Tag: property

  • ಚಿಕ್ಕಪ್ಪನ ಜೊತೆಗೂಡಿ ತಂದೆ ಕೊಲೆಗೆ ಮಗ ಸುಪಾರಿ- ಆರೋಪಿಗಳ ಬಂಧನ

    ಚಿಕ್ಕಪ್ಪನ ಜೊತೆಗೂಡಿ ತಂದೆ ಕೊಲೆಗೆ ಮಗ ಸುಪಾರಿ- ಆರೋಪಿಗಳ ಬಂಧನ

    – 3 ಬಾರಿ ಸ್ಕೆಚ್ ಮಿಸ್, ನಾಲ್ಕನೇ ಬಾರಿ ಕತ್ತು ಸೀಳಿ ಹತ್ಯೆ

    ಬೆಂಗಳೂರು: ಆಸ್ತಿಗಾಗಿ ಚಿಕ್ಕಪ್ಪನ ಜೊತೆಗೆ ಸೇರಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ್ ಕೊಲೆಯಾದ ತಂದೆ. ಮಾಧವ್ ಅವರ ಕಿರಿಯ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳು. ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಫೆಬ್ರವರಿ 14ರಂದು ಆರೋಪಿಗಳು ಕೊಲೆಗೈದು ಪರಾರಿಯಾಗಿದ್ದರು.

    ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರುಖ್, ಆದಿಲ್ ಖಾನ್ ಹಾಗೂ ಸಲ್ಮಾನ್ ಸುಪಾರಿ ಪಡೆದು ಕೊಲೆ ಮಾಡಿದ್ದ ಆರೋಪಿಗಳು. ಆರೋಪಿಗಳನ್ನು ತಲಘಟಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಏನಿದು ಪ್ರಕರಣ?:
    ಮಾಧವ್ ಹಲವು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡದ್ದರು. ಜೊತೆಗೆ 100 ಕೋಟಿ ರೂ. ಮೌಲ್ಯದ ಸಾವಿರ ಎಕರೆ ಭೂಮಿ ಖರೀದಿಸಿ ಬಳ್ಳಾರಿ ಸ್ಟೀಲ್ ಅಲೈ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ದರು. ಕೆಲ ವರ್ಷಗಳಿಂದ ಮೈನಿಂಗ್ ಬ್ಯುಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಕಂಪನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಎಂಬುವರು ಆಸ್ತಿ ಮಾರಾಟ ಮಾಡುವಂತೆ ಮಾಧವ್‍ಗೆ ಸೂಚಿಸಿದ್ದರು. ಅವರ ಸಲಹೆ ತಳ್ಳಿಹಾಕಿದ ಹರಿಕೃಷ್ಣ ಚಿಕ್ಕಪ್ಪನ ಜೊತೆಗೆ ಸೇರಿ ತಂದೆಯ ಮೇಲೆ 2014ರಿಂದಲೇ ಯತ್ನಿಸಿದ್ದ.

    ಹರಿಕೃಷ್ಣ ತಂದೆ ಮಾಧವ್ ಅವರ ಮೇಲೆ 2014ರಲ್ಲಿ ಆ್ಯಸಿಡ್ ಅಟ್ಯಾಕ್ ಮಾಡಿಸಿದ್ದ. ಬಳಿಕ ಕೊಲೆಗೆ ಸುಪಾರಿ ನೀಡಿದ್ದ. ಸುಪಾರಿ ಕಿಲ್ಲರ್ ಗಳು ಜೆಸಿ ನಗರ, ಎಸ್.ಜೆ.ಪಾರ್ಕ್ ಪ್ರದೇಶದಲ್ಲಿ ಮಾಧವ್ ಅವರ ಮೇಲೆ ಅಟ್ಯಾಕ್ ಮಾಡಿದ್ದರು. ಆದರೆ ಅವರು ಪಾರಾಗಿದ್ದರು.

    ಸತತ ಎರಡು ಪ್ರಯತ್ನಗಳು ವಿಫಲವಾಗಿದ್ದರಿಂದ 3ನೇ ಬಾರಿ ಸುಪಾರಿ ತಂಡಕ್ಕೆ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ 25 ಲಕ್ಷ ನೀಡುವುದಾಗಿ ಹೇಳಿದ್ದರು. ಹೀಗಾಗಿ ಸುಪಾರಿ ಪಡೆದ ಆರೋಪಿಗಳು ಫೆಬ್ರವರಿ 14ರಂದು ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಮಾಧವ್ ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಲಘಟಪುರ ಪೊಲೀಸರು ಬೇರೆ ರಾಜ್ಯಗಳಲ್ಲಿ ತೆಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

  • ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    – ಆದರೂ 52 ಕೋಟಿ ಸಾಲಗಾರ

    ಬೆಂಗಳೂರು: ವಿಧಾನ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಮೇಲ್ಮನೆ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಭ್ಯರ್ಥಿಗಳಾದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರು ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಆಸ್ತಿಯನ್ನು ಫೋಷಿಸಿಕೊಂಡಿದ್ದಾರೆ. ಎಂಟಿಬಿ ವಿರುದ್ಧ ಒಂದು ಪೊಲೀಸ್ ದೂರು ಇದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.

