Tag: property

  • ಪ್ರಧಾನಿ ಮೋದಿ ಬಳಿ ಆಸ್ತಿ ಎಷ್ಟಿದೆ?  ಕೈಯಲ್ಲಿರೋ ನಗದು ಎಷ್ಟು? ಎಷ್ಟು ಏರಿಕೆಯಾಗಿದೆ? – ಅಫಿಡವಿಟ್ ವಿವರ ಓದಿ

    ಪ್ರಧಾನಿ ಮೋದಿ ಬಳಿ ಆಸ್ತಿ ಎಷ್ಟಿದೆ? ಕೈಯಲ್ಲಿರೋ ನಗದು ಎಷ್ಟು? ಎಷ್ಟು ಏರಿಕೆಯಾಗಿದೆ? – ಅಫಿಡವಿಟ್ ವಿವರ ಓದಿ

    ನವದೆಹಲಿ: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಕಣಕ್ಕಿಳಿದಿರುವ ಪ್ರಧಾನಿ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದು ತನ್ನ ಬಳಿ ಒಟ್ಟು 2.5 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

    4 ಬಾರಿ ಗುಜರಾತ್ ಸಿಎಂ ಆಗಿ ಕರ್ತವ್ಯ ನಿರ್ವಹಿಸಿ, ಈಗ ಪ್ರಧಾನ ಮಂತ್ರಿ ಆಗಿ ಆಡಳಿತ ನಡೆಸುತ್ತಿರುವ ಮೋದಿ ತಮ್ಮ ಸರ್ಕಾರಿ ವೇತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿಯ ಆಸ್ತಿ ಮೌಲ್ಯದಲ್ಲಿ 86 ಲಕ್ಷ ರೂ. ಏರಿಕೆಯಾಗಿದೆ. ಜಶೋಧಾಬೇನ್ ಅವರನ್ನು ಮೋದಿ ತನ್ನ ಪತ್ನಿ ಎಂದು ಅಫಿಡವಿಟ್ ನಲ್ಲಿ  ಉಲ್ಲೇಖಿಸಿದ್ದಾರೆ.

    1967ರಲ್ಲಿ ಗುಜರಾತ್ ಬೋರ್ಡ್ ನಡೆಸುವ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಬಿ.ಎ ಪದವಿ, 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ ಎಂದು ಮೋದಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಆಸ್ತಿ ಎಷ್ಟಿದೆ?
    ಅಧಿಕಾರ ಕೈಯಲ್ಲಿ ಇದ್ದರೂ ಮೋದಿ ಬಳಿ ಯಾವುದೇ ಮನೆ ಮತ್ತು ಜಮೀನು ಇಲ್ಲ. ಸರ್ಕಾರಿ ವೇತನ ಮತ್ತು ಬ್ಯಾಂಕ್ ಬಡ್ಡಿಯೇ ಮೋದಿ ಅವರ ಆದಾಯದ ಮೂಲವಾಗಿದ್ದು, ಯಾವುದೇ ಸಾಲ ಇಲ್ಲ, ಕ್ರಿಮಿನಲ್ ಕೇಸ್ ಸಹ ಇಲ್ಲ. ಮೋದಿ ಕೈಯಲ್ಲಿ ಕೇವಲ 38 ಸಾವಿರ ರೂ. ನಗದು ಹಣ ಇದೆ.

    ಮೋದಿಯ ಒಟ್ಟು ಆಸ್ತಿ 2.5 ಕೋಟಿ ರೂಪಾಯಿಗಳಿದ್ದು, ಅದರಲ್ಲಿ 1.27 ಕೋಟಿ ರೂ.ಗಳಷ್ಟು ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್), ಹಾಗೆಯೇ 38,750 ರೂ. ನಗದು ಹಣ ಅವರ ಕೈಯಲ್ಲಿ ಇದೆ.

    ನಮೋ ಒಟ್ಟು 1.41 ಕೋಟಿ ರೂ. ಚರಾಸ್ತಿಯನ್ನು ಹೊಂದಿದ್ದು, ಸುಮಾರು 1.1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹಾಗೆಯೇ ತೆರೆಗೆ ಉಳಿತಾಯ ಇನ್ಫ್ರಾ ಬಾಂಡ್‍ಗಳ ಮೇಲೆ 20 ಸಾವಿರ ರೂ. ಹಾಕಿದ್ದು, ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‍ನಲ್ಲಿ(ಎನ್‍ಎಸ್‍ಸಿ) 7.61 ಲಕ್ಷ ರೂ ಹಾಗೂ 1.9 ಲಕ್ಷ ರೂಪಾಯಿಗಳ ಎಲ್‍ಐಸಿ ಪಾಲಿಸಿ ಹೊಂದಿದ್ದಾರೆ.

