ಹಾಸನ: ಪಾಪಿ ಪುತ್ರನೊಬ್ಬ ತನ್ನ ತಂದೆ ಬದುಕಿರುವಾಗಲೇ ನಿಧನರಾಗಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಂದ್ರೇಗೌಡ ಎಂಬಾತನೇ ನಕಲಿ ದಾಖಲೆ ಸೃಷ್ಟಿಸಿದ ಪುತ್ರ. ಬಾಗೂರು ಗ್ರಾಮದ 76 ವರ್ಷದ ದ್ಯಾವೇಗೌಡ ಎಂಬವರು ಎರಡು ಮದುವೆಯಾಗಿದ್ದಾರೆ. ಮೊದಲ ಪತ್ನಿಯ ಪುತ್ರ ಚಂದ್ರೇಗೌಡನಿಗೆ ಆಸ್ತಿಯಲ್ಲಿ ಪಾಲನ್ನೂ ನೀಡಿದ್ದಾರೆ.
ತಂದೆ ಹೆಸರಲ್ಲಿದ್ದ 2.3 ಎಕರೆ ಜಮೀನನ್ನು ತಂದೆಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು, ಬಳಿಕ ತನ್ನ ಪುತ್ರ ಮಹೇಶ್ ಹೆಸರಿಗೆ ಬದಲಿಸಿದ್ದಾನೆ. ಚಂದ್ರೇಗೌಡನ ಈ ವಂಚನೆಯಲ್ಲಿ ಸ್ಥಳೀಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇಂತ ನೀಚ ಪುತ್ರನಿಗೆ ಜನ್ಮ ನೀಡಿದ ತಪ್ಪಿಗೆ ವೃದ್ಧ ತಂದೆ-ತಾಯಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.
ರಾಮನಗರ: ಮಗನೊಬ್ಬ ಜಮೀನಿಗಾಗಿ ಹೆತ್ತ ತಾಯಿಯನ್ನೇ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.
ನಾಗಮ್ಮ ಮಗನಿಂದಲೇ ಕೊಲೆಯಾದ ನತದೃಷ್ಟೆ ತಾಯಿ. ಮೃತ ನಾಗಮ್ಮಳ ಮಗ ಸುರೇಶ್ ಕೊಲೆ ಮಾಡಿದ ಪಾಪಿ ಮಗ. ನಾಗಮ್ಮರ ಹೆಸರಿನಲ್ಲಿ 1 ಎಕರೆ 15 ಗುಂಟೆ ಜಮೀನಿತ್ತು. ಈ ಜಮೀನನ್ನು ತನ್ನ ಹೆಸರಿಗೆ ಬರೆದುಕೊಂಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಮಗನ ಬಲವಂತಕ್ಕೆ ತಾಯಿ ನಾಗಮ್ಮ ಒಪ್ಪದಿದ್ದರಿಂದ, ಮಗಳ ಮನೆಗೆ ಕರೆದೊಯ್ದು ಬಿಟ್ಟುಬರುವುದಾಗಿ ತಿಳಿಸಿ, ಕರೆದೊಯ್ದು ಕೊಲೆ ಮಾಡಿ ತನ್ನದೇ ಮನೆಯ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತಿಟ್ಟಿದ್ದಾನೆ.
ತಹಶೀಲ್ದಾರ್ ರಮೇಶ್‍ರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಆರೋಪಿ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದು, ಇದೀಗ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.
