಾಪಿ ತಾಯಿ. 6 ವರ್ಷದ ಧ್ರುವ್ ನನ್ನು ಕೊಂದ ಬಳಿಕ ಸೂಟ್‍ಕೇಸ್‍ನಲ್ಲಿ ಶವವನ್ನ ತುಂಬಿದ್ದ ಈಕೆ, 2 ಗಂಟೆಗಳಿಂದ ಮಗ ಕಾಣೆಯಾಗಿದ್ದಾನೆಂದು ಹುಡುಕಾಡುವ ನಾಟಕವಾಡಿದ್ದಳು. ಗಂಡ ಶಾಂತಿಲಾಲ್ ಜೊತೆ ಸೇರಿ ಎಲ್ಲಾ ಕಡೆ ಮಗನಿಗಾಗಿ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೊಲೀಸರು ಮನೆಗೆ ಬಂದು ತಪಾಸಣೆ ಮಾಡಿದಾಗ ಸೂಟ್‍ಕೇಸ್ ಪತ್ತೆಯಾಗಿತ್ತು. ಅದನ್ನ ತೆಗೆದು ನೋಡಿದಾಗ ಬಾಲಕನ ಮೃತದೇಹವಿತ್ತು. ಬಾಲಕನನ್ನ ದಾವಣಿಯಿಂದ ಸುತ್ತಲಾಗಿತ್ತು. ಪೊಲೀಸರಿಗೆ ಮಲತಾಯಿ ಝೀನಲ್ ಮೇಲೆ ಅನುಮಾನ ಬಂದು ಕೂಡಲೇ ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಮಗನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

    ಝೀನಲ್ ಹಾಗೂ ಶಾಂತಿಲಾಲ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಶಾಂತಿಲಾಲ್‍ಗೆ ಮೊದಲನೇ ಮದುವೆಯಿಂದ ಮಗನಿದ್ದರೆ, ಝೀನಲ್‍ಗೆ ಮಗಳಿದ್ದಳು. ಇಬ್ಬರೂ ಮೂರನೇ ಮಗು ಬೇಡವೆಂಬ ಷರತ್ತಿನ ಮೇಲೆ ಮದುವೆಯಾಗಿದ್ದರು. ಆದ್ರೆ ಝೀನಲ್ ಯಾವಾಗ್ಲೂ ತನ್ನ ಮಗಳ ಬಗ್ಗೆಯೇ ಚಿಂತಿಸುತ್ತಿದ್ದು, ಕೊನೆಗೆ ಬಾಲಕನನ್ನು ಕೊಲೆ ಮಾಡಿದ್ದಾಳೆ.

    ಶಾಂತಿಲಾಲ್ ಅವರ ಎಲ್ಲಾ ಆಸ್ತಿ ಮಗನಿಗೆ ಸೇರಿದ್ದಾಗಿದ್ದು, ಮಗಳ ಪಾಡೇನು ಎಂದು ಝೀನಲ್ ಚಿಂತೆಯಲ್ಲಿದ್ದಳು. ಇದೇ ಕಾರಣದಿಂದ ಧ್ರುವ್ ನನ್ನು ಆತನ ಪ್ಯಾಂಟ್ ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ನಂತರ ಜನರ ಮುಂದೆ ನಾಟಕವಾಡಿದ್ದಾಳೆ.

    ಸದ್ಯ ಝೀನಲ್ ಳನ್ನು ಪಲೀಸರು ಬಂಧಿಸಿದ್ದಾರೆ.

  • ಅಣ್ಣನ ಮಗನ ಹೆಸರಿಗೆ ದಲಿತರ ಭೂಮಿ ಸ್ವಾಹ – ಎಂಎಲ್‍ಎ ವರ್ತೂರು ವಿರುದ್ಧ ರೊಚ್ಚಿಗೆದ್ದ ಮಹಿಳೆ

    ಅಣ್ಣನ ಮಗನ ಹೆಸರಿಗೆ ದಲಿತರ ಭೂಮಿ ಸ್ವಾಹ – ಎಂಎಲ್‍ಎ ವರ್ತೂರು ವಿರುದ್ಧ ರೊಚ್ಚಿಗೆದ್ದ ಮಹಿಳೆ

    ಕೋಲಾರ: ಶಾಸಕ ಅರ್ ವರ್ತೂರು ಪ್ರಕಾಶ್ ದಲಿತರನ್ನ ವಂಚಿಸಿ ಅಕ್ರಮವಾಗಿ ತನ್ನ ಅಣ್ಣನ ಮಗನ ಹೆಸರಲ್ಲಿ ಬೇನಾಮಿ ಆಸ್ತಿ ಗಳಿಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

    ಜೀವ ಬೆದರಿಕೆ ಹಾಕಿ, ತಮ್ಮ ಪ್ರಭಾವ ಬಳಸಿಕೊಂಡು ದಲಿತರಿಂದ ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ಆರ್‍ಟಿಐ ಮುಖಂಡ ಅಂಬರೀಶ್ ಆರೋಪಿಸಿದ್ದಾರೆ.