    ಖಾಸಗಿ ಬ್ಯಾಂಕ್ ಖಾತೆಯಲ್ಲಿ ಕೇವಲ 4,143 ರೂ. ಉಳಿತಾಯವನ್ನು ಮಾಡಿದ್ದಾರೆ. ಅಲ್ಲದೆ 45 ಗ್ರಾಂ ತೂಕದ ಒಟ್ಟು 4 ಬಂಗಾರದ ಉಂಗುರಗಳಿದ್ದು, ಅದು 1.13 ಲಕ್ಷ ರೂ. ಬೆಲೆಬಾಳುತ್ತದೆ. ಹಾಗೆಯೇ ಗಾಂಧಿನಗರದ ಸೆಕ್ಟರ್-1ರಲ್ಲಿ 1.1 ಕೋಟಿ ರೂ. ಮೌಲ್ಯದ 3,531 ಚದರ ಅಡಿ ವಿಸ್ತೀರ್ಣದ ಜಾಗ ಹೊಂದಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಈ ಹಿಂದೆ 2014ರಲ್ಲಿ ಅಫಿಡವಿಟ್‍ನ ಪ್ರಕಾರ ಮೋದಿ 1.56 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದರು.

    2019ರಲ್ಲಿ ಮೋದಿ ಬಳಿಯಿರುವ ಆಸ್ತಿ ಎಷ್ಟು?
    * 2.51 ಕೋಟಿ ಮೌಲ್ಯದ ಆಸ್ತಿ
    * ಸ್ಥಿರಾಸ್ತಿ ಮೌಲ್ಯ – 1.1 ಕೋಟಿ ರೂ.
    * ಚರಾಸ್ತಿ ಮೌಲ್ಯ – 1.41 ಕೋಟಿ ರೂ.
    * ವಾರ್ಷಿಕ ಆದಾಯ -19.92 ಲಕ್ಷ ರೂ.
    * ಆದಾಯದ ಮೂಲ – ಸರ್ಕಾರ ಕೊಡುವ ವೇತನ, ಬ್ಯಾಂಕ್‍ನ ಬಡ್ಡಿ ಹಣ
    * ಕೈಯಲ್ಲಿರುವ ನಗದು – 38,750 ರೂ.
    * ಬ್ಯಾಂಕ್‍ನಲ್ಲಿರುವ ನಗದು – 4,143 ರೂ.
    * ಫಿಕ್ಸೆಡ್ ಡಿಪಾಸಿಟ್ – 1,27,81,574 ರೂ.
    * ಬಾಂಡ್- 20,000 ರೂ.
    * ಇನ್ಶುರೆನ್ಸ್, ಎನ್‍ಎಸ್‍ಸಿ -9,51,813 ರೂ.
    * ಚಿನ್ನದ ಮೌಲ್ಯ -1,13,800 ರೂ. (4 ಉಂಗುರ)
    * ಇತರೆ ಆಸ್ತಿ -2,26,040 ರೂ.
    * ಗಾಂಧಿನಗರದಲ್ಲಿನ ಮನೆಯಲ್ಲಿ ಮೋದಿ ಪಾಲು ಶೇ.25

    2014ರಲ್ಲಿ ಮೋದಿ ಬಳಿಯಿದ್ದ ಆಸ್ತಿ ಎಷ್ಟು?
    * 1 ಕೋಟಿ 65 ಲಕ್ಷ ರೂ. ಮೊತ್ತದ ಆಸ್ತಿ
    * ಕೈಯಲ್ಲಿದ್ದ ದುಡ್ಡು – 29 ಸಾವಿರ ರೂ.
    * ಬ್ಯಾಂಕ್ ಠೇವಣಿ – 44 ಲಕ್ಷದ 23 ಸಾವಿರ ರೂ.
    * ಉಳಿತಾಯ ಬಾಂಡ್‍ಗಳು – 4 ಲಕ್ಷದ 34 ಸಾವಿರ ರೂ
    * ಆಭರಣ – 1 ಲಕ್ಷದ 35 ಸಾವಿರ ರೂ.
    * ಚಿರಾಸ್ತಿ ಒಟ್ಟು ಮೊತ್ತ – 51 ಲಕ್ಷದ 57 ಸಾವಿರ ರೂ.
    * ಗಾಂಧಿನಗರದಲ್ಲಿ 1 ಕೋಟಿ ರೂ. ಮೌಲ್ಯದ ಕಟ್ಟಡ

  • ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ

    ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

    ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಕುಟುಂಬದ ಆಸ್ತಿ 50 ಸಾವಿರ ಕೋಟಿ ಇದ್ದರೆ ಬಿಜೆಪಿಯವರು ಅವರು ಅದನ್ನು ಸಾಬೀತು ಪಡಿಸಲಿ. ಆಸ್ತಿ ಹೊಂದಿದ್ದು ನಿಜವಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ಸುಳ್ಳಾದರೆ ಅವರು ರಾಜಕೀಯ ನಿವೃತ್ತಿ ಹೊಂದುತ್ತಾರಾ? ಅಂತ ಓಪನ್ ಚಾಲೆಂಜ್ ಹಾಕಿದ್ದಾರೆ.

    ಸಂಸದ ರವಿಕುಮಾರ್ ಗೆ ನನ್ನ ಬಗ್ಗೆ ಮಾತನಾಡಲು ಏನು ಅರ್ಹತೆ ಇದೆ, ಅವರು ನಾಮ ನಿರ್ದೇಶನದಿಂದ ಬಂದವರು. ನಾನು ಜನರಿಂದ ಆಯ್ಕೆಯಾದವನು. ಪುತ್ರ ವ್ಯಾಮೋಹದ ಬಗ್ಗೆ ಮಾತನಾಡುವ ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ ತಮ್ಮ ಕುಟುಂಬದ ಸದಸ್ಯರ ಪದವಿಗಳ ಬಗ್ಗೆ ತುಟಿ ಬಿಚ್ಚಲಿ ಎಂದು ಖಡಕ್ ತಿರುಗೇಟು ನೀಡಿದರು.

  • ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    – ದೇವೇಂದ್ರಪ್ಪಗಿಂತ ಪತ್ನಿಯೇ ಶ್ರೀಮಂತ!
    – ಕೋಟಿ ಕೋಟಿ ರೂ. ಸಾಲ ಮಾಡಿದ್ದಾರೆ ಉಗ್ರಪ್ಪ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಳಿ ಸಾಕಷ್ಟು ಹಣವಿದೆ. ಅವರು ಬೇಕಾದಷ್ಟು ದುಡ್ಡು ಹಂಚುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದರು. ಆದರೆ ವೈ.ದೇವೇಂದ್ರಪ್ಪ ಬಳಿ ಹಣಕ್ಕಿಂತ ಹಸು, ಕುರಿ ಎತ್ತುಗಳಿದ್ದು ಆದಾಯ ತೆರಿಗೆ ಪಾವತಿದಾರರಲ್ಲ.

    ವೈ.ದೇವೇಂದ್ರಪ್ಪ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಶ್ರೀಮಂತರಾಗಿದ್ದಾರೆ. ಅಷ್ಟೇ ಅಲ್ಲದೇ ಉಗ್ರಪ್ಪ ಅವರು ಕೋಟಿ ರೂ. ಸಾಲಗಾರರು ಕೂಡ ಆಗಿದ್ದಾರೆ.

    ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ 67 ವರ್ಷದವರಾಗಿದ್ದು, 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 2.31 ಕೋಟಿ ರೂ. ಆಗಿದ್ದು, ಆದಾಯ ತೆರಿಗೆ ಪಾವತಿದಾರರಲ್ಲ. ದೇವೇಂದ್ರಪ್ಪ ಅವರ ಬಳಿ 1.50 ಲಕ್ಷ ರೂ. ನಗದು, 8.87 ಲಕ್ಷ ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣ, ತಿಮ್ಮಲಾಪುರ, ಹಡಗಲಿ, ಮೈಸೂರು, ಬೆಂಗಳೂರು, ಅರಸಿಕೇರಿಯಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ದಾವಣಗೆರೆ ಹಾಗೂ ಅರಸಿಕೇರೆಯಲ್ಲಿ ಅಪಾರ್ಟಮೆಂಟ್ ಸೇರಿ 1.17 ಕೋಟಿ ರೂ. ಮೌಲ್ಯದ ಚಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‍ನಲ್ಲಿ 32 ಲಕ್ಷ ರೂ. ಇಟ್ಟಿದ್ದು, 1.30 ಲಕ್ಷ ರೂ. ಸಾಲ ಪಡೆದಿದ್ದಾರೆ.