ದಾವಣಗೆರೆ: ಆಸ್ತಿ ವಿಚಾರಕ್ಕೆ ಕುಟುಂಭಸ್ತರು ಹಾಗೂ ಸಹೋದರರು ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಮಾಜಿ ಶಾಸಕರ ಮಗ ಹಾಗೂ ಸೊಸೆ ಮನೆ ಮುಂಭಾಗ ಪ್ರತಿಭಟನೆಗೆ ಕುಳಿತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣನವರ ಕೊನೆಯ ಮಗ ರುದ್ರಪ್ರಸಾದ್ ಹಾಗೂ ಪತ್ನಿ ಮೇಘಾ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ಸಹೋದರನಿಂದ ಪ್ರಾಣ ಬೆದರಿಕೆ ಇದೆ. ಆಸ್ತಿ ಪಾಲಾದ್ರು ಸಹ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ದೌರ್ಜನ್ಯ ಮಾಡಿ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ವಾಸವಿರುವ ಮನೆಗೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನಮಗೆ ಕಿರುಕುಳ ಕೊಟ್ಟಿದಲ್ಲದೆ, ನಾವು ಓಡಾಡುವ ಗೇಟ್ ಗೆ ವೆಲ್ಡಿಂಗ್ ಮಾಡಿದ್ದಾರೆ. ಇದನ್ನು ಕೇಳಲು ಹೋದ್ರೆ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ನಮಗೆ ರಕ್ಷಣೆ ಕೋರಿದ್ರು ಪೊಲೀಸ್ ಇಲಾಖೆಯಿಂದಲೂ ಸಹ ಯಾವುದೇ ಸಹಾಯ ಸಿಗುತ್ತಿಲ್ಲ. ಹಾಗಾಗಿ ರಕ್ಷಣೆ ಕೋರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮೋತಿ ವೀರಣ್ಣನವರ ಕೊನೆಯ ಮಗ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋತಿ ವೀರಣ್ಣನವರ ದ್ವಿತೀಯ ಪುತ್ರ ಯಜಮಾನ್ ರಾಜೇಂದ್ರ, ನಾವು ಯಾವುದೇ ಕಿರುಕುಳ ಕೊಟ್ಟಿಲ್ಲ. ಆಸ್ತಿ ವಿಚಾರ ಕೋರ್ಟ್ ನಲ್ಲಿ ಇದೆ. ನನ್ನ ತಮ್ಮನಿಗೆ ಬಂದಂತಹ ಮನೆಯಲ್ಲಿ ಯಾರು ಸಹ ವಾಸ ಮಾಡುತ್ತಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಾವು ಹಲ್ಲೆ ನಡೆಸಿದ್ದೆ ಆದರೆ, ಇಲ್ಲ ಅವರಿಗೆ ಕಿರುಕುಳ ಕೊಡುತ್ತಿರುವುದಾಗಲಿ ಸಾಕ್ಷಿ ಸಮೇತ ತೋರಿಸಲಿ. ಆಸ್ತಿಗಾಗಿ ನಮ್ಮ ತಂದೆಯ ಮರ್ಯಾದೆ ಮೂರುಕಾಸಿಗೆ ಹರಾಜು ಹಾಕುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಆಸ್ತಿಯನ್ನು ಪುತ್ರನ ಅಭಿಷೇಕ್ ಹೆಸರಿಗೆ ವರ್ಗಾಯಿಸಲು ಮುಂದಾಗಿದ್ದು, ಗುರುವಾರ ಮದ್ದೂರು ತಾಲೂಕು ಕಚೇರಿಗೆ ಭೇಟಿ ನೀಡಿದ್ದರು.
ಅಂಬರೀಶ್ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮ. ಇಲ್ಲಿ ಪಿತ್ರಾರ್ಜಿತ ಆಸ್ತಿಯಿದ್ದು, ಅದನ್ನು ಪುತ್ರ ಅಭಿಷೇಕ್ ಹೆಸರಿಗೆ ವರ್ಗಾಯಿಸಲು ಉಪ ನೋಂದಣಿ ಕಚೇರಿಗೆ (ಸಬ್ ರಿಜಿಸ್ಟ್ರಾರ್ ಆಫೀಸ್) ಅಂಬರೀಶ್ ಬಂದಿದ್ದರು.
ಅಂಬರೀಶ್ ಆಗಮನ ಗೊತ್ತಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿ ಇರುವ ಫೋಟೋ ಹಾಗೂ ವಿಡಿಯೋ ತೆಗೆಯಲು ಅಭಿಮಾನಿಗಳು ಮುಂದಾಗಿದ್ದರು. ಇದಕ್ಕೆ ಅಂಬರೀಶ್ ಅವಕಾಶ ನೀಡಲಿಲ್ಲ. ಆದರೆ ಕಚೇರಿಯಿಂದ ಅಂಬರೀಶ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಬಂದು ಫೋಟೋ ಹಾಗೂ ಸೆಲ್ಫೀ ತೆಗೆದುಕೊಂಡರು.