    ಬೆಗ್ಲಿಹೊಸಹಳ್ಳಿ ಗ್ರಾಮದ ದಲಿತ ಮುನಿಯಪ್ಪ ಎಂಬವರ ಒಂದು ಎಕರೆ 30 ಗುಂಟೆ ಜಮೀನನ್ನ, 2009ರಲ್ಲಿ ದಿನೇಶ್ ಬಾಬು ಎಂಬವನಿಗೆ ಮಾಡಿಕೊಟ್ಟು, ಆನಂತರ 2013ರಲ್ಲಿ ಶಾಸಕರ ಅಣ್ಣನ ಮಗ ರಕ್ಷಿತ್ ಹೆಸರಿಗೆ ಮಾಡಿಸಿಕೊಳ್ಳಲಾಗಿದೆ. ಆದ್ರೆ ಮುನಿಯಪ್ಪ 2001ರಲ್ಲಿ ಮರಣ ಪಟ್ಟಿದ್ದು, ದಿನೇಶ್ ಬಾಬು ಕೂಡ ಬದುಕಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಶಾಸಕರು ಹಾಗೂ ಅವರ ಆಪ್ತರು ಭೂಕಬಳಿಕೆ ಮಾಡಿದ್ದಾರೆ ಅಂಥ ಆರೋಪಿಸುತ್ತಿರುವ ಮುನಿಯಪ್ಪ ಪತ್ನಿ ಚೆನ್ನಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

    ಶಾಸಕರ ಬೇನಾಮಿ ಆಸ್ತಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.

     

  • ಆಸ್ತಿಗಾಗಿ ಆಹಾರದಲ್ಲಿ ವಿಷ ಬೆರೆಸಿ ಅಣ್ಣ, ಅತ್ತಿಗೆಯನ್ನ ತಮ್ಮ ಕೊಂದೇ ಬಿಟ್ಟ!

    ಆಸ್ತಿಗಾಗಿ ಆಹಾರದಲ್ಲಿ ವಿಷ ಬೆರೆಸಿ ಅಣ್ಣ, ಅತ್ತಿಗೆಯನ್ನ ತಮ್ಮ ಕೊಂದೇ ಬಿಟ್ಟ!

    ಚಿಕ್ಕಮಗಳೂರು: ಆಸ್ತಿಗಾಗಿ ಆಹಾರದಲ್ಲಿ ಇಲಿ ಪಾಷಾಣ ಬೆರೆಸಿ ಸ್ವಂತ ಅಣ್ಣ ಅತ್ತಿಗೆಯನ್ನು ತಮ್ಮನೇ ಕೊಲೆ ಮಾಡಿರೋ ಘಟನೆ ಮೂಡಿಗೆರೆ ತಾಲೂಕಿನ ಕಣಚೂರು ಗ್ರಾಮದಲ್ಲಿ ನಡೆದಿದೆ.

    ಅಣ್ಣ ವೆಂಕಟೇಶ್ ಮತ್ತು ಅತ್ತಿಗೆ ರುಕ್ಮಿಣಿ ಸಾವನ್ನಪ್ಪಿದ ದುರ್ದೈವಿಗಳು. ಆಸ್ತಿಗಾಗಿ ಕಿತ್ತಾಟ ನಡೆದ ಹಿನ್ನೆಲೆಯಲ್ಲಿ ಸ್ವಂತ ಅಣ್ಣ ಅತ್ತಿಗೆಗೆ ರಾಗಿ ಅಂಬಲಿಯಲ್ಲಿ ತಮ್ಮ ದಿನೇಶ್ 11 ದಿನಗಳ ಹಿಂದೆ ಇಲಿ ಪಾಷಾಣ ಹಾಕಿದ್ದ.

    ವಿಷ ಸೇವಿಸಿದ್ದ ವೆಂಕಟೇಶ್ ಹಾಗೂ ರುಕ್ಮಿಣಿಯನ್ನ ಪಕ್ಕದ ಮನೆಯವರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಭಾನುವಾರ ಸಾವನ್ನಪ್ಪಿದರೆ, ರುಕ್ಮಿಣಿ ಇಂದು ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಗೋಣಿಬೀಡು ಪೊಲೀಸರು ಆರೋಪಿ ದಿನೇಶ್ ವಶಕ್ಕೆ ಪಡೆದು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವೆಂಕಟೇಶ್ ಮತ್ತು ರುಕ್ಮಿಣಿ 14 ವರ್ಷದ ಮಗ ನಿತಿನ್ ಹಾಗೂ 12 ವರ್ಷದ ಪೂಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