    ದೇವೇಂದ್ರಪ್ಪ ಪತ್ನಿ, ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯೆ ಸುಶೀಲಮ್ಮ ಆದಾಯ ತೆರಿಗೆ ಪಾವತಿದಾರರಾಗಿದ್ದು, 13.64 ಲಕ್ಷ ರೂ. ಆದಾಯ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‍ಗಳಲ್ಲಿ 49.59 ಲಕ್ಷ ರೂ. ಹೊಂದಿದ್ದು, 18.15 ಲಕ್ಷ ರೂ. ಮೌಲ್ಯದ ಆಭರಣ ಅವರ ಬಳಿ ಇದೆ. 62.93 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 34.62 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಬಿ.ಎಸ್ಸಿ, ಎಲ್‍ಎಲ್‍ಬಿ ಪದವೀಧರರಾಗಿದ್ದಾರೆ. ಅವರ ಬಳಿ 2.77 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 8.05 ಕೋಟಿ ರೂ. ಸ್ಥಿರಾಸ್ತಿ ಇದೆ. ಜೊತೆಗೆ 2.2 ಕೆಜಿ ಚಿನ್ನಾಭರಣ ಹಾಗೂ 17 ಕೆಜಿ ಬೆಳ್ಳಿ ಹೊಂದಿದ್ದಾರೆ. ಉಗ್ರಪ್ಪ 2.22 ಕೋಟಿ ರೂ. ಸಾಲಗಾರರಾಗಿದ್ದು, ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

  • ಚಿಕ್ಕಪ್ಪ, ಚಿಕ್ಕಮ್ಮನ ತಲೆ ಕತ್ತರಿಸಿ, ರುಂಡ-ಮುಂಡ ಬೇರೆ ಮಾಡಿ ತಾನು ನೇಣಿಗೆ ಶರಣು

    ಚಿಕ್ಕಪ್ಪ, ಚಿಕ್ಕಮ್ಮನ ತಲೆ ಕತ್ತರಿಸಿ, ರುಂಡ-ಮುಂಡ ಬೇರೆ ಮಾಡಿ ತಾನು ನೇಣಿಗೆ ಶರಣು

    ಮಡಿಕೇರಿ: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನು ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡೆದಿದೆ.

    ನಿವೃತ್ತ ಪೊಲೀಸ್ ಪೇದೆ ಸೂದನ ಗಣೇಶ್(63) ಮತ್ತು ಪತ್ನಿ ಮೋಹಿನಿ (58) ಕೊಲೆಯಾದವರು. ಗಣೇಶ್ ಅಣ್ಣನ ಮಗ ದಿಲೀಪ್ (32) ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಗಣೇಶ್ ಮತ್ತು ದಿಲೀಪ್ ಕುಟುಂಬದ ಮಧ್ಯೆ ಹಿಂದಿನಿಂದಲೂ ಕಲಹಗಳು ನಡೆಯುತ್ತಿತ್ತು.

    ಬುಧವಾರ ಸಂಜೆಯೂ ಗಲಾಟೆ ನಡೆದಿದ್ದು, ಗಣೇಶ್ ಕತ್ತನ್ನು ದಿಲೀಪ್ ಕತ್ತರಿಸಿದ್ದಾನೆ. ಈ ವೇಳೆ ತಡೆಯಲು ಬಂದ ಗಣೇಶ್ ಪತ್ನಿ ಮೋಹಿನಿಯ ಕತ್ತನ್ನೂ ನಿರ್ದಯವಾಗಿ ಕತ್ತರಿಸಿದ್ದಾನೆ. ಇಬ್ಬರ ರುಂಡ ಮುಂಡ ಬೇರೆ ಬೇರೆಯಾಗಿದೆ. ಅಷ್ಟರಲ್ಲಿ ಅಡ್ಡ ಬಂದ ಗಣೇಶ್ ಪುತ್ರ ಹರ್ಷಿತ್ (23) ಮೇಲೂ ದಿಲೀಪ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಹರ್ಷಿತ್‍ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

    ಈ ಘಟನೆ ನಂತರ ಗಣೇಶ್ ಅವರ ಮನೆಯಲ್ಲೇ ದಿಲೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ವೃತ್ತನಿರೀಕ್ಷಕ ನಂಜುಂಡೇ ಗೌಡ, ಠಾಣಾಧಿಕಾರಿ ತಿಮ್ಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆ ತಮ್ಮ ಊರಿನಲ್ಲಿ ನಡೆದ ಭೀಕರ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ

  • ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರತೊಡಗಿದೆ. ಇವತ್ತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿಯ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು.