ಬೆಂಗಳೂರು: ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಹಿಂದಿರುಗಿಸುವಂತೆ ವ್ಯಕ್ತಿಯೊಬ್ಬರು 5 ಕೋಟಿ ರೂ, ಅಮಿಷ ನೀಡಿದ್ದರು ಎಂದು ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಹೆಚ್ ಎಸ್ ಶ್ರೀಕಾಂತ್ ಹೇಳಿದ್ದಾರೆ.
ಲಾಕರ್ಸ್ ಗಳಲ್ಲಿ ಪತ್ತೆಯಾದ ಆಪಾರ ಹಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ರೀಡಾ ಪರಿಕರಗಳನ್ನು ಇಡಲು ಬೌರಿಂಗ್ ಇನ್‍ಸ್ಟಿಟ್ಯೂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. 38 ವರ್ಷಗಳಿಂದ ನಾನು ಸಂಸ್ಥೆಯ ಸದಸ್ಯನಾಗಿ, 2010 ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹಚ್ಚಿನ ಮೆಂಬರ್ಸ್ ಇದ್ದಾರೆ. ಇಲ್ಲಿ 670 ಲಾಕರ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಸ್ಥೆಯ ಫ್ಲಾಟ್‍ನಲ್ಲಿ ಕೆಲ ನವೀಕರಣ ಕಾರ್ಯಗಳು ನಡೆಯಬೇಕಾಗಿದ್ದರಿಂದ ಫೆಬ್ರವರಿಯಲ್ಲಿ ಸದಸ್ಯರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಈ ನೋಟಿಸ್ ಯಾವುದೇ ಪ್ರತಿಕ್ರಿಯೆಬಾರದ ಕಾರಣ ನಮ್ಮ ಸಿಬ್ಬಂದಿಯೊಂದಿಗೆ ನಾವೇ ಲಾಕರ್ಸ್ ತೆರೆದು ನೋಡಿದಾಗ ಕಪ್ಪು ಬ್ಯಾಗ್ ಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸ್ ಡಿಜಿಪಿ ಚಂದ್ರಹಾಸ್ ಗುಪ್ತ ಅವರಿಗೆ ಮಾಹಿತಿ ನೀಡಿ, ಬ್ಯಾಗ್ ಗಳನ್ನು ತೆಗೆದ ಎಲ್ಲಾ ದೃಶ್ಯಗಳನ್ನು ವಿಡಿಯೋ ಮಾಡಿ ಸೀಲ್ ಮಾಡಲಾಗಿದೆ. ಬಳಿಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.
ಪ್ರಮುಖವಾಗಿ ಟೆನಿಸ್ ಕೋರ್ಟ್ ನಲ್ಲಿನ ಲಾಕರ್ ರೂಮ್‍ನ 79, 62 ಎಂಬ ಲಾಕರ್ ಗಳಲ್ಲಿ 6 ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ ಮೂರುವರೆ ಕೋಟಿ ದುಡ್ಡು, 8 ಕೋಟಿ ಮೌಲ್ಯದ ವಜ್ರಾಭರಣ, ಆಸ್ತಿ ದಾಖಲೆ ಪತ್ರ ಪತ್ತೆಯಾಗಿದೆ. ಒಟ್ಟಾರೆ ಸಂಸ್ಥೆಯ ಕಟ್ಟಡದಲ್ಲಿದ್ದ ಒಟ್ಟು 126 ಲಾಕರ್ ಓಪನ್ ಮಾಡಲಾಗಿತ್ತು ಎಂದು ತಿಳಿಸಿದರು.
ಲಾಕರ್ ನಲ್ಲಿ ಸಿಕ್ಕಿದ್ದೇನು?