  • ಕುಂದಾಪುರದಲ್ಲಿ ಸರ್ಕಾರದಿಂದ ಬಡವರ ಮನೆ ತೆರವು – ಬೀದಿಗೆ ಬಿತ್ತು ನೂರಾರು ದಲಿತ ಕುಟುಂಬ

    ಕುಂದಾಪುರದಲ್ಲಿ ಸರ್ಕಾರದಿಂದ ಬಡವರ ಮನೆ ತೆರವು – ಬೀದಿಗೆ ಬಿತ್ತು ನೂರಾರು ದಲಿತ ಕುಟುಂಬ

    ಉಡುಪಿ: ಸರ್ಕಾರಿ ಜಮೀನಿನಲ್ಲಿದ್ದ 150 ಮನೆಯನ್ನು ಏಕಾಏಕಿ ಸರ್ಕಾರ ತೆರವು ಮಾಡಿದೆ.

    ಕುಂದಾಪುರದ ಕಂದಾವರದಲದ 25 ಎಕರೆ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ 150 ದಲಿತರ, ಕಾರ್ಮಿಕರ ಮನೆಗಳನ್ನು ತಹಶೀಲ್ದಾರ್ ತೆರವು ಮಾಡಿಸಿದ್ದಾರೆ. ಮನೆಗಳು ಬೀಳುತ್ತಿದ್ದಂತೆ ಸಂತ್ರಸ್ತರು ಪ್ರತಿಭಟನೆ ಮಾಡಿದರು. ಆದ್ರೆ ಪೊಲೀಸರ ಭದ್ರತೆಯಲ್ಲಿ ತಹಶೀಲ್ದಾರ್ ಕಾರ್ಯಾಚರಣೆಗೆ ಬುಲ್ಡೋಜರ್ ಗಳ ಬೆಂಬಲ ಸಿಕ್ಕಿತು.

    ಮನಬಂದಂತೆ ಸರ್ಕಾರಿ ಅಧಿಕಾರಿಗಳು ಮನೆಗಳನ್ನು ಉರುಳಿಸಿದರು. ಸ್ವಂತ ಜಮೀನಿಲ್ಲದ ಕುಂದಾಪುರದ ನಿವಾಸಿಗಳು ಕೆಲ ತಿಂಗಳ ಹಿಂದೆ ಸರ್ಕಾರಿ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. 25 ಎಕರೆ ಜಮೀನಿನಲ್ಲಿ ಕೊರಗ, ದಲಿತರು, ಹಿಂದುಳಿದವರೇ ಹೆಚ್ಚು. ಕೂಲಿ ಕಾರ್ಮಿಕರು ಕೂಡಾ ಗುಡಿಸಲು ಹಾಕಿ ಜೀವನ ಶುರು ಮಾಡಿದ್ದರು. ಸರ್ಕಾರದ ಕಾರ್ಯಾಚರಣೆಗೆ ತಡೆಯೊಡ್ಡಿದ 8 ಮಂದಿ ಸಂತ್ರಸ್ತರ ಬಂಧನ ಕೂಡಾ ಆಗಿದೆ.

    ಇತ್ತ ಮನೆ ಕಳೆದುಕೊಂಡವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಂತ್ರಸ್ಥರಿಗೆ ಸಿಪಿಎಂ ನಾಯಕರು ಬೆಂಬಲಿಸಿದರು. ಪೊಲೀಸರು ಸಂತ್ರಸ್ತರನ್ನು ಬಂಧಿಸಿ ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ. ಬದುಕುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ ಎಂದು ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಘಟನೆಯನ್ನು ಖಂಡಿಸಿದ್ದಾರೆ.

    ಸಂತ್ರಸ್ತೆ ವಿಮಲ ಕಂದಾವರ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ವಿಷ ಕುಡಿಯಬೇಕು ಅಂತ ಅಂದ್ರೆ ಅಧಿಕಾರಿಗಳೇ ಹೇಳಲಿ, ಕುಡಿದು ಸಾಯ್ತೇವೆ. ನಾವು ಸಾಲ ಮಾಡಿ ಸಿಮೆಂಟ್ ಬ್ಲಾಕ್ ತಂದು ಗುಡಿಸಲು ಕಟ್ಟಿದ್ದೇವೆ. ಏಕಾಏಕಿ ಈ ತರ ದಾಳಿ ಮಾಡಿದ್ದಾರೆ. ನಮ್ಮ ಕಣ್ಣೆದುರೇ ಮನೆಗಳ ನೆಲಸಮ ಮಾಡಿದ್ದಾರೆ. ಚಿಕ್ಕ-ಚಿಕ್ಕ ಮಕ್ಕಳು, ಮಹಿಳೆಯರು ಬೀದಿಗೆ ಬಂದಿದ್ದೇವೆ. ಜಿಲ್ಲಾಧಿಕಾರಿಗಳೇ, ಎಸ್‍ಪಿಯವರೇ ಇದಕ್ಕೆ ಉತ್ತರ ಕೊಡಬೇಕಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.