    ಮೊದಲು ಬಿಜೆಪಿಯ ಅಭ್ಯರ್ಥಿ ಪ್ರತಾಪ್‍ಸಿಂಹ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಡಿಸಿಎಂ ಅರ್ ಅಶೋಕ್, ಮಾಜಿ ಸಚಿವ ಎಸ್.ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು. ಇದಕ್ಕೂ ಮುನ್ನ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಸಹ ನಾಮಪತ್ರ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್ ಶಾಸಕರಾದ ಡಾ.ಯತೀಂದ್ರ ಸೇರಿ ಹಲವರು ಸಾಥ್ ನೀಡಿದರು. ಆದರೆ ಮೈತ್ರಿ ಪಕ್ಷದ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೊನೆ ಕ್ಷಣದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವ ಸಾ.ರಾ ಮಹೇಶ್ ಕೈ ನಾಯಕರಿಗೆ ಸಾಥ್ ನೀಡಿದರು.

    ಪ್ರತಾಪ್ ಸಿಂಹ್ ಆಸ್ತಿ ವಿವರ:
    ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಚುನಾವಣೆಯ ಅಫಿಡವಿಡ್‍ನಲ್ಲಿ ಆಸ್ತಿ ವಿವರ ಘೋಷಣೆ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಘೋಷಿಸಿಸಿದ್ದಕ್ಕಿಂತ ಅಲ್ಪ ಪ್ರಮಾಣದ ಆಸ್ತಿ ಏರಿಕೆ ಆಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಆಸ್ತಿಯಲ್ಲಿ 7,29,380 ಲಕ್ಷ ರೂ ಹೆಚ್ಚಳವಾಗಿದ್ದು, ಚರಾಸ್ತಿ 11,09,697 ಹೊಂದಿದ್ದರೆ, ಸ್ಥಿರಾಸ್ತಿ 52,05,000 ರೂ. ಇದ್ದು, 23,64,087 ಸಾಲ ಹೊಂದಿದ್ದಾರೆ.

    ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹ 7.85.317 ರೂ. ಚರಾಸ್ತಿ, 48,00,000 ರೂ. ಸ್ಥಿರಾಸ್ತಿ ಹಾಗೂ 43,99,048 ಸಾಲ ಹೊಂದಿದ್ದರು. ಚರಾಸ್ತಿಯಲ್ಲಿ 3,24,380 ರೂ., ಸ್ಥಿರಾಸ್ತಿಯಲ್ಲಿ 4,05,000 ಏರಿಕೆ ಆಗಿದ್ದು, 20,34,961 ರೂ. ಸಾಲದಲ್ಲಿ ಇಳಿಕೆ ಆಗಿದೆ.

    ಪತ್ನಿ ಅರ್ಪಿತಾ ಸಿಂಹ ಹೆಸರಿನಲ್ಲಿ 40,35,435 ರೂ. ಚರಾಸ್ತಿ, 81,50,000 ರೂ. ಸ್ಥಿರಾಸ್ತಿ ಇದ್ದು, 23,74,917 ಸಾಲ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅರ್ಪಿತಾ ಅವರ ಹೆಸರಿನಲ್ಲಿ 4,36,274 ರೂ. ಚರಾಸ್ತಿ, 30,00,00 ರೂ. ಸ್ಥಿರಾಸ್ತಿ ಹೊಂದಿದ್ದರು. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಕುಟುಂಬದಿಂದ ಒಟ್ಟು 1 ಕಾರು, 360 ಗ್ರಾಂ ಚಿನ್ನ ಹೆಚ್ಚುವರಿಯಾಗಿ ಘೋಷಣೆ ಆಗಿದೆ. ಅಲ್ಲದೇ ಪತ್ನಿ ಹೆಸರಿನಲ್ಲಿ 23,74,917 ಲಕ್ಷ ರೂ. ಸಾಲ ಹೆಚ್ಚುವರಿಯಾಗಿ ಘೋಷಣೆ ಆಗಿದ್ದು, ಪುತ್ರಿ ಹೆಸರಿನಲ್ಲಿ 1,22,623 ರೂ. ಲೈಫ್ ಇನ್ಸೂರೆನ್ಸ್ ಘೋಷಣೆ ಆಗಿದೆ.

  • ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಅವರು ತಾಯಿ, ಸ್ನೇಹಿತರ ಹೆಸರಲ್ಲಿ ಇಟ್ಟಿದ್ದ 75 ಕೋಟಿ ಬೇನಾಮಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಬಾಲಕೃಷ್ಣನ್ ತಿಳಿಸಿದರು.