* 2000 ರೂ. ನೋಟುಗಳ 18 ಬಂಡಲ್ (3 ಕೋಟಿ 90 ಲಕ್ಷ ರೂ.)
* 7.8 ಕೋಟಿ ಮೌಲ್ಯದ ಡೈಮಂಡ್
* ಗೋಲ್ಡ್ ಬಿಸ್ಕಟ್ 650 ಗ್ರಾಂ
* 30 ರಿಂದ 40 ಲಕ್ಷ ರೂ. ಮೌಲ್ಯದ ಎರಡು ವಾಚ್
* ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ
* ಹಲವು ಕೋಟಿ ರೂ. ಮೌಲ್ಯ ಚೆಕ್ ಹಾಗೂ ಸಹಿ ಮಾಡದ ಖಾಲಿ ಚೆಕ್‍ಗಳು ಪತ್ತೆ
ಅಂದಹಾಗೇ ಪತ್ತೆಯಾದ ಅಪಾರ ಪ್ರಮಾಣದ ಹಣ ರಾಜ್ಯ ಪ್ರತಿಷ್ಠಿತ ಉದ್ಯಮಿ ಅವಿನಾಶ್ ಅಮರ್ ಲಾಲ್ ಅವರದ್ದು ಎಂದು ತಿಳಿಸಿದ್ದಾರೆ. ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರರಾಗಿದ್ದು, ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು: ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಕ್ಲಾಬ್ ಒಳಗೆ ಕೋಟಿ ಕೋಟಿ ನಿಧಿ ಸಿಕ್ಕಿದೆ.
ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದನು. ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ ಆತ ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. ಆಗ 2 ಲಾಕರ್ ಓಪನ್ ಮಾಡಿದಾಗ ಅದರಲ್ಲಿ 2 ಬ್ಯಾಗ್ ಪತ್ತೆಯಾಗಿದೆ. 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿದೆ.
ಬೌರಿಂಗ್ ಆಡಳಿತ ಮಂಡಳಿ ಲಾಕರ್ ಓಪನ್ ಮಾಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬೌರಿಂಗ್ ಕ್ಲಬ್ ಸೆಕ್ರೆಟರಿ ಶ್ರೀಕಾಂತ್ ಮತ್ತು ಬ್ಯಾಡ್ಮಿಂಟನ್ ಕಮಿಟಿಯ ಸಂದೀಪ್‍ಗೆ ಉದ್ಯಮಿ ಆಮಿಷ ಒಡ್ಡಿದ್ದಾನೆ. ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ. ಆದರೆ ಆಸ್ತಿ ಪತ್ರ ಮಾತ್ರ ಕೊಡಿ ಎಂದು ಆಮಿಷ ಒಡ್ಡಿದ್ದಾನೆ. ಆದರೆ ಉದ್ಯಮಿಯ ಆಮಿಷಕ್ಕೆ ಒಳಗಾಗದ ಬೌರಿಂಗ್ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಗುರುವಾರ ರಾತ್ರಿ 12 ಗಂಟೆವರೆಗೂ ಐಟಿ ಇಲಾಖೆ ಪರೀಶಿಲನೆ ನಡೆಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ, ನೀವು ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತುವನ್ನು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ಉದ್ಯಮಿಗೆ ನೋಟಿಸ್ ಕಳುಹಿಸಿದ್ದಾರೆ. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ತಿಳಿಸಿದೆ. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ.
ಅವಿನಾಶ್ ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಮೂಲತಃ ರಾಜಸ್ಥಾನದವನು ಎಂದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದನು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಬಗ್ಗೆ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬುಧವಾರ ಪೊಲೀಸರ ಗುಂಡಿನ ದಾಳಿಗೆ ಒಳಗಾಗಿರುವ ರೌಡಿ ಶೀಟರ್ ಸೈಕಲ್ ರವಿ ಅಲಿಯಾಸ್ ಎಂ ರವಿಕುಮಾರನ ಕೋಟ್ಯಾಂತರ ಆಸ್ತಿಗೆ ಪೊಲೀಸರೇ ಪಾಲುದಾರರು ಎಂಬ ಅಸಲಿ ಸತ್ಯ ಬಯಲಾಗಿದೆ.