    ಎಂಟಿಬಿ ಹೆಸರಲ್ಲಿ ಒಟ್ಟು 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಎಂಟಿಬಿ ಹೆಸರಲ್ಲಿ 461 ಕೋಟಿ ರೂ. ಚರಾಸ್ತಿ, 416 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಲ್ಲಿ 160 ಕೋಟಿ ರೂ. ಚರಾಸ್ತಿ, 179ಕೋಟಿ ರೂ. ಸ್ಥಿರಾಸ್ತಿ ಇದೆ. ಅಲ್ಲದೇ ಎಂಟಿಬಿ 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.

    ಎಂಟಿಬಿ ಆಸ್ತಿ ವಿವರ:
    ಎಂಟಿಬಿ ನಾಗರಾಜ್ ಬಳಿ ನಗದು 32.60 ಲಕ್ಷ ರೂ. ಇದೆ. ಇನ್ನೂ ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ ನಗದು 45.60 ಲಕ್ಷ ರೂ. ಇದೆ. ಅಲ್ಲದೇ ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ. ಇದೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ 144.41 ಕೋಟಿ ರೂ. ಪತ್ನಿ ಬ್ಯಾಂಕ್ ಸೇವಿಂಗ್ಸ್ 11.21 ಕೋಟಿ ರೂ., ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ 34.08 ಕೋಟಿ ರೂ. ಇದೆ.

    ಎಂಟಿಬಿ ಬಾಂಡ್ ಮತ್ತು ಷೇರುಗಳ ಮೊತ್ತ 12 ಕೋಟಿ ರೂ. ಆಗಿದೆ. ಪತ್ನಿ ಹೆಸರಿನಲ್ಲಿರುವ ವಿವಿಧ ಬಾಂಡ್ ಮತ್ತು ಷೇರುಗಳ ಮೊತ್ತ 70 ಕೋಟಿ ರೂ. ಇದೆ. ಅಲ್ಲದೇ ಎಂಟಿಬಿ ಮಾಡಿರುವ ಸಾಲ, ಕೊಟ್ಟಿರುವ ಸಾಲ ಒಟ್ಟು ಸೇರಿ 285 ಕೋಟಿ ರೂ. ಇದೆ. ಪತ್ನಿ ಮಾಡಿದ ಸಾಲ, ಕೊಟ್ಟ ಸಾಲದ ಒಟ್ಟು ಮೊತ್ತ 41 ಕೋಟಿ ರೂ. ಆಗಿದೆ. ಇನ್ನೂ ಎಂಟಿಬಿ 2.48 ಕೋಟಿ ಮೌಲ್ಯದ ವಿವಿಧ ವಾಹನಗಳಿವೆ. ಪತ್ನಿಯು ಕೂಡ 1.72 ಕೋಟಿ ಮೌಲ್ಯದ ವಿವಿಧ ವಾಹನಗಳ ಒಡತಿಯಾಗಿದ್ದಾರೆ.

    ಎಂಟಿಬಿ ಹೊಂದಿರುವ ಕೃಷಿ, ವಿವಿಧ ಕಟ್ಟಡಗಳ ಒಟ್ಟು ಸ್ಥಿರಾಸ್ತಿ ಮೌಲ್ಯ 422.75 ಕೋಟಿ ರೂ. ಆಗಿದೆ. ಪತ್ನಿಯು ಒಟ್ಟು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳ ಒಡತಿ ಆಗಿದ್ದಾರೆ. ಆದರೂ ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ. ಪತ್ನಿ ಮಾಡಿರುವ ಸಾಲ 1.97 ಕೋಟಿ ರೂ. ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

    ಎಂಟಿಬಿ ಪಿತ್ರಾರ್ಜಿತ ಆಸ್ತಿ ಕೇವಲ 6.21 ಕೋಟಿ ರೂ. ಆಗಿದೆ. ಎಂಟಿಬಿ ತಮ್ಮ ಪುತ್ರ ನಿತಿನ್ ಪುರುಷೊತ್ತಮ್‍ಗೆ 129 ಕೋಟಿ ರೂ. ಸಾಲ ನೀಡಿದ್ದಾರೆ. ಎಂಟಿಬಿ ಬಳಿ ಲ್ಯಾಂಡ್ ರೋವರ್, ಮರ್ಸಿಡೀಸ್, ಟೊಯೋಟಾ ಮತ್ತು ಹುಂಡೈ ಕಂಪೆನಿಗಳ ಐಷಾರಾಮಿ ಕಾರುಗಳಿವೆ. ಕಾರುಗಳ ಒಟ್ಟು ಮೌಲ್ಯ 2.48 ಕೋಟಿ ರೂ. ಪತ್ನಿ ಬಳಿ ಇರುವ ಏಕೈಕ ಐಷಾರಾಮಿ ಕಾರು ಪಾರ್ಶ್ (ಪೋರ್ಶೆ), ಬೆಲೆ 1.72 ಕೋಟಿ ರೂ. ಆಗಿದೆ.

    ಇದಲ್ಲದೇ ಎಂಟಿಬಿ ಬಳಿ 54 ಎಕರೆ ಕೃಷಿ ಭೂಮಿ ಇದೆ. ಇದರ ಮಾರುಕಟ್ಟೆ ಮೌಲ್ಯ 29.86 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ, ಇದರ ಮೌಲ್ಯ 26 ಕೋಟಿ ರೂ. ಆಗಿದೆ. ಎಂಟಿಬಿ ಹೆಸರಲ್ಲಿ ಕೃಷಿಯೇತರ ಭೂಮಿ 64.66 ಲಕ್ಷ ಚದರಡಿ, ಮಾರುಕಟ್ಟೆ ಮೌಲ್ಯ 308 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 9.50 ಲಕ್ಷ ಚದರಡಿ ಕೃಷಿಯೇತರ ಭೂಮಿ ಇದೆ. ಇದರ ಮೌಲ್ಯ 94.47 ಕೋಟಿ ರೂ. ಎಂಟಿಬಿ ಬಳಿ 1.87 ಲಕ್ಷ ಚದರಡಿ ವಾಣಿಜ್ಯ ಕಟ್ಟಡಗಳು ಇವೆ. ಇದರ ಮೌಲ್ಯ 45 ಕೋಟಿ ರೂ. ಇದೆ. ಇದೆಲ್ಲವನ್ನು ಸೇರಿ ಒಟ್ಟು ಬರೋಬ್ಬರಿ 1,224 ಕೋಟಿ ಆಸ್ತಿ ಇದೆ ಎಂದು ಎಂಟಿಬಿ ಘೋಷಿಸಿಕೊಂಡಿದ್ದಾರೆ.

  • ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    – ರೌಡಿಗಳಿಂದ ಮಾಲೀಕನ ಪ್ರಾಣ ಉಳಿಸಿದ್ದ ಆನೆ
    – ನಾನು ಇಲ್ಲದಿದ್ದಾಗ ಹಸಿವಿನಿಂದ ಬಳಲಬಾರದು

    ಪಾಟ್ನಾ: ಇತ್ತೀಚೆಗೆ ಕೇರಳದಲ್ಲಿ ಪಟಾಕಿ ತುಂಬಿದ್ದ ಪೈನಾಪಲ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿತ್ತು. ಆದರೆ ಬಿಹಾರದ ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ತಾವು ಸಾಕಿದ್ದ ಎರಡು ಆನೆಗಳಿಗೆ ಕೊಟ್ಟಿದ್ದಾರೆ.

    ಪಾಟ್ನಾದ ಮೊಹಮ್ಮದ್ ಅಖ್ತರ್ ಇಮಾಮ್ (50) ತಾವು ಸಾಕಿರುವ 20 ಮತ್ತು 15 ವರ್ಷ ವಯಸ್ಸಿನ ಎರಡು ಆನೆಗಳಿಗೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕೊಟ್ಟಿದ್ದಾರೆ. ಅಲ್ಲದೇ ಅಖ್ತರ್ ಮೋತಿ ಮತ್ತು ರಾಣಿ ಎಂಬ ಹೆಸರಿನ ತನ್ನ ಎರಡು ಆನೆಗಳೊಂದಿಗೆ ವಾಸಿಸುತ್ತಿದ್ದಾರೆ.

    “ಕುಟುಂಬ ಪರಂಪರೆಯಾಗಿ ಈ ಎರಡು ಆನೆಗಳು ನನಗೆ ಸಿಕ್ಕಿವೆ. ಮೋತಿ ಮತ್ತು ರಾಣಿ ನನ್ನ ಮಕ್ಕಳಂತೆ. ನನ್ನ ಬಾಲ್ಯದಿಂದಲೂ ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ಇಬ್ಬರು ನನ್ನ ಕುಟುಂಬ ಸದಸ್ಯರು. ನಾನು ಜೀವಂತವಾಗಿರದಿದ್ದಾಗ ಎರಡು ಆನೆಗಳು ಹಸಿವಿನಿಂದ ಬಳಲುವಂತಾಗಬಾರದು. ಹೀಗಾಗಿ ನನ್ನ 6.25 ಎಕರೆ ಭೂಮಿಯನ್ನು ಎರಡು ಆನೆಗಳಿಗೆ ವಿಲ್ ಬರೆದಿದ್ದೇನೆ” ಎಂದು ಅಖ್ತರ್ ತಿಳಿಸಿದರು.

    ಎರಡು ಆನೆಗಳಲ್ಲಿ ಮೋತಿ ನನ್ನ ಜೀವವನ್ನು ಉಳಿಸಿದ್ದಾನೆ. ಮೋತಿ ಭೋಜಪುರ ಜಿಲ್ಲೆಯ ಶಹಪುರ್ ಪ್ರದೇಶಕ್ಕೆ ಮಾವುತನ ಜೊತೆಗೆ ಹೋಗಿದ್ದನು. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ. ಆತನಿಗೆ ಚಿಕಿತ್ಸೆ ನೀಡಲು ನಾನು ಅಲ್ಲಿಗೆ ಹೋದೆ. ಒಂದು ದಿನ ನಾನು ಅಲ್ಲಿ ನಿದ್ದೆ ಮಾಡುವಾಗ ಮೋತಿ ಜೋರಾಗಿ ಕೂಗಿಕೊಂಡ. ತಾನು ತಕ್ಷಣ ಎಚ್ಚರಕೊಂಡೆ, ಆಗ ಯಾರೋ ರೌಡಿಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನನ್ನ ಜೀವವನ್ನು ಉಳಿಸಿಕೊಳ್ಳಲು ಓಡಿ ಹೋಗಿದ್ದೆ ಎಂದು ಅಖ್ತರ್ ನಡೆದ ಘಟನೆಯ ಬಗ್ಗೆ ವಿವರಿಸಿದರು.

    ನನ್ನ ಸ್ವಂತ ಕುಟುಂಬ ಸದಸ್ಯರು ಪ್ರಾಣಿ ಕಳ್ಳಸಾಗಾಣಿಕೆದಾರರೊಂದಿಗೆ ಕೈಜೋಡಿಸಿದ್ದಾರೆ. ಈ ಆನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಎರಡು ಆನೆಗಳಿಗೆ ನನ್ನ ಆಸ್ತಿಯನ್ನು ಬರೆದಿರುವುದರಿಂದ ನನ್ನ ಕುಟುಂಬ ಸದಸ್ಯರಿಂದ ನನಗೆ ಜೀವ ಭಯವಿದೆ ಎಂದು ಅಖ್ತರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖ್ತರ್ ವನ್ಯಜೀವಿ ವಾರ್ಡನ್ ಮತ್ತು ಪಾಟ್ನಾ ಪೊಲೀಸ್ ಮುಖ್ಯಸ್ಥರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

    ಸರ್ಕಾರ ಆನೆಯನ್ನು ರಕ್ಷಿಸಬೇಕು. ಇಲ್ಲವಾದರೆ ಮುಂದೆ ನಾವು ಆನೆಗಳು ಇದ್ದವು ಎಂದು ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಆನೆಗಳು ಆಹಾರವನ್ನು ಹುಡುಕಿಕೊಡು ಗ್ರಾಮಗಳಿಗೆ ಬರುತ್ತವೆ. ಹೀಗಾಗಿ ನಾವು ಕಾಡನ್ನ ಉಳಿಸಬೇಕು ಎಂದು ಸರ್ಕಾರದ ಬಳಿ ಅಖ್ತರ್ ಮನವಿ ಮಾಡಿದರು.

  • ಕೆಲಸಗಾರರಿಗೆ ಹಣದೊಂದಿಗೆ ಸೈಟ್, ಮಕ್ಕಳಿಗೆ ಆಸ್ತಿ ಹಂಚಿಕೆ – ರೈ ವಿಲ್‍ನಲ್ಲಿ ಏನಿದೆ?

    ಕೆಲಸಗಾರರಿಗೆ ಹಣದೊಂದಿಗೆ ಸೈಟ್, ಮಕ್ಕಳಿಗೆ ಆಸ್ತಿ ಹಂಚಿಕೆ – ರೈ ವಿಲ್‍ನಲ್ಲಿ ಏನಿದೆ?

    – 41 ಪುಟಗಳ ವಿಲ್ ಬರೆದಿರುವ ಮುತ್ತಪ್ಪ ರೈ
    – ಎರಡನೇ ಪತ್ನಿ ಅನುರಾಧಾಗೂ ಆಸ್ತಿ ಹಂಚಿಕೆ
    – ಆಪ್ತರು, ಸಂಬಂಧಿಕರಿಗೆ ಆಸ್ತಿ ಹಂಚಿಕೆ

    ಬೆಂಗಳೂರು: ಸತ್ತ ಮೇಲೆಯೂ ಕೆಲಸದವರ ಪಾಲಿಗೆ ಮತ್ತಪ್ಪ ರೈ ದಾರಿ ದೀಪವಾಗಿದ್ದಾರೆ. ಮನೆಗೆಲಸ, ತೋಟ, ಹಾಗೂ ಕಾರು ಚಾಲಕರು, ಗನ್ ಮ್ಯಾನ್ ಗಳಿಗೆ ಸೈಟ್ ಮತ್ತು ಹಣ ನೀಡಿದ್ದಾರೆ.

    ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್‍ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ ಸೇರಬೇಕು? ಸಂಘಟನೆ ಜವಾಬ್ದಾರಿ ಯಾರು ಹೊತ್ತುಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮುತ್ತಪ್ಪ ರೈ ತಮ್ಮ ವಕೀಲ ನಾರಾಯಣ ಸ್ವಾಮಿ ಬಳಿ ವಿಲ್ ಮಾಡಿಸಿದ್ದು ಈಗ ಲಭ್ಯವಾಗಿದೆ.

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದಾರೆ. ತಂದೆಯ ಸೂಚನೆಯಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದಾರೆ.

    ಎರಡನೇ ಪತ್ನಿಗೂ ಹಂಚಿಕೆ:
    ವಿಲ್ ನಲ್ಲಿ ಈಗಾಗಲೇ ಎರಡನೇ ಪತ್ನಿ ಅನುರಾಧಾಗೆ ಆಸ್ತಿ ಹಂಚಿಕೆ ಮಾಡಿರುವುದಾಗಿ ಮುತ್ತಪ್ಪ ರೈ ತಿಳಿಸಿದ್ದಾರೆ. ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್ ನಲ್ಲಿ ಉಲ್ಲೇಖವಾಗಿದೆ.

    ಸಂಘಟನೆ ಹೊಣೆ ಯಾರಿಗೆ?
    ಜಯ ಕರ್ನಾಟಕ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಹೇಳಿರುವ ಮುತ್ತಪ್ಪ ರೈ ಈ ಸಂಘಟನೆಯ ಜವಾಬ್ದಾರಿಯನ್ನು ಚಿಕ್ಕಮಗ ರಿಕ್ಕಿ ರೈಗೆ ನೀಡಿದ್ದಾರೆ. ಜಗದೀಶ್ ಸಂಘಟನೆಯ ಅಧ್ಯಕ್ಷತೆಯನ್ನು ನೋಡಿಕೊಳ್ಳಬೇಕು. ಮುಂದೆ ಈ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಲ್ಲಿ ರೈ ಮನವಿಮಾಡಿರುವ ವಿಚಾರ ವಿಲ್ ನಲ್ಲಿ ಉಲ್ಲೇಖವಾಗಿದೆ.

    ವಿದೇಶದಲ್ಲಿ ಮುತ್ತಪ್ಪ ರೈ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ವಿಲ್ ನಲ್ಲಿ ವಿದೇಶದ ಆಸ್ತಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಮಗನ ವ್ಯವಹಾರ ಬಿಟ್ಟರೆ ರೈಗೆ ಯಾವುದೇ ಆಸ್ತಿ ಇಲ್ಲ. ಎರಡನೇ ಹೆಂಡತಿ ಅನುರಾಧಾಗೂ ಮುತ್ತಪ್ಪ ರೈ ಮಕ್ಕಳಿಗೂ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರುತ್ತಾರೆ. ಆಸ್ತಿ ವಿಚಾರವಾಗಿ ಅನುರಾಧ ರೈ ಕೇಸ್ ಹಾಕುತ್ತಾರೆ ಎಂಬ ಸುದ್ದಿಗಳೆಲ್ಲ ಸುಳ್ಳು ಎಂಬ ವಿಚಾರ ಈಗ ಬಹಿರಂಗವಾಗಿದೆ.

  • ಹಳೆ ಮಾಲೀಕ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಯಾರು ಪಾವತಿಸಬೇಕು – ಸುಪ್ರೀಂನಿಂದ ಮಹತ್ವದ ತೀರ್ಪು

    ಹಳೆ ಮಾಲೀಕ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಯಾರು ಪಾವತಿಸಬೇಕು – ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ಬಾಕಿ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಹೊಸ ಕಂಪನಿ ಪಾವತಿ ಮಾಡಬೇಕೇ? ಬೇಡವೇ? ಈ ಪ್ರಶ್ನೆಗೆ ಇಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಮೂಲಕ ಉತ್ತರ ನೀಡಿದೆ.

    ಪ್ರಕರಣ ಒಂದರ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕಿಶನ್ ಮತ್ತು ನ್ಯಾ.ಕೆಎಂ ಜೋಸೆಫ್ ಅವರಿದ್ದ ದ್ವಿಸಸ್ಯ ಪೀಠ ಹೊಸ ಕಂಪನಿಯೇ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕೆಂದು ಆದೇಶಿಸಿದೆ.

    ಏನಿದು ಪ್ರಕರಣ?
    ನಷ್ಟದಲ್ಲಿದ್ದ ತೆಲಂಗಾಣದ ಮಿನರಲ್ ಕಂಪನಿಯೊಂದನ್ನು ಮತ್ತೊಬ್ಬ ಮಾಲೀಕ ಖರೀದಿಸಿದ್ದರು. ಈ ವೇಳೆ ಮಾಲೀಕ ಹೊಸದಾಗಿ 500 ಕಿ.ವಾ ವಿದ್ಯುತ್ ಸಂಪರ್ಕ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಹಿಂದಿನ ಮಾಲೀಕ ವಿದ್ಯುತ್ ಬಿಲ್ ಪಾವತಿ ಮಾಡದ್ದಕ್ಕೆ ಹೊಸದಾಗಿ ಕಂಪನಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದು ಹೇಳಿ ತೆಲಂಗಾಣ ಎಲೆಕ್ಟ್ರಿಸಿಟಿ ಬೋರ್ಡ್ ಅರ್ಜಿಯನ್ನು ತಿರಸ್ಕರಿಸಿತ್ತು.

    ತನ್ನ ಬೇಡಿಕೆಯನ್ನು ಮನ್ನಿಸದ ಹಿನ್ನೆಲೆಯಲ್ಲಿ ಮಾಲೀಕರು ತೆಲಂಗಾಣ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಹೈಕೋರ್ಟ್ ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ತೆಲಂಗಾಣ ಎಲೆಕ್ಟ್ರಿಸಿಟಿ ಬೋರ್ಡ್ ಸುಪ್ರೀಂ ಮೊರೆ ಹೋಗಿತ್ತು.

    ಮಾಲೀಕನೇ ಪಾವತಿಸಬೇಕು ಯಾಕೆ?
    ಈ ಪ್ರಕರಣದ ಮೂಲ ಮಾಲೀಕ ಸಾಲವನ್ನು ಪಾವತಿಸದ ಹಿನ್ನೆಲೆಯಲ್ಲಿ ಮಿನರಲ್ ಕಂಪನಿಯನ್ನು ಮಾರಾಟ ಮಾಡಲು ಸಿಂಡಿಕೇಟ್ ಬ್ಯಾಂಕ್ ಇ-ಹರಾಜು ಹಾಕಿತ್ತು. ಈ ವೇಳೆ ಈ ಕಂಪನಿ ಯಾವ ಸ್ಥಿತಿಯಲ್ಲಿದೆಯೇ ಆ ಸ್ಥಿತಿಯಲ್ಲೇ ಮಾರಾಟ ಮಾಡುತ್ತಿದ್ದೇವೆ. ಎಲ್ಲದ್ದಕ್ಕೂ ಹೊಸ ಮಾಲೀಕನೇ ಹೊಣೆಗಾರನಾಗುತ್ತಾನೆ ಎಂಬ ಅಂಶವನ್ನು ನೋಟಿಸ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು.

     

    ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಆಲಿಸಿದ್ದ ಪೀಠ ಕಂಪನಿಯ ಎಲ್ಲ ವಿವರಗಳು, ಉಲ್ಲೇಖಿಸಲ್ಪಟ್ಟ ವಿಚಾರಗಳನ್ನು ತಿಳಿದುಕೊಂಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಹಳೆಯ ಮಾಲೀಕ ಪಾವತಿಸದ ಕಾರಣಕ್ಕೆ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ನೋಟಿಸ್‍ನಲ್ಲಿ ಉಲ್ಲೇಖಿಸಿದ್ದ ಕಂಪನಿಯನ್ನು ಯಥಾಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ ಎಂಬ ಅಂಶವನ್ನೇ ಗಂಭೀರವಾಗಿ ಪರಿಗಣಿಸಿದ ಕೋರ್ಟ್ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ರದ್ದುಗೊಳಿಸಿ ಹೊಸ ಕಂಪನಿಯ ಮಾಲೀಕನೇ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕವನ್ನು ಪಾವತಿಸಬೇಕು ಎಂದು ಮಹತ್ವದ ಆದೇಶ ಪ್ರಕಟಿಸಿತು.

  • ತಿರುಪತಿ ಶಾಪದಿಂದ್ಲೇ ಆಂಧ್ರ ಸಿಎಂ ತಂದೆ ಸಾವು: ಮುತಾಲಿಕ್

    ತಿರುಪತಿ ಶಾಪದಿಂದ್ಲೇ ಆಂಧ್ರ ಸಿಎಂ ತಂದೆ ಸಾವು: ಮುತಾಲಿಕ್

    ಧಾರವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಂದೆ ತಿರುಪತಿ ದೇವರ ಶಾಪದಿಂದಲೇ ಮೃತಪಟ್ಟಿದ್ದಾರೆ ಎಂದು ಹಿಂದೂಪರ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ತಿರುಪತಿ ಆಸ್ತಿ ಮಾರಾಟ ವಿಚಾರವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಆಂಧ್ರ ರಾಜ್ಯಪಾಲರಿಗೆ ಮನವಿ ಮಾಡಿ ಮಾತನಾಡಿದ ಅವರು, ಸೆಕ್ಯೂಲರ್ ಎನ್ನುವ ಇವರು ಹಿಂದೂ ದೇವಸ್ಥಾನದ ಮೇಲೆ ಆಘಾತ ಮಾಡುವ ಪ್ರಕ್ರಿಯೆ ನಡೆದಿದೆ. ಮದರಸಾ, ಚರ್ಚ್ ಆಸ್ತಿ ಬಗ್ಗೆ ಸರ್ಕಾರ ಮಾತಾನಾಡೋದಿಲ್ಲ. ಬದಲಾಗಿ ಹಿಂದೂಗಳ ಮೇಲೆನೇ ಕಣ್ಣು. ಜಗನ್ ತಂದೆ ಇದೇ ರೀತಿ ಮಾಡಿ ತಿರುಪತಿಯ ಶಾಪದಿಂದ ಸತ್ತು ಹೋದ. ಈ ರೀತಿ ಮಾಡಿದರೆ ನಿಮಗೂ ಕೂಡ ತಿರುಪತಿಯ ಶಾಪ ತಟ್ಟುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಂಧ್ರಪ್ರದೇಶ ಸರ್ಕಾರ ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡುವ ಪ್ರಕ್ರಿಯೆ ಮಾಡುತ್ತಿದೆ. ಸದ್ಯ ಅದನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಆದರೆ ಮುಂದೆಯಾದರೂ ಈ ಪ್ರಕ್ರಿಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಮ್ಮ ವಿರೋಧ ಇದೆ ಎಂದರು.

    ತಿರುಪತಿ ದೇವಸ್ಥಾನ ಆಂಧ್ರದಷ್ಟೇ ಅಲ್ಲ, ಇಡಿ ಜಗತ್ತಿನ ಜನ ಬರುವ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಬಂದ ಭಕ್ತರ ಕಾಣಿಕೆ ಹಣ ಅದೇ ದೇವಸ್ಥಾನಕ್ಕೆ ಬಳಕೆ ಮಾಡಬೇಕು. ನಿಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳಬಾರದು. ಸ್ಥಿರ ಆಸ್ತಿ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.

  • ಮನೆ ಮುಂದೆ ಪತ್ನಿ ಎದುರೇ ಪತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಸೆರೆ

    ಮನೆ ಮುಂದೆ ಪತ್ನಿ ಎದುರೇ ಪತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಸೆರೆ

    ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಆತನ ಸಂಬಂಧಿಗಳು ಹಾಡಹಗಲೇ ಕೊಲೆ ಮಾಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮೇ 15 ರಂದು ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (39) ಕೊಲೆಯಾಗಿದ್ದ ವ್ಯಕ್ತಿ. ಸಂಬಂಧಿಕರಾದ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ. ಕೊಲೆಯ ದೃಶ್ಯಗಳು ಉಮೇಶ್ ಮನೆ ಎದುರಿನ ಸಿಸಿಟಿವಿಯಲ್ಲಿ ಸೆರೆಯಾಗಿರೋದು ಬೆಳಕಿಗೆ ಬಂದಿದೆ.

    ಅಂಗವಿಕಲನಾಗಿದ್ದ ಉಮೇಶ್ ತಮ್ಮ ತ್ರಿಚಕ್ರ ಬೈಕ್ ಮೇಲೆ ಹೊರಟಿದ್ದಾಗ ಆರೋಪಿಗಳು ತಡೆದಿದ್ದಾರೆ. ನಂತರ ಬೈಕ್ ಮೇಲಿಂದ ಕೆಡವಿ ಹಲ್ಲೆ ಮಾಡಿ, ಕಲ್ಲಿನಿಂದ ಹೊಡೆದು ಕೊಲೆಗೈದಿದ್ದಾರೆ. ಈ ಸಮಯದಲ್ಲಿ ಹತ್ತಿರದಲ್ಲಿದ್ದ ಉಮೇಶ್ ಪತ್ನಿ ಸುಮಾ ಚೀರಾಡಿ ಜನರನ್ನು ಕರೆಯಲು ಪ್ರಯತ್ನಿಸಿದ್ದಾರೆ. ಆಗ ಕೊಲೆಗಾರರ ಪೈಕಿ ಓರ್ವ ಸುಮಾರನ್ನು ಸಹ ಅಟ್ಟಿಸಿಕೊಂಡು ಓಡಿ ಬಂದಿದ್ದಾನೆ. ಆಗ ಸುಮಾ ಮನೆಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಬಚಾವ್ ಆಗಿದ್ದಾರೆ.

    ಮೃತ ಉಮೇಶ್ ಮೇಲೆ ಈ ಹಿಂದೆಯೂ ಕೂಡ ಹಲ್ಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ತನ್ನ ಮನೆ ಹಾಗೂ ಮನೆ ಸುತ್ತ ಸಿಸಿಟಿವಿ ಅಳವಡಿಸಿದ್ದರು. ಇದೀಗ ಸಿಸಿಟಿವಿಯ ಮೂಲಕ ಅವರ ಕೊಲೆ ರಹಸ್ಯ ಬಯಲಾಗಿದೆ. ಈ ಸಂಬಂಧ ಮೃತನ ಪತ್ನಿ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಲಾಕ್‍ಡೌನ್ ವೇಳೆಯ 3 ತಿಂಗ್ಳ ಬಾಡಿಗೆ ಕೇಳಿದ್ರೆ ಮಾಲೀಕರ ಮೇಲೆ ಕೇಸ್ – ನ್ಯಾಯಾಧೀಶರಿಂದ ಖಡಕ್ ವಾರ್ನಿಂಗ್

    ಲಾಕ್‍ಡೌನ್ ವೇಳೆಯ 3 ತಿಂಗ್ಳ ಬಾಡಿಗೆ ಕೇಳಿದ್ರೆ ಮಾಲೀಕರ ಮೇಲೆ ಕೇಸ್ – ನ್ಯಾಯಾಧೀಶರಿಂದ ಖಡಕ್ ವಾರ್ನಿಂಗ್

    ಯಾದಗಿರಿ: ಕೊರೊನಾ ಲಾಕ್‍ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಲಾಕ್‍ಡೌನ್ ವೇಳೆಯಲ್ಲಿ ಮೂರು ತಿಂಗಳ ಬಾಡಿಗೆ ಕೇಳಬೇಡಿ ಎಂದು ಯಾದಗಿರಿ ಜಿಲ್ಲಾ ನ್ಯಾಯಾಧೀಶರು ವಾರ್ನಿಂಗ್ ನೀಡಿದ್ದಾರೆ.

    ಲಾಕ್‍ಡೌನ್ ವೇಳೆಯಲ್ಲಿ ಮೂರು ತಿಂಗಳ ಬಾಡಿಗೆ ಕೇಳಬೇಡಿ ಅಂತ ಸ್ವತಃ ರಾಜ್ಯ ಸರ್ಕಾರ ಮನವಿ ಮಾಡಿದೆ. ಹೀಗಿದ್ದರೂ ಯಾದಗಿರಿಯಲ್ಲಿ ಬಾಡಿಗೆ ಮನೆ ಮಾಲೀಕರು ಬಾಡಿಗೆದಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಅರ್ಜುನ್ ಬನಸುಡೆ ಸ್ವತಃ ತಾವೇ ಫೀಲ್ಡ್ ಗಿಳಿದಿದ್ದಾರೆ.

    ದಬ್ಬಾಳಿಕೆ ಮಾಡುವ ಮಾಲೀಕರ ಮನೆಗೆ ತೆರಳಿ ವಾರ್ನಿಂಗ್ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನ್ಯಾಯಾಧೀಶರು, ಯಾರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೋ ಅವರ ಬಳಿ ಮೂರು ತಿಂಗಳವರೆಗೂ ಬಾಡಿಗೆ ಕೇಳುವಂತಿಲ್ಲ. ಅವರಿಗೆ ಬಾಡಿಗೆ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ. ಅಲ್ಲದೇ ಅವರನ್ನು ಮನೆಯಿಂದ ಹೊರಗೆ ಕೂಡ ಹಾಕುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ಮನೆ ಮಾಲೀಕರು ನಿಯಮ ಮೀರಿ ಬಾಡಿಗೆ ಕೇಳಿದ್ರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶವೂ ಇದೆ ಎಂದು ತಿಳಿಸಿದರು.

  • ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    – ಪೋಷಕರು, ಸೋದರ, ಪತ್ನಿ, ಮಕ್ಕಳಿಬ್ಬರ ಬರ್ಬರ ಹತ್ಯೆ

    ಲಕ್ನೋ: ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಹೊರವಲಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಆರೋಪಿ ಅಜಯ್ ಸಿಂಗ್ (26) ಕೊಲೆ ಮಾಡಿದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

    ಆರೋಪಿ ಸಿಂಗ್ ತನ್ನ ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಸಿಂಗ್ ಕೋಪಗೊಂಡು ಆಯುಧದಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ, ತನ್ನ ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

    ಕೊಲೆ ಮಾಡಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ವೇಳೆ ನನ್ನ ತಾಯಿ, ತಂದೆ, ಹಿರಿಯ ಸಹೋದರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

    ಮೃತರನ್ನು ತಂದೆ ಅಮರ್ (60), ತಾಯಿ ರಾಮ್‍ಸಖಿ (55), ಸಹೋದರ ಅರುಣ್ (40), ಪತ್ನಿ ರಾಮ್‍ದುಲಾರಿ (35), ಸೌರಭ್ (7) ಮತ್ತು ಸಾರಿಕಾ (2) ಎಂದು ಗುರುತಿಸಲಾಗಿದೆ.

    ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದರು.

  • ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಚೇಗು ಗ್ರಾಮದ ನಿವಾಸಿ ಮಂಜಯ್ಯ (58) ಮೃತ ದುರ್ದೈವಿ. ಲಕ್ಷ್ಮಣ ಕೊಲೆಗೈದ ಆರೋಪಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತೋಟದ ವಿಚಾರವಾಗಿ ಮಂಜಯ್ಯ ಹಾಗೂ ಲಕ್ಷ್ಮಣ ಸಹೋದರರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆದಿತ್ತು. ಈ ವಿಚಾರವಾಗಿ ಸೋಮವಾರವೂ ಸಹೋದರರು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ಲಕ್ಷ್ಮಣ ನಾಡ ಬಂದೂಕಿನಿಂದ ಅಣ್ಣನ ಮೇಲೆ ಪೈರಿಂಗ್ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.