     

    ಡೈರಿ ಆರೋಪ ಠುಸ್: ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 1800 ಕೋಟಿ ಕಪ್ಪ ಡೈರಿ ಆರೋಪ ಠುಸ್ ಆಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಡೈರಿ ನಕಲಿ ಅಂತ ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ಸ್ಟಷ್ಟಪಡಿಸಿದ್ದಾರೆ.

    ಒಂದು ಐಟಿ ದಾಳಿಯಲ್ಲಿ ದಾಖಲಾತಿಗಳು ಸಿಕ್ಕಿದ್ದವು. ಅದನ್ನು ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ವಿ. ಅದು ಫೋಟೋ ಕಾಫಿಗಳಾಗಿ ಇದ್ದಿದರಿಂದ ಸತ್ಯಾಂಶ ಬೆಳಕಿಗೆ ಬರಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ. ಆದ್ರೆ, ನಿನ್ನೆ ಬಿಡುಗಡೆ ಮಾಡಿದ ಕೆಲ ದಾಖಲೆಗಳು ಫೋರ್ಜರಿ. ಮೊದಲ ಪೇಜ್ ಏನಿತ್ತು. ಅದು ನಾವು ಸೀಜ್ ಮಾಡಿದಾಗ ಸಿಕ್ಕಲೇ ಇಲ್ಲ. ಹಣದ ಬಗ್ಗೆ ಬರೆದಿರೋ ಪೇಜ್ ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಎಂದು ತಿಳಿಸಿದ್ದಾರೆ.

  • ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    – ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್

    ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ.

    ಕಳೆದ ವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಒಕ್ಕೂಟದ ಮುಖಂಡರು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎಚ್ ಮುನಿಯಪ್ಪನ ವಿರುದ್ಧ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಕೊಡಗಿನಲ್ಲಿದ್ದ ಸುಮಾರು 204.42 ಎಕ್ರೆ ಏಲಕ್ಕಿ ತೋಟವನ್ನು ತನ್ನ ಸೊಸೆ ಎಸ್.ಎಲ್ ಶ್ರುತಿಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಮಡಿಕೇರಿಯ ಅಕ್ರಮ ಆಸ್ತಿ ಸಂಪಾದನೆ ಕುರಿತು ಮಾ.19 ರಂದು ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಅಂದು ಮಧ್ಯಾಹ್ನವೇ ಬಿಡುಗಡೆ ಮಾಡಿದ ದಾಖಲೆಗಳ ಆಸ್ತಿಯನ್ನು ಸೊಸೆ ಎಸ್.ಎಲ್ ಶ್ರುತಿಶ್ರೀ ಹೆಸರಿಗೆ ಮಡಿಕೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಡಂಬಡಿಕೆ ನೋಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತನ್ನ ಆಸ್ತಿ ಘೋಷಣೆ ಮಾಡಬೇಕಾಗಿದ್ದ ಮುನಿಯಪ್ಪ ಅವರು ತಮ್ಮ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ ಮಡಿಕೇರಿಯ ಕುಂದಚೇರಿ ಗ್ರಾಮದ ಸರ್ವೇ ನಂ.1/10 ಸುಮಾರು 300 ಕೋಟಿ ಬೆಲೆಬಾಳುವ 204.42 ಎಕರೆ ಆಸ್ತಿ ಬಗ್ಗೆ ಮಾಹಿತಿ ತಿಳಿಸಿರಲಿಲ್ಲ ಎಂದು ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರು ಆರೋಪಿಸಿದ್ದರು.

  • ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಮಂಡ್ಯ: ಜಿಲ್ಲೆಯ ರಾಜಕೀಯ ಅಕ್ಷರಶಃ ಸ್ಟಾರ್ ರಣರಂಗವಾಗಿ ಮಾರ್ಪಟ್ಟಿದ್ದು, ಸುಮಲತಾ ಅಂಬರೀಶ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಿಯಮಗಳಂತೆ ನಾಮಪತ್ರದೊಂದಿಗೆ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

    ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ.

    ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸದಿಂದ ನೇರವಾಗಿ ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದರು. ಪ್ರತಿ ಸೆಟ್ ನಲ್ಲೂ ತಲಾ 10 ಸೂಚಕರ ಹೆಸರನ್ನು ಉಲ್ಲೇಖಿಸಿದ್ದರು.

    ಅಹಿಂದ ಅಸ್ತ್ರ:
    ನಾಮಪತ್ರ ಸಲ್ಲಿಕೆ ವೇಳೆಯೇ ಅಹಿಂದ ಅಸ್ತ್ರ ಪ್ರಯೋಗಿಸಿರುವ ಸುಮಲತಾ ಅವರು, ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್‍ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದರು.