ಪೊಲೀಸರು ಪ್ರತಿ ತಿಂಗಳು ಸೈಕಲ್ ರವಿ ಬಳಿ ಹಣ ಹೂಡಿಕೆ ಮಾಡುತ್ತಿದ್ದರು. ಇದೇ ಹಣವನ್ನು ಬಂಡವಾಳವಾಗಿ ರವಿ ಜೂಜಾಟದಲ್ಲಿ ತೊಡಗಿಸುತ್ತಿದ್ದನು. ಹೀಗಾಗಿ ಪೊಲೀಸರು ಮತ್ತು ರವಿ ಮಧ್ಯೆ ವ್ಯವಹಾರ ನಡೆಯುತ್ತಿತ್ತು. ಈ ಕಾರಣದಿಂದಲೇ ರವಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಎಂಬ ಅಚ್ಚರಿಯ ವಿಷಯ ಸಿಸಿಬಿ ಪೊಲೀಸರ ತನಿಖೆಯಲ್ಲಿ ಹೊರ ಬಂದಿದೆ. ರವಿಯ ಆಸ್ತಿ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರವಿ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ. ರವಿ ಆರು ಕೊಲೆ ಹಾಗೂ ನಾಲ್ಕು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಬೆಂಗಳೂರಿನ ಸುಮಾರು 13 ಕ್ಕೂ ಹೆಚ್ಚಿನ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಸೈಕಲ್ ರವಿ 20 ವರ್ಷದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 1998 ರಲ್ಲಿ ಆತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಈಗಲೂ ಸುಪಾರಿ ಕಿಲ್ಲರ್, ಅಪಹರಣ, ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜನ ಮರ್ಮಾಂಗವನ್ನು ಹಿಚುಕಿ ಕೊಲೆ ಮಾಡಿದ ಅಮಾನವೀಯ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೀರಲಕೇರಿ ಗ್ರಾಮದ ಯಲ್ಲಪ್ಪ ಪಟಾತ್ (85) ಮೃತ ಹಿರಿಯ ವ್ಯಕ್ತಿ. ಯಲ್ಲಪ್ಪ ಅವರ ಮೊಮ್ಮಕ್ಕಳಾದ ಬೀರಪ್ಪ ಪಟಾತ್, ಸೋಮವ್ವ ಕೋರಕೊಪ್ಪ ಕೊಲೆಗೈದ ಆರೋಪಿಗಳು.
ನಡೆದಿದ್ದು ಏನು?
ಮೃತ ಅಜ್ಜ ಯಲ್ಲಪ್ಪ ಅವರು ತಮ್ಮ ಪಾಲಿನ ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾವಣೆ ಮಾಡಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡೆಸಿದ ಬೀರಪ್ಪ ಹಾಗೂ ಸೋಮವ್ವ ಆಸ್ತಿ ತಮಗೆ ಮಾತ್ರ ಸೇರಬೇಕೆಂದು ಯಲ್ಲಪ್ಪ ಅವರಿಗೆ ತಾಕೀತು ಮಾಡಿದ್ದರು. ಆದರೆ ಇದಕ್ಕೆ ಯಲ್ಲಪ್ಪ ಒಪ್ಪದೇ ಇದ್ದಾಗ
ಜೂನ್ 17 ರಂದು ಕೊಲೆ ಮಾಡಿದ್ದಾರೆ.
