Tag: property

  • ಪೂಜೆ ಮಾಡ್ತಿದ್ದಾಗಲೇ ಚಿಕ್ಕಮ್ಮನ ಕತ್ತು ಸೀಳಿದ

    ಪೂಜೆ ಮಾಡ್ತಿದ್ದಾಗಲೇ ಚಿಕ್ಕಮ್ಮನ ಕತ್ತು ಸೀಳಿದ

    – ಗಂಟೆ ಶಬ್ದ ಕೇಳ್ತಿದ್ದಂತೆ ಮನೆಗೆ ನುಗ್ಗಿದ

    ಬೆಂಗಳೂರು: ಆಸ್ತಿಗಾಗಿ ಸ್ವಂತ ಚಿಕ್ಕಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ನಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ನಾರಾಯಣಮ್ಮ ಮೃತ ಮಹಿಳೆ. ಮೃತ ಮಹಿಳೆಯ ಪತಿ ತಾತಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ನಾರಾಯಣಮ್ಮ ಎರಡನೇ ಪತ್ನಿಯಾಗಿದ್ದಳು. ತಾತಪ್ಪ ಎರಡನೇ ಮದುವೆಯಾದ ನಂತರ ಮೊದಲ ಪತ್ನಿ ಮತ್ತು ಮಕ್ಕಳನ್ನು ದೂರ ಇಟ್ಟಿದ್ದು, ಆಸ್ತಿಯನ್ನು ಭಾಗ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮಹೇಶ್ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ತಾತಪ್ಪನ ಬಳಿ ನಲ್ಲಯ್ಯನ ದೊಡ್ಡಿಯಲ್ಲಿ 5-6 ಎಕರೆಯಷ್ಟು ಜಮೀನಿತ್ತು. ತಾತಪ್ಪನ ಮೊದಲನೇ ಪತ್ನಿಯ ಹೆಸರಲ್ಲಿ 2 ಎಕರೆ, ಎರಡನೇ ಪತ್ನಿಯ ಹೆಸರಲ್ಲಿ 2 ಎಕರೆ ಜಮೀನನ್ನು ಬರೆದಿದ್ದನು. ಇದಕ್ಕೆ ಮೊದಲನೇ ಪತ್ನಿಯ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೊರೆ ಹೋಗಿದ್ದರು. ಕಳೆದ ಹತ್ತು ವರ್ಷಗಳ ಹಿಂದೆಯೇ ಇವರು ಕೇಸ್ ದಾಖಲಿಸಿದ್ದರು.

    ಇತ್ತೀಚೆಗೆ ಮೃತ ನಾರಾಯಣಮ್ಮನಿಗೆ ಒಂದೂವರೆ ಎಕರೆ ಆಸ್ತಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಕೋಪಗೊಂಡ ಮಹೇಶ್ ಮತ್ತೆ ಕ್ಯಾತೆ ತೆಗೆದು ಪದೇ ಪದೇ ನಾರಾಯಣಮ್ಮನ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದನು. ಆಗ ನಾರಾಯಣಮ್ಮ ಕೂಡ ಆತನಿಗೆ ಬೈದು ಕಳುಹಿಸಿದ್ದಳು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

    ಅದರಂತೆಯೇ ಆರೋಪಿ ಮಹೇಶ್ ಇಂದು ಮುಂಜಾನೆ ನಾರಾಯಣಮ್ಮನ ಮನೆ ಬಳಿ ಬಂದಿದ್ದಾನೆ. ನಂತರ ಅಕ್ಕಪಕ್ಕ ಯಾರೂ ಇಲ್ಲದನ್ನು ಗಮನಿಸಿ ಆಕೆ ಪೂಜೆ ಮಾಡೋ ಸಮಯದಲ್ಲಿ ಕೊಲೆ ಮಾಡಲು ಪ್ಲಾನ್ ಮಾಡಿ ಕಾದು ಕುಳಿತಿದ್ದನು. ನಂತರ ಗಂಟೆ ಶಬ್ದ ಕೇಳುತ್ತಿದ್ದಂತೆ ಮನೆ ಒಳಗಡೆ ನುಗ್ಗಿದ್ದು, ಮಚ್ಚಿನಿಂದ ಆಕೆಯ ಕುತ್ತಿಗೆಯನ್ನ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಕೊಲೆ – ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್

    ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಕೊಲೆ – ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್

    – ಚಿಕ್ಕಪ್ಪನಿಗೆ ರಾಡ್‍ನಿಂದ ಹೊಡೆದು ಭೀಕರ ಕೊಲೆ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೇ ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ಉಟ್ನೂರ್ ಮಂಡಲದ ಗಂಗನಪೇಟ ಗ್ರಾಮದಲ್ಲಿ ನಡೆದಿದೆ.