    ಬೃಹತ್ ಮೆರವಣಿಗೆ:
    ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುಮಲತಾ ಅವರು ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೂ ಸಮಾವೇಶಕ್ಕೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಯಶ್ ಅವರು ಸಾಥ್ ನೀಡಿದರು. ಈ ರೋಡ್ ಶೋ ವೇಳೆ ಕೆಂಡದಂತೆ ಸೂರ್ಯ ಪ್ರಕಾಶಿಸುತ್ತಿದ್ದರೂ ಲೆಕ್ಕಿಸದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ ಮದ್ದೂರಿನಿಂದ ಅಭಿಮಾನಿಗಳು ಒಂದು ಸಾವಿರ ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

  • ಮಾವನ ಮೇಲೆ ಸೊಸೆಯಿಂದ ಹಲ್ಲೆ – ತಡೆಯಲು ಬಂದ ಪತಿಗೂ ಬಿತ್ತು ಏಟು

    ಮಾವನ ಮೇಲೆ ಸೊಸೆಯಿಂದ ಹಲ್ಲೆ – ತಡೆಯಲು ಬಂದ ಪತಿಗೂ ಬಿತ್ತು ಏಟು

    ಬೆಂಗಳೂರ: ಆಸ್ತಿ ವಿಚಾರವಾಗಿ ಸೊಸೆಯೇ ಮಾವನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೆ.ಜೆ. ಹಳ್ಳಿಯಲ್ಲಿ ನಡೆದಿದೆ.

    ಗುಲಾಬ್ ಜಾನ್ ಹಲ್ಲೆಗೊಳಗಾದ ಮಾವ. ಸೊಸೆ ಅಲಿಸ್ಮಾ ಭಾನು ಆಸ್ತಿಗಾಗಿ ಮಾವನ ಮೇಲೆ ಹಲ್ಲೆ ಮಾಡಿದ್ದಾಳೆ. ಇದನ್ನು ನೋಡಿ ತಂದೆಯನ್ನು ಕಾಪಾಡಲು ಪತ್ನಿಯನ್ನು ತಡೆಯಲು ಯತ್ನಿಸಿದ ಬುದ್ಧಿಮಾಂದ್ಯ ಗಂಡನ ಮೇಲೂ ಭಾನು ಹಲ್ಲೆ ಮಾಡಿದ್ದಾಳೆ. ಭಾನು ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

    ಅಲಿಸ್ಮಾ ಭಾನು ಸುಮಾರು 30 ಕೋಟಿ ರೂಪಾಯಿ ಮೊತ್ತದ ಆಸ್ತಿ ಬರೆದುಕೊಡುವಂತೆ ಮಾವನ ಮೇಲೆ ಹಲ್ಲೆ ನಡೆಸಿದ್ದಾಳೆ. ಸೊಸೆಯ ದಬ್ಬಾಳಿಕೆಯಿಂದ ಹೈರಾಣಾಗಿರುವ ಮಾವ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 70 ವರ್ಷದ ಮುದುಕ ರೇಪ್ ಮಾಡಲು ಬಂದ ಎಂದು ಅಲಿಸ್ಮಾ ಭಾನು ಪ್ರತಿ ದೂರು ನೀಡಿದ್ದಾಳೆ.

    ಅಲಿಸ್ಮಾ ಭಾನು ರೌಡಿ ಶೀಟರ್ ಸಮೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ಇದ್ದಾಗಲೇ ನನ್ನ ಬಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕಲು ನನ್ನ ಮೇಲೆಯೇ ರೇಪ್ ಕೇಸ್ ದಾಖಲಿಸಿದ್ದಾಳೆ ಎಂದು ಮಾವ ಜಾನ್ ಆರೋಪಿಸಿದ್ದಾರೆ.

    ಹಲ್ಲೆ ಬಗ್ಗೆ ಹೇಳಿದರೆ ನನ್ನ ಮಗಳು ರಿಯಾನ್ ಮತ್ತು ಅಳಿಯ ರಿಯಾಝ್‍ಗೆ ಸೊಸೆ ಮತ್ತು ಅವನ ಅಣ್ಣ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕೆ.ಜಿ ಹಳ್ಳಿ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಗುಲಾಬ್ ಜಾನ್ ನ್ಯಾಯಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾಗಿ ಮಕ್ಕಳಿದ್ರೂ ಲವ್ – ಪ್ರಿಯಕರನ ಸಹಾಯದಿಂದ ಪೋಷಕರನ್ನೇ ಕೊಂದು ಸೂಟ್‍ಕೇಸಿಗೆ ತುಂಬಿದ್ಳು