ಯಲ್ಲಪ್ಪ ಅವರ ಅಂತ್ಯಸಂಸ್ಕಾರ ಮಾಡಲು ಧಾರ್ಮಿಕ ವಿಧಿವಿಧಾನಕ್ಕೆ ಬೀರಪ್ಪ ಹಾಗೂ ಸೋಮವ್ವ ಮುಂದಾಗಿದ್ದರು. ಕೃತ್ಯದ ಮಾಹಿತಿ ಪಡೆದು ಗ್ರಾಮಕ್ಕೆ ಭೇಟಿ ನೀಡಿದ ಕೆರೂರು ಪೊಲೀಸರು ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು, ಯಲ್ಲಪ್ಪ ಅವರ ಮರ್ಮಾಂಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಂಕೆಯ ಆಧಾರದಲ್ಲಿ ಬೀರಪ್ಪ ಪಟಾತ್ ಮತ್ತು ಸೋಮವ್ವ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಬೀರಪ್ಪ ಪಟಾತ್ ಹಾಗೂ ಸೋಮವ್ವ ಕೋರಕೊಪ್ಪರನ್ನು ಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್: ಆಂಧ್ರಪ್ರದೇಶ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು (ಎಸಿಬಿ) ಗುರುವಾರ ನೆಲ್ಲೂರು ಜಿಲ್ಲೆಯ ಲೈನ್ ಇನ್ಸ್‌ಪೆಕ್ಟರ್ ಒಬ್ಬರ ಮನೆಯ ಮೇಲೆ ದಾಳಿ ನಡೆಸಿ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ನೆಲ್ಲೂರು ಜಿಲ್ಲೆಯ ಸಹಾಯಕ ನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್ ಲಕ್ಷ್ಮೀ ರೆಡ್ಡಿ (56) ಮನೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಪತ್ತೆಯಾಗಿದೆ. ಇದೇ ವೇಳೆ ಎಸಿಬಿ ಅಧಿಕಾರಿಗಳು ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಯ ಕೆಲ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಲಕ್ಷ್ಮಿ ರೆಡ್ಡಿ ಮನೆ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಸಂಜೆ ವರೆಗೂ ಶೋಧ ನಡೆಸಿ ಎರಡು ಜಿಲ್ಲೆಗಳಲ್ಲಿ ಆತ ಮಾಡಿದ್ದ ಕೃಷಿ ಆಸ್ತಿ, ನಿವೇಶನ ಕುರಿತ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಸದ್ಯ ಇವುಗಳ ಮೌಲ್ಯ 100 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. 1993 ರಲ್ಲಿ ಸರ್ವೀಸ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ ಈತ ಬಡ್ತಿ ಪಡೆದು 1996-97 ಅವಧಿಯಲ್ಲಿ ಲೈನ್ ಮನ್ ಆಗಿ ಕಾರ್ಯನಿರ್ವಹಿಸಿದ್ದ. 2013 ರ ಬಳಿಕ ಈತ ಲೈನ್ ಇನ್ಸ್‌ಪೆಕ್ಟರ್ ಆಗಿ ಮಗ್ಗುರು ಎಂಬ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.
ಲಕ್ಷ್ಮಿ ರೆಡ್ಡಿ ತಂದೆ ಮಲಕೊಂಡ ರೆಡ್ಡಿ ಹಾಗೂ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗಿದ್ದು, ಈ ವೇಳೆ 57.50 ಎಕರೆ ಕೃಷಿ ಭೂಮಿ, ಆರು ಐಶಾರಾಮಿ ಮನೆ ಮತ್ತು ಎರಡು ಫ್ಲ್ಯಾಟ್ ಗಳಿಗೆ ಸಂಬಂಧಿಸಿದ ಆಸ್ತಿ ವಿವರಗಳು ಸೇರಿದಂತೆ 9.95 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಪತ್ತೆಯಾಗಿದೆ. ಲಕ್ಷ್ಮಿ ರೆಡ್ಡಿಯವರ ಹೆಚ್ಚಿನ ಆಸ್ತಿಗಳು ಪತ್ನಿ ಸುಭಾಶಿಣಿ ಅವರ ಹೆಸರಿನಲ್ಲಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಲು ಲಕ್ಷ್ಮಿ ರೆಡ್ಡಿ ಇಲಾಖೆಗೆ ಸಂಬಂಧಿಸಿದ ಗೋದಾಮಿನಿಂದ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಣಗಳಿಸಿರುವ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾಗಿ ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.
ನವದೆಹಲಿ: 32 ವರ್ಷದ ವ್ಯಕ್ತಿಯೊಬ್ಬ ಸಹೋದರನನ್ನು ಜೈಲಿಗೆ ಕಳುಹಿಸಲು ತನ್ನನ್ನು ತಾನೇ ತಾನೇ ಶೂಟ್ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಆರೋಪಿ ಅಜಯ್ (32), ಈತ ತನ್ನ ಪೂರ್ವಜರ ಆಸ್ತಿಗೆ ತಾನೊಬ್ಬನೆ ಯಜಮಾನ ಆಗಬೇಕೆಂದು ಆಸೆ ಪಟ್ಟಿದ್ದನು. ಇದಕ್ಕೆ ಅಡ್ಡವಾಗಿದ್ದ ಆತನ ಸಹೋದರನನ್ನು ಜೈಲಿಗೆ ಕಳುಹಿಸಬೇಕೆಂದು ಪ್ಲಾನ್ ಮಾಡಿ ತಾನೇ ಗುಂಡು ಹಾರಿಸಿಕೊಂಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ: ಆರೋಪಿಯ ಸ್ನೇಹಿತ ಸಂದೀಪ್ ನನ್ನ ಸ್ನೇಹಿತನಿಗೆ ಶೂಟ್ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜಯ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಅಜಯ್ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ನಂತರ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದಾನೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮಾಡಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೇ ನೆರೆಹೊರೆಯವರನ್ನು ವಿಚಾರಣೆ ಮಾಡಿದ್ದಾರೆ. ಆಗ ಸತ್ಯ ಬೆಳಕಿಗೆ ಬಂದಿದೆ. ಆದರೆ ಅಜಯ್ ವಿಚಾರಣೆ ಮಾಡುವಾಗ, ನಾನು ಅಂಗಡಿ ಬಾಗಿಲು ಮುಚ್ಚಿ ಹೊರಬಂದೆ. ಆಗ ನನ್ನ ಸಹೋದರ ಮತ್ತು ಆತನ ಇಬ್ಬರು ಸ್ನೇಹಿತರು ಬೈಕಿನಲ್ಲಿ ಬಂದರು. ಆದರೆ ಆತ ದೂರದಲ್ಲಿ ನಿಂತು ಶೂಟ್ ಮಾಡಿದನು. ಅದರಲ್ಲಿ ಒಂದು ಗುಂಡು ನನ್ನ ಹೊಟ್ಟೆಗೆ ಬಿತ್ತು. ನಾನು ಪ್ರಜ್ಞಾಹೀನನಾಗಿ ಕುಸಿದು ಬಿದ್ದೆ ಎಂದು ಹೇಳಿದ್ದನು.
ಪೊಲೀಸ್ ವಿಚಾರಣೆಯ ವೇಳೆ ಅಜಯ್ ಮುಖ್ಯ ಆರೋಪಿ ಎಂದು ತಿಳಿದು ಬಂದಿದೆ. ಈತ ಆಸ್ತಿಗಾಗಿ ತನ್ನ ಮೂವರು ಸ್ನೇಹಿತರ ಜೊತೆ ಕೂಡಿ ಈ ಸ್ಕೆಚ್ ಹಾಕಿದ್ದು, ಪೊಲೀಸ್ ಠಾಣೆಗೆ ಫೋನ್ ಮಾಡಿದ್ದ ಸಂದೀಪ್ ನಿಂದಲೇ ತಾನೇ ಗುಂಡು ಹಾರಿಸಿಕೊಂಡಿದ್ದನು. ಸದ್ಯಕ್ಕೆ ವಿಷಯ ತಿಳಿಯುತ್ತಿದ್ದಂತೆ ಆರೋಪಿ ನಗರದಿಂದ ಪರಾರಿಯಾಗುತ್ತಿದ್ದನು. ಪೊಲೀಸರು ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ
ಆರೋಪಿಯ ಕುಟುಂಬದವರು ಮೂರು ಬೆಡ್ ರೂಮ್ ನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆ ಮನೆ ಸಹೋದರನ ಹೆಸರಿನಲ್ಲಿತ್ತು. ಆದ್ದರಿಂದ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.