    ಟಿ.ಶಿವರಾಜ್ (62) ಮೃತ ನಿವೃತ್ತ ಸಹಾಯಕ ಸಬ್‍ಇನ್‍ಸ್ಪೆಕ್ಟರ್. ಈ ಘಟನೆ ಶುಕ್ರವಾರ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆದ ನಂತರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಟಿ.ವಿವೇಕ್, ಆತನ ಸಹೋದರ ಟಿ.ಮನೋಜ್ ಮತ್ತು ಅವರ ತಾಯಿ ವನಜಾ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ಏನಿದು ಪ್ರಕರಣ?
    ಮೃತ ಟಿ.ಶಿವರಾಜ್ ಮತ್ತು ಅವರ ಸಹೋದರ ಟಿ.ಜಯರಾಜ್ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಶುಕ್ರವಾರ ಜಯರಾಜ್ ಪುತ್ರರಾದ ವಿವೇಕ್ ಮತ್ತು ಮನೋಜ್ ಇಬ್ಬರು ಶಿವರಾಜ್ ವಾಸಿಸುತ್ತಿದ್ದ ಮನೆಗೆ ಹೋಗಿ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕೋಪಗೊಂಡ ವಿವೇಕ್ ಅಲ್ಲೆ ಇದ್ದ ರಾಡ್ ತೆಗೆದುಕೊಂಡು ಶಿವರಾಜ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಶಿವರಾಜ್ ನಿಂತಲ್ಲೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇತ್ತ ಶಿವರಾಜ್ ಮೃತಹೇಹದೊಂದಿಗೆ ವಿವೇಕ್ ಸೆಲ್ಫಿ ತೆಗೆದುಕೊಂಡು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಶಿವರಾಜ್ ಅವರು 2017ರಲ್ಲಿ ನಿವೃತ್ತರಾಗಿದ್ದು, ಸ್ಥಳೀಯ ಗಂಗನಪೇಟ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪೂರ್ವಜರ ಆಸ್ತಿಯನ್ನು ಶಿವರಾಜ್ ಮತ್ತು ಜಯರಾಜ್ ನಡುವೆ ಸಮಾನವಾಗಿ ಹಂಚಿಕೆ ಮಾಡಿಲ್ಲ ಎಂದು ಆಗಾಗ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆದರೆ ಶುಕ್ರವಾರ ಜಗಳ ವಿಕೋಪಕ್ಕೆ ಹೋಗಿ ವಿವೇಕ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿ ವಿವೇಕ್, ಸಹೋದರ ಮತ್ತು ತಾಯಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಕಲಬುರಗಿ: ಸೇಡಂ ತಾಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗೈಕರಾಗುತ್ತಿದ್ದಂತೆ ಕೋಟಿ ಕೋಟಿಯ ಆಸ್ತಿಯ ಮೇಲೆ ಹಲವರು ಕಣ್ಣು ಬಿದ್ದಿದೆ. ಹೀಗಾಗಿ ಇದೀಗ ಮಠದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಮಠದ ಭಕ್ತರು ಸಮರ ಸಾರಲು ಮುಂದಾಗಿದ್ದಾರೆ.

    ಅಮ್ಮನವರು ಜೀವಿತಾವಧಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಅಂತ “ರೂಪ ರಹಿತಾ ಅಂಹಿಸಾ ಯೋಗೇಶ್ವರ ವೀರ ಧರ್ಮಜಾ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಯಾನಾಗುಂದಿ” ಹುಟ್ಟಿಹಾಕಿದ್ದು, ಆ ಟ್ರಸ್ಟ್ ಅಡಿ ಯಾನಾಗುಂದಿಯಲ್ಲಿ 254 ಎಕರೆ ಜಮೀನು ಸೇರಿದಂತೆ, ಕಲಬುರಗಿ, ಬೀದರ್, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರ-ತೆಲಂಗಾಣದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದೆ. ಈ ಆಸ್ತಿಯ ಮೇಲೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಕಣ್ಣಿಟ್ಟಿದ್ದಾರೆ.

    ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ತನ್ನ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿದ್ದು, ಮಾತೆ ಮಾಣಿಕೇಶ್ವರಿಯ ಪುತ್ರ ಅಂತ ದಾಖಲಾತಿ ಸಿದ್ಧಪಡಿಸಿದ್ದಾರೆ. ಈ ಮೂಲಕ ಮಠದ ಆಸ್ತಿ ಕಬಳಿಸಲು ಹೊಂಚು ಹಾಕಿದ್ದಾರೆ ಅಂತ ಮಾತೆ ಮಾಣಿಕೇಶ್ವರಿ ಅವರ ಪರಮ ಭಕ್ತ ಹಾಗೂ ಹಿಂದಿನಿಂದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಶಿವಕುಮಾರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಹಿಂದೆ ಸಹ ಆಡಳಿತ ಮಂಡಳಿ ಸದಸ್ಯರು ಅಮ್ಮನವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಶಿವಕುಮಾರ್ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಟ್ರಸ್ಟ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ನಂತರ ಅಮ್ಮನವರನ್ನು ಭಕ್ತರ ದರ್ಶನಕ್ಕೆ ಟ್ರಸ್ಟ್ ಸದಸ್ಯರು ಮುಂದಾಗಿದ್ದರು. ಇದೀಗ ಮತ್ತೆ ಟ್ರಸ್ಟಿ ವಿರುದ್ಧ ಆಸ್ತಿ ಕಬಳಿಕೆಯ ಆರೋಪವನ್ನು ಕೇಳಿ ಬಂದಿರುವುದು ಅಪಾರ ಭಕ್ತರಲ್ಲಿ ಚಿಂತೆಗೀಡಾಗಿದೆ.

    ಮಠದ ಪೀಠಾಧಿಪತಿ ಮತ್ತು ಮುಂದಿನ ಆಡಳಿತ ವ್ಯವಸ್ಥೆ ಬಗ್ಗೆ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಅವರನ್ನು ಕೇಳಿದ್ರೆ, ಇಲ್ಲಿ ನಾವೆಲ್ಲ ಸೇವಕಾರಾಗಿ ಬಂದಿದ್ದೇವೆ. ಸದ್ಯ ಯಾರೂ ಪೀಠದಲ್ಲಿ ಮುಂದುವರಿಯಲ್ಲ. ಆದರೆ ಟ್ರಸ್ಟ್ ಅಡಿಯಲ್ಲಿಯೇ ಎಲ್ಲ ನಡೆಸುವುದಾಗಿ ಹೇಳುತ್ತಿದ್ದಾರೆ. ಇಡೀ ವಿಶ್ವಕ್ಕೆ ದೀಪ ಬೆಳೆಗಿಸಿದ ಮಾತೆ ಮಾಣಿಕೇಶ್ವರಿ ಅಮ್ಮನವರ ಮಠದಲ್ಲಿ ಇದೀಗ ಆಸ್ತಿಯ ಕಲಹ ಆರಂಭವಾಗಿದೆ. ಈ ಮೂಲಕ ಯಾನಾಗುಂದಿ ಟ್ರಸ್ಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಮತ್ತೆ ದೃಢಪಟ್ಟಿದೆ.

  • ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಚಿತ್ರದುರ್ಗ: ಆಸ್ತಿ ಆಸೆಗಾಗಿ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಹಳ್ಳಕೆ ಎಸೆದಿರುವ ಘಟನೆ ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

    ರಂಗಸ್ವಾಮಿಯವರ ಪುತ್ರ ಏಳು ವರ್ಷದ ಗೋವಿಂದ್ ತನ್ನ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿ. ರಂಗಸ್ವಾಮಿ ಸಹೋದರ ಚಿರಂಜೀವಿ ಬಾಲಕನಿಗೆ ಪಾರಿವಾಳದ ಆಸೆ ತೋರಿಸಿ ಕರೆದೊಯ್ದು, ನೀರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ಮೃತ ದೇಹವನ್ನು ಕಟ್ಟಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಎಸೆದಿದ್ದಾನೆ.

    ಚಿರಂಜೀವಿ ಹಾಗೂ ರಂಗಸ್ವಾಮಿಯ ತಂದೆ ಕೋಪದಲ್ಲಿ ನಿಮಗೆ ಆಸ್ತಿ ಕೊಡುವುದಿಲ್ಲ, ನನ್ನ ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದಿದ್ದರು. ಹೀಗಾಗಿ ಆಸ್ತಿ ಕೈ ತಪ್ಪುತ್ತದೆ ಎಂಬ ಆತಂಕದಿಂದ ಅಣ್ಣನ ಮಗ ಗೋವಿಂದನನ್ನು ಈತ ಕೊಲೆ ಮಾಡಿದ್ದಾನೆ ಎಂದು ಗೋವಿಂದ್ ತಂದೆ ರಂಗಸ್ವಾಮಿ ಆರೋಪಿಸಿದ್ದಾರೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನಾಯಕನಹಟ್ಟಿ ಠಾಣೆ ಪೊಲೀಸರು, ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

  • ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ರಾಮನಗರ: ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಶೀಲಂ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಾಗಿದ್ದು, ಆಸ್ತಿ ವಿವರ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ.

    ವಿವಾದಿತ ಸ್ವಾಮೀಜಿ ಬಿಡದಿಯ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ನಿತ್ಯಾನಂದ ಹಾಗೂ ಆತನ ಹಿಂಬಾಲಕ ಗೋಪಾಲ ಶೀಲಂ ರೆಡ್ಡಿ ಅವರ ಇಡೀ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಸಿಒಡಿ ಅಧಿಕಾರಿಗಳಿಗೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

    ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ವಿರುದ್ಧ ಈಗಾಗಲೇ ಎಂಡ್ ಡೇಟೆಡ್ ವಾರೆಂಟ್ ಜಾರಿಯಾಗಿದೆ. ಅನೇಕ ಬಾರಿ ವಿಚಾರಣೆಗೆ ಸಹ ಗೈರಾಗಿದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಗೋಪಾಲ ಶೀಲಂ ರೆಡ್ಡಿಯ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ನ್ಯಾಯಾಲಯ ಮುಂದಾಗಿದೆ. ಹೀಗಾಗಿ ಈ ಇಬ್ಬರು ಆರೋಪಿಗಳ ಆಸ್ತಿ ವಿವರ ಸಲ್ಲಿಸುವಂತೆ ತನಿಖಾಕಾರಿಗಳಿಗೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ಸೂಚಿಸಿದ್ದಾರೆ.

    ಪ್ರಕರಣದ 2ನೇ ಆರೋಪಿಯಾದ ಗೋಪಾಲ ಶೀಲಂ ರೆಡ್ಡಿ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ ಈತನಿಗಾಗಿಯು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿತ್ಯಾನಂದನ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಲಾಗಿದೆ.

  • ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಮನೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

    ಲಗ್ಗೆರೆ ನಿವಾಸಿ ವೆಂಕಟೇಶ್ ಗೌಡ ತನ್ನ ತಾಯಿ ಮುನಿಯಮ್ಮರನ್ನು(60) ಕೂಡಿಹಾಕಿದ್ದನು. ಮುನಿಯಮ್ಮರಿಗೆ ಲೋಹಿತ್, ವೆಂಕಟೇಶ್ ಗೌಡ ಅನ್ನೋ ಇಬ್ಬರು ಗಂಡು ಮಕ್ಕಳಿದ್ದಾರೆ. ದೊಡ್ಡ ಮಗನಿಗೆ ಲಗ್ಗೆರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಎರಡನೇ ಮಗನಿಗೆ ಹೆಸರುಗಟ್ಟದ ಮನೆಯನ್ನು ವಿಭಾಗ ಮಾಡಿ ಕೊಡಲಾಗಿತ್ತು. ಆದರೆ ಎರಡನೇ ಮಗ ವೆಂಕಟೇಶ್ ಲಗ್ಗೆರೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಕಣ್ಣು ಹಾಕಿದ್ದನು. ಆ ಕಟ್ಟಡದಲ್ಲಿ 60 ಸಾವಿರ ರೂ. ಬಾಡಿಗೆ ಬರ್ತಿದ್ದು, ಅದು ನನಗೆ ಬೇಕು ಅಂತ ವೆಂಕಟೇಶ್ ತಾಯಿ ಜೊತೆ ಜಗಳ ಶುರುಮಾಡಿದ್ದನು. ಇದಕ್ಕೆ ತಾಯಿ ನಿರಾಕರಿಸಿದ ಹಿನ್ನೆಲೆ ಅವರನ್ನು ವೆಂಕಟೇಶ್ ಮನೆಯಲ್ಲೇ ಕೂಡಿ ಹಾಕಿದನು. ಹಾಗೆಯೇ ಆಸ್ತಿ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದನು.

    ವಿಚಾರಣೆ ವೇಳೆ ಮುನಿಯಮ್ಮ ಎಲ್ಲಿ ಹೋದರು ಗೊತ್ತಿಲ್ಲ ಎಂದು ಕೋರ್ಟಿಗೆ ಮಾಹಿತಿ ನೀಡಿದ್ದನು. ಅದರಿಂದ ಅನುಮಾನಗೊಂಡ ಮುನಿಯಮ್ಮರ ಹೆಣ್ಣು ಮಕ್ಕಳು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೆಂಕಟೇಶ್ ಮನೆ ಪರಿಶೀಲನೆ ಮಾಡಿದ ವೇಳೆ ಮನೆಯ ರೂಮ್‍ವೊಂದರಲ್ಲಿ ತಾಯಿಯನ್ನು ಗೃಹಬಂಧನದಲ್ಲಿಟ್ಟಿರೋದು ಬೆಳಕಿಗೆ ಬಂದಿದೆ.

    ಸುಮಾರು 6 ತಿಂಗಳಿಂದ ತಾಯಿಯನ್ನು ಇದೇ ರೀತಿ ಕೂಡಿ ಹಾಕಿದ್ದು, ಸರಿಯಾಗಿ ಆಹಾರ ಕೂಡ ನೀಡದೆ ಮಗ ಚಿತ್ರಹಿಂಸೆ ಕೊಟ್ಟಿದ್ದಾನೆ. ಸದ್ಯ ವೃದ್ಧೆ ಮುನಿಯಮ್ಮರನ್ನು ಅವರ ಹೆಣ್ಣು ಮಕ್ಕಳು ಕರೆದುಕೊಂಡು ಹೋಗಿದ್ದು, ಮಗ ವೆಂಕಟೇಶ್, ಆತನ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 4ರ ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂಪತಿ

    4ರ ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂಪತಿ

    – ವಾಟ್ಸಪ್‍ನಲ್ಲಿ ಡೆತ್‍ ನೋಟ್ ಕಳುಹಿಸಿ ಜೀವಬಿಟ್ರು
    – ಆಸ್ತಿಗಾಗಿ ಸಂಬಂಧಿಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ

    ಮುಂಬೈ: 4 ವರ್ಷದ ಮಗಳನ್ನು ನೇಣು ಹಾಕಿ ಕೊಲೆಗೈದ ಬಳಿಕ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ವಕ್ಲಾನ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ರೈಸ್ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದ ವಕ್ಲಾನ್ ನಿವಾಸಿ ಶಿವರಾಮ್ ಪಾಟೀಲ್(39), ಪತ್ನಿ ದೀಪಿಕಾ ಆತ್ಮಹತ್ಯೆಗೆ ಶರಣಾದ ದಂಪತಿ. ಆಸ್ತಿ ವಿಚಾರಕ್ಕೆ ದಂಪತಿಗೆ ಸಂಬಂಧಿಕರು ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಮನನೊಂದು ಶಿವರಾಮ್, ದೀಪಿಕಾ ಆತ್ಮಹತ್ಯಗೆ ಶರಣಾಗಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಂಪತಿ ತಮ್ಮ 4 ವರ್ಷದ ಮಗಳನ್ನು ನೇಣು ಹಾಕಿ ಕೊಲೆಗೈದಿದ್ದಾರೆ.

    ಅಷ್ಟೇ ಅಲ್ಲದೇ ನಮ್ಮ ಸಾವಿಗೆ ಸಂಬಂಧಿಕರೇ ಕಾರಣ. ಅವರ ಕಿರುಕುಳ ತಾಳಲಾರದೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವ ಎಂದು 13 ಮಂದಿಯ ಹೆಸರನ್ನು ಉಲ್ಲೇಖಿಸಿ ದಂಪತಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ವಾಟ್ಸಪ್ ಮೂಲಕ ಡೆತ್ ನೋಟ್ ಅನ್ನು ದೀಪಿಕಾ ತನ್ನ ಸಹೋದರನಿಗೆ ಕಳುಹಿಸಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಹರಿದು ಹಾಕಿದ್ದ ಡೆತ್ ನೋಟ್ ಪೇಪರ್ ಪತ್ತೆಯಾಗಿತ್ತು. ಅಲ್ಲದೇ ಸಹೋದರನಿಗೆ ಕಳುಹಿಸಿದ ವಾಟ್ಸಪ್ ಮೆಸೇಜ್ ಕೂಡ ಪೊಲೀಸರಿಗೆ ಸಿಕ್ಕಿತ್ತು. ಈ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಸಂಬಂಧ ವಿಚಾರಣೆ ನಡೆಸಿದಾಗ 10 ಎಕ್ರೆ ಜಮೀನಿನ ವಿಚಾರಕ್ಕೆ ದಂಪತಿ ಹಾಗೂ ಅವರ ಸಂಬಂಧಿಕರ ನಡುವೆ ಜಗಳ ನಡೆಯುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಬಂಧಿಕರು ದಂಪತಿಗೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‍ನಲ್ಲಿ 13 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    13 ಮಂದಿಯಲ್ಲಿ ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಇನ್ನೂ ಉಳಿದ 11 ಮಂದಿ ತಲೆಮರೆಸಿಕೊಂಡಿದ್ದಾರೆ. ಹಾಗೆಯೇ ಜಗಳಕ್ಕೆ ಕಾರಣವಾಗಿರುವ 10 ಎಕ್ರೆ ಜಮೀನನ್ನು ಸಹೋದರನಿಗೆ ನೀಡಿ, ಅದನ್ನು ಆತ ಆನಾಥಾಶ್ರಮಗಳಿಗೆ ನೀಡುತ್ತಾನೆ ಎಂದು ದೀಪಿಕಾ ಹಾಗೂ ಶಿವರಾಮ್ ಡೆತ್ ನೋಟ್ ಅಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗಂಡನನ್ನೇ ಕಿಡ್ನಾಪ್ ಮಾಡಿ ಉಗುರು ಕಿತ್ತು ಚಿತ್ರಹಿಂಸೆ – ಅಣ್ಣನ ಜೊತೆ ಸೇರಿ 2ನೇ ಪತಿಯ ಕೊಲೆ

    ಗಂಡನನ್ನೇ ಕಿಡ್ನಾಪ್ ಮಾಡಿ ಉಗುರು ಕಿತ್ತು ಚಿತ್ರಹಿಂಸೆ – ಅಣ್ಣನ ಜೊತೆ ಸೇರಿ 2ನೇ ಪತಿಯ ಕೊಲೆ

    – 5 ದಿನ ಗೃಹ ಬಂಧನದಲ್ಲಿಟ್ಟು ಕಿರುಕುಳ
    – ಪೊಲೀಸರ ಮುಂದೆ ಪತ್ನಿಯ ಕೃತ್ಯ ತಿಳಿಸಿ ಪತಿ ಸಾವು

    ಚಾಮರಾಜನಗರ: ಹಣಕಾಸಿನ ವ್ಯವಹಾರದಲ್ಲಿ ಗಂಡ-ಹೆಂಡತಿ ನಡುವೆ ವೈಷಮ್ಯ ಉಂಟಾಗಿ ಸ್ವಂತ ಅಣ್ಣನ ಜೊತೆ ಸೇರಿ ಪತ್ನಿಯೇ ಎರಡನೇ ಪತಿಯನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ಸುಬ್ರಹ್ಮಣ್ಯ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಶ್ಮಿ ತನ್ನ ಸಹೋದರ ರಾಕೇಶ್ ಜೊತೆ ಸೇರಿಕೊಂಡು ಪತಿಯನ್ನೇ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.

    ಏನಿದು ಪ್ರಕರಣ?
    ಆರೋಪಿ ರಶ್ಮಿಗೆ ಈಗಾಗಲೇ ಮದುವೆಯಾಗಿ 11 ವರ್ಷದ ಮಗ ಕೂಡ ಇದ್ದನು. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಡಿವೋರ್ಸ್ ತೆಗೆದುಕೊಂಡು ಬೇರೆಯಾಗಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಮೃತ ಸುಬ್ರಹ್ಮಣ್ಯ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ಹಿಂದೆ ಮತ್ತೆ ಆರೋಪಿ ರಶ್ಮಿ ಮೊದಲನೆಯ ಪತಿಯ ಬಳಿ ಹೋಗಿದ್ದಳು. ಆದರೆ ಮತ್ತೆ ಜಗಳ ಮಾಡಿಕೊಂಡು ಆಸ್ತಿಗಾಗಿ ಎರಡನೇ ಪತಿ ಬಳಿ ಬಂದಿದ್ದಳು ಎಂದು ತಿಳಿದು ಬಂದಿದೆ.

    ಆರೋಪಿ ರಶ್ಮಿ ಪತಿ ಸುಬ್ರಹ್ಮಣ್ಯರನ್ನು ಅಪಹರಿಸಿ ಐದು ದಿನಗಳ ಕಾಲ ಗೃಹ ಬಂಧನದಲ್ಲಿಟ್ಟಿದ್ದಳು. ಅಲ್ಲದೇ ಹಣಕ್ಕಾಗಿ ಐದು ದಿನಗಳ ಕಾಲ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಬಂಧನದಲ್ಲಿದ್ದಾಗ ಪತಿಯ ಉಗುರು ಕಿತ್ತು ರಾಡ್‍ನಿಂದ ಕಿರಾತಕರು ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾಗಿ ಅಸ್ವಸ್ಥರಾಗಿದ್ದ ಸುಬ್ರಹ್ಮಣ್ಯರನ್ನು ನನ್ನು ಮುಡಿಗುಂಡದ ಮನೆಗೆ ಬಿಟ್ಟು ಆರೋಪಿಗಳು ಹೋಗಿದ್ದಾರೆ. ತಕ್ಷಣ ಸುಬ್ರಹ್ಮಣ್ಯರನ್ನು ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂರು ದಿನಗಳ ಕಾಲ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ವಿಜಯನಗರ ಪೊಲೀಸರ ಮುಂದೆ ಘಟನೆಯ ಸಂಪೂರ್ಣ ವಿವರ ನೀಡಿ ಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆ.

    ಇದೀಗ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ರಶ್ಮಿ, ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಪಡಗೂರು ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಮೊದಲನೇ ಆರೋಪಿ ರಶ್ಮಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಕೊಳ್ಳೇಗಾಲ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ. ರಶ್ಮಿ ಸಹೋದರ ರಾಕೇಶ್ ಮುಡಿಗುಂಡ ಮತ್ತು ಆತನ ಇಬ್ಬರು ಸ್ನೇಹಿತರಾದ ಪ್ರದೀಪ್ ಹಾಗೂ ರಾಕೇಶ್ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಮೂವರ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

  • ಪತ್ನಿಯ ಕೊಲೆ ಮಾಡಿ ಜೈಲು ಸೇರಿದ- ಮಕ್ಕಳ ಹೆಸರಿಗೆ ಆಸ್ತಿ ಬರೆಯುವಂತೆ ಶವವಿಟ್ಟು ಪ್ರತಿಭಟನೆ

    ಪತ್ನಿಯ ಕೊಲೆ ಮಾಡಿ ಜೈಲು ಸೇರಿದ- ಮಕ್ಕಳ ಹೆಸರಿಗೆ ಆಸ್ತಿ ಬರೆಯುವಂತೆ ಶವವಿಟ್ಟು ಪ್ರತಿಭಟನೆ

    ಚಾಮರಾಜನಗರ: ಪತಿಯ ಅನುಮಾನದ ಭೂತದಿಂದ ಪತ್ನಿ ಕೊಲೆಯಾಗಿದ್ದಳು. ಇತ್ತ ಕೊಲೆ ಮಾಡಿದ ಪತಿ ಜೈಲು ಸೇರಿದ್ದ. ಆದರೆ ದಂಪತಿಯ ಇಬ್ಬರು ಮಕ್ಕಳು ಮಾತ್ರ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ. ಇತ್ತ ತಂದೆಯ ಆಸ್ತಿಯನ್ನು ಮೋಸದಿಂದ ಬರೆದುಕೊಂಡಿರುವ ಸಹೋದರಿಯರು ಪರಾರಿಯಾಗಿದ್ದು, ಮೃತರ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದು ಕೊಡುವಂತೆ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸುರೇಶ್ ಎಂಬಾತ ಕಳೆದ ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಆರೋಪಿ ಸುರೇಶ್‍ಗೆ ಕಳೆದ 17 ವರ್ಷಗಳ ಹಿಂದೆ ಪಡಗೂರು ಗ್ರಾಮದ ಶಶಿಕಲಾರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿಪರೀತ ಕುಡುಕನಾಗಿದ್ದ ಸುರೇಶ್ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದ. ಮನೆಯಲ್ಲಿ ಅಪ್ಪನ ಕಿರುಕುಳ ಸಹಿಸಲಾಗದೆ ಹಿರಿಯ ಮಗಳು ತಾತನ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಶಶಿಕಲಾ ತನ್ನ 2ನೇ ಮಗಳೊಂದಿಗೆ ಅದೇ ಮನೆಯ ಕೊಠಡಿಯೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡತೊಡಗಿದ್ದಳು.

    ಕಳೆದ 2 ದಿನಗಳ ಹಿಂದೆ ಪತ್ನಿಯೊಡನೆ ಜಗಳ ತೆಗೆದಿದ್ದ ಸುರೇಶ್ ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದ. ಈ ನಡುವೆ ಸುರೇಶ್ ಹೆಸರಿನಲ್ಲಿದ್ದ 14 ಎಕರೆ ಜಮೀನು ಸೇರಿದಂತೆ ಬಹುತೇಕ ಆಸ್ತಿಯನ್ನು ಆತನ ಸಹೋದರಿಯರಾದ ಭಾಗ್ಯಮ್ಮ ಹಾಗೂ ರತ್ನಮ್ಮ ಮೋಸದಿಂದ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪತ್ನಿ ಕೊಲೆ ಮಾಡಿದ ಸುರೇಶ್ ಜೈಲು ಪಾಲಾಗಿದ್ದಾನೆ. ಆತನ ಸಹೋದರಿಯರು ಪರಾರಿಯಾಗಿದ್ದಾರೆ. ಕೊಲೆಯಾದ ಶಶಿಕಲಾಳ ಶವವನ್ನು ಅಂತ್ಯ ಸಂಸ್ಕಾರ ನಡೆಸದ ಆಕೆಯ ಪೋಷಕರು ಪ್ರತಿಭಟನೆ ನಡೆಸಿದ್ದರು.

    ಸುರೇಶ್ ಆಸ್ತಿಯನ್ನು ಸಹೋದರಿಯರು ಮೋಸದಿಂದ ಬರೆಸಿಕೊಂಡಿದ್ದಾರೆ. ಮತ್ತೆ ಆ ಆಸ್ತಿಯನ್ನು ಆತನ ಹೆಣ್ಣು ಮಕ್ಕಳಿಗೆ ಬರೆದುಕೊಡಬೇಕು ಎಂದು ಶಶಿಕಲಾ ಪೋಷಕರು ಬೇಡಿಕೆ ಇಟ್ಟಿದ್ದರು. ಇತ್ತ ಶಶಿಕಲಾ ಕೊಲೆಯಲ್ಲಿ ತಮ್ಮ ಪಾತ್ರ ಇಲ್ಲ. ಆದ್ದರಿಂದ ನಮ್ಮ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಬೇಕು. ಆಗ ನಾವು ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಬರೆದುಕೊಡುವುದಾಗಿ ಸುರೇಶ್ ಸಹೋದರಿಯರು ಷರತ್ತು ವಿಧಿಸಿ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ವಕೀಲರ ಮೂಲಕ ಒಪ್ಪಂದ ಮಾಡಿಕೊಂಡು ಶಶಿಕಲಾ ಪೋಷಕರು ಅಂತಿಮ ಸಂಸ್ಕಾರ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಆಸ್ತಿಗಾಗಿ ತಂದೆ, ತಾಯಿ, ಸಹೋದರನನ್ನೇ ಕೊಲೆಗೈದ ಮಗ

    ಆಸ್ತಿಗಾಗಿ ತಂದೆ, ತಾಯಿ, ಸಹೋದರನನ್ನೇ ಕೊಲೆಗೈದ ಮಗ

    ಬೆಳಗಾವಿ: ದೊಡ್ಡವಾಡ ಠಾಣಾ ವ್ಯಾಪ್ತಿಯ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

    ಶಿವಾನಂದ ಅಂದಾನಶೆಟ್ಟಿ, ಆತನ ಪತ್ನಿ ಶಾಂತವ್ವ ಮತ್ತು ಮಗ ವಿನೋದ್ ಕೊಲೆಯಾದವರು. ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಸ್ತಿ ಸಿಗದ ಕಾರಣ ಸಾಕು ಮಗನೇ ತನ್ನ ತಂದೆ, ಮಲ ತಾಯಿ ಹಾಗೂ ಸಹೋದರನನ್ನು ಕೊಚ್ಚಿ ಕೊಲೆ ಮಾಡಿರುವುದಾಗಿ ತನಿಖೆ ಸಂದರ್ಭದಲ್ಲಿ ಬಯಲಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಮೂವರ ಭೀಕರ ಕೊಲೆ-11 ದಿನದಲ್ಲಿ ಹಸೆಮಣೆ ಏರಬೇಕಿದ್ದಾತ ಸಾವು

    ದೊಡ್ಡವಾಡ ಗ್ರಾಮದ ಶಿವಾನಂದ ಅಂದಾನಶೆಟ್ಟಿ ಹಾಗೂ ಕಸ್ತೂರಿ ದಂಪತಿಗೆ ಮಕ್ಕಳಿಲ್ಲದ ಕಾರಣಕ್ಕೆ ಶಿವಾನಂದನ ಸಹೋದರಿಯ ಮಗ ಶಿವಪ್ಪನನ್ನು ಸಾಕುತ್ತಿದ್ದರು. ಆದರೆ ಕಳೆದ 7 ವರ್ಷಗಳ ಹಿಂದೆ ಧಾರವಾಡ ಶಾಂತವ್ವಳನ್ನು ಶಿವಾನಂದ ಎರಡನೇ ಮದುವೆಯಾಗುತ್ತಾನೆ. ಇದರಿಂದ ಮನನೊಂದ ಕಸ್ತೂರಿ ಪತಿಯಿಂದ ದೂರವಾಗಿ ಅಳಿಯ ಗೋವಿಂದನ ಮನೆಯಲ್ಲಿ ವಾಸಮಾಡಲು ಶುರು ಮಾಡುತ್ತಾಳೆ.

    ಈ ಮಧ್ಯೆ ಸಾಕುಮಗ ಶಿವಪ್ಪನಿಗೆ ಎಂದು ಮೀಸಲಿಟ್ಟಿದ್ದ 12 ಎಕರೆ ಜಮೀನನ್ನು ಶಾಂತವ್ವಳ ಮಗ ವಿನೋದನ ಹೆಸರಿಗೆ ಮಾಡುವುದಕ್ಕೆ ಶಿವಾನಂದ ಮುಂದಾಗಿದ್ದನು. ಇದು ಶಿವಪ್ಪನ ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ವಿನೋದನ ಮದುವೆಗೆ ಕೇವಲ 10 ದಿನ ಬಾಕಿ ಉಳಿದಿರುವಾಗಲೇ ಸಾಕುತಂದೆ ಶಿವಾನಂದ ಅಂದಾನಶೆಟ್ಟಿ, ಆತನ ಪತ್ನಿ ಶಾಂತವ್ವ ಹಾಗೂ ಪುತ್ರ ವಿನೋದ್ ಈ ಮೂವರನ್ನೂ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್‍ಪಿ ನಿಂಬರಗಿ ಹೇಳಿದ್ದಾರೆ.

    ಈ ಕೊಲೆ ಸಂಚು ರೂಪಿಸಲು ಶಿವಪ್ಪನಿಗೆ ಸಹಕಾರ ನೀಡಿದ ಆತನ ಸಂಬಂಧಿಕರಾದ ಗೋವಿಂದ, ಬಸವಂತೆಪ್ಪ ಮತ್ತು ಮಲ್ಲಿಕಾರ್ಜುನ ಮೂವರನ್ನು ಬಂಧಿಸಲಾಗಿದೆ. ಕೇವಲ ನಾಲ್ಕು ದಿನಗಳಲ್ಲಿಯೇ ಈ ತ್ರಿವಳಿ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ದೊಡ್ಡವಾಡ ಪೊಲೀಸರ ಕಾರ್ಯವನ್ನು ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರಶಂಶಿಸಿ ಬಹುಮಾನ ಘೋಷಿಸಿದ್ದಾರೆ.