    ಮದ್ವೆಯಾಗಿ ಮಕ್ಕಳಿದ್ರೂ ಲವ್ – ಪ್ರಿಯಕರನ ಸಹಾಯದಿಂದ ಪೋಷಕರನ್ನೇ ಕೊಂದು ಸೂಟ್‍ಕೇಸಿಗೆ ತುಂಬಿದ್ಳು

    ನವದೆಹಲಿ: 26 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ತನ್ನ ಪೋಷಕರನ್ನೇ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಪಶ್ಚಿಮ ದೆಹಲಿಯ ಪಾಸ್ಟಿಮ್ ವಿಹಾರದಲ್ಲಿ ನಡೆದಿದೆ.

    ಮೃತರನ್ನು ಜಗೀರ್ ಕೌರ್(43) ಮತ್ತು ಅವರ ಪತಿ ಗುರ್ಮೆತ್ ಎಂದು ಗುರುತಿಸಲಾಗಿದೆ. ನಂಗ್ಲೋಯ್ ಸಯೆದ್ ಗ್ರಾಮದ ಬಳಿ ಚರಂಡಿಯಲ್ಲಿ ಸೂಟ್‍ಕೇಸ್ ಹರಿದು ಬಂದಿದೆ. ಅದನ್ನು ತೆಗೆದು ಪೊಲೀಸರು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ದಾವೀಂದರ್ ಕೌರ್ ಮತ್ತು ಅವಳ ಗೆಳೆಯ ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ನಮ್ಮ ತಂದೆ-ತಾಯಿ ನಾಪತ್ತೆಯಾಗಿದ್ದಾಗ ನಾನು ದೆಹಲಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾಳೆ. ಆದರೆ ಆಕೆಯ ಫೋನ್ ಪರಿಶೀಲನೆ ಮಾಡಿದಾಗ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ತಿಳಿಯಿತು. ನಂತರ ವಿಚಾರಣೆ ಮಾಡಿದಾಗ ಪ್ರಿಯಕರ ಪ್ರಿನ್ಸ್ ದಿಕ್ಷೀತ್ ಸಹಾಯದಿಂದ ಪೋಷಕರನ್ನೂ ನಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ ಸೆಜು ಕುರುವಿಲ್ಲಾ ಹೇಳಿದ್ದಾರೆ.

    ಏನಿದು ಪ್ರಕರಣ?
    ಆರೋಪಿಗೆ ದಾವೀಂದರ್ ಕೌರ್ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ಒಂದು ವರ್ಷದ ಹಿಂದೆ ಪತಿಯನ್ನು ಬಿಟ್ಟು ಪಾಸ್ಟಿಮ್ ವಿಹಾರದಲ್ಲಿದ್ದ ತನ್ನ ತವರಿಗೆ ಬಂದಿದ್ದಾಳೆ. ಕೆಲವು ದಿನಗಳ ನಂತರ ಆಕೆಗೆ ಪ್ರಿನ್ಸ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಪ್ರಿನ್ಸ್ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಆರೋಪಿ ಕೌರ್ ತನ್ನ ತಂದೆ-ತಾಯಿಗೆ 50 ಲಕ್ಷದ ಫ್ಲಾಟ್ ಅನ್ನು ತನ್ನ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾಳೆ. ಆದರೆ ಪೋಷಕರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಪೋಷಕರನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ. ಅದರಂತೆಯೇ ತಾಯಿಯೂ ಪಂಜಾಬ್‍ಗೆ ಹೋಗಿದ್ದರು. ಇದೇ ಒಳ್ಳೆಯ ಸಮಯ ಎಂದುಕೊಂಡು ತಂದೆಗೆ ನಿದ್ರೆ ಮಾತ್ರೆ ಕೊಟ್ಟಿದ್ದಾಳೆ. ಬಳಿಕ ಉಸಿರುಗಟ್ಟಿಸಿ ಕೊಂದಿದ್ದಾಳೆ. ಮರುದಿನ ತಾಯಿ ಮನೆಗೆ ಬಂದಿದ್ದಾರೆ. ಅವರಿಗೂ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಿದ್ದಾಳೆ. ಬಳಿಕ ಇಬ್ಬರ ಮೃತದೇಹವನ್ನು ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಸಾಗಿಸಲು ಸಹಾಯ ಮಾಡಿದ್ದ ಇಬ್ಬರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv